ಈ ಹಿಂದೆ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ವಿರೋಧಿಸಿದ್ದ ಡಿಎಂಕೆ, ಇದೀಗ ಅದನ್ನು ಬೆಂಬಲಿಸಲು ನಿರ್ಧರಿಸಿದರೆ ತನ್ನ ನಿಲುವು ಬದಲಾವಣೆಗೆ (ಯು-ಟರ್ನ್) ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಶುಕ್ರವಾರ ಆಗ್ರಹಿಸಿದ್ದಾರೆ. ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಅವರು ಈ ಹೇಳಿಕೆ ನೀಡಿದ್ದಾರೆ.
“ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ವಿರೋಧಿಸುತ್ತಿದ್ದವರು ಈಗ ಅದನ್ನು ಬೆಂಬಲಿಸುವ ನಿರ್ಧಾರಕ್ಕೆ ಬರಲು ಕಾರಣವಾದ ಪರಿಸ್ಥಿತಿಗಳು ಮತ್ತು ಪರಿಗಣನೆಗಳು ಯಾವುವು ಎಂಬುದನ್ನು ಅವರೇ ವಿವರಿಸಬೇಕು. ಸಂಪೂರ್ಣವಾಗಿ ನಿಲುವು ಬದಲಿಸಿರುವುದಕ್ಕೆ ಡಿಎಂಕೆ ವಿವರಣೆ ನೀಡಬೇಕಿದೆ” ಎಂದು ಅವರು ಹೇಳಿದ್ದಾರೆ.
‘ನ್ಯಾಯಯುತ ಕ್ಷೇತ್ರ ಮರುವಿಂಗಡಣೆ’ ಎಂಬ ಪರಿಕಲ್ಪನೆಯೇ ತಪ್ಪು ಕಲ್ಪನೆಗೆ ಕಾರಣವಾಗುವಂತಿದೆ ಎಂದು ಕಾರ್ತಿ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
“ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡರೂ ಒಟ್ಟು ಸ್ಥಾನಗಳ ಸಂಖ್ಯೆಯೂ ಮುಖ್ಯವಾಗುತ್ತದೆ. ಒಟ್ಟು ಸ್ಥಾನಗಳ ಸಂಖ್ಯೆಯನ್ನು ಪರಿಗಣಿಸಿದಾಗ ದಕ್ಷಿಣ ಭಾರತದ ರಾಜ್ಯಗಳಿಗೆ ಅನನುಕೂಲವಾಗಲಿದೆ.
“ಇದಲ್ಲದೆ, ಈ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯು ಚುನಾವಣಾ ಕ್ಷೇತ್ರಗಳ ಗಡಿಗಳನ್ನು ರಾಜಕೀಯ ಲಾಭಕ್ಕೆ ಅನುಕೂಲವಾಗುವಂತೆ ಮರುರೂಪಿಸುವ ಅಪಾಯವನ್ನೂ ಹೊಂದಿದೆ. ಇದರಿಂದ ಚುನಾವಣಾ ನಕ್ಷೆಯು ಸಂಪೂರ್ಣವಾಗಿ ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಬದಲಾಗಲಿದೆ. ವಿಶೇಷವಾಗಿ ಉತ್ತರ ಭಾರತ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲಿದೆ” ಎಂದು ಅವರು ಹೇಳಿದ್ದಾರೆ.
ಈ ಪ್ರಕ್ರಿಯೆಯು ತಮಿಳುನಾಡಿನ ಮೇಲೆ ನೇರ ಪರಿಣಾಮ ಬೀರದೇ ಇರಬಹುದು. ಆದರೆ, ದೇಶದಾದ್ಯಂತ ಪರಿಣಾಮ ಬೀರಲಿದ್ದು, ಅದು ಚುನಾವಣಾ ಫಲಿತಾಂಶಗಳ ಮೇಲೆಯೂ ಪ್ರಭಾವ ಬೀರಲಿದೆ ಎಂದು ಕಾರ್ತಿ ಚಿದಂಬರಂ ತಿಳಿಸಿದ್ದಾರೆ.


