Homeಚಳವಳಿಬದುಕಿದ್ದರೆ ಗೌರಿ ಮೇಡಂ ಹೀಗನ್ನುತ್ತಿದ್ದರೇನೋ..

ಬದುಕಿದ್ದರೆ ಗೌರಿ ಮೇಡಂ ಹೀಗನ್ನುತ್ತಿದ್ದರೇನೋ..

ಸಮಾಜದ ಕಟ್ಟಕಡೆಯ ಮನುಜರ ಬಗ್ಗೆ ಜೀವಪರವಾಗಿ ಮಿಡಿಯಲು ಹಿಂದು ಮುಂದು ನೋಡದ ಗೌರಿ ಎಂಬ ಜೀವ ಇಂದಿದ್ದರೆ ಅದೆಷ್ಟು ಪ್ರತಿರೋದ ಒಡ್ಡುತ್ತಿತ್ತು ಅಲ್ಲವೇ?

- Advertisement -
- Advertisement -

ಗೌರಿ ಮೇಡಂ ನಮ್ಮನ್ನಗಲಿ ಮೂರು ವರ್ಷಗಳಾದವು. ಅವರ ನೆನಪಿನ ಕಾವು ನಿಧಾನಕ್ಕೆ ಕರಗುತ್ತಿದೆ ಎನಿಸಿದರೂ ದಮನಕಾರಿ ನೀತಿಗಳು ಹಾಗೂ ತಾರಕ್ಕೇರಿರುವ ತಾರತಮ್ಯದ ಹೊಗೆ ಉಸಿರುಗಟ್ಟಿಸಿದಾಗಲೆಲ್ಲ ಅವರು ನೆನಪಾಗಲೇಬೇಕು. ಈ ಒಂದು ಕಾರಣಕ್ಕೆ ಮಾತ್ರ ಗೌರಿ ಮೇಡಂ ನೆನಪಾದರೆ ನಾವು ಸೋತಂತೆ. ಹಾಗೂ ‘ಸೋ ಕಾಲ್ಡ್’ ಮಾದ್ಯಮ ಭಾಷೆಯಾದ ‘ಸಹಜ ಸ್ಥಿತಿಗೆ’ ಮರಳಿದಂತೆಯೇ ಆಗುತ್ತದೆ. ಇಂತಹ ಕೃತಕ ಅಸಹಜ ಸ್ಥಿತಿಯಲ್ಲಿ ಜೀವಪರವಾದವರು ಸಹಜವಾಗಿರಲಾರರು ನಿಜ. ಆದರೆ ಮೌನವಾಗಿರುವವರ ಕತೆ ಏನು? ಗೌರಿ ಮೇಡಂ ಆ ರೀತಿಯ ದಿವ್ಯ ಮೌನಿಗಳ ಜೊತೆಗೂ ಗುದ್ದಾಡಿ ಬಾಯಿಬಿಡಿಸುತ್ತಿದ್ದವರು. ಆದರೆ ಈಗ ಅವರಿಗಾಗಿಯೇ ಬಾಯಿಬಿಡುವವರ ಸಂಖ್ಯೆ ಕಡಿಮೆಯಾಗಿಹೋಯಿತೇನೋ ಎಂಬ ವಿಷಾದ ಕಾಡದೇಇರದು.

ಹೀಗೆ ಯೋಚಿಸುತ್ತಿರುವಾಗ ಕೋವಿಡ್ ಸಮಯದಲ್ಲಿ ಗೌರಿ ಮೇಡಂ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ‘ಕಂಡಹಾಗೆ’ಯಲ್ಲಿ ಹೇಗೆಲ್ಲಾ ಕಣ್ಣು ಹಾಯಿಸುತ್ತಿದ್ದರು ಎಂಬುದನ್ನೊಮ್ಮೆ ಅವರ ದೈಹಿಕ ಅನುಪಸ್ಥಿತಿಯಲ್ಲಿ ಊಹಿಸಬಹುದೇನೋ.

ಗೌರಿ ಮೇಡಂ ಕಡೆಗಾಲದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಕ್ರಿಯಾಶೀಲರಾಗಿದ್ದರು. ಇದನ್ನು ಮನದಲ್ಲಿಟ್ಟುಕೊಂಡು ಕೋವಿಡ್-19 ವೈರಸ್ ಭಾರತವನ್ನು ಪ್ರವೇಶಿಸಿದ ತಿಂಗಳಲ್ಲಿ ಸೋಷಿಯಲ್ ಮೀಡಿಯಾದಲ್ಲೊಂದು ಸಂದೇಶ ಬಹಳ ಸದ್ದು ಮಾಡಿದ್ದನ್ನು ಗಮನಿಸಬಹುದು. ಅದರ ತಲೆಬರಹ ‘ಕೊರೊನಾ ಕಲಿಸಿದ ಪಾಠಗಳು’. ಪ್ರಕೃತಿಯ ಮುಂದೆ ಎಂತಹ ದೇಶವಿರಲಿ, ಪ್ರಬಲ ವ್ಯಕ್ತಿಯಿರಲಿ ಎಲ್ಲವೂ ಧೂಳಿಪಟವಾಗಬಲ್ಲದು ಎಂಬುದು ಅದರ ಒಟ್ಟಾರೆ ಅಭಿಪ್ರಾಯ. ಎಲ್ಲರೂ ಆ ಸಂದೇಶವನ್ನು ಎಷ್ಟು ಬೇಗ ಹಂಚಿಕೊಂಡರೋ ಅಷ್ಟೇ ಬೇಗ ಮರೆತೂಹೋದರು.

ಆದರೆ ಗೌರಿ ಮೇಡಂ ಇದ್ದಿದ್ದರೆ ಏನು ಮಾಡುತ್ತಿದ್ದರು? ಕೊರೊನಾ ವೈರಸ್ ವಕ್ಕರಿಸಿದ ನಂತರವೂ ಭಾರತೀಯರು ‘ಕಲಿಯದ ಬಹಳಷ್ಟು ಪಾಠಗಳಿವೆ’ ಎಂದಂದುಬಿಡುತ್ತಿದ್ದರೆ? ಮುಲಾಜೇ ಇಲ್ಲ, ಅಂದುಬಿಡುತ್ತಿದ್ದರು. ಮುಂದೆ ಒಂದೊಂದಾಗಿ ಪ್ರಶ್ನೆಗಳ ಮೂಲಕವೇ ಉತ್ತರ ಹುಡುಕಲು ಪ್ರೇರೇಪಿಸುತ್ತಿದ್ದರು. ಅಲ್ಲಲ್ಲಿ ಕೆಂಡವಾಗುತ್ತಿದ್ದರು. ಕೆಂಡವಾಗಿ ತಣ್ಣಗಾಗುತ್ತಿದ್ದರು. ಸುಮ್ಮನೆ ಅಂತಹ ಪ್ರಶ್ನೆಗಳನ್ನು ಊಹಿಸೋಣ.

‘ಈ ದೇಶದಿಂದ ಕೊರೊನಾ ಹೋದರೆ ಸಾಕಪ್ಪ’ ಎನ್ನುತ್ತಿರುವ ಸಂದರ್ಭದಲ್ಲಿ ಉತ್ತರಪ್ರದೇಶದಲ್ಲಿ ಹಾಗೂ ಕರ್ನಾಟಕದ ಸಿಂದಗಿಯಲ್ಲಿ ದಲಿತ ಯುವಕರಿಬ್ಬರನ್ನು ದೇವಸ್ಥಾನ ವಿಚಾರದಲ್ಲಿ ಹಿಂದೂ ಮೇಲ್ಜಾತಿ ಜನರು ಕೊಂದೇಬಿಟ್ಟಿದ್ದಾರೆ. ಪುಣೆಯಲ್ಲಿ ಹಿಂದೂ ಮೇಲ್ಜಾತಿ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನನ್ನು ಕೊಲೆಗೈಯ್ಯಲಾಗಿದೆ. ಕೊರೊನಾ ಸಮಯದಲ್ಲಿ ತಮಿಳುನಾಡು ಸೇರಿದಂತೆ ದೇಶದೆಲ್ಲೆಡೆ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಈಗ ಹೇಳಿ, ಈ ಜನಗಳಿಗೆ ಅತಿಯಾಗಿ ಬಾಧಿಸುತ್ತಿರುವುದು ಕೊರೊನಾ ವೈರಸ್ಸೇ ಅಥವಾ ಜಾತಿ ವೈರಸ್ಸೇ? ಎಂದು ಗೌರಿ ಮೇಡಂ ಖಂಡಿತವಾಗಿ ಕೇಳುತ್ತಿದ್ದರು.


ಇದನ್ನೂ ಓದಿ: 16 ನಿಮಿಷಕ್ಕೊಮ್ಮೆ ದಲಿತರ ವಿರುದ್ಧ ದೌರ್ಜನ್ಯ, ಪ್ರತಿನಿತ್ಯ 6 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ..


ಚೀನಾದಿಂದ ಭಾರತಕ್ಕೆ ಕೊರೊನಾ ಬಂದ ತಿಂಗಳಲ್ಲಿಯೇ ಹಲವು ಮಾಧ್ಯಮಗಳೂ ಸೇರಿದಂತೆ ಅದಕ್ಕೆ ಮುಸ್ಲಿಂ ಧರ್ಮ ಆರೋಪಿಸಿಬಿಟ್ಟರು. ಅಲ್ಲಿಯವರೆಗೆ ಚೀನಾ ದೇಶವನ್ನು ವಾಚಾಮಗೋಚರವಾಗಿ ಉಗುಳುತ್ತಿದ್ದ ಅದೇ ಬಾಯಿಗಳು ಇದ್ದಕ್ಕಿದ್ದಂತೆ ತಮ್ಮ ನಾಲಿಗೆಯನ್ನು ಭಾರತೀಯ ಮುಸ್ಲಿಂ ಬಾಂಧವರ ಮೇಲೆ ತಿರುಗಿಸಿಬಿಟ್ಟರು. ಈ ನಾಲಿಗೆಗೆ ಆಹಾರ ಒದಗಿಸಲು ಒಂದಷ್ಟು ಮಿದುಳುಗಳು ಹಳೆಯ ಯೂಟ್ಯೂಬ್ ವಿಡಿಯೋಗಳಿಗೆ ಸುಳ್ಳಿನ ಬಣ್ಣ ಬಳಿದು ಹಂಚಿಬಿಟ್ಟರು. ಇಂತಹ ವಿಡಿಯೋಗಳ ಸತ್ಯಾಸತ್ಯತೆ ಪರೀಕ್ಷಿಸದ ವಾಟ್ಸಾಪ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಹೆಚ್ಚೆಚ್ಚು ಫಾರ್ವರ್ಡ್ ಮಾಡಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದುಬಿಟ್ಟರು. ದಿನಬೆಳಗಾಗುವುದರೊಳಗೆ ಕೊರೊನಾವನ್ನು ಮುಸ್ಲಿಂ ಭಯೋತ್ಪಾದನೆಗೆ ತಳುಕು ಹಾಕಿ ಕೊರೊನಾಗೂ ಅಚ್ಚರಿಯನ್ನುಂಟು ಮಾಡಿದ್ದರು. ಅಲ್ಲಿಗೆ ಕೋಮುವಾದಿ ಆತ್ಮಗಳು ಶಾಂತವಾಗಿ ಹೋದವು. ಇದಕ್ಕೆ ಬಹುಶಃ, ‘ಭಾರತದ ಜಾತಿವಾದ ಮತ್ತು ಕೋಮುವಾದ ಹಿಂಸಾಚಾರವನ್ನು ನೋಡಿ ಕೊರೊನಾ ವೈರಸ್ ಕೂಡ ನಾಚಿ ದುರ್ಬಲ ಮ್ಯುಟೇಶನ್ನಿಗೆ ಒಳಗಾಗಿಬಿಡುತ್ತದೆ’ ಎಂದುಬಿಡುತ್ತಿದ್ದರೇನೋ ಗೌರಿ ಮೇಡಂ.

ಕೊರೊನಾ ಮ್ಯುಟೇಷನ್‌ನಿಂದಾಗಿ ತನ್ನ ರಚನೆಯನ್ನೇ ಬದಲಿಸಿಕೊಳ್ಳುತ್ತಿದೆ. ಹಾಗೆಯೇ ನಮ್ಮ ಮಾಧ್ಯಮಗಳು ಸಹ ಕೊರೊನಾದೊಂದಿಗೆ ಪ್ರಾಸ ಪದಗಳನ್ನೂ ಪೋಣಿಸಿ ಮ್ಯುಟೇಷನ್ ಮಾಡಿವೆ. ‘ಚೀನಾ ಕೊರೊನಾ’ದಿಂದ ಆರಂಭವಾಗಿ ಭಾರತಕ್ಕೆ ಬಂದೊಡನೆ ಅದು ‘ತಬ್ಲಿಗಿ ಕೊರೊನ’ವಾಗಿ, ಕರ್ನಾಟಕಕ್ಕೆ ಬಂದೊಡನೆ ಅದು ‘ನಂಜನಗೂಡಿನ ನಂಜಾಗಿ’, ‘ನರ್ಸ್ ನಂಜಾಗಿ’ ಕೊನೆಗೆ ಮಹಾರಾಷ್ಟ್ರದ ‘ಬಾಂಬೆ ಬಾಂಬ್’ಆಗಿ ಪರಿವರ್ತನೆಯಾಯಿತು. ಇದನ್ನು ಕಂಡು ‘ಟಿ.ಆರ್.ಪಿ’ ಭೂತಗಳೇ ಪ್ರಾಸಬದ್ಧ ಪದಪುಂಜಗಳಿಂದ ನಿಮ್ಮ ಹೊಟ್ಟೆಪಾಡು ಬಗೆಹರಿಯಿತೇ? ಎಂದಂದು ಬಿಡುತ್ತಿದ್ದರೇನೋ ಗೌರಿ ಮೇಡಂ.

ಮೊದಲ ಲಾಕ್‌ಡೌನ್ ಅವಧಿಯಲ್ಲಿ ದಿನ ಬೆಳಗಿನ ಸಮಯದಲ್ಲಿ ಅನೇಕರು ಚೀನಿಯರ ಪ್ರಮಾದವನ್ನು ಖಂಡಿಸುತ್ತಾ ಶಪಿಸುತ್ತಾ ಕೆಂಡಕಾರಿದರು. ಆದರೆ ಸಂಜೆಯಾಗುತ್ತಿದ್ದಂತೆ ‘ಕ್ವಾರಂಟೈನ್ ತಿಂಡಿ’ಯನ್ನಾಗಿ ಗೋಬಿಮಂಚೂರಿ, ಪಾನಿಪೂರಿ ಮಾಡಿಕೊಂಡು ತಿಂದರು. ಅದನ್ನು ತಿನ್ನುವ ಮುನ್ನ ತಮ್ಮ ‘ಚೀನಾ ಮೇಡ್’ ಶಿಯೋಮಿ, ಒಪ್ಪೊ, ಒನ್ ಪ್ಲಸ್ ಟಿ, ವಿವೋ ಮೋಬೈಲ್‌ಗಳಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿ ಖುಷಿಪಟ್ಟರು. ಇಂತಹ ಹೇಳುವುದಕ್ಕೂ ಮಾಡುವುದಕ್ಕೂ ತಾಳಮೇಳವಿಲ್ಲದ ಹೊಟ್ಟೆತುಂಬಿದ ಮನುಷ್ಯರ ಬಾಯಿಯಿಂದ ಪದೇಪದೇ ಹೊರಡುವ ಬೈಗುಳವೊಂದಿದೆ. ‘ಹೊಟ್ಟೆಗೇನ್ ತಿಂತಿಯಾ’ ಅಂತ. ಈ ಬೈಗುಳ ನೆನೆದಾಕ್ಷಣ ಲಾಕ್‌ಡೌನ್ ಸಮಯದಲ್ಲಿ ಬಡವನೊಬ್ಬ ರಸ್ತೆಯ ಮೇಲಿನ ನಾಯಿಯ ಕಳೇಬರವನ್ನು ಬಾಯಿಗೆ ಹಾಕಿಕೊಂಡಿದ್ದನು. ಇದನ್ನು ಕಂಡ ಗೌರಿ ಮೇಡಂ ಆತ ನಾಯಿ ಕಳೇಬರ ಬಾಯಿಗೆ ಹಾಕಿಕೊಂಡದ್ದು ತಿನ್ನಲಿಕ್ಕಲ್ಲ ಹೊಟ್ಟೆ ತುಂಬಿದವರ ಮುಖಕ್ಕೆ ಉಗಿಯಲಿಕ್ಕೆ ಎಂದಂದುಬಿಡುತ್ತಿದ್ದರು. ಮುಂದುವರೆದು ‘ಒಮ್ಮೆ ಮುಖ ಮುಟ್ಟಿ ನೋಡಿಕೊಳ್ಳಿ’ ಎನ್ನಲು ಮರೆಯುತ್ತಿರಲಿಲ್ಲವೇನೋ ಗೌರಿ ಮೇಡಂ.

ಅದೇ ಲಾಕ್‌ಡೌನ್ ಸಮಯದಲ್ಲಿ ಮಲಗಿದ್ದಲ್ಲೇ ರೈಲಿಗೆ ಬಲಿಯಾದವರನ್ನೂ ಕಂಡೆವು. ಮತ್ತದೇ ಮಾತುಗಳು. ‘ಯಾರಾದರು ರೈಲಿನ ಕೆಳಗೆ ಮಲಗ್ತಾರೇನ್ರಿ? ದಡ್ಡರು ಸಹ ಅಂತ ಕೆಲಸ ಮಾಡಲ್ಲ’. ಇಡೀ ದೇಶದವರ ಹೊಟ್ಟೆ ತುಂಬಿಸಲು ರೈಲಿನ ಬೋಗಿಗಳಿಗೆ ದಿನಸಿ ಮೂಟೆಗಳನ್ನು ತುಂಬುವ ಹಮಾಲಿಯೇ ಅಂದು ರೈಲಿನ ಹಳಿಗಳ ಮೇಲೆ ಮಲಗಿರಬಹುದಲ್ಲವೆ? ಹಾಗೆ ಸುಮ್ಮನೆ ಯೋಚಿಸಿ, ಹಳಿಗಳ ಮೇಲೆ ಮಲಗಿದ್ದವರ ಬಳಿ ಹೋಗಿ ‘ಕೊರೊನಾ ಸಮಯದಲ್ಲಿ ಯಾಕ್ರಪ್ಪಾ ಹೀಗೆ ರಾತ್ರೋ ರಾತ್ರಿ ಹೊರಟು ಮಲಗಿದ್ದೀರಿ?’ ಎಂದು ಪ್ರಶ್ನಿಸಿದೊಡನೆ ಅತ್ತ ಕಡೆಯಿಂದ ‘ಏ ರಟ್ಟೆ ತುಂಬ ಕೆಲ್ಸ, ಹೊಟ್ಟೆ ತುಂಬ ರೊಟ್ಟಿ ಇದ್ರೆ ಕೊರೊನ ಏನ್ಮಾಡ್ತದೇಳಿ’ ಎಂದುತ್ತರ ಬರುತ್ತಿತ್ತೇನೋ. ಇದನ್ನೇ ವೈದ್ಯರು ‘ರೋಗ ನಿರೋಧಕ ಶಕ್ತಿ’ ಎನ್ನುವುದಲ್ಲವೆ? ಆಗ ‘ಏ ಕೂಡಿಟ್ಟು ತಿನ್ನುವವರೇ ನಿಮಗೆ, ದಿನ ದುಡಿದು ತಿನ್ನುವವರ ಮೇಲೆ ಯಾಕಿಷ್ಟು ಅಸೂಯೆ’ ಎಂದಂದುಬಿಡುತ್ತಿದ್ದರೇನೋ ಗೌರಿ ಮೇಡಂ.

ದೇಶಾದ್ಯಂತ ಕೊರೊನಾ ವಿರುದ್ಧ ಜನರ ಪರವಾಗಿ ಹೋರಾಡಿದವರು ವೈದ್ಯರು ಮತ್ತು ವೈದ್ಯಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು. ದುರಂತವೆಂದರೆ ಇಂತಹ ವೀರರನ್ನೂ ಕ್ರೂರಿ ಕೊರೊನಾ ಬಲಿ ಪಡೆಯಿತು. ಆದರೆ ಅವರ ಕಳೆಬರವನ್ನು ಸುಡಲು ಅಥವಾ ಹೂಳಲು ದೇಶಾದ್ಯಂತ ವಿರೋಧ ವ್ಯಕ್ತವಾಯಿತು. ಈ ರೀತಿ ವಿರೋಧಿಸಿದವರಲ್ಲಿ ಶಾಸಕ, ಮಂತ್ರಿಗಳೂ ಸಹ ಇದ್ದರು! ಮೃತರ ಸಂಬಂಧಿಕರು ಶವದೊಂದಿಗೆ ಅಲೆದಲೆದು ಸುಸ್ತಾಗಿ ಎಲ್ಲೋ ಒಂದು ಕಡೆ ಬೀದಿ ಹೆಣದಂತೆ ಹೂಳಿ ಬರಬೇಕಾಯಿತು. ಇಂತಹವರಿಗೆ ‘ಅಲ್ಲಿ ಹೆಣವಾದದ್ದು ಯಾರು’ ಎಂದು ಪ್ರಶ್ನಿಸಿಬಿಡುತ್ತಿದ್ದರೇನೋ ಗೌರಿ ಮೇಡಂ.

ವಲಸಿಗ

ತಲೆಯ ಮೇಲೊಂದು ಚೀಲ. ಕಂಕುಳಲ್ಲೊಂದು ಕಂದಮ್ಮ. ಕೈಹಿಡಿದು ಅಮ್ಮನ ಹಿಂದೆ ಅಳುತ್ತಾ ಹೆಜ್ಜೆ ಹಾಕುತ್ತಿದ್ದ ಮಗು. ಇದು ಲಾಕ್‌ಡೌನ್ ಸಮಯದ ವಲಸೆ ಕಾರ್ಮಿಕರ ಸ್ಥಿತಿ. ಸರ್ಕಾರಗಳ ಹೃದಯ ಮುಟ್ಟಲಾಗದೇ ಕನಿಷ್ಠ ಕಿವಿ ಮುಟ್ಟಲು ‘ಕಾಲ್ನಡಿಗೆ ಜಾಥಾ’ ಹಮ್ಮಿಕೊಳ್ಳುತ್ತಿದ್ದ ಕಾರ್ಮಿಕರು ಇಂದು ಸರ್ಕಾರದ ಲಾಕ್‌ಡೌನ್ ನಿರ್ಧಾರದಿಂದಾಗಿಯೇ ‘ಪ್ರಭುತ್ವ ಪ್ರೇರಿತ ಕಾಲ್ನಡಿಗೆ ಜಾಥಾ’ ಆರಂಭಿಸಿದ್ದರು. ಹೀಗೆ ಹೊರಟವರ ವಿರುದ್ಧ ‘ಕೊರೊನಾ ಸಮಯದಲ್ಲಿ ಇದು ಬೇಕಿತ್ತ್ತಾ? ಮನೆಲಿ ಬಿದ್ದಿರಬೇಕು ತಾನೆ?’ ಎಂದವರೆಷ್ಟೋ. ಆಶ್ಚರ್ಯವೆಂದರೆ, ಹೀಗೆ ಕಾರ್ಮಿಕರ ಮೇಲೆ ಕೆಂಡ ಕಾರಿದ ಜನರೇ ಲಾಕ್‌ಡೌನ್‌ಗೂ ಮುಂಚೆ ‘STAY HOME SAVE LIFE’ ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದರು. ಕಾರ್ಮಿಕರು ಹೊರಟದ್ದೂ ಸಹ ಅವರವರ ‘ಮನೆಗೆ’ ಎಂಬ ಕನಿಷ್ಠ ಪ್ರಜ್ಞೆಯೂ ಸಹ ಬಾಯಿಬಡುಕರಿಗೆ ಇಲ್ಲದಾಗಿತ್ತು. ಹೀಗೆ ಭಾರತಕ್ಕಾಗಿ ದುಡಿಯುವ ಕಾರ್ಮಿಕರು ರಸ್ತೆಗುಂಟ ಬರಿಗಾಲಲ್ಲಿ ನಡೆಯುತ್ತಿದ್ದರೆ, ಆಕಾಶದಲ್ಲಿ ವಿದೇಶಕ್ಕಾಗಿ ಹಾಗೂ ತಮಗಾಗಿ ಮಾತ್ರ ದುಡಿಯುತ್ತಿದ್ದವರನ್ನು ಹೊತ್ತುಕೊಂಡು ಭಾರತಕ್ಕೆ ವಿಮಾನಗಳು ಬರುತ್ತಿದ್ದವು. ಅದನ್ನು ಕಂಡು ‘ವಿಮಾನಗಳನ್ನು ನೋಡಿ ಕಂಕುಳಲ್ಲಿ ಅಳುತ್ತಿದ್ದ ಮಗು ‘ನಗುವುದನ್ನು’ ಕಂಡು ನಾವು-ನೀವು ನಗುವುದಾ, ಅಳುವುದಾ, ನಾಚಿ ತಲೆತಗ್ಗಿಸುವುದಾ?’ ಎಂದು ಮೌನವಾಗಿಬಿಡುತ್ತಿದ್ದರೇನೋ ಗೌರಿ ಮೇಡಂ.

ಹೀಗೆ ಒಂದಲ್ಲಾ ಎರಡಲ್ಲ. ಕೊರೊನಾ ಕಾಲದಲ್ಲಿ ಭಾರತೀಯರು ಕಲಿಯದ ಪಾಠಗಳನ್ನು ಬೆರಳೆತ್ತಿ ತೋರಿಸಿ ದಿಟ್ಟತನದಿಂದ ಪ್ರಶ್ನಿಸುತ್ತಿದ್ದರು ಗೌರಿ ಮೇಡಂ ಎಂಬುದಕ್ಕೆ ನಮ್ಮಲ್ಲಿ ಅವರ ಜೀವಿತಾವದಿಯ ಹಲವು ಸಾಕ್ಷ್ಯಗಳಿವೆ. ರೋಹಿತ್ ವೇಮುಲನ ಬಲಿ ಪಡೆದಾಗ ತನ್ನ ಕರುಳ ಬಳ್ಳಿಯನ್ನೇ ಕಿತ್ತುಕೊಂಡರು ಪಾಪಿಗಳು ಎಂದು ಅಲವತ್ತುಕೊಂಡದ್ದನ್ನು ಕಂಡಿದ್ದೇವೆ. ಒಳಮೀಸಲಾತಿ ವಿಚಾರದಲ್ಲಿ ಅಣ್ಣತಮ್ಮಂದಿರೇ ಎದುರಾಳಿಗಳಾದರಲ್ಲ ಎಂದು ಗೋಗರೆದಿದ್ದನ್ನು ಕಂಡಿದ್ದೇವೆ. ಸಮಾಜದ ಕಟ್ಟಕಡೆಯ ಮನುಜರ ಬಗ್ಗೆ ಜೀವಪರವಾಗಿ ಮಿಡಿಯಲು ಹಿಂದು ಮುಂದು ನೋಡದ ಗೌರಿ ಎಂಬ ಜೀವ ಇಂದಿದ್ದರೆ ಅದೆಷ್ಟು ಪ್ರತಿರೋದ ಒಡ್ಡುತ್ತಿತ್ತು ಅಲ್ಲವೇ?

– ಸಾಕ್ಯ ಸಮಗಾರ.

ಹೊಸ ತಲೆಮಾರಿನ ಚಿಂತಕ ಮತ್ತು ಆಕ್ಟಿವಿಸ್ಟ್ ಆದ ’ಸಾಕ್ಯ, ಅಂಬೇಡ್ಕರ್ ಚಿಂತನೆಯ ಆಳವಾದ ಓದಿನ ಜೊತೆಗೆ ಬದಲಾವಣೆಯ ಕೆಲಸದಲ್ಲಿ ಸ್ವತಃ ತೊಡಗಿಕೊಂಡಿರುವವರು.


ಇದನ್ನೂ ಓದಿ; ದಲಿತ ಚಳವಳಿಯಲ್ಲಿ ಯುವ ನಾಯಕತ್ವ ಅರಳುವ ಸಮಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...