Homeಮುಖಪುಟಹಿಮಾಲಯ ಪ್ರವಾಸ; ದುಡಿಮೆ ಮತ್ತು ಸ್ತ್ರೀಸೌಂದರ್ಯ

ಹಿಮಾಲಯ ಪ್ರವಾಸ; ದುಡಿಮೆ ಮತ್ತು ಸ್ತ್ರೀಸೌಂದರ್ಯ

- Advertisement -
- Advertisement -

ಭಾರತದ ಬಯಲು ಪ್ರದೇಶಗಳಿಂದ ಹಿಮಾಲಯ ಚಾರಣಕ್ಕೆ ಜನ ನೆರೆಯುತ್ತಾರೆ. ಪರ್ವತ ಪ್ರದೇಶಗಳಲ್ಲಿ ತಿರುಗಾಟಕ್ಕೆ ಹೊರಡುವ ಮುನ್ನ ದೇಹವು ಹೊಸ ಹವಾಮಾನಕ್ಕೆ ಒಗ್ಗಿಕೊಳ್ಳಲೆಂದು ಬೇಸ್‌ಕ್ಯಾಂಪಿನಲ್ಲಿ ಒಂದು ದಿನ ಇರಬೇಕಾಗುವುದು. ಆಗ ಹೊಳೆಯನ್ನು ಕಟ್ಟಿದ ಹಗ್ಗದ ಮೂಲಕ ದಾಟುವ, ಬಂಡೆ ಏರಿಳಿಯುವ, ಓಡುವ ಇತ್ಯಾದಿ ಲಘು ತರಬೇತಿ-ವ್ಯಾಯಾಮ ಇರುತ್ತದೆ. ಸಂಜೆಗೆ, ಹಿಮಾಲಯದ ಹವಾಮಾನ, ಜೀವನಕ್ರಮ, ಸಂಸ್ಕೃತಿ, ಕಾಡಿನ ವಿಶಿಷ್ಟತೆ ಪರಿಚಯಿಸುವ ತಜ್ಞ ಉಪನ್ಯಾಸಗಳು. ಕುಲು ಬೇಸ್‌ಕ್ಯಾಂಪಿನಲ್ಲಿ ಅಂತಹದೊಂದು ಉಪನ್ಯಾಸ ಮಾಡುತ್ತ ಕ್ಯಾಂಪ್ ಆಫೀಸರ್-ಮಾಜಿ ಸೇನಾಧಿಕಾರಿ- ಹೇಳಿದ: “ನೋಡಿ, ಹಿಮಾಲಯದ ಹವಾಮಾನ ಮಹಿಳೆಯಂತೆ ಚಂಚಲ. ನಂಬಲನರ್ಹ. ಯಾವಾಗಲಾದರೂ ಮಳೆ-ಹಿಮಪಾತ ಆಗಬಹುದು. ನೀವು ಸಿದ್ಧತೆ ಮಾಡಿಕೊಂಡಿರಬೇಕು”. ತಂಡದಲ್ಲಿದ್ದ ಹುಡುಗರು ಹುಡುಗಿಯರತ್ತ ನೋಡುತ್ತ ರಣೋತ್ಸಾಹದಲ್ಲಿ ಹೋ ಎಂದು ಕೇಕೆ ಹಾಕಿದರು. ಈ ಮಾತನ್ನು ಸದರಿ ಆಫೀಸರ್ ಹಲವಾರು ಸಲ ಹೇಳಿರಬೇಕು. ಕೇಕೆಯ ಪ್ರತಿಕ್ರಿಯೆ ಪಡೆದಿರಬೇಕು. ಇದು ಪರೋಕ್ಷವಾಗಿ ಹೆಣ್ಣು ಗಂಡಿಗೆ ನಿಷ್ಠಳಾಗಿರಬೇಕು, ಈ ನಿಯಮ ಗಂಡಸರಿಗೆ ಅನ್ವಯವಾಗದು ಎಂಬ ದನಿಯನ್ನೊಳಗೊಂಡಿತ್ತು.

ನಮ್ಮ ಗುಂಪಲ್ಲಿದ್ದ ಮಹಿಳೆಯರು ಈ ಸಮೀಕರಣವನ್ನು ಪ್ರತಿಭಟಿಸಿದರು. ನಾವೂ ಅವರ ಜತೆಗೂಡಿದೆವು. ಅಧಿಕಾರಿಯು ನಮ್ಮ ಪ್ರತಿಭಟನೆಯನ್ನು ತಮಾಷೆಯಲ್ಲಿ ತೇಲಿಸಿದ. ನಿವೃತ್ತ ಮೇಜರುಗಳು ಸಾಮಾಜಿಕವಾಗಿ ಅಸೂಕ್ಷ್ಮವಾಗಿರುತ್ತಾರೆ ಎನ್ನುವುದನ್ನು ಅನೇಕ ಕ್ಯಾಂಪುಗಳಲ್ಲಿ ಕಂಡಿರುವೆ. ಯುದ್ಧಸಂಸ್ಕೃತಿಯ ಒಳಗೆ ಹೆಣ್ಣನ್ನು ಹೇಡಿತನದ ಚಂಚಲತೆಯ ಪ್ರತೀಕವಾಗಿಸುವ ಮನೋಭಾವವಿದೆ. ಪುರುಷವಾದವು ಆಳವಾಗಿ ಬೇರೂರಿರುವ ಎಲ್ಲ ಸೈನಿಕ ಸಂಸ್ಕೃತಿಗಳು ನೂರಾರು ಸೆಕ್ಸಿಸ್ಟ್ ಜೋಕುಗಳನ್ನು ಸೃಷ್ಟಿಮಾಡಿವೆ.

ಈ ಲಿಂಗಸಂವೇದನೆಯಿಲ್ಲದ ಅಪನಂಬಿಕೆ ಮತ್ತು ಜೋಕುಗಳಿಗೆ ಚಾರಿತ್ರಿಕ ಹಿನ್ನೆಲೆಯಿದೆ. ಎಲ್ಲ ಸಮಾಜಗಳಲ್ಲೂ ಪಶುಪಾಲಕ, ಬೇಟೆಗಾರ, ವ್ಯಾಪಾರಿ ಮತ್ತು ಸೈನಿಕ ಸಂಸ್ಕೃತಿಗಳು ಸ್ತ್ರೀಶಂಕಿತ. ಮಾದೇಶ್ವರ ಕಾವ್ಯದಲ್ಲಿ ಬೇಟೆಗೆ ಹೋಗುವ ಮುನ್ನ ಸಂಕಮ್ಮನಿಂದ ವಚನ ಪಡೆಯುವನು. ದುಡಿಮೆಗಾಗಿ ಕುಟುಂಬ ಬಿಟ್ಟು ದೂರ ಮತ್ತು ಬಹುಕಾಲ ಹೋಗುವ ಕಸುಬುಗಳ ಮನೋವೈಜ್ಞಾನಿಕ ಸಮಸ್ಯೆಯಿದು. ಇವಕ್ಕೆ ಹೋಲಿಸಿದರೆ ಗಂಡುಹೆಣ್ಣು ಕೂಡಿ ದುಡಿವ ನೇಕಾರಿಕೆ, ಕೃಷಿ, ಕುಲಕಸುಬುಗಳ ಸಮುದಾಯಗಳಲ್ಲಿ ಸ್ತ್ರೀಶಂಕೆಯ ಅಂಶ ಕಡಿಮೆ. ಸೈನಿಕಸಂಸ್ಕೃತಿಯು ಹೆಣ್ಣನ್ನು ರಕ್ಷಿಸುವ ಇಲ್ಲವೇ ಭೋಗಿಸುವ ದೃಷ್ಟಿಕೋನದಲ್ಲೇ ನೋಡುತ್ತದೆ. ವೀರಗಲ್ಲು-ಶಾಸನಗಳು ಕೂಡ ಹೆಣ್ಣನ್ನು ರಕ್ಷಿಸುತ್ತ ಮರಣಪ್ಪುವವರನ್ನು ವೀರ ಎನ್ನುತ್ತವೆ; ಯುದ್ಧದಲ್ಲಿ ಮಡಿದವರಿಗೆ ‘ಜಿತೇನ ಲಭ್ಯತೇ ಲಕ್ಷ್ಮೀ ಮೃತೇನಾಪಿ ಸುರಾಂಗನಾ’ ಎಂದು ಘೋಷಿಸುತ್ತವೆ. ಸೈನ್ಯವು ನಾಗರಿಕ ಸಮಾಜದೊಳಗೆ ಪ್ರವೇಶಿಸಿದಾಗೆಲ್ಲ ಹೆಣ್ಣನ್ನು ಬಲಾತ್ಕರಿಸುವ, ಭೋಗಕ್ಕೆ ಒಳಪಡಿಸುವ ಘಟನೆಗಳು ಘಟಿಸಿವೆ. ಯಾವುದೇ ರಾಜ್ಯವನ್ನು ಗೆದ್ದಾಗ ವಿಜೇತ ಸೈನ್ಯ ಮಾಡುತ್ತಿದ್ದ ಮೊದಲ ಕೆಲಸ, ಸೆರೆಸಿಕ್ಕ ಹೆಣ್ಣುಗಳನ್ನು ಹಂಚಿಕೊಳ್ಳುವುದು. ಸ್ತ್ರೀಯರನ್ನು ಕುರಿತ ಧೋರಣೆಯು ಕ್ಯಾಂಪ್ ಆಫಿಸರನ ವೈಯಕ್ತಿಕ ಸಮಸ್ಯೆಯಾಗಿರಲಿಲ್ಲ.

ಇದನ್ನೂ ಓದಿ: ರಾಜೀವ ತಾರಾನಾಥ: ಜಾತ್ಯತೀತ ಪರಂಪರೆಯ ಮಾತು

ಈ ಪ್ರಕರಣವು ಹಿಮಾಲಯದಲ್ಲಿ ಮಹಿಳೆಯರನ್ನು ಕಾಣುವ ನನ್ನ ನೋಟಕ್ರಮವನ್ನು ರೂಪಿಸಿತು. ವಾಸ್ತವವಾಗಿ ಆಫೀಸರನ ಗ್ರಹಿಕೆಗೆ ವಿರುದ್ಧವಾಗಿ ಸ್ತ್ರೀಲೋಕವಿತ್ತು. ಹಿಮಾಲಯವನ್ನು ಭೇಟಿಮಾಡುವ ಹೊರಗಿನವರಿಗೆ ಮಹಿಳೆಯರ ಶ್ರಮಸಂಸ್ಕೃತಿ ಹೆಜ್ಜೆಹೆಜ್ಜೆಗೆ ಕಾಣತೊಡಗಿತು. ಬೆನ್ನಮೇಲೆ ಹೊರೆಯಿಲ್ಲದ ಹೆಣ್ಣೇ ಇಲ್ಲವೆನ್ನಬಹುದು. ಗೊಬ್ಬರ ಹೊರುವ, ಗೋಧಿ ಸಿವುಡನ್ನು ಕಣಕ್ಕೆ ಅಡಕುವ, ಬಟಾಣಿ, ಗೋಧಿ, ಅಲೂಗೆಡ್ಡೆ, ಭತ್ತದ ಹೊಲಗಳಲ್ಲಿ ಕಳೆಕೀಳುತ್ತ ಕೈಗುದ್ದಲಿಯಿಂದ ಅಗೆಯುತ್ತ ಸೊಪ್ಪು ತರಕಾರಿ ಬಿಡಿಸುತ್ತ, ಇರುವುದನ್ನು ಕಾಣಬಹುದು. ಅವರು ಪರ್ವತಗಳಿಂದ ಸೇಬು, ಸೌದೆ, ಹುಲ್ಲುಹೊರೆ ಹೊತ್ತು ಲಯಬದ್ಧವಾಗಿ ಜೀಕುತ್ತ ಸಾಲುಗಟ್ಟಿ ಬರುತ್ತಿದ್ದರು. ಇದು ಇರುವೆಗಳು ಅಕ್ಕಿಕಾಳು ಹೊತ್ತು ಗೂಡಿಗೆ ಹೋಗುವುದನ್ನು ನೆನಪಿಸುತ್ತಿತ್ತು. ಕೆಲವೊಂದೆಡೆ ತಮ್ಮ ಅಂಗಡಿಗಳಿಗೆ ದೂರದ ಪಟ್ಟಣದಿಂದ ಜಿನಸುಗಳನ್ನು ಅವರು ಹೊತ್ತು ತರುತ್ತಿದ್ದರು. ಎಮ್ಮೆ ದನ ಕುರಿ ಕುದುರೆ ಮೇಯಿಸುವಾಗಲೇ, ಉಣ್ಣೆನೂಲಿನ ಚೆಂಡನ್ನು ಸಿಕ್ಕಿಸಿಕೊಂಡು ಹೆಣಿಗೆ ಮಾಡುತ್ತಿದ್ದರು. ಅವರು ತೇನಸಿಂಗರಂತೆ ಹಿಮಶಿಖರಗಳನ್ನು ಹತ್ತಿ ದಾಖಲೆ ನಿರ್ಮಿಸದೆ ಇರಬಹುದು. ಆದರೆ ದುಡಿಮೆ ತೇನಸಿಂಗ್-ಬಚೇಂದ್ರಿಪಾಲರಿಗೆ ಕಡಿಮೆಯಲ್ಲ. ಹಿಮಾಲಯದ ಏರಿಳಿತದ ಭೌಗೋಳಿಕತೆ, ನಾಟಕೀಯ ಹವಾಮಾನಗಳೇ ಅವರ ದೇಹ ಮತ್ತು ಮನಸ್ಸುಗಳನ್ನು ಸಮರಧೀರಗೊಳಿಸಿರಬಹುದು. ಬೆಟ್ಟಪ್ರದೇಶದಲ್ಲಿ ಮಹಿಳೆಯೇ ಕುಟುಂಬದ ಕೇಂದ್ರ. ಎಂತಲೇ ಅಲ್ಲಿ ಬಹುಪತಿತ್ವವೂ ಇದೆ. ತನ್ನ ಇಚ್ಛೆಯನರಿತ ಗಂಡನ್ನು ವರಿಸುವ ಸ್ವಾತಂತ್ರ್ಯವಿದೆ. ಭಾರತದಲ್ಲಿ ಬಹುಪತಿತ್ವ ಇರುವ ಕೆಲವೇ ಪ್ರದೇಶಗಳಲ್ಲಿ ಹಿಮಾಲಯವೂ ಒಂದು. ಅನೇಕ ಸಮುದಾಯಗಳಲ್ಲಿ ಹೆಣ್ಣು ಸಂತತಿ ಕಡಿಮೆ. ಆಗ ಹಲವಾರು ಅಣ್ಣತಮ್ಮಂದಿರು ಒಬ್ಬಳನ್ನೇ ಮದುವೆಯಾಗುತ್ತಾರೆ. ಈ ಅರ್ಥದಲ್ಲಿ ಅಲ್ಲಿನ ಹೆಂಗಸರು ದ್ರೌಪದಿಯರು. ಇದೂ ಪುರುಷರ ಅಸೂಯೆಗೆ ಒಂದು ಕಾರಣವಿದ್ದೀತು.

ಹಿಮಾಲಯದ ಹೊಲಗಳಲ್ಲಿ ನಾವು ಗಂಡಸರನ್ನು ಕಂಡಿದ್ದು ಕಡಿಮೆ. ಹಂಪಿ ಸೀಮೆಯ ಹಳ್ಳಿಗಳಲ್ಲಿ ಇರುವಂತೆ, ಇಲ್ಲಿಯೂ ಕಟ್ಟೆಗಳ ಮೇಲೆ ಕುಳಿತ ಗಂಡಸರುಂಟು. ಹಿಮಾಲಯದ ಹಿಡುವಳಿಗಳು ಸಣ್ಣವು. ಅಲ್ಲಿ ಬಹಳ ಜನರಿಗೆ ಕೆಲಸವಿರುವುದಿಲ್ಲ. ಕಡಿದಾದ ಜಾಗದಲ್ಲಿ ದನಕೋಣ ಹೂಡಿ ನೇಗಿಲು ಹೊಡೆಯುವುದು ಕಷ್ಟ. ಕುರುಪಿ ಕೈಗುದ್ದಲಿಗಳಲ್ಲೇ ನೆಲ ಅಗೆಯಬೇಕು. ಬೀಜ ಬಿತ್ತಬೇಕು. ಕಳೆತೆಗೆಯಬೇಕು. ಜಮೀನು ಮನೆಯಂಗಳ ಇಲ್ಲವೇ ಹಿತ್ತಿಲುಗಳೇ ಚಾಚಿಕೊಂಡಂತೆ ಲಗತ್ತಾಗಿರುತ್ತದೆ. ಹೀಗಾಗಿ ಮಹಿಳೆಯರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು, ಮರದಡಿ ಕೂರಿಸಿಯೊ ಹೊಲಗೆಲಸ ಮಾಡುತ್ತಾರೆ. ಗಂಡಸರು ಕುರಿಕಾವಲಿಗೆ ಹೋಗುವರು. ಹಿಮಾಲಯದ ಬೇಸಾಯ ಹೆಂಗಸರ ಶ್ರಮದಿಂದಲೇ ನಿಂತಿದೆ. ಉಂಕಿಮಠದ ಸಮೀಪ ಗದ್ದೆಯ ಕೆಲಸ ಮಾಡಿ ವಿಶ್ರಾಂತಿಗಾಗಿ ಬಾಳೆ ಗಿಡದಡಿ ಸುಧಾರಿಸಿಕೊಳ್ಳುತ್ತಿದ್ದ ಮಹಿಳೆಯರ ಚಿತ್ರವನ್ನು ಸೆರೆಹಿಡಿಯಲು ಯತ್ನಿಸಿದೆ. ನಾಚಿಕೆಯಿಂದ ಗಿಡದ ಮೆರೆಗೆ ಸರಿದರು. ಒಮ್ಮೆ ಪಾರ್ವತಿ ನದಿಕಣಿವೆಯಲ್ಲಿ ಬರುವ ಫುಲಾನ್ ಎಂಬ ಹಳ್ಳಿಯಲ್ಲಿ ನಮ್ಮ ರಾತ್ರಿ ವಸತಿಯಿತ್ತು. ಹಗಲು ಹದಿನೈದು ಕಿಮೀ ನಡಿಗೆಯಾಗಿದ್ದರಿಂದ, ‘ಮೈಯೆ ಭಾರ ಮನವೆ ಭಾರ’ವಾಗಿತ್ತು. ಹೆಣಗಳಂತೆ ಬಿದ್ದುಕೊಂಡೆವು. ಗಾಜಿನ ಕಿಟಕಿಯಿಂದ ಮಂದವಾದ ಬೆಳಕು ನುಗ್ಗುವಾಗಲೇ ತಿಳಿಯಿತು ಇರುಳು ಮುಗಿಯಿತೆಂದು. ಬೆಳಿಗ್ಗೆಯೆ ಎದ್ದು ಪಾರ್ವತಿ ಕಣಿವೆಯ ಸೂರ್ಯೋದಯ ನೋಡಲು ಮನಸ್ಸಾಯಿತು. ದೇಹ ಏಳಲು ನಿರಾಕರಿಸುತ್ತಿತ್ತು. ಸೇಬುತೋಟದಲ್ಲಿದ್ದ ಬುಲ್‌ಬುಲ್‌ಗಳ ಚೀಚೀಕ್ ಆಲಿಸುತ್ತ, ಸೂರನ್ನು ನೋಡುತ್ತ ಬಿದ್ದುಕೊಂಡಿದ್ದೆ. ತೋಟದಲ್ಲಿ ಗುದ್ದಲಿ ಸದ್ದು ಲಯಬದ್ಧವಾಗಿ ಕೇಳಿಸಿತು. ಕಿಟಕಿಯಲ್ಲಿ ಇಣುಕಿದೆ. ಮಹಿಳೆಯೊಬ್ಬಳು ಸೇಬುತೋಟದ ಬದುವಿನ ಅಂಚನ್ನು ಸವರುತ್ತಿದ್ದಳು. ತಿನ್ನುವವರ ಹೆಸರು ಕಾಳಮೇಲೆ ಬರೆದಿರುತ್ತದೆಯಂತೆ. ಬೆಳೆದವರ ಹೆಸರೇನಾದರೂ ಹಣ್ಣುಕಾಯಿಗಳ ಮೇಲೆ ಬರೆದಿರುತ್ತಿದ್ದರೆ ಅವುಗಳಲ್ಲಿ ಹಿಮಾಲಯದ ಮಹಿಳೆಯರ ಹೆಸರಲ್ಲಿರುತ್ತಿದ್ದವು. ನಮಗೆ ಬರುವ ಕೇಸರಿಯಲ್ಲಿ, ಸೇಬಿನ ರುಚಿಯಲ್ಲಿ ಹಿಮಾಲಯದ ಮಹಿಳೆಯರ ಶ್ರಮವಿದೆ.

ನಗರಗಳಲ್ಲಿ ರಾತ್ರಿ ಎಂಟರ ಮೇಲೆ ಮಹಿಳೆಯರು ತಿರುಗುವುದು ಅಪಾಯಕರ ಎಂದು ನೈತಿಕವಾದಿಗಳು ಅಪ್ಪಣೆ ಕೊಡಿಸುತ್ತಾರೆ. ಆದರೆ ಹಿಮಾಲಯದಲ್ಲಿ ನಿರ್ಜನ ಕಾಡಿನಲ್ಲೂ ಮಹಿಳೆಯರು ಏಕಾಂಗಿಯಾಗಿ ಸುತ್ತುತ್ತಾರೆ. ಅದು ಅನಿವಾರ್ಯ ಕೂಡ. ನಾವೊಮ್ಮೆ ಪಿನ್ನಿ ಎಂಬ ಹಳ್ಳಿಯ ಹೊರಗೆ, ದುರ್ಗಮ ಪರ್ವತದ ಕಿಬ್ಬದಿಯಲ್ಲಿ ಹೊಳೆ ಹುಟ್ಟುವ ಜಾಗದಲ್ಲಿ ಬೀಡುಬಿಟ್ಟಿದ್ದೆವು. ಸೂರ್ಯ ಹುಟ್ಟುವುದನ್ನು ನೋಡಲೆಂದು ಎದ್ದರೆ, ಗೋಡೆಯಂತೆ ನಮ್ಮೆದುರಿಗೆ ನಿಂತಿರುವ ಕಲ್ಲಿನ ಪಾರ್ಶ್ವ ಮಾತ್ರ ಕಂಡಿತು. ಅದರ ಮೇಲೆ ಗಿಡಮರ ಬೆಳೆದಿದ್ದವು. ಅವಕ್ಕೆ ನೀರು ಹೇಗೆ ಸಿಗುತ್ತದೆ, ಬೇರು ಹೇಗೆ ಬಿಡುತ್ತವೆ ಎಂದು ಸೋಜಿಗದಿಂದ ನೋಡುತ್ತಿದ್ದೆ. ಒಬ್ಬಾಕೆ ಮೇಕೆ ಅಟ್ಟಿಕೊಂಡು ಹಳ್ಳಿಯ ಕಡೆಯಿಂದ ಬಂದಳು. ದುರ್ಗಮವಾದ ಪರ್ವತದ ಸಂದಿಗೊಂದಿಗಳಲ್ಲಿ ಹತ್ತಿ ಹಾದಿ ಹಿಡಿದು ಮೇಕೆಗಳ ಸಮೇತ ನೋಡುತ್ತಲೇ ಮರೆಯಾದಳು. ಒಮ್ಮೆ ಢಿನಾಳಿ ಎಂಬಲ್ಲಿ ಊರಹೊರಗಿದ್ದ ಬೃಹತ್ ಮರದಡಿ ಕುಳಿತು ಕಟ್ಟಿಕೊಂಡು ತಂದ ಬುತ್ತಿ ಉಣ್ಣಬೇಕಾಯಿತು. ಊರಿನ ಹೆಂಗಸರು ನಮ್ಮನ್ನು ನೋಡಲೆಂದು ಸೇರಿದರು. ಕೈಯಲ್ಲಿ ಕೈಗೂಸುಗಳಿದ್ದವು. ಉಣ್ಣೆಯ ಹೆಣಿಗೆ ಮಾಡುತ್ತಲೇ ಇದ್ದರು. ಭಾರತದ ಕೊನೆಯ ಹಳ್ಳಿ ಮಲಾನದಲ್ಲಿ, ಮನೆಯ ಜಗುಲಿಯಲ್ಲಿ ಟೆರೇಸಿನ ಮೇಲೆ ನೂಲುತ್ತ ಹೆಣಿಗೆ ಮಾಡುತ್ತ ಕುಲಾವಿ ಮಾರುತ್ತ ಕುಳಿತ, ಮನೆಯಂಗಳದಲ್ಲಿ ತರಕಾರಿ ಬೆಳೆಯುತ್ತ ಅಜ್ಜಿಯರು ವಿಶೇಷವಾಗಿರುವರು. ಕೆಲವರು ಒನಕೆಯಲ್ಲಿ ಏನನ್ನೊ ಒರಳಿಗೆ ಹಾಕಿ ಕುಟ್ಟುತ್ತಿರುವ ಸದ್ದು ಕೇಳುತ್ತದೆ. ಕುರಿಗಾಹಿಗಳಾಗಿ ಗಂಡಸರು, ತರುಣಿಯರು ಕಾಡಿಗೆ ಹೋದರೆ, ಊರುಮನೆಯನ್ನು ಇವರು ಸಂಭಾಳಿಸುವವರು. ಇವರು ತಮ್ಮ ಕ್ರಿಯಾಶೀಲತೆಯನ್ನು ದುಡಿಮೆಯಲ್ಲೇ ಕಂಡುಕೊಂಡಂತೆ ಭಾಸವಾಗುತ್ತದೆ.

ಇದನ್ನೂ ಓದಿ: ಗಾಂಧಿ ಸ್ಮರಣೆಯ ಕೆಲವು ವೈರುಧ್ಯಗಳು

ನಗರೋಣಿಯಲ್ಲಿ ಕಂಡ ಒಂದು ರೈತ ದಂಪತಿ ಸಿನಿಮಾ ತಾರೆಯರಂತಿದ್ದರು. ಅವರ ಹೊಲ ಹನ್ನೆರಡು ಸಾವಿರ ಅಡಿ ಎತ್ತರದಲಿತ್ತು. ಸುತ್ತಮುತ್ತ ಹಿಮಪರ್ವತ. ನಡುವೆ ಹೊಲ-ಮನೆ. ಬೇಸಿಗೆಯ ನಡುಹಗಲಲ್ಲೇ ಐದು ಡಿಗ್ರಿ ಚಳಿ. ಚಳಿಗಾಲ ಹೇಗಿದ್ದೀತು? ಪಾರ್ವತಿ ನದಿಯ ದಡದಲ್ಲಿ ಮಣಿಕರ್ಣಿಕಾಗೆ ಹೋಗುತ್ತಿರುವಾಗ ಒಂದು ಮನೆಯಂಗಳದಲ್ಲಿ ಗೋಧಿಹುಲ್ಲನ್ನು ಕೋಲುಗಳಿಂದ ಬಡಿಯುತ್ತ ಧಾನ್ಯವನ್ನು ಬೇರ್ಪಡಿಸುತ್ತಿದ್ದ ಮಹಿಳೆ ಅಪ್ರತಿಮ ಚೆಲುವೆಯಾಗಿದ್ದಳು. ಬಾನು ಕೂಡ ಆಕೆಯನ್ನು ಕಣ್ಮಿಸುಕದೆ ನೋಡಿದಳು. ಹಾದಿಹೋಕರಾದ ನಮ್ಮತ್ತ ಆಕೆ ತಿರುಗಿಯೂ ನೋಡಲಿಲ್ಲ. ಹಿಮಾಲಯದ ಮಹಿಳೆಯರು ಕಾಡುಹೂಗಳಂತೆ. ತಮ್ಮ ಸಹಜ ಸೌಂದರ್ಯದ ಅರಿವೇ ಇಲ್ಲದಂತೆ ದುಡಿಯುತ್ತಿರುತ್ತಾರೆ. ಅವರನ್ನು ದುಡಿಮೆಯೇ ಸುಂದರವಾಗಿಸಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮನುಷ್ಯ ಸ್ವಾರ್ಥಿ, ಗಂಡು, ಬಸಿರು ಬಾಣಂತನ, ಮಗುವಿನ ಆರೈಕೆ ಇತ್ಯಾದಿ ಕೋಟಿ ಕೆಲಸಗಳ ಹೊರೆ ಇಲ್ಲದೆ ಬದುಕುವ ಅಪರಿಮಿತ ಸ್ವತಂತ್ರ ಜೀವಿ, ತಾನು ತನ್ನ ಕೆಲಸ ಸಾಧನೆ ಆಕಾಂಕ್ಷೆ ಗುರಿಗಳಲ್ಲಿ ಮೈಮರೆತು ತನ್ನ ಸಹಜೀವಿ ಹೆಣ್ಣನ್ನ ಕಾಲುಕಸ ಮಾಡಿಕೊಂಡು ಅವಳ ಮೇಲೆ ಪಾವಿತ್ರ್ಯ ಶೀಲ ಮರ್ಯಾದೆಗಳನ್ನ ಹೊರಿಸಿ ರೂಡಿ ಸಂಪ್ರದಾಯ ಹಾಡು ಹಸೆಗಳ ಮೂಲಕ ಅದನ್ನ ಶಾಶ್ವತೀಕರಿಸಿದ್ದಾನೆ. ಶತಮಾನಗಳೆ ಉರುಳಿದರೂ ಹೆಣ್ಣಿನ ಶ್ರಮ ನೈಪುಣ್ಯತೆ ಜಾಣತನಗಳು ಪ್ರತಿಭೆ ಕಲಾವಂತಿಕೆ ಯಾವುದಕ್ಕೂ ಬೆಲೆ ಇಲ್ಲ.
    ಸರೋಜ m s
    ಸಾಗರ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...