Homeಮುಖಪುಟನಭೋಮಂಡಲ ಕೌತುಕವನ್ನು ಸೊಬಗಿನಲ್ಲಿ ಸೆರೆಹಿಡಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

ನಭೋಮಂಡಲ ಕೌತುಕವನ್ನು ಸೊಬಗಿನಲ್ಲಿ ಸೆರೆಹಿಡಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

- Advertisement -
- Advertisement -

ಭೌತ ವಿಜ್ಞಾನದ ಖ್ಯಾತ ಶಿಕ್ಷಕ ಮತ್ತು ವಿಜ್ಞಾನಿಯಾದ ರಿಚರ್ಡ್ ಫೈನ್‌ಮನ್ ಅವರು ಕ್ಯಾಲ್ಟೆಕ್ ವಿಶ್ವವಿದ್ಯಾನಿಲಯದಲ್ಲಿ ಪಾಠ ಮಾಡುವಾಗ ಹೀಗೆಂದಿದ್ದರು: “The Stuff which we are made, was ‘cooked’ once in a star and spit out”. (ನಾವು ಯಾವುದರಿಂದ ಮಾಡಲ್ಪಟ್ಟಿದೇವೋ ಅದು ಒಂದಾನೊಂದು ಕಾಲದಲ್ಲಿ ನಕ್ಷತ್ರವೊಂದರಿಂದ ’ಬೇಯಿಸಿ’ ಉಗಿದದ್ದು). ಹಾಗೆಯೇ ಕಾರ್ಲ್ ಸಾಗನ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿ ಒಮ್ಮೆ “The Cosmos is within us. We are made of star stuff. We are a way for Universe to know itself” (ಕಾಸ್ಮೋಸ್ ನಮ್ಮೊಳಗೇ ಇದೆ. ನಾವು ನಕ್ಷತ್ರಗಳ ವಸ್ತುವಿನಿಂದ ಮಾಡಲ್ಪಟ್ಟವರು. ಬ್ರಹ್ಮಾಂಡವ ತನ್ನನ್ನು ಅರಿತುಕೊಳ್ಳಲು ನಾವು ಕೂಡ ದಾರಿಯೇ) ಎಂದು ಉದ್ಘರಿಸಿದ್ದರು. ಇವೆಲ್ಲವನ್ನು ಕೇಳುತ್ತಿದ್ದರೆ, ಈ ಭೂಮಿ, ಗ್ರಹ, ಗ್ಯಾಲಾಕ್ಸಿ, ನಾವು ನೀವು, ನಮ್ಮ ಮುಂದಿರುವ ಎಲ್ಲಾ ವಸ್ತುಗಳೂ ಹಾಗೂ ಸಕಲ ಜೀವರಾಶಿಗಳು – ಈ ಎಲ್ಲವೂ ಉತ್ಪಾದನೆಯಾಗಿರುವುದು ನಕ್ಷತ್ರದಲ್ಲಿನ ಧೂಳಿನ (Star Dust/ Cosmic Dust) ಕಣಗಳಿಂದ ಎನ್ನುವುದು ದೀರ್ಘ ಅಧ್ಯಯನದಿಂದ ಕಂಡುಕೊಂಡಿರುವ ಸ್ಪಷ್ಟವಾದ ಗ್ರಹಿಕೆ.

ನಕ್ಷತ್ರಗಳಲ್ಲಿನ ಕಣಗಳು ಒಂದೆಡೆ ಸೇರಿ ಬೆಳಕಿನ ಶಕ್ತಿಯನ್ನು ಉಪಯೋಗಿಸಿಕೊಂಡು ಪರಮಾಣು, ಪರಮಾಣುಗಳು ಅಣುಗಳಾಗಿ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳಿಗೆ ಒಳಪಟ್ಟು ವಿವಿಧ ರೀತಿಯಲ್ಲಿ ವ್ಯವಸ್ಥೆಯ ರೂಪ ಪಡೆದು ದ್ರವ್ಯವಾಗುತ್ತದೆ. ಮನುಷ್ಯರಾದ ನಾವು ಕೂಡ ನಭೋಮಂಡಲದಲ್ಲಿ ಅನಂತವಾಗಿ ಹರಡಿರುವ ಧೂಳಿನ ಕಣಗಳಿಂದಲೇ ರೂಪುಗೊಂಡಿರುವುದು. ಹೀಗೆ ರೂಪುಗೊಂಡ ಮನುಷ್ಯ ಜೀವಿಯ ಮೆದುಳು ಯೋಚಿಸಬಲ್ಲದು, ಪ್ರಶ್ನಿಸಬಲ್ಲದು, ಪ್ರಶ್ನೆಗಳಿಗೆ ಉತ್ತರವೂ ಹುಡುಕಬಲ್ಲದು. ಎಷ್ಟೋ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡಿರುವ ಮನುಷ್ಯನು, ನಭೋಮಂಡಲದ ಕೌತುಕಗಳ ಮುಂದೆ ಇನ್ನೂ ಅಂಬೆಗಾಲು ಕೂಡ ಇಡದ ಮಗುವೆ ಸರಿ. ಮನುಷ್ಯನ ಒಳಗೆ ಕೊತಕೊತ ಕುದಿಯುವ ಇಂಥ ಪ್ರಶ್ನೆಗಳಿಗೆ ನಕ್ಷತ್ರಗಳ ಆಳದಲ್ಲಿ, ಗ್ಯಾಲಾಕ್ಸಿಗಳ ಆಳದಲ್ಲಿ, ವಿಶ್ವದ ಉಗಮದ ಪ್ರಾರಂಭದಲ್ಲಿ ಕೊತಕೊತ ಕುದ್ದಿರುವ ಕಣಗಳು ಮಾತ್ರ ಉತ್ತರ ಕೊಡಬಲ್ಲವು ಎಂದು ಅರಿತಿದ್ದೇವೆ.

ಆ ದಾರಿಯಲ್ಲಿ ಇನ್ನಷ್ಟು ತಿಳಿಯಲು ಹೆಜ್ಜೆಯಿಟ್ಟಿದ್ದೇವೆ. ನಭೋಮಂಡಲವನ್ನು ಇನ್ನೂ ಹೆಚ್ಚು ಸೂಕ್ಷ್ಮಗ್ರಾಹಿಯಾಗಿ ವೀಕ್ಷಿಸಲು ಮತ್ತು ಸ್ಪಷ್ಟವಾಗಿ ವಿಷಯಗಳನ್ನು ಗ್ರಹಿಸಲು ಅಗತ್ಯವಿದ್ದ ಒಂದು ಉಪಕರಣವನ್ನು ಕಳೆದ ಕ್ರಿಸ್‌ಮಸ್ ದಿನದಂದು ನಭೋಮಂಡಲಕ್ಕೆ ಕಳುಹಿಸಿದೆವು. ಅದೇ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್!

ಈ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಸರಿ ಸುಮಾರು ಆರು ತಿಂಗಳು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿ, ಭೂಮಿ ಮತ್ತು ಸೂರ್ಯನ ಗುರುತ್ವ ಬಲದಲ್ಲಿ ಬಂದಿಯಾಗಿ, ಸೂರ್ಯನ ಸುತ್ತಾ ಸುತ್ತುತ್ತ, ಪ್ರಪ್ರಥಮ ಬಾರಿಗೆ ತನ್ನ ದೂರದರ್ಶಕದಲ್ಲಿನ ದರ್ಪಣಗಳಿಗೆ ನಭೋ ಮಂಡಲದ ಕಿರಣಗಳನ್ನು ಸ್ಪರ್ಶಿಸಿ, ಅದರಿಂದ ರೂಪುಗೊಂಡ ಚಿತ್ರಗಳನ್ನು ಈ ತಿಂಗಳು ಭೂಮಿಗೆ ರವಾನಿಸಿದೆ.

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ರವಾನಿಸಿದ ಚಿತ್ರಗಳು ಬಿಡುಗಡೆಯಾದ ಕ್ಷಣ ಮಾತ್ರದಲ್ಲಿ ಅವರು ಪ್ರಪಂಚದಾದ್ಯಂತ ಪಸರಿಸಿ ಅಬ್ಬರಿಸಿದವು. ನಾವು ರೂಪುಗೊಳ್ಳಲು ಕಾರಣಗಳಾದ ಕಣ/ಕ್ಷಣಗಳನ್ನು ಈ ಟೆಲಿಸ್ಕೋಪ್ ಹೇಗೆ ಸೆರೆಹಿಡಿಯುತ್ತೆ, ಅದರಿಂದ ನಮಗೆ ಯಾವ ಮಾಹಿತಿ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಖಗೋಳ ವಿಜ್ಞಾನಿಗಳು, ಹವ್ಯಾಸಿ ಖಗೋಳ ವಿಜ್ಞಾನಿಗಳು ಮತ್ತು ನಾವೆಲ್ಲರೂ ಕಾಯುತ್ತಿದ್ದುದಂತು ನಿಜ. ಅಮೆರಿಕ ಅಧ್ಯಕ್ಷರು ತಮ್ಮ ವೈಟ್‌ಹೌಸ್‌ನಿಂದಲೆ ಈ ಚಿತ್ರಗಳನ್ನು ಅನಾವರಣ ಮಾಡಿದರು. ಈಗಾಗಲೇ ಕಳೆದ 30 ವರ್ಷದಿಂದ ಹಬಲ್ ಟೆಲಿಸ್ಕೋಪ್‌ನಿಂದ ತೆಗೆದ ಹಲವು ಚಿತ್ರಗಳು ಮತ್ತು ಅಧ್ಯಯನಗಳು ನಮ್ಮಲ್ಲಿ ಲಭ್ಯವಿದ್ದರೂ, ಹಬಲ್‌ಗಿಂತಲೂ 6-7 ಪಟ್ಟು ಹೆಚ್ಚು ಬೆಳಕನ್ನು ಸಂಗ್ರಹಿಸುವ ಮತ್ತು ಅತಿಗೆಂಪು (Infrared Radiation) ಬೆಳಕಿನ ಕಿರಣಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಟೆಲಿಸ್ಕೋಪ್ ಹೇಗೆ ವಿಶ್ವದ ಪ್ರಾರಂಭವನ್ನು ಗ್ರಹಿಸುತ್ತೆ ಎನ್ನುವ ಯೋಚನೆ ಎಲ್ಲರಿಗೂ ಇದ್ದೇಇತ್ತು. ಜುಲೈ 11ರಂದು ಬಿಡುಗಡೆಯಾದ ಚಿತ್ರಗಳು ನಮ್ಮ ಊಹೆಗೂ ನಿಲುಕದಂತಿತ್ತು.

ಒಂದು ಸಣ್ಣ ಮರಳಿನ ಕಣವನ್ನು ನಮ್ಮ ಕೈ ಬೆರಳಿನಲ್ಲಿ ಹಿಡಿದುಕೊಂಡು ನಮ್ಮ ಕೈಯನ್ನು ಚಾಚಿ ನೋಡಿದರೆ ಎಷ್ಟು ಸಣ್ಣದಾಗಿ ಕಾಣುತ್ತದೋ, ಅಷ್ಟೇ ಸಣ್ಣದಾಗಿರುವ ಆಕಾಶದಲ್ಲಿನ ಪ್ರದೇಶವನ್ನು ಈ ಟೆಲಿಸ್ಕೋಪ್‌ನ ಅತಿಗೆಂಪು ಕ್ಯಾಮರಾವು 12 ಗಂಟೆಗಳ ಕಾಲ ದಿಟ್ಟಿಸಿ ನೋಡಿ ಒಂದು ಚಿತ್ರವನ್ನು ತೆಗೆದಿದೆ. ಈ ಚಿತ್ರವು ಹಿಂದೆಂದಿಗಿಂತಲೂ ನಮಗೆ ಸಿಕ್ಕಿರುವ ಅತೀ ಆಳವಾದ, ಅತೀ ಚಿಕ್ಕ ಪ್ರದೇಶದ ನಭೋಮಂಡಲದ ಚಿತ್ರ. ಹಬಲ್ ಟೆಲಿಸ್ಕೋಪ್‌ನಲ್ಲಿ ಇಂತಹ ಚಿತ್ರಗಳನ್ನು ತೆಗೆಯಲು ವಾರಗಟ್ಟಲೆ ಸಮಯವಾಗುತ್ತಿತ್ತು. ಈ ಚಿತ್ರದಲ್ಲಿರುವ ಪ್ರತಿಯೊಂದು ಬೆಳಕಿನ ಬಿಂದುವು ಒಂದೊಂದು ಗ್ಯಾಲಾಕ್ಸಿ. ಮರಳಿನ ಕಣದ ಗಾತ್ರವಾದ ಸಣ್ಣ ಪ್ರದೇಶದಲ್ಲಿ ಸಾವಿರಾರು ಗ್ಯಾಲಾಕ್ಸಿಗಳನ್ನು ಕಾಣುತ್ತಿರುವ ನಾವು ನಭೋ ಮಂಡಲದ ಅನಂತತೆಯನ್ನು ಊಹಿಸಲಿಕ್ಕೂ, ಕಲ್ಪನೆ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗಿಲ್ಲದಿರುವುದು ಅತಿಶಯೋಕ್ತಿಯಲ್ಲ. ಈ ಚಿತ್ರದಲ್ಲಿ ಅಲ್ಪರ್ಟ್ ಐನ್‌ಸ್ಟೀನ್ ಪ್ರತಿಪಾದಿಸಿದ ಸಾಮಾನ್ಯ ಸಾಪೇಕ್ಷ ಸಿದ್ಧಾಂತದ Gravitational Lensing ಪರಿಣಾಮಗಳನ್ನೂ ಸಹ ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಚಿತ್ರದಲ್ಲಿನ ಗ್ಯಾಲಾಕ್ಸಿ ಪುಂಜವು 460 ಕೋಟಿ ಬೆಳಕಿನ ವರ್ಷದಷ್ಟು ದೂರದಲ್ಲಿದೆ. ಅಂದರೆ, 460 ಕೋಟಿ ವರ್ಷಗಳ ಹಿಂದೆ ಈ ಗ್ಯಾಲಕ್ಸಿಗಳು ಹೇಗಿದ್ದವು ಎನ್ನವ ಚಿತ್ರವನ್ನು ಈ ಟೆಲಿಸ್ಕೋಪ್ ಸೆರೆಹಿಡಿದಿದೆ. ಈ ದೂರದರ್ಶಕವು ವಿಶ್ವದ ಆದಿ ಸ್ಥಿತಿಗೆ ಪ್ರಯಾಣ ಬೆಳೆಸುವ ಕಾಲಯಂತ್ರವಾಗಿದೆ (ಟೈಮ್ ಮೆಶಿನ್).

ನಕ್ಷತ್ರಗಳು ಹುಟ್ಟುವ ಪ್ರಕ್ರಿಯೆ ಮತ್ತು ನೆಬುಲ್ಲಾಗಳನ್ನೂ ಸಹ ನಾವು ಅಧ್ಯಯನ ಮಾಡಿದ್ದೇವೆ. ಆದರೆ, ಅವುಗಳ ಚಿತ್ರಗಳನ್ನು ಹಿಂದಿನ ಟೆಲಿಸ್ಕೋಪ್‌ಗಳು ಸೆರೆಹಿಡಿದಾಗ, ಕಾಸ್ಮಿಕ್ ಧೂಳು ಹಲವು ಯೌವ್ವನದ ನಕ್ಷತ್ರಗಳನ್ನು, ಮುದಿ ನಕ್ಷತ್ರಗಳು ಮತ್ತು ಇತರೆ ನಕ್ಷತ್ರದ ಚಟುವಟಿಕೆಗಳನ್ನು ಮರೆ ಮಾಚುತ್ತಿತ್ತು. ಆದರೆ, ಈಗಿರುವ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಇವುಗಳನ್ನು ಸ್ಪಷ್ಟವಾಗಿ ನೋಡುವ ಕಣ್ಣಾಗಿದ್ದು, ಅವುಗಳ ಚಿತ್ರಗಳನ್ನೂ ಸಹ ಅದ್ಭುತವಾಗಿ ಸೆರೆಹಿಡಿದಿದೆ. ಕರೀನಾ ನೆಬುಲ್ಲಾದ ಚಿತ್ರದಲ್ಲಿ, ಕಾಸ್ಮಿಕ್ ಧೂಳಿನ ಜೊತೆಗೆ, ಆ ಧೂಳಿನ ಹಿಂದೆ ಅವಿತುಕೊಂಡಿರುವ ನಕ್ಷತ್ರಗಳು ನಮಗೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ರಿಚರ್ಡ್ ಫೈನ್‌ಮನ್ ಹೇಳಿದ ಮಾತಿನಲ್ಲಿ “Cooking” ಹೇಗೆ ನಡೆಯುತ್ತೆ ಎಂದು ಅರಿಯುವ ಆಕಾಶದಲ್ಲಿನ ಲ್ಯಾಬೋರೇಟರಿಗಳಿವು.

ಈಗ ಈ ಲ್ಯಾಬ್‌ಗಳನ್ನು ನೋಡಲು ಮನುಷ್ಯನಿಗೆ ಒಂದು ಕಣ್ಣು ಸಿಕ್ಕಿದಂತಾಗಿದೆ. ಇದೇ ರೀತಿ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ನ ಇತರೆ ವೈಶಿಷ್ಟ್ಯಗಳನ್ನು ಪರೀಕ್ಷಿಸಿರುವ ನಾಸಾ, ಭೂಮಿಯ ರೀತಿ 1,150 ಬೆಳಕಿನ ವರ್ಷಗಳಷ್ಟು ದೂರ ಇರುವ ಒಂದು ಗ್ರಹದ ರೋಹಿತವನ್ನು (Spectrum) ಸೆರೆಹಿಡಿದಿದೆ. ಈ ಗ್ರಹವು ಸೂರ್ಯನಂತಿರುವ ಒಂದು ನಕ್ಷತ್ರದ ಸುತ್ತ ಸುತ್ತುತ್ತಿದ್ದು, ಭೂಮಿ ಮತ್ತು ಸೂರ್ಯನ ವ್ಯವಸ್ಥೆಯಂತಿದೆ. ಈ ರೋಹಿತದಿಂದ ಆ ಗ್ರಹಗಳಲ್ಲಿ ಜೀವಿಗಳಿಗೆ ಅತ್ಯಂತ ಅಗತ್ಯವಾಗಿ ಇರಬೇಕಾದ ನೀರು ಮತ್ತು ವಾತಾವರಣದ ಇರುವಿಕೆಯ ಗುರುತನ್ನು ಪತ್ತೆ ಮಾಡುವಲ್ಲಿ ಟೆಲಿಸ್ಕೋಪ್ ಯಶಸ್ವಿಯಾಗಿದೆ. ಈ ರೋಹಿತವು ಇಲ್ಲಿಯವರೆಗಿನ most detailed spectrum of exoplanet ಎನ್ನಲಾಗಿದೆ, ಅಂದರೆ ಸೌರಮಂಡಲದ ಹೊರಗಿರುವ ಯಾವುದೇ ಗ್ರಹದ ರೋಹಿತದ ಅದ್ಭುತ ಚಿತ್ರಣ. ಈ ಅಧ್ಯಯನಗಳು ಮುಂದೊಂದು ದಿನ ಭೂಮಿಯಲ್ಲಿ ಮಾತ್ರ ಜೀವ ಸಂಕುಲಗಳು ಇವೆ ಎನ್ನುವ ವಿಷಯನ್ನು ಸುಳ್ಳು ಮಾಡುವ ಯೋಚನೆಗಳನ್ನು ಹುಟ್ಟುಹಾಕಿವೆ.

ಇಗ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಸೆರಿಹಿಡಿದಿರುವ ಚಿತ್ರಗಳು, ಪ್ರಾರಂಭಿಕ ಹಂತದಲ್ಲಿ ಟೆಲಿಸ್ಕೋಪ್‌ನ ಕಾರ್ಯವೈಖರಿಯನ್ನು ಪರೀಕ್ಷಿಸಲು ಸೆರೆಹಿಡಿದಿರುವ ಮಾದರಿ ಚಿತ್ರಗಳು ಮಾತ್ರ. ಮುಂದಿನ ದಿನಗಳಲ್ಲಿ ಈ ದೂರದರ್ಶಕದಲ್ಲಿ ಅಡಗಿರುವ ಇನ್ನೂ ಅನೇಕ ವೈಜ್ಞಾನಿಕ ಉಪಕರಣಗಳಿಂದ ಬರಬಹುದಾದ ಚಿತ್ರಗಳು, ಮಾಹಿತಿಗಳು ನಭೋಮಂಡಲದ ಅನಂತತೆಯನ್ನು ಇನ್ನಷ್ಟು ಗ್ರಹಿಸಲು, ನಮ್ಮ ವಿಜ್ಞಾನದ ಕುತೂಹಲಗಳನ್ನು ತಣಿಸಲು ಮತ್ತು ಕೆರಳಿಸಲು ಮುಂದಾಗುವುದರಲ್ಲಿ ಸಂದೇಹವಿಲ್ಲ. ಕುವೆಂಪು ಅವರ ಪದ್ಯದ ಸಾಲಾದ, “ಓ ನನ್ನ ಚೇತನ, ಆಗು ನೀ ಅನಿಕೇತನ”ದಂತೆ ಈ ಟೆಲಿಸ್ಕೋಪ್ ಮನುಷ್ಯರ ಚೇತನವನ್ನು ಅನಿಕೇತನ ಮಾಡಲು ಹೊರಟಿರುವುದಂತಿದೆ. ಅದನ್ನು ತಿಳಿಯಲು ನಾವೆಲ್ಲರೂ ವಿಜ್ಞಾನದ ಬೆಳಕಲ್ಲಿ ಬದುಕಬೇಕಿದೆಯಷ್ಟೆ!


ಇದನ್ನೂ ಓದಿ: ಬಾಹ್ಯಾಕಾಶದ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದ ಜೇಮ್ಸ್‌ ವೆಬ್‌‌ ದೂರದರ್ಶಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...