`ಪ್ರತ್ಯೇಕ ರಾಜ್ಯ: ಒಡೆದು ಆಳಬಯಸುವವರ ಹುನ್ನಾರ’

0

ಪ್ರಶ್ನೆ : ಸರ್, ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಬೇಡಿಕೆ ಇತ್ತೀಚೆಗೆ ಮತ್ತೊಮ್ಮೆ ಕೇಳಿ ಬಂತಲ್ಲಾ, ಈ ವಿದ್ಯಮಾನದ ಬಗ್ಗೆ ಏನು ಹೇಳ್ತೀರಿ?
ಚಂಪಾ : ಭೂಮಿ ಮ್ಯಾಲೆ ಏನಾದರೂ ಅವಘಡ ನಡೆದ್ರೆ ಅದರ ಆಳದಲ್ಲಿ ಭೂಮಿಯ ವಿಭಿನ್ನ ಸ್ತರಗಳಲ್ಲಿರುವ ಸೆಲೆಗಳು ಅದಕ್ಕೆ ಕಾರಣವಾಗಿರ್ತವೆ. ಮೇಲ್ನೋಟಕ್ಕೆ ಕಂಡಿದ್ದಷ್ಟೇ ಸತ್ಯವಾಗಿರೋದಿಲ್ಲ. ಅದಕ್ಕೆ Appearance are deceptive ಅಂತಾರೆ. ಒಂದು ವಿದ್ಯಮಾನವನ್ನ ನಾವು ವಿಶ್ಲೇಷಣೆಗೆ ಒಳಪಡಿಸಬೇಕಂದ್ರೆ ಅದರ ಅನೇಕ ಮಗ್ಗಲುಗಳನ್ನ ಅರ್ಥಮಾಡಿಕೊಳ್ಳಬೇಕಾಗ್ತದೆ.
ಹಾಗೆ ಇತಿಹಾಸ ನೋಡಿದ್ರೆ, ಕರ್ನಾಟಕ ಏಕೀಕರಣದ ದನಿ ಉತ್ತರ ಕರ್ನಾಟಕ ಭಾಗದಲ್ಲಿದ್ದಷ್ಟು ಪ್ರಬಲವಾಗಿ ಹಳೇ ಮೈಸೂರು ಪ್ರಾಂತದಲ್ಲಿರಲಿಲ್ಲ. ಕರ್ನಾಟಕ ಅನ್ನೋ ಹೆಸರಿಡಲಿಕ್ಕೆ ಕೂಡ ಪ್ರಬಲವಾದ ವಿರೋಧ ಬಂದಿತ್ತು. ಇದು ಐತಿಹಾಸಿಕ ಸತ್ಯ. ಒಂದುಗೂಡಬೇಕು ಅನ್ನೋ ಅಭೀಪ್ಸೆ ಮೈಸೂರು ಭಾಗದಲ್ಲಿ ಕಡಿಮೆಯೇ. ಒಂದು ರೀತಿಯಲ್ಲಿ ಸಮೃದ್ಧವಾಗಿದ್ದ ಭಾಗ ಅದು. ಜನಪರ, ಪ್ರಜಾನಿಷ್ಠೆ ಇದ್ದ ಆಳ್ವಿಕೆಗಳಿದ್ದವು.
ಆದ್ರೆ ನಮಗೆ ಕುವೆಂಪು ಅವರಿಂದ ದೊಡ್ಡ ಪ್ರೇರಣೆ ಸಿಕ್ತು. ಕೆ.ಹನುಮಂತಯ್ಯ ಕೂಡ ಬಹಳ ಗಟ್ಟಿ ನಿರ್ಧಾರ ತೆಗೆದುಕೊಂಡ್ರು.
ನಾವು ಹರಿದುಹಂಚಿಹೋಗಿದ್ದೆವು. ನಮ್ಮನ್ನ ಬೇರೆಯವ್ರು ಆಳುತ್ತಿದ್ರು. ಈಗ ನಮ್ಮದೇ ರಾಜ್ಯ ಸ್ಥಾಪನೆ ಆದನಂತರ ನಮ್ಮನ್ನ ನಾವೇ ಆಳಿಕೊಳ್ಳೋ ವಾತಾವರಣ ನಿರ್ಮಾಣ ಆಗಿದೆ. ನಮ್ಮ ಸಮಸ್ಯೆಗಳು ಸುಲಲಿತವಾಗಿ ಬಗೆಹರಿಯಬಹುದು ಎಂಬ ನಿರೀಕ್ಷೆ ಇತ್ತು.
ಹುಯಿಲಗೋಳ ನಾರಾಯಣರಾಯರು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಅಂತ ಹಾಡು ಕಟ್ಟಿದರು. ಅದು ಬಹಳ ಪ್ರಸಿದ್ಧವಾಯ್ತು. ಬಹುಶಃ ಕರ್ನಾಟಕದ ಮೊತ್ತಮೊದಲ ನಾಡಗೀತೆ ಅದು.
ಕಾಳಿಂಗರಾವ್ ಹಾಡಿದ ಮೇಲಂತೂ ಮತ್ತಷ್ಟು ಜನಜನಿತವಾಯ್ತು. ಕರ್ನಾಟಕ ಏಕೀಕರಣ ಆದಮ್ಯಾಲೆ ಯಾರೋ ಹೋಗಿ ನಾರಾಯಣರಾಯರನ್ನ ಕೇಳಿದ್ರಂತೆ. ‘ಸರ್, ಈಗ ಏಕೀಕರಣ ಆಗಿದ್ಯಲ್ಲಾ… ಇನ್‍ಮುಂದೆ ನಾವು ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ಅಂತ ಹಾಡಬೋದಲ್ಲವೆ?’ ಎಂದು ಕೇಳಿದ್ರಂತೆ. ‘ಅಲ್ಲ ಹುಚ್ಚಪ್ಪ, ಹಂಗ್ ಮಾಡಬ್ಯಾಡ್ರಿ… ಉದಯವಾಗಲಿ ಅನ್ನೋದು ನಮ್ಮ ಆಶಯ, ನಮ್ಮ ಕನಸು. ಆಯಿತು ಅಂದ್ರೆ ಆ ಕನಸು ನನಸು ಆಯ್ತು ಅಂತ ಅರ್ಥ. ಕನ್ನಡನಾಡು ಕಣ್‍ಬಿಡಬೇಕಾದ್ದು ಇನ್ನೂ ಇದೆ, ಅದೆಲ್ಲಾ ಆದಮ್ಯಾಲೆ ನೀವು…, ಆಗ ನಾನು ಇರ್ತೀನೋ ಇಲ್ವೋ ಗೊತ್ತಿಲ್ಲ, ಆವಾಗ ಬೇಕಾದ್ರೆ ನೀವು ಉದಯವಾಯಿತು ಅಂತ ಹಾಡಿಕೊಳ್ರಿ’ ಅಂತ ಚಾಷ್ಟಿ ಮಾಡಿ ಮಾತಾಡಿದ್ದರಂತೆ.
ಅಂಥಾ ನಮ್ಮ ಆಶಯಗಳು ಖರೇ ಆಗಿತ್ತು ಅಂದ್ರೆ ವರ್ತಮಾನದಲ್ಲಿ ಈ ಪ್ರತ್ಯೇಕತೆ ಅನ್ನೋ ಶಬ್ದ ಕೇಳಬೇಕಾಗಿರಲಿಲ್ಲ.

ಪ್ರಶ್ನೆ: ಪ್ರತ್ಯೇಕತೆಯ ಕೂಗು ಪದೇಪದೇ ಕೇಳಿಬರುತ್ತಿರೋ ಹಿನ್ನೆಲೆಯಲ್ಲಿ, ಅದರ ಅಂತರಾಳದಲ್ಲಿ ನಿರ್ದಿಷ್ಟವಾಗಿ ಏನೇನು ನೋವುಗಳಿವೆ ಅನ್ನೋ ಬಗ್ಗೆ…
ಚಂಪಾ: ಅದಾವ, ನೋವುಗಳು ಸಾಕಷ್ಟದಾವ. ಎಲ್ಲಾ ಪ್ರದೇಶಗಳ ಅಭಿವೃದ್ಧಿ ಸಮಾನವಾಗಿ ಆಗ್ತಿಲ್ಲ ಅನ್ನೋ ನೋವಿದೆ. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗಗಳು ಈಗಲೂ ಅಭಿವೃದ್ಧಿಯಿಂದ ವಂಚಿತವಾಗಿವೆ. ಅಭಿವೃದ್ಧಿಯ ವಿಚಾರದಲ್ಲಿ ಎಲ್ಲ ವಿಚಾರದಲ್ಲೂ ಮೈಸೂರು ಪ್ರಾಂತ್ಯ ಮೊದಲಿನಿಂದಲೂ ಮುಂದಿತ್ತು, ಈಗಲೂ ಮುಂದಿದೆ. ಅಭಿವೃದ್ಧಿಯ ವಿಷಯದಲ್ಲಿ ಸಮಾನತೆ ಬಂದಾಗ ಎಲ್ರಲ್ಲೂ ನಾವು ಒಂದು ಮನೆಯವರು, ಒಂದು ಕುಟುಂಬದವರು ಅನ್ನೋ ಭಾವನೆ ಗಟ್ಟಿಯಾಗಲು ಸಾಧ್ಯವಿದೆ. ಇವತ್ತಿನ ಪ್ರತ್ಯೇಕತೆಯ ಕೂಗು ಬರೀ ಕೂಗಲ್ಲ, ಬರೀ ಆಕ್ರೋಶ ಅಲ್ಲ. ಅದರ ಹಿಂದೆ ದೊಡ್ಡ ಅಸಮಾಧಾನ, ದೊಡ್ಡ ನೋವು ಸಂಕಟ ಎಲ್ಲಾ ಇವೆ.

ಪ್ರಶ್ನೆ: ಅಭಿವೃದ್ಧಿಯ ಅಸಮಾನತೆಗೆ ನಿರ್ದಿಷ್ಟ ಕಾರಣಗಳೇನು?
ಚಂಪಾ: ಕಾರಣ ಬೇಕಾದಷ್ಟಿವೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಪ್ರತಿನಿಧಿಗಳು ತಮ್ಮ ತಾತ್ಕಾಲಿಕ ರಾಜಕೀಯ ಆಕಾಂಕ್ಷೆಗಳಿಗೆ ಒತ್ತು ಕೊಟ್ಟು, ಇಡೀ ಕರ್ನಾಟಕದ ಜನರು ಒಂದು ಎಂಬ ಭಾವನೆಯಿಂದ ಕೆಲಸ ಮಾಡದೆ ಇರೋದು, ಈ ಭಾಗದ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿದ್ದು. ಮೇಲಾಗಿ ಅಭಿವೃದ್ಧಿ ಅಂದ್ರೆ ಏನು ಅನ್ನೋ ಬಗ್ಗೆಯೇ ಸರಿಯಾದ ಪರಿಕಲ್ಪನೆ ಇಲ್ಲ… ಒಂದು ಉದಾಹರಣೆ ನೋಡ್ರಿ, ಈಗ ಎಸ್‍ಎಸ್‍ಎಲ್‍ಸಿ, ಪಿಯುಸಿ ಫಲಿತಾಂಶಗಳು ಬರ್ತಾವಲ್ಲ, ಆ ಪಟ್ಟಿಯಲ್ಲಿ ಮೊದಲಿನ ಸಾಲಿನಲ್ಲಿರುವ ಜಿಲ್ಲೆಗಳನ್ನು ನೋಡ್ರಿ, ಕೊನೆಯ ಸಾಲಿನಲ್ಲಿರುವ ಜಿಲ್ಲೆಗಳನ್ನು ನೋಡ್ರಿ, ಬಹಳ ಸ್ಪಷ್ಟವಾದ ಚಿತ್ರಣ ಸಿಗುತ್ತೆ. ಅಭಿವೃದ್ಧಿಯಲ್ಲಿ ಸಮಾನತೆ ಇತ್ತು ಅಂತ ಅಂದ್ರೆ ಇಂಥಾ ಪರಿಸ್ಥಿತಿ ಇರೋಲ್ಲ, ಜನರಲ್ಲೂ ಹೀಗೆ ಅಸಮಾಧಾನ ಉಳೀತಾ ಇರಲಿಲ್ಲ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಾವುದಾದ್ರೂ ಸಮಸ್ಯೆಯನ್ನು ಸರಿಯಾಗಿ ಅರಿತು, ಪರಿಹಾರ ಕಂಡುಕೊಳ್ಳಬೇಕಂದ್ರೆ ತಜ್ಞರ ಸಮಿತಿ ಮಾಡೋ ವ್ಯವಸ್ಥೆ ಇದೆ. ಅವರು ಸಮಸ್ಯೆಯ ವಿವಿಧ ಮಗ್ಗಲುಗಳನ್ನು ಅಧ್ಯಯನ ಮಾಡಿ, ಎಲ್ಲಿ ದೋಷ ಇದೆ ಅನ್ನೋದನ್ನ ಕಂಡುಹಿಡಿದು, ಅಷ್ಟೇ ಅಲ್ಲ ಆ ದೋಷಗಳನ್ನು ಹೇಗೆ ಪರಿಹಾರ ಮಾಡಬೇಕು ಅನ್ನೋದನ್ನು ಕಂಡುಹಿಡಿದು ಶಿಫಾರಸ್ಸು ಮಾಡುತ್ತಾರೆ. ಇದೊಂದು ವೈಜ್ಞಾನಿಕ ಕ್ರಮ. ಪ್ರೊ.ನಂಜುಂಡಪ್ಪನವರ ನಾಯಕತ್ವದಲ್ಲಿ ಒಂದು ಸಮಿತಿ ಮಾಡಿದ್ರು. ಪ್ರಾದೇಶಿಕ ಅಸಮಾನತೆಯ ಬಗ್ಗೆ ಅಧ್ಯಯನ ಮಾಡಲಿಕ್ಕೆ. ನಂಜುಂಡಪ್ಪನವರು ರಾಜಕಾರಣಿ ಅಲ್ಲ, ಅವರು ಇಂಥಾ ಸಮಸ್ಯೆಗಳನ್ನ ಅಧ್ಯಯನ ಮಾಡಿದ್ದ ದೊಡ್ಡ ವಿದ್ವಾಂಸರಾಗಿದ್ದರು.
ಆ ವರದಿಯ ಒಂದು outline ನೋಡಿದ್ರೆ ಸಾಕು, ಕರ್ನಾಟಕದ ಅಸಮಾನತೆಯ ಚಿತ್ರಣ ಎದ್ದುಕಾಣುತ್ತೆ. ಹಿಂದುಳಿದ ಪ್ರದೇಶಗಳು, ಅತಿ ಹಿಂದುಳಿದ ಪ್ರದೇಶಗಳ ಪಟ್ಟಿ ಸ್ಪಷ್ಟವಾಗಿದೆ. ಆ ಪ್ರಕಾರ ಹೆಚ್ಚಿನ ಹಿಂದುಳಿದ ತಾಲೂಕುಗಳಿರೋದು ಹೈದರಾಬಾದ್ ಕರ್ನಾಟಕದೊಳಗೆ. ನಂತರದ ಸ್ಥಾನದಲ್ಲಿ ಮುಂಬೈ ಕರ್ನಾಟಕ ಬರುತ್ತೆ. ಹಳೇ ಮೈಸೂರು ಪ್ರದೇಶದ ಕೆಲವು ತಾಲೂಕುಗಳೂ ಕೂಡ ಅತಿ ಹಿಂದುಳಿದಿರುವುದನ್ನು ಎತ್ತಿ ತೋರಿಸಿದ್ದಾರೆ. ಹೀಗೆ ಒಂದು ವಸ್ತುನಿಷ್ಠ ವರದಿ. ಈ ವಾಸ್ತವ ಬದಲಾಗಿ, ಸಮಾನತೆ ಸಾಧಿಸಬೇಕೆಂಬುದು ನಮ್ಮ ಯೋಜನೆಗಳ ಮುಖ್ಯ ಉದ್ದೇಶ. ಏಕೀಕರಣ ಆಗಿ 62 ವರ್ಷ ಆಯ್ತಲ್ಲಾ. ಆದ್ರೂ ನಾವು ಇದನ್ನು ಸಾಧಿಸಲಿಕ್ಕಾಗಲಿಲ್ಲ. ಇದು ಸಹಜವಾಗಿ ಅಸಮಾಧಾನಕ್ಕೆ ದಾರಿ ಮಾಡುತ್ತೆ. ನಾವು ಕರ್ನಾಟಕ ಮಾತೆ ಅಂತೀವಿ. ಈ ತಾಯಿಗೆ ಮೂವತ್ತು ಜಿಲ್ಲೆಗಳು ಮಕ್ಕಳಿದ್ದ ಹಾಗೆ. ಎಲ್ಲಾ ಮಕ್ಕಳನ್ನೂ ಆ ತಾಯಿ ಸರಿಯಾಗಿ ನೋಡಿಕೊಂಡಿದ್ರೆ ಈ ಪ್ರಶ್ನೆ ಬರ್ತಿರಲಿಲ್ಲ. ತಾಯಿ ಹಾಲು ಕುಡಿಸೋವಾಗ ದಷ್ಟವಾಗಿರೋ ಮಕ್ಕಳಿಗಷ್ಟೇ ಹಾಲು ಕುಡಿಸೋದಿಲ್ಲ. ದುರ್ಬಲ ಇರೋ ಮಕ್ಕಳನ್ನು ತಾಯಿ ಮೊದ್ಲು ಎತ್ತುಕೋತಾಳೆ, ಹೌದಲ್ಲೋ? ಆ ಕೆಲಸ ಇಲ್ಲಿ ಸರಿಯಾಗಿ ಆಗಲಿಲ್ಲ.

ಪ್ರಶ್ನೆ: ಜಿಡಿಪಿ ದರದ ಮಾನದಂಡದಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿತ್ತಲ್ಲಾ… ಇದು ಅಭಿವೃದ್ಧಿ ಅಲ್ಲವಾ?
ಚಂಪಾ: ಅದು ಒಂದು ಮಾನದಂಡ ಅಷ್ಟೇ. ನಮಗೆ ಇನ್ನೂ ಹಲವಾರು ಮಾನದಂಡಗಳು ಮುಖ್ಯವಾಗ್ತವೆ. ಶಿಕ್ಷಣ, ಆರೋಗ್ಯ, ರಸ್ತೆ, ಕೈಗಾರಿಕೆ, ನೈರ್ಮಲ್ಯ – ಹೀಗೆ ಹಲವು ಮಾನದಂಡಗಳ ಮೂಲಕ ನಾವು ಅಭಿವೃದ್ಧಿಯನ್ನು ಅಳೆಯಬೇಕಾಗುತ್ತದೆ. ಬರೀ ಜಿಡಿಪಿ ಲೆಕ್ಕಾಚಾರ ತೋರಿಸೋದು ದೋಚಿಕೊಂಡು ಹೋಗೋರ ಹುನ್ನಾರ ಅಷ್ಟೇ. ನಮ್ಮನ್ನ ಯಾಮಾರಿಸಲಿಕ್ಕೆ ಇಂಥಾ ಅಂಕಿ ಅಂಶಗಳನ್ನು ತೋರುಸ್ತಾರೆ. ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಮಾನತೆ ಸಾಧಿಸಿಲ್ಲ ಎಂಬುದು ಒಡೆದು ಕಾಣುವಂಥ ಅಂಶ. ಹೀಗೆ ತಾರತಮ್ಯ ಕಣ್ಣಿಗೆ ರಾಚುತ್ತಿದ್ದಾಗ ಅಸಮಾಧಾನ ಕೂಡ ಹೆಚ್ಚಾಗುತ್ತೆ. ಮಕ್ಕಳು ಮೊದಲು ಅಳ್ತಾವೆ, ನಂತರ ರಚ್ಚೆ ಹಿಡಿತಾವೆ, ನಾನು ಮನೆ ಬಿಟ್ಟು ಹೋಗ್ತೀನಿ ಅಂತಾವೆ. ಬಿಟ್ಟು ಹೋಗ್ತಾವೋ ಇಲ್ಲವೋ ಬೇರೆ ಮಾತು..(ನಗು). ಬಿಟ್ಟು ಹೋಗೋ ಮನಸ್ಸಿರೋದಿಲ್ಲ, ಈಗ ಅದೇ ಪರಿಸ್ಥಿತಿ. ಯಾರಿಗೂ ಸಹಿತ ಬಿಟ್ಟು ಹೋಗಬೇಕು ಎಂಬ ಭಾವನೆ ಈಗ ಇಲ್ಲ.

ಪ್ರಶ್ನೆ: ಕೆಲವು ರಾಜಕಾರಣಿಗಳು, ಉದಾಹರಣೆಗೆ ಉಮೇಶ್ ಕತ್ತಿ, ಶ್ರೀರಾಮುಲು, ಕವಟಗಿಮಠ ಮುಂತಾದವರು, ಯಾರೇನೇ ಹೇಳಲಿ ನಾವು ಮಾತ್ರ ಪ್ರತ್ಯೇಕ ರಾಜ್ಯ ಮಾಡೇಮಾಡ್ತೀವಿ ಅಂತಾ ಹುಯಿಲೆಬ್ಬಿಸಿದ್ದರಲ್ಲಾ?
ಚಂಪಾ: ನೋಡ್ರಿ… ಈ ಉಮೇಶ್ ಕತ್ತಿ, ಶ್ರೀರಾಮುಲು ಥರದವರು ಖರೇ ರಾಜಕಾರಣಿಗಳೂ ಅಲ್ಲ, ಮುತ್ಸದ್ದಿಗಳೂ ಅಲ್ಲ. ಇಂಥವರು ಪೆಟಿ-ಪಾಲಿಟಿಷಿಯನ್ಸ್, ಪುಢಾರಿಗಳು ಅಷ್ಟೆ. ಅವರ ಅಜೆಂಡಾನೇ ಬಹಳ ಸಣ್ಣದು, ಕನಸುಗಳೇ ಬಹಳ ಸಣ್ಣವು. ಅವರ ಲೆಕ್ಕ ಇಷ್ಟೇ – ಇದು ಬಹಳ ದೊಡ್ಡ ರಾಜ್ಯ, ಸಣ್ಣ ರಾಜ್ಯ ಆಯ್ತು ಅಂದರೆ ನಾವು, ಅವರ ಅರ್ಥದಲ್ಲಿ ನಾವು ಅಂದ್ರೆ ಅವರ ಕುಟುಂಬ, ಅವರ ಜಾತಿ ಅನ್ನೋ ಸಂಕುಚಿತ ಅರ್ಥ ಇರುತ್ತೆ, ಪ್ರತ್ಯೇಕ ಆದ್ರೆ ನಾವೇ ನಿರಂತರವಾಗಿ ಅಧಿಪತಿಗಳಾಗಬಹುದು ಎಂಬ ಲೆಕ್ಕಾಚಾರ ಅವರದು.
ಈಗ ಎದ್ದಿರೋ ಪ್ರತ್ಯೇಕತೆ ಕೂಗಿನ ಹಿಂದೆ ಕೆಲಸ ಮಾಡ್ತಿರೋದು ಪ್ರಮುಖವಾಗಿ ಜಾತಿ ಲೆಕ್ಕಾಚಾರ. ಇದು ಅನೇಕರಿಗೆ ಗೊತ್ತಿರುವ ಸತ್ಯ. ಉತ್ತರ ಕರ್ನಾಟಕದ ಭಾಗದಲ್ಲಿ ಲಿಂಗಾಯತರು ಬಲಾಢ್ಯ, ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರು ಬಲಾಢ್ಯ. ಹೀಗೆ ಪರಿಣಾಮದಲ್ಲಿ ಈ ರಾಜ್ಯ ವಿಭಜನೆ ಅನ್ನೋದು ಒಂದು ರೀತಿಯಲ್ಲಿ ಜಾತಿ ಆಧಾರಿತ ವಿಭಜನೆ ಕೂಡ ಆಗುವ ಅಪಾಯವಿದೆ. ಇದು ನಮ್ಮ ಮುಂದಿರೋ ದೊಡ್ಡ ಸಮಸ್ಯೆ.

ಪ್ರಶ್ನೆ: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಯಾವತ್ತೂ ದನಿಯೆತ್ತದ ಶ್ರೀರಾಮುಲು ಈಗ ಇವರ ಜೊತೆ ಸೇರಿಕೊಂಡಿದ್ದಾರಲ್ಲಾ..?
ಚಂಪಾ: ನೋಡ್ರಿ, ಈ ಶ್ರೀರಾಮುಲು ಬಗ್ಗೆ ನನಗೆ ವಿಶೇಷ ಮಾಹಿತಿಯೂ ಇಲ್ಲ, ಅವರ ಬಗ್ಗೆ ನನಗೆ ಗೌರವವೂ ಇಲ್ಲ. ಅಸಲಿಗೆ ರಾಜಕಾರಣಿಯೇ ಅಲ್ಲ ಅವರು. ಆತ ಲೋಕಸಭಾ ಸದಸ್ಯನಾಗಿದ್ದ ವ್ಯಕ್ತಿ. ದೊಡ್ಡ ಸಂಖ್ಯೆಯ ಸಮುದಾಯದಿಂದ ಬಂದವರು. ಬಿಜೆಪಿಯಲ್ಲಿ ಪ್ರಮುಖ ನಾಯಕ ಅಂತ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರ ಪಕ್ಷದವರು ಇಂಥೋರನ್ನು ಛೂಬಿಟ್ಟು ಕಳಿಸಿರಬಹುದು.  ಒಟ್ಟಾರೆ ಬಿಜೆಪಿಯವರಿಗೆ ಈ ದೇಶವನ್ನು ಒಡೆಯೋದು ಬೇಕಾಗಿದೆ. ಉದ್ದಕ್ಕೂ ಇದನ್ನೇ ಮಾಡಿಕೊಂಡು ಬಂದಿದ್ದು ಅವ್ರು. ಅಭಿವೃದ್ಧಿಯ ಆಧಾರದ ರಾಜಕೀಯಕ್ಕೆ ಪ್ರಾಮುಖ್ಯತೆ ಇಲ್ಲವೇ ಇಲ್ಲ ಅವರಲ್ಲಿ. ಜಾತಿ ಆಧಾರದೊಳಗ, ಧರ್ಮದ ಆಧಾರದೊಳಗ ಈ ದೇಶ ಛಿದ್ರ ಛಿದ್ರ ಆದಂಗೆಲ್ಲಾ ಅವರ ಅಜೆಂಡಾಗೆ ಬಹಳ ಹತ್ರ ಬರ್ತಾರ ಅವ್ರು. ತೀರಾ ಒಳಗಿನ ಸೆಲೆಯೇ ಇದು, ಇಲ್ಲಿ ಬ್ರಾಹ್ಮಣ ಬುದ್ಧಿ ಏನೈತಲ್ಲಾ, ಅವ್ರು ಈ ಕೆಲಸ ಮಾಡ್ತಾ ಇರೋದು. divide and rule ಮಾಡಿದ್ರು ಅಂತ ಬ್ರಿಟಿಷರನ್ನ ಬೈತೀವಿ. ಬ್ರಿಟಿಷರು ಇವ್ರಿಂದಲೇ ಕಲಿತಿದ್ದು ಅದನ್ನ. ಹೌದಲ್ರೀ… ಇವ್ರದು ಬರೀ divide and rule ಅಲ್ಲ. Divide  &  sub-divide &  sub divide and rule. ಮನುಸ್ಮøತಿ ಮಾಡಿದ್ದೇ ಇದನ್ನ, ಚಾತುರ್ವರ್ಣ ಪದ್ಧತಿ ಒಡೆದು ಆಳಬೇಕು ಅಂತಾ. ಅದು ಒಂದು ದೊಡ್ಡ ಅಜೆಂಡಾ ಅವ್ರದು. ಇದಕ್ಕೆ ಏನ್ ಮಾಡ್ತಾರಾ, ಉಮೇಶ್ ಕತ್ತಿ ತರದೋರನ್ನ, ಅದ್ಯಾವುದೋ ಮಠ ಅಂದ್ರಲ್ಲಾ… ಕವಟಗಿಮಠ ತರದೋರನ್ನ ಮುಂದಕ್ಕ ಬಿಡ್ತಾರೆ. ಲೇಟೆಸ್ಟ್ ಎಂಟ್ರಿ ಅಂತಂದ್ರೆ ಈಗ ಶ್ರೀರಾಮುಲು.
ಆದ್ರೆ ಸಾರ್ವತ್ರಿಕವಾಗಿ ವಿರೋಧ ಏನಾರ ಬಂತಂದ್ರೆ ಬ್ಯಾಕ್ ಆಗ್ಬಿಡೋದು. ಅದು ಅವ್ರ ಪರ್ಸನಲ್ ಅಭಿಪ್ರಾಯ ಅಂದುಬಿಡೋದು. ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲ ಅಂದುಬಿಡೋದು. ಬೇಜವಾಬ್ದಾರಿ ನಡೆಗಳು ಇವೆಲ್ಲಾ. ಅವರ ರಾಜಕಾರಣ ನೈತಿಕವಾಗಿ ಯಾವ ಮಟ್ಟಕ್ಕೆ ಇಳಿದಿದೆ ನೋಡ್ರಿ.. ಇದು ಡೇಂಜರಸ್.

ಪ್ರಶ್ನೆ: ಪ್ರತ್ಯೇಕ ರಾಜ್ಯದ ಬೇಡಿಕೆ ಬಗ್ಗೆ ನಿಮ್ಮ ವೈಯಕ್ತಿಕ ನಿಲುವು..?
ಚಂಪಾ: ನಾನು ಮೊದಲಿಂದಲೂ ಪ್ರತ್ಯೇಕತೆಯ ವಿರುದ್ಧ. ಮೊಟ್ಟಮೊದಲಿಗೆ ವೈಜನಾಥ ಪಾಟೀಲ್ರು, ಅವ್ರು ಸಮಾಜವಾದಿ ಹಿನ್ನೆಲೆಯಿಂದ ಬಂದೋರು, ಹೈದರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯ ಅನ್ನೋ ಬೇಡಿಕೆಯನ್ನ ಮುಂದೆ ತಂದ್ರು. ಆದ್ರೆ ಅವ್ರು ಅಸಮಾನತೆ ಸರಿಯಾಗ್ಬೇಕು, ಅಭಿವೃದ್ಧಿ ಬೇಕು ಅನ್ನೋ ಹಿನ್ನೆಲೆಯಲ್ಲಿ ಈ ಡಿಮ್ಯಾಂಡ್ ಇಟ್ಟದ್ದು. ಆಮ್ಯಾಲೆ ನಮ್ಮ ಪಾಟೀಲ್ ಪುಟ್ಟಪ್ಪನವ್ರು, ಅವ್ರನ್ನ ನಾವು ಪಿಟೀಲ್ ಪುಟ್ಟಪ್ಪ ಅಂತ ಕರೀತೀವಿ. ಹವಾ ಹೆಂಗಿರ್ತೈತಿ ಹಂಗಾ ಪಿಟೀಲ್ ಬಾರಿಸ್ಕೋತಾ ಇರ್ತಾರ ಅವ್ರು. ಮೊದಲಿಂದ್ಲೂ ಹಂಗೆ. ‘ಅಸಮಾನತೆ ಹೀಗೇ ಮುಂದುವರೆದರೆ ನಾವೂ ಕೂಡ ದನಿ ಸೇರಿಸಬಹುದು’ ಅನ್ನೋ ಮಾತನ್ನು ತೇಲಿ ಬಿಟ್ಟುಬಿಡ್ತಾರ. ಆಮ್ಯಾಲೆ ಎಲ್ಲಾಕಡೆ ವಿರೋಧ ಬಂದಮ್ಯಾಲೆ ‘ಕರ್ನಾಟಕವನ್ನ ನೀವು ಒಡೆದು ತುಂಡುಮಾಡೋದಾದ್ರೆ, ನನ್ನ ದೇಹದ ಮ್ಯಾಲೆ ಮಾಡ್ರೀ, ನನ್ನ ಕೊಂದುಹಾಕಿ ಮಾಡ್ರೀ’ ಅಂತಾ ಗುಟುರು ಹಾಕ್ತಾರೆ.Impossible demands ಇವೆಲ್ಲಾ..(ನಗು)
ಆದ್ರೆ ಮೊದಲಿಂದ್ಲೂ ನನಗೆ ಇಂಥದ್ದರ ಬಗ್ಗೆ ವಿರೋಧ ಇದೆ. ಯಾಕಂದ್ರೆ ಇದು ಪುಕ್ಕಟ್ಟೆ ಬಂದ ನಾಡಲ್ಲ. ಜನರು ಹೋರಾಟ ಮಾಡಿ, ಕವಿಗಳು ಕನಸು ಕಂಡು, ಕ್ರಿಯಾಶೀಲ ರಾಜಕಾರಣಿಗಳು ಪ್ರಯತ್ನ ಮಾಡಿ ಅಸ್ತಿತ್ವಕ್ಕೆ ಬಂದ ಒಂದು ನಾಡನ್ನ, ಒಂದು ಮನೆಯನ್ನ ಒಡೆಯೋ ಕೆಲಸವನ್ನ ಯಾರೂ ಮಾಡಬಾರದು. ಒಡೆಯೋದು ಸುಲಭ ಬಿಡ್ರೀ… ಒಡೆದ ಮ್ಯಾಲೆ ಮತ್ತೆ ಕಟ್ಟಲಿಕ್ಕಾಗೋದಿಲ್ಲ.
ನಮ್ಮ ಕಣ್ಣೆದುರಿಗೇನೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಒಡೆದು ಹೋಗಿಬಿಡ್ತು. ಈಗ ಇಬ್ರೂ ಒದ್ದಾಡಲಿಕ್ಕತ್ತಾರ. ಸರ್ಕಾರಿ ನೌಕರರಿಗೆ ಪಗಾರ ಕೊಡಲಿಕ್ಕೆ ತೆಲಂಗಾಣ ಸರ್ಕಾರದಲ್ಲಿ ಹಣ ಇಲ್ಲ. ಪ್ರತಿಯೊಂದಕ್ಕೂ ಕೇಂದ್ರದ ನರೇಂದ್ರಮೋದಿ ಹತ್ರ ಹೋಗಿ, ನಿಲ್ಲಬೇಕಾಗೈತಿ. ಚಂದ್ರಬಾಬು ನಾಯ್ಡು, ಚಂದ್ರಶೇಖರ್ ರಾವ್ ಇಬ್ಬರದೂ ಇದೇ ಸ್ಥಿತಿ ಆಗೈತಿ. ಈ ಪರಿಸ್ಥಿತಿ ಬರಲಿ ಅಂತಾನೇ ಅವ್ರು ಹುನ್ನಾರ ಮಾಡ್ತಾ ಇರೋದು. ಇವ್ರು ವೀಕ್ ಆಗಿ ಆಗಿ ಪ್ರತಿಯೊಂದಕ್ಕೂ ನಮ್ಮ ಕಡೆಗೆ ಬರಲಿ, ನಮ್ಮ ಆದೇಶವನ್ನ ಪಾಲಿಸಲಿ, ನಮ್ಮ ಗುಲಾಮರಾಗಿರಲಿ ಅನ್ನೋದು… ಈ ‘ಒಂದು ದೇಶ, ಒಂದೇ ತೆರಿಗೆ, ಒಂದೇ ಭಾಷೆ, ಒಂದೇ ಧರ್ಮ’ ಅನ್ನೋ ಅಜೆಂಡಾ ಇಟ್ಕೊಂಡಿದಾರಲ್ಲಾ, ಅವ್ರ ಬಹಳ ದೊಡ್ಡ ಹುನ್ನಾರ ಇದು.

ಪ್ರಶ್ನೆ: ಅಂದ್ರೆ ಭಾಷಾವಾರು ರಾಜ್ಯಗಳನ್ನು ಒಡೆಯೋ ಹುನ್ನಾರ ಅಂತೀರಾ?
ಚಂಪಾ: ಹೌದೌದು. ಹೀಗೆ ಎಲ್ಲರನ್ನೂ ಒಡೆದು ಹಾಕಿದ್ರೆ ಅವ್ರ ಕೆಲಸ ಸಲೀಸಾಗ್ತೈತಿ ನೋಡ್ರಿ. ಎಲ್ಲರನ್ನೂ ಚೆಲ್ಲಾಪಿಲ್ಲಿ ಮಾಡಿಬಿಡೋದು… ಎಲ್ರೂ ಅವ್ರತ್ರ ಹೋಗಂಗೆ ಮಾಡಿಕೊಳ್ಳೋದು. ದೊಡ್ಡ ಹುನ್ನಾರ ಇದು. ಇದು ಆಗ್ಬಾರದು ಅಂದ್ರೆ ಕರ್ನಾಟಕ ಬಲಿಷ್ಠ ಆಗ್ಬೇಕು. ಇದ್ದೋರು ದೂರ ಹೋಗೋದಲ್ಲ, ಇನ್ನೂ ಮಹಾರಾಷ್ಟ್ರದಿಂದ ಮತ್ತು ಬೇರೆಕಡೆಗಳಿಂದ ಕನ್ನಡ ಪ್ರದೇಶಗಳನ್ನು ಸೇರಿಸೋ ಪ್ರಯತ್ನ ಆಗ್ಬೇಕು. ಹಾಗಾದ್ರೆ ಅದು ಅಖಂಡ ಕರ್ನಾಟಕ. ಈಗ ಇಷ್ಟಾದರೂ ದೊಡ್ಡ ರಾಜ್ಯ ಐತಲ್ಲಾ. ಆರೂವರೆ ಕೋಟಿ ಜನಸಂಖ್ಯೆ ಅಂದ್ರೆ ಅದು ಸಣ್ಣದಲ್ಲ. ನಮ್ಮ ಎಂಪಿಗಳು ಗಟ್ಟಿಯಾಗಿ ದನಿಯೆತ್ತೋ ಹಾಗಾದ್ರೆ ಕರ್ನಾಟಕ ರಾಜ್ಯದ ಕೆಲಸ ಬಹಳ ಸುಲಭ ಆಗ್ತಾವು. ಇವ್ರಿಗೆ ಸ್ವಾಭಿಮಾನವೂ ಇಲ್ಲ, ಬದ್ಧತೆ ಪ್ರಾಮಾಣಿಕತೆಗಳೂ ಇಲ್ಲ. ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗುವ ಲಕ್ಷಣವೇ ಇಲ್ಲ. ನೆರೆಯ ತಮಿಳುನಾಡಿನ ಎಂಪಿಗಳನ್ನು ನೋಡಿಯಾದ್ರೂ ಇವ್ರು ಕಲಿತುಕೊಳ್ಳಲಿ.

ಪ್ರಶ್ನೆ: ಈ ಬಾರಿ ಪ್ರತ್ಯೇಕತೆಯ ಬೇಡಿಕೆ ನಾಟಕೀಯವಾಗಿ ದಿಢೀರ್ ಅಂತ ಬಂತಲ್ಲ, ಹೇಗೆ ಸರ್?
ಚಂಪಾ: ಅದಕ್ಕೂ ಕಾರಣಗಳಿವೆ. ಬಹಳ ಪ್ರಜ್ಞಾಪೂರ್ವಕವಾಗಿ ಬಳಸಿದ conspiracy ಇಲ್ಲಿದೆ. ನೋಡ್ರಿ ಮೊನ್ನೆ ಎಲೆಕ್ಷನ್‍ನಲ್ಲಿ ಅವ್ರು 104 ಬಂದ್ರೂ, 78 ಮತ್ತು 38 ಸೇರಿಕೊಂಡು ಸರ್ಕಾರ ಮಾಡಿಬಿಟ್ರಲ್ಲಾ, ಅದು ಅವ್ರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂಗಾಗೈತಿ. ಇದು ಅವ್ರಿಗೆ ಸಹಿಸಿಕೊಳ್ಳಲಾರದ ಸಂಕಟ. ಆದ್ದರಿಂದ ಹೆಂಗಾರ ಮಾಡಿ ಸದ್ಯ ಇರೋ ಕರ್ನಾಟಕ ಸರ್ಕಾರವನ್ನ ಬದ್ನಾಂ ಮಾಡ್ಬೇಕು, ಅಸ್ಥಿರಗೊಳಿಸ್ಬೇಕು ಅನ್ನೋದು ಮೂಲ ಉದ್ದೇಶ. ಇನ್ನೊಂದು ಕಾರಣ ಏನಂದ್ರೆ, ದೇವೇಗೌಡ್ರು-ಕುಮಾರಸ್ವಾಮಿಯವರ ಪಕ್ಷ ಒಂದು ಪ್ರಾದೇಶಿಕ ಪಕ್ಷ. ಇವತ್ತಲ್ಲಾ ನಾಳೆ ಅದು ಜೋರಾಗಿ ಬೆಳೆಯುತ್ತೆ. ಈ ಪ್ರಾದೇಶಿಕ ಪಕ್ಷಗಳು ಬೆಳೆದಂತೆಲ್ಲಾ ಈ ರಾಷ್ಟ್ರೀಯ ಪಕ್ಷಗಳು irrelevant ಆಗಿಹೋಗ್ತವೆ. ಅವ್ರ ಹಿಡಿತ ತಪ್ಪಿ ಹೋಗ್ತೈತಿ. ಅದು ಅವ್ರ ದೊಡ್ಡ ಚಿಂತೆ. ಭಾರತ ದೇಶ ಒಂದು ಒಕ್ಕೂಟ ವ್ಯವಸ್ಥೆ, ಫೆಡರಲ್ ಸ್ಟ್ರಕ್ಚರ್. ಯಾವತ್ತಿಗೂ ಇದು ಏಕರಾಷ್ಟ್ರ ಅಂತ ಇತಿಹಾಸದೊಳಗ ಎಂದೂ ಇರ್ಲಿಲ್ಲ. ಎಲ್ರೂ ಕೂಡಿ ಒಟ್ಟು ಊಟ ಮಾಡೋಣ ಅನ್ನೋ ಭಾವನೆಯಲ್ಲಿ ನಾವೆಲ್ಲ ಜೊತೆಗೂಡಿದ್ದೇವೆ. ಬಾಬಾ ಸಾಹೇಬರು ಫೆಡರಲ್ ಸ್ಟ್ರಕ್ಚರ್ ಬಗ್ಗೆ ಸ್ಪಷ್ಟವಾದ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ. ಆದ್ರೆ ಈಗ ಏನಾಗ್ತಿದೆ? ಕೇಂದ್ರ ಬಲಿಷ್ಠ ಆಗ್ತಾ ಹೊಂಟೈತಿ, ರಾಜ್ಯಗಳು ಬಲಹೀನವಾಗ್ತಾ ಇದಾವ. ಅವ್ರಿಗೆ ಬೇಕಾಗಿರೋದು ಅದೇ, ಧರ್ಮಾಧಾರಿತ ರಾಜಕೀಯ, ಧರ್ಮಾಧಾರಿತ ರಾಷ್ಟ್ರೀಯತೆ. ಹೀಗೆ ಧರ್ಮಾಧಾರಿತ ರಾಷ್ಟ್ರೀಯತೆ ಅಂತ ಹೊರಟ ದೇಶಗಳು ಫ್ಯಾಸಿಸ್ಟ್ ಆಳ್ವಿಕೆಯಲ್ಲಿ ಕೊನೆಗೊಂಡಿರೋದೇ ಪ್ರಪಂಚದ ಇತಿಹಾಸ. ಫ್ಯಾಸಿಸಂ ಅಂದ್ರೆ ಏನು? ನಾನೇನು ಮಾಡಿದ್ರೂ ನೀನು ಪ್ರಶ್ನೆ ಮಾಡೋಹಂಗಿಲ್ಲ. ಭಿನ್ನಮತಕ್ಕೆ ಅವಕಾಶವಿಲ್ಲ. ನಾನೇನೇ ಮಾಡಿದ್ರೂ ಬಾಯ್ಮುಚ್ಚಿಕೊಂಡು ಒಪ್ಕೋಬೇಕು. ಇದೇ ಫ್ಯಾಸಿಸಂನ ಸ್ವರೂಪ. ಈಗಾಗಲೇ ಈ ಲಕ್ಷಣಗಳು ನಮ್ಮಲ್ಲಿ ವ್ಯಾಪಕ ಆಗ್ತಾಇವೆ. ಇದು ನಿಜವಾದ ಡೇಂಜರ್.

 

ಸಂದರ್ಶನ
ದೊಡ್ಡಿಪಾಳ್ಯ ನರಸಿಂಹಮೂರ್ತಿ

LEAVE A REPLY

Please enter your comment!
Please enter your name here