HomeUncategorizedಎಲ್ಲರನ್ನೂ ದಾಟಿ ಮುಂದಕ್ಕೆ ಸಾಗಬೇಕಿದೆ ಒಳಮೀಸಲಾತಿ ಹೋರಾಟ - ಭಾಸ್ಕರ್ ಪ್ರಸಾದ್

ಎಲ್ಲರನ್ನೂ ದಾಟಿ ಮುಂದಕ್ಕೆ ಸಾಗಬೇಕಿದೆ ಒಳಮೀಸಲಾತಿ ಹೋರಾಟ – ಭಾಸ್ಕರ್ ಪ್ರಸಾದ್

ಮುನಿಯಪ್ಪ, ಕಾರಜೋಳ ಅಥವಾ ಆಂಜನೇಯರು ಮಾತ್ರ ಹೇಗೆ ಮಾದಿಗರ ವಾರಸುದಾರರಲ್ಲವೋ ಹಾಗೆಯೇ ಖರ್ಗೆ ಮತ್ತು ಪರಮೇಶ್ವರರು ಮಾತ್ರ ಹೊಲೆಯರನ್ನು ಪ್ರತಿನಿಧಿಸುವ ಸಾರ್ವಭೌಮರಲ್ಲ. ಇವರನ್ನೆಲ್ಲಾ ಮೀರಿದ ಲಕ್ಷಾಂತರ ಸಮಾಜಮುಖಿ ಮನಸ್ಸುಗಳು ಇಂದು ಅತ್ಯಂತ ಪ್ರಾಮಾಣಿಕವಾಗಿ ಒಳಮೀಸಲಿನ ಹೋರಾಟದ ಪರವಾಗಿವೆ ಎಂಬುದನ್ನು ನಾವ್ಯಾರು ಮರೆಯಬಾರದು. ಇಷ್ಟಕ್ಕೂ ಖರ್ಗೆ, ಪರಮೇಶ್ವರ್, ಮುನಿಯಪ್ಪ, ಕಾರಜೋಳ, ಆಂಜನೇಯ ಇವರೆಲ್ಲಾ ಅವರವರ ಪಕ್ಷಗಳ ಪ್ರತಿನಿಧಿಗಳಷ್ಟೇ.

- Advertisement -
- Advertisement -

ಒಳಮೀಸಲಾತಿ ಹೋರಾಟವನ್ನು ಹಲವರು ತಮ್ಮ ರಾಜಕೀಯ ಸ್ವಾರ್ಥಕ್ಕೆ ಹಾಗು ತಮ್ಮ ರಾಜಕೀಯ ಲಾಭದ ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಒಳಮೀಸಲಾತಿ ಪರವಾಗಿ ತಮ್ಮ ಪ್ರಾಣಗಳನ್ನೇ ಬಲಿಕೊಟ್ಟು ಹೋರಾಡಿದವರ ಹೋರಾಟವನ್ನು ನೆನಪಿಸಿಕೊಳ್ಳಬೇಕಿದೆ. ತಮ್ಮ ಸ್ವಹಿತಾಸಕ್ತಿಗಾಗಿ ಸಮುದಾಯಕ್ಕೆ ಹೊಸ ವಾರಸುದಾರರು ಹುಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ ಇದು ಶುರುವಾದದ್ದೆಲ್ಲಿಂದ, ಬೆಳೆದಿದ್ದು ಹೇಗೆ ಎಂಬುದರ ಅರಿವು ನಮಗೆಲ್ಲರಿಗೂ ಅಗತ್ಯ. ಹಾಗೆಯೇ ಹಳೆಯ ತಪ್ಪುಗಳ ಪುನರಾವರ್ತನೆ ಆಗುವ ಸಂಭವ ಇರುವುದರಿಂದ, ಸಮುದಾಯದ ದ್ರೋಹಿಗಳ ಬಗ್ಗೆಯೂ ಬೆಳಕು ಚೆಲ್ಲಬೇಕಿದೆ.

ಬಹುಸಂಖ್ಯಾತ ಮಾದಿಗರಿಗೆ ’ಪರಿಶಿಷ್ಟರ ಕೋಟಾ’ದಲ್ಲಿ ಸಿಕ್ಕಿದ್ದೆಷ್ಟು ನೋಡಿ!

ಕರ್ನಾಟಕದ ಈಗಿನ ವಿಧಾನಸಭೆಯಲ್ಲಿ 36 ಪರಿಶಿಷ್ಟ ಜಾತಿಯ ಶಾಸಕರಲ್ಲಿ ಬೋವಿ 5, ಮಾದಿಗ 6, ಹೊಲೆಯ/ಚಲವಾದಿ 17, ಲಂಬಾಣಿ 7 ಮತ್ತು ಮೊಗೇರ 1
3837 ತಾಲೂಕು ಪಂಚಾಯಿತಿ ಸದಸ್ಯರಲ್ಲಿ 748 ಪರಿಶಿಷ್ಟ ಜಾತಿಯ ಸದಸ್ಯರಲ್ಲಿ 157 ಮಾದಿಗ, 245ಹೊಲೆ, 85 ಬೋವಿ ಮತ್ತು 173 ಲಂಬಾಣಿಗಳಿದ್ದಾರೆ, ಉಳಿದವರು ಇತರ ಸಣ್ಣಪುಟ್ಟ ಜಾತಿಗೆ ಸೇರಿದವರಾಗಿದ್ದಾರೆ.
ಹಾಗೆಯೇ ಇನ್ನೊಂದು ಅಂಕಿ-ಅಂಶವಿದೆ. ಕರ್ನಾಟಕದ ಈ ಹಿಂದಿನ ವಿಧಾನಸಭೆಯಲ್ಲೂ ಶಾಸಕರಾಗಿದ್ದ ಲಂಬಾಣಿ ಜಾತಿಗೆ (ಸ್ಪೃಶ್ಯ ಪರಿಶಿಷ್ಟ ಜಾತಿ) ಸೇರಿದ ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ ಅವರು ತಮ್ಮ ಕ್ಷೇತ್ರದಲ್ಲಿ ವಿವಿಧ ಬಾಬ್ತಿನ ಅನುದಾನವನ್ನು ಹೇಗೆ ಹಂಚಿದರು ಎಂಬುದೇ ಆ ಅಂಕಿ-ಅಂಶ. ಅವರು ಲಂಬಾಣಿಗಳಿಗೆ 9,19,70,000 ರೂ, ಹೊಲೆಯರಿಗೆ 3,10,50,000 ರೂ, ಮಾದಿಗರಿಗೆ 1,30,75,00 ರೂ.ಗಳಷ್ಟು ಅನುದಾನವನ್ನು ಮಂಜೂರು ಮಾಡಿದ್ದಾರೆ. ಈ ಅನುದಾನಗಳ ಆಯ್ಕೆ ಸಮಿತಿಗೆ ಶಾಸಕರೇ ಅಧ್ಯಕ್ಷರಾಗಿರುತ್ತಾರೆ ಎಂಬುದನ್ನು ಗಮನಿಸಬೇಕು.

ಒಳಮೀಸಲಾತಿ ಹೋರಾಟದ ಇತಿಹಾಸ

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಕಾನೂನುಬದ್ಧ ಒಳಮೀಸಲಿನ ಹಕ್ಕೊತ್ತಾಯದ ಹೋರಾಟಕ್ಕೆ ಸುಮಾರು ಐವತ್ತು ವರ್ಷಗಳ ಇತಿಹಾಸವಿದೆಯಾದರೂ ನಾವು ಗುರುತಿಸುವುದು ಪಕ್ಕದ ಆಂಧ್ರದಲ್ಲಿ ಶುರುವಾದ ಮಾದಿಗ ದಂಡೋರದ ಒಳಮೀಸಲಿನ ಹಕ್ಕೊತ್ತಾಯದ ಸುಮಾರು ಮೂವ್ವತ್ತು ವರ್ಷಗಳ ಹೋರಾಟದ ನಂತರದ ಇತಿಹಾಸವನ್ನು ಮಾತ್ರ.

ದಕ್ಷಿಣ ಭಾರತದಲ್ಲಿ ಒಳಮೀಸಲಾತಿ ಪರವಾಗಿ ಧ್ವನಿ ಎತ್ತಿದ ಸಂಘಟನೆಗಳ ಪೈಕಿ ನಮಗೆ ಪ್ರಮುಖವಾಗಿ ಕಂಡುಬರುವ ಸಂಘಟನೆ ಅಥವಾ ಚಳವಳಿ ಎಂದರೆ ಮಂದಕೃಷ್ಣ ಮಾದಿಗ ಅವರ ನೇತೃತ್ವದ ಮಾದಿಗ ದಂಡೋರ.

ಕರ್ನಾಟಕದಲ್ಲೂ ಮಾದಿಗ ದಂಡೋರಗಳು, ಮಾದಿಗ ಮೀಸಲಾತಿ ಹೋರಾಟ ಸಮಿತಿಗಳು, ಮಾದಿಗ ಮಹಾಸಭಾಗಳು, ಆದಿ ಜಾಂಬವ ಮಾಹಾಸಭಾಗಳು, ಮಾತಂಗ ಮಹಾಸಭಾಗಳು, ಬಾಬು ಜಗಜೀವನರಾಂ ಸಂಘಗಳು – ಹೀಗೆ ಹತ್ತು ಹಲವು ಮಾದಿಗ ಸಂಘಟನೆಗಳದ್ದು ಒಳಮೀಸಲಿನ ದ್ವನಿಗೆ ಶಕ್ತಿ ತುಂಬಿದ ಸಂಘಟನೆಗಳ ಪೈಕಿ ಬಹುದೊಡ್ಡವು ಇವು.

ಕರ್ನಾಟಕ ರಾಜ್ಯದ ಎಲ್ಲ ದಲಿತ ಸಂಘಟನೆಗಳು ಒಗ್ಗೂಡಿ, ಒಳಮೀಸಲಾತಿ ಜಾರಿಗೊಳಿಸಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು 1998ರಲ್ಲಿ ಅವತ್ತಿನ ಸರ್ಕಾರಕ್ಕೆ ಚಳಿ ಬಿಡಿಸಿದ್ದರು. ರಾಜ್ಯದ ದಲಿತ ಸಂಘಟನೆಗಳ ರಾಜ್ಯ ನಾಯಕರೆಲ್ಲರೂ ಒಂದೇ ವೇದಿಕೆಯಲ್ಲಿ ನಿಂತು ಮಲ್ಲೇಶ್ವರ ಮೈದಾನದಲ್ಲಿ ಸಾವಿರಾರು ಜನರ ನಡುವೆ ಒಳಮೀಸಲಾತಿಗಾಗಿ ಘೋಷಣೆ ಮಾಡಿ ಆಗ್ರಹ ಮಾಡಿದ್ದು ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ.

1999ರಲ್ಲಿ ಒಳಮೀಸಲಾತಿಗಾಗಿ ಒತ್ತಾಯಿಸಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯು, ಹರಿಹರದ ಕೃಷ್ಣಪ್ಪನವರ ಸಮಾಧಿ ಸ್ಥಳದಿಂದ ಬೆಂಗಳೂರಿನ ಆರ್ಟ್ಸ್ ಕಾಲೇಜ್ ಮೈದಾನದವರೆಗೂ ಜನಸ್ತೋಮವನ್ನೇ ಒಳಗೊಂಡ ಕಾಲ್ನಡಿಗೆಯ ಜ್ಯೋತಿಯಾತ್ರೆಯ ಮೂಲಕ ಒಳಮೀಸಲಾತಿ ಹಕ್ಕಿನ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ಈಗ ಇತಿಹಾಸ.

ನಂತರದ ಎರಡು ವರ್ಷಗಳಲ್ಲಿ ಇದು ಇನ್ನೂ ತೀವ್ರಗೊಂಡಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ತರಬೇತಿ ಶಿಬಿರವನ್ನುದ್ದೇಶಿಸಿ ಮಾತನಾಡಿದ್ದ ಅವತ್ತಿನ ಬಹುಜನ ಸಮಾಜಪಕ್ಷದ ರಾಷ್ಟ್ರೀಯ ನಾಯಕಿ ಮಾಯಾವತಿಯವರು ಕರ್ನಾಟಕದಲ್ಲೆದ್ದಿರುವ ಒಳಮೀಸಲು ಹೋರಾಟದ ಕಿಚ್ಚನ್ನು ಗಮನಿಸಿ, ನಮ್ಮ ಪಕ್ಷವು ಒಳಮೀಸಲು ಪರವಾಗಿ ಇರುವುದಾಗಿಯೂ, ತಾನು ಪ್ರಧಾನಿ ಆದರೆ ಕೇವಲ 24 ಗಂಟೆಯ ಒಳಗೆ ಒಳಮೀಸಲಾತಿಯನ್ನು ಜಾರಿಗೆ ತರಲು ಬದ್ಧವಾಗಿದ್ದೇನೆಂದು ಘೋಷಿಸಿದಾಗ, ಇಡೀ ಸಭೆ ಮುಗಿಲು ಮುಟ್ಟವಂತಹ ಕರತಾಡನ ಮಾಡಿತ್ತು.

ಒಳಮೀಸಲು ಹೋರಾಟಕ್ಕೆ ಸಾಕ್ಷಿಯಾದ ಜಕ್ಕರಾಯನಕೆರೆ, ಚಿತ್ರದುರ್ಗದಲ್ಲಿ ಕೇಶಮುಂಡನ ಮಾಡಿಸಿಕೊಂಡು ಒಳಮೀಸಲಿಗಾಗಿ ಧ್ವನಿ ಎತ್ತಿ ಪೊಲೀಸರ ಲಾಠಿ ರುಚಿ ಉಂಡವರೆಷ್ಟೋ? ಬೆಂಗಳೂರಿನಲ್ಲಿ ನಡೆದ ಸಭೆ – ಚಳವಳಿಗಳು, ತಮಟೆ ಚಳವಳಿ, ಅರೆಬೆತ್ತಲೆ ಪ್ರತಿಭಟನೆಗಳು – ಹೀಗೆ ನಡೆದ ಹೋರಾಟಗಳ ಲೆಕ್ಕ ಇಟ್ಟವರಿಲ್ಲ. ಒಂದು ಕಾಲಕ್ಕೆ ಚಿತ್ರದುರ್ಗ ಮತ್ತು ತುಮಕೂರು ಒಳಮೀಸಲಿನ ಹೋರಾಟದ ತವರು ನೆಲಗಳಾಗಿದ್ದವು. ತುಮಕೂರು ಮತ್ತು ಚಿತ್ರದುರ್ಗಗಳಲ್ಲಿ ಒಳಮೀಸಲಿನ ಪ್ರಸ್ತಾಪವಾದಾಗಲೆಲ್ಲಾ ಟೊಂಕಕಟ್ಟಿ ನೂರಾರು ಯುವಕರ ದಂಡೇ ಹೋರಾಟಕ್ಕೆ ಸಿದ್ಧವಾಗಿಬಿಡುತ್ತಿತು. ಇಡೀ ನಾಡು ತಮ್ಮತ್ತ ನೋಡುವಂತೆ ಒಡಲಾಳದ ಬೆಂಕಿ ಕಾರಿಕೊಳ್ಳುತ್ತಿತ್ತು.

ಕೇಶಮುಂಡನ ಚಳವಳಿ, ಅರೆಬೆತ್ತಲೆ ಮೆರವಣಿಗೆ, ಪೊರಕೆ ಪ್ರದರ್ಶನ ಚಳವಳಿ, ಸೋನಿಯಾ ಗಾಂಧಿಯವರಿಗೆ ದಿಗ್ಬಂಧನ, ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ಇದೆಲ್ಲಾ ಆರ್ಭಟಿಸಿ ಸುದ್ದಿಯಾದದ್ದೇ ತುಮಕೂರು ಮತ್ತು ಚಿತ್ರದುರ್ಗದ ತಾಯ್ನೆಲದಲ್ಲಿ!

ಮೈಸೂರು ಭಾಗದ ದಂಡುಬೀದಿ ಹೋರಾಟಕ್ಕಿಂತ ಹೆಚ್ಚಾಗಿ, ತರಬೇತಿ ಶಿಬಿರ, ಆಪ್ತ ಸಮಾಲೋಚನೆಯ ಸಭೆಗಳು ಹಾಗು ಸಂವಾದ ಕಾರ್ಯಕ್ರಮಗಳ ಮೂಲಕ ಯುವಕರಲ್ಲಿ ಒಳಮೀಸಲಿನ ಅಗತ್ಯ ಮತ್ತು ಅನಿವಾರ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿತ್ತು. ಮುಂದುವರೆದು ಅದೇ ಪರಂಪರೆಯನ್ನೇ ಇವತ್ತಿಗೂ ಮೈಸೂರಿನ ಆ ಭಾಗದಲ್ಲಿ ನಾವು ಕಾಣುತ್ತೇವೆ.

ಬಹುಜನ ಸಮಾಜ ಪಕ್ಷ ಒಳಮೀಸಲಾತಿ ಪರವಾಗಿಲ್ಲ ಎಂಬ ಅನುಮಾನಗಳು ಚಿಗುರೊಡೆಯತೊಡಗಿದ್ದಾಗ ಅದಕ್ಕೆ ಸ್ವಲ್ಪವೂ ಆಸ್ಪದ ಕೊಡದಂತೆ ರಾಜ್ಯದಾದ್ಯಂತ ಎಲ್ಲೇ ಒಳಮೀಸಲು ಹಕ್ಕಿನ ಹೋರಾಟದ ಧ್ವನಿ ಎದ್ದಿರಲು, ಅಲ್ಲೆಲ್ಲ ತಪ್ಪದೇ ಬಿಎಸ್‌ಪಿ ಭಾಗವಹಿಸಿತ್ತು. ಒಳಮೀಸಲು ವಿರುದ್ಧವಾಗಿ ಮಾತಾಡಿದ ಎಲ್ಲ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆಹಾಕಿ ಒಳಮೀಸಲಿನ ಹಕ್ಕಿಗಾಗಿ ಆಗ್ರಹಿಸಿದಾಗ, ಯಾರೋ ಮಾಡಿದ ಕುತಂತ್ರಕ್ಕೆ ಬಲಿಯಾಗಿ, ಪೊಲೀಸರ ದಾಳಿಯಿಂದ ತಮ್ಮ ಕೈಕಾಲು ಕಳೆದುಕೊಂಡವರೆಷ್ಟು? ಅದೇ ಹೋರಾಟದಲ್ಲಿ ಪೊಲೀಸರ ಲಾಠಿ, ಬೂಟಿನೇಟಿಗೆ ರಕ್ತ ಕೊಟ್ಟವರ ವೇದನೆಯೇನು? ಇವರೆಲ್ಲರ ತ್ಯಾಗ ಬಲಿದಾನಗಳನ್ನು ಮರೆಯಲು ಸಾಧ್ಯವೇ?

ಒಳಮೀಸಲಿನ ಪರ ಮತ್ತು ವಿರೋಧದ ಅಲೆಗಳ ಭರಾಟೆ ತೀವ್ರಗೊಂಡಿರುವ ಈ ಹೊತ್ತಿನಲ್ಲಿ ಈ ಹಿನ್ನೆಲೆ ಮತ್ತು ಇತಿಹಾಸವನ್ನು ನೆನೆಯುವ ಅನಿವಾರ್ಯತೆ ಇತ್ತು.

ಬಹುಪಾಲು ಕಾನೂನು ಹೋರಾಟವಾಗಬೇಕಿದ್ದ ಒಳಮೀಸಲಾತಿಯ ಕೂಗು, ಕೇವಲ ಬೀದಿಹೋರಾಟಕ್ಕೇ ಸೀಮಿತವಾಗಿದ್ದು ಯಾಕೆ?

1. ಒಳಮೀಸಲಿನ ಹೋರಾಟದ ಧ್ವನಿ ಯಾವಾಗೆಲ್ಲಾ ಎತ್ತರಕ್ಕೇರುತ್ತದೆಯೋ ಆಗೆಲ್ಲಾ ಲಜ್ಜೆಗೇಡಿ, ಸಮುದಾಯ ದ್ರೋಹಿ, ಸ್ವಾರ್ಥಿಯಾದ ಒಬ್ಬ ಎಂಎಲ್‌ಎ, ಎಂಪಿ, ಎಂಎಲ್‌ಸಿ ಅಥವಾ ರಾಜ್ಯಸಭಾ ಸದಸ್ಯನ ಜನನವಾಗುತ್ತದೆ ಮತ್ತು ಅಲ್ಲಿಯವೆರೆಗಿನ ಹೋರಾಟಕ್ಕೆ ದೊಡ್ಡದೊಂದು ಗುಂಡಿ ತೋಡಿ ಅಷ್ಟೂ ಒಳಮೀಸಲಾತಿ ಹೋರಾಟಗಾರರನ್ನು ಒಂದಷ್ಟು ದಿನ ಸಮಾಧಿ ಸ್ಥಿತಿಗೆ ದೂಡಲಾಗುತ್ತದೆ. ಆದರೆ ಹೀಗೆ ನಾಮನಿರ್ದೇಶನಗೊಂಡ ಅಥವಾ ಒಳಮೀಸಲಾತಿ ಹೋರಾಟದ ಪ್ರತಿಫಲವಾಗಿ ಟಿಕೆಟ್ ಗಿಟ್ಟಿಸಿಕೊಂಡು ಚುನಾವಣೆಯಲ್ಲಿ ಗೆದ್ದುಬಂದ ಇವರ್‍ಯಾರೂ ತಾವು ಪ್ರತಿನಿಧಿಸುವ ಶಾಸನಸಭೆಯಲ್ಲಿ ಒಳಮೀಸಲಾತಿ ಪರವಾಗಿ ತೊಡೆತಟ್ಟಿದ ಒಂದೇ ಒಂದು ಉದಾಹರಣೆ ಇಲ್ಲ.

2. ಹಾಗೆಯೇ ಒಳಮೀಸಲಿನ ಹೋರಾಟದ ಧ್ವನಿ ತಾರಕಕ್ಕೆ ಏರಿದಾಗಲೆಲ್ಲಾ ಒಂದು ಬೃಹತ್ ಸಮಾವೇಶದ ಏರ್ಪಾಡಾಗುತ್ತದೆ. ಲಕ್ಷಾಂತರ ಜನರನ್ನು ಸೇರಿಸಲಾಗುತ್ತದೆ. ಅಲ್ಲದೆ ಇಂತಹ ಸಭೆ, ಸಮಾವೇಶಗಳು ಏರ್ಪಡುವುದು ಚುನಾವಣೆಗಳ ಆಸುಪಾಸಿನಲ್ಲಿ ಮಾತ್ರ. ಆ ಮೂಲಕ ಒಂದಿಷ್ಟು ಮಾದಿಗ ರಾಜಕಾರಣಿಗಳಿಗೆ ಪಕ್ಷಗಳ ಟಿಕೆಟ್ಟು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಹೆಚ್ಚೆಂದರೆ ಮಾದಿಗ ಜನಾಂಗವನ್ನು ತಮ್ಮ ತಮ್ಮ ಪಕ್ಷಗಳಿಗೆ ಎಳೆದು ತಂದು ಓಟು ಗುದ್ದಿಸಿಕೊಂಡು ತಿರುಗಿ ವಾಪಸ್ಸು ಅದೇ ಹಾಳು ಕೊಂಪೆಗೆ ಕಳಿಸುವ ಅದೇ ಸಂಚಿನ ಭಾಗವಾಗಿ ಒಬ್ಬರಿಗೋ ಇಬ್ಬರಿಗೋ ಸಚಿವಸ್ಥಾನದ ಭಿಕ್ಷೆ ನೀಡಲಾಗುತ್ತದೆ. ಅಲ್ಲಿಗೆ ಮತ್ತೊಂದು ಅವಧಿಗೆ ಒಳಮೀಸಲ ಹೋರಾಟಕ್ಕೆ ಎಳ್ಳುನೀರು ಬಿಟ್ಟಂತೆ. ಒಳಮೀಸಲು ಹೋರಾಟಗಾರರಾದರೂ ಇದೆಲ್ಲವನ್ನೂ ಸಹಿಸುತ್ತಾ ಈ ಬಾರಿ ಖಂಡಿತಾ ನಮ್ಮ ಆಗ್ರಹ ಈಡೇರುತ್ತೆ ಎಂದು ಹಗಲುಗನಸು ಕಾಣುತ್ತಲೇ ಮುನ್ನಡೆಯುತ್ತಿರುತ್ತಾರೆ. ತಮ್ಮ ಸಮುದಾಯದ ರಾಜಕೀಯ ನಾಯಕರನ್ನು ನಂಬುತ್ತಾ, ಕ್ಷಮಿಸುತ್ತಾ, ಆಶಾಭಾವನೆಯಿಂದಲೇ ದಿನದೂಡುತ್ತಾ, ಚುನಾವಣೆಯೆಲ್ಲಾ ಮುಗಿದು ಗೆದ್ದುಬಂದ ಅಧಿಕಾರಸ್ಥರಲ್ಲಿ ಮತ್ತೆ ಒಳಮೀಸಲು ಪ್ರಸ್ತಾಪ ಇಟ್ಟು ಆಕಾಶ ನೋಡುತ್ತಾ ಕೂರುವಂತಾಗಿದೆ.

“ನಾವು ಕದ್ದು ತಿನ್ನುವ ಹೊಲೆಯ ಜಾತಿಗೆ ಸೇರಿದವರಲ್ಲ!”

ಅದು 1999ನೇ ಇಸವಿಯ ಆಗಸ್ಟ್ 15. ಅವತ್ತು ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆದಿತ್ತು. ನಾನಾಗ ಎಂಆರ್‌ಎಚ್‌ಎಸ್ (ಮಾದಿಗ ಮೀಸಲಾತಿ ಹೋರಾಟ ಸಮಿತಿ) ನೆಲಮಂಗಲ ತಾಲ್ಲೂಕು ಸಂಚಾಲಕ. ಆ ಪ್ರತಿಭಟನಾ ಜಾಗದಲ್ಲಿ ನನಗೆ ದೊರೆತ ಕರಪತ್ರವೊಂದರಲ್ಲಿ ಮಾದಿಗರ ದುಸ್ಥಿತಿಯ ಪೂರ್ಣ ವಿವರಣೆಗಳ ಅಂಕಿಅಂಶಗಳಿದ್ದವು ಮತ್ತು ಮಾದಿಗರ ಎಲ್ಲಾ ಸವಲತ್ತುಗಳು ಹೊಲೆಯರ ಪಾಲಾಗಿವೆ. ಹೊಲೆಯರು ನಮ್ಮೆಲ್ಲಾ ಅವಕಾಶಗಳನ್ನು ಕದ್ದಿದ್ದಾರೆಂದು ಆರೋಪಿಸಿ, “ನಾವು ಕದ್ದು ತಿನ್ನುವ ಹೊಲೆಯ ಜಾತಿಗೆ ಸೇರಿದವರಲ್ಲ!” ಎಂದು ಬರೆಯಲಾಗಿತ್ತು. ಇದನ್ನು ಓದಿ ನಕಶಿಖಾಂತ ಉರಿದುಹೋದೆ. ಇಂತಹ ಭಾಷೆಯ ಬಳಕೆಯಿಂದಲೇ ಆ ಹೋರಾಟ ತಲುಪಬಹುದಾಗಿದ್ದ ಅಧಃಪತನದ ಅರಿವಾಗಿ ಹೋಗಿತ್ತು. ಹೀಗೆ ಬರೆದಿರುವುದನ್ನು ಪ್ರತಿಭಟಿಸಿ ಸ್ಥಳದಲ್ಲೇ ಆಕ್ಷೇಪಿಸಿ ಅಲ್ಲೇ ಆ ಸಂಘಟನೆಗೆ ರಾಜೀನಾಮೆ ಘೋಷಿಸಿದ್ದೆ. ನಾವು ಸುಮಾರು ನೂರಕ್ಕೂ ಹೆಚ್ಚು ಜನ ಅಲ್ಲಿಂದ ಹೊರನಡೆದಿದ್ದೆವು.

ಇತ್ತೀಚೆಗೆ ತುಮಕೂರಿನಲ್ಲಿ ಆದಿಮ ಸಾಂಸ್ಕೃತಿಕ ಬಳಗ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್ಸು ಮನೆಗೆ ಬರುವ ದಾರಿಯಲ್ಲಿ ದಾಬಸ್‌ಪೇಟೆಯ ಡಾಬಾವೊಂದರಲ್ಲಿ ಊಟಕ್ಕೆ ಕುಳಿತಾಗ ಈ ಮೇಲಿನ ಘಟನೆಯನ್ನು ನೆನಪಿಸಿಕೊಂಡು ಮಾತಾಡುತ್ತಿದ್ದಾಗ ಗೆಳೆಯ ನಿರಂಜನ ಇದ್ದಕ್ಕಿದ್ದ ಹಾಗೆ ಮಾಡುತ್ತಿದ್ದ ಊಟ ಬಿಟ್ಟು ಎದ್ದು ಹೋದವನು, ಆರ್‌ಎಸ್‌ಎಸ್‌ನ ಪಕ್ಕಾ ಮುಖವಾಣಿಯಂತಿರುವ ವಿಕ್ರಮ ಪತ್ರಿಕೆಯಲ್ಲಿ ಬಂದಿರುವ ಕೆಲವು ಅಂಕಿಅಂಶಗಳನ್ನು ನನ್ನ ಮುಂದಿಟ್ಟು ಈಗ ಇದಕ್ಕೆ ನಿಮ್ಮ ಸಮಜಾಯಿಸಿ ಏನು ಹೇಳಿ ಎಂದುಬಿಟ್ಟನು.

ಮೊದಲೇ ಆರ್‌ಎಸ್‌ಎಸ್‌ನ ಕುತಂತ್ರಗಳ ಬಗ್ಗೆ ಸಂಪೂರ್ಣವಾಗಿ ಗೊತ್ತಿರುವ ನಾನು ನಿರಂಜನ ನೀಡಿದ ಮಾಹಿತಿಗಳನ್ನು ನಿರಾಕರಿಸಿದೆ. ನಂತರ ಈ ಅಂಕಿಅಂಶಗಳ ಸತ್ಯಾಸತ್ಯತೆ ಪರಿಶೀಲನೆ ಮಾಡಿ ಮಾತನಾಡುವುದಾಗಿ ತಿಳಿಸಿದೆ. ಆ ನಂತರದ ಸುಮಾರು ಎಂಟತ್ತು ದಿನಗಳ ಕಾಲ ಮಾಡಿದ ನಿರಂತರ ಅಧ್ಯಯನ, ಕ್ಷೇತ್ರ ಪರ್ಯಟನೆ, ಮಾಹಿತಿ ವಿನಿಮಯ ಮತ್ತು ಸಂವಹನಗಳ ಮೂಲಕ ನನಗೆ ಕಂಡುಬಂದ ಸತ್ಯ ನಿಜಕ್ಕೂ ನನ್ನ ಎದೆ ನಡುಗಿಸಿತ್ತು. ವಿಕ್ರಮ ಪತ್ರಿಕೆ ಹೊರಹಾಕಿದ್ದ ಅಷ್ಟೂ ಅಂಕಿಅಂಶಗಳು ನಿಜವಾಗಿತ್ತು. ಇಲ್ಲಿ ನನಗೆ ನಿಜವಾಗಿಯೂ ಭಯ ಹುಟ್ಟಿಸಿದ್ದು, ನಮ್ಮ ನಡುವಿನ ಅಣ್ತಮ್ಮಿಕೆಯ ಅಸಮಾನತೆಯನ್ನ ವಿಕ್ರಮ ಎಂಬ ನಮ್ಮ ಸೈದ್ಧಾಂತಿಕ ವಿರೋಧಿಯೊಬ್ಬ ಅದು ಹೇಗೆ ತನ್ನ ಲಾಭಕ್ಕೆ ಬಳಸಿಕೊಂಡು ನಮ್ಮ ನಡುವೆಯೇ ಬೆಂಕಿಹಚ್ಚಲು ಕಾದಿದ್ದಾನೆ ಎಂಬುದರ ಬಗ್ಗೆ.

ಒಳಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮೋಸ ಮಾಡಿತೆಂದು, ಸದಾ ಅಲ್ಪಸಂಖ್ಯಾತ, ದಲಿತ ಮತ್ತು ಶೂದ್ರರ ವಿಚಾರದಲ್ಲಿ ವಿಷವನ್ನೇ ಕಾರುವ ಬಿಜೆಪಿ ಅಧಿಕಾರದಲ್ಲಿರುವ ಸರ್ಕಾರವನ್ನು ಇವತ್ತು ನಾವಾಗಿ ನಾವು ತಲೆ ಮೇಲೆಳೆದುಕೊಂಡು ನರಳುತ್ತಿಲ್ಲವೇ. ಹಾಗೇ ಈ ವಿಕ್ರಮ ಪತ್ರಿಕೆಯ ವರದಿ. ಈ ವರದಿ ಮತ್ತೆ ಅದೇನೇನು ಅನಾಹುತ ಮಾಡಲಿದೆಯೋ! ಆದರೇನು? ಒಳಮೀಸಲಾತಿ ವಿರೋಧಿಗಳಿಗಿನ್ನೂ ತಮ್ಮ ಅಹಂಕಾರದ ಕಣ್ಣಿನ ಪೊರೆ ಕಳಚಿಲ್ಲವಷ್ಟೇ.

ಮಾದಿಗ ಸಮುದಾಯ ಆರೋಪಿಸುವಂತೆ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಯಾವತ್ತಿಗೂ ಒಳಮೀಸಲಾತಿ ಪರ ಇಲ್ಲ ಅನ್ನೋದನ್ನು ನಾವು ಒಪ್ಪಲೇಬೇಕು. ಅದೆಷ್ಟೇ ವೇದಿಕೆಗಳಲ್ಲಿ, ಅದೆಷ್ಟೇ ಸಭೆ-ಸಮಾರಂಭ, ಆಪ್ತ ಸಮಾಲೋಚನಾ ಕಾರ್ಯಕ್ರಮಗಳಲ್ಲಿ ನಾವು ಒಳಮೀಸಲಾತಿಗೆ ವಿರುದ್ಧವಾಗಿಲ್ಲವೆಂದು ಈ ಇಬ್ಬರು ನಾಯಕರು ಘೋಷಿಸಿದರೂ ಆಂತರ್ಯದಲ್ಲಿ ಅವರು ಒಳಮೀಸಲಾತಿ ಪರ ಇಲ್ಲವೇ ಇಲ್ಲ ಎಂದು ಕಳೆದು ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳಿಂದ ಒಳಮೀಸಲಾತಿ ಹೋರಾಟದಲ್ಲಿರುವ ನಾನು ದಿಟ್ಟವಾಗಿ ಹೇಳಬಲ್ಲೆ. ಆದರೆ ಅದಕ್ಕಾಗಿ ಇವರಿಬ್ಬರನ್ನೂ ನಾನು ಖಂಡಿತಾ ದ್ವೇಷ ಮಾಡಬೇಕಿಲ್ಲ ಹಾಗೂ ಇವರಿಬ್ಬರ ಕಾರಣಕ್ಕೆ ನಾವು ಇಡೀ ಹೊಲೆಯ ಸಮುದಾಯವನ್ನು ಒಳಮೀಸಲಾತಿ ವಿರೋಧಿಗಳೆಂದು ಕಾಣಬೇಕಿಲ್ಲ. ಇವತ್ತು ನಾವೆಲ್ಲರೂ ನೋಡುತ್ತಿರುವಂತೆ, ಅಸ್ಪೃಶ್ಯರಾದ ಮಾದಿಗ ಮತ್ತು ಹೊಲೆಯರ ರಾಜಕೀಯ ಹಾಗು ಔದ್ಯೋಗಿಕ ಅವಕಾಶಗಳನ್ನು ಅಸ್ಪೃಶ್ಯರಲ್ಲದ ಹಾಗು ಇಡೀ ಭಾರತದಲ್ಲೆಲ್ಲೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲೇ ಇರದ ಸ್ಪೃಶ್ಯ ಜಾತಿಗಳಾದ ಕೊ.ಲಂ.ಭೋಗಳು (ಕೊರಮ, ಲಂಬಾಣಿ ಮತ್ತು ಭೋವಿಗಳು) ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಕೊಂಡು ಕಬಳಿಸುತ್ತಿವೆ. ಇದನ್ನು ಮನಗಂಡಿರುವ ಲಕ್ಷಾಂತರ ಹೊಲೆ ಮಾದಿಗ ಸಮುದಾಯಗಳೆರಡೂ ಸಿಡಿದೆದ್ದು ನಿಂತಿರುವಾಗಲೂ ಹಳೆಯ ನಾಯಕರಾದ ಖರ್ಗೆ, ಮುನಿಯಪ್ಪ, ಪರಮೇಶ್ವರ ಇವರುಗಳಿಂದ ಪರಿಹಾರ ನಿರೀಕ್ಷಿಸಿ ಕೈಕಟ್ಟಿ ಕುಳಿತುಕೊಳ್ಳಬೇಕಿಲ್ಲ.

ಮುನಿಯಪ್ಪ, ಕಾರಜೋಳ ಅಥವಾ ಆಂಜನೇಯರು ಮಾತ್ರ ಹೇಗೆ ಮಾದಿಗರ ವಾರಸುದಾರರಲ್ಲವೋ ಹಾಗೆಯೇ ಖರ್ಗೆ ಮತ್ತು ಪರಮೇಶ್ವರರು ಮಾತ್ರ ಹೊಲೆಯರನ್ನು ಪ್ರತಿನಿಧಿಸುವ ಸಾರ್ವಭೌಮರಲ್ಲ. ಇವರನ್ನೆಲ್ಲಾ ಮೀರಿದ ಲಕ್ಷಾಂತರ ಸಮಾಜಮುಖಿ ಮನಸ್ಸುಗಳು ಇಂದು ಅತ್ಯಂತ ಪ್ರಾಮಾಣಿಕವಾಗಿ ಒಳಮೀಸಲಿನ ಹೋರಾಟದ ಪರವಾಗಿವೆ ಎಂಬುದನ್ನು ನಾವ್ಯಾರು ಮರೆಯಬಾರದು. ಇಷ್ಟಕ್ಕೂ ಖರ್ಗೆ, ಪರಮೇಶ್ವರ್, ಮುನಿಯಪ್ಪ, ಕಾರಜೋಳ, ಆಂಜನೇಯ ಇವರೆಲ್ಲಾ ಅವರವರ ಪಕ್ಷಗಳ ಪ್ರತಿನಿಧಿಗಳಷ್ಟೇ. ಇವರ ನಿಲುವುಗಳು ಒಳಮೀಸಲು ವಿರುದ್ಧವಾಗಿ ಅಥವಾ ತಮ್ಮ ಸ್ವಾರ್ಥಕ್ಕೆ ರಾಜಕೀಯ ಲಾಭಕ್ಕಾಗಿ ಇರುವಾಗ, ನಾವು ಅವರಲ್ಲಿ ಆಕ್ರೋಶ ವ್ಯಕ್ತಪಡಿಸುವುದು, ಗೋಗರೆಯುವುದು – ಗೋರ್ಕಲ್ಲ ಮೇಲೆ ಮಳೆ ಉಯ್ದ ಮಾತ್ರಕ್ಕೆ ಅಲ್ಲಿ ಬೆಳೆ ನಿರೀಕ್ಷೆ ಮಾಡಿದಷ್ಟೇ ದಡ್ಡತನವಾಗುತ್ತದೆ. ಒಳಮೀಸಲು ವಿಚಾರವಾಗಿ ಇವರುಗಳ ಮುಖವಾಡ ಕಳಚುತ್ತಿರೋಣ ಎಂದು ಮಾತ್ರ ಹೇಳಬಯಸುತ್ತೇನೆ.

ಈ ನಡುವೆ ತೀರ ನಿನ್ನೆಮೊನ್ನೆಯಷ್ಟೇ ನಡೆದಿರುವ ಕೆಲವು ಬೆಳವಣಿಗೆಗಳು ನಾಚಿಕೆಗೇಡಿನ ಸಂಗತಿಗಳಾಗಿವೆ. ಬೆಂಗಳೂರಿನಲ್ಲಿರುವ ಹಾಗೂ ಯಾವ ಸಾಂವಿಧಾನಿಕ ಅಧಿಕಾರವನ್ನೂ ಹೊಂದಿರದ ಆರ್‌ಎಸ್‌ಎಸ್‌ನ ಕಚೇರಿ ಕೇಶವಕೃಪಕ್ಕೆ ಹೋಗಿ (ಅಥವಾ ಅದರ ಅಂಗಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್ತಿನಲ್ಲೋ) ಅಡ್ಡಡ್ಡಬಿದ್ದು ಬಂದಿರುವ ಮಾದಿಗ ಸಂಘಟನೆಗಳ ಕೆಲವು ಮುಖಂಡರು ಒಳಮೀಸಲಾತಿ ಜಾರಿಗೊಳಿಸುವಂತೆ, ತಮ್ಮತ್ತ ಕರುಣೆ ಬೀರುವಂತೆ ಅಲ್ಲಿನ ಕೆಲವು ಯಃಕಶ್ಚಿತ್ ನಾಯಕರಲ್ಲಿ ಜೋಳಿಗೆ ಒಡ್ಡಿ ಬಂದಿರುವುದೂ ಅಲ್ಲದೆ, ಅವರ ಮುಂದೆ ದೈನೇಸಿಯಾಗಿ ನಿಂತು ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ, ತಮ್ಮ ಹೋರಾಟದ ಇತಿಹಾಸದ ದಾಖಲೆಗಳನ್ನು ಮನೆಪಾಠ ಒಪ್ಪಿಸಿದಂತೆ ಒಪ್ಪಿಸಿ ಕೃತಾರ್ಥರಾಗಿ ಬಂದಿದ್ದಾರೆ. ಮಾದಿಗರನ್ನು ಈ ಮಟ್ಟಿಗಿನ ಅಸಹಾಯಕತೆಗೆ ದೂಡಿ ಆರ್‌ಎಸ್‌ಎಸ್ ಎಂಬ ಸಂಚುಕೋರರ ಕಾಲ ಬಳಿ ನಿಲ್ಲಿಸಿದ ಕಾರಜೋಳ ಮತ್ತು ಸಂಸದ ನಾರಾಯಣಸ್ವಾಮಿಯವರನ್ನು ಒಂದು ಪ್ರಶ್ನೆ ಕೇಳಬೇಕಿದೆ. ಈ ಕೆಲಸದಿಂದ ನೀವು ಮೀಸಲಾತಿಗೇ ವಿರುದ್ಧವಾಗಿರುವವರ ಅಡಿಯಲ್ಲಿ ಗುಲಾಮಗಿರಿ ಮಾಡುತ್ತಿದ್ದೀರಿ ಮತ್ತು ರಾಜಕೀಯವಾಗಿ ಸಮುದಾಯದ ಹಿತವನ್ನು ಕಾಪಾಡಲು ಯೋಗ್ಯರಲ್ಲ ಎಂದು ಸಾಬೀತುಪಡಿಸಿದಂತಾಗಲಿಲ್ಲವೇ?

ಇಲ್ಲಿ ನಾವು ನಿಜಕ್ಕೂ ಅರ್ಥಮಾಡಿಕೊಳ್ಳಬೇಕಿರುವ ಮತ್ತೊಂದು ಅಂಶವೆಂದರೆ ಇವತ್ತಿನ ಆಡಳಿತ ಪಕ್ಷದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಮುದಾಯದ ಪ್ರತಿನಿಧಿಯಾಗಿ ಯಾವತ್ತೂ ಇರಲಿಲ್ಲ ಮತ್ತು ಉಳಿದಿಲ್ಲ. ಒಳಮೀಸಲಾತಿ ಪರವಾಗಿ ಯಾವತ್ತಿಗೂ ಇರಲಿಲ್ಲ ಎಂಬುದನ್ನೂ ಪದೇಪದೇ ಹೇಳಬಯಸುತ್ತೇನೆ. ಇದಕ್ಕೆ ಮತ್ತೊಂದು ಉದಾಹರಣೆಯೆಂದರೆ, ಆರ್‌ಎಸ್‌ಎಸ್ ರೂಪಿಸಿದ್ದ ಈ ಗುಪ್ತಸಭೆಯಲ್ಲಿ ಒಳಮೀಸಲಾತಿ ಪರ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿರುವ ಕಾರಜೋಳ ಅವರು, ನಾನು ಕೇವಲ ಒಂದು ಸಮುದಾಯದ ಪರ ಮಾತನಾಡುವುದು ತಪ್ಪಾಗುತ್ತದೆ. ಒಳಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಷ್ಟನ್ನು ಬಿಟ್ಟು ಮತ್ತೇನನ್ನೂ ಮಾಡಲಾರೆ ಎಂದು ಹೇಳಿ ಕಳುಹಿಸಿರುವುದೇ ಸಾಕ್ಷಿ.

ಒಟ್ಟಿನಲ್ಲಿ ಒಳಮೀಸಲಾತಿ ಪರವಾದ ನಿಜವಾದ ಎಲ್ಲ ಹೋರಾಟಗಾರರ ಹೋರಾಟದ ಫಲವನ್ನು ಈ ರಾಜಕಾರಣಿಗಳೆಂಬ ವಿವಿಧ ಪಕ್ಷಗಳ ದಲ್ಲಾಳಿಗಳು ತಮ್ಮ ತಮ್ಮ ಹೊಟ್ಟೆ ಬಟ್ಟೆ ತುಂಬಿಸಿಕೊಳ್ಳಲು ಎಷ್ಟು ಬೇಕೋ ಅಷ್ಟು ಬಾಚಿಕೊಂಡು ಹೋಗುತ್ತಿದ್ದಾರಷ್ಟೆ.

ದೇವನೂರರ ಒಡಲಾಳ ಮತ್ತು ಹನುಮಂತಯ್ಯನವರ ದಬ್ಬಳ ಮತ್ತು ದಾರ

ಸಾಹಿತ್ಯ ಲೋಕದ ದಿಗ್ಗಜ ದೇವನೂರ ಮಹಾದೇವ ಕಪೋಲಕಲ್ಪಿತವಾದ ಗಂಡಭೇರುಂಡದ ಕತೆ ಹೇಳಿಕೊಳ್ಳುತ್ತಾ ತಾನು ಒಳಮೀಸಲಾತಿ ಪರವಾಗೂ ಇಲ್ಲ, ಒಳಮೀಸಲಾತಿ ವಿರುದ್ಧವೂ ಇಲ್ಲ ಎನ್ನುತ್ತಲೇ ಮತ್ತೆ ಯಾವುದೋ ದೇಶದಲ್ಲಿ ನಡೆಯುವ ಮಾನವ ದೌರ್ಜನ್ಯದ ವಿರುದ್ಧ ಇಲ್ಲಿ ಪುಟಗಟ್ಟಲೇ ಬರೆಯುತ್ತಿರುತ್ತಾರೆ. ಅಕ್ಷರಗಳನ್ನು ಬಹಳ ಮುತುವರ್ಜಿಯಿಂದ ಮುತ್ತುಗಳಂತೆ ಜೋಡಿಸುತ್ತಿರುತ್ತಾರೆ. ಅದೇ ವೇಳೆಗೆ ಸುಪ್ರೀಂಕೋರ್ಟಿನ ನ್ಯಾಯಾಧೀಶರು ಒಳಮೀಸಲಾತಿ ಸಂವಿಧಾನಬದ್ಧವಾಗಿದೆ. ಒಳಮೀಸಲು ಜಾರಿಗೊಳಿಸಲು ಆಯಾ ರಾಜ್ಯಗಳಿಗೆ ಹಕ್ಕಿದೆ ಎಂದು ಪ್ರತಿಪಾದಿಸಿದಾಗಲೂ ದೇವನೂರರಂತಹವರು ತಮ್ಮ ಒಡಲಾಳದಲ್ಲಿರುವ ಭಯವನ್ನು ಕಿತ್ತೊಗೆದು ಆಚೆಬರುವ ಪ್ರಯತ್ನ ಮಾಡುವುದೇ ಇಲ್ಲ. ಎದೆಗೆ ಬಿದ್ದ ಅಕ್ಷರದ ಮೂಲಕ ಅವರೇ ಹೇಳಿಕೊಂಡಂತೆ ಒಳಮೀಸಲಾತಿ ಪರ ಧ್ವನಿ ಎತ್ತಿದರೆ ಹೊಲೆಯರ ಅವಕೃಪೆಗೂ, ಒಳಮೀಸಲಾತಿ ವಿರುದ್ಧ ನಿಂತರೆ ಮಾದಿಗರ ಸಿಟ್ಟಿಗೂ ಒಳಗಾಗಬೇಕಾದ ಸ್ಥಿತಿ ನನ್ನದು ಎನ್ನುವ ಅವರ ಮನಸ್ಥಿತಿಯಾಚೆಗೆ ಬರುವುದೇ ಇಲ್ಲ. ಸತ್ಯ ಮತ್ತು ವಾಸ್ತವವಾದ – ಸರ್ವರಿಗೂ ಸಮಬಾಳು, ಸರ್ವರಿಗೂ ಸಮಾನತೆ – ಎನ್ನುವ ತತ್ವದ ಮಾತುಗಳಿಗೆ ಬೆಲೆಯೇ ಇಲ್ಲದಂತೆ ಮಾಡಿಬಿಡುತ್ತಾರೆ. ನಾವು ದೇವನೂರರ ಒಳಮೀಸಲಾತಿ ಪರವಾದ ನಿಲುವಿಗಾಗಿ ಇನ್ನಾದರೂ ಕಾಯುತ್ತಾ, ಅವರ ಅಭಿಪ್ರಾಯಕ್ಕಾಗಿ ಅಪೇಕ್ಷಿಸುತ್ತಾ ನಿಲ್ಲದೆ, ಅವರನ್ನು ಅವರ ಪಾಡಿಗೆ ಬಿಟ್ಟು ನಮ್ಮ ದಾರಿಯಲ್ಲಿ ನಾವು ಮುನ್ನಡೆಯಬೇಕಿದೆಯಷ್ಟೇ.

ಒಳಮೀಸಲಾತಿ ಹೋರಾಟದ ಪ್ರತಿಫಲವಾಗಿಯೇ ವಿಧಾನಪರಿಷತ್ ಮತ್ತು ರಾಜ್ಯಸಭಾ ಸ್ಥಾನದ ಅಧಿಕಾರವನ್ನುಂಡ ಎಲ್.ಹನುಮಂತಯ್ಯನವರು ಇದುವರೆಗೂ ಪರಿಷತ್ತಿನಲ್ಲಾಗಲಿ, ರಾಜ್ಯಸಭೆಯಲ್ಲಾಗಲಿ ಒಳಮೀಸಲಾತಿ ಹೋರಾಟಕ್ಕೆ ಜೀವತುಂಬುವ ಪ್ರಯತ್ನವಾಗಿ ಎಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆಂದು ಹುಡುಕಿದರೆ ಉತ್ತರ ಶೂನ್ಯ. ಆದರೆ, ಒಳಮೀಸಲಾತಿ ಹೋರಾಟಗಾರರು ಮತ್ತು ಒಳಮೀಸಲಾತಿ ಪ್ರತಿಫಲವನ್ನುಂಡ ರಾಜಕಾರಣಿಗಳ ನಡುವೆ ಯಾವಾಗಲೂ ಅನೈತಿಕವಾದ ಸೇತುವೆ ಆಗಿರುವವರು ಮಾತ್ರ ಇದೇ ಎಲ್.ಹನುಮಂತಯ್ಯನವರು. ರಾಜಕಾರಣಿಗಳು ಮತ್ತು ಹೋರಾಟಗಾರರ ನಡುವೆ ಜಗಳ, ವೈಮನಸ್ಯ ಏರ್ಪಟ್ಟಾಗಲೆಲ್ಲಾ ರಾಜಿ ಸೂತ್ರ ಏರ್ಪಡಿಸಿ, ಇದೊಂದು ಸಾರಿ ಬಿಟ್ಟುಬಿಡಿ, ಸಾಹೇಬ್ರು ಈ ಸಾರಿ ಖಂಡಿತಾ ಒಳಮೀಸಲಾತಿ ಜಾರಿಗೆ ತಂದೇ ತರ್ತಾರೆ ಎನ್ನುವ ಸಮಾಧಾನಕರ ದಬ್ಬಳ ಹಾಕಿ ಹೋರಾಟಗಾರರು ಮತ್ತು ರಾಜಕಾರಣಿಗಳ ನಡುವೆ ಸಂಧಾನದ ದಾರ ಹಾಕಿ ಹೊಲಿಯುವುದರಲ್ಲೇ ರಾಜ್ಯಸಭೆಗೆ ಹಾರಿದ ಪುಣ್ಯಾತ್ಮರಿವರು. ತಾವು ಅಧಿಕಾರಸ್ಥರಾಗಿದ್ದಾಗಲೂ, ಸ್ವತಃ ಸಾಹಿತಿಗಳಾದ ಇವರ ಸಾಹಿತ್ಯದಲ್ಲೆಲ್ಲೂ ಒಳಮೀಸಲಿನ ಬೆಂಕಿ ಯಾರಿಗೂ ಕಾಣಲೇ ಇಲ್ಲ.

ಒಳಮೀಸಲು ಒತ್ತಾಯ ಏನು: ಪರಿಶಿಷ್ಟರಲ್ಲೇ ಅತಿ ಹಿಂದುಳಿದಿರುವ ಅಸ್ಪೃಶ್ಯ ಸಮುದಾಯಗಳಾದ ಮಾದಿಗರಿಗೆ 6% ಹೊಲೆಯರಿಗೆ 5% ಮತ್ತು ಸ್ಪೃಶ್ಯ ಸಮುದಾಯಕ್ಕೆ ಸೇರಿದ ಕೊ.ಲಂ.ಭೋಗಳಿಗೆ 3% (ಕೊರಮ, ಲಂಬಾಣಿ ಮತ್ತು ಭೋವಿಗಳು) ಮತ್ತು ಇತರರು ಅಂದರೆ ಪರಿಶಿಷ್ಟ ಜಾತಿಯಲ್ಲೇ ಬರುವ ಆದಿವಾಸಿ, ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟುಗಳಿಗೆ1%.

ಇದರಿಂದ ಇದುವರೆಗೂ ಮೀಸಲಾತಿಯ ಸನಿಹಕ್ಕೂ ಬಾರದ ಅದೆಷ್ಟೋ ವಂಚಿತ ಸಣ್ಣಸಣ್ಣ ಸಮುದಾಯಗಳಿಗೂ ಮೀಸಲಾತಿ ದೊರೆಯುವ ಸುವರ್ಣಾವಕಾಶವಿದು. ಈ ಅವಕಾಶದ ಬಗ್ಗೆ ಅಪಸ್ವರವೆತ್ತುತ್ತಿರುವ ಯಾವ ತಕರಾರಿನ ಬಗ್ಗೆಯೂ ನಾನಿಲ್ಲಿ ಖಂಡಿತಾ ಪ್ರಸ್ತಾಪ ಮಾಡಲಾರೆ. ಕಾರಣ, ಫ್ಯಾಸಿಸಂ ಬಗ್ಗೆ ನಾನು ಇತ್ತೀಚೆಗೆ ಒಂದು ಘೋಷಣೆಯನ್ನು ಓದಿದ್ದೆ. ಅದೇನೆಂದರೇ, ಫ್ಯಾಸಿಸಂ ಅನ್ನೋದು ಕೇವಲ ಚರ್ಚೆಗೂ ಅರ್ಹವಲ್ಲದ ದಮನಕಾರಿ ಸಾರ್ವಭೌಮ ಅಹಂಕಾರಿ ಮನೋಭಾವ ಅಷ್ಟೇ. ಫ್ಯಾಸಿಸಂ ಖಂಡಿತಾ ಚರ್ಚೆಗೆ ಅರ್ಹವಲ್ಲ; ಅದನ್ನು ನಾಶ ಮಾಡಬೇಕಷ್ಟೇ. ಹಾಗೆಯೇ ಒಳಮೀಸಲಾತಿ ವಿರೋಧಿ ಧೋರಣೆಯೂ ಕೇವಲ ಫ್ಯಾಸಿಸಂನ ಮತ್ತೊಂದು ಅವತಾರವಷ್ಟೇ. ಒಳಮೀಸಲಾತಿ ವಿರೋಧಿ ಧೋರಣೆ ಅಥವಾ ಮನಸ್ಥಿತಿ ಖಂಡಿತಾ ಚರ್ಚೆಗೆ ಅರ್ಹವಲ್ಲ. ಅದನ್ನು ನಾವು ಕೇವಲ ನಾಶ ಮಾಡಬೇಕಷ್ಟೇ.

ಒಳಮೀಸಲಾತಿ ಭಿಕ್ಷೆಯಲ್ಲಾ, ಹಕ್ಕೆಂದು ಸುಪ್ರೀಂಕೋರ್ಟ್ ಆದಿಯಾಗಿ, ಕರ್ನಾಟಕದ ಖ್ಯಾತ ನ್ಯಾಯವಾದಿಗಳಾದ ರವಿವರ್ಮಕುಮಾರ್, ಡಾ.ಸಿ.ಎಸ್.ದ್ವಾರಕಾನಾಥ್, ಎಸ್.ಬಾಲನ್ ಹಾಗು ನ್ಯಾಯಮೂರ್ತಿಗಳಾದ ಜ.ಗೋಪಾಲಗೌಡ ಮತ್ತು ಜ.ನಾಗಮೋಹನ್ ದಾಸ್ ಮುಂತಾದ ಕಾನೂನು ಪಂಡಿತರೇ ಅಭಿಪ್ರಾಯಪಡುತ್ತಿರುವಾಗ ವಿರೋಧಗಳ ಬಗ್ಗೆ ಮಾತು ಅಥವಾ ಚರ್ಚೆ ಮಾಡೋದೇ ಅಕ್ಷಮ್ಯ ಎಂದು ಭಾವಿಸುತ್ತೇನೆ.

ದೇಶದಲ್ಲಿ ಇದುವರೆಗೂ ಯಾವ ಆಯೋಗದ ವರದಿಯನ್ನೂ ಸಾರ್ವಜನಿಕ ಚರ್ಚೆಗೆ ಇಟ್ಟು ತೀರ್ಮಾನ ತೆಗೆದುಕೊಂಡ ಉದಾಹರಣೆ ಇಲ್ಲ. ಅದು ಸಾಧುವೂ ಅಲ್ಲ ಎಂಬುದನ್ನು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕೆಂದು ವಾದಿಸುವವರಿಗೆ ತಿಳಿಹೇಳಲೂ ಬೇಕಿಲ್ಲ. ಕಾರಣ ನಾನಾಗಲೇ ಹೇಳಿದಂತೆ ಫ್ಯಾಸಿಸಂ ಒಂದು ಚರ್ಚಾವಿಷಯವೇ ಅಲ್ಲ. ಅದು ಕೇವಲ ದಮನಕ್ಕೆ ಮಾತ್ರ ಅರ್ಹವಾದ ಆತಂತವಾದವಷ್ಟೇ.

ಒಳಮೀಸಲು ವಿಚಾರವಾಗಿ ಇನ್ಮುಂದೆ ರಾಜಕಾರಣಿಗಳ ಹಸ್ತಕ್ಷೇಪ ಬೇಕಿಲ್ಲ. ಈ ಹಿಂದಿನಿಂದಲೂ ಇವರು ಮಾಡಿಕೊಂಡು ಬಂದಿರುವುದೇ ಸಾಕಾಗಿದೆ. ಒಳಮೀಸಲಾತಿಯು ಹಕ್ಕಿನ ಹೋರಾಟ. ರಾಜಕಾರಣಿಗಳ ಹಿಡಿತದಿಂದ ದೂರವಿರಲಿ. ಆದರೆ ರಾಜಕೀಯಪ್ರಜ್ಞೆಯ ಭಾಗವಾಗಿರಲಿ.
ಜೈ ಭೀಮ್.

ಬಿ. ಆರ್. ಭಾಸ್ಕರ್ ಪ್ರಸಾದ್


ನೆಲಮಂಗಲದ ಭಾಸ್ಕರ್ ಅವರು ಎರಡು ದಶಕಕ್ಕೂ ಹೆಚ್ಚು ಕಾಲದಿಂದ ದಲಿತ ಚಳವಳಿಯ ಭಾಗವಾಗಿರುವವರು. ಚಲೋ ಉಡುಪಿ ಹೋರಾಟವನ್ನು ಸಂಘಟಿಸಿದ ಪ್ರಮುಖರಲ್ಲೊಬ್ಬರು. ಪ್ರಸ್ತುತ NEWS14 ಎಂಬ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರು.

ಸಂಪಾದಕನ ಟಿಪ್ಪಣಿ

ಒಳಮೀಸಲಾತಿಯ ಪ್ರಶ್ನೆ ಮತ್ತೊಮ್ಮೆ ಚರ್ಚೆಯಲ್ಲಿದೆ. ವಿಶೇಷವಾಗಿ ಮಾದಿಗ ಸಮುದಾಯವು ಇಡೀ ದಕ್ಷಿಣ ಭಾರತದಲ್ಲಿ ಅದಕ್ಕಾಗಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಬೀದಿ ಹೋರಾಟವನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ನ್ಯಾಯಪಥ ಸಂಚಿಕೆಯನ್ನು ಅದರ ಕುರಿತ ವಿಶೇಷ ಸಂಚಿಕೆಯಾಗಿ ರೂಪಿಸಲಿದ್ದೇವೆ. ಅದಕ್ಕೆ ಪೂರ್ವಭಾವಿಯಾಗಿ ಈ ಸಂಚಿಕೆಯಲ್ಲಿ ಭಾಸ್ಕರ್ ಪ್ರಸಾದ್ ಅವರ ದೀರ್ಘ ಲೇಖನವಿದೆ. ನಮ್ಮ ಓದುಗರಿಂದಲೂ ಇದಕ್ಕೆ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತಿದ್ದೇವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬುಲ್ಡೋಝರ್ ಬಳಸಿ ಮನೆ ಧ್ವಂಸ ಪ್ರಕರಣ : ಐದು ಕುಟುಂಬಗಳಿಗೆ 30 ಲಕ್ಷ ರೂ....

0
ನಾಗಾಂವ್‌ ಜಿಲ್ಲೆಯಲ್ಲಿ 2022ರಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ಐದು ಮುಸ್ಲಿಂ ಕುಟುಂಬಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಸರ್ಕಾರ ಧ್ವಂಸಗೊಳಿಸಿತ್ತು. ಇದೀಗ ಮನೆ ಕಳೆದುಕೊಂಡವರಿಗೆ ಪರಿಹಾರವಾಗಿ 30 ಲಕ್ಷ ರೂಪಾಯಿಗಳನ್ನು...