Homeರಾಜಕೀಯ`ಅಬ್‍ನಾರ್ಮಲ್‍ಗಳೇ ಹೊಸ ನಾರ್ಮಲ್‍ಗಳಾಗುವುದು ಬಲು ಅಪಾಯಕಾರಿ’

`ಅಬ್‍ನಾರ್ಮಲ್‍ಗಳೇ ಹೊಸ ನಾರ್ಮಲ್‍ಗಳಾಗುವುದು ಬಲು ಅಪಾಯಕಾರಿ’

- Advertisement -
- Advertisement -

ಸ್ನೇಹಿತರೆ, ಇಲ್ಲಿಗೆ ನಾನು ಮಾತಾಡೋದಕ್ಕಿಂತ ಹೆಚ್ಚಾಗಿ ಯಶವಂತ್ ಸಿನ್ಹಾ ಮತ್ತು ಶತ್ರುಘ್ನ ಸಿನ್ಹರಂತ ಲೀಡರುಗಳ ಮಾತುಗಳನ್ನು ಕೇಳೋಕ್ಕಾಗಿ ಬಂದಿರೋನು. ಹಾಗಾಗಿ ಹೆಚ್ಚಿಗೆ ಸಮಯ ತಗೊಳಲ್ಲ. ನಾ ತೆಗೆದುಕೊಳ್ಳೊ ಕಡಿಮೆ ಸಮಯದಲ್ಲೂ, ನಮ್ಮ ಡೆಮಾಕ್ರೆಸಿ ಮತ್ತು ಸಂವಿಧಾನ ಅಪಾಯದಲ್ಲಿದೆ ಅನ್ನೋದನ್ನ ಪುನರಾವರ್ತನೆ ಮಾಡೋದಕ್ಕೂ ಹೋಗಲ್ಲ. ಯಾಕಂದ್ರೆ ಈ ವಿಷಯಗಳನ್ನು ನಿಮಗೆ ಮನವರಿಕೆ ಮಾಡಿಕೊಡ್ಲಿಕ್ಕೆ ಅಂತ ಬೇರೆಯವರು ಯಾವೆಲ್ಲ ಉದಾಹರಣೆಗಳನ್ನು ಕೊಟ್ಟಿದಾರಲ್ವಾ, ಅವುಗಳ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಲೇ ಹೋಗುತ್ತಿದೆ. ಹಾಗಾಗಿ ದೇಶ ಅಪಾಯದಲ್ಲಿರೋದ್ರ ಬಗ್ಗೆ ನಿಮಗೇ ಚೆನ್ನಾಗಿ ತಿಳಿದಿರುತ್ತೆ. ಆದರೆ ಇವುಗಳನ್ನು ಉದಾಹರಿಸುವಾಗ ಬಳಸಲಾಗುತ್ತಿದೆಯಲ್ವಾ `ನ್ಯೂ ನಾರ್ಮಲಿಂಗ್’ (ಹೊಸ ಸಹಜತೆ) ಎಂಬ ಶಬ್ಧ, ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಯಾವುದೇ ಒಂದು ವಿಚಾರಕ್ಕೆ, ವಸ್ತುವಿಗೆ ನಾವು `ಒಗ್ಗಿ’ಬಿಟ್ಟೆವು ಅಂದ್ರೆ ಅದರಲ್ಲಿನ ಅಸಹಜತೆ ನಮಗೆ ಅರ್ಥವೇ ಆಗಲ್ಲ. ನೋಡಿ, ನಮ್ಮ ದೇಶದಲ್ಲಿ ಇತ್ತೀಚೆಗೆ 72 ದೊಂಬಿಹತ್ಯೆಗಳು ನಡೆದಿವೆ. ನಿಮಗೆ ಗೊತ್ತಾ, ಆರ್‍ಟಿಐ ಕಾಯ್ದೆಯಡಿ ಕಾನೂನುಬದ್ಧವಾಗೇ ಮಾಹಿತಿ ಕೇಳಿದ ಎಷ್ಟು ಕಾರ್ಯಕರ್ತರ ಹತ್ಯೆ ನಡೆದಿದೆ ಅಂತ. 63 ಜನ! ಸೊಹ್ರಾಬುದ್ದೀನ್ ಮರ್ಡರ್ ಕೇಸಿನಲ್ಲಿ ಎಷ್ಟು ಜನ ಸಾಕ್ಷಿದಾರರು ಹಿಂದೆ ಸರಿದಿದ್ದಾರೆ, ತಾವು ಕೊಟ್ಟಿದ್ದ ಮೊದಲ ಹೇಳಿಕೆಗೇ ಉಲ್ಟಾ ಸಾಕ್ಷಿ ನುಡಿಯುತ್ತಿದ್ದಾರೆ, ಎಷ್ಟು ಜನ ನಾಪತ್ತೆಯೇ ಆಗಿಬಿಟ್ಟಿದ್ದಾರೆ. 54 ಜನ ಅಂತ ಹೇಳಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಏನು ಎನ್‍ಕೌಂಟರ್‍ಗಳು ನಡೀತಿದಾವಲ್ಲ, ಅದರಲ್ಲಿ ಎಷ್ಟು ಜನರನ್ನು ಕೊಲೆ ಮಾಡಲಾಗಿದೆ. ಇವೆಲ್ಲ ಮಾಧ್ಯಮಗಳಲ್ಲಿ ಚರ್ಚೆಯೇ ಆಗುತ್ತಿಲ್ಲ. ಪತ್ರಿಕೆಗಳಲ್ಲಿ ಎನ್‍ಕೌಂಟರ್ ಸುದ್ದಿ ಬಂದರು, ಯಾವುದೋ ಪುಟದ ಯಾವುದೋ ಒಂದು ಸಣ್ಣ ಮೂಲೆಯಲ್ಲಿ ಪ್ರಕಟಿಸಿ ಸುಮ್ಮನಾಗಿಬಿಟ್ಟಿರ್ತಾರೆ.
ಇದೇ ಥರಾ ಸಂಸತ್ತು ಹೇಗೆ ನಡೀತಿದೆ, ಸುಪ್ರೀಂ ಕೋರ್ಟಿನಲ್ಲಿ ಎಂಥಾ ಪರಿಸ್ಥಿತಿ ಇದೆ, ಸಿಬಿಐನಂತ ಸಂಸ್ಥೆಗಳನ್ನು ಹೇಗೆ ಬಳಸಿಕೊಳ್ಳಲಾಗ್ತಿದೆ, ಹೀಗೆ ಇವೆಲ್ಲಾ ನಮ್ಮ ಪಾಲಿಗೆ `ನ್ಯೂ ನಾರ್ಮಲ್’ಗಳಾಗುತ್ತಿವೆ. ಇಂಥಾ ಅಬ್‍ನಾರ್ಮಲ್‍ಗಳೇ ನಮ್ಮ ಹೊಸ ನಾರ್ಮಲ್‍ಗಳಾದಾಗ ಏನೆಲ್ಲ ಅಪಾಯ ಎದುರಿಸಬೇಕಾಗುತ್ತೆ ಅನ್ನೋದು, ನಾವು ಮನವರಿಕೆ ಮಾಡಿಕೊಳ್ಳಲೇಬೇಕಿರುವ ಸುಡುವಾಸ್ತವ. ಸ್ನೇಹಿತರೇ, ನಾವೇನು ಈಗ `ಒಗ್ಗಿ’ಹೋಗುತ್ತಿದ್ದೇವಲ್ಲಾ, ಈ `ಹೊಸ ವ್ಯವಸ್ಥೆ’ಯಿಂದ ಇನ್ನು ಒಂದೆರಡು ಇಂಚು ಮುಂದಕ್ಕೆ ಚಲಿಸಿದರು ಅದೇ ನಮ್ಮ ಇಡೀ ವ್ಯವಸ್ಥೆಯ ದಿ ಎಂಡ್ ಆಗಿರುತ್ತೆ! ನಮ್ಮ ವ್ಯವಸ್ಥೆ ಅಂದ್ರೆ, ನಾವು ನಂಬಿರುವ ಡೆಮಾಕ್ರೆಸಿ!!
ನಮ್ಮ ಕಡೆ ಒಂದು ಮಾತಿದೆ. ಅದರ ಸತ್ಯಾಸತ್ಯತೆ ಕುರಿತು ನಾನೇನು ಪ್ರಯೋಗ ಮಾಡಿ ನೋಡಿಲ್ಲ. ಆದ್ರೂ ಆ ಮಾತಿನಲ್ಲಿ ಒಂದಷ್ಟು ತೂಕ ಇದೆ. ಏನಂದ್ರೆ, ನೀವು ಒಂದು ಕಪ್ಪೆಯನ್ನ ತಗೊಂಡು ಪಾತ್ರೆಯಲ್ಲಿ ಕುದಿಯುತ್ತಿರುವ ನೀರಿನೊಳಗೆ ಹಾಕಿ, ಆಗ ಅದು ಪಾತ್ರೆಯಿಂದ ಆಚೆಗೆ ನೆಗೆದು ಪ್ರಾಣ ಉಳಿಸಿಕೊಳ್ಳುತ್ತಂತೆ. ಅದೇ, ಕಪ್ಪೆಯನ್ನು ಸಹಜ ಉಷ್ಣತೆಯಲ್ಲಿರುವ ನೀರಿನೊಳಗೆ ಹಾಕಿ, ಅದು ಆಚೆಗೆ ನೆಗೆಯುವ ಪ್ರಯತ್ನ ಮಾಡುವುದಿಲ್ಲ. ಈಗ ನೀವು ನಿಧಾನಕ್ಕೆ ನೀರನ್ನು ಬಿಸಿ ಮಾಡುತ್ತಾ ಸಾಗಿದಂತೆ, ಕಪ್ಪೆ ಆ ಬಿಸಿಗೆ ಒಗ್ಗುತ್ತಾ ಸಾಗುತ್ತದೆ. ಬಿಸಿ ಅನ್ನಿಸೋದಿಲ್ಲ. ನೆಗೆಯುವ ಪ್ರಯತ್ನವನ್ನೂ ಮಾಡಲ್ಲ. ಆದರೆ ಅದರ ಜೈವಿಕ ತಾಪವನ್ನೂ ಮೀರುವಷ್ಟು ಉಷ್ಣತೆಗೆ ನೀರು ತಲುಪಿದಾಗ ಕಪ್ಪೆ ಸತ್ತು ಹೋಗುತ್ತದೆ. ಯಾಕಂದ್ರೆ, ತನ್ನ ಸುತ್ತಲಿನ ವಾತಾವರಣದ ಬದಲಾವಣೆಗೆ ನಿಧಾನಕ್ಕೆ ಒಗ್ಗಿಕೊಳ್ಳುತ್ತಾ ಸಾಗುವ ಅದಕ್ಕೆ ತನ್ನ ಪರಿಸರ ಅಬ್‍ನಾರ್ಮಲ್‍ನತ್ತ ಸರಿಯುತ್ತಿರುವುದು ಅರ್ಥವೇ ಆಗಲ್ಲ. `ನ್ಯೂ ನಾರ್ಮಲಿಂಗ್’ಗೆ ಒಗ್ಗಿಕೊಳ್ಳುತ್ತಾ ಸಾಗುವ ನಮ್ಮ ಪರಿಸ್ಥಿತಿ ಆ ಕಪ್ಪೆಯಂತೆ ದುಸ್ಥಿತಿಗೆ ತಲುಪುವುದು ಖಾತ್ರಿ.
ಈಗ ನಾನು, ಆ ವಿಚಾರದ ಬಗ್ಗೆ ವಿಸ್ತಾರವಾಗಿ ಚರ್ಚೆ ಮಾಡಲು ಹೋಗಲ್ಲ. ಆದರೆ, ಹೀಗೆಲ್ಲ ಆಗುತ್ತಿದೆ ಅಂತ ಗೊತ್ತಾದ ಮೇಲೆ ನಾವು ಏನು ಮಾಡಬೇಕು, ನಮ್ಮ ಜವಾಬ್ಧಾರಿ ಏನಾಗಿರಬೇಕು ಎಂಬ ಮುಖ್ಯ ಅಂಶದ ಮೇಲೆ ಬೆಳಕು ಚೆಲ್ಲುತ್ತೇನೆ. ಮುಖ್ಯವಾಗಿ ಮೂರು ಬಗೆಯ ಜನರಿಗೆ ನನ್ನ ಮಾತುಗಳನ್ನು ತಲುಪಿಸಲಿಕ್ಕೆ ಬಯಸ್ತೀನಿ. ಮೊದಲನೆಯದ್ದು ನಮ್ಮ ಮೀಡಿಯಾಗಳು. ಎರಡನೆಯದಾಗಿ ನೀವುಗಳು, ಅಂದರೆ ಜನಸಾಮಾನ್ಯರು. ಮೂರನೆಯವರು ನಮ್ಮ ವಿರೋಧ ಪಕ್ಷಗಳ ನಾಯಕರು.
ನಮ್ಮ ದೇಶದ ಮಾಧ್ಯಮಗಳು ಹೆದರಿಕೊಂಡಿವೆ, ಅವರನ್ನು ಬೆದರಿಸಲಾಗುತ್ತಿದೆ ಅನ್ನೋ ಮಾತುಗಳು ಇತ್ತೀಚೆಗೆ ಕೇಳಿಬರುತ್ತಿವೆ. ಆದರೆ ನನಗೆ ಹಾಗನ್ನಿಸುವುದಿಲ್ಲ. ಮೀಡಿಯಾಗಳು ಬಲಿಯಾಗಿರೋದು ಭಯಕ್ಕಲ್ಲ, ಆಮಿಷಕ್ಕೆ! ತಮ್ಮ ಆಮಿಷ ಲಂಪಟತನವನ್ನು ಮರೆಮಾಚಲು `ಭಯ’ವನ್ನು ಒಂದು ನೆಪ ಮಾಡಲಾಗುತ್ತಿದೆ ಅಷ್ಟೆ. ನಮ್ಮ ವೃತ್ತಿಧರ್ಮವನ್ನು ನಾವು ಪಾಲಿಸಿದ್ರೆ ಏನು ಮಾಡಿಕೊಳ್ತಾರೆ? ಯಾವ ಕಾರಣಕ್ಕೆ ಮೀಡಿಯಾಗಳು ಹೆದರಿಕೊಳ್ತಿವೆ? ಸರ್ಕಾರದ ಜಾಹಿರಾತುಗಳು ನಿಂತುಹೋಗ್ತವೆ ಅಂತಲಾ? ನಿಮಗೆ ಗೊತ್ತಿರಬಹುದು, ಬೋಫೋರ್ಸ್ ಹಗರಣದ ಸಮಯದಲ್ಲಿ ನಾನು ಮತ್ತು ನನ್ನ ಜತೆಗಾರರು ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ಬರೆಯುವಾಗ, ನಮ್ಮ ಮೇಲೆ ಎಷ್ಟು ಕೇಸುಗಳಿದ್ದವು, ಎಷ್ಟು ರೇಡುಗಳಾಗಿದ್ದವು, ಎಷ್ಟು ವಿಚಾರಣೆಗಳನ್ನ ಎದುರಿಸಿದ್ದೆವು, ನನ್ನ ಗೆಳೆಯ ಲೆಕ್ಕ ಇಟ್ಟಿರುವ ಪ್ರಕಾರ 326 ಕೇಸುಗಳ ವಿಚಾರಣೆ ಎದುರಿಸಿದ್ದೆವು. ಆದರು ನಮಗ್ಯಾವ ಭಯ ಇರಲಿಲ್ಲ.
ಜನ ಹೇಳ್ತಾರೆ, ಅವರ ಕಡೆಯ ಇನ್ನೂರು ಜನ ಹಗಲುರಾತ್ರಿ ಕೂತ್ಕಂಡು ಮಾನಿಟರ್ ಮಾಡ್ತಾ ಇದಾರೆ, ಯಾವ ಚಾನೆಲ್‍ನಲ್ಲಿ ಏನು ಬರ್ತಿದೆ ಅನ್ನೋದನ್ನು ಗಮನಿಸ್ತಾ ಇದಾರೆ. ಅರೆ, ಗಮನಿಸಲಿ ಬಿಡಿ. ನಾವು ಇನ್ನೂ ಸರ್ವಾಧಿಕಾರಿಗಳ ಭಯಕ್ಕೆ ತುತ್ತಾದ ಬೇರೆ ದೇಶಗಳ ಜನರ ಆತಂಕದ ಬದುಕಿಗೆ ಜಾರಿಕೊಂಡಿಲ್ಲ. ಆದರು ಇಷ್ಟುಬೇಗ ನಾವ್ಯಾಕೆ ಆ ಮಟ್ಟದ ಹೆದರಿಕೆಯನ್ನ ಪ್ರದರ್ಶಿಸಬೇಕು? ಹಾಗಾಗಿ ಇದು ಭಯ ಅಂತ ನನಗನ್ನಿಸುವುದಿಲ್ಲ. ಬೈಬಲ್‍ನಲ್ಲಿ ಒಂದು ಒಳ್ಳೆ ಮಾತು ಬರುತ್ತೆ, You Cannot Serve God and memon together’!
ಮೊದಲೆಲ್ಲ ಮೀಡಿಯಾ ಅಂದ್ರೆ ಹೇಗಿತ್ತು ಅಂದ್ರೆ. ಪೇಪರ್ ನಡೆಸೋರಿಗೆ ಮತ್ತೊಂದು ಉದ್ಯಮ ಇರುತ್ತಿತ್ತು. ಅದರಿಂದ ಸಂಪಾದನೆ ಮಾಡಿದ ಹಣವನ್ನು ಇಲ್ಲಿಗೆ ಹಾಕಿ ಪತ್ರಿಕೆ ನಡೆಸೋರು. ಆದ್ರೆ ಈಗ ಮೀಡಿಯಾ ಶುರು ಮಾಡಿ, ಅದರ ಮರೆಯಲ್ಲಿ, ಅದರ ರಿಯಾಯಿತಿಯಲ್ಲಿ ಬೇರೆಬೇರೆ ಉದ್ಯಮಗಳನ್ನು ಮಾಡಿಕೊಳ್ತಾರೆ. ಮೀಡಿಯಾಗಳು ಸರ್ಕಾರಕ್ಕೆ ಹೆದರುವ ಅವಶ್ಯಕತೆಯೇ ಇಲ್ಲ, ನೀವು ನಿಮ್ಮ ಭ್ರಷ್ಟವ್ಯಾಮೋಹವನ್ನು ಬಿಟ್ಟರೆ ಸಾಕು ನೀವು ಮುಕ್ತರಾಗಿಬಿಡ್ತೀರಿ.
ಸರಿ ಮೀಡಿಯಾಗಳು ತಾವು ಮಾಡಬೇಕಾದ ಕೆಲಸ ಮಾಡದೆ ಉಳಿದಾಗ ಏನು ಮಾಡಬೇಕು? ಸಿಂಪಲ್, ಯಾವ ಹತಾರಗಳನ್ನು ಮೋದಿ ಬಳಸಿದ್ದರೋ ಅದೇ ಹತಾರಗಳನ್ನು ನಾವು ಬಳಸಬೇಕು ಅಷ್ಟೆ, ಅದು ಸೋಶಿಯಲ್ ಮೀಡಿಯಾ!
ಇವತ್ತು ಎಲ್ಲರ ಕೈಯಲ್ಲೂ ಮೊಬೈಲ್‍ಗಳಿವೆ, ಹಾಗಾಗಿ ಎಲ್ಲರೂ ಜರ್ನಲಿಸ್ಟ್‍ಗಳಾಗಬಹುದು. ಯಾವುದೋ ಒಂದು ದೊಂಬಿಹತ್ಯೆಯನ್ನು ಮೀಡಿಯಾಗಳು ಪ್ರಸಾರ ಮಾಡಲ್ಲ ಅಂತಾದರೆ, ಆ ಕ್ಷಣದಲ್ಲಿ ನೀವು ಅಲ್ಲಿದ್ದರೆ, ನಿಮ್ಮ ಮೊಬೈಲ್‍ನಲ್ಲಿ ವೀಡಿಯೊ ಮಾಡಿ ನಿಮ್ಮ ಸ್ನೇಹಿತರಿಗೆ ಹಂಚಿ. ಹತ್ತರಿಂದ ನೂರು, ನೂರರಿಂದ ಸಾವಿರ, ಸಾವಿರದಿಂದ ಲಕ್ಷ. ಹೀಗೆ ಯಾವ ಸುದ್ದಿಯನ್ನು ಸರ್ಕಾರ ಹತ್ತಿಕ್ಕಲು ಬಯಸಿತ್ತೊ, ಅದನ್ನು ಯಾವ ಮೀಡಿಯಾದ ಹಂಗಿಲ್ಲದೆ ಸಂಜೆವೇಳೆಗೆ ಇಡೀ ದೇಶದಲ್ಲಿ ಚರ್ಚೆಗೆ ತರಬಹುದಾದ ಅವಕಾಶ ನಮ್ಮ ಮುಂದಿದೆ. ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ನಾವದನ್ನು ಸಾಧಿಸಬೇಕಿದೆ. ಒಬ್ಬೊಬ್ಬ ವ್ಯಕ್ತಿ ಒಂದೊಂದು ವಿಚಾರದ ಸತ್ಯಾಂಶಗಳನ್ನು ಬೆಳಕಿಗೆ ತಂದು ಜನರಿಗೆ ಹಂಚಿದರೆ ಸಾಕಲ್ಲವೇ…
ಮೊದಲೆಲ್ಲ ನಾನು ಇದು ಎರಡೂವರೆ ಮನುಷ್ಯರ ಸರ್ಕಾರ ಅಂತ ಹೇಳ್ತಿದ್ದೆ. ಒಬ್ಬರು ಮೋದಿ, ಎರಡನೆಯವರು ಶಾ, ಅರ್ಧ ಅರುಣ್ ಜೇಟ್ಲಿ! ಆದರೆ ಈಗ ಹೇಳ್ತೀನಿ, ಒಂದೂ ಮುಕ್ಕಾಲು ಮಂದಿಯ ಸರ್ಕಾರ ಇದು. ಒಬ್ಬರು ಯಾರು? ಮೋದಿ ಅಲ್ಲ, ಅಮಿತ್ ಶಾ! ಪಾಪ, ಮೋದಿ ಫೋಟೊ ತೆಗೆಸಿಕೊಳ್ಳೋದ್ರಲ್ಲಿ, ಇವೆಂಟ್ ಮ್ಯಾನೇಜ್‍ಮೆಂಟಲ್ಲಿ ಬ್ಯುಸಿ ಆಗಿಬಿಟ್ಟಿದ್ದಾರೆ, ಇನ್ನು ಸರ್ಕಾರ ನಡೆಸೋದು ಎಲ್ಲಿಂದ ಬಂತು. ಹಾಗಾಗಿ ಸಿಬಿಐ, ಜಾರಿ ನಿರ್ದೇಶನಾಲಯ, ಸೀರಿಯಸ್ ಫ್ರಾಡ್ಸ್ ಆಫೀಸ್‍ನಂತಹ ಪ್ರಮುಖ ಸಂಸ್ಥೆಗಳೆಲ್ಲ ಶಾಗೆ ರಿಪೋರ್ಟ್ ಮಾಡ್ತಿವಿ. ಸೊಹ್ರಾಬುದ್ದೀನ್ ಕೇಸನ್ನು ಟ್ರಾನ್ಸ್‍ಫರ್ ಮಾಡುವ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಏನು ಬರೆದಿತ್ತು ಅನ್ನೋದನ್ನು ಓದಿದರೆ, ಈ ಅಮಿತ್ ಶಾ ಮೆಂಟಾಲಿಟಿ ಎಂತದ್ದು ಅನ್ನೋದು ಅರ್ಥವಾಗುತ್ತೆ. ಇದನ್ನು ಗಮನದಲ್ಲಿಟ್ಟುಕೊಂಡು, 2019ರಲ್ಲಿ ಅವರು ವಾಪಾಸ್ ಬಂದ್ರೆ ಏನೇನಾಗುತ್ತೆ ಅನ್ನೋದನ್ನು ಯೋಚಿಸಬೇಕಿದೆ.
ಕಳೆದ ಸಲ ಅಧಿಕಾರಕ್ಕೇರಲು ಏನೇನು ನೆರವಾಗಿದ್ದವೊ ಅವ್ಯಾವುವೂ ತಮ್ಮ ಜೊತೆಗಿಲ್ಲ ಅನ್ನೋದು ಅವರಿಗೂ ಗೊತ್ತು. ಯುವಜನರು ಜೊತೆಗಿಲ್ಲ, ರೈತರು ಜೊತೆಗಿಲ್ಲ, ವ್ಯಾಪಾರಿಗಳು ಜೊತೆಗಿಲ್ಲ, ಸಣ್ಣ-ಮಧ್ಯಮ ಉದ್ದಿಮೆದಾರರು ಜೊತೆಗಿಲ್ಲ, ಹಾಗಾಗಿ ತಮ್ಮ ಕಾಲಕೆಳಗಿನ ನೆಲ ಕುಸಿದುಹೋಗುತ್ತಿರೋದು ಅವರಿಗೆ ಅರ್ಥವಾಗಿದೆ. ಜೊತೆಗೆ ತಾವೇನಾದ್ರು ಅಧಿಕಾರ ಉಳಿಸಿಕೊಳ್ಳದೆ ಹೋದರೆ ತಾವು ತೊಂದರೆಗೆ ಸಿಲುಕಲಿದ್ದೇವೆ ಎಂಬುದೂ ಅವರಿಗೆ ಅರ್ಥವಾಗಿದೆ. ಹಾಗಾಗಿ ಅಧಿಕಾರ ಉಳಿಸಿಕೊಳ್ಳೋಕ್ಕೆ ಏನೆಲ್ಲ ಮಾಡಬಹುದೊ ಅದೆಲ್ಲವನ್ನೂ ಅವರು ಮಾಡಲಿಕ್ಕೆ ತಯಾರಾಗಿದ್ದಾರೆ. ಜನರ ನಡುವೆ ಗಲಾಟೆ ತಂದಿಡೋದು, ಇಬ್ಬಾಗಿಸೋದು, ದ್ವೇಷ ಹರಡೋದು ಹೀಗೆ.. ಏನೇನು ಸಾಧ್ಯವೋ ಎಲ್ಲಕ್ಕೂ ಸಿದ್ಧವಾಗಿದ್ದಾರೆ.
ಇಲ್ಲಿ ವಿರೋಧ ಪಕ್ಷಗಳ ಹೊಣೆ ತುಂಬಾ ದೊಡ್ಡದಿದೆ. ಅವರೆಲ್ಲ ಮೊದಲು ಒಂದು ಸತ್ಯ ಅರ್ಥ ಮಾಡಿಕೊಳ್ಳಬೇಕು. ದೇಶ ಅಪಾಯದಲ್ಲಿದೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತ ಅವರು ಆಗಾಗ್ಗೆ ಹೇಳುತಿರುತ್ತಾರೆ. ಸ್ವಾಮಿ, ದೇಶ ಅಪಾಯದಲ್ಲಿರೋದು ಪಕ್ಕಕ್ಕಿರಲಿ, ಮೊದಲು ನೀವೇ ಅಪಾಯದಲ್ಲಿದೀರಿ ಅನ್ನೋದನ್ನು ಅರ್ಥ ಮಾಡ್ಕೊಳ್ಳಿ. ಮೋದಿ, ಅವರಲ್ಲಿ ಯಾರನ್ನೂ ಬಿಡೋದಿಲ್ಲ. ಯಾಕಂದ್ರೆ ಪ್ರತಿಯೊಬ್ಬರನ್ನೂ ಆತ ತನ್ನ ಶತ್ರು ಅಂತಲೇ ಭಾವಿಸ್ತಾರೆ. ಆ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕರಿಗೆ ನಾನು ಈ ಮೂಲಕ ನಾಲ್ಕೈದು ಸಲಹೆ ಕೊಡಲು ಬಯಸ್ತೀನಿ.
ಮೊದಲನೆಯದ್ದು, ದಯವಿಟ್ಟು ಪ್ರತಿಷ್ಠೆಗೆ ಕಟ್ಟುಬೀಳಬೇಡಿ. ಬಹುಶ ಇದು ಸುಳ್ಳಿರಬಹುದು. ಮೀಡಿಯಾಗಳಲ್ಲಿ ಹೀಗೆ ಅಬ್ಬಿಸಿರುವ ಸಾಧ್ಯತೆಯೂ ಇದೆ. ರಾಜ್ಯಸಭೆಯ ಉಪಸಭಾಪತಿ ಎಲೆಕ್ಷನ್ ಇತ್ತಲ್ಲ, ಆಗ ನಮ್ಮ ಆಮ್ ಆದ್ಮಿಯ ಅರವಿಂದ್ ಕೇಜ್ರಿವಾಲ್‍ರು ಮೊದಲು ರಾಹುಲ್ ಗಾಂಧಿ ಫೋನ್ ಮಾಡ್ಲಿ ಅಂತ ಹಠ ಹಿಡಿದಿದ್ದರಂತೆ. ಅತ್ತ ರಾಹುಲ್‍ಜಿ ನಾನ್ಯಾಕೆ ಮೊದಲು ಫೋನ್ ಮಾಡಲಿ ಅಂತ ಮುನಿದಿದ್ದರಂತೆ. ಇಂಥಾ ಕಾರಣಗಳಿಂದ ಅವಕಾಶ ನಮ್ಮ ಕೈತಪ್ಪಿ ಹೋಗುತ್ತೆ. ಅಲ್ಲಾ ಮಾರಾಯ್ರೆ, ಒಂದುಕಡೆ ದೇಶ ಅಪಾಯದಲ್ಲಿದೆ ಅಂತ ಹೇಳ್ತೀರಾ, ಮತ್ತೊಂದು ಕಡೆ, ಅರೆ ಆತ ನನಗೆ ಫೋನ್ ಮಾಡ್ಲಿಲ್ಲ ಅಂತ ಮುನಿಸಿಕೊಳ್ತೀರಿ!.
ಅವರೆಲ್ಲ ಗಾಂಧಿಯನ್ನು ನೆನಪು ಮಾಡಿಕೊಳ್ಳಬೇಕು. ಆ ಘಟನೆಯನ್ನು ಓದಿದ್ದು ನನಗೆ ಚೆನ್ನಾಗಿ ನೆನಪಿದೆ. ಒಮ್ಮೆ ಗಾಂಧಿ, ವೈಸ್‍ರಾಯ್ ಮನೆಯ ಮೆಟ್ಟಿಲು ಮೇಲೆ ನಿಂತು ಕಾಯುತ್ತಿದ್ದರು. ವೈಸ್‍ರಾಯ್ ಒಳಗೆ ಮೀಟಿಂಗ್‍ನಲ್ಲಿದ್ದರು. ಗಾಂಧಿಯವರ ಕೈಯಲ್ಲಿ ಒಂದು ಅಲ್ಯುಮಿನಿಯಂ ಬಟ್ಟಲು ಇತ್ತು. ಅವರು ಯರವಾಡಾ ಜೈಲಿನಲ್ಲಿದ್ದಾಗ ಊಟ ಕೊಡುತ್ತಿದ್ದ ಬಟ್ಟಲು ಅದು. ಅದನ್ನೇ ವೈಸ್‍ರಾಯ್‍ಗೆ ಉಡುಗೊರೆಯಾಗಿ ಕೊಡಲು ತಂದಿದ್ದರು. ಆಗ ಯಾರೊ ಕೇಳಿದರಂತೆ, ಅಯ್ಯೋ ಮಹಾತ್ಮರೇ ನೀವು ಎಂತವರು, ಹೀಗೆ ಮೆಟ್ಟಿಲು ಮೇಲೆ ಕಾಯುತ್ತಾ ನಿಂತಿದ್ದೀರಲ್ಲ. ನಿಮ್ಮ ಬಳಿಗೇ ಅವರನ್ನು ಕರೆಸಿಕೊಳ್ಳುವ ಸಾಮಥ್ರ್ಯ ನಿಮಗಿದೆ ಅಂದರಂತೆ. ಅದಕ್ಕೆ ಗಾಂಧಿ ಕೊಟ್ಟ ಉತ್ತರ ಹೀಗಿತ್ತು.`I will stand on the viceroy`s steps with begging bowl in my Hand, if it is in the interest of India’!

ಮೊನ್ನೆ ಅರವಿಂದ ಕೇಜ್ರಿವಾಲರು ನಾವು ಸ್ವತಂತ್ರವಾಗಿ ಚುನಾವಣೆ ಎದುರಿಸ್ತೀವಿ ಅಂದ್ರು, ಮಾಯಾವತಿಯವರೂ ನಮಗೆ ಅಷ್ಟು ಸೀಟು ಬೇಕು ಇಷ್ಟು ಸೀಟು ಬೇಕು ಎಂಬ ಮಾತು ಮುಂದೆಬಿಟ್ಟರು. ಇವರೆಲ್ಲರ ಮೇಲೆ ನನಗೆ ಗೌರವವಿದೆ, ಅಲ್ಲದೇ ಆರಂಭದಲ್ಲಿ ತೇಲಿಬಿಡುವ ಇಂಥಾ ಮಾತುಗಳು ಚೌಕಾಸಿಯ ಮೊದಲ್ನುಡಿಗಳು ಅನ್ನೋದೂ ಗೊತ್ತಿದೆ. ಎಪ್ಪತ್ತು ಕೇಳಿದರೆ, ಕೊನೆಗೆ ನಲವತ್ತಕ್ಕಾದರು ಒಪ್ಪಿಕೊಳ್ತಾರೆ ಎಂಬ ಸಹಜ ತರ್ಕ. ಆದರೆ ಈ ನಿಮ್ಮ ಹೇಳಿಕೆಗಳು ಜನರ ಮನಸಿನ ಮೇಲೆ ಎಂಥಾ ಪರಿಣಾಮ ಬೀರುತ್ತೆ ಅನ್ನೋದು ನಿಮಗೆ ಗೊತ್ತಾ? ಅರೆ ಸೀಟು ಹಂಚಿಕೊಳ್ಳುವುದಕ್ಕೇ ಇವರ ನಡುವೆ ಒಮ್ಮತ ಇಲ್ಲ, ಅಂತದ್ದರಲ್ಲಿ ಗೆದ್ದುಬಂದರೆ ಒಟ್ಟಿಗೆ ಸರ್ಕಾರ ಮಾಡ್ತಾರಾ? ಅಧಿಕಾರಕ್ಕೂ ಹೀಗೇ ಕಚ್ಚಾಡ್ತಾರೆ ಎಂಬ ನೆಗೆಟಿವ್ ಆಲೋಚನೆಗೆ ಇಳಿದು ಬಿಡುತ್ತಾರೆ. ಇದು ಎದುರಾಳಿಗಳಿಗೆ ಅನುಕೂಲ ಮಾಡಿಕೊಡುತ್ತೆ. ಹಾಗಾಗಿ ನನ್ನ ಎರಡನೇ ಸಲಹೆಯೆಂದರೆ ಸಾರ್ವಜನಿಕವಾಗಿ ಚರ್ಚೆ ಮಾಡಬೇಡಿ. ಒನ್-ಟು-ಒನ್ ಕುಳಿತುಕೊಂಡು ನಿಮ್ಮ ಬೇಡಿಕೆಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳಿ.
ಮೂರನೇ ಸಲಹೆಯೆಂದರೆ, ದಯವಿಟ್ಟು ಹಳೆಯದನ್ನೆಲ್ಲ ಮರೆತುಬಿಡಿ. ಹಳೆಯ ಎಲೆಕ್ಷನ್‍ಗಳಲ್ಲಿ ಸಾಕಷ್ಟು ಕಹಿ ನೆನಪುಗಳಿರಬಹುದು, ವೈಯಕ್ತಿಕ ಜಿದ್ದಾಜಿದ್ದಿಗಳಿರಬಹುದು ಅವನ್ನೆಲ್ಲ ಮರೆತುಬಿಡಿ. ನನ್ನನ್ನು ಕೇಳೋದಾದ್ರೆ ಈ ಸಂದರ್ಭಕ್ಕೆ ಭವಿಷ್ಯವನ್ನೂ ಮರೆತುಬಿಡಿ. ಈಗ ಇವರ ಜೊತೆ ಸೇರಿಕೊಂಡು ಎಂಪಿ ಎಲೆಕ್ಷನ್ ಎದುರಿಸಿದರು ಮುಂದೆ ವಿಧಾನಸಭೆ ಎಲೆಕ್ಷನ್ ಇವರ ವಿರುದ್ಧವೇ ಸೆಣೆಸಬೇಕಾಗುತ್ತೆ, ಅಧಿಕಾರ ಹಂಚಿಕೊಳ್ಳುವಾಗ ಈತ ಹೀಗೆಲ್ಲ ತಕರಾರು ತೆಗೆಯಬಹುದು ಎಂಬಂತದ್ದನ್ನೂ ಮರೆತುಬಿಡಿ. ಯಾಕಂದ್ರೆ ಈಗ ನೀವು ಒಟ್ಟಾಗದಿದ್ದರೆ, ನಿಮ್ಮ ಆ ಭವಿಷ್ಯದ ಘಳಿಗೆಗಳು ನಿಮ್ಮ ಪಾಲಿಗೆ ಬರುವುದೇ ಇಲ್ಲ!
ನನ್ನ ಮುಂದಿನ ಸಲಹೆ ಸ್ಟ್ಯಾಟಿಸ್ಟಿಕ್‍ಗೆ ಸಂಬಂಧಿಸಿದ್ದು. ವಿರೋಧ ಪಕ್ಷದ ನಾಯಕರು ಎರಡು ಜೋಡಿಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು, 31 ಮತ್ತು 69. ಏನಿವು ಅಂತ ಅರ್ಥ ಆಗುತ್ತಿಲ್ಲವಾ? ಮೋದಿ ತನ್ನ ಪ್ರಖ್ಯಾತಿಯ ಉತ್ತುಂಗದಲ್ಲಿದ್ದ 2014ರ ಎಲೆಕ್ಷನ್‍ನಲ್ಲೂ ಅವರಿಗೆ ಸಿಕ್ಕ ಮತಗಳ ಪ್ರಮಾಣ 31% ಮಾತ್ರ. ನಿಮ್ಮ ಎಲ್ಲರ ಒಟ್ಟು ಮತಗಳಿಕೆ ಪ್ರಮಾಣ 69%! ನೀವು ಎಲ್ಲರೂ ಒಟ್ಟಾದರೆ, ನಿಮ್ಮ ಮತಗಳಿಕೆ ಶುರುವಾಗೋದೆ 69%ನಿಂದ. ಇನ್ನು ಮೋದಿಯನ್ನು ಸೋಲಿಸೋದು ಕಷ್ಟವೇ! ಇದು ಸಾಧ್ಯವಾಗೋದು, ಬಿಜೆಪಿಯ ಒಬ್ಬ ಅಭ್ಯರ್ಥಿಯ ಎದುರು ನಮ್ಮ ಪರವಾಗಿ ಒಬ್ಬನೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂಬ ತೀರ್ಮಾನಕ್ಕೆ ಬಂದಾಗ. ನಿಮ್ಮ ಎಲ್ಲರ ಮತಗಳು ವಿಭಜನೆಯಾಗದೆ ಒಟ್ಟಾಗುತ್ತವೆ. ಇಲ್ಲವಾದರೆ ಅಸ್ಸಾಂನಲ್ಲಿ, ತ್ರಿಪುರಾದಲ್ಲಿ, ಕರ್ನಾಟಕದಲ್ಲಿ ಬಂದ ಫಲಿತಾಂಶವೇ ಪುನರಾವರ್ತನೆಯಾಗುತ್ತದೆ.
ಇನ್ನು ಎರಡನೇ ಜೋಡಿಸಂಖ್ಯೆ ಅಂದ್ರೆ, 90 ಮತ್ತು 60. ಯಾವ ರಾಜ್ಯಗಳು ಲೋಕಸಭೆಯ ಒಟ್ಟು ಸೀಟುಗಳ 60%ನಷ್ಟು ಸ್ಥಾನಗಳನ್ನು ನೀಡುತ್ತವೆಯೋ ಆ ರಾಜ್ಯಗಳ 90% ಸೀಟುಗಳನ್ನು ಮೋದಿ ಕಳೆದ ಸಾರಿ ಗೆದ್ದಿದ್ದರಿಂದಲೇ ಸರ್ಕಾರ ರಚನೆ ಸುಲಭವಾಯ್ತು. ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಇತ್ಯಾದಿ. ಆದರೆ ಈ ಸಲ ಆ ರಾಜ್ಯಗಳಲ್ಲಿ ಮೋದಿ 90% ಸೀಟುಗಳನ್ನು ಗೆಲ್ಲುವ ಪರಿಸ್ಥಿತಿ ಇಲ್ಲ. ಹಾಗಾಗಿ ಆ ರಾಜ್ಯಗಳಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ಫೋಕಸ್ ಮಾಡುವುದು ತುಂಬಾ ಮುಖ್ಯ. ಇಲ್ಲಿ ತನಗಾಗುವ ನಷ್ಟಗಳನ್ನು ಬೇರೆ ರಾಜ್ಯಗಳಲ್ಲಿ ತುಂಬಿಕೊಳ್ಳಲು ಅವರು ತಂತ್ರ ಹೆಣೆಯುತ್ತಿದ್ದಾರೆ, ಅವುಗಳ ಮೇಲೂ ಗಮನ ಕೇಂದ್ರೀಕರಿರಿಸುವುದು ಅವಶ್ಯಕ. ಈ ನಿಟ್ಟಿನಲ್ಲಿ, ಈ ತಂತ್ರಗಾರಿಕೆಯೊಂದಿಗೆ ವಿರೋಧಪಕ್ಷಗಳು ಕಾರ್ಯಾಚರಣೆಗೆ ಇಳಿಯಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...