Homeಅಂಕಣಗಳುಹುಟ್ಟು ಬೈಗುಳವಾದಾಗ..

ಹುಟ್ಟು ಬೈಗುಳವಾದಾಗ..

- Advertisement -
- Advertisement -

ಭಾರತದ ಚುನಾವಣೆಗಳು ದೇಶದಲ್ಲಿ ವಿಚಿತ್ರವಾದ ಯುದ್ಧಗ್ರಸ್ತ ಅವಸ್ಥೆಯನ್ನು ಸೃಷ್ಟಿಸುತ್ತವೆ. ಬೀದಿಗಳೇ ರಂಗಭೂಮಿಯಾಗಿ ಜನ ಪ್ರೇಕ್ಷಕರಾಗಿ ರಾಜಕಾರಣಿಗಳು ನಟರಾಗುತ್ತಾರೆ; ಎದುರಾಳಿಯ `ದಹನ’ `ವಧೆ’ಗಳೂ ಸ್ವಂತದ `ವಿಜಯ’ `ಕಲ್ಯಾಣ’ಗಳೂ ಜಗ್ಗಿ ಜರುಗುತ್ತವೆ; ವ್ಯಂಗ್ಯ ವಿಡಂಬನೆ ಆಕ್ರೋಶ ದುಃಖದ ಭಾವಗಳು ಎಗ್ಗಿಲ್ಲದೆ ಪ್ರಕಟವಾಗುತ್ತವೆ. ಎದುರಾಳಿಯ ಭಂಜನಕ್ಕೆ ತೀಕ್ಷ್ಣ ಭಾಷೆ ಬಳಕೆಯಾಗುತ್ತದೆ. ನಾಲಗೆ ಹದ್ದು ಮೀರುತ್ತದೆ. ಈ ರಾಜಕೀಯ ಸಂಕಥನದಲ್ಲಿ ಬಳಕೆಯಾಗುವ ಭಾಷೆ ಮತ್ತು ನುಡಿಗಟ್ಟುಗಳಲ್ಲಿ, ಕೆಲವು ವ್ಯಕ್ತಿಗಳ ವೈಯಕ್ತಿಕ ಗುಣಸ್ವಭಾವಕ್ಕೆ ಸಂಬಂಧಿಸಿದವು-ನಿದ್ದೆಬಡುಕ, ಲೋಲುಪ, ಸೋಮಾರಿ, ದುರಹಂಕಾರಿ, ಹೇಡಿ ಇತ್ಯಾದಿ; ಕೆಲವು ದೇಶ ಧರ್ಮ ಸಂಸ್ಕೃತಿಗೆ ಬಗೆದ `ದ್ರೋಹ’ದ ಆಧಾರದಲ್ಲಿ ಟಂಕಿಸುತ್ತವೆ; ಇವುಗಳಲ್ಲೆಲ್ಲ ಹುಟ್ಟಿಗೆ ಸಂಬಂಧಿಸಿದ ನಿಂದೆಗಳು ಸ್ವಾರಸ್ಯಕರ.

ಹುಟ್ಟಿನ ನಿಂದೆಗಳು ಸಾಮಾನ್ಯವಾಗಿ ಎದುರಾಳಿಯನ್ನು ರಾಜಕೀಯವಾಗಿ ಸೈದ್ಧಾಂತಿಕವಾಗಿ ಎದುರಿಸುವ ಅಡ್ಡಹಾದಿಯಲ್ಲಿ ಸೃಷ್ಟಿಯಾಗುತ್ತವೆ. ವ್ಯಕ್ತಿಗೆ ವೇಶ್ಯೆಗೆ ಅಥವಾ ವಿಟರಿಗೆ ಹುಟ್ಟಿದವನು ಎನ್ನುವಾಗ ಅದು ಸಿಟ್ಟನ್ನು ಹೊರಹಾಕಲು ತಕ್ಷಣ ಸಿಕ್ಕ ಬೈಗುಳವಾಗಿರುತ್ತದೆ, ನಿಜ. ಆದರೆ ಅದು ಕೇವಲ ನಾಲಿಗೆ ಆಕಸ್ಮಿಕವಾಗಿ ಜಾರಿದ ಗಳಿಗೆಯ ಪರಿಣಾಮವಲ್ಲ. ಅದರ ಹಿಂದೆ ನಿರ್ದಿಷ್ಟ ಆಲೋಚನಾಕ್ರಮವೂ ಇರುತ್ತದೆ. ಮುಖ್ಯವಾಗಿ ಮಹಿಳೆಯರ ದಲಿತರ ಮುಸ್ಲಿಮರ; ಪ್ರಾಣಿ, ರಾಕ್ಷಸ ದೆವ್ವಗಳ ಉಲ್ಲೇಖವಿರುವ ನಿಂದಾವಾಚಕಗಳ ಹಿಂದೆ ಅಮಾನುಷ ಸಾಮಾಜಿಕ ಗ್ರಹಿಕೆಗಳಿವೆ.

ಬಲಪಂಥೀಯ ರಾಜಕೀಯ ಸಂಕಥನದಲ್ಲಿ ಮುಸ್ಲಿಮರನ್ನು ಟಿಪ್ಪು ಬಾಬರ್ ಔರಂಗಜೇಬ್ ಗಜನಿ ಘೋರಿಯರ ಸಂತಾನ ಎಂದೆಲ್ಲ ನಿಂದೆಗಳಿವೆ. ಚರಿತ್ರೆಯು ವರ್ತಮಾನದಲ್ಲಿ ಬೈಗುಳವಾಗಿ ಪರಿವರ್ತಿತವಾಗುವ ಈ ಬಗೆಯೇ ವಿಚಿತ್ರ. ಜನರನ್ನು ಮಧ್ಯಕಾಲೀನ ಆಳರಸರ ಸಂತಾನ ಎನ್ನುವವರಿಗೆ, ಅವರು ಧರ್ಮ ಪರಿವರ್ತನೆ ಮಾಡಿಕೊಂಡ ಬಗ್ಗೆ ಸಿಟ್ಟಿರುತ್ತದೆ; ಬಾಬರಿ ಮಸೀದಿ ಕೆಡವಿದ್ದು ಅಥವಾ ಔರಂಗಜೇಬ್ ಹೆಸರಿನ ರಸ್ತೆಯ ಹೆಸರು ಬದಲಾವಣೆ ಮಾಡಿದ್ದು ಚಾರಿತ್ರಿಕ ಕುರುಹು ಅಳಿಸುವ ಕೆಲಸವೆಂದು ತಾತ್ವಿಕವಾಗಿ ವಾದಿಸುವರಿಗೂ, `ಬಾಬರ್ ಕಿ ಔಲಾದ್’ ಎಂದು ಝಂಕಿಸಲಾಯಿತು. ಇಲ್ಲಿ ವ್ಯಕ್ತಿಗಳ ವಿಚಾರಕ್ಕೂ ಅವರ ಹುಟ್ಟಿನ ಧರ್ಮಕ್ಕೂ ಸಂಬಂಧ ಕಲ್ಪಿಸುವಿಕೆಯಿದೆ. ತಮ್ಮ ಧರ್ಮಕ್ಕೆ ಸೇರಿದವರು ಚರಿತ್ರೆಯಲ್ಲಿ ಮಾಡಿದ ಕೃತ್ಯಗಳ ಅವರು ಭಾರ ಹೊರಬೇಕು ಎಂಬ ಒತ್ತಾಸೆಯಿದೆ.

ಈ ಒತ್ತಾಸೆಯು, ಮುಸ್ಲಿಮರ ಅಥವಾ ಕ್ರೈಸ್ತರ ಪರವಾಗಿ ರಾಜಕೀಯ ತೀರ್ಮಾನ ತೆಗೆದುಕೊಳ್ಳುವ ರಾಜಕಾರಣಿಗಳಿಗೆ ಆಯಾ ಧರ್ಮದ ನಾಮಕರಣ ಮಾಡಿ ಗೇಲಿಗೊಳಿಸುವ ಪದ್ಧತಿಯಾಗಿ ವಿಸ್ತರಣೆ ಪಡೆಯುತ್ತದೆ. ಕೋಮುವಾದ ಮೂಲಭೂತವಾದವನ್ನು ಸೈದ್ಧಾಂತಿಕವಾಗಿ ವಿಮರ್ಶಿಸುವ ಚಿಂತಕರ ಮೇಲೆ ಇದು ಹಾಯುತ್ತದೆ. ವಿಶೇಷವಾಗಿ ಈ ನಿಂದೆಯೊಳಗೆ ಸಾಮಾನ್ಯ ಜನರೂ ಬರುವುದು. ಕರಾವಳಿಯಲ್ಲಿ ಬಿಜೆಪಿಯನ್ನು ಬೆಂಬಲಿಸದವರಿಗೆ `ನೀನು ಯಾರಿಗೆ ಹುಟ್ಟಿದ್ದು, ಬ್ಯಾರಿಗಾ?’ ಎಂಬ ಪ್ರಶ್ನೆಯನ್ನು ಕೇಳಿರುವುದುಂಟು. ಕಳೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಒಬ್ಬ ರಾಜಕಾರಣಿ ಜನರಿಗೆ `ನಿಮ್ಮ ಮತ ರಾಮಜಾದಾಗಳಿಗೊ ಹರಾಮಜಾದಾಗಳಿಗೊ?’ ಎಂದು ಪ್ರಶ್ನಿಸಿದರು. `ಜ’ ಜನ್ಮವನ್ನು ಸೂಚಿಸುವ ಕ್ರಿಯಾರೂಪ. ರಾಮಜಾದಾ ಎಂದರೆ ರಾಮನ ಮಕ್ಕಳು; ಹರಾಮಜಾದ ಎಂದರೆ ಹಾದರಕ್ಕೆ ಹುಟ್ಟಿದವರು. ಸೆಕ್ಯುಲರಿಸಂ ಪರವಾಗಿ ವಾದಿಸುವವರು ಅಪ್ಪ ಅಪ್ಪ ಇಲ್ಲದವರು ಎಂದು ಸಂಸದರೊಬ್ಬರು ಹೇಳುವಲ್ಲೂ ಇದೇ ದನಿ.

ಈ ಬೈಗುಳಗಳು, ನಾವು ನಂಬಿದ ಸಿದ್ಧಾಂತ ಪಕ್ಷ ದೈವ ನಾಯಕತ್ವಗಳನ್ನು ಒಪ್ಪದವರೆಲ್ಲ ಪರಕೀಯರು. ಅವರು ಹೀಗೆ ವಿರುದ್ಧವಾಗಲು ಕಾರಣ, ಅವರ ಹುಟ್ಟಿನ ಹಿನ್ನೆಲೆಯಲ್ಲಿ ಅನ್ಯಧರ್ಮದವರ ಅಂಶವಿದೆ ಎಂಬ ಅರ್ಥಕೊಡುತ್ತವೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಪರವಾಗಿ ಹೋರಾಡುವ ಮಾನವ ಹಕ್ಕು ಹೋರಾಟಗಾರರಿಗೂ ಇಂತಹುದೇ ನುಡಿಗಟ್ಟಲ್ಲಿ ನಿಂದಿಸಲಾಗಿದೆ. ಹುಟ್ಟಿನ ಅಂಶವು ಸಹಜವಾಗಿ ಜನರಲ್ಲಿ ಅಪಮಾನಜನಕ ರೋಷ ಬರಿಸುತ್ತದೆ. ಇಂತಹ ನಿಂದೆಗಳು ಪರೋಕ್ಷವಾಗಿ ತಾಯ ಶೀಲವನ್ನು ಕಟಕಟೆಗೆ ನಿಲ್ಲಿಸುತ್ತವೆ. ರಾಜಕೀಯ ನಂಬಿಕೆ ವೈಚಾರಿಕ ಗ್ರಹಿಕೆಗಳಿಗೂ ನಿರ್ದಿಷ್ಟ ಧರ್ಮದ ವ್ಯಕ್ತಿಯಿಂದ ಹುಟ್ಟುವುದಕ್ಕೂ ಸಂಬಂಧವಿದೆ ಎಂದು ಭಾವಿಸುತ್ತವೆ. ಈ ಬೈಗುಳಗಳ ಉದ್ದೇಶ ಮನಸ್ಸನ್ನು ನೋಯಿಸುವುದು ಮಾತ್ರವಲ್ಲ; ವ್ಯಕ್ತಿ, ಸಮುದಾಯ ಹಾಗೂ ವಿಚಾರಧಾರೆಗಳನ್ನು ಪರಕೀಯಗೊಳಿಸುವುದು; ದುರುಳೀಕರಿಸುವುದು; ಚರಿತ್ರೆಯ ದೋಷಕ್ಕೆ ಹೊಣೆಹೊರಿಸುವುದು; ಆಕ್ರಮಣಕ್ಕೆ ಬೇಕಾದ ನ್ಯಾಯಬದ್ಧತೆ ಪಡೆಯುವುದು.

ಹುಟ್ಟಿನ ಬೈಗುಳಗಳು ಸೈದ್ಧಾಂತಿಕ ಎದುರಾಳಿಗಳನ್ನೂ ಗುರಿ ಮಾಡುತ್ತವೆ. ಕಮ್ಯುನಿಸ್ಟರನ್ನು ಮಾರ್ಕ್ಸ್ ಲೆನಿನ್ ಮಾವೊ ಸಂತಾನ ಎನ್ನುವುದು; ಬಲಪಂಥೀಯರನ್ನು ಹಿಟ್ಲರ್ ಗೋಡ್ಸೆಯ ಸಂತಾನವೆನ್ನುವುದು ಇದಕ್ಕೆ ನಿದರ್ಶನ. ಇವು ನಿರ್ದಿಷ್ಟ ಸಿದ್ಧಾಂತವನ್ನು ಪರಕೀಯ, ವಿದೇಶಿ, ನಮ್ಮ ಧರ್ಮಕ್ಕೆ ನೆಲಕ್ಕೆ ಅದಕ್ಕೆ ಸಂಬಂಧಿಸಿದವರು ಬಾಹಿರರು ಎಂದು ವ್ಯಾಖ್ಯಾನಿಸುತ್ತವೆ. ಪಾಶ್ಚಿಮಾತ್ಯ ಚಿಂತನೆಯನ್ನು ಕುರುಡಾಗಿ ಒಪ್ಪಿಕೊಂಡವರನ್ನು ಟೀಕಿಸಲು ವಸಾಹತೋತ್ತರ ಚಿಂತಕರು ಮೆಕಾಲೆಯ ಮಕ್ಕಳು ಎಂಬ ಶಬ್ದ ಬಳಸಿದರು. ಭಾರತೀಯರಿಗೆ ಆಂಗ್ಲಶಿಕ್ಷಣ ಕೊಟ್ಟರೆ ಅವರು ಆಲೋಚನೆಯಲ್ಲಿ ಬ್ರಿಟಿಷರಾಗುತ್ತಾರೆ ಎಂದು ಲಾರ್ಡಮೆಕಾಲೆ ಸರ್ಕಾರಕ್ಕೆ ಸಲ್ಲಿಸಿದ ಟಿಪ್ಪಣಿ ಈ ನುಡಿಗಟ್ಟಿಗೆ ಮೂಲ. ಇದನ್ನು ಕಮ್ಯುನಿಸ್ಟ್ ಚಿಂತಕರನ್ನು ಗೇಲಿಮಾಡಲು ಭಾರತೀಯ ಸಂಸ್ಕ್ಕೃೃತಿಯ ವಾರಸಿಕೆ ಹೊತ್ತವರು ಬಳಸುವುದುಂಟು. ವ್ಯಂಗ್ಯವೆಂದರೆ, ಅವರಿಗೆ ತಾವು ಅನುಸರಿಸುವ ಸಿದ್ಧಾಂತವೂ ಇಟಲಿ ಜರ್ಮನಿಯ ರಾಷ್ಟ್ರವಾದಗಳಿಂದ ಬಂದಿದ್ದು ಎನ್ನುವುದು ಮರೆತುಹೋಗುವುದು.

ರಾಜಕೀಯ ಸಂಕಥನದಲ್ಲಿ ನಿಂದಾತ್ಮಕವಲ್ಲದ ಪರಿಭಾಷೆಯೂ ಬಳಕೆಯಾಗುತ್ತದೆ. ಮೋದಿಯವರು ರಾಹುಲ್ ಗಾಂಧಿಯವರನ್ನು ವ್ಯಂಗ್ಯಮಾಡಲು ಶೆಹಜಾದಾ (ಶಾಹ-ದೊರೆಗೆ, ಜ-ಹುಟ್ಟಿದವನು) ಎಂದು ಬಳಸುವರು. ಅಲ್ಲಿನ ಉದ್ದೇಶ ತಾನು ಬೀದಿಯಲ್ಲಿ ಚಹ ಮಾರುತ್ತ ನೆಲಮೂಲದಿಂದ ಬಂದವನು ಎಂದು ಹೇಳುವುದು; ಸಿರಿವಂತ ಕುಟುಂಬದಲ್ಲಿ ಹುಟ್ಟಿದವರಿಗೆ ದೇಶದ ಕಷ್ಟಗಳು ಗೊತ್ತಾಗುವುದಿಲ್ಲ ಎಂದು ಸೂಚಿಸುವುದು. ಆದರೆ ಚರಿತ್ರೆಯಲ್ಲಿ ತೃಣಮೂಲದಿಂದ ಬಂದವರು ವಿಲಾಸಿಗಳಾಗುವ, ಸಿರಿಯ ಗರ್ವದಿಂದ ಬಂದವರು ತಳಸ್ತರಕ್ಕೆ ಹೋಗುವ ಪಲ್ಲಟಗಳು ಸಂಭವಿಸಿವೆ.

ಹುಟ್ಟು ಅಪಮಾನ ದಮನ ಮಾಡಿರುವ ನೂರಾರು ನಿದರ್ಶನಗಳಿವೆ. ಮಹಾಭಾರತದ ಕರ್ಣ, ಏಕಲವ್ಯ, ರಾಮಾಯಣದ ಶಂಬೂಕ, ಉಪನಿಷತ್ತಿನ ಕವಷ ಇದನ್ನು ಉಂಡಿದ್ದಾರೆ. ಆದರೆ ಈ ಅಪಮಾನಿತರು ನೋವನ್ನೇ ಸವಾಲಾಗಿ ತೆಗೆದುಕೊಂಡು ಗೆಲುವನ್ನೂ ಸಾಧಿಸಿದರು. ಭಾರತದ ಎಷ್ಟೊ ತಾಯಂದಿರು ಮಕ್ಕಳಿಗೂ ತಮಗೂ ಆಗುವ ಅಪಮಾನವನ್ನು ಹಲ್ಲುಕಚ್ಚಿ ನುಂಗಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಸತ್ಯಕಾಮನ ತಾಯಿ ಜಾಬಾಲಿ ನೆನಪಾಗುತ್ತಾಳೆ. ಪಾಂಡವರು ನಿಯೋಗ ಜನಿತರಾದರೂ ಹುಟ್ಟಿನ ಹಿನ್ನೆಲೆಯಿಂದ ಅಪಮಾನಿತರಾಗುವುದಿಲ್ಲ. ಅದೊಂದು ಒಪ್ಪಿತ ಮೌಲ್ಯವಾಗಿತ್ತು. ಅವರ ಜೀವನಕಥೆ ದೇಶದ ಮಹಾಕಾವ್ಯವಾಯಿತು. ಅದರ ನಾಯಕರು ದೈವಗಳಾದರು. ಭಾರತಕ್ಕೆ ಈ ಹೆಸರು ಬರಲು ಕಾರಣನಾದ ಭರತನು, ಕೂಸಾಗಿ ಶಕುಂತಲೆಯ ಹೊಟ್ಟೆಯಲ್ಲಿರುವಾಗ, ಅವನ ಅಪ್ಪನೇ ಈ ಗರ್ಭಕ್ಕೆ ಕಾರಣ ನಾನಲ್ಲ ಎಂದು ತುಂಬಿದ ಸಭೆಯಲ್ಲಿ ಅಪಮಾನಿಸಿದ್ದನು.

ಸಮಾಜಗಳು ಗಂಡೆಜಮಾನಿಕೆಯ ಅವಸ್ಥೆಗೆ ದಾಟಿ, ವಿವಾಹದ ಚೌಕಟ್ಟಿನೊಳಗೆ ಹುಟ್ಟಿದ ವ್ಯಕ್ತಿಗೆ ಮಾತ್ರ ಮಾನ್ಯತೆ ಕೊಡುವುದನ್ನು ರೂಢಿಸಿಕೊಂಡವೊ, ಆಗ ಅದರಾಚೆ ಹುಟ್ಟಿದವರೆಲ್ಲ ಪ್ರಶ್ನಿತರಾದರು. ಅವರೂ ಅವರ ತಾಯಿಯೂ ಬೈಗುಳದ ಪರಿಭಾಷೆಯಾದರು. ಈ ಬೈಗುಳ ಬೀದಿಯ ಭಾಗವಾಯಿತು. ನಿಂದಾಭಾಷೆ ರಾಜಕೀಯ ಸಂಕಥನಕ್ಕೆ ಬರುವುದೇ ಬೀದಿಯಿಂದ. ಬೀದಿಯ ಚಿಂತನೆ ರಾಜಕಾರಣಕ್ಕೂ ರಾಜಕಾರಣದ ನುಡಿಗಟ್ಟು ಬೀದಿಗೂ ವಿನಿಮಯವಾಗುತ್ತದೆ.

ವ್ಯಕ್ತಿಯ ರಕ್ತದೊಳಗೆ ಹುಟ್ಟಿನ ಸ್ಮತಿಗಳಿರುತ್ತವೆ ಎನ್ನುವುದು ವಿಚಿತ್ರ ಕಲ್ಪನೆ. ಜೈವಿಕವಾಗಿ ಹೇಳುವುದಾದರೆ, ಭಾರತದ ಮುಸ್ಲಿಮರು ಮೂಲದಲ್ಲಿ ಈ ದೇಶದ ಎಲ್ಲ ಜಾತಿಗಳಿಗೂ ಸೇರಿದವರಾಗಿದ್ದು ಹೊಸ ಧರ್ಮ ಬಂದಾಗ ನಾನಾಕಾರಣದಿಂದ ಸ್ವೀಕರಿಸಿದವರು. ಕಾಶ್ಮೀರದಲ್ಲಿ ಬಂದೂಕು ಹಿಡಿದಿರುವ ಬಹಳಷ್ಟು ಜನ ಮೂಲದಲ್ಲಿ ಬ್ರಾಹ್ಮಣರು; ಅವರ ಹೆಸರಲ್ಲಿ ಈಗಲೂ ಭಟ್ ಎಂಬ ಕುಲನಾಮವಿದೆ; ಔರಂಗಜೇಬನ ದುಷ್ಟತನದಲ್ಲಿ ವಿದೇಶಿಗ ಬಾಬರನ ರಕ್ತವಿದೆ ಎನ್ನುವುದಾದರೆ, ಆತನ ಮುತ್ತಜ್ಜಿ ರಜಪೂತರವಳು. ಕೊಲೆ ಅತ್ಯಾಚಾರ ದೋಚುವಿಕೆಗಳೇ ಧರ್ಮವಾಗಿದ್ದ ರಾಜಪ್ರಭುತ್ವದ ಸೈನ್ಯವು, ನಿರಂತರ ಯುದ್ಧಗಳಿಗಾಗಿ ಸಾವಿರಾರು ವರ್ಷಗಳಿಂದ ಹರಿದಾಡಿರುವ ಎಲ್ಲ ದೇಶಗಳಲ್ಲಿ, ರಕ್ತಸಂಕರ ಜನಾಂಗಮಿಶ್ರಣ ಅವ್ಯಾಹತವಾಗಿ ಸಂಭವಿಸಿದೆ. ಮೂಲ ಹುಡುಕುತ್ತ ಹೋದರೆ ಜನಾಂಗಶುದ್ಧತೆಯ ಪ್ರಶ್ನೆ ಹಾಸ್ಯಾಸ್ಪದವೆನಿಸುತ್ತದೆ.

ನಿಜವಾದ ಹುಟ್ಟು ತಾತ್ವಿಕ ಇಲ್ಲವೇ ವೈಚಾರಿಕವಾದುದು. ರಾಜಪುತ್ರನಾಗಿ ಹುಟ್ಟಿದ ಸಿದ್ಧಾರ್ಥ ಬುದ್ಧನಾಗಿ ಮರುಹುಟ್ಟು ಪಡೆಯುತ್ತಾನೆ; ಮೇಲ್ಜಾತಿಯಿಂದ ಬಂದ ಸನಾತನಿ ಎಂದುಕೊಳ್ಳುತ್ತಿದ್ದ ಗಾಂಧಿ ಭಂಗಿಯಾಗಲು ಹಿಂಜರಿಯುವುದಿಲ್ಲ; ಜನಸಂಘದ ಪ್ರಥಮ ಅಧ್ಯಕ್ಷರಾಗಿ ಈಗಿನ ಬಿಜೆಪಿಗೆ ಬುನಾದಿ ಹಾಕಿದ ಎ.ಕೆ. ಸುಬ್ಬಯ್ಯ, ಹಿಂದುತ್ವದ ಪ್ರಬಲ ಟೀಕಾಕಾರರಾಗಿ ಮರುಹುಟ್ಟು ಪಡೆದರು; ಸಮಾಜವಾದಿ ಸೆಳೆತವಿದ್ದ ಅಡಿಗರು ಕಡೆಗೆ ಅದರ ವಿರುದ್ಧ ಗತಿಯಲ್ಲಿ ಚಲಿಸಿದರು. ಕುವೆಂಪು ಪ್ರಕಾರ ವಿಶ್ವಮಾನವರಾಗಿ ಜನಿಸುವ ಮಕ್ಕಳು, ಮತದ ಪ್ರಭಾವಕ್ಕೆ ಸಿಕ್ಕು ಅಲ್ಪಮಾನವರಾಗುವರು. ಅವರು ವಿಶ್ವಮಾನವರಾಗಲು ಇನ್ನೊಂದು ಹುಟ್ಟು ಪಡೆಯಬೇಕು. ಇದು ದ್ವಿಜವಲ್ಲ; ತ್ರಿಜದ ಕಲ್ಪನೆ. ನಮ್ಮ ವ್ಯಕ್ತಿತ್ವ ರೂಪುಗೊಳ್ಳುವುದು ಜೈವಿಕ ಹಿನ್ನೆಲೆಯಿಂದಲ್ಲ. ಯಾವ ವಿಚಾರಧಾರೆಯ ಜತೆ ಗುರುತಿಸಿಕೊಂಡು ಏನು ಮಾಡುತ್ತೇವೆ ಎಂಬುದರಿಂದ. ದ್ವಿಜನಾಗಿ ಹುಟ್ಟಿದ ಬಸವಣ್ಣ, ಶೋಷಕ ಬ್ರಾಹ್ಮಣವಾದದ ವಿರುದ್ಧ ಬಂಡೆದ್ದಾಗ, ಬಹುಶಃ ವಿರೋಧಿಗಳು ಅವನ ಹುಟ್ಟನ್ನು ಶಂಕಿಸಿ ಮಾತಾಡಿರಬೇಕು. ಎಂತಲೇ ಅವರಿಗೆ ಅವನು ದಿಟ್ಟತನದಿಂದ ಬೊಪ್ಪನು ನಮ್ಮ ಮಾದಾರ ಚೆನ್ನಯ್ಯ ಎಂದು ಹೇಳಿ ಬಾಯಿಮುಚ್ಚಿಸಿದನು. ತನ್ನನ್ನು ದಲಿತರ ಮಗನೆಂದು ಹೇಳಿಕೊಳ್ಳುವುದು ೧೨ನೇ ಶತಮಾನದಲ್ಲಿ ಸಣ್ಣಸಂಗತಿಯಲ್ಲ.

ಹುಟ್ಟಿನ ಹಿನ್ನೆಲೆಯನ್ನು ತಾತ್ವಿಕ ಸಮಸ್ಯೆಯಾಗಿ ಚಿತ್ರಿಸುವ ಕೃತಿಗಳಲ್ಲಿ ಭೈರಪ್ಪನವರ `ವಂಶವೃಕ್ಷ’ವೂ ಒಂದು. ಶೋತ್ರಿಗೆ ತಾನು ಯಾರಿಗೆ ಹುಟ್ಟಿದವನು ಎಂಬುದು ಜೀವನ್ಮರಣದ ಪ್ರಶ್ನೆಯಾಗಿ ಕಾಡುತ್ತದೆ. ಆತ ನರಳಿಕೆಯಿಂದ ಹೊರಬರುವುದಿಲ್ಲ. ಆದರೆ ಟಾಗೂರರ `ಗೋರಾ’ನ ಕತೆಯೇ ಬೇರೆ. ಸನಾತನ ಧರ್ಮದ ಉದ್ಧಾರ ಮೂಲಕ ದೇಶಕಟ್ಟಲೆಂದು ಹೊರಡುವ ಆತನಿಗೆ, ತಾನು ಹುಟ್ಟಿದ್ದು ಬಿಳಿಯ ತಂದೆತಾಯಿಗಳಿಗೆ ಎಂದು ಅರಿವಾಗುತ್ತದೆ. ಈ ಆಘಾತಕಾರ ಅರಿವು ಅವನನ್ನು ನಮ್ರ ಮನುಷ್ಯನನ್ನಾಗಿಸುತ್ತದೆ. ಗಂಡುಹೆಣ್ಣಿನ ಜೈವಿಕ ಮಿಲನದಿಂದ ಹುಟ್ಟುವ ಜೀವವನ್ನು ಮನುಷ್ಯರಾಗಿಸುವುದು ದೇಹದೊಳಗೆ ಹರಿವ ರಕ್ತವಲ್ಲ. ತತ್ವವಿಚಾರ; ಅದು ಯಾವತ್ತೂ ಎಷ್ಟೊ ದೇಶ ಕಾಲ ಜನಾಂಗ ಸಂಸ್ಕೃತಿಗಳ ಕೂಡು ಫಲವೇ ಆಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...