Homeಮುಖಪುಟಎತ್ತಿನಹೊಳೆ ಯೋಜನೆಗೆ 15 ಹಳ್ಳಿಗಳ ಮುಳುಗಡೆ ಗ್ರಾಮಸ್ಥರ ಗೋಳು ಕೇಳೋರೇ ಇಲ್ಲ

ಎತ್ತಿನಹೊಳೆ ಯೋಜನೆಗೆ 15 ಹಳ್ಳಿಗಳ ಮುಳುಗಡೆ ಗ್ರಾಮಸ್ಥರ ಗೋಳು ಕೇಳೋರೇ ಇಲ್ಲ

- Advertisement -
- Advertisement -

ಎತ್ತಿನಹೊಳೆ ಪ್ರಾಜೆಕ್ಟ್ ಕುಂಟುತ್ತಾ ಸಾಗಿದೆ. ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಮೂರು ಹಂತದಲ್ಲಿ ರಾಜ್ಯ ಸರ್ಕಾರ ಕಾಮಗಾರಿಗಾಗಿ 40 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಸಕಲೇಶಪುರದಿಂದ ಉದ್ದೇಶಿತ ಡ್ಯಾಂ ನಿರ್ಮಾಣದ ಪ್ರದೇಶದವರೆಗೂ ಅಲ್ಲಲ್ಲಿ ನಾಲೆ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಆದರೆ ಡ್ಯಾಂ ನಿರ್ಮಾಣಕ್ಕೆ ಇದುವರೆಗೂ ಸರ್ಕಾರ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದಾರೆಯೇ ಹೊರತು ಸರ್ಕಾರ ಅಧಿಸೂಚನೆ ಹೊರಡಿಸಲು ವಿಳಂಬ ಮಾಡುತ್ತಿರುವುದೇಕೆ ಎಂಬ ಜನರ ಪ್ರಶ್ನೆಗೆ ಉತ್ತರಿಸುತ್ತಿಲ್ಲ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಬೈರಗೊಂಡ್ಲು, ಭೂಚನಹಳ್ಳಿ ಮತ್ತು ಗೊಲ್ಲರಹಟ್ಟಿ ಬಳಿ ಉದ್ದೇಶಿತ ಡ್ಯಾಂ ಏರಿ ನಿರ್ಮಾಣಕ್ಕೆಂದು ಸರ್ಕಾರ ಸ್ಥಳ ಗುರುತಿಸಿ ನೀಲನಕಾಶೆ ತಯಾರಿಸಿದೆ. ಡ್ಯಾಂ ನಿರ್ಮಾಣದಿಂದ ಕೊರಟಗೆರೆ ತಾಲ್ಲೂಕಿನ 2700 ಎಕರೆ ಮತ್ತು ದೊಡ್ಡಬಳ್ಳಾಪುರದ 2500 ಎಕರೆ ಸೇರಿ ಒಟ್ಟು ಆರು ಸಾವಿರ ಎಕರೆ ಫಲವತ್ತಾದ ಭೂಮಿ ಭೂಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ಡ್ಯಾಂ ನಿರ್ಮಾಣ ಮಾಡುವುದಕ್ಕೆ ಜನರ ಅಡ್ಡಿಯಿಲ್ಲ. ಆದರೆ ಅಧಿಸೂಚನೆ ಹೊರಡಿಸುವುದು, ಎಷ್ಟು ಭೂಮಿ ಸ್ವಾಧೀನಪಡಿಸುತ್ತಾರೆ? ಇದರ ಪರಿಹಾರ ಮೊತ್ತ ಎಷ್ಟು ಎಂಬುದರ ಕುರಿತು ಗ್ರಾಮಸ್ಥರಿಗೆ ಸ್ಪಷ್ಟ ಮಾಹಿತಿ ದೊರೆಯದೆ ಆತಂಕದಲ್ಲಿದ್ದಾರೆ.

ಉದ್ದೇಶಿತ ಡ್ಯಾಂ ನಿರ್ಮಾಣದಿಂದ ಕೊರಟಗೆರೆ ತಾಲೂಕಿನ ಬೈರಗೊಂಡ್ಲು, ಭೂಚನಹಳ್ಳಿ, ಗೊಲ್ಲರಹಟ್ಟಿ, ಬೀರಸಾಗರ, ಗೆದ್ದೆಗೇನಳ್ಳಿ, ಲಕ್ಕಮುತ್ತನಹಳ್ಳಿ ಸೆರಿದಂತೆ 7 ಹಳ್ಳಿಗಳು ಪೂರ್ಣ ಮುಳುಗಡೆಯಾದರೆ, ಕಾಟೇನಹಳ್ಳಿ, ಪುರದಹಳ್ಳಿ, ವಡೇರಹಳ್ಳಿ, ಬೆಲ್ಲದಹಳ್ಳಿ ಭಾಗಶಃ ಮುಳುಗಡೆಯಾಗಲಿವೆ. ದೊಡ್ಡಬಳ್ಳಾಪುರ ತಾಲೂಕಿನ 2 ಹಳ್ಳಿಗಳು ಮುಳುಗಡೆಯಾದರೆ ಒಟ್ಟು 22 ಹಳ್ಳಿಗಳ ಜನರು ಡ್ಯಾಂ ನಿರ್ಮಾಣದಿಂದ ಬಾಧಿತರಾಗುತ್ತಾರೆ. ಅವರಿಗೆ ಮುಂದಿನ ದಾರಿ, ವಸತಿ, ಭೂಮಿ, ಪರಿಹಾರ ಯಾವುದರ ಬಗ್ಗೆಯೂ ಸರ್ಕಾರ ಚಕಾರ ಎತ್ತಿಲ್ಲ.

ಡ್ಯಾಂ ಸಂಬಂಧ ನೋಟಿಫಿಕೇಷನ್ ಹೊರಡಿಸಿಲ್ಲ. ಭೂಸ್ವಾಧೀನದ ಪ್ರಕ್ರಿಯೆಯೇ ಆರಂಭವಾಗಿಲ್ಲ. ಯೋಜನೆಯ ಅನುಮೋದನೆ ಮಾತ್ರ ಆಗಿದೆ. ಡ್ಯಾಂ ನಿರ್ಮಾಣದ ಕುರಿತು ಮಾಹಿತಿ ನೀಡದೇ ಇರುವುದು ಸ್ಥಳೀಯ ವಿರೋಧಕ್ಕೆ ಪ್ರಮುಖ ಕಾರಣವಾಗಿದೆ. ಡ್ಯಾಂ ನಿರ್ಮಾಣ ಪ್ರದೇಶದಲ್ಲಿ ಭೂಮಿ ಫಲವತ್ತಾಗಿದೆ. ಎಲ್ಲಿ ನೋಡಿದರೂ ಹಸಿರಿನಿಂದ ಕೂಡಿದೆ. ಸಾವಿರಾರು ತೋಟಗಳನ್ನು ಮಾಡಿಕೊಂಡು ಜನ ಒಂದಷ್ಟು ಲಾಭ ಗಳಿಸುತ್ತಿದ್ದಾರೆ. ಅಡಿಕೆ, ತೆಂಗಿನ ತೋಟಗಳು ನಳನಳಿಸುತ್ತಿವೆ. ಇಲ್ಲಿ ನೀರಿಗೂ ಬರವಿಲ್ಲ. 500 ಅಡಿ ಬೋರ್‍ವೆಲ್ ಕೊರೆದರೆ ಸಾಕು ನೀರು ಸಿಗುತ್ತದೆ. ಈ ಭಾಗದಲ್ಲಿ ಯಾವುದೇ ನದಿ, ಕೆರೆಗಳು ಇಲ್ಲ, ಹಾಗಿದ್ದರೂ ಬೆಳೆಗಳು ಹಚ್ಚಹಸುರಿನಿಂದ ಕೂಡಿವೆ. ಇಂಥ ಭೂಮಿಗೆ ಸರ್ಕಾರ ಕಣ್ಣು ಹಾಕಲು ಕಾರಣವೇನು ಎಂಬುದು ಚಿದಂಬರ ರಹಸ್ಯವಾಗಿದೆ.

ನಮಗೆ ಟೆಂಡರ್ ಆಗಿರುವುದು ಗೊತ್ತಿಲ್ಲ. ಕಾಮಗಾರಿ ಗುತ್ತಿಗೆ ಪಡೆದಿರುವವರು ಗ್ರಾಮಗಳಲ್ಲಿ ಬ್ರೋಕರ್‍ಗಳನ್ನು ಬಿಟ್ಟು ರೈತರಿಗೆ 10-20 ಸಾವಿರ ರೂಪಾಯಿ ನೀಡಿ ಅವರ ಭೂಮಿಯಲ್ಲಿ ನಾಲೆ ತೋಡುತ್ತಿದ್ದಾರೆ. ಸರ್ಕಾರ ಭೂಸ್ವಾಧೀನದ ಬಗ್ಗೆ ಇದುವರೆಗೂ ಜಾಹಿರಾತು ನೀಡಿಲ್ಲ. ಅಧಿಸೂಚನೆ ಹೊರಡಿಸಿಲ್ಲ. ಇಲ್ಲಿ ಡ್ಯಾಂ ನಿರ್ಮಿಸುತ್ತೇವೆ, ಇಂತಿಂಥವರ ಭೂಮಿಯಲ್ಲಿ ನಾಲೆ ಹಾದುಹೋಗುತ್ತದೆ, ಇಂತಿಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ, ಇಷ್ಟು ಪರಿಹಾರ ನೀಡುತ್ತೇವೆ ಎಂಬ ಮಾಹಿತಿ ನೀಡುತ್ತಿಲ್ಲ. ಬದಲಾಗಿ ಬ್ರೋಕರ್‍ಗಳು ಜಮೀನು ಮಾಲಿಕರಿಗೆ ಕುಡಿಸಿ, ಒಂದಿಷ್ಟು ಹಣವನ್ನು ಕೈಗಿಟ್ಟು, ನಿಮ್ಮ ಹೊಲದಲ್ಲಿ ನಾಲೆ ತೋಡುತ್ತೇವೆ. ಐದು ಅಡಿ ಆಳಕ್ಕೆ ತೋಡಿ ಆಮೇಲೆ ಮುಚ್ಚುತ್ತೇವೆ. ನೀವು ನಿಮ್ಮ ಜಮೀನಿನಲ್ಲಿ ಎಂದಿನಂತೆ ಬೆಳೆ ಬೆಳೆದುಕೊಳ್ಳಬಹುದು ಎಂದು ಹೇಳುತ್ತಿದ್ದಾರೆ. ಇದು ನಮಗೂ ಅರ್ಥ ಆಗುತ್ತಿಲ್ಲ. ಮುಳುಗಡೆ ಜಾಗದಲ್ಲಿ ಚಾನಲ್ ಮಾಡಲು ಬಿಟ್ಟಿಲ್ಲ. ಅವರೂ ಬಂದಿಲ್ಲ ಎನ್ನುತ್ತಾರೆ ಎತ್ತಿನಹೊಳೆ ಯೋಜನೆಯ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಚಿಕ್ಕತಿಮ್ಮಯ್ಯ.

ಭೂಸ್ವಾಧೀನದ ಪರಿಹಾರ ಹಣ ನೀಡುವಲ್ಲಿ ತಾರತಮ್ಯ ಮಾಡುತ್ತಿರುವುದು ಕೂಡ ಗ್ರಾಮಗಳನ್ನು ಕಳೆದುಕೊಳ್ಳುತ್ತಿರುವ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೊರಟಗೆರೆ ತಾಲೂಕು ಬೆಲ್ಲದಹಳ್ಳಿ ಗ್ರಾಮದ ವ್ಯಾಪ್ತಿಯ ಜಮೀನುಗಳಿಗೆ ಒಂದು ಎಕರೆ ತೋಟ ಇರುವ ಭೂಮಿಗೆ ಬರೀ ಮೂರು ಲಕ್ಷ ರೂ ಕೊಟ್ಟರೆ, ಅದೇ ದೊಡ್ಡಬಳ್ಳಾಪುರ ತಾಲೂಕಿಗೆ ಸೇರಿದ ತೋಟದ ಭೂಮಿಗೆ ಎಂಟು ಲಕ್ಷ ಕೊಡುತ್ತಿದ್ದಾರೆ. ಅಕ್ಕಪಕ್ಕದ ಜಮೀನುಗಳಿಗೆ ಪರಿಹಾರ ನೀಡುವುದರಲ್ಲಿ ತಾರತಮ್ಯ ಮಾಡಿರುವುದು ಎದ್ದು ಕಾಣುತ್ತದೆ ಎಂಬ ಆರೋಪಗಳು ಕೇಳಿಬಂದಿವೆ.

ಡ್ಯಾಂ ಏರಿ ಐದು ಕಿಲೋಮೀಟರ್ ಉದ್ದವಿರಲಿದೆ. ಮೂರು ಹಳ್ಳಿಗಳನ್ನು ಏರಿ ನುಂಗಲಿದೆ.  ಇಷ್ಟೋಂದು ಹಳ್ಳಿಗಳು ಮುಳುಗಡೆಯಾಗುವ ಸೂಚನೆಯಿದ್ದರೂ ಸರ್ಕಾರ ಮನೆ, ಭೂಮಿ, ಬದುಕು ಹೀಗೆ ಎಲ್ಲವನ್ನೂ ಕಳೆದುಕೊಳ್ಳುವ ಜನರಿಗೆ ಪರ್ಯಾಯ ವ್ಯವಸ್ಥೆ ಏನು ಮಾಡಿದೆ ಎಂದು ಕೇಳಿಕೊಂಡರೆ ಉತ್ತರ ಯಾರಿಗೂ ಗೊತ್ತಿಲ್ಲ. ಈಗಾಗಲೇ ಯೋಜನೆಯ ನಿರಾಶ್ರಿತರಾದವರಿಗೆ ಬೇರೆ ಕಡೆಗಳಲ್ಲಿ ಇದುವರೆಗೂ ಪರ್ಯಾಯ ವ್ಯವಸ್ಥೆಯನ್ನು ರೂಪಿಸಿಲ್ಲ. ಅವರಿಗೆ ಬಂದಂತಹ ಪರಿಸ್ಥಿತಿ ತುಮಕೂರು ಜನರಿಗೂ ಬಾರದೇ ಇರಲಿ ಎಂಬುದು ನಮ್ಮ ಆಶಯ.
ಸಿದ್ದಯ್ಯ ಕೆ.ಈ

ಈ ಮೊದಲು ಕಾಟೇನಹಳ್ಳಿ, ಬರಗೂರು ಸಮೀಪ ಡ್ಯಾಂ ನಿರ್ಮಾಣಕ್ಕೆ ಜಾಗ ಗುರುತಿಸಿತ್ತು. ಈ ಪ್ರದೇಶದಲ್ಲಿ ಎರಡೂ ಕಡೆ ಎತ್ತರದ ಗುಡ್ಡಗಳಿದ್ದು ನಡುವೆ ತಗ್ಗು ಪ್ರದೇಶವಿದೆ. ಈ ಎರಡು ಗುಡ್ಡಗಳಿಗೆ ಒಂದು ಕಿಲೋಮೀಟರ್ ಏರಿ ನಿರ್ಮಾಣ ಮಾಡಿದ್ದರೆ ಎತ್ತಿನಹೊಳೆಯಿಂದ ತರುವ ಎಲ್ಲ ನೀರನ್ನು ತುಂಬಿಸುವ ಸಾಧ್ಯತೆ ಇತ್ತು. ಇಲ್ಲಿ ಕಣಿವೆ ಇದ್ದಂತೆ ಇರುವುದರಿಂದ ನೀರು ನಿಲ್ಲಲು ಅನುಕೂಲವಾಗುತ್ತಿತ್ತು. ಆದರೆ ಸರ್ಕಾರ ವೈಜ್ಞಾನಿಕ ದೃಷ್ಟಿಕೋನದಿಂದ ಡ್ಯಾಂ ನಿರ್ಮಾಣಕ್ಕೆ ಮುಂದಾಗಿಲ್ಲ. ದುಡ್ಡು ಲೂಟಿ ಮಾಡುವ ಉದ್ದೇಶದಿಂದ ಡ್ಯಾಂ ನಿರ್ಮಾಣಕ್ಕೆ ತಯಾರಿ ನಡೆಯುತ್ತಿದೆ. ಬರಗೂರು-ಕಾಟೇನಹಳ್ಳಿ ವ್ಯಾಪ್ತಿಯಲ್ಲಿ ಡ್ಯಾಂ ನಿರ್ಮಿಸಿದ್ದರೆ ನೂರಾರು ಕೆರೆಗಳಿಗೆ ನೀರು ಕೊಡಲು ಅನುಕೂಲವಾಗುತ್ತಿತ್ತು. ಆದರೆ ಸರ್ಕಾರ ಬೇರೇನೋ ಉದ್ದೇಶವಿಟ್ಟುಕೊಂಡಿದೆ. ಇದು ನಿಲ್ಲಬೇಕು ಎಂಬುದು ಈ ಭಾಗದ ಜನರ ಅಭಿಮತ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...