Homeಮುಖಪುಟ‘ಮರೆತೇನೆಂದರೂ ಮರೆಯಲಿ ಹೆಂಗೆ’ - ಹೋರಾಟಗಾರ ಜಿ. ರಾಜಶೇಖರ ಅವರಿಗೆ ನುಡಿನಮನ

‘ಮರೆತೇನೆಂದರೂ ಮರೆಯಲಿ ಹೆಂಗೆ’ – ಹೋರಾಟಗಾರ ಜಿ. ರಾಜಶೇಖರ ಅವರಿಗೆ ನುಡಿನಮನ

- Advertisement -
- Advertisement -

ಅಜ್ಞಾತವಾಸದಲ್ಲಿದ್ದರೂ ಆಗಾಗ ಕೇಳುತ್ತಲೇ ಇದ್ದ ಹೆಸರು ಜಿ. ರಾಜಶೇಖರ್. ಕರಾವಳಿ ಕೋಮುವಾದಿ ಜ್ವಾಲೆಗೆ ಸಿಕ್ಕಿತ್ತು. ರಥಬೀದಿ ಗೆಳೆಯರು ಬಕೆಟ್ ಹಿಡಿದು ಬೆಂಕಿ ನಂದಿಸಲು ಹೆಣಗುತ್ತಿದ್ದರು. ನಕ್ಕು ಸುಮ್ಮನಿದ್ದವರ ಮುಂದೆ ಈ ಸಣ್ಣ ಫೈರ್ ಬ್ರಿಗೇಡ್ ನಮ್ಮ ಮನಕ್ಕೆ ಎಂಥದೋ ಹಿತ ನೀಡುತ್ತಿತ್ತು. ತುಂಬಾ ವರ್ಷಗಳ ಕಾಲ ಅವರ ಬಗ್ಗೆ ಬಹಳ ಕೇಳಿದೆ, ಸ್ವಲ್ಪ ಓದಿದೆ. ಜೀವನದಲ್ಲಿ ಏನೇನೋ ನಡೆದುಹೋಯಿತು.

ಒಂದು ವಿಶೇಷ ಸಂದರ್ಭದಲ್ಲಿ ಮುಖ್ಯವಾಹಿನಿಗೆ ಮರಳುವ ಅವಕಾಶವೂ ದೊರೆಯಿತು. ಪ್ರೀತಿಯ ಸಮಾಜ ಸ್ವಾಗತಿಸಿತ್ತು. ಆದರೆ ಕಾನೂನು ಪ್ರಕ್ರಿಯೆ ಬಾಕಿ ಉಳಿದಿತ್ತು. ಉಡುಪಿಯಲ್ಲಿ UAPA ಒಳಗೊಂಡಂತೆ ನನ್ನ ಮೇಲೆ ಹಲವು ಕೇಸುಗಳಿದ್ದವು. ಬೇಲ್ ಪಡೆಯಲು ಜಾಮೀನು ಬೇಕಿತ್ತು. ನಕ್ಸಲೈಟನಿಗೆ ಜಾಮೀನು ನೀಡುವುದು ಸುಲಭವಲ್ಲ. ವಿಶ್ವಾಸ, ಗುಂಡಿಗೆ ಎರಡೂ ಇರಬೇಕಿತ್ತು. ಆದರೆ ರಾಜಶೇಖರರಿಗೆ ಅವ್ಯಾವುವೂ ಅಗತ್ಯವಿರಲಿಲ್ಲ. ಕನ್ವಿನ್ಸ್ ಮಾಡೋಣ ಎಂದು ಮಿತ್ರರು ಹೋದರಂತೆ. ಆದರೆ ಪೀಠಿಕೆ ಹಾಕುವ ಅಗತ್ಯವೂ ಬೀಳಲಿಲ್ಲವಂತೆ. “ಸರಿ ಕೊಡೋಣಬಿಡಿ, ಅದಕ್ಕೇನು? ನಾನು ಕೋರ್ಟಿಗೆ ಏನೆಲ್ಲಾ ತರಬೇಕು?” ಎಂದು ಕೇಳಿದರಂತೆ. ಮನುಷ್ಯರನ್ನು ನಂಬಲು‌ ಮನುಷ್ಯರಾಗಿದ್ದರೆ ಸಾಕು ಎಂಬ ಸಹಜ ವ್ಯಕ್ತಿತ್ವ ನಮ್ಮ ಸಾರ್‌ದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಲ್ಲಿ ಇದು ಸಾಲಲ್ಲ ಎಂದು ರಿಜೆಕ್ಟ್ ಮಾಡಿಬಿಡ್ತಾರೋ ಅಂತ ಲಾಯರ ಬಳಿ ಹಲವಾರು ಬಾರಿ ವಿಚಾರಿಸಿ, ಓಡಾಡಿ ಡಾಕ್ಯುಮೆಂಟ್ ತೆಗೆಸಿ, ಡಬಲ್ ಡಬಲ್ ಫೋಟೋಗಳನ್ನು ತೆಗೆದುಕೊಂಡು, ತಮ್ಮ ಕೊಡೆಯೊಂದಿಗೆ ನಾವು ಬರುವ ಮುನ್ನವೇ ಕೋರ್ಟಲ್ಲಿ ಬಂದು ಕಾಯುತ್ತಿದ್ದರು. ನೋಡಿ “ಮತ್ತೆ…” ಎಂದರು….ಜೀವಮಾನದ ಒಡನಾಡಿ ಎಂಬಂತೆ. ನಾನು ಅವರನ್ನು ಮೊದಲ ಬಾರಿ ಕಂಡದ್ದು ಆ ಕ್ಷಣದಲ್ಲೆ.

ನಾನು ಕಟಕಟೆಯಲ್ಲಿ ನಿಂತಿದ್ದೆ. ಅವರು ಹೊರಗಿದ್ದರು. ಕಾರಕೂನ ಅವರ ಹೆಸರು ಕೂಗಿದೊಡನೆ ಲಗುಬಗೆಯಿಂದ ಒಳಬಂದವರೇ ಸೀದಾ ಕಟಕಟೆಯಲ್ಲಿ ಬಂದು ನನ್ನ ಜೊತೆ ನಿಂತರು. ಅಲ್ಲಿ ಬೇಡ ಇಲ್ಲಿ ಬನ್ನಿ ಎಂದು ವಕೀಲರು ಅವರನ್ನು ಜಡ್ಜ್ ಬಳಿಗೆ ಕರೆದೊಯ್ದರು. ಹೊರ ಬಂದರೆ ಶಿವಸುಂದರದು ಒಂದೇ ಸಮ ನಗು. ಸಹ ಆರೋಪಿ ರಾಜಶೇಖರ್ ಎಂದು ಗೇಲಿ ಮಾಡಿದ್ದರು. ಮುಗ್ದ ರಾಜಶೇಖರರಿಗೆ ಅದರಿಂದ ಮುಜುಗರವೂ ಅನಿಸಲಿಲ್ಲ. ಸಹಜವಾಗಿಯೇ ಅವರು ನಾನು ಜೊತೆಗಿದ್ದೇನೆ ಎಂದು ನನ್ನ ಜೊತೆ ಕಟಕಟೆ ಹಂಚಿಕೊಂಡಿದ್ದರು.

ಇದನ್ನೂ ಓದಿ: ಹಿರಿಯ ಚಿಂತಕ, ಜನಪರ ಹೋರಾಟಗಾರ ಜಿ. ರಾಜಶೇಖರ (75) ನಿಧನ

ಅಂದಿನಿಂದ ನನ್ನ ಕೇಸ್ ಮುಗಿಯುವ ತನಕ ನಾನು ತಪ್ಪಿಸಿದರೂ ಅವರು ಕೋರ್ಟಿಗೆ ತಪ್ಪಿಸಲಿಲ್ಲ. ಕೋರ್ಟಿಗೆ ಅವರು ಬೇಕಿರಲಿಲ್ಲ. ಆದರೆ ಅವರಿಗೆ ಕೋರ್ಟಿಗೆ ಬರುವುದು ಮುಖ್ಯವಿತ್ತು. ಕೋರ್ಟಿನಲ್ಲಿ ನನಗೆ ಒಂಟಿತನ ಕಾಡಬಾರದು ಎಂಬುದು ಅವರ ಕಾಳಜಿಯಾಗಿತ್ತು. ಪ್ರತಿ ಡೇಟಿಗೆ ಬಂದು ಮಾತನಾಡಿಸಿ, ಕ್ಯಾಂಟೀನಿಗೆ ಕರೆದುಕೊಂಡು ಹೋಗಿ ಮಂಗಳೂರು ಬಜಿ, ಎಳ್ಳಿನ ಪಾನಕ ಕೊಡಿಸಿ, “ಬರ್ತೇನೆ..” ಅಂತ ಹೊರಡುತ್ತಿದ್ದರು.

ನನ್ನ ಕೇಸಿನ ವಿಚಾರಣೆ ಮುಗಿದು ತೀರ್ಪಿನ ದಿನ ಬರುವ ಹೊತ್ತಿಗೆ ಅವರಿಗೆ ಪಾರ್ಕಿನ್ಸನ್ ಆಗಿತ್ತು, ದೇಹ ಕೃಷವಾಗಿತ್ತು. ಆದರೂ ಕೋರ್ಟಿಗೆ ಬಂದು ಮತ್ತೊಮ್ಮೆ ಜಾಮೀನು ಧೃಡೀಕರಿಸಬೇಕಿತ್ತು. ಮಗ ವಿಷ್ಣುವಿಗೆ ಚಿಂತೆ. ಕೋರ್ಟಿನ ಮೆಟ್ಟಿಲು ಹತ್ತಿಸಿ ಕರೆತರುವುದು ಹೇಗೆ? ಜಡ್ಜ್ ಕೇಳುವ ಪ್ರಶ್ನೆಗೆ ಉತ್ತರಿಸುವಂತೆ ಮಾಡುವುದು ಹೇಗೆ? ಆಟೋದಲ್ಲಿ ಹುಶಾರಾಗಿ ಕರೆತಂದರು. ರಾಜಶೇಖರರ ದೇಹ ನಡುಗುತ್ತಿದ್ದರೂ ಮುಖ ಎಂದಿನಂತೆ ನಿಶ್ಚಲವಾಗಿತ್ತು.

ಜಡ್ಜ್ ಕೇಳಿದರು
“ಇವರ್ಯಾರು ಗೊತ್ತಾ?”
“ಗೊತ್ತು”.
“ಇವರು ನಿಮಗೆ ಏನಾಗಬೇಕು?”
“ನನ್ನ ಸ್ನೇಹಿತರು”
“ಇವರಿಗೆ ನೀವು ಶ್ಯೂರಿಟಿ ಕೊಡ್ತೀರಾ?”
“ಕೊಡ್ತೇನೆ”

ಕೇಸ್ ಖುಲಾಸ್ ಆಯಿತು. ನಾನು ಕಾನೂನಾತ್ಮಕವಾಗಿಯೂ ಬಿಡುಗಡೆಗೊಂಡೆ. ಎಂದಿನಂತೆ “ಬರ್ಲಾ…” ಎಂದು ವಿಷ್ಣು ಕೈ ಹಿಡಿದು ಹೊರಟರು.

ಇದನ್ನೂ ಓದಿ: ಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

ಮತ್ತೆ ಕಂಡದ್ದು ಇತ್ತೀಚಿನ ಸಹಬಾಳ್ವೆ ಸಮಯದಲ್ಲೆ. ನಾನು, ಅಶೋಕ್, ದಿನಕರ ಬೇಂಗ್ರೆ ಮನೆಗೆ ಹೋದೆವು. ಗುರುಗಳು ಬದಲಾಗೇ ಇಲ್ಲ. ಮುಖದಲ್ಲಿ ಅದೇ ದೃಡತೆ, ಮಾತಿನಲ್ಲಿ ಅದೇ ಲವಲವಿಕೆ. ಭಾವನೆ ಕಾಣದ ಮುಖದಿಂದ ನಿಲ್ಲದ ನಗೆ ಚಟಾಕಿ. ಗೆಳೆಯರು‌ ಮನೆಗೆ ಬಂದಿದ್ದಾರೆ ಎಂದು ಇನ್ನಷ್ಟು ಹುರುಪು. ವಿಷ್ಣು ವಿಡಿಯೋ ಮಾಡತೊಡಗಿದರು. ಮಗನ ಕೆಣಕುವ ಪ್ರಶ್ನೆಗಳಿಗೆ ಅಪ್ಪನ ಖಚಿತತೆಯ ಉತ್ತರ.

“ಮತ್ತೆ ಏನ್ಸಮಾಚಾರ”
“ಮೇ 7 ಕ್ಕೆ ಕಾರ್ಯಕ್ರಮ”
“ಯಾವ ಕಾರ್ಯಕ್ರಮ?”
“ಕೋಮು ಸೌಹಾರ್ದದ್ದು”
“ನೀವು ಹೋಗ್ತೀರಾ?”
“ಹಾಂ ಹೋಗ್ತೇನೆ….ನಾನು ಹೋಗದಿದ್ದರೆ ಆಗಲ್ಲ”.

ಇದು ನಮ್ಮ ರಾಜಶೇಖರ್ ಸಾರ್…

ನನ್ನ ಜೀವನದಲ್ಲಿ ಅನಿರೀಕ್ಷಿತ ಆಪದ್ಬಾಂಧವರಾಗಿ ಬಂದ ಹಿರಿ ಜೀವ ಅದು. ಅವರ ಆತ್ಮೀಯತೆ, ಅಚಲತೆ, ಸರಳತೆ, ಸಹಜತೆ, ಕನಸು, ವಿಶ್ವಾಸ ಎಲ್ಲವೂ ಮರೆಯಲಾಗದಂಹವು. ಅಧ್ಯಾಯನ ಯೋಗ್ಯವಾದಂತಹವು. ನಮ್ಮ ಅರಿವಿಗೇ ಬರದಂತೆ ನಮ್ಮ ವ್ಯಕ್ತಿತ್ವವನ್ನು ಪ್ರಭಾವಿಸುವಂತಹವು.

ಇದನ್ನೂ ಓದಿ: ಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

ಹಾಗಾಗಿಯೇ ನಾಡಿನ ಪಾಲಿಗಷ್ಟೇ ಅಲ್ಲ ನನ್ನ ಪಾಲಿಗೆ ರಾಜಶೇಖರರು ಅಜರಾಮರರು. ಅವರನ್ನು ಮರೆತೇನೆಂದರೂ ಮರೆಯಲು ಅಸಾಧ್ಯವಾದವರು.

ಉಡುಪಿಗೆ ಬಂದಾಗೆಲ್ಲಾ ಸಿಗ್ತೇನೆ ಸಾರ್…ಒಂದು ಗಳಿಗೆ ಸಿಕ್ಕು ಎಳ್ಳು ಪಾನಕ ಕುಡಿಸಿ ಸಾಕು.

ನಿಮ್ಮ ರುಣಿ
ನೂರ್ ಶ್ರೀಧರ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...