Homeಅಂಕಣಗಳುನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

ನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

- Advertisement -
- Advertisement -

ಚಂದ್ರಶೇಖರ್ ಆಜಾದ್ ‘ರಾವಣ್’, ಯಾವುದೇ ಬಾಲಿವುಡ್ ಹೀರೋಗೂ ಕಡಿಮೆಯಿಲ್ಲದಂತೆ ಸಂಚಲನ ಮೂಡಿಸಿರುವ ಹೆಸರುಗಳಲ್ಲೊಂದು. ಈವರೆಗೆ ರಾಮಾಯಣದ ರಾವಣನ ಪೌರಾಣಿಕ ಪಾತ್ರವನ್ನು ಬಿಟ್ಟು ಆ ಹೆಸರಿನ ಇನ್ಯಾವ ವ್ಯಕ್ತಿಯ ಬಗ್ಗೆಯೂ ಗೊತ್ತಿಲ್ಲದವರೂ ಕೂಡಾ, ಕಳೆದ ಕೆಲವು ದಿನಗಳಲ್ಲಿ ಮಾಧ್ಯಮಗಳು ಪದೇ ಪದೇ ಪ್ರಸ್ತಾಪಿಸಿದ ಈ ಹೆಸರಿನ ವ್ಯಕ್ತಿಯ ಬಗ್ಗೆ ಕುತೂಹಲದಿಂದ ಪರಿಶೀಲಿಸುವಂತಾಯಿತು. ವಿವರಗಳನ್ನು ಕೆದಕಿದವರಿಗೆ ಕಂಡಿದ್ದು ಚಂದ್ರಶೇಖರ್ ಅಥವಾ ರಾವಣ್ ಎಂಬ ಪಶ್ಚಿಮ ಉತ್ತರ ಪ್ರದೇಶದ ದಲಿತ ಯುವ ವಕೀಲನೊಬ್ಬನು ಹೊಸ ತಲೆಮಾರನ್ನು ಪ್ರಭಾವಿಸಿದ ರೀತಿ; ವಿಶೇಷವಾಗಿ ಈತ, ವಿನಯ್ ರತನ್‍ಸಿಂಗ್ ಎಂಬ ಮತ್ತೊಬ್ಬ ದಲಿತ ಯುವ ವಕೀಲನೊಂದಿಗೆ ಸೇರಿ ಕಟ್ಟಿದ ‘ಭೀಮ್ ಆರ್ಮಿ’ ತಂಡವು ದಲಿತ ಯುವಕರಲ್ಲಿ ಮಿಲಿಟೆನ್ಸಿಯನ್ನು ಹುಟ್ಟುಹಾಕಿ ಯಾರಿಗೂ ತಲೆಬಾಗಿ ಬದುಕಬೇಡಿ ಎಂಬ ಸಂದೇಶ; ನಂತರ ಆಜಾದ್ ಮೇಲೆ ಸುಳ್ಳು ಕೇಸುಗಳನ್ನು ಜಡಿದು ಜೈಲುಪಾಲು ಮಾಡಿ ಇವೆಲ್ಲವನ್ನೂ ಹತ್ತಿಕ್ಕಲು ಉತ್ತರ ಪ್ರದೇಶದ ಸರ್ಕಾರ ನಡೆಸಿದ ವಿಫಲ ಯತ್ನ ಮತ್ತು ನಂತರ ಅನಿವಾರ್ಯವಾಗಿ ಈ ಸೆಪ್ಟೆಂಬರ್ 13ರ ಮಧ್ಯರಾತ್ರಿ ಚಂದ್ರಶೇಖರ್ ಆಜಾದ್ ರ  ಬಿಡುಗಡೆ!

ಇವೆಲ್ಲವೂ ಕೇವಲ 30ರ ಆಸುಪಾಸಿನಲ್ಲಿರುವ, ದಲಿತರ ಪರವಾದ ಖಚಿತವಾದ ರಾಜಕೀಯ ನಿಲುವುಗಳನ್ನುಳ್ಳ, ಪ್ರಖರ ವಾಗ್ಮಿಯೂ ಹೋರಾಟಗಾರನೂ ಆದ ಈ ಯುವಕನನ್ನು ಭಾರತದ ಬಹುಪಾಲು ದಲಿತ ಮತ್ತು ಚಿಂತನಶೀಲ ಯುವಕರ ಕಣ್ಮಣಿಯಾಗಿಸಿದೆ. ತಮ್ಮ ಸಮುದಾಯವನ್ನು ಸುದೀರ್ಘ ಕಾಲದಿಂದ ಕಾಡುತ್ತಾ ಬಂದಿರುವ ಉತ್ತರ ಪ್ರದೇಶದ ಬಲಾಢ್ಯ ಠಾಕೂರ್ ಸಮುದಾಯದ ರೀತಿಯಂತೆ ಉದ್ದೇಶಪೂರ್ವಕವಾಗಿಯೇ ಮೇಲೆತ್ತಿ ತಿರುಗಿಸಿದ ಮೀಸೆಯನ್ನೂ, ಬಲಗೈಗೆ ಧರಿಸುವ ದಪ್ಪ ಕಡಗವನ್ನೂ ತಮ್ಮ ವಿಶಿಷ್ಟ (ಸಿಗ್ನೇಚರ್) ಶೈಲಿಯಾಗಿಸಿಕೊಂಡಿರುವ ಭೀಮ್ ಆರ್ಮಿಯ ಹೋರಾಟಗಾರರು ಸದ್ಯಕ್ಕೆ ಸಮಾನತೆಯನ್ನು ಕನಸುವ ಯುವಕರ ಫ್ಯಾಶನ್ ಐಕಾನ್‍ಗಳು ಕೂಡಾ ಹೌದು!

ಚಂದ್ರಶೇಖರ್ ಆಜಾದ್ ‘ರಾವಣ್’ ಭೀಮ್ ಆರ್ಮಿಯನ್ನು ಆರಂಭಿಸಿದ್ದು 2015ರ ಜುಲೈನಲ್ಲಿ. ‘ರಾವಣ್’ ಎಂಬುದು ಖಳನಾಯಕರಂತೆ ಬಿಂಬಿಸಲ್ಪಟ್ಟ ಈ ದೇಶದ ಮೂಲನಿವಾಸಿ ಹೋರಾಟಗಾರರ ನಿಜವಾದ ಇತಿಹಾಸವನ್ನು ಎತ್ತಿತೋರುವುದಕ್ಕಾಗಿ ಬೇಕೆಂದೇ ಇಟ್ಟುಕೊಂಡ ಹೆಸರು. ಠಾಕೂರರ ಉಸಿರುಕಟ್ಟಿಸುವ ದಮನ ದಬ್ಬಾಳಿಕೆಗಳ ನಡುವೆ ತಲೆಯೆತ್ತಲು ಹೆಣಗುತ್ತಿದ್ದ ಸಹರಾನ್‍ಪುರದ ದಲಿತ ಸಮುದಾಯದೊಳಕ್ಕೆ ಅಂಬೇಡ್ಕರ್ ಚಿಂತನೆಗಳೊಂದಿಗೆ ಅವರ ತಂಡ ನುಗ್ಗಿತು. ಅತ್ಯಂತ ಸಣ್ಣ ಅವಧಿಯಲ್ಲಿ ಜನಬೆಂಬಲವನ್ನೂ, ಜನಪ್ರಿಯತೆಯನ್ನೂ ಗಳಿಸಿದ ಆಜಾದ್ ರ ಮಿಂಚಿನ ವೇಗವು ದಲಿತ ಸಮುದಾಯದಲ್ಲಿ ಐಕ್ಯತೆಯನ್ನು ತಂದಿತ್ತು. ಇದು ಬಲಾಢ್ಯ ಸಮುದಾಯಗಳ ಫ್ಯೂಡಲ್ ದೊರೆಗಳ ಮತ್ತು ಉತ್ತರ ಪ್ರದೇಶದ ಸರಕಾರಗಳ (ಈಗಿನ ಮತ್ತು ಹಿಂದಿನ) ನಿದ್ದೆ ಕೆಡಿಸಿತ್ತು. ಆದ್ದರಿಂದಲೇ, ಸುಮಾರು 24 ಗಂಭೀರ ದೋಷಾರೋಪಗಳನ್ನು ಅವರ ಮೇಲೆ ಹೊರಿಸಿತು. ಅದು ಸಾಲದೆಂದು ದೇಶದ ಭದ್ರತೆಗೇ ಅಪಾಯವಾಗುವಂತಹ ಕೆಲಸ ಮಾಡಿದ್ದಾನೆಂದು ಆರೋಪಿಸುತ್ತಾ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ಯ ಅತಿ ಗಂಭೀರ ಆರೋಪಗಳನ್ನೂ ಬಳಸಿ 2017ರಲ್ಲಿ ಅವರನ್ನು ಜೈಲಿಗೆ ದಬ್ಬಲಾಯಿತು.

ಆದರೆ, ಈ ಸುದ್ದಿಗಳ ನಡುವೆ ಭೀಮ್ ಆರ್ಮಿಯು ತನ್ನ ಹುಟ್ಟಿನೊಂದಿಗೇನೆ ಆರಂಭಿಸಿದ ‘ಭೀಮ್ ಪಾಠ್‍ಶಾಲಾ’ಗಳ ಯಶಸ್ಸಿನ ಕಥೆ ಸ್ವಲ್ಪ ಮಸುಕಾದಂತಾಗಿದೆ. ಮೊಟ್ಟಮೊದಲ ಭೀಮ್ ಪಾಠ್‍ಶಾಲಾ 2015ರಲ್ಲಿ ಸಹರನ್‍ಪುರದ ಫತೇಪುರ್ ಭಾಡೋ ಗ್ರಾಮದಲ್ಲಿ ಆರಂಭವಾಯಿತು. ಭೀಮ್ ಆರ್ಮಿ (ಈ ಸಂಘಟನೆಯ ಪೂರ್ಣ ಹೆಸರು ‘ಭೀಮ್ ಆರ್ಮಿ ಭಾರತ್ ಏಕ್ತಾ ಮಿಶನ್’)ಯ ಸಂಸ್ಥಾಪಕರಾದ ಆಜಾದ್ ಮತ್ತು ವಿನಯ್ ರತನ್‍ರಿಗೆ ಮತ್ತು ಅವರ ಜೊತೆಗಾರರಿಗೆ ಇಂತಹ ಶಾಲೆಗಳ ಅಗತ್ಯವೇನೆಂಬುದು ನಿಚ್ಚಳವಾಗಿ ತಿಳಿದಿತ್ತು.
‘ಯಾವುದೇ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಮೊದಲ ಹತ್ತು ವರ್ಷಗಳಲ್ಲಿ ಆ ಮಗು ಏನು ಕಲಿಯುತ್ತದೆಂಬುದು ಬಹಳ ಮುಖ್ಯ. ಆದರೆ ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳು ಅಸಹನೀಯವಾದ ಸ್ಥಿತಿಯಲ್ಲಿವೆ. ಬಹುಪಾಲು ದಲಿತ ಸಮುದಾಯ ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಭರಿಸುವ ಸ್ಥಿತಿಯಲ್ಲಿಲ್ಲ; ಒಂದು ವೇಳೆ ಹಾಗೆ ಖಾಸಗಿ ಶಾಲೆಗಳಿಗೆ ಕಳಿಸಿದರೂ ಜಾತಿಯ ಕಾರಣದಿಂದಾಗಿ ಅಲ್ಲಿ ಅವರಿಗೆ ಸಮಾನ ಗೌರವ ಅಥವಾ ಕಲಿಕೆ ಸಿಗುವುದಿಲ್ಲವೆಂಬುದು ಗೊತ್ತೇ ಇದೆ. ಬಾಬಾಸಾಹೇಬರು ಶಿಕ್ಷಣಕ್ಕೆ ಪ್ರಮುಖ ಸ್ಥಾನ ಕೊಟ್ಟಿದ್ದು ಸುಮ್ಮನೇ ಅಲ್ಲ. ಅದಕ್ಕಾಗಿಯೇ ನಮ್ಮ ಸಂಘಟನೆಯ ಮೊದಲ ಮತ್ತು ಆದ್ಯತೆಯ ಕೆಲಸವಾಗಿ ನಾವು ಆರಂಭಿಸಿದ್ದು ಉಚಿತವಾಗಿ ಉತ್ತಮ ಕಲಿಕೆಯನ್ನು ರೂಪಿಸುವ ‘ಭೀಮ್ ಪಾಠ್‍ಶಾಲಾ’ಗಳನ್ನು’ ಎನ್ನುತ್ತಾರೆ ಸಿಂಗ್.

ಈ ಶಾಲೆಗಳಲ್ಲಿ ಮಕ್ಕಳು ಪಠ್ಯ ವಿಷಯಗಳಾದ ಗಣಿತ, ವಿಜ್ಞಾನ, ಇಂಗ್ಲೀಷ್ ಮೊದಲಾದವುಗಳ ಜೊತೆಗೆ, ಇತಿಹಾಸದ ಪುಟಗಳಲ್ಲಿ ಹೂತುಹೋಗಿರುವ ದಲಿತ ಸಮುದಾಯದ ಚರಿತ್ರೆಯನ್ನೂ, ಶೋಷಿತರ ವಿಮೋಚನೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಜೀವನ ಚಿತ್ರಣಗಳನ್ನೂ, ಅಂಬೇಡ್ಕರ್‍ರವರ ಚಿಂತನೆಗಳನ್ನೂ ಕಲಿಯುತ್ತಾರೆ. ಆರಂಭದಲ್ಲಿ ಸಹರನ್‍ಪುರದ ಸುತ್ತಲಿನ ಪ್ರದೇಶದಲ್ಲಷ್ಟೇ ಸಂಜೆಯ ಕೋಚಿಂಗ್ ತರಗತಿಗಳಾಗಿ 2 ಗಂಟೆಗಳ ಕಾಲ ನಡೆಯುತ್ತಿದ್ದ ಈ ಶಾಲೆಗಳು ಬಹಳ ವೇಗವಾಗಿ ಮೀರಟ್, ಮುಜಫ್ಫರ್‍ನಗರ್, ಆಗ್ರಾ ಮೊದಲಾದೆಡೆಗಳಿಗೂ ವ್ಯಾಪಿಸಿದವು. ಇಂದು ಸುಮಾರು 350ರಷ್ಟು ‘ಭೀಮ್ ಪಾಠ್‍ಶಾಲಾ’ಗಳು ಕಾರ್ಯನಿರ್ವಹಿಸುತ್ತಿದ್ದು ಸಾವಿರದ ಸಂಖ್ಯೆಯನ್ನು ಮುಟ್ಟುವ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ.

ಮೊದಲ ಶಾಲೆ ಫತೇಪುರದಲ್ಲಿ ಆರಂಭವಾಗುತ್ತಿದ್ದಂತೆ ಬುಢಖೇರಾದ ದಲಿತ ಯುವಕರಿಗೆ ತಮ್ಮಲ್ಲೂ ಇಂತಹ ಶಾಲೆ ಬೇಕೆಂದೆನಿಸಿತು. ನಿವೃತ್ತ ಶಿಕ್ಷಕ ಕನ್ವರ್ ಪಾಲ್ ಸಿಂಗ್‍ರವರ ಮನೆಯೆದುರಿನ ಖಾಲಿ ಬಯಲೇ ಶಾಲಾ ಆವರಣವಾದರೆ ಆಗಷ್ಟೇ 10ನೇ ತರಗತಿ ಮುಗಿಸಿದ್ದ 15 ವರ್ಷದ ಸಿಂಗ್‍ರವರ ಕಿರಿಯ ಪುತ್ರಿ ನಿಶಾ ಆ ಭೀಮ್ ಶಾಲೆಯ ಮೊದಲ ಬೋಧಕಿಯಾದಳು. ಮೊದಲ ದಿನ 30 ಇದ್ದ ಮಕ್ಕಳ ಸಂಖ್ಯೆ ಕೇವಲ 2 ವಾರಗಳಲ್ಲಿ 100ರ ಸಂಖ್ಯೆಯನ್ನೂ ದಾಟಿ ಹಿಗ್ಗುತ್ತಾ ಹೋಗಿ ಶಾಲೆಯನ್ನು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಸೃಷ್ಟಿಸಿತು. ಈಗ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳು 1-4 ಹಾಗೂ 5-9ರವರೆಗಿನ ವಿಭಾಗಗಳಲ್ಲಿ ನಿರಂತರ ಕಲಿಕೆಯಲ್ಲಿದ್ದಾರೆ.

ಇದೇ ಶಾಲೆಯ ಹಿರಿಯ ವಿದ್ಯಾರ್ಥಿನಿ ರಚನಾ, ತನ್ನ ಔಪಚಾರಿಕ ಖಾಸಗಿ ಶಾಲೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತರಗತಿಗೆ ಮೊದಲ ಸ್ಥಾನ ಗಳಿಸಿ ಆಜಾದ್ ರವರಿಂದ ಬಹುಮಾನ ಪಡೆದಿರುವುದನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ರಚನಾ ಕೂಲಿಕಾರ್ಮಿಕರಾದ ತನ್ನ ತಂದೆತಾಯಿಯರ 7 ಮಂದಿ ಮಕ್ಕಳಲ್ಲಿ ಒಬ್ಬಳು. ‘ಭೀಮ್ ಆರ್ಮಿಯೊಂದಿಗೆ ಗುರುತಿಸಿಕೊಂಡಿರುವುದರಿಂದ ನಾವು ದಲಿತ ಹೆಣ್ಣುಮಕ್ಕಳು ಇಂದು ಲೈಂಗಿಕ ದೌರ್ಜನ್ಯಗಳ ಭೀತಿಯಿಲ್ಲದೆ ಸೈಕಲ್ ತುಳಿದುಕೊಂಡು ಶಾಲೆಗೆ ಹೋಗಲು ಸಾಧ್ಯವಾಗುತ್ತಿದೆ. ನಾನು ಜೀವಶಾಸ್ತ್ರ ಕಲಿತು ಮುಂದೆ ವೈದ್ಯೆಯಾಗಬೇಕು, ನೊಂದವರಿಗಾಗಿ ಉಚಿತ ಚಿಕಿತ್ಸಾಲಯಗಳನ್ನು ತೆರೆಯಬೇಕು’ ಎಂಬ ಕನಸು ಕಾಣುವುದು ರಚನಾಗೆ ಈಗ ಸಾಧ್ಯವಾಗಿದೆ. ಆಕೆಯು ಭೀಮಶಾಲೆಯ ಮತ್ತೊಬ್ಬ ಸ್ವಯಂಸೇವಕ ಬೋಧಕಿ!

ಈ ಅನೌಪಚಾರಿಕ ಶಾಲೆಗಳು ದಲಿತ ಸ್ವಾಭಿಮಾನದ, ಅರಿವಿನ ಮತ್ತು ಐಕ್ಯತೆಯ ಪ್ರತೀಕಗಳಾಗಿ ಛಾಪು ಮೂಡಿಸುತ್ತಾ ವಿಸ್ತರಣೆಗೊಳ್ಳುತ್ತಲೇ ಹೋಗುತ್ತಿವೆ.
ಶೋಷಿತರ ಸ್ವಾಭಿಮಾನದ ಚಳವಳಿಗಳಿಗೆ ಶಿಕ್ಷಣವು ಕೇವಲ ಅನ್ನದ ಮಾರ್ಗ ಮಾತ್ರವಲ್ಲ; ಸಮಾಜ ಪರಿವರ್ತನೆಯ ಮಾರ್ಗ. ಶೋಷಿತ ಸಮುದಾಯಗಳು ತಮ್ಮದೇ ಆದ ಸಾಮಾಜಿಕ ಸಾಂಸ್ಕøತಿಕ ಗುರುತನ್ನು ಗಳಿಸಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಮಾರ್ಗ. ಆದ್ದರಿಂದಲೇ ರಷ್ಯಾ ಕ್ರಾಂತಿಯ ನಂತರ ಲೆನಿನ್ ತಮ್ಮ ಭಾಷಣವೊಂದರಲ್ಲಿ “ರಷ್ಯಾದ ದುಡಿಯುವ ಜನತೆಯ ಶೇ.90ಕ್ಕಿಂತ ಹೆಚ್ಚು ಮಂದಿ ಶಿಕ್ಷಣ ಪಡೆದಿಲ್ಲ; ಆದರೆ, ಬಂಡವಾಳಶಾಹಿಗಳ ಮೇಲೆ ವಿಜಯ ಸಾಧಿಸಲು ತಮಗೆ ಅದು ಬೇಕೇಬೇಕು ಎಂಬುದನ್ನು ಅರಿತಿದ್ದಾರೆ. ಇಲ್ಲಿ ಶಿಕ್ಷಣ ಕೇವಲ ಅಕ್ಷರ ಜ್ಞಾನವಲ್ಲ, ಹೊಸ ಮಾನವರ ಹುಟ್ಟು” ಎನ್ನುತ್ತಾರೆ. ಇದೇ ಮಾದರಿಯಲ್ಲಿ ಭೀಮ್ ಪಾಠಶಾಲೆಯ ಪ್ರಯೋಗ ಏಕಕಾಲದಲ್ಲಿ ರಚನಾತ್ಮಕವಾದದ್ದೂ ಹಾಗೂ ಅತ್ಯಂತ ರಾಜಕೀಯವಾದದ್ದೂ ಹೌದು.

ಛತ್ತೀಸ್‍ಗಢದಲ್ಲಿ ಹೋರಾಟ ಮತ್ತು ರಚನಾತ್ಮಕ ಕೆಲಸಗಳು ಜೊತೆಜೊತೆಯಾಗಿ ಸಾಗಬೇಕಿರುವ ಕುರಿತು ಛತ್ತೀಸ್‍ಗಡ ಮುಕ್ತಿ ಮೋರ್ಚಾದ ಸಂಸ್ಥಾಪಕ ಶಂಕರ್ ಗುಹಾ ನಿಯೋಗಿ ‘ಸಂಘರ್ಷ್ ಔರ್ ನಿರ್ಮಾಣ್’ ಎಂದು ಸೂತ್ರೀಕರಿಸಿದ್ದರು. ಶಹೀದ್ ಶಾಲೆಗಳು ಮತ್ತು ಶಹೀದ್ ಆಸ್ಪತ್ರೆಗಳು ಇಂದಿಗೂ ಮಾದರಿ ಸಂಸ್ಥೆಗಳಾಗಿವೆ. ಮಹಾರಾಷ್ಟ್ರದಲ್ಲಿ ಅನೂಪ್ ವಾರ್ಧಾರವರು ನಡೆಸುತ್ತಿರುವ ನಳಂದ ಅಕಾಡೆಮಿಯ ಪ್ರಯೋಗದ ಕುರಿತು, ಅವರ ಸಂದರ್ಶನದ ಮೂಲಕ ಓದುಗರಿಗೆ ‘ಪತ್ರಿಕೆ’ ತಿಳಿಸಿತ್ತು.

ಬಹುಶಃ ಸಂಘರ್ಷ್ ಔರ್ ನಿರ್ಮಾಣ್‍ಗಳು ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ. ಈ ತಲೆಮಾರಿನ ಯುವಜನರನ್ನು ಒಳಗೊಂಡು, ಮಕ್ಕಳು ಕುಟುಂಬ ಎಲ್ಲರನ್ನೂ ಜೊತೆಗೊಯ್ಯಬಲ್ಲ ಹೋರಾಟದ ಮಾದರಿಗಳು ಹೆಚ್ಚೆಚ್ಚು ಜನರನ್ನೂ ತಲುಪುತ್ತವೆ ಹಾಗೂ ಇದರ ಪ್ರಭಾವ ಹಾಗೂ ಪರಿಣಾಮ ದೂರಗಾಮಿಯಾದದ್ದೂ ಆಗಿರುತ್ತದೆ. ಇದನ್ನು ಭೀಮ್‍ಆರ್ಮಿ ತಂಡವು ಚೆನ್ನಾಗಿಯೇ ಮನಗಂಡಿದೆ. ಅವರಿಗೊಂದು ಜೈಭೀಮ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...