Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆನಿವೇದನೆ: ದಣಿವರಿಯದ ಜ್ಞಾನ ಯಾತ್ರೆಯ ಕಥೆ

ನಿವೇದನೆ: ದಣಿವರಿಯದ ಜ್ಞಾನ ಯಾತ್ರೆಯ ಕಥೆ

- Advertisement -
ನಿವೇದನೆ
(ಧರ್ಮಾನಂದ ಕೊಸಾಂಬಿ ಆತ್ಮಕಥನ)
ಧರ್ಮಾನಂದ ಕೊಸಾಂಬಿ
ಇಂಗ್ಲೀಷಿಗೆ: ಮೀರಾ ಕೊಸಾಂಬಿ
ಕನ್ನಡಕ್ಕೆ: ಡಾ. ಗೀತಾ ಶೆಣೈ
ನವಕರ್ನಾಟಕ ಪ್ರಕಾಶನ, ಬೆಂಗಳೂರು, 2016
ಕನ್ನಡದಲ್ಲಿ ಆತ್ಮಕಥೆ ಮತ್ತು ಜೀವನ ಚರಿತ್ರೆಗಳ ಓದು ಅಪಾರವಾಗಿದ್ದರೂ, ಗಂಭೀರ ಸಾಹಿತ್ಯದ ಚರ್ಚೆಯ ಸಂದರ್ಭದಲ್ಲಿ ಇವುಗಳನ್ನು ಅಲಕ್ಷಿಸಲಾಗುತ್ತದೆ. ಆತ್ಮಕಥೆ, ಜೀವನ ಚರಿತ್ರೆಯಂತಹ ಬರಹಗಳು ವ್ಯಕ್ತಿಗಳ ವೈಯಕ್ತಿಕ, ಇಲ್ಲವೆ ಖಾಸಗಿ ಸಂಗತಿಗಳ ಕಂತೆ ಎಂಬ ನಂಬಿಕೆಯೂ ಇದಕ್ಕೆ ಕಾರಣವಿರಬಹುದು. ಆದರೆ, ಯಾವುದೇ ಭಾಷೆಯ ಸೃಜನಶೀಲ ಸಾಹಿತ್ಯದ ವೈವಿಧ್ಯವನ್ನು ಆತ್ಮಕಥೆ ಮತ್ತು ಜೀವನ ಚರಿತ್ರೆಗಳು ಗಮನಾರ್ಹಗೊಳಿಸುತ್ತಾ ಬಂದಿವೆ. ಇತ್ತೀಚಿಗೆ ನಡೆಯುತ್ತಿರುವ ಆತ್ಮಕಥೆಗಳ ಕುರಿತ ಚರ್ಚೆ ಆಧುನಿಕೋತ್ತರ ಸಾಹಿತ್ಯ ಮೀಮಾಂಸೆಯ ಸಾಧ್ಯತೆಗಳನ್ನು ವಿಸ್ತರಿಸುತ್ತಿದೆ. ಆತ್ಮಕಥೆ ಮತ್ತು ಜೀವನ ಚರಿತ್ರೆಗಳು ವ್ಯಕ್ತಿಗತ ವಿವರಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವ್ಯಕ್ತಿ ಮತ್ತು ಅವನು ಬದುಕಿದ್ದ ಕಾಲಘಟ್ಟದ ಅನೇಕ ಮಹತ್ವದ ಸಂಗತಿಗಳಿಗೆ ಆತ್ಮಕಥೆಗಳು ಸಾಕ್ಷ್ಯ ಒದಗಿಸುತ್ತವೆ. ವ್ಯಕ್ತಿಯೊಬ್ಬನ ಅನೇಕ ಖಾಸಗಿ ವಿಚಾರಗಳು ಆತ ಬದುಕಿದ್ದ ಚಾರಿತ್ರಿಕ ಕಾಲಘಟ್ಟದ ಉತ್ಪನ್ನಗಳೇ ಆಗಿರುವ ಕಾರಣ ಅವು ಕೇವಲ ಸ್ವಗತಗಳು ಮಾತ್ರವಾಗಿರುವುದಿಲ್ಲ. ಮತ್ತು ಈ ಆತ್ಮಕಥನಗಳು ಕೇವಲ ವ್ಯಕ್ತಿಯೊಬ್ಬನ ಅನುಭವಗಳ ದಾಖಲೆ ಮಾತ್ರವಲ್ಲ. ಗಾಂಧೀಜಿಯ `ನನ್ನ ಸತ್ಯಾನ್ವೇóಣೆಯ ಕಥೆ’ ಕಥನವು ಕೇವಲ ಭಾರತದ ಗಡಿಯೊಳಗಿನ ಅನುಭವಗಳ ಅಭಿವ್ಯಕ್ತಿ ಮಾತ್ರವಲ್ಲ. ಅಮೃತಾ ಪ್ರೀತಮ್ ಅವರ `ರಸೀದಿ ತಿಕೇಟ್’ ಕೋಟ್ಯಾಂತರ ದಿಟ್ಟ ಹೆಣ್ಣುಗಳ ಕಥೆಯಾಗಿ ಸಾಮಾಜೀಕರಣಗೊಂಡು ಬಿಡುತ್ತದೆ. ಹಾಗಾಗಿ ಈ ಕಥನಗಳು ಕಾಲ ದೇಶಗಳನ್ನು ಮೀರಿ ವಿಭಿನ್ನ ಜನಾಂಗ ಮತ್ತು ಸಮುದಾಯಗಳ ಪ್ರಜ್ಞೆಯ ಭಾಗವಾಗಿಬಿಡುತ್ತವೆ. ವೈಯಕ್ತಿಕ ಇಲ್ಲವೆ ಖಾಸಗಿ ಅನುಭವಗಳ ಹಂಚಿಕೊಳ್ಳುವಿಕೆಯು ಹೀಗೆ ದೇಶಕಾಲಗಳನ್ನು ಏಕತ್ರಗೊಳಿಸಿಬಿಡುತ್ತದೆ. ಯಾವುದೋ ದೇಶದ ಮ್ಯಾಕ್ಸಿಂ ಗೋರ್ಕಿ, ಟಾಲ್‍ಸ್ಟಾಯ್, ಅಚಿಬೆ, ಚೆಗುವೆರಾ ನಮ್ಮವರೇ ಆಗಿಬಿಡುತ್ತಾರೆ. ವ್ಯಕ್ತಿಯ ಅನುಭವದ ಕಥನಗಳಗೆ ಹೀಗೆ ಜನಾಂಗ ಮತ್ತು ಸಮುದಾಯಗಳನ್ನು ಬೆಸೆದುಬಿಡುವ ಮಾಂತ್ರಿಕ ಗುಣವಿದೆ. ಈ ಕಾರಣಕ್ಕಾಗಿ ಆತ್ಮಕಥಾನಕಗಳು ವ್ಯಕ್ತಿಗತ ವಿವರಗಳ ಹಂಗಿನಿಂದ ಬಿಡುಗಡೆಗೊಂಡು ಸಮಕಾಲೀನ ಚರಿತ್ರೆಯ ನಿರೂಪಣೆಗಳಾಗಿ ಬಿಡುತ್ತವೆ. `ನನ್ನ ಬಾಲ್ಯ’ `ನನ್ನ ವಿಶ್ವವಿದ್ಯಾಲಯಗಳು’ ಮತ್ತು `ಜನರ ನಡುವೆ’ ಎಂಬ ಮೂರು ಸಂಪುಟಗಳಲ್ಲಿರುವ ಮ್ಯಾಕ್ಸಿಂ ಗೋರ್ಕಿಯ ಆತ್ಮಕಥನವು ಹೀಗೆ ಕಾಲ ದೇಶಗಳ ಹಂಗನ್ನು ತೊರೆದು ಆಯಾ ಜನಾಂಗಗಳ ಅನುಭವಗಳ ಕಥನವೂ ಆಗಿಬಿಡುತ್ತದೆ. ಧರ್ಮಾನಂದ ಕೊಸಾಂಬಿಯವರ ‘ನಿವೇದನೆ’ ಆತ್ಮಕಥನ ಇಂತಹುದ್ದೇ ಒಂದು ಅಪರೂಪದ ಚಾರಿತ್ರಿಕ ದಾಖಲೆಯಾಗಿದೆ.
ಧರ್ಮಾನಂದ ಕೊಸಾಂಬಿಯವರು ಖ್ಯಾತ ವಿಜ್ಞಾನಿ, ಮಾಕ್ರ್ಸವಾದಿ ಇತಿಹಾಸಕಾರ ದಾಮೋದರ್ ಧರ್ಮಾನಂದ್ ಕೊಸಾಂಬಿಯವರು (ಡಿ ಡಿ ಕೊಸಾಂಬಿ) ತಂದೆ. ಈ ಇಬ್ಬರೂ ಇಂಡಿಯಾದ ಸಾರಸ್ವತ ಜಗತ್ತಿನ ಬೌದ್ಧಿಕ ಜೀನಿಯಸ್‍ಗಳು. ಸಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಭಾರತದ ಶೈಕ್ಷಣಿಕ ವಲಯವನ್ನು ತಂದೆ ಮಕ್ಕಳಿಬ್ಬರೂ ತಮ್ಮ ಅಗಾಧ ಬೌದ್ಧಿಕ ಪರಿಶ್ರಮದಿಂದ ವಿಸ್ತರಿಸುತ್ತಲೇ ಬಂದಿದ್ದಾರೆ. ಧರ್ಮಾನಂದ ಕೊಸಾಂಬಿ ಗೋವಾದ ಸಾಂಖವಾಳದಲ್ಲಿ 1876 ಅಕ್ಟೋಬರ್ 9ರಂದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ. ಬಾಲ್ಯದ ಅನಾರೊಗ್ಯ ಮತ್ತು ವ್ಯಾಕುಲತೆಯನ್ನು ಅವರು ಸಂತ ತುಕಾರಾಮ ಮತ್ತು ಬುದ್ಧನ ಚಿಂತನೆಗಳನ್ನು ಅಧ್ಯಯನ ಮಾಡುವ ಮೂಲಕ ನೀಗಿಸಿಕೊಳ್ಳಲು ನೋಡುತ್ತಾರೆ. ಧರ್ಮಾನಂದ ಅವರು ವೈಯಕ್ತಿಕ ಕಾರಣಗಳಿಗಾಗಿ ಕೈಗೊಂಡ ಅಧ್ಯಯನದ ಆಸಕ್ತಿ ಮುಂದೆ ಅವರನ್ನು ಜಗತ್ತಿನ ಶ್ರೇಷ್ಠ ಚಿಂತಕರ ಸಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಕೊಂಕಣಿ ಮಾತೃಭಾಷೆಯಾದರೂ, ಇಂಡಿಯಾವನ್ನೂ ಒಳಗೊಂಡಂತೆ ಜಗತ್ತಿನ ಅನೇಕ ಭಾಷೆಗಳನ್ನು ಕಲಿತ ಧರ್ಮಾನಂದರು ಮರಾಠಿಯಲ್ಲಿ ಬರೆದದ್ದೇ ಹೆಚ್ಚು. ಬಾಲ್ಯದಲ್ಲಿಯೇ ಇಂಡಿಯಾದ ಜಾತಿ ಅಸಮಾನತೆ ಮತ್ತು ಸಾಮಾಜಿಕ ಪಿಡುಗುಗಳಿಂದ ರೋಸಿ ಹೋದ ಧರ್ಮಾನಂದ್ ಬುದ್ಧನ ಚಿಂತನೆಗಳ ಕಡೆಗೆ ನಡೆದು ಹೋದರು.
`ನಿವೇದನೆ’ ಧರ್ಮಾನಂದರ ಬದುಕಿನ 1910 ರಿಂದ 1931ರವರೆಗಿನ ವಿವರಗಳನ್ನು ಒಳಗೊಂಡಿದೆ. ಗೋವೆಯ `ಭಾರತ’ ಎಂಬ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಈ ಆತ್ಮಕಥೆಯನ್ನು ಧರ್ಮಾನಂದರ ಮೊಮ್ಮಗಳು ಮೀರಾ ಕೊಸಾಂಬಿ ಮರಾಠಿಯಿಂದ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೆ. ಹದಿನೆಂಟು ಅಧ್ಯಾಯಗಳ ಈ ಪುಸ್ತಕವನ್ನು ಗೀತಾಶೆಣೈ ಕನ್ನಡಕ್ಕೆ ಅನುವಾದಿಸಿದ್ದಾರೆ. ಧರ್ಮಾನಂದ ಅವರು 71 ವರ್ಷ (1876-1947) ಬದುಕಿದರೂ ಪ್ರಸ್ತುತ ಆತ್ಮಕಥೆಯಲ್ಲಿ 21 ವರ್ಷದ ಅವರ ಜೀವನದ ವಿವರಗಳು ಮಾತ್ರ ಇವೆ. ಧರ್ಮಾನಂದರ ಬದುಕು, ದೇಶ ವಿದೇಶಗಳ ಅವರ ನಿರಂತರ ಪ್ರಯಾಣ ಮತ್ತು ಬೌದ್ಧ ಧರ್ಮದ ಮೂಲತತ್ವಗಳನ್ನು ಹುಡುಕುವುದರಲ್ಲಿಯೇ ಮುಗಿದು ಹೋಯಿತು. ಆದರೆ ಬೌದ್ಧ ಧರ್ಮದ ಅನ್ವೇಷಣೆಯಲ್ಲಿ ಧರ್ಮಾನಂದರು ಮಾಡಿದ ತಿರುಗಾಟವಿದೆಯಲ್ಲ, ಅದು ಯಾವುದೇ ಜ್ಞಾನಾಕಾಂಕ್ಷಿಗೆ ಒಂದು ಶಾಶ್ವತ ಮಾದರಿ. ಹದಿನಾಲ್ಕನೇ ವಯಸ್ಸಿನಲ್ಲಿ ಲಗ್ನವಾಗುವ ಧರ್ಮಾನಂದರು ತಮ್ಮ ಮೊದಲ ಮಗಳು ಹುಟ್ಟಿದ ನಂತರ ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಮನೆ ಬಿಡುತ್ತಾರೆ. ಪಾಲಿ ಮತ್ತು ಸಂಸ್ಕøತಗಳನ್ನು ಕಲಿಯಲು ಬ್ರಾಹ್ಮಣ ಪಂಡಿತರ ಮನೆಗಳಿಗೆ ಅಲೆಯುತ್ತಾರೆ. ಸಾರಸ್ವತ ಬ್ರಾಹಣರು ಮಾಂಸಾಹಾರಿಗಳು, ಮೀನು ತಿನ್ನುತ್ತಾರೆ ಎಂಬ ಕಾರಣಕ್ಕಾಗಿ ಧರ್ಮಾನಂದರಿಗೆ ಹಲವು ಬ್ರಾಹ್ಮಣ ಪಂಡಿತರು ಸಂಸ್ಕøತ ಕಲಿಸಲು ನಿರಾಕರಿಸುತ್ತಾರೆ. ಆದರೆ, ಧರ್ಮಾನಂದರು ತಮ್ಮ ಎಡಬಿಡದ ಪ್ರಯತ್ನದ ಮೂಲಕ ಆ ಎರಡೂ ಪ್ರಾಚೀನ ಭಾಷೆಗಳನ್ನು ಕಲಿಯುತ್ತಾರೆ. ಹೆಂಡತಿ ಬಾಲಬಾಯಿ, ಮಗಳು ಮಾಣಿಕಳನ್ನು ಬಿಟ್ಟು ಪುಣೆ,  ಉಜ್ಜಯನಿ, ನಾಗಪುರ, ಗ್ವಾಲಿಯಾರ್, ಬರೋಡ, ಕಾಶಿ, ಬುದ್ಧಗಯಾ, ಕಲ್ಕತ್ತ, ನೇಪಾಳ, ಬರ್ಮಾ, ಮದ್ರಾಸ್, ಶ್ರೀಲಂಕಾ ಹೀಗೆ ಐದಾರು ವರ್ಷ ನಿರಂತವಾಗಿ ಅಲೆದಾಡುತ್ತಾರೆ. ಅದರಲ್ಲೂ ನೇಪಾಳದ ಅವರ ಕಾಲ್ನಡಿಗೆ ಪ್ರಯಾಣ ಅತ್ಯಂತ ಧಾರುಣವಾಗಿತ್ತು. ಸುರಿವ ಹಿಮದಲ್ಲಿ ಬರಿಗಾಲಲ್ಲಿ ನಡೆದು ಅವರು ನೇಪಾಳ ತಲುಪುತ್ತಾರೆ. ನಂತರ ಅವರು ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಶ್ರೀಲಂಕಾಕ್ಕೆ ತೆರಳುತ್ತಾರೆ. ಶ್ರೀಲಂಕಾದಲ್ಲಿ ಬೌದ್ಧ ಭಿಕ್ಷುವಾಗಿ ದೀಕ್ಷೆ ಪಡೆದರೂ ಕೆಲವು ವರ್ಷಗಳ ನಂತರ ಅದನ್ನು ತೊರೆದು ಗೋವೆಗೆ ಹಿಂದಿರುಗುತ್ತಾರೆ. 1907ರಲ್ಲಿ ದಾಮೋದರ ಧರ್ಮಾನಂದ ಕೊಸಾಂಬಿ ಜನಿಸುತ್ತಾರೆ. ಆನಂತರ ಮಕ್ಕಳ ಜೊತೆ ಅಮೇರಿಕಾದ ಹಾರ್ವರ್ಡ ವಿಶ್ವವಿದ್ಯಾಲಯಕ್ಕೆ ತೆರಳಿ ಬೌದ್ಧ ಧರ್ಮದ ಅಧ್ಯಯನವನ್ನು ಮುಂದುವರೆಸುತ್ತಾರೆ. 1910ರಲ್ಲಿ `ದಿ ಬುದ್ಧ, ದಿ ದಮ್ಮ, ಅಂಡ್ ದಿ ಸಂಘ’ ಎಂಬ ಪುಸ್ತಕವನ್ನು ಪ್ರಕಟಿಸುತ್ತಾರೆ. ಬರೋಡಾದ ಸಯ್ಯಾಜಿರಾವ್ ಗಾಯಕ್‍ವಾಡ್ ಆವರು ಈ ಗ್ರಂಥ ಪ್ರಕಟಣೆಯಲ್ಲಿ ನೆರವಾಗುತ್ತಾರೆ. ಹಾರ್ವರ್ಡ ವಿಶ್ವವಿದ್ಯಾಲಯದಲ್ಲಿನ ಪಾಧ್ಯಾಪಕರಿಗೆ ಪಾಲಿ ಕಲಿಸಲು ಮತ್ತು ಬುದ್ಧಘೋಷನ `ವಿಸುದ್ಧಿ ಮಗ್ಗ’ ಗ್ರಂಥ ಸಂಪಾದನೆಯಲ್ಲಿ ನೆರವಾಗಲು ಅಮೇರಿಕಾಕ್ಕೆ ತೆರಳುತ್ತಾರೆ. 1922ರಲ್ಲಿ ಅಮೆರಿಕಾದಿಂದ ಹಿಂದಿರುಗಿದ ನಂತರ ವಾರ್ದಾದ ಗಾಂಧಿ ಆಶ್ರಮದಲ್ಲಿ ನೆಲೆಸಿ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ದಂಡಿ ಸತ್ಯಾಗ್ರಹದ ಜೊತೆ ಮುಂಬಯಿ ನಗರದ ಗಿರಣಿ ಕಾರ್ಮಿಕರನ್ನು ಸಂಘಟಿಸಲು ಮುಂದಾಗುತ್ತಾರೆ. 1940ರಲ್ಲಿ ಅವರ ಮಹಾತ್ವಾಕಕ್ಷೆಯ `ಭಗವಾನ್ ಬುದ್ಧ’ ಕೃತಿಯು ಎರಡು ಸಂಪುಟಗಳಲ್ಲಿ ಪ್ರಕಟವಾಗುತ್ತದೆ. (ಆದ್ಯರಂಗಾಚಾರ್ಯರು ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.) ನೆಹರು ಅವರ ಪ್ರೇರಣೆಯಿಂದ ರಷ್ಯಾಕ್ಕೆ ಬೇಟಿ ನೀಡಿ ಅಲ್ಲಿ ಪಾಲಿ ಭಾಷೆಯನ್ನು ಕಲಿಸುವುದರ ಜೊತೆಗೆ ರಷ್ಯಾದ ಜನಜೀವನದ ಅಧ್ಯಯನದಲ್ಲಿ ತೊಡಗುತ್ತಾರೆ. ಆದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ರಷ್ಯಾದಿಂದ ಹಿಂದಿರುಗುವ ಧರ್ಮಾನಂದರು ವಾರ್ದಾದಲ್ಲಿ ನೆಲೆಸಿ ಅಲ್ಲಿಯೇ ತಮ್ಮ ಅಂತಿಮ ದಿನಗಳನ್ನು ಕಳೆಯುತ್ತಾರೆ. ದೈಹಿಕ ಅನಾರೋಗ್ಯದ ಕಾರಣ ಧರ್ಮಾನಂದರು 1947ರಲ್ಲಿ ಸಲ್ಲೇಖನದ ಮೂಲಕ ದೇಹತ್ಯಾಗ ಮಾಡುತ್ತಾರೆ.
`ನಿವೇದನೆ’ಯಲ್ಲಿ ಧರ್ಮಾನಂದರ ಖಾಸಗಿ ಬದುಕಿನ ವಿವರಗಳಿಲ್ಲ. ಇದು, ಧರ್ಮಾನಂದರು ಬೌದ್ಧ ಧರ್ಮವನ್ನು ಹುಡುಕಿ ಹೊರಟ ಮತ್ತು ಬೌದ್ಧ ಧರ್ಮದ ತಿಳಿವನ್ನು ಅರಸಿ ಹೊರಟ ಅಸೀಮ ಪ್ರಯಾಣದ ಕಥೆ ಮಾತ್ರ. ಆದರೆ ಈ ದಣಿವರಿಯದ ಪ್ರಯಾಣದ ಉದ್ದಕ್ಕೂ ಇವರು ತಮ್ಮ ಖಾಸಗಿ ಬದುಕಿನ ತಲ್ಲಣಗಳನ್ನು ದಾಖಲಿಸಿಲ್ಲ. ಕುಟುಂಬದ ಹೊಣೆಗಾರಿಕೆಗಳಿಗೆ ಬೆನ್ನು ಹಾಕಿ, ಹೆಂಡತಿ ಮಕ್ಕಳನ್ನು ತೊರೆದು ದೇಶಾಂತರ ತಿರುಗಾಟ ಕೈಗೊಂಡ ಧರ್ಮಾನಂದರ ಕುರಿತು ಅವರ ಮಗಳು ಮತ್ತು ಪತ್ನಿ ಬಾಲಬಾಯಿಯವರ ಅಭಿಪ್ರಾಯಾಗಳೇನು? ಮಗ ದಾಮೋದರ್ ಕೊಸಾಂಬಿ ಅಥವಾ ಕುಟುಂಬದ ಬೇರೆ ಯಾರಾದರು ಧರ್ಮಾನಂದರ ಜೀವನ ಚರಿತ್ರೆ ಬರೆದಿದ್ದರೆ ಅದು ಹೇಗಿರುತ್ತಿತ್ತು? ಎಂಬ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಆದರೆ, `ನಿವೇದನೆ’ಯ ಒಟ್ಟಾರೆಯ ಬರವಣಿಗೆಯಲ್ಲಿ ಧರ್ಮಾನಂದರು ಕೌಟುಂಬಿಕ ಮತ್ತು ಸಾಮಾಜಿಕ ಸೂಕ್ಷ್ಮಗಳ ಕುರಿತು ಏನನ್ನೂ ದಾಖಲಿಸಿಲ್ಲ. ಬದುಕಿರವವರೆಗೂ ಬ್ರಾಹ್ಮಣ್ಯವನ್ನು ಆಚರಿಸದ ಧರ್ಮಾನಂದರು, ಸಾರಸ್ವತರೆಂಬ ಕಾರಣಕ್ಕೆ ಮಾಂಸಹಾರಿಗಳೆಂದು ಜರಿದು ತಮಗೆ ಸಂಸ್ಕøತ ಹೇಳಿಕೊಡದ ಚಿತ್ಪಾವನ ಬ್ರಾಹ್ಮಣರ ತಾರತಮ್ಯದ ಕುರಿತು ಮಾತೇ ಆಡುವುದಿಲ್ಲ. ಇದೆಲ್ಲದರ ಹೊರತಾಗಿ ಧರ್ಮಾನಂದ ಕೊಸಾಂಬಿಯವರ ಆತ್ಮಕಥೆ ಆಧುನಿಕಪೂರ್ವ ಇಂಡಿಯಾದ ಒಬ್ಬ ಅಪ್ರತಿಮ ಚಿಂತಕನ ದಣಿವರಿಯದ ಜ್ಞಾನ ಯಾತ್ರೆಯ ಅಪೂರ್ವ ಕಥನ ಎಂಬುದರಲ್ಲಿ ಎರಡು ಮಾತಿಲ್ಲ.
– ಎ ಎಸ್ ಪ್ರಭಾಕರ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...