Homeಮುಖಪುಟ"ಒಂದು ದೇಶ ಒಂದು ಚುನಾವಣೆ": ಇದು ಕಣ್ಕಟ್ಟೋ ಅಥವಾ ಹಲವಾರು ಭ್ರಾಂತಿಗಳ ಮೊತ್ತವೋ?

“ಒಂದು ದೇಶ ಒಂದು ಚುನಾವಣೆ”: ಇದು ಕಣ್ಕಟ್ಟೋ ಅಥವಾ ಹಲವಾರು ಭ್ರಾಂತಿಗಳ ಮೊತ್ತವೋ?

- Advertisement -
- Advertisement -

ಭಾರತವು ಕಣ್ಕಟ್ಟುಗಳ ದೇಶವಾಗಿದೆ. ಈ ಸತ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಿಂತ ಚೆನ್ನಾಗಿ ಇನ್ಯಾರೂ ಅರಿತಿಲ್ಲ. ದೇಶದಲ್ಲಿ ಬೆಲೆಏರಿಕೆ ಇರಲಿ, ಅದಾನಿಯ ಹಗರಣವಿರಲಿ ಅಥವಾ ನಮ್ಮ ಭೂಮಿಯ ಮೇಲೆ ಚೀನಾದ ಆಕ್ರಮಣವಿರಲಿ- ಇವುಗಳ ಬಗ್ಗೆ ನೀವು ಚಿಂತಿಸಬೇಡಿ; ಒಂದು ಹೊಸ ಕಣ್ಕಟ್ಟನ್ನು ತೇಲಿಬಿಡಿ: “ಒಂದು ದೇಶ ಒಂದು ಚುನಾವಣೆ”. ಟಿವಿ ಚಾನೆಲ್‌ಗಳಿಗೆ ಸೂಚನೆ ನೀಡಿಬಿಡಿ. ಜನರು ತಮ್ಮ ಕಷ್ಟಗಳನ್ನು ಮರೆತು ಹೊಸ ನಾಟಕ ನೋಡಲು ಶುರುಮಾಡುತ್ತಾರೆ. ಅಲ್ಲಿಗೆ ಆಟವೂ ಮುಗೀತು, ವೋಟು ಕಬ್ಜಾ ಆಯಿತು.

ಮುಂಬರುವ ಲೋಕಸಭೆ ಚುನಾವಣೆಗೆ ಎಂಟು ತಿಂಗಳ ಮುನ್ನ “ಒಂದು ದೇಶ ಒಂದು ಚುನಾವಣೆ” ಎಂಬ ಹೆಸರಿನಲ್ಲಿ ಲಾಂಚ್ ಮಾಡಲಾದ ಕಣ್ಕಟ್ಟಿನ ಅಸಲಿಯತ್ತನ್ನು ಅರಿಯಲು, ಈ ಬಣ್ಣಬಣ್ಣ ಲಕೋಟೆಯನ್ನು ತೆರೆದು ಅದರಲ್ಲಿರುವ ಎಂಟು ಭ್ರಾಂತಿಗಳನ್ನು ಗುರುತಿಸಿ, ಅದರ ಹಿಂದಿರುವ ಸಂಪೂರ್ಣ ಸತ್ಯವನ್ನು ಅರಿಯುವ ಅವಶ್ಯಕತೆ ಇದೆ.

ಮೊದಲ ಭ್ರಾಂತಿ: “ಒಂದು ದೇಶ ಒಂದು ಚುನಾವಣೆ” ಎಂಬುದು ಒಂದು ಸಾಧಾರಣವಾದ ಆಡಳಿತಾತ್ಮಕ ಸುಧಾರಣೆಯಾಗಿದ್ದು, ಅದು ದೇಶದ ಚುನಾವಣಾ ಕ್ಯಾಲೆಂಡರ್‌ನಲ್ಲಿರುವ ಕೊರತೆಗಳನ್ನು ನೀಗಿಸುತ್ತದೆ.

ವಾಸ್ತವ: ಇಲ್ಲ ಸ್ವಾಮಿ, ಇದು ಯಾವುದೇ ಸಣ್ಣಪುಟ್ಟ ಆಡಳಿತಾತ್ಮಕ ಸುಧಾರಣೆ ಅಲ್ಲ. ಸದಾಕಾಲ ಲೋಕಸಭೆಯೊಂದಿಗೆ ವಿಧಾನಸಭೆಗಳಿಗೆ ಚುನಾವಣೆ ನಡೆಸಬೇಕಾದರೆ ನಮ್ಮ ಸಂವಿಧಾನದ ಅಡಿಪಾಯದ ಮೂಲರೂಪವನ್ನೇ ಬದಲಿಸಬೇಕಾಗುತ್ತದೆ. ಇದು ಸಂವಿಧಾನದ ಬಹು ದೊಡ್ಡ ತಿದ್ದುಪಡಿಯಾಗುತ್ತದೆ.

ಎರಡನೆಯ ಭ್ರಾಂತಿ: ದೇಶದ ಏಕತೆ ಮತ್ತು ಚುನಾವಣೆಗಳಲ್ಲಿ ಏಕರೂಪತೆ ತರಲು ಇದೊಂದು ಸ್ವಾಭಾವಿಕ ಹೆಜ್ಜೆಯಾಗಿದೆ.

ವಾಸ್ತವ: ಇಲ್ಲಿ ’ಒಂದು ಚುನಾವಣೆ’ಯ ಅರ್ಥ ಒಂದೇ ಸಮಯಕ್ಕೆ ಚುನಾವಣೆ ಎಂದು. ಇದಕ್ಕೂ ಏಕತೆಗೂ ಅಥವಾ ಏಕರೂಪತೆಗೂ ಯಾವ ಸಂಬಂಧವೂ ಇಲ್ಲ. ಪಂಚಾಯತಿ ಮತ್ತು ನಗರ ಪಾಲಿಕೆಗಳ ಚುನಾವಣೆಗಳಲ್ಲಿ ಬಳಕೆಯಾಗುವ ಮತದಾರರ ಪಟ್ಟಿ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಳಕೆಯಾಗುವ ಪಟ್ಟಿ ಬೇರೆಯಾಗಿದ್ದು, ಅದನ್ನು ಒಂದೇ ಆಗಿಸಬೇಕಿದೆ. ವಾಸ್ತವದಲ್ಲಿ ದೇಶದಲ್ಲಿ ಚುನಾವಣಾ ಏಕರೂಪತೆಗೆ ಅವಶ್ಯಕತೆ ಇರುವುದು ಇಲ್ಲಿ. ಆದರೆ ಈ ಪ್ರಸ್ತಾಪದಲ್ಲಿ ಈ ಅವಶ್ಯಕ ಏಕರೂಪತೆಗಾಗಿ ಯಾವ ಸ್ಥಾನವೂ ಕಂಡುಬಂದಿಲ್ಲ.

ಮೂರನೆಯ ಭ್ರಾಂತಿ: ಇದೊಂದು ಸಾರ್ವತ್ರಿಕ ಪ್ರಸ್ತಾಪವಾಗಿದ್ದು, ಇದರ ಬಗ್ಗೆ ದೀರ್ಘಕಾಲದಿಂದ ರಾಷ್ಟ್ರೀಯ ಒಮ್ಮತಕ್ಕೆ ಬರಲಾಗಿದೆ.

ವಾಸ್ತವ: ಈ ಪ್ರಸ್ತಾಪವನ್ನು ಕಳೆದ ನಾಲ್ಕು ದಶಕಗಳಲ್ಲಿ ಪದೇಪದೇ ಮುಂದಿಡಲಾಗಿದೆ. ಕಾಲಕಾಲಕ್ಕೆ ಹಲವು ಸರಕಾರಿ ಸಮಿತಿಗಳು ಹಾಗೂ ಚುನಾವಣಾ ಆಯೋಗವು ಇದರ ಸಮರ್ಥನೆ ಮಾಡಿವೆ. ಆದರೆ, ಈ ಬಾರಿಯ ರೀತಿಯಲ್ಲಿಯೇ, ಅನೇಕ ಪಕ್ಷಗಳು ಮತ್ತು ವಿಶೇಷಜ್ಞರು ಇದನ್ನು ವಿರೋಧಿಸಿದ್ದಾರೆ. ಇಷ್ಟು ದೊಡ್ಡ ಸಾಂವಿಧಾನಿಕ ಬದಲಾವಣೆಯನ್ನು ಸರ್ವಪಕ್ಷಗಳ ಒಮ್ಮತವಿಲ್ಲದೇ ಅನುಷ್ಠಾನಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ.

ನಾಲ್ಕನೆಯ ಭ್ರಾಂತಿ: ಸಂವಿಧಾನ ಅನುಷ್ಠಾನಗೊಂಡ ನಂತರ ಆರಂಭದಲ್ಲಿ “ಒಂದು ದೇಶ ಒಂದು ಚುನಾವಣೆ”ಯ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದವು. ನಂತರ ಚುನಾವಣಾ ಚಕ್ರ ಬೇರೆ ಬೇರೆಯಾಗಿದ್ದ ಕಾರಣದಿಂದ ವಿಕೃತಿ ಹುಟ್ಟಿಕೊಂಡಿದೆ.

ಪೂರ್ಣ ಸತ್ಯ: ಲೋಕಸಭೆ ಮತ್ತು ವಿಧಾನಸಭೆಗಳಿಗೆ ಬೇರೆ ಬೇರೆ ಕಾಲದಲ್ಲಿ ಚುನಾವಣೆ ಆಗುವುದು ಯಾವ ವಿಕೃತಿಯೂ ಅಲ್ಲ. ಅದರ ಬದಲಿಗೆ ನಮ್ಮ ಸಾಂವಿಧಾನಿಕ ಅಡಿಪಾಯದ ಎರಡು ಮೂಲಭೂತ ತತ್ವಗಳ (ಸಂಸದೀಯ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ) ಸ್ವಾಭಾವಿಕ ಪರಿಣಾಮವಾಗಿದೆ. ಆರಂಭದಲ್ಲಿ ಎರಡೂ ಚುನಾವಣೆಗಳು ಒಂದೇಕಾಲಕ್ಕೆ ಆಗಲೇಬೇಕಿತ್ತು ಏಕೆಂದರೆ, ಆರಂಭದಲ್ಲಿ ಏಕಕಾಲಕ್ಕೆ ಆಗುವುದು ಸ್ವಾಭಾವಿಕವಾಗಿತ್ತು. ಸಂವಿಧಾನದ ರಚನಾಕಾರರು ಇದನ್ನು ಅರಿತಿದ್ದರು. ಚಿಕಿತ್ಸೆ ನೀಡಬೇಕಾದಂತಹ ಯಾವ ವಿಕೃತಿಯೂ ಇದರಲ್ಲಿ ಇಲ್ಲ.

ಇದನ್ನೂ ಓದಿ: ಒಂದು ದೇಶ-ಒಂದು ಚುನಾವಣೆ ಕಲ್ಪನೆಯಲ್ಲಿ ಬಿಜೆಪಿ ರಾಜಕೀಯ, ಸೈದ್ಧಾಂತಿಕ ಉದ್ದೇಶ ಹೊಂದಿದೆ; ಶಿವಸುಂದರ್

ಐದನೆಯ ಭ್ರಾಂತಿ: ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಸರಕಾರದ ಚುನಾವಣಾ ವೆಚ್ಚ ತುಂಬಾ ಕಡಿಮೆಯಾಗಲಿದೆ.

ವಾಸ್ತವ: ಸ್ವಾಭಾವಿಕವಾಗಿಯೇ ಬೇರೆಬೇರೆ ಚುನಾವಣೆ ನಡೆಸುವುದರ ಬದಲಿಗೆ ಒಂದೇ ಬಾರಿ ಚುನಾವಣೆ ನಡೆಸುವುದರಿಂದ ಸರಕಾರಿ ವೆಚ್ಚದಲ್ಲಿ ಉಳಿತಾಯವಾಗುವುದು, ಆದರೆ ಪ್ರಶ್ನೆ ಇರುವುದು, ಎಷ್ಟು? ಈ ರೀತಿಯಲ್ಲಿ ಚುನಾವಣೆ ನಡೆಸುವುದರಿಂದ ಹೆಚ್ಚೆಂದರೆ ಐದು ವರ್ಷಗಳಲ್ಲಿ 5,000 ಕೋಟಿ ಉಳಿತಾಯ ಆಗಬಲ್ಲದು. ಈ ಮೊತ್ತ ಮುಂದಿನ ಐದು ವರ್ಷಗಳ ಕೇಂದ್ರೀಯ ಬಜೆಟ್‌ನ 0.02%ಆಗಲಿದೆ ಅಂದರೆ 100 ರೂಪಾಯಿಗಳಲ್ಲಿ ಐದು ಪೈಸೆ ಬಳಸಿದಂತೆ. ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣೆಗಳಲ್ಲಿ ಎಷ್ಟು ಖರ್ಚು ಮಾಡುತ್ತಾರೋ, ಅದನ್ನು ನೋಡಿದರೆ. ಈ ಸರಕಾರಿ ವೆಚ್ಚವು ಏನೇನೂ ಅಲ್ಲ.

ಆರನೆಯ ಭ್ರಾಂತಿ: ಪದೇಪದೇ ಚುನಾವಣೆ ನಡೆಸುವಾಗ ನೀತಿಸಂಹಿತೆ ಜಾರಿಯಾಗುವುದರಿಂದ ಸರಕಾರಿ ಕೆಲಸಗಳು ನಿಂತುಕೊಳ್ಳುತ್ತವೆ, ಸರಕಾರಗಳ ಮೇಲೆ ಸದಾಕಾಲ ಚುನಾವಣೆಗಳ ಒತ್ತಡ ಇರುತ್ತದೆ. ಈ ಸಮಸ್ಯೆಗೆ ಇದೊಂದೇ ಪರಿಹಾರ.

ವಾಸ್ತವ: ಈ ಮಾತಿನಲ್ಲಿ ಒಂದಿಷ್ಟು ಸತ್ಯಾಂಶವಿದೆ. ಆದರೆ ಈ ಸಮಸ್ಯೆ ಪರಿಹರಿಸಲು ಇನ್ನೂ ಸುಲಭವಾದ ಮಾರ್ಗಗಳಿವೆ. ಸದ್ಯಕ್ಕೆ ಐದು ವರ್ಷಗಳಲ್ಲಿ ಕನಿಷ್ಠ ಎಂಟು ಬಾರಿ ದೊಡ್ಡ ರಾಜ್ಯಗಳ ಚುನಾವಣೆ ನಡೆಯುತ್ತವೆ. ಇದನ್ನು ಕಡಿಮೆ ಮಾಡಲು, ಒಂದು ವರ್ಷದಲ್ಲಿ ಬರುವ ಎಲ್ಲಾ ರಾಜ್ಯಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಬಹುದಾಗಿದೆ. ಆಯಾ ರಾಜ್ಯಗಳಿಗೆ ವಿಶೇಷ ಸಂಬಂಧವಿಲ್ಲದೇ ಇದ್ದರೆ ಕೇಂದ್ರ ಸರಕಾರದ ಎಲ್ಲಾ ತೀರ್ಮಾನಗಳನ್ನು ನಿಲ್ಲಿಸದೇ ಇರುವಂತೆ ನೀತಿ ಸಂಹಿತೆಯಲ್ಲಿ ತಿದ್ದುಪಡಿ ಮಾಡಬೇಕಿದೆ. ರಾಜ್ಯ ಚುನಾವಣೆಗಳನ್ನು ಹಲವಾರು ಸುತ್ತುಗಳಲ್ಲಿ ಮಾಡುವುದರ ಬದಲಿಗೆ ಒಂದು ಅಥವಾ ಎರಡು ಸುತ್ತಿನಲ್ಲಿ ಮಾಡುವುದರಿಂದ ಚುನಾವಣೆಯ ಅವಧಿಯನ್ನು ಕಡಿಮೆ ಮಾಡಬಹುದಾಗಿದೆ.

ಏಳನೆಯ ಭ್ರಾಂತಿ: ಈ ಪ್ರಸ್ತಾಪದಲ್ಲಿ ಹೆಚ್ಚಿನ ಲಾಭ ಇಲ್ಲವೆಂದಿಟ್ಟುಕೊಂಡರೂ, ಯಾವುದೇ ನಷ್ಟವೂ ಇಲ್ಲ.

ವಾಸ್ತವ: ನಷ್ಟ ಇದೆ, ಅದೇನೆಂದರೆ, ಇದರಿಂದ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯ ಕುಸಿದುಬೀಳುತ್ತದೆ. ಒಂದುವೇಳೆ ಯಾವುದೋ ರಾಜ್ಯದಲ್ಲಿ ಸರಕಾರವು ವಿಧಾನಸಭೆಯಲ್ಲಿ ಬಹುಮತ ವಿಶ್ವಾಸ ಕಳೆದುಕೊಳ್ಳುತ್ತದೆ ಹಾಗೂ ಇತರ ಯಾವ ಪಕ್ಷಕ್ಕೂ ಬಹುಮತ ಇಲ್ಲದಿರುವ ಸಂದರ್ಭದಲ್ಲಿ ಏನಾಗುವುದು? ಬಜೆಟ್ ಜಾರಿಗೊಳಿಸಲಾಗದ, ದುಡ್ಡು ಖರ್ಚು ಮಾಡುವ ಅಧಿಕಾರವಿಲ್ಲದ ಆ ಸರಕಾರವು ಐದು ವರ್ಷ ಮುಂದುವರಿಯುವಂತೆ ಮಾಡಲಾಗುವುದೇ? ಅಥವಾ ವಿಧಾನಸಭೆಯನ್ನು ವಿಸರ್ಜಿಸಿ, ಹಲವಾರು ವರ್ಷಗಳ ತನಕ ರಾಜ್ಯಪಾಲರ ಆಳ್ವಕೆ ನಡೆಯುವುದೇ? ಹಾಗೂ ಒಂದುವೇಳೆ ಈ ರೀತಿ ಕೇಂದ್ರದಲ್ಲಿ ಆದರೆ ಏನಾಗುವುದು? ಇದು ಪ್ರಜಾಪ್ರಭುತ್ವದೊಂದಿಗೆ ಆಟವಾಡಿದಂತೆ.

ಎಂಟನೆಯ ಭ್ರಾಂತಿ: ಇದು ಚುನಾವಣಾ ಸುಧಾರಣೆಯ ನಿಜವಾದ ಪ್ರಯತ್ನವಾಗಿದೆ. ಇದಕ್ಕೂ ರಾಜಕೀಯಕ್ಕೂ ಯಾವ ಸಂಬಂಧವೂ ಇಲ್ಲ.

ವಾಸ್ತವ: ಒಂದು ವೇಳೆ ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದಲ್ಲಿ, ಕಳೆದ 25 ವರ್ಷಗಳಲ್ಲಿ ಪದೇಪದೇ ಕೇವಲ ಬಿಜೆಪಿ ಮತ್ತು ಅದರ ನಾಯಕರೇ ಈ ಪ್ರಸ್ತಾಪದ ವಕಾಲತ್ತು ಮಾಡುತ್ತಿರುವುದು ಏಕೆ? ಒಂದು ವೇಳೆ ಲೋಕಸಭೆಗೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆದರೆ ರಾಷ್ಟ್ರೀಯ ಚುನಾವಣೆಯ ವಾತಾವರಣ ಸೃಷ್ಟಿಯಾಗಿ, ವಿಧಾನಸಭೆಯ ಚುನಾವಣೆಯಲ್ಲಿಯೂ ದೊಡ್ಡ ರಾಷ್ಟ್ರೀಯ ಪಕ್ಷಕ್ಕೆ ಹೆಚ್ಚಿನ ಮತಗಳು ಸಿಗುತ್ತವೆ ಎಂಬುದು ಸ್ವಾಭಾವಿಕ ಹಾಗೂ ಇಂದಿನ ಸಂದರ್ಭದಲ್ಲಿ ಹೆಚ್ಚಿನ ಲಾಭ ಬಿಜೆಪಿಗೆ ಆಗುತ್ತದೆ ಎಂಬುದು ಸಹಜವಾಗಿದೆ. ಅಲ್ಲದೇ ಯೋಚಿಸಿ, ಒಂದುವೇಳೆ ಈ ಪ್ರಸ್ತಾಪದ ಹಿಂದಿನ ಉದ್ದೇಶ ಶುದ್ಧ ರಾಜಕೀಯ ಸುಧಾರಣೆಯೇ ಆಗಿದ್ದರೆ, 2019ರಲ್ಲಿ ಪ್ರಧಾನಮಂತ್ರಿ ಇದರ ವಕಾಲತ್ತು ವಹಿಸಿದ್ದಾಗ ಈ ಸಮಿತಿಯನ್ನು ಏಕೆ ರಚಿಸಲಿಲ್ಲ? ಲೋಕಸಭೆ ಚುನಾವಣೆಗೆ ಕೇವಲ ಎಂಟು ತಿಂಗಳ ಮುನ್ನ ಹಾಗೂ ಸಂಸತ್ತಿನ ಪ್ರಸ್ತಾಪಿತ ವಿಶೇಷ ಅಧಿವೇಶನಕ್ಕೆ 20 ದಿನಗಳ ಮುನ್ನ ದಿಢೀರನೇ ಒಂದು ಹೈ-ಪವರ್ ಸಮಿತಿ ರಚಿಸಲಾಗಿ, ಅದರಲ್ಲಿ ರಾಜ್ಯಸಭೆಯ ವಿರೋಧಪಕ್ಷಗಳನ್ನು ಹೊರಗಿಟ್ಟು, ಹಳೆಯ ಜಿ-ಹುಜೂರ್‌ಗಳನ್ನು (ಆಜ್ಞೆಯನ್ನು ಪಾಲಿಸುವವರು) ತುಂಬಿಸಲಾಗಿ, ರಾತ್ರೋರಾತ್ರಿ ಸಮಿತಿಯ ಕೆಲಸ ಶುರುಮಾಡಲಾಗಿದೆ. ಇಷ್ಟಾದ ಮೇಲೆ ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ ಎನ್ನುತ್ತೀರಿ, ನೀವು ಒಳ್ಳೇ ತಮಾಷೆ ಮಾಡ್ತೀರಿ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...