Homeಅಂಕಣಗಳುಕರ್ನಾಟಕ ಚುನಾವಣೆ 2023: ಮೂರೂ ಪ್ರಮುಖ ಪಕ್ಷಗಳಲ್ಲಿ ಟಿಕೆಟ್ ಮತ್ತು ಮುಖ್ಯಮಂತ್ರಿ ಆಕಾಂಕ್ಷಿಗಳ ಹಗ್ಗಜಗ್ಗಾಟ

ಕರ್ನಾಟಕ ಚುನಾವಣೆ 2023: ಮೂರೂ ಪ್ರಮುಖ ಪಕ್ಷಗಳಲ್ಲಿ ಟಿಕೆಟ್ ಮತ್ತು ಮುಖ್ಯಮಂತ್ರಿ ಆಕಾಂಕ್ಷಿಗಳ ಹಗ್ಗಜಗ್ಗಾಟ

- Advertisement -
- Advertisement -

ಕರ್ನಾಟಕ ಚುನಾವಣೆಗೆ ದಿನಗಣನೆ ಶುರುವಾಗಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಇನ್ನೇನು ಪ್ರಾರಂಭವಾಗಬೇಕಿದೆ. ಒಂದು ವರ್ಷದ ನಂತರ 2024ರಲ್ಲಿ ಬರಲಿರುವ ಲೋಕಸಭಾ ಚುನಾವಣೆಗೆ ಕರ್ನಾಟಕ ಚುನಾವಣೆ ದಿಕ್ಸೂಚಿಯಾಗಬಲ್ಲದೆಂದು ಹಲವು ರಾಜಕೀಯ ಪಂಡಿತರ ಅಂಬೋಣ. ಹಲವು ಬಾರಿ ವಿಧಾನಸಭಾ ಮತ್ತು ಲೋಕಸಭೆಯ ಮತದಾನದ ವಿನ್ಯಾಸ ಬದಲಾಗಿದ್ದರೂ, ವಿಧಾನಸಭೆಯಲ್ಲಿ ಗೆದ್ದ ಪಕ್ಷ ಉಳಿದವಕ್ಕಿಂತ ಹೆಚ್ಚು ಉತ್ಸಾಹದಿಂದ ಲೋಕಸಭೆಗೆ ಸಿದ್ಧವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೂ, ಬಿಜೆಪಿ ಪಕ್ಷಕ್ಕೆ ವಿಧಾನಸಭೆ ಚುನಾವಣೆಗಿಂತಲೂ, ಲೋಕಸಭೆಯ ಲೆಕ್ಕಾಚಾರವೇ ಮುಖ್ಯವಾಗಿದೆಯೇ ಎಂಬ ಅನುಮಾನ ಬಾರದೇ ಇರದು. ಈ ಚುನಾವಣೆಯಲ್ಲಿ ಹಲವು ಸಮಸ್ಯೆಗಳಿಂದ ಬಾಧಿತವಾಗಿರುವ ಬಿಜೆಪಿ ಇನ್ನೂ ಟಿಕೆಟ್ ಘೋಷಿಸುವುದಕ್ಕೂ ತಿಣುಕಾಡುತ್ತಿದೆ. ಈ ಲೇಖನ ಮುಗಿಸುವ ಹೊತ್ತಿಗೆ ಮಂಗಳವಾರ ರಾತ್ರಿ 189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. 12 ಏಪ್ರಿಲ್ ಬುಧವಾರ 23 ಕ್ಷೇತ್ರಗಳಿಗೆ ಮತ್ತೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಈ ವಿಧಾನಸಭಾ ಚುನಾವಣೆಯ ಬಗ್ಗೆ ಕೇಂದ್ರ ಬಿಜೆಪಿ ಮುಖಂಡರು ಬೇಕೆಂತಲೇ ನಿರುತ್ಸಾಹ ತಳೆದಿರುವ ಬಗ್ಗೆ ಅನುಮಾನಗಳು ಮೂಡದೇ ಇರದು. ಹೇಳಿಕೇಳಿ ಸದರಿ ಬೊಮ್ಮಾಯಿ ಆಡಳಿತದ ಸರ್ಕಾರ 40% ಕಮಿಷನ್ ಆರೋಪಗಳಿಂದ ಹೈರಾಣಾಗಿದೆ. ಒಂದು ವೇಳೆ ಬಿಜೆಪಿ ಗೆಲುವಿನ ಹೊಸ್ತಿಲಿಗೆ ಬಂದು, ಬೇರೆ ಪಕ್ಷದ ಸಹಾಯದಿಂದಲೋ ಅಥವಾ 2013 ಮತ್ತು 2019ರಲ್ಲಿ ಮಾಡಿದಂತೆ ಆಪರೇಷನ್ ಕಮಲದ ಮೂಲಕವೋ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಲು ಸಾಧ್ಯವಾದರೂ, ಈಗ ಬಿಜೆಪಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶ ಲೋಕಸಭೆ ಚುನಾವಣೆ ವೇಳೆಗೂ ಮುಂದುವರಿಯದೆ ನಿಲ್ಲುವುದಿಲ್ಲ. ರಾಷ್ಟ್ರಮಟ್ಟದಲ್ಲಿ ಮೋದಿ ಇಮೇಜಿಗೆ ಇದು ಕೊಡಬಹುದಾದ ಪೆಟ್ಟನ್ನು, ಈಗ ಸೋಲುವ ಮೂಲಕವಷ್ಟೇ ಒಂದು ಮಟ್ಟಕ್ಕೆ ಮೆಟ್ಟಿ ನಿಲ್ಲಲು ಸಾಧ್ಯ! ಲೋಕಸಭಾ ಚುನಾವಣೆಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಚ್ಛಸದ ಸಂಘ ಪರಿವಾರ ಈ ಚುನಾವಣೆಯನ್ನು ಬಿಟ್ಟುಕೊಟ್ಟು, ಮುಂದಿನ ಲೋಕಸಭಾ ಚುನಾವಣೆ ಗೆದ್ದು, ಇಲ್ಲಿ ರಚನೆಯಾಗುವ ಸರ್ಕಾರವನ್ನು ಮಹಾರಾಷ್ಟ್ರದ ಮಾದರಿಯಲ್ಲಿ ನೋಡಿಕೊಳ್ಳೋಣ ಎಂದುಪರಿಗಣಿಸಿರಬಹುದೇ?

ಸೋಮಣ್ಣ

ಒಂದು ಕಡೆ ಯಡಿಯೂರಪ್ಪನವರನ್ನು ಹೊರಗಿಟ್ಟು ದೆಹಲಿ ವರಿಷ್ಠರು (ಕರ್ನಾಟಕದ ಕೆಲವು ’ಪರಮಾಪ್ತ’ರನ್ನು ಮಾತ್ರ ಕೂರಿಸಿಕೊಂಡು) ಕರ್ನಾಟಕ ಚುನಾವಣಾ ಟಿಕೆಟ್ ವಿಷಯವಾಗಿ ಚರ್ಚೆ ನಡೆಸಿದ ಸುದ್ದಿ ಏಪ್ರಿಲ್ ಹತ್ತನೆಯ ತಾರೀಕು ದೊಡ್ಡಮಟ್ಟದಲ್ಲಿ ಬಿತ್ತರವಾಯಿತು. ಇದರ ಬೆನ್ನಲ್ಲೇ ಮುಂದಿನ ದಿನ ಶಿವಮೊಗ್ಗದ ಕೆ.ಎಸ್ ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆದು ಮಾಧ್ಯಮಗಳಗೆ ಬಿಡುಗಡೆ ಮಾಡಿದರು. ಈಶ್ವರಪ್ಪನವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಲು ನಡೆಸಿದ ಲಾಬಿ ಫಲ ಕೊಡದೆ ಇದ್ದರಿಂದ ಈ ನಿರ್ಣಯ ತೆಗೆದುಕೊಂಡಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಯಡಿಯೂರಪ್ಪನವರ ಲಾಬಿ ಕೇವಲ ತಮ್ಮ ಪುತ್ರ ವಿಜಯೇಂದ್ರರ ಟಿಕೆಟ್‌ಗಾಗಿ ಮಾತ್ರ ಇರುವುದಿಲ್ಲ ಎಂಬುದು ಗೊತ್ತಿರುವ ವಿಷಯವೇ. ರಾಜ್ಯದ ದೊಡ್ಡ ಸಂಖ್ಯೆಯ ಮತದಾರರ ಬೆಂಬಲ ಹೊಂದಿರುವ ಯಡಿಯೂರಪ್ಪ ಸುಮಾರು ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿರುವವರು. ಅಲ್ಲದೆ, ಯಡಿಯೂರಪ್ಪನವರನ್ನು ನಂಬಿ ಟಿಕೆಟ್‌ಗೆ ಕಾತರಿಸಿರುವ ದೊಡ್ಡ ಪಡೆಯೇ ಬಿಜೆಪಿಯಲ್ಲಿದೆ. ಇನ್ನು ಸಿದ್ದರಾಮಯ್ಯನವರ ವಿರುದ್ಧ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸುವದಿಲ್ಲ ಎಂದು ಕೆಲವು ದಿನಗಳ ಹಿಂದೆ ಯಡಿಯೂರಪ್ಪನವರು ಹೇಳಿದರು. ಸದ್ಯಕ್ಕೆ ತಮ್ಮ ಪಕ್ಷದಲ್ಲಿಯೇ ವಿರೋಧಿಯಾಗಿರುವ ಸೋಮಣ್ಣನ ಹೆಸರನ್ನು ವರುಣಾ ಕ್ಷೇತ್ರಕ್ಕೆ ಯಡಿಯೂರಪ್ಪನವರೇ ತೇಲಿಬಿಟ್ಟಿದ್ದರು ಎಂಬ ವದಂತಿಗಳು ಕೂಡ ಮೂಡಿಬಂದಿದ್ದವು. ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಬಹುತೇಕ ಕಾಣೆಯಾಗಿರುವಂತೆ ಕಂಡುಬಂದಿರುವ ಸೋಮಣ್ಣ ಯಾವುದೋ ಒತ್ತಡಕ್ಕೆ ಬಿಜೆಪಿಯಲ್ಲಿ ಉಳಿದಿರುವಂತೆ ಕಾಣುತ್ತಾರೆ. (ಈಗ ಚಾಮರಾಜನಗರದಲ್ಲಿ ಮತ್ತು ವರುಣಾದಲ್ಲಿ ಸೋಮಣ್ಣನವರಿಗೆ ಟಿಕೆಟ್ ಸಿಕ್ಕಿದೆ.) ಒಟ್ಟಿನಲ್ಲಿ ದೆಹಲಿ-ಗುಜರಾತಿನ ಚಾಣಾಕ್ಷರಿಗೂ ಮತ್ತು ಕರ್ನಾಟಕದ ಹಿರಿ ಜೀವಗಳಿಗೂ ತಾಳ ತಪ್ಪಿರುವುದು ಸ್ಪಷ್ಟವಾಗಿದೆ.

ಮತ್ತೊಂದು ಕಡೆಗೆ ತಮ್ಮ ಕ್ಷೇತ್ರದ ಟಿಕಟ್ ಘೋಷಣೆಗೂ ಮುನ್ನವೇ ಜಗದೀಶ್ ಶೆಟ್ಟರ್ ಬಂಡಾಯವೆದ್ದಿದ್ದಾರೆ. ದೆಹಲಿ ಹೈಕಮಾಂಡ್‌ನಿಂದ ಹೊಸಬರಿಗೆ ಅವಕಾಶ ಕೊಡುವಂತೆ ಬಂದ ಕರೆಯನ್ನು ಉಲ್ಲೇಖಿಸಿ ಈ ಬಾರಿ ಸೆಣೆಸೇ ತೀರುತ್ತೇನೆಂದು ಸೆಡ್ಡುಹೊಡೆದಿದ್ದಾರೆ. ಇನ್ನು ದಾರಿ ಕಾಣದಂತಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಪ್ರಿಯ ನಟ ಸುದೀಪ್‌ನಂತಹವರ ಮೊರೆ ಹೋಗಿದ್ದಾರೆ. ಅಕಸ್ಮಾತ್ ಬಿಜೆಪಿ ಚುನಾವಣೆ ಗೆದ್ದರೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ರಚಿಸುವ ಬಗ್ಗೆ ಒಂದು ಪಿಸುಮಾತೂ ಕೂಡ ಬಿಜೆಪಿಯ ಬಳಗದಿಂದ ಹೊರಹೊಮ್ಮಿಲ್ಲ. ಸುಮಾರು 14 ಜನ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿವುದು ಬಂಡಾಯವನ್ನು ತೀವ್ರಗೊಳಿಸಿದೆ. ಸುಳ್ಯ ಮೀಸಲು ಕ್ಷೇತ್ರದಲ್ಲಿ ಆರು ಬಾರಿ ಶಾಸಕರಾಗಿದ್ದ ಎಸ್ ಅಂಗಾರ (ಬಂದರು ಮತ್ತು ಮೀನುಗಾರಿಕೆ ಸಚಿವ) ನಿವೃತ್ತಿ ಘೋಷಿಸಿದ್ದಾರೆ. ಅವರು “ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕಿ ಇಲ್ಲದೇ ಮಾಡಿರುವ ಕೆಲಸವನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಈಗ ಬೆಲೆ ಇಲ್ಲ. ನನ್ನ ಪ್ರಾಮಾಣಿಕತೆಯೇ ಮುಳುವಾಗಿದೆ. ನಾನು ಇನ್ನು ರಾಜಕಾರಣದಲ್ಲಿ ಇರಲ್ಲ. ಚುನಾವಣಾ ಪ್ರಚಾರವನ್ನೂ ಮಾಡುವುದಿಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು. ಟಿಕೆಟ್ ಸಿಗದಿರುವ ಬಗ್ಗೆ ಸಸಮಧಾನ ಇಲ್ಲ” ಎನ್ನುತ್ತಲೇ ತಮ್ಮ ತೀವ್ರ ಸಮಧಾನವನ್ನು ಹೊರಹಾಕಿದ್ದಾರೆ. ಟಿಕೆಟ್ ವಂಚಿತರಾದ ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ್ ಸವದಿ ಮತ್ತು ಆರ್ ಶಂಕರ್ ಕ್ರಮವಾಗಿ ಪಕ್ಷ ಬದಲಿಸುವ ಮತ್ತು ಪಕ್ಷೇತರನಾಗಿ ನಿಲ್ಲುವ ಬಂಡಾಯವೆದ್ದಿದ್ದಾರೆ. ಹೊಸದುರ್ಗದ ಶಾಸಕ ಗೂಳಿಹಟ್ಟಿ ಶೇಖರ್ ಕೂಡ ಇದೇ ಮಾರ್ಗ ಹಿಡಿದಿದ್ದಾರೆ. ಇವೆಲ್ಲವೂ ವಿಧಾನಸಭೆಯನ್ನು ಬಿಟ್ಟುಕೊಟ್ಟು ಮುಂದಿನ ಲೋಕಸಭಾ ಚುನಾವಣೆಗೆ ಕೆಲಸ ಮಾಡಿ ಎಂಬ ರಹಸ್ಯ ಸೂಚನೆಯೇ?

ಕೆ.ಎಸ್ ಈಶ್ವರಪ್ಪ

ಇದಕ್ಕೆಲ್ಲಾ ಪುಷ್ಠಿ ನೀಡುವಂತೆ ಉರಿ ಗೌಡ ಮತ್ತು ನಂಜೇಗೌಡ ವಿವಾದವನ್ನು ಎಬ್ಬಿಸಿ ಜನ ಸಾಮಾನ್ಯರಿಂದ ಭಾರಿ ವಿರೋಧ ವ್ಯಕ್ತವಾದಾಗ ಸಮರ್ಥನೆಗೂ ಇಳಿಯದೆ ಬಿಜೆಪಿ ಮುಖಂಡರು ನಿಗೂಢ ಮೌನಕ್ಕೆ ಜಾರಿ ಹಿಂದಡಿಯಿಟ್ಟಿದ್ದು, ಚುನಾವಣೆಗೆ ಕೆಲವೇ ದಿನ ಇದೆ ಎನ್ನುವಾಗ ಅಮುಲ್-ನಂದಿನಿ ವಿಲೀನದ ಚರ್ಚೆಯನ್ನು ಮತ್ತೆ ಮುನ್ನಲೆಗೆ ತಂದು, ಭಾವನಾತ್ಮಕ ವಿಷಯಕ್ಕೆ ಕೈಹಾಕಿ ವಿರೋಧವನ್ನು ಎದುರಿಸುತ್ತಿರುವುದು ಹೀಗೆ ಸಾಲುಸಾಲು ಹಿನ್ನಡೆಗಳು, ಬಿಜೆಪಿ ಹೈಕಮಾಂಡ್‌ನ 2024 ಚುನಾವಣೆಯತ್ತ ಚಿತ್ತ ಮತ್ತು ನಂತರದ ದೂ(ದು)ರಾಲೋಚನೆಯ ಕಡೆಗೆ ಬೊಟ್ಟು ಮಾಡುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲೂ ಭಿನ್ನಮತಗಳು ಸ್ಫೋಟಿಸಿವೆ.

ಇದನ್ನೂ ಓದಿ: ಕನಕಪುರ, ವರುಣ ಕ್ಷೇತ್ರಗಳಲ್ಲಿ ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಷಿ ಕಣಕ್ಕಿಳಿಯಲಿ: ಕಾಂಗ್ರೆಸ್ ಪಂಥಾಹ್ವಾನ

ಸಿದ್ಧತೆಯಲ್ಲಿ ತಮ್ಮ ವಿರೋಧಿಗಳಿಗಿಂತ ಮುಂದಿದೆ ಎಂದು ತೋರುತ್ತಿದ್ದ ಮತ್ತು ಸೀಮಿತ ಕ್ಷೇತ್ರಗಳಲ್ಲಿ ಮತದಾರರ ಭಾರಿ ಬೆಂಬಲ ಹೊಂದಿರುವ ಹಾಗೂ ಫಲಿತಾಂಶ ಅತಂತ್ರವಾದರೆ ನಿರ್ಣಾಯಕ ಕಿಂಗ್ ಮೇಕರ್ ಪಾತ್ರ ವಹಿಸುತ್ತಾರೆ ಎಂದೇ ಜನಪ್ರಿಯವಾಗಿರುವ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷರ ಕುಟುಂಬದ ಟಿಕೆಟ್ ಆಕಾಂಕ್ಷಿಗಳ ನಡುವೆಯೇ ಭಿನ್ನಮತ ಸ್ಫೋಟಿಸಿದೆ. ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಭವಾನಿ ರೇವಣ್ಣನವರಿಗೆ ಟಿಕೆಟ್ ಕೊಡುವ ವಿಷಯದಲ್ಲಿ ಎದ್ದಿರುವ ಕುಟುಂಬ ಕಲಹ ತಾರೆಕ್ಕೇರಿದೆ. ಭವಾನಿಯವರಿಗೆ ಟಿಕೆಟ್ ನೀಡದ ಹೊರತು ತನಗೂ ಟಿಕೆಟ್ ಬೇಡವೆಂದು ರೇವಣ್ಣನವರು ನಿರಾಕರಸಿರುವುದಾಗಿ ವರದಿಗಳು ಮೂಡಿದ್ದವು. ಹಳೇ ಮೈಸೂರು ಮತ್ತು ಹಾಸನದಲ್ಲಿ ಅತ್ಯುತ್ತಮ ಸಾಧನೆ ತೋರುತ್ತಾ ಬಂದಿರುವ ಜೆಡಿಎಸ್‌ಗೆ ಪಕ್ಷ ತೊರೆಯುತ್ತಿರುವವರು ಅಷ್ಟೇನು ಸಮಸ್ಯೆಯಾದಂತೆ ತೋರುತ್ತಿಲ್ಲ. ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್ ಸೇರಿಕೊಂಡಿದ್ದರೆ, ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದ ನಾಗಮಂಗಲದ ಶಿವರಾಮೇಗೌಡ ಬಿಜೆಪಿ ಸೇರಿದ್ದಾರೆ. ಅರಕಲಗೂಡು ಶಾಸಕ ಎ ಟಿ ರಾಮಸ್ವಾಮ ಕೂಡ ಬಿಜೆಪಿ ಸೇರಿದ್ದಾರೆ. ಈಗಾಗಲೇ ಜೆಡಿಎಸ್ ತೊರೆದಿದ್ದ ಅರಸೀಕೆರೆಯ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಕಾಂಗ್ರೆಸ್ ಸೇರಿದ್ದಾರೆ. ಈ ಎಲ್ಲಾ ಪಕ್ಷಾಂತರಗಳೂ ಬಹುತೇಕ ಪೂರ್ವನಿಯೋಜಿತವಾದ್ದರಿಂದ ಇವ್ಯಾವುವೂ ಜೆಡಿಎಸ್‌ಗೆ ಆಘಾತವನ್ನು ತಂದಿರುವಂಥವಲ್ಲ. ಸದ್ಯಕ್ಕೆ ಜೆಡಿಎಸ್ ಪಕ್ಷದ ಕುಟುಂಬ ಕಲಹ ಕರ್ನಾಟಕ ರಾಜಕೀಯ ನಾಟಕದ ರೋಚಕತೆಗೆ ಇನ್ನಷ್ಟು ಒಗ್ಗರಣೆ ಸೇರಿಸುತ್ತಿದೆ.

ಜಗದೀಶ್ ಶೆಟ್ಟರ್

ಕಾಂಗ್ರೆಸ್ ಪಕ್ಷದಲ್ಲಿ ಬೇರೆಬೇರೆ ಕಡೆಯಿಂದ ಬಂದು ಸೇರಿದವರ ಪ್ರಮುಖ ಮುಖಂಡರ ಸಂಖ್ಯೆಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷವನ್ನು ತೊರೆದವರ ಸಂಖ್ಯೆ ಹೆಚ್ಚಿದಂತೆ ತೋರುತ್ತಿಲ್ಲ. ಇದು ಪಕ್ಷದ ಆತ್ಮವಿಶ್ವಾಸವನ್ನು ಹೆಚ್ಚಿಸಿರಲಿಕ್ಕೂ ಸಾಕು.

ಆದರೆ ಅದು ಕೆಲವೊಮ್ಮೆ ತಲೆನೋವಾಗಿಯೂ ಪರಿಣಮಿಸಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಕಾಂಗ್ರೆಸ್‌ಗೆ ಬಂದ ಬಿಜೆಪಿ ಎಂಎಲ್‌ಸಿ ಪುಟ್ಟಣ್ಣನವರಿಗೆ ಕೊಟ್ಟ ಟಿಕೆಟ್‌ನಿಂದ ಚೂರು ಆಕ್ರೋಶ ಇದ್ದಿತ್ತು. ಆದರೆ ಇದು ಬಂಡಾಯದ ಮಟ್ಟಕ್ಕೆ ಬೆಳೆಯಲಿಲ್ಲ. ಈಗ ಸದ್ಯಕ್ಕೆ ಘೋಷಣೆಯಾಗಿರುವ 166 ಅಭ್ಯರ್ಥಿಗಳ ಪಟ್ಟಿಯಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಬಂಡಾಯ ಇಲ್ಲ. ಆದರೆ ಜೆಡಿಎಸ್‌ನಿಂದ ಕರೆತಂದಿದ್ದ ವೈಎಸ್‌ವಿ ದತ್ತ ಅವರಿಗೆ ಕಡೂರು ಟಿಕೆಟ್ ಕೈತಪ್ಪಿದ್ದರಿಂದ ಅವರು ಪಕ್ಷೇತರನಾಗಿ ಸ್ಪರ್ಧಿಸುವ ಮಾತನಾಡಿದ್ದಾರೆ. ಇಂತಹ ಬಂಡಾಯಗಳು ಮುಂದೆ ಬರಲಿರುವ ಪಟ್ಟಿಯಲ್ಲಿ ಹೆಚ್ಚು ಕಾಣುವ ಸಾಧ್ಯತೆ ಇದೆ. ಆದರೆ ಈಗ ಘೋಷಣೆಯಾಗಿರುವ ಪಟ್ಟಿಯಲ್ಲಿ ಸಾಕಷ್ಟು ಅಸಮಧಾನಗಳಿವೆ. ಉದಾಹರಣೆಗೆ ನೋಡುವುದಾದರೆ, ಬಿಜೆಪಿ ಒಳಮೀಸಲಾತಿಯನ್ನು ಶಿಫಾರಸ್ಸು ಮಾಡಿದ್ದೇವೆಂದು ’ಮೋಡಿ’ ಮಾಡುತ್ತಿರುವ ಸಮಯದಲ್ಲಿ, ಕಾಂಗ್ರೆಸ್ ಪಕ್ಷದ ಬಗ್ಗೆ ದಲಿತ ಎಡಗೈ ಸಮುದಾಯಕ್ಕೆ ಇರುವ ಅಸಮಾಧಾನವನ್ನು ಹೋಗಲಾಡಿಸಲು ನಿರೀಕ್ಷಿತ ಸಂಖ್ಯೆಯಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಇದು ಒಂದು ದೊಡ್ಡ ಸಂಖ್ಯೆಯ ಮತದಾರರನ್ನು ಭರವಸೆಗೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಸೋತಿರುವುದಕ್ಕೆ ಸ್ಪಷ್ಟ ಉದಾಹರಣೆ.

ಇನ್ನು ಬಿಜೆಪಿ ವೈಫಲ್ಯವೇ ತಮ್ಮನ್ನು ಅಧಿಕಾರಕ್ಕೆ ತರುತ್ತದೆ ಎಂಬ ಆತ್ಮವಿಶ್ವಾಸದಲ್ಲಿ, ಮುಖ್ಯಮಂತ್ರಿ ಅಭ್ಯರ್ಥಿಯ ಚರ್ಚೆಗೆ ಕಾಂಗ್ರೆಸ್ ಮುಖಂಡರು ಆಸ್ಪದ ಕೊಟ್ಟು ಕೆಲವೊಮ್ಮೆ ಅನಗತ್ಯ ವಿವಾದಕ್ಕೂ ಒಳಗಾಗಿರುವುದುಂಟು. ಒಂದು ಕಡೆ ಸಿದ್ದರಾಮಯ್ಯನವರನ್ನು ಕಾರ್ನರ್ ಮಾಡುವುದೇ ತನ್ನ ಸಕ್ಸೆಸ್ ಎಂದು ತಿಳಿದಂತಿರುವ ಬಿಜೆಪಿ, ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಲ್ಲಿ ನಿಲ್ಲುತ್ತಾರೆ, ಗೆಲ್ಲುವ ಆತ್ಮವಿಶ್ವಾಸವಿಲ್ಲ ಎಂಬುದನ್ನೇ ಪುನರುಚ್ಚರಿಸಿ, ಗೇಲಿ ಮಾಡಿ ಭಾವನಾತ್ಮಕ ಲಾಭ ಪಡೆಯಲು ಯತ್ನಿಸುತ್ತಿದೆ. ಇನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಸ್ಪರ್ಧೆ ದಿನದಿನಕ್ಕೂ ರಂಗೇರಿ ಮಾಧ್ಯಮಗಳ ಮತ್ತು ವಿರೋಧಿ ಪಾಳೆಯಗಳ ಬಾಯಿಗೆ ಆಹಾರವಾಗುತ್ತಿದೆ. ಸಿದ್ದರಾಮಯ್ಯನವರು ಡಿಕೆಶಿ ಮತ್ತು ಹೈಕಮಾಂಡ್ ಬಗ್ಗೆ ನೀಡಿದ ಒಂದು ಹೇಳಿಕೆಯನ್ನು ತಿರುಚಿ ವೈರಲ್ ಆಗುವಂತೆ ಮಾಧ್ಯಮಗಳು ಮಾಡಿದ್ದವು. ಈ ಜಂಗೀ ಕುಸ್ತಿ ದಿನದಿನವೂ ಹೊಸಹೊಸ ರೂಪ ಪಡೆಯುತ್ತಿದ್ದು, ಡಿಕೆಶಿ ಈಗ ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಆಗುವಂತಿದ್ದರೆ ಬೆಂಬಲಿಸುವುದಾಗಿ ಹೇಳಿದ್ದಾರೆ.

ವೈಎಸ್‌ವಿ ದತ್ತ

ಹಲವು ದಶಕಗಳಿಂದ ದಲಿತ ಮುಖ್ಯಮಂತ್ರಿಯ ನಿರೀಕ್ಷೆಯಲ್ಲಿರುವ ಕರ್ನಾಟಕದಲ್ಲಿ, ಒಂದು ಪಕ್ಷ ಕಾಂಗ್ರೆಸ್ ಚುನಾವಣೆ ಗೆದ್ದು ಎಲ್ಲರೂ ಒಮ್ಮತದಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಬೆಂಬಲಿಸಿ ಮುಖ್ಯಮಂತ್ರಿಯನ್ನಾಗಿಸಿದರೆ ಅದಕ್ಕಿಂತಲೂ ಒಳ್ಳೆಯ ಬೆಳವಣಿಗೆ ಕಾಂಗ್ರೆಸ್‌ಗೆ ಇರಲಾರದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬಹುದಾದರೆ, ಆಡಳಿತ ಬಿಜೆಪಿಯ ವೈಫಲ್ಯಗಳನ್ನು ಯುವಜನಕ್ಕೆ ಮನಮುಟ್ಟುವಂತೆ ಆರ್ಟಿಕ್ಯುಲೇಟ್ ಮಾಡಿ ತಿಳಿಸುವ ಕೌಶಲ್ಯ ಇರುವ, ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ಪ್ರಿಯಾಂಕ್ ಖರ್ಗೆಯವರನ್ನು ಕೂಡ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು. ಯುವ ಪೀಳಿಗೆಯನ್ನು ಕಾಂಗ್ರೆಸ್ ಆಕರ್ಷಿಸುವುದಕ್ಕೆ ಇದು ಉಪಕಾರಿ ಮತ್ತು ಮುಂದಿನ ಲೋಕಸಭಾ ಚುನಾವಣೆಗೂ ಅದು ಸಹಕರಿಸೀತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...