Homeಕರ್ನಾಟಕ2023ಅನ್ನು ಕರೆಯಲು ಕರ್ನಾಟಕದ ಜನತೆ ತೆಗೆದುಕೊಳ್ಳಬಹುದಾದ 23 ರಾಜಕೀಯ ಪ್ರತಿಜ್ಞೆಗಳು

2023ಅನ್ನು ಕರೆಯಲು ಕರ್ನಾಟಕದ ಜನತೆ ತೆಗೆದುಕೊಳ್ಳಬಹುದಾದ 23 ರಾಜಕೀಯ ಪ್ರತಿಜ್ಞೆಗಳು

- Advertisement -
- Advertisement -

ಕರ್ನಾಟಕದ ಮತ್ತು ಇಂಡಿಯಾದ ರಾಜಕೀಯ ಸನ್ನಿವೇಶ ಊಹಿಸಲಾರದಷ್ಟು ಕೀಳುಮಟ್ಟಕ್ಕೆ ಇಳಿದಿರುವ 2022ನ್ನು ಮುಗಿಸಿ ಅದು ಇನ್ನಷ್ಟು ಪ್ರಪಾತಕ್ಕೆ ಕುಸಿಯಬಹುದಾದ 2023ಕ್ಕೆ ಕಾಲಿಡುತ್ತಿದ್ದೇವೆ. ಅದು ಹಾಗಾಗಬಾರದು. ಸುಧಾರಿಸುವ ಸೂಚನೆಗಳು ದೊಡ್ಡಮಟ್ಟದಲ್ಲಿ ಕಾಣದೆ ಹೋದರೂ, ಮತದ್ವೇಷ ಆಧಾರಿತ ರಾಜಕೀಯ ಧ್ರುವೀಕರಣವನ್ನು ತಿರಸ್ಕರಿಸಿ ಓಟು ಮಾಡಿದ ಕೆಲವೇ ಕೆಲವು ರಾಜ್ಯಗಳು ಕೂಡ ಇದ್ದವು. ಈ ನಿಟ್ಟಿನಲ್ಲಿ 2023ಕ್ಕೆ ಚುನಾವಣೆಗೆ (ಮೇ) ಹೋಗಲಿರುವ ಕರ್ನಾಟಕಕ್ಕೆ ದೊಡ್ಡ ಪರೀಕ್ಷೆ ಎದುರಾಗುವುದಾದರೆ, ಅದು 2024ರ ಏಪ್ರಿಲ್-ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಒಂದು ಮಟ್ಟದ ಪೂರ್ವಾಭ್ಯಾಸವೂ ಅಗಲಿದೆ. ದ್ವೇಷ ಹಂಚುವ ರಾಜಕೀಯ ಪಕ್ಷಗಳನ್ನು ಹದ್ದುಬಸ್ತಿನಲ್ಲಿಡುವ ಜವಾಬ್ದಾರಿ ಹಿಂದೆಂದಿಗಿಂತಲೂ ಈಗ ಕರ್ನಾಟಕದ ಜನತೆಯ ಮೇಲೆ ಹೆಚ್ಚಿದೆ. ಈ ನಿಟ್ಟಿನಲ್ಲಿ 23ಕ್ಕೆ ಈ 23 ರಾಜಕೀಯ ಪ್ರತಿಜ್ಞೆಗಳ ಕಡೆಗೆ ನಾವು ಪತ್ರಿಕೆಯ ಓದುಗರು, ಕರ್ನಾಟಕದ ಜನತೆ ಗಮನ ಹರಿಸಬಹುದೇ? ಕಾಲಿಡುತ್ತಿರುವ ಹೊಸ ವರ್ಷಕ್ಕೆ ಸಂಬಂಧಿಸಿದ ಸಂಖ್ಯೆಯ ಅನುಗುಣವಾಗಿ ಈ ಪ್ರತಿಜ್ಞೆಗಳನ್ನು 23ಕ್ಕೆ ಸೀಮಿತಗೊಳಿಸಿದ್ದರೂ ಓದುಗರು ಈ ಪಟ್ಟಿಯನ್ನು ಇನ್ನಷ್ಟು ಬೆಳೆಸುವುದು ಅತ್ಯಗತ್ಯ.

1. ಆರ್ಥಿಕ ಅಸಮಾನತೆಯನ್ನು ಸರಿಪಡಿಸುವಂತೆ ರಾಜಕೀಯ ಪಕ್ಷಗಳಿಗೆ ಒತ್ತಡ ಹೇರೋಣ; ಪರಿಹಾರ ಸೂಚಿಸುವ ಪ್ರಣಾಳಿಕೆ ಹೊಂದಿರುವ ಪಕ್ಷಕ್ಕೆ ಬೆಂಬಲಿಸೋಣ.

2. ದ್ವೇಷ ಹರಡುವ, ಜಾತಿ ಮತಗಳ ನಡುವೆ ಧ್ರುವೀಕರಣಕ್ಕೆ ಎಡೆಮಾಡಿಕೊಡುವ, ಕೂಡು ಸಂಸ್ಕೃತಿಗಳನ್ನು-ಸೌಹಾರ್ದತೆಯನ್ನು ಮಣ್ಣುಪಾಲಾಗಿಸಲು ಹೊರಟಿರುವ ತೀವ್ರವಾದಿ ರಾಜಕೀಯವನ್ನು ದೂರವಿಡೋಣ.

3. ತಮ್ಮ ಪ್ರತಿ ನಡೆಯಲ್ಲಿಯೂ ಸಂವಿಧಾನವನ್ನು ಅನುಸರಿಸಿ, ಸಂವಿಧಾನ ಬದ್ಧರಾಗಿರುವ ರಾಜಕೀಯ ಪಕ್ಷವನ್ನು ಬಲಪಡಿಸೋಣ.

4. ಹಿಂದಿನ ಚುನಾವಣೆಯಲ್ಲಿ ಗೆದ್ದು, ಅಧಿಕಾರ ಲಾಲಸೆಗೆ ಪಕ್ಷಾಂತರ ಮಾಡಿ ಜನರಿಗೆ ದ್ರೋಹಗೈದ ಎಲ್ಲರನ್ನು (ಅವರು ತಮ್ಮ ಮೂಲ ಪಕ್ಷಕ್ಕೆ ಮತ್ತೆ ಹಿಂದಿರುಗಿದ್ದರೂ ಕೂಡ) ಸೋಲಿಸುವ ಪಣ ತೊಡೋಣ.

5. ಪರಿಸರ ರಕ್ಷಣೆ, ಹವಾಮಾನ ವೈಪರೀತ್ಯಕ್ಕೆ ಪರಿಹಾರಗಳನ್ನು ಸೂಚಿಸುವ ಪಕ್ಷದ ಜೊತೆಗೆ ಹೆಜ್ಜೆ ಹಾಕೋಣ.

6. ಮೀಸಲಾತಿಯ ಬಗ್ಗೆ ಗೊಂದಲ ಎಬ್ಬಿಸುತ್ತಿರುವ ಈ ಪರ್ವದಲ್ಲಿ, ಸಂವಿಧಾನದ ಆಶಯವನ್ನು ಬುಡಮೇಲು ಮಾಡಲು ಜಾರಿ ಮಾಡಿರುವ 10% ಇಡಬ್ಲ್ಯುಎಸ್ ಮೀಸಲಾತಿಯನ್ನು ತೆಗೆದುಹಾಕುವ ಪ್ರಮಾಣ ಮಾಡುವ ರಾಜಕಾರಣಕ್ಕೆ ಸಹಕಾರ ನೀಡೋಣ. ಒಳಮೀಸಲಾತಿಯನ್ನು ಜಾರಿ ಮಾಡಿ, ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿಯ ಉಪಯೋಗ ದೊರೆಯುವಂತೆ ವ್ಯವಸ್ಥೆಯನ್ನು ಮರುರೂಪಿಸಲು ಆಗ್ರಹಿಸೋಣ. ಅಗತ್ಯ ಬಿದ್ದ ಕಡೆಗಳಲ್ಲಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯನ್ನು ಇನ್ನಷ್ಟು ಹೆಚ್ಚಿಸುವಂತೆ ಆಗ್ರಹಿಸೋಣ.

7. ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ನಾಗರಿಕರಿಗೆ ಉದ್ಯೋಗ ದೊರಕಿಸುವ ನೀಲನಕ್ಷೆ ಹೊಂದಿರುವ ಹಾಗೂ ಖಾಸಗಿ ಉದ್ಯಮದಲ್ಲಿಯೂ ಮೀಸಲಾತಿಯನ್ನು ನೀಡಲು ಬದ್ಧರಾದ ಪಕ್ಷಗಳನ್ನು ಬೆಂಬಲಿಸೋಣ.

8. ದ್ವೇಷದ ರಾಜಕೀಯವನ್ನು ವಿರೋಧಿಸಿದ ಕಾರಣಕ್ಕೆ ಸುಳ್ಳುಸುಳ್ಳು ಕೇಸುಗಳನ್ನು ಜಡಿದು ಸಾವಿರಾರು ಜನರನ್ನು ಬಂಧಿಸಿರುವ ರಾಜಕೀಯ ಸಿದ್ಧಾಂತ ಮತ್ತು ಅಂತಹ ಪಕ್ಷವನ್ನು ವಿರೋಧಿಸೋಣ.

ಇದನ್ನೂ ಓದಿ: ರಾಜಕೀಯ ಕ್ರಾಂತಿಗೆ ಕಹಳೆ ನಾಂದಿ ಮೊಳಗಬೇಕಿರುವ ಸಂಧಿಕಾಲದಲ್ಲಿ..

9. ತಮ್ಮ ಜಾತಿಯ ಜನಸಂಖ್ಯೆ ಕಡಿಮೆಯಿದ್ದರೂ ದೇವರಾಜ ಅರಸ್, ಪಿ ಜಿ ಆರ್ ಸಿಂಧ್ಯಾ, ಆರ್ ಎಲ್ ಜಾಲಪ್ಪನಂಥವರು ವಿಧಾನಸಭಾ ಕ್ಷೇತ್ರಗಳಿಂದ ಆರಿಸಿ ಬರಲು ಸಾಧ್ಯವಾಗುತ್ತಿದ್ದ ವಾತಾವರಣವನ್ನು ಮತ್ತೆ ಸೃಷ್ಟಿಸಲು ಪ್ರಯತ್ನಿಸೋಣ. ಮೀಸಲು ಕ್ಷೇತ್ರಗಳಲ್ಲಿ ಮೀಸಲು ಸಮುದಾಯದ ಅಭ್ಯರ್ಥಿಗಳು ಸರ್ವಸ್ವತಂತ್ರರಾಗಿ ಗೆಲ್ಲಲು ಅವಕಾಶವಾಗುವಂತಹ ರಾಜಕಾರಣವನ್ನು ನಿರ್ಮಿಸೋಣ.

10. ಭ್ರಷ್ಟಾಚಾರ ಮಿತಿಮೀರಿರುವ ಸಂದರ್ಭದಲ್ಲಿ, 40% ಕಮಿಷನ್ ಸಾಮಾನ್ಯವಾಗುತ್ತಿರುವ ಕ್ರೂರ ವಾತಾವರಣದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಯೋಜನೆಯನ್ನು ಮುಂದಿಡುವುದಕ್ಕೆ ಆಗ್ರಹಿಸೋಣ. ಮಾಡಿದ ಯೋಜನೆಯನ್ನು ಪರಿಪಾಲಿಸುವಂತೆ ನಿಗಾವಹಿಸೋಣ.

11. ನಮ್ಮ ರಾಜ್ಯದ ಸಂಪನ್ಮೂಲಗಳನ್ನು, ಪಾರಿಸರಿಕ ಅಪಾಯಗಳನ್ನು ಲೆಕ್ಕಿಸದೆ, ಗಣಿಗಾರಿಕೆ ಮಾಡಿ ಲೂಟಿ ಹೊಡೆಯುವ ವ್ಯಕ್ತಿಗಳನ್ನು ಯಾವುದೇ ಪಕ್ಷದಲ್ಲಿರಲಿ ಮುಲಾಜಿಲ್ಲದೇ ಸೋಲಿಸುವ ಪಣತೊಡೋಣ. ರಾಜ್ಯದ ಸಂಪನ್ಮೂಲಗಳು ಪರಿಸರ ಸಮತೋಲನದ ಹಿನ್ನೆಲೆಯಲ್ಲಿ ಇಡೀ ರಾಜ್ಯದ ಅಭ್ಯುದಯಕ್ಕೆ ಬಳಕೆಯಾಗುವಂತೆ ಕಾಯುವ ರಾಜಕಾರಣವನ್ನಷ್ಟೇ ಬೆಂಬಲಿಸೋಣ.

12. ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ಕೋಮುವಾದವನ್ನು ಶಿಕ್ಷಣದಲ್ಲಿ ಹೇರುವ; ಎನ್‌ಇಪಿ ಎಂಬ ಯೋಜನೆಯ ಮೂಲಕ ಉಳ್ಳವರನ್ನು ಮಾತ್ರ ಬೆಂಬಲಿಸುವ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡುವ ಹುನ್ನಾರದಲ್ಲಿರುವ ರಾಜಕೀಯವನ್ನು ವಿರೋಧಿಸೋಣ; ಶಿಕ್ಷಣ ಸಾಮಾಜೀಕರಣವನ್ನು ಸಾಧಿಸುವಂತಾಗಿ, ಎಲ್ಲರಿಗೂ ಸುಲಭವಾಗಿ ಮತ್ತು ಸಮಾನವಾಗಿ ದಕ್ಕುವಂತೆ ಮಾಡುವ ವ್ಯವಸ್ಥೆಯನ್ನು ಬೆಂಬಲಿಸುವ ಪಕ್ಷವನ್ನು ಮುಂದಿನ ಚುನಾವಣೆಗಳಲ್ಲಿ ಸ್ವಾಗತಿಸೋಣ.

13. ತೀವ್ರ ಆರ್ಥಿಕ ಅಸಮಾನತೆಯ ಈ ಪರ್ವದಲ್ಲಿ, ಬಡವರ, ನಿರ್ಗತಿಕರ ಸಂಖ್ಯೆ ಹಿಂದೆಂದೂ ಇಲ್ಲದ ಮಟ್ಟದಲ್ಲಿ ಬೆಳೆಯುತ್ತಿದೆ. ಬಡವರ ಮತ್ತು ಮಧ್ಯಮ ವರ್ಗದ ಕಲ್ಯಾಣ ಯೋಜನೆಗಳಿಗೂ ಕಲ್ಲು ಹಾಕಲಾಗುತ್ತಿದೆ. ಓಲ್ಡ್ ಪೆನ್ಷನ್ ಸ್ಕೀಮ್, ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ- ಇಂತಹ ಮಧ್ಯಮವರ್ಗದ, ಬಡವರ ಕಲ್ಯಾಣ ಯೋಜನೆಗಳಿಗೆ ಜನ ಬೀದಿಗೆ ಇಳಿಯುವಂತಾಗಿದೆ. ಇಂತಹ ಕಲ್ಯಾಣ ಯೋಜನೆಗಳ ಬಗ್ಗೆ ಬದ್ಧತೆ ತೋರುವ ಸರ್ಕಾರ ರಚಿಸುವವರಿಗೆ ನಮ್ಮ ಓಟು ಎನ್ನೋಣ.

14. ಎರಡು ವರ್ಷಗಳ ಕೆಳಗಷ್ಟೆ ದೆಹಲಿಯಲ್ಲಿ ನಡೆದ ಐತಿಹಾಸಿಕ ರೈತ ಹೋರಾಟಕ್ಕೆ ಮಣಿದು ಸರ್ಕಾರ ಹಿಮ್ಮೆಟ್ಟಿತ್ತಾದರೂ, ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳು ನೆನೆಗುದಿಗೆ ಬಿದ್ದಿವೆ. ರೈತ ವಿರೋಧಿ ರಾಜಕಾರಣಿಗಳಿಗೆ ಅವರ ಮನೆಯ ದಾರಿ ತೋರಿಸೋಣ.

15. ಜಿಎಸ್‌ಟಿ ಎಂಬ ಪರೋಕ್ಷ ತೆರಿಗೆ ಜನರ ಜೀವ ಹಿಂಡುತ್ತಿದೆ. ಸಾಮಾನ್ಯ ಜನರನ್ನು ಮತ್ತಷ್ಟು ಬಡವರನ್ನಾಗಿಸುತ್ತಿದೆ. ಆದರೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಜಿಎಸ್‌ಟಿ ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಹೊರೆಯಾಗದಂತೆ ಮರುರಚಿಸಿ, ಅತಿ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ಹಾಕುವ ಬದ್ಧತೆ ತೋರುವ ಪಕ್ಷಕ್ಕೆ ನಮ್ಮ ಮತ ಎನ್ನೋಣ.

16. ಹಿಂದಿ ಹೇರಿಕೆಯನ್ನು ಮೆಟ್ಟಿ ನಿಲ್ಲುವ ಬದ್ಧತೆಯಿರುವ, ಕರ್ನಾಟಕದ ಅಲ್ಪಸಂಖ್ಯಾತ ಭಾಷೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಯುಳ್ಳ ರಾಜಕಾರಣ ನಮ್ಮ ಭವಿಷ್ಯವಾಗಲಿ.

17. ನಗರಗಳು ಪರಿಸರ ನಾಶ, ವಾಯು ಮಾಲಿನ್ಯಗಳಿಂದ ನರಳುತ್ತಿವೆ. ರಿಯಲ್ ಎಸ್ಟೇಟ್ ದಂಧೆಗಳಿಂದ ನಗರಗಳನ್ನು ಮುಕ್ತಗೊಳಿಸಿ ಸಹನೀಯಗೊಳಿಸುವ ರಾಜಕಾರಣ ಮುನ್ನಲೆಗೆ ಬರಲಿ.

18. ಇಂದು ಕೃತಕ ಬುದ್ಧಿಮತ್ತೆ ಎಲ್ಲಾರಂಗದಲ್ಲೂ ಪ್ರವೇಶ ಮಾಡಿ ಖಾಸಗಿತನಕ್ಕೆ ಧಕ್ಕೆ ತರುತ್ತಿದೆ. ನಾಗರಿಕರ ಕಣ್ಗಾವಲು ತೀವ್ರವಾಗುತ್ತಿದೆ. ಸಾಮಾಜಿಕ ಡಿಜಿಟಲ್ ಮಾಧ್ಯಮಗಳು ಮಿತಿಮೀರಿ ಬೆಳೆಯುತ್ತಿವೆ. ಇವುಗಳಿಗೆ ಕಡಿವಾಣ ಹಾಕಿ ಜನಪರವಾಗಿ ಯೋಜನೆ ರೂಪಿಸುವವರನ್ನು ಬೆಂಬಲಿಸೋಣ.

ಇದನ್ನೂ ಓದಿ: ಸ್ಪೃಶ್ಯ-ಅಸ್ಪೃಶ್ಯ: ಒಳಮೀಸಲಾತಿಯ ಒಳಗುದಿ

19. ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಬದ್ಧತೆಯಿರುವ, ಎಲ್ಲಾ ಲಿಂಗತ್ವದ ಹಕ್ಕುಗಳನ್ನು ಮಾನ್ಯ ಮಾಡಿ ಗೌರವಿಸುವ ರಾಜಕಾರಣ ನಮ್ಮದಾಗಲಿ.

20. ಕೊರೊನಾದಂತಹ ಸಾಂಕ್ರಾಮಿಕಗಳು ಇನ್ನುಮುಂದೆ ಸಾಮಾನ್ಯವಾಗಲಿವೆ ಎನ್ನುತ್ತವೆ ಹಲವು ಅಧ್ಯಯನಗಳು. ಈ ನಿಟ್ಟಿನಲ್ಲಿ ಆರೋಗ್ಯ ವ್ಯವಸ್ಥೆ ದೇಶದ ಎಲ್ಲ ನಾಗರಿಕರಿಗೂ ಸುಲಭವಾಗಿ, ಉಚಿತವಾಗಿ ಮತ್ತು ಸಮಾನವಾಗಿ ದಕ್ಕಲು ವ್ಯವಸ್ಥೆ ರೂಪಿಸುವಂತೆ ಎಲ್ಲಾ ಪಕ್ಷಗಳಿಗೂ ಒತ್ತಡ ಹೇರೋಣ.

21. ದ್ವೇಷ ಹರಡುವ ರಾಜಕಾರಣವನ್ನು ಬೆಂಬಲಿಸುವ ಕಲೆಗಳ (ಉದಾ: ರಾಮಸೇತು, ಕಾಂತಾರ, ಕಾಶ್ಮೀರ್ ಫೈಲ್ಸ್ ಸಿನೆಮಾಗಳು) ಬಗ್ಗೆ ಎಚ್ಚರಿಕೆಯಿಂದಿದ್ದು ಅವುಗಳ ಅಪಾಯವನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡೋಣ. ಅವುಗಳ ಬದಲಿಗೆ ಮಾನವೀಯಗೊಳಿಸುವ ಸಾಹಿತ್ಯ, ಸಿನಿಮಾ, ಸಂಗೀತವನ್ನಷ್ಟೇ ಬೆಂಬಲಿಸೋಣ.

22. ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸಿ ಜನಸಾಮಾನ್ಯರ ಬೆನ್ನಿಗೆ ನಿಲ್ಲುವ ಜನಪರ ಮಾಧ್ಯಮಗಳನ್ನಷ್ಟೇ ಬೆಂಬಲಿಸೋಣ. ಮಾರಿಕೊಂಡ ಮಾಧ್ಯಮಗಳಿಗೆ ಧಿಕ್ಕಾರ ಎನ್ನೋಣ.

23. ಒಟ್ಟಾರೆಯಾಗಿ, ಸಮಸ್ತ ನಾಗರಿಕರ, ಇಡೀಯ ಸಮಾಜದ ಸ್ವಸ್ಥತೆಗೆ ತುಡಿಯುವ ಸಮಗ್ರ ರಾಜಕಾರಣಕ್ಕೆ ನಮ್ಮ ಬೆಂಬಲ ಎನ್ನೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...