ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆ ಬಗ್ಗೆ ಮೊದಲಿನಿಂದಲೂ ವಿರೋಧವಿದೆ. ಕರ್ನಾಟಕದಲ್ಲಿ ಸರ್ಕಾರದ ಕಡೆಯಿಂದ ಹಿಂದಿ ಹೇರಿಕೆ ನಡೆ ಕಂಡುಬಂದಾಗ ಪ್ರತಿಭಾರಿಯೂ ಪ್ರತಿಭಟನೆ ನಡೆಯುತ್ತಲೇ ಇರುತ್ತದೆ. ಆದರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮಾತ್ರ ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ನೆಹರು ಯುವ ಕೇಂದ್ರ, ಬೆಂಗಳೂರು ನಗರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತಾಗಿದೆ.
ಡಿಸೆಂಬರ್ 30 ರಂದು ಬೆಂಗಳೂರಿನ ಯವನಿಕ ಸಭಾಂಗಣದಲ್ಲಿ ನಡೆಯಲಿರುವ ಈ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಿದ್ದು, ಆಶುಭಾಷಣ ಸ್ಪರ್ಧೆ, ಏಕಾಂಕ ನಾಟಕ, ಬೀದಿ ನಾಟಕಗಳನ್ನು ಕನ್ನಡದಲ್ಲಿ ಮಾಡಲು ಅನುಮತಿ ಇಲ್ಲ. ಕೇವಲ ಹಿಂದಿ ಅಥವಾ ಇಂಗ್ಲಿಷ್ ಎರಡು ಭಾಷೆಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಯುವರಂಗ ನಾಟಕೋತ್ಸವ 2021: 15 ದಿನ, 15 ನಾಟಕಗಳು, 15 ನಿರ್ದೇಶಕರು!
ಬೆಂಗಳೂರು ನಗರ ಜಿಲ್ಲೆಯ 15 ರಿಂದ 29 ವರ್ಷದೊಳಗಿನ ಯುವಕ ಯುವತಿಯರು, ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆದರೆ, ಕನ್ನಡ ನಾಡಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಮಾಯ ಮಾಡಿರುವ ಸರ್ಕಾರದ ಈ ಕ್ರಮಕ್ಕೆ ನಾಡಿನಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಮಂದಿ ಸರ್ಕಾರದ ಕ್ರಮವನ್ನು ಅನ್ಯಾಯದ ಪರಮಾವಧಿ ಎಂದಿದ್ದಾರೆ.
ಹಿಂದೀ ಹೇರಿಕೆಯ ವಿರಾಟ್ ರೂಪ.. ಅನ್ಯಾಯದ ಪರಮಾವಧಿ pic.twitter.com/grtMXAf9xQ
— Anand G (@Anand_GJ) December 24, 2020
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಒಂದೇ ಪಕ್ಷ ಆಡಳಿತದಲ್ಲಿರುವ ಕಾರಣ ಕೇಂದ್ರದ ಎಲ್ಲಾ ಆದೇಶಗಳು ಯಥಾವತ್ತಾಗಿ ಕರ್ನಾಟಕದಲ್ಲಿ ಜಾರಿಯಾಗುತ್ತವೆ ಎಂದು ಜಾಲತಾಣಿಗರು ಆರೋಪಿಸಿದ್ದಾರೆ.
ಈಗಾಗಲೇ ಯಡಿಯೂರಪ್ಪ ನೇತೃತ್ವದ ಸರ್ಕಾರ ಹಿಂದಿ ದಿವಸ್ ಆಚರಣೆಯನ್ನು ಸಮರ್ಥನೆ ಮಾಡಿಕೊಂಡಿತ್ತು. ರಾಜ್ಯ ಸರ್ಕಾರದ ಹಲವಾರು ಸಚಿವರು ಹಿಂದಿ ಹೇರಿಕೆ ಬಗ್ಗೆ ತುಟಿ ಬಿಚ್ಚುವುದಿಲ್ಲ. ಆದರೆ ಪಕ್ಕದ ತಮಿಳುನಾಡು, ಕೇರಳದಲ್ಲಿ ಜನರು, ಅಲ್ಲಿನ ರಾಜಕಾರಣಿಗಳು ಕೂಡ ಹಿಂದಿ ಹೇರಿಕೆ ಬಗ್ಗೆ ಧ್ವನಿ ಎತ್ತುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತರು ಟೀಕಿಸುತ್ತಾರೆ.
ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಉಳಿಸಿ ಎಂಬ ಅಭಿಯಾನ ಈಗಾಗಲೇ ರಾಜ್ಯದಲ್ಲಿ ಆರಂಭವಾಗಿದ್ದು, ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ರಾಜ್ಯ ಸರ್ಕಾರ ಕನ್ನಡ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಿಲ್ಲ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಬೆಂಬಲಿಸಿ #ಕನ್ನಡವಿವಿಉಳಿಸಿ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್


