- Advertisement -
ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಎರಡನೇ ಬಜೆಟ್ ಮಂಡಿಸಿದ್ದು ಕೃಷಿ ಮತ್ತು ನೀರಾವರಿಗೆ 2.9 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಸ್ವಚ್ಛ ಭಾರತ ಯೋಜನೆಗೆ 12,300 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಹೇಳಿದರು.
ಜಲ ಜೀವನ್ ಮಿಷನ್ ಗೆ 11,500 ಕೋಟಿ ರೂ, ಕೈಗಾರಿಕೆಗೆ 27,300 ಕೋಟಿ, ಶಿಕ್ಷಣ ವಲಯಕ್ಕೆ 99,300 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ತಿಳಿಸಿದರು. ಬಜೆಟ್ ಭಾಷಣ ಮಾಡುತ್ತ ಹೋದಂತೆ ಶೇರು ಮಾರುಕಟ್ಟೆಯಲ್ಲಿ ಏರಿಳಿತ ಕಂಡು ಬಂತು. ಎಸ್. ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೂಚ್ಯಂಕ ಏರಿಕೆಯಾಗಿರುವುದು ಕಂಡುಬಂತು. ಎಸ್.ಬಿ.ಐ ತೀವ್ರ ಕುಸಿತವಾಗಿತ್ತು.
ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯ ಮತ್ತು ಮಹಿಳೆಯರ ಜೀವನ ಉತ್ತಮಪಡಿಸಲು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಕ್ರಮಗಳಿಂದ ದೇಶದ 2.71 ಕೋಟಿ ಮಂದಿ ಬಡವರ ಜೀವನಮಟ್ಟ ಸುಧಾರಿಸಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಮನೆಗಳನ್ನು ಒದಗಿಸಲಾಗುವುದು ಎಂದು ಭಾಷಣದಲ್ಲಿ ಹೇಳಿದರು.
ಕೇಂದ್ರ ಸರ್ಕಾರ ಜಿಎಸ್ ಟಿ ಜಾರಿಗೆ ತಂದ ಪರಿಣಾಮ 40 ಕೋಟಿ ತೆರಿಗೆದಾರರು ತೆರಿಗೆ ಸಲ್ಲಿಸಿದ್ದಾರೆ. ಹೊಸದಾಗಿ 16 ಲಕ್ಷ ಮಂದಿ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ. ಜಿಎಸ್ ಟಿ ಜಾರಿಯಿಂದ ಭಾರತದ ಆರ್ಥಿಕತೆ ಸರಿದಾರಿಗೆ ಬಂದಿದೆ. ಇಂತಹ ಕ್ರಮಗಳಿಂದ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆಯನ್ನು ಹೊಂದಲು ಸಾಧ್ಯವಾಗಿದೆ ಎಂದು ತಿಳಿಸಿದರು.
2022ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು. 2025ಕ್ಕೆ ದೇಶದಲ್ಲಿ ರಾಸುಗಳಿಗೆ ಬರುವ ಕಾಲುಬಾಯಿ ರೋಗವನ್ನು ಸಂಪೂರ್ಣ ಹತೋಟಿಗೆ ತರಲು ಉದ್ದೇಶಿಸಲಾಗಿದೆ. ತೋಟಗಾರಿಕೆಯಲ್ಲಿ 311 ಮಿಲಿಯನ್ ಟನ್ ಉತ್ಪಾದನೆಯಾಗುತ್ತಿದ್ದು ಇದನ್ನು ರಫ್ತು ಮಾಡಲು ಕ್ರಮ ಕೈಗೊಳ್ಳಲಾಗುವುದು. ಒಂದು ಉತ್ಪಾದನೆ – ಒಂದು ಜಿಲ್ಲೆ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದರು.
ನ್ಯಾಷನ ಪೊಲೀಸ್ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ, ಬೀಜ ಸಂರಕ್ಷಣೆಗೆ ಧಾನ್ಯಲಕ್ಷ್ಮಿ ಮಹಿಳಾ ಸಂಘಗಳ ರಚನೆ, ಕೃಷಿ ಹುಡಾನ್ ಮೂಲಕ ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವುದು, ಬಂದರುಗಳು ಇರುವ ಪ್ರದೇಶಗಳ್ಲಿ 500 ಮೀನು ಕೃಷಿ ರೈತ ಸಂಘಗಳ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದೇಶದ 15 ಲಕ್ಷ ಅಂಗನವಾಡಿ ಕಾರ್ಮಿಕರಿಗೆ ಮೊಬೈಲ್ ವಿತರಣೆ ಮಾಡಲಾಗುವುದು. ಬೆಂಗಳೂರು ಅರ್ಬನ್ ನಲ್ಲಿ ಮೆಟ್ರೋ ಮಾದರಿಯಲ್ಲಿ ಸೇವೆ ಆರಂಭಕ್ಕೆ ಕೇಂದ್ರ ಸರ್ಕಾರ ಶೆ.20ರಷ್ಟು ಅನುದಾನ ಒದಗಿಸಲಿದೆ. ರಾಜ್ಯ 80ರಷ್ಟು ಹಣ ನೀಡಬೇಕಾಗಿದೆ


