ಬಿಜೆಪಿಯಲ್ಲಿ ಮತದಾರರಿಗೆ ತೋರಿಸಲು ಯೋಗ್ಯವಾದಂತಹ ಮುಸುಡಿ ಯಾವುದು ಇಲ್ಲವೆಂದು ಗ್ರಹಿಸಿದ ಬೊಮ್ಮಾಯಿ ನಮ್ಮ ಸರೋವರದ ಸಂಜೀವಣ್ಣನ ಮಗನಾದ ಸುದೀಪನನ್ನು ಗೋಗರೆದು ಎಳೆದು ತಂದಿದ್ದಾರಲ್ಲಾ. ತನ್ನ ಮಾತುಕತೆ ಮತ್ತು ಒಂದಿಷ್ಟು ಅಭಿನಯದಿಂದ ಜನಮನ ಸೆಳೆದಿದ್ದ ಸುದೀಪ್‌ನನ್ನು ಮಾತನಾಡಿಸಬೇಕೆನಿಸಿತು. ಫೋನ್ ಮಾಡಲಾಗಿ ರಿಂಗಾಯ್ತು ರಿಂಗ್ ಟೋನ್: “ಎಲ್ಲ ಮಾಯಾ ನಾವು ಮಾಯಾ ಎಲ್ಲ ಮಾ…”
“ಹಲೋ ಯಾರು?”
“ನಾನು ಸಾರ್ ನಿಮ್ಮ ಅಭಿಮಾನಿ ಯಾಹು.”
“ಯಾಹು ಅಂದ್ರ್ಯಾರು?”
“ಅದೆ ಸಾರ್, ಸಿರ್ಸಿ ಅತ್ರ ಮಾತಾಡ್ ಮಾತಾಡ್ ಮಲ್ಲಿಗೆ ಶೂಟಿಂಗ್ ನ್ಯಡಿವಾಗ ಪರಿಚಯಾದೆ. ನಿಮ್ಮ ಹೋಟ್ಲಲ್ಲಿ ಕುಡುದೂ ಕುಡುದು ಲಾಸಾದೆ ಅಂತ ನಿಮಗೆ ಮುಜುಗರ ಮಾಡಿದ್ನಲ್ಲಾ..”
“ಓ ಗೊತ್ತಾಯ್ತು ಬುಡಿ, ಹೇಗಿದ್ದೀರಿ?”
“ಹಾಗೆ ಇದ್ದಿನಿ, ನೀವ್ಯಾಕ್ ಸಾರ್ ಹಿಂಗಾದ್ರಿ?”
“ನಾನೇನಾಗಿದ್ದಿನಿ?”
“ಹೋಗಿ ಹೋಗಿ ಬಿಜೆಪಿ ಸೇರಿದ್ರಲ್ಲ ಸಾರ್?”
“ಬಿಜೆಪಿ ಸೇರಿಲ್ಲ. ನಮ್ಮ ಮಾಮನಿಗೆ ಕ್ಯಾನ್‌ವಾಸ್ ಮಾಡ್ತಿನಿ.”
“ಆ ನಿಮ್ಮ ಮಾಮ ಅಂದ್ರೆ ಯಾರು ಸಾರ್?”
“ಬೊಮ್ಮಾಯಿ.”
“ಅವರು ಬೇರೆ ಜಾತಿ, ನೀವು ಬೇರೆ ಜಾತಿ ಅಲ್ಲವಾ?”
“ಅವರು ನಮ್ಮ ಮಾವ ಆಗಿ ಹುಟ್ಟಬೇಕಾಗಿತ್ತು. ಮಿಸ್ಸಾದ್ರು ಆದ್ರು ನಮಗೆ ಮಾಮ.”
“ಯಾಕೊ ಈ ಸಂಬಂಧನೇ ಅಸಂಬದ್ಧವಾಗಿ ಕಾಣ್ತಾ ಅದೆ.”
“ವಿಶಾಲ ಮನಸ್ಸಿನಿಂದ ನೋಡಿ ಯಲ್ಲ ಸರಿಕಾಣ್ತದೆ.”
“ನಿಜ ಸಾರ್ ನೀವು ಬಿಗ್‌ಬಾಸಲ್ಲಿ ಕಾಣಿಸಿಕೊಂಡು ಮಾತಾಡದನ್ನ ಕೇಳಿದ್ರೆ ಈ ಮನುಷ್ಯನ ಮನಸ್ಸು ಎಷ್ಟು ವಿಶಾಲ ಅನ್ಸದು, ಆದ್ರೀಗೇನಾಯ್ತು ನೋಡಿ ಸಾ..”
“ಈಗೇನಾಗಿದೆ?”
“ನೀವು ಇಷ್ಟು ವರ್ಷ ಮಾಡಿದ್ದು ಮಾತಾಡಿದ್ದು ಯಲ್ಲ ಬಿಜೆಪಿ ಚರಂಡಿಲಿ ಕೊಚಗಂಡೋದಂಗಾಯ್ತು ಸಾರ್.”
“ಬಿಜೆಪಿನ ಚರಂಡಿ ಅಂತೀರಲ್ರೀ?”
“ಹೌದು ಸಾರ್ ಆ ಪಾರ್ಟಿ ಜನಕ್ಕೆ ಮುಸಲ್ಮಾನರನ್ನ ಕಂಡ್ರಾಗಲ್ಲ, ದಲಿತ್ರನ್ನ ಕಂಡ್ರಾಗಲ್ಲ, ಬಡವರನ್ನ ಕಂಡ್ರಾಗಲ್ಲ, ಸಾಹಿತಿಗಳನ್ನ ಕಂಡ್ರಾಗಲ್ಲ, ನಾಟಕ ಕಂಡ್ರಾಗಲ್ಲ, ಸಂಗೀತ ಕಂಡ್ರಾಗಲ್ಲ, ನಿಮ್ಮ ಮಕ್ಕಳು ಹಾಕೋ ಬಟ್ಟೆ ಕಂಡ್ರಾಗಲ್ಲ, ನಿಮ್ಮ ಮನೆ ಹೆಂಗಸರು ಕುಂಕುಮ ಇಡದೇಯಿದ್ರಾಗಲ್ಲ, ಅವುರೊಂಥರ ಬಗ್ಗೆ ಹೇಳಕ್ಕೆ ಈ ಪದ ಸಾಲಲ್ಲ ಸರ್. ಹೊಸ ಪದನೆ ಹುಡುಕಬೇಕು.”
ಇದನ್ನೂ ಓದಿ: ಸಾಚಾರ್ ವರದಿಯ ನಂತರವೂ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ
“ನನಿಗೇನು ಅಂಗೆ ಕಾಣಲ್ಲ.”
“ಕಂಡಿದ್ರೆ ನೀವ್ಯಾಕೆ ಸಾರ್ ಬಿಜೆಪಿಗೊಯ್ತಿದ್ರಿ?”
“ಪುನಃ ಅದ್ನೆ ಹೇಳ್ತಿರಲ್ರಿ, ನಾನು ಬಿಜೆಪಿಗೋಗಿಲ್ಲ.”
“ಹೋಗದೆಯಿದ್ರು ನಿಮ್ಮ ಮಾಮನ ಜೊತೆ ನಿಂತಿದ್ದಿರಲ್ಲಾ?”
“ಹೌದು ನಮ್ಮ ಮಾವ ಅಂಗಲ್ಲ.”
“ನಿಮ್ಮ ಮಾವನ ಆಡಳಿತದಲ್ಲಿ ಏನಾಯ್ತು ಗೊತ್ತ ಸಾರ್?”
“ಏನಾಯ್ತು?”
“ಮುಸಲ್ಮಾನ ಹುಡುಗಿಯರ ಹಿಜಾಬ್ ಕಿತ್ರು, ಮುಸ್ಲಿಮರು ಹಣ್ಣು ಮಾರ್ತಾ ಯಿದ್ರೆ ಅಂಗಡಿನೆ ಉಡಾಯಿಸಿದ್ರು, ಹಣ್ಣು ಬೀದಿಗೆ ಚೆಲ್ಲಿ ತುಳುದ್ರು. ದನನಾ ಸಾಗುಸ್ತ ಅವರೆ ಅಂತ ಮುಸ್ಲಿಂ ಹುಡುಗನ್ನ ಹೊಡದ್ರು, ಅವುನು ಸೊಂಟ ಮುರುಕೊಂಡು ಕುಂತಲ್ಲೇ ಅವುನೆ. ಮೊನ್ನೆ ಕನಕಪುರದತ್ರ ಇದ್ರಿಷ್‌ನ ಕೊಲೆ ಆಯತು. ದೇವಸ್ಥಾನದತ್ರ ಮುಸ್ಲಿಮರು ಅಂಗಡಿ ಹಾಕದಂಗೆ ಮಾಡಿದ್ರು. ನಿಮ್ಮ ಹೋಟ್ಲಿರೋ ಶಿವಮೊಗ್ಗದಲ್ಲಿ 144 ಸೆಕ್ಷೆನ್ನಿದ್ರು ಈಶ್ವರಪ್ಪ ಮೆರವಣಿಗೆ ತೆಗೆದು ಮುಸಲ್ಮಾನರ ಕೇರಿಗೆ ನುಗ್ಗಿದರು. ಅವರ ಮನೆ ಲೂಟಿಯಾಗಂಗೆ ಮಾಡಿದ್ರು, ಟಿವಿ, ಪ್ರಿಜ್ಜು, ಪಾತ್ರೆ ಹರಡಿ ಬೀದಿಗಾಕಿದ್ರು. ಇದಕ್ಕೆ ಸಾಕ್ಷಿಯಾಗಿ ಎಂ.ಪಿ, ಡಿ.ಸಿ, ತಹಸೀಲ್ದಾರರೂ ಇದ್ರು. ಇದು ನಡೆದದ್ದು ಬೊಮ್ಮಾಯಿ ಅಂದ್ರೆ ನಿಮ್ಮ ಮಾವ ಮುಖ್ಯಮಂತ್ರಿಯಾಗಿದ್ದಾಗಿ ಸಾರ್. ಹಿಂಗಾಯ್ತಂತಲ್ಲಾ ಅಂತ ನಿಮ್ಮ ಮಾವನ್ನ ಕೇಳಿ; ಅದಕೇನಂತರೆ ಗೊತ್ತ? ಆಕ್ಷನ್‌ಗೆ ರಿಯಾಕ್ಷನ್ ಸಹಜ ಅಂತರೆ.”
“ಅದು ಸಹಜ ಅಲ್ಲವಾ.”
“ಪ್ರಚೋದನೆ ತಪ್ಪಲ್ಲವೇ? ನಿಮ್ಮನ್ನೆ ಒಬ್ಬ ಪತ್ರಕರ್ತ ಪದೇಪದೆ ಟೀಕೆ ಮಾಡಿದಾಗ ನೀವೇನಂದಿದ್ರೀ?”
“ಮರತೋಗಿದೆ..”
“ಬಿಜೆಪಿ ಸೇರಿದ ಮೇಲೆ ಮರಿಬೇಕಾಗುತ್ತೆ. ಆ ಪತ್ರಕರ್ತ ಹೀಗೆ ಬರೀತಿದ್ರೆ ನಾನು ಸುಮ್ಮನಿರಕ್ಕಾಗಲ್ಲ ಅಂದಿದ್ರಿ.”
“ಹೌದು ಆಗ ನನ್ನ ಸೈರಣೆ ಹಾಳಾಗಿತ್ತು.”
“ಸೈರಣೆ ಹಾಳಾದಾಗ ಸಂಭವಿಸೊ ಆಕ್ಷನ್‌ಗೆ ಯಾರು ಕಾರಣ ಸಾರ್? ಅದೆ ನಿಮ್ಮ ಮಾವನಿಗೆ ಗೊತ್ತಿಲ್ಲ, ಇರ್ಲಿ ಅಂತೂ ನಿಮಗೆ ನೀವೇ ಹಿನ್ನಡೆ ತಂದುಕೊಂಡ್ರಿ.”
“ಇದು ಹಿನ್ನಡೆ ಹೇಗ್ರಿ? ಒಂಥರದ ಮುನ್ನಡೆ.”
“ಇಲ್ಲ ಸಾರ್, ಕಾಗೆ ಸ್ನೇಹ ಮಾಡಿ ಗರುಡ ಪಕ್ಷಿ ಹಾಳಾಯ್ತು ಅನ್ನೋ ಗಾದೆ ಹಾಂಗೆ, ಸುದೀಪನ ವ್ಯಕ್ತಿತ್ವನೆ ಹಾಳಾಯ್ತು.”
“ಸುಮಲತಾರ ಚುನಾವಣೆ ಪ್ರಚಾರಕ್ಕೆ ದರ್ಶನ್, ಯಶ್ ಹೋಗಿರಲಿಲ್ವ?”
“ಕೊನೆಪಕ್ಷ ಸುಮಲತ ಪಕ್ಷೇತರವಾಗಿದ್ರು, ಅದರಲ್ಲೂ ಮಹಿಳೆ. ಅವರ ವಿರುದ್ಧ ಎರಡು ಪಾರ್ಟಿ ಒಂದಾಗಿದ್ದೋ. ಮಂಡ್ಯದಲ್ಲಿ ಸೆರೆಗೊಡ್ಡಿ ನಿಂತ ಆಕೆಯ ಸಹಾಯಕ್ಕೆ ಹೋಗಿದ್ದುದು ಮಾನವೀಯ ನಡವಳಿಕೆ. ಆಗ ನೀವು ದೂರ ಇದ್ರಿ.”
“ಅದಕ್ಕೆ ಬೇರೇ ಕಾರಣ ಇದೆ.”
“ಅವು ನಮಗೆ ಗೊತ್ತಾಗಲಿಲ್ಲ. ಅಂಬರೀಶು ಸರೋವರ ಸಂಜೀವಣ್ಣನಿಗೆ ಮಾಡಿದ ಉಪಕಾರಕ್ಕೆ ಸಂಜೀವಣ್ಣ ಚುನಾವಣಾ ಪ್ರಚಾರಕ್ಕೆ ಹೋಗಲಿಲ್ಲ. ಮೊಯ್ಲಿಯವರು ಭಾರಿ ಉಪಕಾರ ಮಾಡಿದ್ರಂತೆ, ಆದ್ರು ಅವರ ಚುನಾವಣೆ ಪ್ರಚಾರಕೆ ಸಂಜೀವಣ್ಣ ಹೋಗಲಿಲ್ಲ”
“ನಮ್ಮಪ್ಪ ನನ್ನಂಗೆ ಸ್ಟಾರ್ ನಟ ಅಲ್ಲ”
“ನೀವು ಸ್ಟಾರ್ ನಟ ಅಲ್ಲ ಸಾರ್. ನನಿಗೇನೋ ಬಿಜಿನೆಸ್ ಮ್ಯಾನ್ ತರ ಕಾಣ್ತಿರಿ. ನಟನೆ ಸೀರಿಯಸ್ಸಾಗಿ ತಗಂಡಂಗೆ ಕಾಣ್ತಯಿಲ್ಲ. ನಿಮ್ಮ ಮಾವ ನಿಮಗೆ ಸಹಾಯ ಮಾಡಿದ್ರೆ ಅದನ್ನ ವಾಪಸ್ ಮಾಡಿ, ಅದು ಬಿಟ್ಟು ನಿಮ್ಮ ವ್ಯಕ್ತಿತ್ವನೆ ನಾಶ ಮಾಡಿಕಂಡ್ರಲ್ಲ ಸಾರ್?”
“ವ್ಯಕ್ತಿತ್ವನ ನಾಶ ಆಗೋ ಅಂತದ್ದೇನಾಗಿದೇರಿ? ಸುಮ್ಮನೆ ಏನೇನೋ ಮಾತಾಡಬೇಡಿ..”
“ದೇವರಾಣೆ ನಾನು ಏನೇನೂ ಮಾತಾಡ್ತಯಿಲ್ಲ ಸಾರ್. ನಿಮ್ಮ ವಿಷಯದಲ್ಲಿ ಕಂಡಿದ್ನ ಹೇಳ್ತ ಯಿದಿನಿ. ಸಿನಿಮಾದಲ್ಲಿ ನಿಮ್ಮ ವಿಶೇಷ ಪ್ರತಿಭೆ ತೋರದೆಯಿದ್ರೂ ಬಿಗ್‌ಬಾಸಲ್ಲಿ ನೀವಾಡುತಿದ್ದ ಮಾತು, ತಿಕ್ಕಲ ಜನಗಳನ್ನೆಲ್ಲಾ ನೀವು ನಿಭಾಯಿಸುತಿದ್ದ ರೀತಿಗೆ ನಮ್ಮ ಜನ ನಿಮ್ಮನ್ನ ಮೆಚ್ಚಿಗಂಡಿದ್ರು. ಈಗ ಬಿಜೆಪಿ ಮಾಡಿರೋ ಎಲ್ಲಾ ಅನಾಹುತನೂ ನಿಮ್ಮ ತಲೆಗೆ ಕಟ್ಟಿ, ನೀವು ಟಿವಿ ಪರದೆ ಮೇಲೆ ಬಂದಾಗ, ಬಂದಾ ಇವುನೊಬ್ಬ ಅಂತರೆ ಜೆಡಿಎಸ್‌ನವರು, ಕಾಂಗ್ರೆಸ್ಸಿನವರು, ಎಎಪಿಗಳು ಇನ್ನು ಯಾರ್‍ಯಾರೋ ನಿಮ್ಮ ಮನಸ್ಥಿತಿಗೆ ಮರುಗಿ ಟಿವಿ ಆಫ್ ಮಾಡಬಹುದು. ಟಿವಿ ಒಂಥರ ನಮ್ಮ ಜನಗಳ ಮುಗ್ಧ ಮನಸ್ಸಿನ ಪರದೆ. ಅಲ್ಲಿ ಜನಮನ ಗೆದ್ದ ನೀವು ಮುಂದೆ ಒಬ್ಬ ಈಶ್ವರಪ್ಪನಂಗೆ ಕಾಣಬಹುದು. ರೇಣುಕಾಚಾರಿ, ಸಿ.ಟಿ ರವಿ, ಅಶ್ವತ್ಥನಾರಾಯಣ, ಮಾಡಾಳು ಮಗನಂಗೂ ಕಾಣಬಹುದು. ಜಾತ್ಯತೀತವಾಗಿ ಜನಸಮೂಹವನ್ನ ಆವರಿಸೊ ಸಿನಿಮಾ ಟಿವಿ ಪರದೆಯಲ್ಲಿ ಕಾಣಿಸಿಗಳೂ ಕಲಾವಿದರು ಜಾತ್ಯತೀತವಾಗಿ ಬದುಕೋದು ಒಳ್ಳೆದು. ಜಾತ್ಯತೀತವಾಗಿ ಬದುಕೋದು ಕಷ್ಟವಾದೋರು ಬಿಜೆಪಿ ಸೇರತರೆ. ಅಲ್ಲಿಗೆ ಅವರ ಅವಸಾನ ಆರಂಭವಾದಂಗೆ. ನಿಮ್ಮ ಕತೆನೂ ಅಂಗೇ ಆಗಬಹುದು ಅಂತ ನನ್ನ ಅನುಮಾನ.”
“ಅಂಗೇನೂ ಆಗಲ್ಲ ಕಂಡ್ರಿ, ಬಿಜೆಪಿಲೂ ನಾನು ಹೀರೊ ಆಯ್ತಿನಿ.”
“ಥೂತ್ತೇರಿ.”


