Homeಮುಖಪುಟಜಾತಿವಾದಿ ಹೇಳಿಕೆ ಆರೋಪ: ಎಚ್‌ಸಿಯು ಪ್ರಾಧ್ಯಾಪಕರ ಅಮಾನತಿಗೆ ಮಾನವ ಹಕ್ಕುಗಳ ವೇದಿಕೆ ಆಗ್ರಹ

ಜಾತಿವಾದಿ ಹೇಳಿಕೆ ಆರೋಪ: ಎಚ್‌ಸಿಯು ಪ್ರಾಧ್ಯಾಪಕರ ಅಮಾನತಿಗೆ ಮಾನವ ಹಕ್ಕುಗಳ ವೇದಿಕೆ ಆಗ್ರಹ

- Advertisement -
- Advertisement -

ಹಳೆಯ ವಿದ್ಯಾರ್ಥಿಗಳ ವಿರುದ್ಧ ಜಾತಿವಾದಿ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ (ಎಚ್‌ಸಿಯು) ಸಹಾಯಕ ಪ್ರಾಧ್ಯಾಪಕ ವಿಜಯ್ ರಾಮದಾಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ವೇದಿಕೆಯ (ಎಚ್‌ಆರ್‌ಎಫ್) ಹೈದರಾಬಾದ್ ಘಟಕ ಆಗ್ರಹಿಸಿದೆ.

ವಿಶ್ವವಿದ್ಯಾಲಯದ ತಾರತಮ್ಯ ವಿರೋಧಿ ಘಟಕ (Anti-Discrimination Cell) ನಿಷ್ಕ್ರಿಯವಾಗಿರುವ ಬಗ್ಗೆಯೂ ವೇದಿಕೆ ಕಳವಳ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳು ಸಲ್ಲಿಸುತ್ತಿರುವ ದೂರುಗಳಿಗೆ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿದೆ.

ಪ್ರಾಧ್ಯಾಪಕರು ತಮ್ಮ ಹಳೆಯ ವಿದ್ಯಾರ್ಥಿಯೊಬ್ಬರಿಗೆ ಕಳುಹಿಸಿದ್ದಾರೆ ಎನ್ನಲಾದ ಇಮೇಲ್‌ನಿಂದ ಈ ವಿವಾದ ಆರಂಭವಾಗಿದೆ. ಆ ಇಮೇಲ್‌ನಲ್ಲಿ, ಬಡತನದ ಹಿನ್ನೆಲೆಯಿಂದ ಬಂದವರು ಪಾಕಿಸ್ತಾನ ಕೇಂದ್ರಿತ ಚಿಂತನೆ ಬೆಳೆಸಿಕೊಳ್ಳುತ್ತಾರೆ ಎಂದು ಬರೆದಿರುವುದಲ್ಲದೆ, ವಿದ್ಯಾರ್ಥಿಯೊಬ್ಬನನ್ನು ‘ದಲಿತ ಅಸ್ಪೃಶ್ಯ ಮೂರ್ಖ’ ಎಂದು ಕರೆದಿದ್ದಾರೆ. ಬಿಹಾರ ಮತ್ತು ಜಾರ್ಖಂಡ್‌ನ ವಿದ್ಯಾರ್ಥಿಗಳನ್ನು ‘ಮೂರನೇ ದರ್ಜೆಯ, ಬಡತನದಿಂದ ಕೂಡಿದ ಮೂರ್ಖರು’ ಎಂದೂ ಅವಹೇಳನ ಮಾಡಿದ್ದಾರೆ ಎಂದು ಎಚ್‌ಆರ್‌ಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಾಧ್ಯಾಪಕ ರಾಮದಾಸ್ ಅವರ ಪುಸ್ತಕವೊಂದಕ್ಕೆ ಅಧ್ಯಾಯ ಬರೆಯುತ್ತಿದ್ದ ಶೇಖರ್ ಎಂಬ ವಿದ್ಯಾರ್ಥಿ, ತಾನು ಬರೆದ ಅಧ್ಯಾಯದಲ್ಲಿ ಪ್ರಾಧ್ಯಾಪಕರು ಸೂಚಿಸಿದ ಕೆಲವು ತಿದ್ದುಪಡಿಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ರಾಮದಾಸ್ ಅವರು ಈ ವರ್ಷದ ಏಪ್ರಿಲ್‌ನಲ್ಲಿ ಶೇಖರ್‌ಗೆ ಇಮೇಲ್ ಕಳುಹಿಸಿದ್ದರು ಎಂದು ಎಚ್‌ಆರ್‌ಎಫ್ ತಿಳಿಸಿದೆ. ಪ್ರಸ್ತುತ ಶೇಖರ್ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.

ರಾಮದಾಸ್ ಅವರು ಬ್ಲೂಮ್ಸ್‌ಬರಿ ಪ್ರಕಾಶನಕ್ಕಾಗಿ ವ್ಯವಹಾರ ಇತಿಹಾಸದ ಕುರಿತ ಪುಸ್ತಕವೊಂದನ್ನು ಬರೆಯುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ತಮ್ಮ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ ಹಲವು ಹಳೆಯ ವಿದ್ಯಾರ್ಥಿಗಳಿಗೆ ಅಧ್ಯಾಯಗಳನ್ನು ಬರೆಯುವಂತೆ ಕೇಳಿಕೊಂಡಿದ್ದರು. ಪ್ರಸ್ತುತ ಅವರು ಅಧ್ಯಯನ ಮಾಡುತ್ತಿರುವ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಈ ವಿದ್ಯಾರ್ಥಿಗಳಿಗೆ ರಾಮದಾಸ್ ಶಿಫಾರಸು ಪತ್ರಗಳನ್ನೂ ನೀಡಿದ್ದರು.

ಶೇಖರ್ ಈ ಕುರಿತು ಎಚ್‌ಸಿಯು ಕುಲಪತಿಗೆ ದೂರು ಸಲ್ಲಿಸಿದ ಬಳಿಕ ವಿಚಾರಣೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ರಾಮದಾಸ್ ಅವರು ಕುಮಾರ್ ಎಂಬ ಮತ್ತೊಬ್ಬ ವಿದ್ಯಾರ್ಥಿಗೆ ಇಮೇಲ್ ಕಳುಹಿಸಿ, ಶೇಖರ್‌ಗೆ ನೀಡಿದ್ದ ಶಿಫಾರಸು ಪತ್ರವನ್ನು ಹಿಂಪಡೆಯುವಂತೆ ಹಾಗೂ ಆತನಿಗೆ ದೊರೆತಿದ್ದ ನಾಲ್ಕು ವರ್ಷಗಳ ಪಿಎಚ್‌ಡಿ ವಿದ್ಯಾರ್ಥಿವೇತನವನ್ನು ರದ್ದುಗೊಳಿಸುವಂತೆ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.

ಇದರಿಂದ ಶೇಖರ್‌ಗೆ ಮತ್ತಷ್ಟು ಸಮಸ್ಯೆಯಾಯಿತು. ಈ ಬೆಳವಣಿಗೆಯ ಬೆನ್ನಲ್ಲೇ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯವು ಶೇಖರ್‌ನಿಂದ ವಿವರಣೆ ಕೇಳಿತ್ತು ಎಂದು ಎಚ್‌ಆರ್‌ಎಫ್ ತಿಳಿಸಿದೆ.

ತಾರತಮ್ಯ ವಿರೋಧಿ ಘಟಕ ವಿಚಾರಣೆ ನಡೆಸಿದ ಬಳಿಕ ರಾಮದಾಸ್ ಅವರು ತಮ್ಮ ವಿಭಾಗಕ್ಕೆ ಕ್ಷಮೆಯಾಚಿಸಿದ್ದರು. ಆದರೆ, ಶೇಖರ್‌ಗೆ ಕ್ಷಮೆ ಕೇಳಲು ನಿರಾಕರಿಸಿದ್ದರು. ಈ ಹಂತದಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು ಎಂದು ವೇದಿಕೆ ಆರೋಪಿಸಿದೆ.

ಆದರೆ, ವಿವಾದಕ್ಕೆ ಕಾರಣವಾದ ಇಮೇಲ್‌ಗಳನ್ನು ತಾನು ಕಳುಹಿಸಿಲ್ಲ ಎಂದು ರಾಮದಾಸ್ ಹೇಳಿಕೊಂಡಿದ್ದಾರೆ. ತನ್ನ ಅನುಮತಿಯಿಲ್ಲದೆ ಇಮೇಲ್‌ಗಳನ್ನು ಕಳುಹಿಸಲಾಗಿದೆ ಮತ್ತು ಅವುಗಳನ್ನು ನಕಲಿಯಾಗಿ ಸೃಷ್ಟಿಸಿರುವ ಸಾಧ್ಯತೆಯೂ ಇದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ ಎಂದು ಎಚ್‌ಆರ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ಹಲವು ದಿನಗಳಿಂದ ರಾಮದಾಸ್ ರಜೆಯಲ್ಲಿದ್ದಾರೆ ಎನ್ನಲಾಗಿದೆ.

ತಾನು ಈ ರೀತಿಯ ಹೇಳಿಕೆಗಳನ್ನು ನೀಡಿಲ್ಲವೆಂದಾದರೆ ರಾಮದಾಸ್ ಅವರು ಡೀನ್ ಮತ್ತು ವಿಭಾಗದ ಮುಖ್ಯಸ್ಥರಿಗೆ ಏಕೆ ಕ್ಷಮೆಯಾಚಿಸಿದರು ಎಂಬುದಕ್ಕೆ ವಿವರಣೆ ನೀಡಬೇಕು ಎಂದು ಎಚ್‌ಆರ್‌ಎಫ್ ಆಗ್ರಹಿಸಿದೆ.

ಕಳೆದ ಒಂದು ವಾರದಿಂದ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಕಟ್ಟಡದ ಎದುರು ಕೆಲವು ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ರಾಮದಾಸ್ ಮತ್ತು ಅವರ ನಡೆಗೆ ಬೆಂಬಲ ವ್ಯಕ್ತಪಡಿಸಿ ಇತರ ಕೆಲವು ವಿದ್ಯಾರ್ಥಿಗಳು ವಿಭಾಗದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ನಿಷ್ಕ್ರಿಯವಾಗಿರುವ ತಾರತಮ್ಯ ವಿರೋಧಿ ಘಟಕ

2012ರಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತಾರತಮ್ಯ ವಿರೋಧಿ ಮಾರ್ಗಸೂಚಿಗಳನ್ನು ಹೊರಡಿಸಿದ ಬಳಿಕವೂ ಎಚ್‌ಸಿಯುನಲ್ಲಿ ಕೇವಲ ಐದು ಪ್ರಕರಣಗಳು ಮಾತ್ರ ದಾಖಲಾಗಿವೆ. ಆದರೆ, ನೂರಾರು ವಿದ್ಯಾರ್ಥಿಗಳು ದೂರುಗಳನ್ನು ಸಲ್ಲಿಸಿದ್ದಾರೆ ಎಂದು ಎಚ್‌ಆರ್‌ಎಫ್ ತಿಳಿಸಿದೆ.

ವಿಶ್ವವಿದ್ಯಾಲಯದ ತಾರತಮ್ಯ ವಿರೋಧಿ ಘಟಕ ನಿಷ್ಕ್ರಿಯವಾಗಿದೆ. ವಿದ್ಯಾರ್ಥಿಗಳ ದೂರುಗಳನ್ನು ವಿಭಾಗದ ಮಟ್ಟದಲ್ಲೇ ರಾಜಿ ಮೂಲಕ ಮುಕ್ತಾಯಗೊಳಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಅಂಕಗಳು ಮತ್ತು ಪಿಎಚ್‌ಡಿ ಪ್ರಬಂಧಗಳ ಸಲ್ಲಿಕೆಗೆ ತೊಂದರೆಯಾಗಬಹುದು ಎಂಬ ಭಯದಿಂದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿನ ಜಾತಿ ಆಧಾರಿತ ತಾರತಮ್ಯದ ವಿರುದ್ಧ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ದೂರುಗಳ ಕುರಿತು ಸಮಗ್ರ ತನಿಖೆ ನಡೆಸುವ ಬದಲು ಅವುಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ. ಇದರಿಂದ ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ ಎಂದು ಎಚ್‌ಆರ್‌ಎಫ್ ಆರೋಪಿಸಿದೆ.

“ಇದೇ ಕ್ಯಾಂಪಸ್‌ನಲ್ಲಿ ನಡೆದ ರೋಹಿತ್ ವೇಮುಲ ಪ್ರಕರಣದ ಸಂದರ್ಭದಲ್ಲಿ ಕಂಡುಬಂದ ಸಾಂಸ್ಥಿಕ ವೈಫಲ್ಯಗಳನ್ನೇ ಈಗಿನ ಪರಿಸ್ಥಿತಿ ನೆನಪಿಸುತ್ತಿದೆ” ಎಂದು ಎಚ್‌ಆರ್‌ಎಫ್ ಹೇಳಿದೆ.

ರೋಹಿತ್ ಚಕ್ರವರ್ತಿ ವೇಮುಲ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. 2016ರಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕ್ಯಾಂಪಸ್‌ನಲ್ಲಿನ ವ್ಯವಸ್ಥಿತ ತಾರತಮ್ಯದ ಆರೋಪಗಳನ್ನು ದೇಶದ ಗಮನಕ್ಕೆ ತಂದಿತ್ತು. ಅಲ್ಲದೆ, ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೂ ಕಾರಣವಾಗಿತ್ತು.

ಅಂಬೇಡ್ಕರ್ ವಿದ್ಯಾರ್ಥಿ ಸಂಘದ (ಎಎಸ್‌ಎ) ಮೂಲಕ ಕ್ಯಾಂಪಸ್‌ನಲ್ಲಿ ಜಾತಿ ಅನ್ಯಾಯದ ವಿರುದ್ಧ ರೋಹಿತ್ ಧ್ವನಿ ಎತ್ತಿದ್ದರು. ಇದಕ್ಕೆ ಪ್ರತಿಯಾಗಿ ವಿಶ್ವವಿದ್ಯಾಲಯವು ಅವರಿಗೆ ನೀಡುತ್ತಿದ್ದ ತಿಂಗಳಿಗೆ 25,000 ರೂ.ಗಳ ಶಿಷ್ಯವೇತನವನ್ನು ಸ್ಥಗಿತಗೊಳಿಸಿತ್ತು. ಇದರಿಂದ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಆದರೆ, ಈ ಆರೋಪವನ್ನು ವಿಶ್ವವಿದ್ಯಾಲಯ ನಿರಾಕರಿಸಿತ್ತು. ದಾಖಲೆಗಳ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಶಿಷ್ಯವೇತನ ಪಾವತಿಯಾಗಿರಲಿಲ್ಲ ಎಂದು ಸಮರ್ಥಿಸಿಕೊಂಡಿತ್ತು.

ಎಚ್‌ಆರ್‌ಎಫ್ ಪ್ರಮುಖ ಆಗ್ರಹಗಳು

ಪ್ರಾಧ್ಯಾಪಕ ವಿಜಯ್ ರಾಮದಾಸ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಮತ್ತು ಅವರ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ಮಾನವ ಹಕ್ಕುಗಳ ವೇದಿಕೆ ಆಗ್ರಹಿಸಿದೆ.

ಅಲ್ಲದೆ, ತಾರತಮ್ಯ ವಿರೋಧಿ ಘಟಕವನ್ನು ಬಲಪಡಿಸುವ ನಿಟ್ಟಿನಲ್ಲಿ ಸೂಕ್ತ ನಿಯಮಗಳನ್ನು ರೂಪಿಸಬೇಕು. ಜಾತಿ ಹಾಗೂ ಇತರ ಬಗೆಯ ತಾರತಮ್ಯಗಳ ಕುರಿತು ಬೋಧಕ ಸಿಬ್ಬಂದಿಗೆ ಕಡ್ಡಾಯವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಎಚ್‌ಸಿಯು ಆಡಳಿತವನ್ನು ಒತ್ತಾಯಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಾಕಿಸ್ತಾನದಿಂದ ಹಣ ಪಡೆದ ಆರೋಪ : ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ಗೆ ಅಶುತೋಷ್ ರಾಂಕಾ ಮಾನನಷ್ಟ ನೋಟಿಸ್, 3 ಕೋಟಿ ರೂ. ಪರಿಹಾರ ನೀಡಲು ಆಗ್ರಹ

ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಮಧ್ಯವರ್ತಿಗಳಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರಿಗೆ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಾಯಕ ಅಶುತೋಷ್ ರಾಂಕಾ ಅವರು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ....

ಪಂಜಾಬ್‌| ದಲಿತ ಯುವಕನ ‘ಲಾಕಪ್ ಡೆತ್’ ಆರೋಪ: ನ್ಯಾಯಕ್ಕೆ ಆಗ್ರಹಿಸಿ ಕುಟುಂಬಸ್ಥರ ಪ್ರತಿಭಟನೆ

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಜಿರಾದಲ್ಲಿ 19 ವರ್ಷದ ಜಶನ್‌ದೀಪ್ ಎಂಬ ಯುವಕನ ಸಾವಿನ ಪ್ರಕರಣ ಉದ್ವಿಗ್ನತೆಗೆ ಕಾರಣವಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ಹಿಂಸೆ ನೀಡಿದ್ದರಿಂದಲೇ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿರುವ ಕುಟುಂಬಸ್ಥರು, ಶುಕ್ರವಾರ ಶೆರಾವಾಲಾ...

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬೆಂಬಲ

ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ನಡೆಯಲಿರುವ ಮುಂಬರುವ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆ (ಡಿಲಿಮಿಟೇಶನ್) ಮಸೂದೆಯನ್ನು ಬೆಂಬಲಿಸುವುದಾಗಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ...

ಪಶ್ಚಿಮ ಬಂಗಾಳ: ಎಸ್‌ಐಆರ್ ವಿವಾದದ ಬಳಿಕ ಶಿಶುವಿಗೆ ಜನನ ಪ್ರಮಾಣಪತ್ರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವೇಳೆ ತಂದೆಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಎಂಬ ಕಾರಣಕ್ಕೆ ಜನನ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದ ಪಶ್ಚಿಮ ಬಂಗಾಳ ಸರ್ಕಾರವು, ಅಂತಿಮವಾಗಿ ಎರಡು ತಿಂಗಳ...

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿಗೆ ಖರ್ಗೆ ಮನವಿ; ಡಿಎಂಕೆ, ಎಎಪಿ, ಬಿಜೆಡಿಗೂ ಆಹ್ವಾನ

ನವದೆಹಲಿ: ಮಹಿಳಾ ಮೀಸಲಾತಿ ಜಾರಿ ನೆಪದಲ್ಲಿ ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮತ್ತೆ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂಬ ಸೂಚನೆಗಳ ಬೆನ್ನಲ್ಲೇ, ಸರ್ಕಾರದ ನಡೆಗೆ ಸಂಘಟಿತ...

ನಿಗದಿತ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣ: ಕರ್ನಾಟಕ ಸರ್ಕಾರದಿಂದ ಇಂಡಿಯನ್ ಆಯಿಲ್‌ಗೆ ಕಾರಣ ಕೇಳಿ ನೋಟಿಸ್

ಬೆಂಗಳೂರು ಸಮೀಪದ ದೇವನಗೊಂದಿ ಟರ್ಮಿನಲ್‌ನಲ್ಲಿ ಪೆಟ್ರೋಲ್‌ಗೆ ನಿಗದಿತ ಶೇ. 20 ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುತ್ತಿರುವುದು ತಪಾಸಣೆಯ ವೇಳೆ ಪತ್ತೆಯಾದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಇಂಡಿಯನ್ ಆಯಿಲ್ ಕಾರ್ಪೊರೇಷನ್...

ಅಸ್ಸಾಂನ ಲಖಿಂಪುರದಲ್ಲಿ ತೆರವು ಕಾರ್ಯಾಚರಣೆ ಬಳಿಕವೂ ನಿಲ್ಲದ ಸಂಕಷ್ಟ: ಸೂರು ಕಳೆದುಕೊಂಡು ಬಯಲಿನಲ್ಲಿ ಕಾಲಕಳೆಯುತ್ತಿರುವ 135 ಬಡ ಮುಸ್ಲಿಂ ಕುಟುಂಬಗಳು, ಧರ್ಮದ ಆಧಾರದ ತಾರತಮ್ಯದ ಗಂಭೀರ ಆರೋಪ!

ಲಖಿಂಪುರ (ಅಸ್ಸಾಂ): ಅಸ್ಸಾಂನ ಲಖಿಂಪುರ ಜಿಲ್ಲೆಯ ಕದಮ್ ಕಂದಾಯ ವೃತ್ತದ ವ್ಯಾಪ್ತಿಯ ಬೋಗಿನದಿ ಪ್ರದೇಶದಲ್ಲಿ ಜಿಲ್ಲಾಡಳಿತ ನಡೆಸಿದ ಬೃಹತ್ ತೆರವು ಕಾರ್ಯಾಚರಣೆಯ ಬೆನ್ನಲ್ಲೇ ಸುಮಾರು 135 ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ....

ಪೌರಕಾರ್ಮಿಕರ ಸ್ವಂತ ಮನೆ ಕನಸಿಗೆ ಸರ್ಕಾರದ ಬಲ; ಮೈಸೂರಿನಲ್ಲಿ 158 ಕುಟುಂಬಗಳ ವಸತಿ ಸಮುಚ್ಚಯ ಉದ್ಘಾಟಿಸಿದ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ನಗರದ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಹಗಲಿರುಳು ಶ್ರಮಿಸುವ ಪೌರಕಾರ್ಮಿಕರಿಗೆ ಸ್ವಂತ ಮನೆಯ ಸೌಲಭ್ಯ ಕಲ್ಪಿಸುವುದು ಸರ್ಕಾರದ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಪೌರಕಾರ್ಮಿಕರ ಬದುಕಿನಲ್ಲಿ ಗೌರವ, ಸ್ವಾಭಿಮಾನ ಮತ್ತು ಭದ್ರತೆ ತರುವ...

ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡಲು ನಿರ್ಧರಿಸಿದರೆ ಡಿಎಂಕೆ ತನ್ನ ‘ನಿಲುವು ಬದಲಾವಣೆ’ಗೆ ವಿವರಣೆ ನೀಡಬೇಕು: ಕಾರ್ತಿ ಚಿದಂಬರಂ

ಈ ಹಿಂದೆ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ವಿರೋಧಿಸಿದ್ದ ಡಿಎಂಕೆ, ಇದೀಗ ಅದನ್ನು ಬೆಂಬಲಿಸಲು ನಿರ್ಧರಿಸಿದರೆ ತನ್ನ ನಿಲುವು ಬದಲಾವಣೆಗೆ (ಯು-ಟರ್ನ್) ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಶುಕ್ರವಾರ...

ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷ ನಾಯಕನ ನೇಮಕ ರದ್ದು: 10 ದಿನದಲ್ಲಿ ಹೊಸ ನಿರ್ಧಾರಕ್ಕೆ ಹೈಕೋರ್ಟ್ ಸೂಚನೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ (LoP) ರಿತಬ್ರತ ಬ್ಯಾನರ್ಜಿ ಅವರನ್ನು ನೇಮಿಸಿದ್ದ ಆದೇಶವನ್ನು ಕಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಕೃಷ್ಣ ರಾವ್ ಅವರ ಪೀಠವು ಈ ತೀರ್ಪು ನೀಡಿದ್ದು,...