Homeಮುಖಪುಟವಿಶ್ವದ ಅತಿ ದೊಡ್ಡ ಶ್ರೀಮಂತ ಅಮೇಜಾನು ಕಂಪನಿ ಮಾಲೀಕನ ಫೋನು ಹ್ಯಾಕ್ ಆದ ಕತಿ...

ವಿಶ್ವದ ಅತಿ ದೊಡ್ಡ ಶ್ರೀಮಂತ ಅಮೇಜಾನು ಕಂಪನಿ ಮಾಲೀಕನ ಫೋನು ಹ್ಯಾಕ್ ಆದ ಕತಿ…

- Advertisement -
- Advertisement -

ಇಡೀ ಜಗತ್ತಿನ ಅತಿದೊಡ್ಡ ಸಾಹುಕಾರನ  ಫೋನಿಂದ ಈ ಗತಿ ಆದರ ಉಳದವರದೇನು? ಯಾರನ್ನೂ ಯಾರೂ ಹ್ಯಾಕು ಮಾಡಬಹುದು. ಯಾರ ಫೋನಿನಲ್ಲಿಯೂ ಮಾಹಿತಿ ಸುರಕ್ಷಿತವಾಗಿಲ್ಲ. ಯಾವಾಗಾದರೂ ಸೋರಿಕೆ ಆದೀತು ಅನ್ನೋ ಚಿಂತಿ.

ಜೆಫರಿ ಪ್ರೆಸ್ಟನ್ ಬೇಜೋಸ್ ಜೊರ್ಗೆನ್ಸನ್ ಅನ್ನುವ ವಿಚಿತ್ರ ಹೆಸರಿನ ಅಸಾಧಾರಣ ಮನುಷ್ಯ ಒಬ್ಬವ ಅಮೆರಿಕಾದಾಗ ಇದ್ದಾನ. ಅವನು ಅಮೇಜಾನ್ ಕಂಪನಿ ಮಾಲಿಕ. ಆಧುನಿಕ ಜಗತ್ತಿನ ಇತಿಹಾಸದಾಗ ಅವನಷ್ಟು ದುಡ್ಡು ಯಾರೂ ಗಳಿಸಿಲ್ಲ ಅಂತ ಫೋಬ್ಸ ಪತ್ರಿಕೆ ಘೋಷಣೆ ಮಾಡಿದೆ. ಕಳೆದ ಎರಡು ವರ್ಷದಾಗ ಅವನ ವೈಯಕ್ತಿಕ ಗಳಿಕೆ ಸುಮಾರು 10 ಲಕ್ಷ, ಐವತ್ತು ಸಾವಿರ ಕೋಟಿ ರೂಪಾಯಿಗಳು. ಕಂಪನಿಯ ಗಳಿಕೆ ಬ್ಯಾರೆ. ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಜಗತ್ತಿನ ಅತಿಹೆಚ್ಚು ಶ್ರೀಮಂತನಾಗಿ ಮೆರೆದ ಬಿಲ್‍ಗೇಟ್ಸ್ ನನ್ನು ಹಿಂದಕ್ಕೆ ಹಾಕಿ ಈ ಮನುಷ್ಯ ಮುಂದ ಹೋದ.

ಇವನ ಸಾಹುಕಾರಿಕೆಗೆ ಕಾರಣ ಅಂದರ ನಮ್ಮೆಲ್ಲರ ಖರೀದಿ ಗೀಳು. ಬ್ಯಾರೆ ಏನೂ ಅಲ್ಲ. ಇವನ ಆನ್‍ಲೈನ್ ಕಿರಾಣಿ ದುಕಾನು ನಮ್ಮೆಲ್ಲರನ್ನೂ ಸೆಳೆದದ. ಎಲ್ಲರ ಇ-ಕಿಸೆಯಿಂದ ಅಲ್ಲಿಗೆ ಹಣ ಸೋರೇದ. ಮುಂಚೆ ಪುಸ್ತಕ, ಫೋನು, ಟೀವಿ ಮುಂತಾದ ಎಲೆಕ್ಟ್ರಾನಿಕ್ ಸಾಮಾನು, ತರಸತಿದ್ದಿವಿ, ಈಗೀಗ ಕೈಕಾಲು ಆಡಿಸಿಕೊಂಡು ಮನಿ ಮುಂದಿನ ಅಂಗಡಿಗೆ ಹೋಗಲಾರದ ಸೋಮಾರಿಗಳು ಅಮೇಜಾನ್‍ನ್ಯಾಗ ಹಾಲು- ಮೊಸರು ತರಸಲಿಕ್ಕೆ ಹತ್ಯಾರ. ಇನ್ನು ಮುಂದ ಇನ್ನೂ ಏನೇನು ಅದನೋ.

ಈ ಮನುಷ್ಯಾ ಭಾರತಕ್ಕ ಬಂದ. ಬೀ ಅ ರೋಮನ್ ವೈಲ್ ಇನ್ ರೋಮ್ ಅನ್ನೋ ಹಂಗ ನೆಹರು ಜಾಕೆಟ್ – ಜುಬ್ಬಾ ಪಾಯಿಜಾಮ ಹಾಕ್ಕೊಂಡು ಗಾಂಧೀಸ್ಕೃತಿಗೆ ಹೋದ. ಆಮ್ಯಾಲೆ ತನ್ನ ಕಚೇರಿಗೆ ಹೋದ. ಕಾಪೊರ್ರೇಟು ಕಾಲಾಳುಗಳನ್ನ, ಕರ್ನಲ್ ಜನರಲ್‍ಗಳನ್ನು ಭೇಟಿ ಆದ. ಆದರ ಪ್ರಧಾನ ಮಂತ್ರಿ ಇರಲಿ, ಬ್ಯಾರೆ ಯಾವ ಮಂತ್ರಿನೂ ಈ ಬಡಪಾಯಿಯನ್ನ ಭೇಟಿ ಆಗಲಿಲ್ಲ. ಯಾಕಾಗಲಿಲ್ಲ ಅನ್ನೋದು ಭಾಳ ಗಂಭೀರ ವಿಷಯ. ನೀವು ಸಾರಾಸಾರ ವಿಚಾರ ಮಾಡಿದರ ನಿಮಗ ತಿಳೀತದ.

`ಜೆಫ್ ಅವರು ಭಾರತದಾಗ ಸುಮಾರು ಏಳು ಸಾವಿರ ಕೋಟಿ ರೂಪಾಯಿ ಬಂಡವಾಳ ಹಾಕಿ ಒಂದು ಲಕ್ಷಕ್ಕೂ ಹೆಚ್ಚು ನೌಕರಿಗಳನ್ನು ಸೃಷ್ಟಿ ಮಾಡತೇವಿ ಅಂತ ಹೇಳ್ಯಾರ. ಅವರೇನು ನಮಗ ಉಪಕಾರ ಮಾಡಲಿಕ್ಕೆ ಹತ್ತಿಲ್ಲ. ಅವರಿಗೆ ಅದು ಸಹಜ ವ್ಯಾಪಾರ- ವ್ಯವಹಾರ,’ ಅಂತ ಕೇಂದ್ರ ರೇಲ್ವೆ ಮಂತ್ರಿ ಪಿಯೂಷ ಗೋಯಲ್ ಅವರು ಹೇಳಿದರು.

ಇಷ್ಟು ದೂರ ಇರಿಸಿಕೊಂಡ ಮ್ಯಾಲೆ ಜೆಫ್ ವಾಪಸ್ ಹೋದರು. ಚೌಥಾಯಿಯಾ ಅನ್ನೋ ಸಂಸತ್ ಸದಸ್ಯರು ಜೆಫ್ ಅವರು ಭಾರತದ ಬಗ್ಗೆ ಒಳ್ಳೆ ಸುದ್ದಿ ಬರಿಬೇಕಂತ ತಮ್ಮ ವಾಷಿಂಗ್ಟನ್ ಫೋಸ್ಟಿನ ವರದಿಗಾರರಿಗೆ ಹೇಳಬೇಕು ಅಂತ ಫರಮಾನು ಹೊರಡಿಸಿದರು.

ಅದರ ನಂತರ ಒಂದು ವಾರದಾಗ ವಿಶ್ವಾಸಾರ್ಹತೆಗೆ ಪ್ರಸಿದ್ಧವಾದ ದಿ ಗಾರ್ಡಿಯನ್ ಪತ್ರಿಕೆಯವರು ಜೆಫ್ ಅವರ ಫೋನನ್ನು ಕಳೆದ ವರ್ಷ ಹ್ಯಾಕು ಮಾಡಲಾಗಿತ್ತು ಅಂತ ಸುದ್ದಿ ಬರದರು. ಅದರಾಗ ಅತೀ ವಿಶೇಷ ಏನು ಅಂದರ ಆ ಫೋನನ್ನ ಸೌದಿಯ ರಾಜಕುಮಾರ ಮಹಮ್ಮದ ಬಿನ್ ಸಲ್ಮಾನ ಅಲ್ ಸೌದ್ ಅವರೇ ಹ್ಯಾಕು ಮಾಡಿದರು ಅಂತ ಖಾಸಗಿ ಪತ್ತೇದಾರರೊಬ್ಬರು ತಿಳಿಸಿದ್ದರು. ಅದೂ ಹೆಂಗೆಂದರೆ, ಜೆಫ್ ಅವರು ಸೌದಿ ಹೋದಾಗ ಅವರೂ ಇವರೂ ಕೈ ಹಿಡಕೊಂಡು, ತಬ್ಬಿಕೊಂಡು ಬ್ರೊಮ್ಯಾನ್ಸ ಮಾಡಿದ ಮ್ಯಾಲೆ ಸಲ್ಮಾನ ಅವರು ಇವರ ಫೋನ್ ನಂಬರು ಕೇಳಿದರು. ಇವರು ಕೊಟ್ಟರು. ಅವರು ಇವರಿಗೆ ಹೆಲೋ ಗುಡ ಮಾರ್ನಿಂಗ ಅಂತ ಮೆಸೇಜು ಕೊಟ್ಟರು. ಇವರೂ ಗುಡ್ ಮಾರ್ನಿಂಗ ಅಂತ ರಿಟರ್ನ ಗಿಫ್ಟು ಕೊಟ್ಟು ಸುಮ್ಮನಾದರು.

ಆ ಮೆಸೇಜಿನಿಂದ ಈ ಪುಣ್ಯಾತ್ಮ ಜೆಫ್ಫಿನ ಫೋನಿನಿಂದ ಏನೇನು ಮಾಹಿತಿ ತೆಗೆದನೋ ಏನೋ, ಅವನ ಮದುವಿ ಮುರದ ಬಿತ್ತು. ವಿಶ್ವದ ಇತಿಹಾಸದಲ್ಲಿಯೇ ಅತಿ ತುಟ್ಟಿ ಡೈವೋರ್ಸ್ ಆತು.

ಇಡೀ ಜಗತ್ತಿನ ಅತಿದೊಡ್ಡ ಸಾಹುಕಾರನ ಫೋನಿಂದ ಈ ಗತಿ ಆದರ ಉಳದವರದೇನು? ಯಾರನ್ನೂ ಯಾರೂ ಹ್ಯಾಕು ಮಾಡಬಹುದು. ಯಾರ ಫೋನಿನಲ್ಲಿಯೂ ಮಾಹಿತಿ ಸುರಕ್ಷಿತವಾಗಿಲ್ಲ. ಯಾವಾಗಾದರೂ ಸೋರಿಕೆ ಆದೀತು ಅನ್ನೋ ಚಿಂತಿ.

ನಮ್ಮ ಫೋನಿನಾಗ ಏನಿರತದ? ನಮ್ಮ ಸೋಷಿಯಲ್ ಮೀಡಿಯಾ ಫೋಸ್ಟು, ಎಸ್‍ಎಮ್‍ಎಸ್, ಈ ಮೇಲು, ಇತ್ಯಾದಿ ಮಾಹಿತಿ. ಬ್ಯಾಂಕ ಅಕೌಂಟಿನ ಮಾಹಿತಿ, ಪಾಸ್ ವರ್ಡು, ಇತ್ಯಾದಿ, ಇವುಗಳನ್ನ ಯಾರಾದರೂ ಕದ್ದರ ಒಂದ ಚಿಂತಿ. ದುರುಪಯೋಗಪಡಿಸಿಕೊಂಡರ ಇನ್ನೊಂದು ಚಿಂತಿ. ನಿಮ್ಮ ಹೆಸರಿಲೆ ಯಾರಾದರೂ ಹೆಣ್ಣುಮಗಳಿಗೆ ಅಶ್ಲೀಲ ಫೋಟೋ ಕಳಿಸಿದರ ಏನು ಗತಿ? ನಿಮ್ಮ ಸ್ನೇಹಿತರ ವಿರುದ್ಧ ಏನರ ಸುಳ್ಳ ಸುಳ್ಳೇ ಸಂದೇಶ ಸೃಷ್ಟಿ ಮಾಡಿ ಅದನ್ನ ಕಳಿಸಿದರ ಏನು ಗತಿ?

ಅದಕ್ಕಿಂತ ಹೆಚ್ಚು ಅಪಾಯ ಅಂದರ ಆಳುವವರ ಕೈಗೆ ಇಂತಹ ಉಪಕರಣ ಸಿಕ್ಕರ ಏನು ಗತಿ? ಸಲ್ಮಾನ್ ಅವರು ಉಪಯೋಗಿಸಿದ ಸಾಫ್ಟವೇರು ಅಥವಾ ಇ- ಉಪಕರಣದ ಹೆಸರು ಪೆಗಾಸಸ್. ಅದನ್ನು ತಯಾರಿಸಿದವರು ಇಸ್ರೇಲಿನ ಎನ್‍ಎಸ್‍ಓ ಅನ್ನೋ ಕಂಪನಿ. ಅದನ್ನು ನಿಮ್ಮ ಫೋನಿಗೆ ಕಳಿಸಿ, ನೀವು ಅದಕ್ಕ ಪ್ರತಿಕ್ರಿಯೆ ಕೊಟ್ಟರ ಮುಗೀತು. ನಿಮ್ಮ ಫೋನು ಹ್ಯಾಕ ಆಗಲು ತಯಾರು. ಎನ್‍ಎಸ್‍ಓದವರು ಪೆಗಾಸಸ್ ಅನ್ನು ಬರೇ ಸರಕಾರಗಳಿಗೆ ಮಾತ್ರ ಮಾರಾಟ ಮಾಡತಾರ. ಇಲ್ಲಿಯವರೆಗೆ ಅದನ್ನು ವಿವಿಧ ಸರಕಾರಗಳು ಉಪಯೋಗಿಸಲಿಕ್ಕೆ ಹತ್ಯಾವು. ನಮ್ಮ ದೇಶದಾಗ ಸಹಿತ ಅದರ ಉಪಯೋಗ ನಡದಿರಬಹುದು ಅನ್ನೋ ಸಂಶಯವನ್ನು ಅಂತಾರಾಷ್ಟ್ರೀಯ ಪತ್ರಿಕೆಗಳು ವ್ಯಕ್ತಪಡಿಸಿದ್ದಾವು.

ಒಬ್ಬ ವ್ಯಕ್ತಿಗೆ ಪೆಗಾಸಸ್ ಸಿಗೋದಕ್ಕೂ, ಸರಕಾರಕ್ಕ ಸಿಗೋದಕ್ಕೂ ವ್ಯತ್ಯಾಸ ಅದ. ಸರಕಾರಕ್ಕ ಸಿಕ್ಕರ ಸಾವಿರಾರು ಜನರ ಮ್ಯಾಲೆ ಒಂದೇ ಸರೆ ಕಣ್ಣು ಇಡಬಹುದು, ಅವರ ಫೋನು, ಕಂಪ್ಯೂಟರು, ಹ್ಯಾಕು ಮಾಡಬಹುದು.

ವಿರೋಧ ಪಕ್ಷದ ನಾಯಕರ ಮೇಲೆ ಕಣ್ಣಿಡಲಿಕ್ಕೆ ಇದನ್ನ ಬಳಸಲಾಗುತ್ತಿದೆ. ಇದರ ಹೆದರಿಕೆಯಿಂದಲೇ ಆಳುವ ಪಕ್ಷ ವಿರೋಧಿಗಳನ್ನು ಹದ್ದುಬಸ್ತಿನಲ್ಲಿ ಇಡುತ್ತಿದೆ ಅಂತ ಕೆಲವರು ಅಭಿಪ್ರಾಯ ಪಡಿಸ್ಯಾರ. ಇದನ್ನ ತೆರಿಗೆಕಳ್ಳರನ್ನು ಹಿಡಿಯಲು ಉಪಯೋಗಿಸಬಹುದು. ಅವರನ್ನು ಪಕ್ಷಾಂತರಕ್ಕ ಪುಸಲಾಯಿಸಬಹುದು.

ಇನ್ನ ಯಾರನ್ನಾದರೂ ಫೋಲೀಸರು ಭಯೋತ್ಪಾದನೆ ಅಥವಾ ನಕ್ಸಲರ ಸಂಪರ್ಕದ ಆರೋಪದ ಮ್ಯಾಲೆ ಹಿಡದರು ಅಂತ ತಿಳೀರಿ. ಅವರ ಫೋನಿನಿಂದ ಬಾಂಬು, ಪಿಸ್ತೂಲು, ಆರ್‍ಡಿಎಕ್ಸ ಅನ್ನೋ ಪದಗಳನ್ನು ಹೊಂದಿರೋ ಸಂದೇಶಗಳನ್ನ ಕಳಿಸಲಿಕ್ಕೆ ಉಪಯೋಗಿಸಬಹುದು. ಸಾಕ್ಷಿ ಸೃಷ್ಟಿ ಮಾಡಬಹುದು. ಇದರ ಸಾಧ್ಯತೆಗಳು ಅನೇಕ ಹಾಗೂ ಭಯಾನಕ.

ಎಲ್ಲಾ ವಿಷಯದಾಗೂ ನಮಗಿಂತಾ ಮುಂದೆ ಇರುವ ಚೈನಾ ಇದರಾಗುನೂ ಮುಂದ ಹೋಗೇದ. ವಿರೋಧಿಗಳನ್ನ ಹತ್ತಿಕ್ಕಲಿಕ್ಕೆ ಚೈನಾದಾಗ ಪೆಗಾಸಸ್ ಅನ್ನು ಬಳಸತಾರ. ಅದಕ್ಕಿಂತ ಮುಂದುವರೆದ ತಂತ್ರ ಜ್ಞಾನವನ್ನೂ ಬಳಸತಾರ. ಅಲ್ಲಿ ಮುಖ ಗುರುತು ಹಿಡಿಯೋ ತಂತ್ರಜ್ಞಾನ ಬಂದದ. ಅದನ್ನು ಉಪಯೋಗಿಸಿ (ಸೋಷಿಯಲ್ ಕ್ರೆಡಿಟ್) ಸಾಮಾಜಿಕ ಉದ್ರಿ ಅನ್ನೋ ವ್ಯವಸ್ಥಾ ತಂದಾರ. ಉದಾಹರಣೆಗೆ ನೀವು ಒಂದು ದಿವಸ ಟ್ರಾಫಿಕ್ ಸಿಗ್ನಲ್ ತಪ್ಪಿಸಿ ಹೋದಿರಿ ಅಂದರ ಆ ಸಾಫ್ಟವೇರು ನಿಮ್ಮ ಮುಖ ಹಾಗೂ ವಾಹನ ಗುರುತು ಹಿಡೀತದ. ನಿಮ್ಮ ಖಾತೆದಾಗಿಂದಾ ಒಂದಿಷ್ಟು ಪಾಯಿಂಟು ಕಮ್ಮಿ ಆಗತದ. ಹಿಂಗ ಆಗಿಕೋತ ಹೋದರ ಕಡೀಕೆ ನಿಮಗ ಗಾಡಿ ಪರವಾನಗಿ ರದ್ದಾಗತದ, ಗಾಡಿ ಖರೀದಿ ಮಾಡಲಿಕ್ಕೆ ಬರೋದಿಲ್ಲ, ಬಾಡಿಗಿ ಮನೀ ಸಿಗೋದಿಲ್ಲ, ಕಾಲೇಜಿನ್ಯಾಗ ದಾಖಲಾತಿ ಸಿಗೋದಿಲ್ಲ, ಕಡೀಕೆ ನೀವು ನಾಗರಿಕತೆ ಕಳಕೋತೀರಿ, ಜೀವಂತ ಶವ ಆಗಿ ಇರತೀರಿ. ಈ ವ್ಯವಸ್ಥೆ ವಿರುದ್ಧ ಇಡೀ ವಿಶ್ವದಾಗ ಚರ್ಚೆ ನಡದದ.

ಪೆಗಾಸಸ್ ಅನ್ನೋ ಹೆಸರಿನಲ್ಲೂ ರಾಜಕೀಯ ಅದ. ಇದು ಗ್ರೀಕ ಪುರಾಣದಾಗ ಬರೋ, ಹಾರುವ ಕುದುರೆ. ಇದನ್ನ ಹತ್ತಿ ದೇವರು ದಾನವರನ್ನ ಗೆಲ್ಲತಾರ. ಆದರ ಈಗ ಇದರ ಉದ್ದೇಶ ಬ್ಯಾರೆ. ಅದರ ಬದಲೀ ಅದಕ್ಕ ಟ್ರೋಜನ್ ಕುದುರೆ ಅಂತ ಹೆಸರು ಇಡಬೇಕಾಗಿತ್ತು. ಟ್ರಾಯ್ ನಗರವನ್ನು ಗ್ರೀಕರು ಆಕ್ರಮಿಸಿಕೊಳ್ಳಲಿಕ್ಕೆ ಬಂದಾಗ ಅಲ್ಲಿನ ಕೋಟೆಯ ಒಳಗ ನುಗ್ಗಲಾಗದೇ ಒಂದು ವರ್ಷ ಹೊರಗ ಕಾಯತಾರ. ಒಂದು ದಿವಸ ಇಲ್ಲಿಂದ ವಾಪಸ ಹೋದವರ ಗತೆ ಮಾಡಿ, ಕಟ್ಟಿಗೆಯಿಂದ ಮಾಡಿದ ದೊಡ್ಡ ಕುದುರಿಯನ್ನ ಕೋಟೆಯ ಹೊರಗ ಬಿಟ್ಟು ಹೋಗತಾರ. ಇದನ್ನು ನೋಡಿದ ಟ್ರಾಯ್ ಸೈನಿಕರು ಆ ಕುದುರೆಯನ್ನ ಊರಿನ ಒಳಗ ತೊಗೊಂಡು ಬರತಾರ. ಆದರ ಆ ಕುದುರೀ ಒಳಗ ಗ್ರೀಕ ಸೈನಿಕರು ಅಡಗಿಕೊಂಡು ಕೂತಿರತಾರ. ರಾತ್ರಿ ಹೊರಗ ಬಂದು ಕೋಟೆಯ ಬಾಗಿಲು ಒಳಗಿನಿಂದ ತಗೀತಾರ. ಹೊರಗ ಹೊಂಚು ಹಾಕಿಕೊಂಡು ಕೂತಿದ್ದ ಗ್ರೀಕ ಸೈನಿಕರು ಟ್ರಾಯ್ ಮ್ಯಾಲೆ ದಾಳಿ ಮಾಡಿ ಆ ನಗರವನ್ನು ಸುಟ್ಟು ಬಿಡತಾರ. ಪೆಗಾಸಸ್ ಅನ್ನು ಟ್ರೋಜನ್ ಕುದುರೆ ಅಂತ ಕರೀಬೇಕಿತ್ತು. ಆದರ ಅಷ್ಟ ಖರೆ ಯಾರ ಮಾತಾಡತಾರ? ಹೇಳೋದೊಂದು, ಮಾಡೋದೊಂದು ಮಾಡುವವರಿಗೆನ ಈಗ ಕಾಲ, ಅಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನೀವು ನಮ್ಮ ಬೆನ್ನೆಲುಬು; ಪಕ್ಷದ ಡಿಎನ್‌ಎ..’; ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಂದೇಶ

0
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪಕ್ಷದ ಕಾರ್ಯಕರ್ತರಿಗೆ ಹೃದಯಸ್ಪರ್ಶಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ,...