ನಮ್ಮ ಸಿದ್ದೇಶ್ವರ ಸ್ವಾಮೀಜಿಗಳು ಸ್ವಾಮಿಗಳ ಹಿಂಡಿನಲ್ಲೇ ಎದ್ದು ಕಾಣುವಂತವರು ಎಲ್ಲ ಸ್ವಾಮಿಗಳು ಕೆಂಪು ಉಡುಪುಗಳಲ್ಲಿ ಕಾಣಿಸಿಕೊಂಡರೆ ಅವರು ಬಿಳಿ ಧಿರಿಸಿನಲ್ಲಿ ಹಂಸದಂತೆ ಕಾಣುತ್ತಾರೆ. ಮಾತು ಕೂಡ ಅಷ್ಟೆ. ಹಂಸಕ್ಷೀರ ನ್ಯಾಯದಂತೆ. ಉತ್ತರ ಕರ್ನಾಟಕದಲ್ಲಿ ಏರ್ಪಡುವ ಅವರ ಉಪನ್ಯಾಸ ಕೇಳಲು ಸಾವಿರಾರು ಜನ ಸೇರುತ್ತಾರೆ. ಅಲ್ಲಿ ಸಿದ್ದೇಶ್ವರರು ಆಡುವ ಮಾತು ಕೇಳಿದರೆ ಬಸವ ಯುಗವೇ ತೆರೆದುಕೊಳ್ಳುತ್ತದೆ. ಅಮರ ಜ್ಯೋತಿಯಾದ ಬಸವೇಶ್ವರರ ವಾಣಿ ಕೇಳಿದಂತಾಗುತ್ತದೆ. ಇಂತಹ ಸುಯೋಗವೊಂದು ಸುತ್ತೂರು ಮಠದ ಸುತ್ತಲ ಭಕ್ತಾದಿಗಳಿಗೆ ಲಭ್ಯವಾಯ್ತಂತಲ್ಲಾ. ಕರ್ನಾಟಕಕ್ಕೆ ಯೋಗಾಭ್ಯಾಸ ಮಾಡಲು ಬಂದ ಪ್ರಧಾನ ಮಂತ್ರಿಯ ಪ್ರಧಾನ ಭೇಟಿಗಳಲ್ಲಿ ಸುತ್ತೂರು ಮಠವು ಒಂದಾಗಿತ್ತು. ಅಲ್ಲಿನ ಶ್ರೀಗಳು ತಲೆಯೋಡಿಸಿ ಮೋದಿಯನ್ನು ಮರಳು ಮಾಡುವ ಭಾಷಣ ಮಾಡುವ ಶಕ್ತಿ ತಮಗಿಲ್ಲವೆಂದು ಸಿದ್ದೇಶ್ವರ ಸ್ವಾಮಿಗಳನ್ನ ಕರೆಸಿದರು. ಶ್ರೀ ಸಿದ್ದೇಶ್ವರರು ಸುತ್ತೂರು ಅಲ್ಲದೆ ಮೋದಿಯವರೂ ತಲೆದೂಗುವಂತೆ ಮಾತನಾಡುವಾಗ ಅರ್ಥವಾಗದ ಮೋದಿ ಸುತ್ತೂರು ಕಡೆ ವಾಲಿ ಮಾತಿನ ಅರ್ಥವನ್ನ ತಿಳಿದುಕೊಂಡು ಕೈ ಮುಗಿಯುತ್ತಿದ್ದುದು ಮನಮೋಹಕವಾಗಿತ್ತಂತಲ್ಲಾ. ಮುಖ್ಯವಾಗಿ ಸಿದ್ದೇಶ್ವರರು ಮೋದಿಯನ್ನ ಕುರಿತು ನಮ್ಮ ಪ್ರಧಾನಿಯವರು ಲೋಕದ ಹಿತ ಬಯಸುವಂತಹ ಲೋಕ ಚಿಂತಕರು, ಆದರೂ ಆ ಮುಖದಲ್ಲಿ ಚಿಂತೆ ಕಾಣುವುದಿಲ್ಲ. ಬದಲಿಗೆ ಸದಾ ಪ್ರಸನ್ನತೆಯೇ ಕಾಣುತ್ತದೆ ಎಂದಾಗ ಇಡೀ ಸಭೆ ಬೆರಗಾಗಿ ಸಿದ್ದೇಶ್ವರ ಸ್ವಾಮಿ ಸುಳ್ಳಿಗೆ ಸುಸ್ತು ಹೊಡೆಯಲಿಲ್ಲವಂತಲ್ಲಾ. ಅಂತೂ ಭಾರತದಲ್ಲಿ ಆಳುವವರಿಗೊಂದು ನ್ಯಾಯ ಸಂಹಿತೆ ಸಾಮಾನ್ಯರಿಗೊಂದು ನ್ಯಾಯ ಸಂಹಿತೆ ರೂಪುಗೊಳ್ಳುತ್ತಿದೆಯಂತಲ್ಲಾ, ಥೂತ್ತೇರಿ.

*****
ಈ ಹಿಂದಿನ ಸಿದ್ದೇಶ್ವರ ಸ್ವಾಮಿಯವರ ಮಾತುಗಳನ್ನು ಗ್ರಹಿಸಿದ್ದಾದರೆ, ಅವು ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗಮೆಚ್ಚಿ ಅಹುದಹುದೆನ್ನಬೇಕು ಎನ್ನುವ ಬಸವಣ್ಣನವರ ಮಾನಿನಂತಿದ್ದುದ್ದರಿಂದ ಅವರೆದುರು ಕುಳಿತ ಸಾವಿರಾರು ಜನರು ಅಹುದಹುದೆನ್ನುತ್ತ ತಲೆ ಹಾಕುತ್ತಿದ್ದರು. ಆದರೆ ಸುತ್ತೂರಿನಲ್ಲಿ ಅಹುದಹುದೆನ್ನುವುದರ ಬದಲಿಗೆ ಮೋದಿಗೆ ಜೈಕಾರದಂತಹ ಗದ್ದಲ ಕೇಳಿಬಂತು. ದಶಕಗಳ ಕಾಲ ಮುತ್ತಿನಹಾರದಂತೆ ಮಾತಾನಾಡಿದ್ದ ಸಿದ್ದೇಶ್ವರರು ಮೋದಿ ಹೊಗಳಿಕೆಯ ಸುಳ್ಳು ಮಾತುಗಳಿಂದ ತಮ್ಮ ಖ್ಯಾತಿಗೇ ಕಳಂಕ ತಂದುಕೊಂಡರಂತಲ್ಲಾ. ಸಿದ್ದೇಶ್ವರರ ಸುಳ್ಳು ಬಿತ್ತರವಾಗುವಾಗ ಅಗ್ನಿಪಥ ಜಾರಿಯಿಂದ ಆಕ್ರೋಶಗೊಂಡ ಜನ ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಇನ್ನೂರು ಕೋಟಿ ರೂಪಾಯಿಗಳ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿದ್ದರು. ಇದು ಲೋಕಹಿತ ಬಯಸುವವರನ್ನ ಕಂಗಾಲು ಮಾಡಬೇಕಿತ್ತು. ಸಿದ್ದೇಶ್ವರರು ವಾರೊಪ್ಪತ್ತು ಮೌನವ್ರತ ಮಾಡಬೇಕಿತ್ತು. ಆದರೆ ದೇಶದ ಗಲಭೆಯ ಬಗ್ಗೆ ಕಿಂಚಿತ್ ಅರಿವಿಲ್ಲದಂತೆ ಒಬ್ಬರು ಹೊಗಳುತ್ತಾರೆ, ಕೇಳಿಸಿಕೊಂಡವರು ಕೈ ಮುಗಿಯುತ್ತಾರೆ. ಈ ಭಾಷಣಕ್ಕೆ ಕಳಶವಿಟ್ಟಂತೆ ಗುಜರಾತ್ ನರಮೇಧದ ವಿಷಯದಲ್ಲಿ ಮೋದಿಯವರಿಗೆ ಕ್ಲೀನ್‌ಚಿಟ್ ನೀಡಿದ ಕಾರಣ ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುವುದಾದರೆ ಸಿದ್ದೇಶ್ವರ ಸ್ವಾಮಿಗಳ ಮಾತುಗಳನ್ನು ಗೌರವಿಸಬೇಕಂತಲ್ಲಾ ಥೂತ್ತೇರಿ.
*****
ಮೋದಿಯವರು ಜಗದ್ಗುರುಗಳ ಸುಳ್ಳು ಆಶೀರ್ವಾದವನ್ನು ಹೊತ್ತು ದೆಹಲಿಯ ಕಡೆ ಹೊರಟನಂತರ ಇತ್ತ ಕರ್ನಾಟಕದ ಬಳ್ಳಾರಿಯ ಧೂಳಿನಿಂದ ಸುಂಟರಗಾಳಿಯೊಂದು ಎದ್ದಿದೆಯಲ್ಲಾ. ಎಡೂರಪ್ಪನ ಸರಕಾರ ಎದ್ದುನಿಲ್ಲಲು ಸಹಾಯ ಮಾಡಿದ ಬಳ್ಳಾರಿ ಗಣಿ’ಧಣಿ’ಗಳ ಪೈಕಿ ಪ್ರಧಾನ ವ್ಯಕ್ತಿಯಾದ ಗಾಲಿ ಜನಾರ್ದನ ರೆಡ್ಡಿ ಹಠಾತ್ತನೆ ನಾನು ಕರ್ನಾಟಕದ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೆದರಿಸಿದ್ದಾರಲ್ಲಾ. ರೆಡ್ಡಿ ಇಂತಹ ಮಾತುಗಳನ್ನಾಡಬೇಕಾದರೆ ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯ ಕತೆ ಏನಾಗಿರಬೇಕು ಎಂಬ ಯೋಚನೆ ರೆಡ್ಡಿ ಮಾತನ್ನು ಗ್ರಹಿಸಿದವರಿಗೆ ಅಮರಿಕೊಂಡಿದೆಯಲ್ಲಾ. ರೆಡ್ಡಿ ಸಾರ್ವಜನಿಕರ ಎದುರೇ ತನ್ನ ಮುಖ್ಯಮಂತ್ರಿ ಪದವಿ ಘೋಷಿಸಬೇಕಾದರೆ ಮೂರು ಘಟನೆಗಳು ಆತನಿಗೆ ಪ್ರೇರಣೆ ನೀಡಿರಬೇಕು. ಒಂದು ಜೆಡಿಎಸ್ ಶಾಸಕರನ್ನು ಜಮೀರ್ ಅಹಮದ್ ಬಸ್ಸಿನಲ್ಲಿ ರೆಸಾರ್ಟಿಗೆ ಕರೆದುಕೊಂಡು ಹೋಗಿ ಮತ್ತೆ ತಂದು ವಿಧಾನಸೌಧದ ಎದುರು ಸುರಿದು ಧರ್ಮಸಿಂಗ್ ಸರಕಾರ ಕೆಡವಿ ಕುಮಾರಣ್ಣ ಅನಾಯಾಸವಾಗಿ ಮುಖ್ಯಮಂತ್ರಿಯಾದದ್ದು. ಅದೇ ಕುಮಾರಣ್ಣನ ಕೃತ್ಯವನ್ನು ಅವರಿಗೇ ಹಿಂತಿರುಗಿಸಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನ ಅಪಹರಿಸಿ ಬಾಂಬೆ ಗ್ರಾಂಟ್‌ರೋಡಿನಲ್ಲಿ ಇರಿಸಿದ್ದು, ನಂತರ ತಂದು ಎಡೂರಪ್ಪ ಮುಖ್ಯಮಂತ್ರಿಯಾದದ್ದು. ಇದೀಗ ಛತ್ರಪತಿ ಶಿವಾಜಿ ಕೋಟೆಯಿಂದ ಶಿವಸೈನಿಕ ಶಾಸಕರನ್ನು ಅಪಹರಿಸಿ, ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಲು ತಯಾರಿ ನಡೆಸಿರುವುದು. ಈ ಎಲ್ಲಾ ಬೆಳವಣಿಗೆಯ ಹಿಂದೆ ಝಣಝಣ ಕಾಂಚಣದ ಸದ್ದು ಕೇಳಿತಾಗಿ ರೆಡ್ಡಿ ರೋಮಾಂಚನಗೊಂಡು ಮುಂದಿನ ಮುಖ್ಯಮಂತ್ರಿ ನಾನೇ ಎಂದುಬಿಟ್ಟಿದ್ದಾರಂತಲ್ಲಾ, ಥೂತ್ತೇರಿ.

*****
ಇತ್ತ ಕರ್ನಾಟಕದ ಶಿಕ್ಷಣ ಇಲಾಖೆಯ ಸುದ್ದಿ ಅಧ್ವಾನವೆದ್ದು ಚಡ್ಡಿಗಳು ಹಠಕ್ಕೆ ಬಿದ್ದಿವೆಯಂತಲ್ಲಾ. ಪಠ್ಯಪುಸ್ತಕ ತಿರುಚಿದ ಘಟನೆಯ ಪ್ರಯುಕ್ತ ಶಿಕ್ಷಣ ಪಡೆದ ನಾಡಿನ ಮನಸ್ಸುಗಳು ಫ್ರೀಡಂಪಾರ್ಕಿನಲ್ಲಿ ದೇವೇಗೌಡರ ನೇತೃತ್ವದಲ್ಲಿ ಸಭೆ ಸೇರಿ ಪಠ್ಯ ಸರಿ ಮಾಡಲು ಹತ್ತು ದಿನ ಗಡುವು ಕೊಟ್ಟಿದ್ದರೆ, ಈ ಹತ್ತು ದಿನದಲ್ಲಿ ಏನು ಉತ್ತರ ಕೊಡಬೇಕೆಂದು ಚಿಂತಿಸಿದ ಚೆಡ್ಡಿಗಳು, ದೇವೇಗೌಡರು ಗುಟುರು ಹಾಕಿರುವುದರಿಂದ ಅವರೆದುರು ಅಶೋಕನ್ನು ನಿಲ್ಲಿಸುವುದು ಸೂಕ್ತ ಎಂದು ತೀರ್ಮಾನಿಸಿ, ಕಡಲೆಕಾಯಿ ಹೊಲಕ್ಕೆ ಬೆದರುಗೊಂಬೆ ಮಾಡಿ ನಿಲ್ಲಿಸಿದಂತೆ ಪಠ್ಯಕ್ಕೆ ಕಾಯುತ್ತಿರುವ ಮಕ್ಕಳ ಎದುರು ನಿಲ್ಲಿಸಿವೆಯಲ್ಲಾ. ಈ ಅಶೋಕರಿಗಾಗಲಿ ಅವರ ಜೊತೆಯಲ್ಲಿ ನಿಂತ ಇನ್ನಿತರ ಮಂತ್ರಿವರ್ಯರಿಗಾಗಲಿ ಪಠ್ಯದ ನಿಜವಾದ ಅರ್ಥವೇ ಗೊತ್ತಿಲ್ಲ. ಸ್ವತಃ ನಾಗೇಶರಿಗೆ ಬಹಳದಿನ ಗೊತ್ತಿರಲಿಲ್ಲ. ಇಂತಿರುವಾಗ ಹಿಂದಿನ ಪಠ್ಯದಲ್ಲಿ ಕಮ್ಯುನಿಸಂ ಸಿದ್ಧಾಂತವಿತ್ತು ಎಂದುಬಿಟ್ಟಿದ್ದಾರಲ್ಲಾ. ಈ ಬಗ್ಗೆ ಅಶೋಕರನ್ನ ಹಿಡಿದುಕೊಂಡು ಕಮ್ಯುನಿಸ್ಟ್ ಸಿದ್ಧಾಂತ ಅಂದರೇನು, ಅದರ ಉದ್ದೇಶಗಳೇನು ಅದು ನಮ್ಮ ಸಂಸ್ಕೃತಿಯೊಳಕ್ಕೆ ನುಸುಳಿರುವ ಪರಿಯೇನು ವಿವರಿಸೆಂದು ಕೇಳಿದ್ದರೆ ಮತ್ತೆ ಹತ್ತು ದಿನದ ಗಡವು ಕೇಳುತ್ತಿದ್ದರಂತಲ್ಲಾ. ಅದೆಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಮಾಜಿ ಪ್ರಧಾನಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೂ ಕೇರ್ ಮಾಡದೆ ಸುಳ್ಳುಗಳನ್ನ ಹೊಡೆಯುತ್ತ ಕುಳಿತಿರುವ ಚೆಡ್ಡಿಗಳು ತಮ್ಮ ಸಂಚು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಭಾವಿಸುವ ಈ ಹೊತ್ತಿನಲ್ಲಿ ನಾಡನ್ನೇ ತುಂಬಿ ಮೆರೆದಂತಹ ಗೋಕಾಕ್ ಚಳವಳಿಯ ಅಗತ್ಯ ಅನಿವಾರ್ಯವಾಗಿದೆಯಂತಲ್ಲಾ, ಥೂತ್ತೇರಿ.
*****
ಕರ್ನಾಟಕದ ಇತರೆ ಸುದ್ದಿಗಳು ಶಾನೆ ತಮಾಷೆಯಿಂದಲೂ ಜೊತೆಗೆ ವಿಷಾದದಿಂದಲೂ ಕೂಡಿದೆಯಂತಲ್ಲಾ. ನಾಯಿ ಸಿನಿಮಾ ನೋಡಿದ ಮುಖ್ಯಮಂತ್ರಿ ಥಿಯೇಟರಿಂದ ಈಚೆ ಬಂದರೂ ಅಳು ನಿಲ್ಲಿಸದೆ ಬಿಕ್ಕಿಬಿಕ್ಕಿ ಅಳುತ್ತಿರುವ ದೃಶ್ಯ ಪ್ರಕಟವಾದ ಕೂಡಲೇ ನಾಡಿನ ನಾಯಿ ಮಾಲೀಕರು ತಮ್ಮತಮ್ಮ ನಾಯಿಗಳನ್ನ ಹಿಡಿದು ಶೃಂಗಾರ ಮಾಡಿ ಬತಡೇ ಮಾಡುವುದೇನು, ಹೆಣ್ಣು ನಾಯಿಗೆ ಕುಂಕುಮ ಹಚ್ಚಿ ಬಳೆ ತೊಡಿಸಿ ಸೀರೆ ಉಡಿಸಿ ಸೀಮಂತ ಮಾಡುವುದೇನು. ಈ ಕೃತ್ಯಗಳ ಬಗ್ಗೆ ತಿಳಿದ ಬೀದಿನಾಯಿಗಳು ಶಾನೆ ದುಗುಡದಿಂದ ಅವರು ಸಾಕಿದ ನಾಯಿಗಳಿಗೆ ಅವರು ಏನಾದರೂ ಮಾಡಿಕೊಳ್ಳಲಿ ನಮಗೇನು, ಆದರೆ ನಮಗೂ ಒಂದು ತುತ್ತು ಎಸೆಯಲು
ಇವರಿಗೇನು ಬಂದಿದೆ, ಸಾಕು ನಾಯಿ ಕಾರಣದಿಂದ ನಮ್ಮನ್ನ ತುಂಬ ತಿರಸ್ಕಾರದಿಂದ ಕಾಣುತ್ತಾರೆ, ಕಾಂಪೌಂಡ್ ಬಳಿಗೆ ಹೋದರೆ ಸಾಕು ಗದರುತ್ತಾರೆ, ಇವರ ಮಕ್ಕಳು ಕಲ್ಲು ತೆಗೆದುಕೊಂಡು ಬೀರುತ್ತವೆ, ಇತ್ತ ಮುನಿಸಿಪಾಲಿಟಿಯವರ ಕಾಟ ಬೇರೆ ಎಂದುಕೊಂಡವಂತಲ್ಲಾ. ಹಳ್ಳಿಯ ಕಡೆಗಳಲ್ಲಿ ಊಟ ಮಾಡುವಾಗ ನಮ್ಮವರ ಕಡೆ ಒಂದು ತುತ್ತು ಎಸೆಯುತ್ತಿದ್ದರು. ಈಗ ಆ ಸಂಸ್ಕೃತಿಯೂ ನಿಂತುಹೋಗಿ ನಮ್ಮವರೆಲ್ಲಾ ಊರು ಬಿಟ್ಟು ಗುಡ್ಡ ಗವಿ ಸೇರಿಕೊಂಡು ಆಡು ಕುರಿಗಳನ್ನು ಬೇಟೆಯಾಡುತ್ತಿದ್ದಾರಂತೆ. ಇದು ನಮ್ಮ ಕುಲಕ್ಕೆ ಬಂದ ಕಳಂಕ. ಇದಕ್ಕೆ ಕಾರಣ ಬದಲಾದ ನಾಯಿ ಮನುಷ್ಯನ ಸಂಬಂಧ. ಇಂಥ ಸನ್ನಿವೇಶದಲ್ಲಿ ನಾಯಿ ಸಿನಿಮಾ ನೋಡಿ ಅತ್ತಿರುವ ನಮ್ಮ ಮುಖ್ಯಮಂತ್ರಿಗಳ ಅಳುವಿಗೆ ಕಾರಣವೇನೆಂಬ ವಾಸನೆಯನ್ನ ನಾವೇ ಕಂಡುಹಿಡಿಯಬೇಕು, ಇಲ್ಲವಾದರೆ ಈ ತಲೆಕೆಟ್ಟ ಜನಗಳಿಂದ ನಾಯಿಗಳ ಹುಟ್ಟು ಹಬ್ಬ, ಮದುವೆ, ಸೀಮಂತ, ನಾಮಕರಣ ಇನ್ನು ಹೆಚ್ಚಾಗಿ ನಮ್ಮ ಬೀದಿ ಬದುಕು ಇನ್ನ ದಾರುಣವಾಗಲಿದೆ ಎಂದಿಲ್ಲವಂತಲ್ಲಾ, ಥೂತ್ತೇರಿ.
ಇದನ್ನೂ ಓದಿ: ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!



ಗುರುಗಳ ಬಗ್ಗೆ ಮಾತಾಡೋ ಯೋಗ್ಯತೆ ನಿಮ್ಮಂತ ಹಂದಿಗಳಿಗಿಲ್ಲಾ ,ಗುರುಗಳ ಪಾದದ ಧೂಳಿಗೂ ಸಮ ಇಲ್ಲಾ ನಿಮ್ಮಗಳ ಪರಿವಾರ
ದಯವಿಟ್ಟು 100ರಲ್ಲಿ 1ತಪ್ಪನ್ನು ತಿರುಚಿ, ಅವರ ಜೀವನದುದ್ದಕ್ಕೂ ಗಳಿಸಿದ ಹೆಸರಿಗೆ ಕಳಂಕ ತರಬೇಡಿ. ಇಲ್ಲೀವರೆಗೂ ಅವರ ಆದ್ಯಾತ್ಮಿಕ ಮಾತಿನ ಮೋಡಿಯಿಂದ ಸಾಕಷ್ಟುಉತ್ತರ ಕರ್ನಾಟಕದ ಜನ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಕಾಣಿಕೊಂಡ ಉತ್ತಮ ಜೀವನ ಮಾಡುತ್ತಿದ್ದಾರೆ.ಅವರು ತಿಳಿಯದೆ ಮಾತನಾಡಿರಬಹುದು 🙏🙏
ಕಾಂಗ್ರಸ್ಸಿನ ಉಡಾಫೆ ಆಡಳಿತ,ಭ್ರಷ್ಟತೆ ಗಳಿಗೆ ಬೇಸರ ಪಟ್ಟು ಭಾರತದ ಜನ 2014 ರಲ್ಲಿ ಬಿಜೆಪಿ ಯ ಮಾತುಗಾರ ಮೋದಿಗೆಮತನೀಡಿದರು. ಆಗ ಜನ ಗುಜರಾತಿನ ಅಮಾನವೀಯಗೋಧ್ರಾ ದುರಂತ ಮರೆತಿದ್ದರು,ಮೋದಿ ಒಬ್ಬರೇ ಬರಲಿಲ್ಲ,ಜೊತೆಗೆ ಕಟುಗ ಮನಸ್ಸುಳ್ಳ ಅಮಿತ್ ಶಾ ಎಂಭವ್ಯಕ್ತಿಯನ್ನು ಜೋತೆಗೆ ತಂದು,ತಾವು ವಿಶ್ರಮಿತ ಸ್ಥಿತಿಯಲ್ಲಿ ಇರುವದಕ್ಕೆ ಪ್ರಾರಂಭಿಸಿದರು. ಆದರೆ ದುರಂತ ಆರ್ ಎಸ್ ಏಸ್ ಈ ಅವಕಾಶ ಬಳಸಿಕೊಂಡು ಜನರವಿರುದ್ಧ ಇಸ್ತುಕ್ರೂರವಾಗಬಾರದಿತ್ತು,ಎಂ7ಮಾಡುವದು, ಅದು ಅವರ ಮೂಲಗುಣ. ಈ ಕ್ರೌರ್ಯದವಿರುದ್ಧ ಜನ ಬೇಸತ್ತಿದ್ದಾರೆ ಆದರೆ ಅವರಿಗೆ ಪರ್ಯಾಯ ಇಲ್ಲ. ಇಂತಹ ಸ್ಥಿತಿಯಲ್ಲಿ ಈ ಮೋದಿಯನ್ನ ಒಬ್ಬಸ್ವಾಮಿಜಿ ಈ ರೀತಿ ಹೊಗಳಿದ್ದು,ಪ್ರಜ್ಞಾವಂತಿಕೆಯಿಂದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುವವರಿಗೆ, ಆ ಸ್ವಾಮಿಜಿಯವರ ಮನೋಸ್ಥಿತಿಯಬಗ್ಗೆ ಮರುಕ ಹುಟ್ಟಿಸುತ್ತದೆ,ಅವರು ಸತ್ಯದ ನಿಲುವನ್ನು ತಿಳಿಯದೆ ಆ ಒಲೈಕೆಯ ಮಾತುಆಡಿದ್ದು ಅವರಬಗ್ಗೆ ಇದ್ದ ಗೌರವ ಕಡಿಮೆಯಾಗುತ್ರದೆ ಎನ್ನವದು ಸತ್ಯ.