Homeಕರ್ನಾಟಕದುಬಾರಿ ಟ್ರಾಫಿಕ್ ದಂಡವೆಂಬ ತುಘಲಕ್ ನಾಮ

ದುಬಾರಿ ಟ್ರಾಫಿಕ್ ದಂಡವೆಂಬ ತುಘಲಕ್ ನಾಮ

- Advertisement -
- Advertisement -

| ಸೋಮಶೇಖರ್ ಚಲ್ಯ |

ದೇಶಾದ್ಯಂತ ಆರ್ಥಿಕ ಹಿಂಜರಿತ ಅಪ್ಪಳಿಸುತ್ತಿದೆ. ಉತ್ಪಾದನಾ ಕ್ಷೇತ್ರ ಸಂಪೂರ್ಣ ಕುಸಿದು ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಕನಿಷ್ಟ ಹತ್ತು ರಾಜ್ಯಗಳಿಗೆ ಪ್ರವಾಹ ಅಪ್ಪಳಿಸಿ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ಅಳಿದುಳಿದ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದೆ ರೈತರು ಹೈರಾಣಾಗಿದ್ದಾರೆ. 5 ರೂಪಾಯಿಯ ಬಿಸ್ಕೆಟ್ ಸಹ ಕೊಂಡುಕೊಳ್ಳಲು ಜನ ಹಿಂದುಮುಂದು ನೋಡುವಂತಹ ಪರಿಸ್ಥಿತಿ ಬಂದಿದೆ. ನಿರುದ್ಯೋಗ ದಿನೇದಿನೇ ಹೆಚ್ಚುತ್ತಿದೆ. ಜನರ ಕೊಳ್ಳುವ ಶಕ್ತಿ ಸಂಪೂರ್ಣ ಇಲ್ಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹಲವು ಕಲ್ಯಾಣ ಕಾರ್ಯಕ್ರಮಗಳ ಮೂಲಕ ಜನರ ಕೈಯಲ್ಲಿ ಹಣ ಚಲಾವಣೆಯಾಗುವಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸರ್ಕಾರ ಆರ್ಥಿಕ ಪುನಶ್ಚೇತನಕ್ಕೆ ಮುಂದಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಮಾಡಿದ್ದೇನು ಗೊತ್ತೆ?

ಜನರ ಜೇಬಿನಲ್ಲಿ ಅಳಿದುಳಿದ ಹಣಕ್ಕೂ ಕೇಂದ್ರ ಸರ್ಕಾರ ಕೈಹಾಕಿ ಲೂಟಿ ಹೊಡೆಯಲು ಮುಂದಾಗಿದೆ. ಮೋಟಾರು ವಾಹನ ಕಾಯ್ದೆಯ ತಿದ್ದುಪಡಿಯ ಹೆಸರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗೆ ಒಂದೇ ಬಾರಿಗೆ ದಂಡವನ್ನು ಹತ್ತಿಪ್ಪತ್ತು ಪಟ್ಟು ಹೆಚ್ಚಳ ಮಾಡಿದೆ. ಹೌದು ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಸುರಕ್ಷವಾಗಿ ವಾಹನ ಚಲಾಯಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆ ನೆಪದಲ್ಲಿ 10-15 ಸಾವಿರದವರೆಗೂ ದಂಡ ವಿಧಿಸುವುದು ಯಾವ ನ್ಯಾಯ? ಒಂದೇ ವ್ಯಕ್ತಿಗೆ 23 ಸಾವಿರದಿಂದ 6 ಲಕ್ಷದವರೆಗೂ ದಂಡ ವಿಧಿಸಿದರೆ ಆ ವ್ಯಕ್ತಿಗಳು ಸುಧಾರಿಸಿಕೊಳ್ಳಲು ಸಾಧ್ಯವೇ? ಡ್ರಿಂಕ್ ಅಂಡ್ ಡ್ರೈವ್ ಗೆ 10 ಸಾವಿರ ದಂಡ ಅಂದರೆ ಒಕೆ ಒಪ್ಪಿಕೊಳ್ಳೋಣ, ಆದರೆ ಹೆಲ್ಮೆಟ್ ಇಲ್ಲದ್ದಕ್ಕೆ, ವಿಮೆ ಇಲ್ಲದ್ದಕ್ಕೆ ಸಾವಿರ ರೂ ದಂಡ ಕಟ್ಟಬೇಕೆಂದರೆ ಹೇಗೆ ಸಾಧ್ಯ?

2018ರಲ್ಲಿ ತೆಲುಗು ಭಾಷೆಯ ‘ಭರತ್ ಅನೆ ನೇನು’ ಸಿನಿಮಾ ತೆರೆಕಂಡಿತು. ವಿದೇಶಿ ಬದುಕಿನ ಅನುಭವ ಪಡೆದು ಭಾರತಕ್ಕೆ ಮರಳುವ ಭರತ್ (ಮಹೇಶ್ ಬಾಬು) ಇಲ್ಲಿನ ಸಂಚಾರದ ರೀತಿನೀತಿಗಳನ್ನು ನೋಡಿ ಬೇಸತ್ತು ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಜಾರಿಗೆ ತರುವುದೇ ಮೋಟಾರು ವಾಹನ ಕಾಯ್ದೆಗೆ ಪರಿಷ್ಕರಣೆ. ಕಡಿಮೆ ಇದ್ದ ಸಂಚಾರ ನಿಯಮ ಉಲ್ಲಂಘನೆ ಶುಲ್ಕವನ್ನು ಅದರ ಹತ್ತು ಹಲವು ಪಟ್ಟು ಹೆಚ್ಚಿಸುತ್ತಾನೆ. ಅಂದರೆ ಜನರು ದಂಡದ ಶುಲ್ಕಕ್ಕೆ ಹೆದರಿ ನಿಯಮ ಪಾಲಿಸುತ್ತಾರೆ ಎಂಬುದು ಆ ಸಿನಿಮಾದ ನಾಯಕ ಭರತ್ ವಿವರಣೆ. ಆ ಸೀನ್ ನೋಡುತ್ತಿದ್ದಂತೆ ಜನ ನಗಲಿಕ್ಕೆ ಶುರು ಮಾಡುತ್ತಾರೆ. ಕಾಮಿಡಿ ಸೀನ್ ಥರ ಇರುವ ಅಷ್ಟು ನಾನ್‍ಸೆನ್ಸ್ ಆಗಿ ಆ ಸಿನಿಮಾ ಇದ್ದರೆ ನಮ್ಮ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಥೇಟ್ ಅದೇ ಮಾದರಿಯಲ್ಲಿ ಮೋಟಾರು ವಾಹನ ಕಾಯ್ದೆ (ಎಂವಿಎ) ಯನ್ನು ಜಾರಿಗೆ ತಂದಿದ್ದಾರೆ!

ಈ ಕಾನೂನು ಜಾರಿಯಾದ ಮೊದಲ ದಿನವೇ ಬೆಂಗಳೂರು ನಗರ ಒಂದರಲ್ಲೇ 42.5 ಲಕ್ಷ ದಂಡದ ಶುಲ್ಕ ವಸೂಲಿ ಮಾಡಲಾಗಿದ್ದು, ಒಂದು ವಾರದಲ್ಲಿ 1.10 ಕೋಟಿ ದಂಡವನ್ನು ಸಂಗ್ರಹಿಸಲಾಗಿದೆ. ಜನರು ದಂಡದ ಮೊತ್ತವನ್ನು ಭರಿಸಲಾಗದೆ ಹೈರಾಣಾಗಿದ್ದು, ಆಕ್ರೋಶಗೊಂಡು ಸಂಚಾರಿ ಪೊಲೀಸರೊಂದಿಗೆ ಜಗಳಕ್ಕಿಳಿಯುತ್ತಿದ್ದಾರೆ. ಆ ಜಗಳವನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದರೆ ಸಾವಿರ ಸಾವಿರ ಷೇರ್ ಆಗುತ್ತಿವೆ. ಸೃಜನಶೀಲ್ ಟ್ರೋಲ್‍ಗಳು ಮುಗಿಲುಮುಟ್ಟಿವೆ. ಅಲ್ಲಿಗೆ ಜನರ ಕೋಪವೂ ತಣಿಯುತ್ತಿದೆಯೇ ಹೊರತು ಇದೊಂದು ಹೋರಾಟವಾಗುವ, ಚಳವಳಿಯಾಗುವ ಲಕ್ಷಣಗಳಿಲ್ಲ. ಆದರೆ ಈ ರೀತಿಯಲ್ಲಿ ದಂಡ ವಿಧಿಸುವುದರಿಂದ ಜನರು ನಿಯಮವನ್ನು ಪಾಲಿಸುತ್ತಾರೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲು ಇದೊಂದೇ ಮಾರ್ಗವೇ? ಬಹುಶಃ ಇದೂ ಒಂದು ಮಾರ್ಗವಿರಬಹುದು. ಆದರೆ ಇಂತಹ ಕಾನೂನುಗಳನ್ನು ಜಾರಿ ಮಾಡುವ ಮುನ್ನ ಸರ್ಕಾರಗಳು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ.

ಪ್ರತಿವರ್ಷ 1.50 ಲಕ್ಷ ಜನರು ರಸ್ತೆ ಅಪಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಜನರ ಸಾವಿನ ಬಗ್ಗೆ ನಿಮಗೆ ಚಿಂತೆ ಇಲ್ಲವೇ? ಹಾಗಾಗಿ ದಂಡ ಹೆಚ್ಚಿಸಿದ್ದೇವೆ ಎಂಬುದು ಅವರ ಪ್ರಶ್ನೆ. ನಿಯಮ ಉಲ್ಲಂಘನೆಗೆ ದಂಡ ವಿಧಿಸುವುದರಿಂದ ಜನರನ್ನು ಪ್ರಾಣಾಪಾಯದಿಂದ ರಕ್ಷಿಸಿಬಿಡಬಹುದು ಎಂಬುದು ಸುಳ್ಳು. ಇಂದಿಗೂ ದೇಶದ ಶೇ.80ಕ್ಕೂ ಹೆಚ್ಚು ರಸ್ತೆಗಳು ಗುಂಡಿ ಬಿದ್ದಿವೆ. ಬಹಳ ಕೆಟ್ಟ ಪರಿಸ್ಥಿತಿಯಲ್ಲಿವೆ. ರಸ್ತೆಗಳ ತಿರುವುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ರಸ್ತೆಗಳ ಮಧ್ಯೆ ಹಾಕಲಾಗಿರುವ ವೇಗ ನಿಯಂತ್ರಕ(ಹಂಪ್)ಗಳಂತೂ ರಾತ್ರಿಯ ವೇಳೆ ಇರಲಿ ಬಿರುಬಿಸಿಲಿರುವ ಮಧ್ಯಾಹ್ನದ ವೇಳೆಯೇ ಕಾಣುವುದಿಲ್ಲ. ಇನ್ನೂ ಹಲವಾರು ರಸ್ತೆಗಳ ಡಾಂಬರನ್ನೇ ಕಂಡಿಲ್ಲ. ರಸ್ತೆಗಳಲ್ಲಿ ಅಳವಡಿಸಲಾದ ಸಿಗ್ನಲ್‍ಗಳಂತೂ ಬಹುತೇಕ ಪಟ್ಟಣಗಳಲ್ಲಿ ಕೆಲಸಕ್ಕೆ ಬಾರದಂತಾಗಿವೆ. ಈ ಅಧ್ವಾನಗಳನ್ನು ಕುರಿತೇ ಮೈಸೂರಿನ ಖ್ಯಾತ ಕಲಾವಿದ ಬಾದಲ್ ನಂಜುಂಡಸ್ವಾಮಿ ಬೆಂಗಳೂರಿನಲ್ಲಿ ಗಗನಯಾತ್ರಿ ರೀತಿ ಮಾಡಿದ ವಿಡಿಯೋ ಕೋಟ್ಯಾಂತರ ಜನಕ್ಕೆ ತಲುಪಿ ಮೆಚ್ಚುಗೆ ಗಳಿಸಿತ್ತು. ಜೊತೆಜೊತೆಗೆ ಸರ್ಕಾರಗಳಿಗೆ ಬಿಸಿಮುಟ್ಟಿಸಿತ್ತು.

ಅಡ್ಡಾದಿಡ್ಡಿಯಾಗಿ ನಿರ್ಮಿಸಲಾಗಿರುವ ರಸ್ತೆಗಳಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ವಾಹನಗಳ ಪಾರ್ಕಿಂಗ್ ಮಾಡಲು ಪಾರ್ಕಿಂಗ್ ವ್ಯವಸ್ಥೆಯೇ ಬಹುತೇಕ ವಲಯಗಳಲಿಲ್ಲ. ಎಲ್ಲಿ ನೋಡಿದರೂ ‘ನೋ ಪಾರ್ಕಿಂಗ್’ ಬೋರ್ಡುಗಳು ರಾರಾಜಿಸುತ್ತಿದ್ದು, ಜನರು ಪಾರ್ಕಿಂಗ್‍ಗಾಗಿಯೇ ಅಲೆದಾಡುತ್ತಿದ್ದಾರೆ. ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಬೇಕಾದ ಪೊಲೀಸರು ಎಲ್ಲೆಂದರಲ್ಲಿ ನೋ ಪಾರ್ಕಿಂಗ್ ಬೋರ್ಡ್‍ಗಳನ್ನು ನಿಲ್ಲಿಸಿ, ಜನರಿಂದ ದಂಡದ ಸುಲಿಗೆ ಮಾಡಲು ಮುಂದಾಗಿದ್ದಾರೆ. ದಂಡದ ಮೊತ್ತ ಹೆಚ್ಚಾದ ಮೇಲಂತೂ ಎಲ್ಲಾ ರಸ್ತೆಗಳಲ್ಲೂ ಪೊಲೀಸರ ದಂಡು ದಂಡವಸೂಲಿಯ ಕಾರ್ಯಾಚರಣೆಯಲ್ಲಿಯೇ ನಿರತವಾಗಿದೆ.

ಇಡೀ ವ್ಯವಸ್ಥೆಯೇ ಭ್ರಷ್ಟರ ಸಂತೆಯಾಗಿರುವ ಸಂದರ್ಭದಲ್ಲಿ ಡ್ರೈವಿಂಗ್ ಲೈಸನ್ಸ್(ಡಿಎಲ್), ವಾಹನ ಇನ್ಸುರೆನ್ಸ್ ಮಾಡಿಸಲು ಸರ್ಕಾರಿ ಶುಲ್ಕಕ್ಕಿಂತ ಐದಾರು ಪಟ್ಟು ಹೆಚ್ಚು ಲಂಚವನ್ನೇ ಕೊಡಬೇಕು. ಆ ಪ್ರಮಾಣದ ಲಂಚವನ್ನು ಕೊಡಲಾಗದೆ ಹಲವಾರು ಜನರು ಡಿಎಲ್, ಇನ್ಸುರೆನ್ಸ್‍ಗಳನ್ನು ಮಾಡಿಸದೇ ಉಳಿದ್ದಾರೆ. ಹಾಗಾಗಿ ಪ್ರಾದೇಶಿಕ ಸಾರಿಕೆ ಕಚೇರಿ (ಆರ್‍ಟಿಓ)ಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನರಿಗೆ ಪರವಾನಗಿಗಳು ಸುಲಭವಾಗಿ ಸಿಗುವಂತೆ ಮಾಡಬೇಕಾದ ಕರ್ತವ್ಯ ಸರ್ಕಾರಗಳದ್ದು, ಆದರೆ ಅವು ತಮ್ಮ ಕರ್ತವ್ಯಗಳನ್ನು ನಿರ್ವಹಿಸದೇ ಜನರ ಮೇಲೆ ಸವಾರಿ ಮಾಡುತ್ತಿವೆ.

ಇಷ್ಟೆಲ್ಲಾ ಸಮಸ್ಯೆಗಳು ರಸ್ತೆಗಳಲ್ಲಿರುವಾಗ ಜನರಿಗೆ ದಂಡವಿಧಿಸುವುದರಿಂದ ಜನರ ಪ್ರಾಣ ಕಾಪಾಡಲು ಸಾಧ್ಯವೇ? ಇನ್ನು ಈ ಹೊಸ ಕಾಯ್ದೆಯನ್ನು ಜಾರಿಗೊಳಿಸುವ ವಿವೇಚನೆಯನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ. ಹಾಗಾಗಿಯೇ ಗೋವಾದ ಸಾರಿಗೆ ಸಚಿವ ಮೌವಿನ್ ಗೊಡಿನ್ಹೋರವರು ಗೋವಾ ರಾಜ್ಯದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ಸರಿಪಡಿಸಿ ನಂತರದಲ್ಲಿ ಎಂವಿಎ ನಿಯಮಗಳನ್ನು ಜಾರಿ ಮಾಡುವುದಾಗಿ ಘೋಷಿಸಿ, 2020ರ ಜನವರಿಯವರೆಗೆ ಕಾಲಾವಕಾಶ ಕೇಳಿದ್ದಾರೆ. ಇದು ಒಬ್ಬ ಸಚಿವನಿಗಿರಬೇಕಾದ ಸಾಮಾನ್ಯ ಜ್ಞಾನ. ಆದರೆ ಈ ಜ್ಞಾನ ನಿತಿನ್ ಗಡ್ಕರಿಯವರಿಗೂ, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಇದ್ದಂತಿಲ್ಲ.

ಇನ್ನು ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತೆಲಂಗಾಣ, ಚತ್ತೀಸ್‍ಘಡ, ಕೇರಳ, ಓಡಿಸ್ಸಾ ಸರ್ಕಾರಗಳು ನಾವು ಜನಸಾಮಾನ್ಯರ ಹಿತರಕ್ಷಣೆಯ ದೃಷ್ಟಿಯಿಂದ ಈ ನಿಯಮಗಳನ್ನು ಜಾರಿಗೆ ತರುವುದಿಲ್ಲ ಎಂದು ಘಂಟಾಘೋಷವಾಗಿ ಸಾರಿವೆ. ಜನಸಾಮಾನ್ಯರು ದುಬಾರಿ ದಂಡದ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಳ್ವಿಕೆಯಲ್ಲಿರುವ ಮೋದಿಯವರ ತವರು ರಾಜ್ಯ ಗುಜರಾತ್‍ನಲ್ಲಿಯೇ ಕೇಂದ್ರ ಸರ್ಕಾರ ಘೋಷಿಸಿರುವ ದಂಡ ಮೊತ್ತಗಳಲ್ಲಿ ಅರ್ಧದಷ್ಟನ್ನು ಇಳಿಸುತ್ತೇವೆಂದು ಹೇಳಿದ್ದಾರೆ. ಇದು ಸಹ ದೊಡ್ಡ ಅನ್ಯಾಯವೇ. ಹೇಗೆಂದರೆ 100 ರೂ ಇದ್ದ ದಂಡವನ್ನು ಕೇಂದ್ರ 1000ಕ್ಕೆ ಏರಿಸಿದರೆ ನಂತರ ಅದರ ಅರ್ಧ ಇಳಿಸಿ 500 ನಿಗದಿ ಮಾಡುವುದು ಲೂಟಿಯಲ್ಲವೇ? ಹೋಗಲಿ ಬಿಡಿ ಅಷ್ಟಾದರೂ ಮಾಡಿದರಲ್ಲ ಎಂದು ಜನ ಸುಮ್ಮನಾಗುತ್ತಿದ್ದಾರೆ.

ಇನ್ನು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಸೆ.9ರಂದು ದಂಡದ ಅರ್ಧದಷ್ಟನ್ನು ಇಳಿಸುವುದಾಗಿ ಹೇಳಿದ್ದರು. ಒಂದು ವಾರ ಕಳೆದರೂ ಇನ್ನೂ ಟ್ರಾಫಿಕ್ ದಂಡ ಮಾತ್ರ ಕಡಿಮೆಯಾಗಿಲ್ಲ. ಈ ಕುರಿತು ಬೆಂಗಳೂರು ಕಮಿಷನರ್ ಭಾಸ್ಕರ್‍ರಾವ್‍ರವರು ನಮಗೆ ಆ ರೀತಿಯ ಯಾವುದೇ ಆದೇಶ ಬಂದಿಲ್ಲ ಎಂದಿದ್ದಾರೆ. ಒಬ್ಬ ಮುಖ್ಯಮಂತ್ರಿ ಮಾತಿಗೂ ಬೆಲೆ ಇಲ್ಲ ಅಂದರೆ ಯಡಿಯೂರಪ್ಪನವರಿನ್ನು ಬಿಜೆಪಿಯ ಹೈಕಮಾಂಡ್ ಹೇಳಿದಂತೆಯೇ ಕೇಳಿಕೊಂಡು ಬಿದ್ದಿದ್ದಾರೆ ಎಂದರ್ಥ ಅಲ್ಲವೇ? ಇದನ್ನು ತನ್ನ ರಾಜ್ಯದ ಪ್ರಜೆಗಳ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರದ ನೀತಿಯೊಂದನ್ನು ಅವಕಾಶವಿದ್ದರೂ ಸಹ ತಡೆಹಿಡಿಯುವಷ್ಟು ಅಧಿಕಾರವಿಲ್ಲದೇ ಗುಲಾಮಿ ಸರ್ಕಾರ ಅನ್ನದೇ ವಿಧಿಯಿಲ್ಲ. ಮುಖ್ಯಮಂತ್ರಿಗಳು ದಂಡ ಕಡಿಮೆ ಮಾಡುವ ಮಾತನ್ನಾಡಿದ್ದಾರೆ ಅಂತ ಜನ ಸ್ವಲ್ಪ ತಣ್ಣಗಾಗಿ ಕಾಯುತ್ತಾ ಕೂತು ದಿನಗಳು ಉರುಳಿದಂತೆ ಎಲ್ಲವೂ ತಣ್ಣಗಾಗುತ್ತೆ. ಆಗ ಜನ ಎಲ್ಲಾ ಮರೆತು ದುಬಾರಿ ದಂಡಕ್ಕೆ ಒಗ್ಗಿ ಹೋಗಿಬಿಡುತ್ತಾರೆ ಎಂಬ ಹುನ್ನಾದರಿಂದಲೂ ಜನರ ಸದ್ಯದ ಆಕ್ರೋಶ ತಗ್ಗಿಸಲು ಯಡಿಯೂರಪ್ಪ ಹೀಗೆ ಹೇಳಿದ್ದರೂ ಅಚ್ಚರಿಯಿಲ್ಲ. ಹೀಗಿರುವಾಗ ಯಡಿಯೂರಪ್ಪನಿಂದ ಜನರು ದಂಡ ವಿನಾಯತಿಯನ್ನು ನಿರೀಕ್ಷಿಸುವುದು ಬತ್ತಿಹೋದ ಬಾವಿಗೆ ಬಿಂದಿಗೆ ಬಿಟ್ಟು ನೀರಿಗಾಗಿ ಕಾದುಕುಳಿತಂತಾಗಿದೆ.

ದಂಡ ಹಾಕುವ ನೈತಿಕತೆ ಸರ್ಕಾರಕ್ಕೆ ಇದೆಯೇ?

ಸರ್ಕಾರಕ್ಕೆ ನಿಜಕ್ಕೂ ರಸ್ತೆ ನಿಯಮಗಳನ್ನು ಪಾಲಿಸಬೇಕು, ಅಪಘಾತಗಳನ್ನು ತಡೆಗಟ್ಟಬೇಕು ಎಂಬ ನೈಜ ಕಾಳಜಿಯಿದ್ದರೆ, ಅವರು ಮೊದಲು ಈ ಸಮಸ್ಯೆಯ ಮೂಲಬೇರುಗಳನ್ನು ಶೋಧಿಸಬೇಕಿದೆ. ಇಂದು ಬಹುತೇಕ ಅಪಘಾತಗಳು ನಗರಗಳಲ್ಲಿ, ಹಾಳಾದ ರಸ್ತೆಗಳಲ್ಲಿ ಸಂಭವಿಸುತ್ತಿವೆ. ಅಂದರೆ ನಗರಗಳಲ್ಲಿ ದಟ್ಟಣೆ ಹೆಚ್ಚಾದಷ್ಟು ನಿಯಮ ಉಲ್ಲಂಘನೆಗಳು, ಅಪಘಾತಗಳ ಜೊತೆಗೆ ಮಾಲಿನ್ಯವೂ ಹೆಚ್ಚಾಗುತ್ತಿದೆ. ಹಾಗಾಗಿ ಸರ್ಕಾರ ತನ್ನ ಅಭಿವೃದ್ಧಿ ಮಾದರಿ/ನೀತಿಗಳನ್ನು ಬದಲಿಸಿ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ವಿಕೇಂದ್ರೀಕೃತವಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ ಮತ್ತು ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕಿದೆ. ಆಗ ಬಹುದೊಡ್ಡ ಸಮಸ್ಯೆ ನಗರಗಳಿಗೆ ವಲಸೆ ತಪ್ಪುತ್ತದೆ. ರಸ್ತೆಗಳನ್ನು ಸರಿಪಡಿಸಿದ ನಂತರವಷ್ಟೇ ಸರ್ಕಾರಕ್ಕೂ ದಂಡ ವಿಧಿಸುವ ನೈತಿಕತೆ ಬರುತ್ತದೆ ಅಲ್ಲವೇ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...