Homeಕರ್ನಾಟಕಹಾವೇರಿ-ಗದಗ "ಲೋಕ" ಕದನ; ಕಡ್ಡಾಯ ನಿವೃತ್ತಿಗೆ ಇನಾಮು? ಮಗನಿಗೆ ಕೇಸರಿ ಟಿಕೆಟ್ ಪಡೆಯಲು ಈಶ್ವರಪ್ಪ ಕಟಿಪಿಟಿ!

ಹಾವೇರಿ-ಗದಗ “ಲೋಕ” ಕದನ; ಕಡ್ಡಾಯ ನಿವೃತ್ತಿಗೆ ಇನಾಮು? ಮಗನಿಗೆ ಕೇಸರಿ ಟಿಕೆಟ್ ಪಡೆಯಲು ಈಶ್ವರಪ್ಪ ಕಟಿಪಿಟಿ!

- Advertisement -
- Advertisement -

ಲೋಕಸಭಾ ಚುನಾವಣೆಗೆ ಇನ್ನೂ ಆರೇಳು ತಿಂಗಳಿರುವಾಗಲೇ ಹಾವೇರಿ-ಗದಗ ಅಖಾಡ ಹದವಾಗುತ್ತಿದೆ. ಪ್ರಮುಖ ಎದುರಾಳಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ರಣೋತ್ಸಾಹ ಉಕ್ಕುತ್ತಿದೆ; ಕ್ಷೇತ್ರದಾದ್ಯಂತ ಯಾವ ಪಕ್ಷದಿಂದ ಯಾರು ಹುರಿಯಾಳಾಗಬಹುದು ಎಂಬ ಬಗ್ಗೆ ಹಾಗೂ ಸೋಲು-ಗೆಲುವಿನ ಗಣಿತದ ಕದನ ಕುತೂಹಲದ “ಮಾತುಕತೆ” ನಡೆಯಹತ್ತಿದೆ. ಧಾರವಾಡ ದಕ್ಷಿಣವೆಂದು ಗುರುತಿಸಲಾಗುತ್ತಿದ್ದ ಈ ಲೋಕಸಭಾ ಕ್ಷೇತ್ರ 2008ರಲ್ಲಾದ ಪಾರ್ಲಿಮೆಂಟ್ ಕ್ಷೇತ್ರಗಳ ಪುನರ್‌ವಿಂಗಡನೆಯ ಬಳಿಕ ಹಾವೇರಿ ಕ್ಷೇತ್ರವೆಂದು ನಾಮಕರಣಗೊಂಡಿದೆ. ಹಾವೇರಿ ಜಿಲ್ಲೆಯ ಐದು ಹಾಗು ಗದಗ ಜಿಲ್ಲೆಯ ಮೂರು ಅಸೆಂಬ್ಲಿ ಕ್ಷೇತ್ರಗಳು ಹಾವೇರಿ ಪಾರ್ಲಿಮೆಂಟ್ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಕಾಂಗ್ರೆಸ್ ಪಾಲಿಗಿದು “ಮುಸ್ಲಿಮ್ ಮೀಸಲು ಕ್ಷೇತ್ರ.” ಲಾಗಾಯ್ತಿನಿಂದ ಕಾಂಗ್ರೆಸ್ ಮುಸ್ಲಿಮ್ ಸಮುದಾಯದವರನ್ನೇ ಅಭ್ಯರ್ಥಿಯನ್ನಾಗಿಸುತ್ತಾ ಬಂದಿದೆ. 1996ರವರೆಗಿನ ಅಷ್ಟೂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಲಿಗಳೇ ಆಯ್ಕೆಯಾಗಿದ್ದರು. ಆದರೆ 1998ರಲ್ಲಿ ಮೊದಲ ಬಾರಿ ಕಾಂಗೆಸ್ಸೆತರ ಅಭ್ಯರ್ಥಿ ರಾಮಕೃಷ್ಣ ಹೆಗಡೆಯವರ ಲೋಕಶಕ್ತಿಯ ಹುರಿಯಾಳು-ಲಿಂಗಾಯತ ಮುಖಂಡ ಬಿ.ಎಂ.ಮೆಣಸಿನಕಾಯಿ ಗೆಲುವು ಕಂಡಿದ್ದರು. 1999ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನ ಕ್ಯಾಂಡಿಡೇಟ್ ಮುಸ್ಲಿಮ್ ಸಮುದಾಯದ ಐ.ಜಿ.ಸನದಿ ಚುನಾಯಿತರಾದರು.

ಕ್ಷೇತ್ರದ ರಾಜಿಕೀಯ ಸೂತ್ರ-ಸಮೀಕರಣ 2004ರ ಚುನಾವಣೆ ಸಂದರ್ಭದಿಂದ ಸಂಪೂರ್ಣ ಬದಲಾಗಿದೆ. ಲಿಂಗಾಯತ ಪ್ರತಿಷ್ಠೆಯ ಜಾತಿ ರಾಜಕಾರಣದೊಂದಿಗೆ ಕೇಸರಿ ಧರ್ಮಕಾರಣ ನಾಜೂಕಾಗಿ ಮಿಳಿತವಾಗಿದೆ. ಕಳೆದ ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್‌ನ ಐ.ಜಿ.ಸನದಿ ಮತ್ತು ಸಲೀಮ್ ಅಹಮ್ಮದ್ ಮತ್ತೆಮತ್ತೆ ಸ್ಪರ್ಧಿಸಿ ಸೋತಿದ್ದಾರೆ. ಸಲೀಮ್ ಅಹಮ್ಮದ್ ಜಾತ್ಯತೀತ ಇಮೇಜ್‌ನವರಾದರೂ, ಕಾಂಗ್ರೆಸ್ ಕ್ಯಾಂಡಿಡೇಟ್ ಮುಸ್ಲಿಮ್ ಎಂಬುದನ್ನು ಬಿಜೆಪಿ ಮತ್ತು ಸಂಘ ಪರಿವಾರ ಚುನಾವಣಾ ವಿಷಯವನ್ನಾಗಿಸಿಕೊಂಡು ಮತ ಧ್ರುವೀಕರಣ ಮಾಡಿ ಗೆಲ್ಲುತ್ತಿದೆ. ಕಾಂಗ್ರೆಸ್‌ಗೆ ಈಗ ಅನಿವಾರ್ಯವಾಗಿ ತನ್ನ ತಂತ್ರಗಾರಿಕೆಯನ್ನು ಮಾರ್ಪಡಿಸಿ ಲಿಂಗಾಯತ ಅಭ್ಯರ್ಥಿ ಹೂಡುವ ಪ್ರಯೋಗ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಐ.ಜಿ.ಸನದಿ

ಶಿಗ್ಗಾವಿ ಕಾಂಗ್ರೆಸ್‌ನ ಮಾಜಿ ಎಮ್ಮೆಲ್ಲೆಯಾಗಿದ್ದ ಮಂಜುನಾಥ್ ಕುನ್ನೂರ್ 2004ರ ಇಲೆಕ್ಷನ್ ಹೊತ್ತಲ್ಲಿ ಬಿಜೆಪಿ ಸೇರಿ ಆ ಪಕ್ಷದ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿದ್ದರು. ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತರ ಪ್ರಬಲ ಪಂಚಮಸಾಲಿ ಒಳಪಂಗಡದ ಕುನ್ನೂರ್‌ಗೆ ಆಗ “ಭುಗಿಲೆದ್ದಿದ್ದ” ಯಡಿಯೂರಪ್ಪ ಕೇಂದ್ರಿತ ಲಿಂಗಾಯತ “ಅಸ್ಮಿತೆ”ಯ ರಾಜಕಾರಣದ ಬಲವೂ ಸಿಕ್ಕಿತು. ಆಧುನಿಕ ಚುನಾವಣಾ ಹೋರಾಟದ ಸಕಲ ಪಟ್ಟಗಳನ್ನು ಬಲ್ಲ ಕುನ್ನೂರ್‌ಗೆ ಕಾಂಗ್ರೆಸ್‌ನ ಅಭ್ಯರ್ಥಿ ಮೃದು ವ್ಯಕ್ತಿತ್ವದ ಮುಸ್ಲಿಮ್ ಮುಂದಾಳು ಐ.ಜಿ.ಸನದಿ ದೊಡ್ಡ ಮತದಂತರದಲ್ಲೇ ಮಣಿಯಬೇಕಾಯಿತು! ಆದರೆ ಬಿಜೆಪಿಯಲ್ಲಿ ಇದ್ದೂಇಲ್ಲದಂತಿದ್ದ ಕುನ್ನೂರ್ ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರದ ಭಾರತ-ಅಮೆರಿಕ ಅಣು ಒಪ್ಪಂದದ ಪರ ಅಡ್ಡ ಮತದಾನ ಮಾಡಿದ್ದರೆಂಬ ಗುಮಾನಿಗೆ ಒಳಗಾಗಿದ್ದರು. ಆಗ ಬಿಜೆಪಿ ಸಂಸದರಾದ ಕುನ್ನೂರ್, ಸಾಂಗ್ಲಿಯಾನ ಮತ್ತು ಮನೋರಮಾ ಮಧ್ವರಾಜ್ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿದ್ದರೆಂಬ ಸುದ್ದಿ ಹಬ್ಬಿತ್ತು.

ಈ ದಿಲ್ಲಿ ರಾಜಕಾರಣದ ಸ್ಥಿತ್ಯಂತರದ ಬಳಿಕ ಬಿಜೆಪಿಯಲ್ಲಿ ಕುನ್ನೂರ್ “ಕಾಫೀರ್” ಎಂದು ಪರಿಗಣಿಸಲ್ಪಟ್ಟಿದ್ದರು; 2008ರಲ್ಲಾದ ಸಂಸತ್ ಕ್ಷೇತ್ರಗಳ ಡಿಲಿಮಿಟೇಶನ್‌ನಲ್ಲಿ ಕುನ್ನೂರರ ಶಿಗ್ಗಾವಿಯನ್ನು ಧಾರವಾಡ ಕ್ಷೇತ್ರಕ್ಕೆ ಸೇರಿಸಲಾಗಿತ್ತು. ಹೀಗಾಗಿ ಹಾವೇರಿ ಕ್ಷೇತ್ರಕ್ಕೆ ಕುನ್ನೂರ್ ಹೊರಗಿನವರಾದರು. ಇದೇ ನೆವದಿಂದ 2009ರ ಚುನಾವಣೆಯಲ್ಲಿ ಕೇಸರಿ ಟಿಕೆಟ್‌ಅನ್ನು ಅವರಿಗೆ ನಿರಾಕರಿಸಲಾಯಿತು. ಆ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕರಾಗಿದ್ದ ಯಡಿಯೂರಪ್ಪರ ಖಾಸಾ ಆದ್ಮಿಯಾಗಿದ್ದ ಹಾವೇರಿ ಭಾಗದ ಶಕ್ತಿಶಾಲಿ ಲಿಂಗಾಯತ ನೇತಾರ ಪಟ್ಟಾಭಿಷೇಕಕ್ಕಾಗಿ ಕುನ್ನೂರ್ ಖೇಲ್ ಖತಮ್ ಮಾಡಲಾಯಿತೆಂಬ ಮಾತು ಇವತ್ತಿಗೂ ಅವಿಭಜಿತ ಧಾರವಾಡ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಚಾಲ್ತಿಯಲ್ಲಿದೆ. ಒಟ್ಟಿನಲ್ಲಿ ಅಪ್ಪನ ಪ್ರಭಾವದಿಂದ ಶಿವಕುಮಾರ್ ಉದಾಸಿ ನಿರಾಯಾಸವಾಗಿ ಬಿಜೆಪಿ ಅಭ್ಯರ್ಥಿಯಾದರು. ಲಿಂಗಾಯತ ಪ್ರತಿಷ್ಠೆ ಮತ್ತು ಇಸ್ಲಾಮೋಫೋಬಿಕ್ ವರಸೆಗಳನ್ನು ಸಮನಾಗಿ ಪ್ರಯೋಗಿಸಿದ ಬಿಜೆಪಿ ಪರಿವಾರ ಕಾಂಗ್ರೆಸ್‌ಅನ್ನು ಸುಲಭವಾಗಿ ಸೋಲಿಸಿತು. ಇದೇ ಸೂತ್ರ-ಸಮೀಕರಣ ಬಳಸಿ ಉದಾಸಿ ಮತ್ತೆರಡು ಬಾರಿ ಕಾಂಗ್ರೆಸ್‌ನ ಮುಸ್ಲಿಮ್ ಎದುರಾಳಿಯನ್ನು ಹಿಮ್ಮೆಟ್ಟಿಸಿದರು.

ಮೂರು ಬಾರಿ ಎಂಪಿಯಾಗಿ ಆಯ್ಕೆ ಮಾಡಿದರೂ ಮೂರು ಬಿಲ್ಲಿ ಪ್ರಯೋಜನ ಹಾವೇರಿ ಮತ್ತು ಗದಗದ ಯಾವ ಭಾಗಕ್ಕೂ ಶಿವಕುಮಾರ ಉದಾಸಿಯಿಂದ ಆಗಲಿಲ್ಲವೆಂಬ ಅಸಮಾಧಾನ-ಆಕ್ರೋಶ ಜನರಲ್ಲಿ ಹೆಪ್ಪುಗಟ್ಟಿದೆ. ಇಲೆಕ್ಷನ್ ಹೊತ್ತಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಶಿವಕುಮಾರ್ ಉದಾಸಿ ಗೆದ್ದನಂತರ ಉದಾಸೀನದಿಂದ ನಾಟ್‌ರೀಚೆಬಲ್ ಆಗಿಬಿಡುತ್ತಾರೆ! ದುರಂತವೆಂದರೆ, ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು, ಗದಗ ಜಿಲ್ಲೆಯ ರೋಣ, ಶಿರಹಟ್ಟಿ, ಮುಂಡರಗಿ ಮುಂತಾದ ಪ್ರದೇಶದವರು ತಮಗೆ ಎಂಪಿಯೇ ಇಲ್ಲವೆಂಬಂತಿದ್ದಾರೆ. ಸತತ ಹದಿನೈದು ವರ್ಷದಿಂದ ಸಂಸದನಾಗಿರುವ ಉದಾಸಿಗೆ ಕ್ಷೇತ್ರದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಇರಲಿ, ಭೌಗೋಳಿಕ ಉದ್ದಗಲವೇ ಗೊತ್ತಿಲ್ಲ. ಕೃಷಿ ಪ್ರಧಾನವಾದ ಈ ಸೀಮೆಯ ರೈತಾಪಿವರ್ಗ ಅದೆಂಥ ಕಷ್ಟ-ನಷ್ಟಕ್ಕೆ ಸಿಲುಕಿದರೂ ಎಂಪಿ ಸಾಹೇಬರು ತಲೆಯೆತ್ತಿ ನೋಡಿದ್ದಿಲ್ಲ ಎಂಬ ಮಾತು ಸಾಮಾನ್ಯವಾಗಿದೆ. ಹಾವೇರಿ-ಗದಗ ಜಿಲ್ಲೆಯಲ್ಲಿ ಉದಾಸಿ ಮೇಲೆ ಅದೆಂಥ ಕೋಪವಿದೆಯೆಂದರೆ, “ಸಾಕ್ಷಾತ್ ಮೋದಿಯೇ ಬಂದು ಕ್ಯಾಂಪು ಹಾಕಿದರೂ ಮತ್ತೆ ಉದಾಸಿಗೆ ಮಾತ್ರ ಮತ ಹಾಕುವುದಿಲ್ಲ” ಎಂದು ಜನಸಾಮಾನ್ಯರಷ್ಟೇ ಅಲ್ಲ, ಬಿಜೆಪಿ ನಿಷ್ಠಾವಂತ ಕಾರ್ಯಕರ್ತರೇ ಕಳೆದ ಎರಡು-ಮೂರು ವರ್ಷದಿಂದ ಠೇಂಕರಿಸುತ್ತಿದ್ದಾರೆ!

ಸಿ.ಎಂ.ಉದಾಸಿ

ಎಂಟಿಇನ್ಕಂಬೆನ್ಸ್ ಝಳಕ್ಕೆ ಬಾಡಿರುವ ಉದಾಸಿಗೆ ತಂದೆ ಸಿ.ಎಂ.ಉದಾಸಿ ಮರಣದ ನಂತರ ಬಿಜೆಪಿಯಲ್ಲಿ ಯಾವ ಮಾನ-ಮರ್ಯಾದೆಯೂ ಸಿಗುತ್ತಿಲ್ಲವೆನ್ನಲಾಗಿದೆ. ಬಿಜೆಪಿಯ ಲಿಂಗಾಯತ ಲಾಬಿಯಲ್ಲಿ ವರ್ಚಸ್ವಿ ಮುಂದಾಳೆನಿಸಿದ್ದ ಅಪ್ಪ ಸಿ.ಎಂ.ಉದಾಸಿಯ ಪ್ರಭಾವಳಿಯಲ್ಲಿ ಮಿಂಚುತ್ತಿದ್ದ ಶಿವಕುಮಾರ್ ಉದಾಸಿಗೆ ಸ್ವಯಂಪ್ರಭೆ ಬೀರಲಾಗಲಿಲ್ಲ. ಮತ್ತೆ ತನಗೆ ಬಿಜೆಪಿ ಎಂಪಿ ಟಿಕೆಟ್ ಕೊಡುವುದಿಲ್ಲ; ಕೊಟ್ಟರೂ ಜನರು ಗೆಲ್ಲಿಸುವುದಿಲ್ಲ ಎಂಬುದು ಖಾತ್ರಿಯಾಗಿದ್ದ ಉದಾಸಿ, ತಮ್ಮ ತಂದೆಯ ಸಾವಿನ ನಂತರದ ಹಾನಗಲ್ ಉಪಚುನಾವಣೆ(2021)ಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಪ್ರಯತ್ನ ಮಾಡಿದ್ದರು. ಡಿಎನ್‌ಎ ನೋಡಿ ಕೇಸರಿ ಟಿಕೆಟ್ ಕೊಡಲಾಗುವುದಿಲ್ಲ ಎಂದು ಸಂಘಿ ಸರದಾರರು ಉದಾಸಿಯನ್ನು ದೂರ ತಳ್ಳಿದ್ದರು. ತನಗಲ್ಲದಿದ್ದರೆ ತನ್ನ ಮಡದಿಗಾದರೂ ಅಭ್ಯರ್ಥಿತನ ದಯಪಾಲಿಸುವಂತೆ ಅಂಗಲಾಚಿದ್ದರು. ಪ್ರಯೋಜನವಾಗದಿದ್ದಾಗ ಉಪಚುನಾವಣೆಯಲ್ಲಿ ತಮ್ಮ ಕುಟುಂಬದಾಚೆಯವರಿಗೆ ಬಿಜೆಪಿ ಅವಕಾಶ ಕೊಟ್ಟರೆ ಎಂಪಿ ಚುನಾವಣೆಗೂ ನಿಲ್ಲುವುದಿಲ್ಲವೆಂಬ ಬೆದರಿಕೆಯನ್ನು ದೊಡ್ಡವರಿಗೆ ಹಾಕಿದ್ದರು. ಇದ್ಯಾವುದಕ್ಕೂ ಬಿ.ಎಲ್.ಸಂತೋಷ್-ಪ್ರಹ್ಲಾದ್ ಜೋಶಿ ಪರಿವಾರ ಸೊಪ್ಪುಹಾಕಲಿಲ್ಲ! ಉದಾಸಿಯನ್ನು ಕಡ್ಡಾಯ ನಿವೃತ್ತಿ ಮಾಡಲು ನಿರ್ಧರಿಸಿದ್ದ ಕೇಸರಿ ಹೈಕಮಾಂಡ್, ಹಾವೇರಿಯಿಂದ ಮಾಜಿ ಎಮ್ಮೆಲ್ಲೆ ಶಿವರಾಜ್ ಸಜ್ಜನ್‌ರನ್ನು ಹಾನಗಲ್‌ಗೆ ರಫ್ತುಮಾಡಿ ಕಣಕ್ಕಿಳಿಸಿತ್ತು.

ಯಾವಾಗ ಬಿಜೆಪಿ ಬಾಸ್‌ಗಳು ಹಾನಗಲ್ ಟಿಕೆಟ್ ತನಗೆ ಅಥವಾ ತನ್ನ ಮಡದಿಗೆ ಕೊಡಲು ಒಪ್ಪಲಿಲ್ಲವೋ ಆ ಗಳಿಗೆಯಲ್ಲೇ ಸಂಸದ ಶಿವಕುಮಾರ್ ಉದಾಸಿ ರಾಜಕಾರಣದಿಂದ ಸಾವಕಾಶವಾಗಿ ಹೊರಬಂದು ಕೋಟಿಗಳ ಲೆಕ್ಕದ ತನ್ನ ವಿವಿಧ ಬಿಸಿನೆಸ್‌ಗಳಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದರೆನ್ನಲಾಗಿದೆ. ಈಗಂತೂ ಉದಾಸಿ ತಾನು 2024ರ ಚುನಾವಣೆಯಲ್ಲಿ ಸ್ಪರ್ಧಿಸಲಾರೆನೆಂದು ಬಹಿರಂಗವಾಗೇ ಘೋಷಿಸಿಬಿಟ್ಟಿದ್ದಾರೆ. ಈಗ ಪಕ್ಕದ ಶಿವಮೊಗ್ಗೆಯ ಮಾಜಿ ಡಿಸಿಎಂ-ಬಿಜೆಪಿಯ ಉಗ್ರ ಹಿಂದುತ್ವ ಮುಖವಾಣಿ ಈಶ್ವರಪ್ಪ ತನ್ನ ಮಗ ಕಾಂತೇಶನೇ ಹಾವೇರಿಗೆ ಸೂಕ್ತ-ಸಮರ್ಥ ಕೇಸರಿ ಕ್ಯಾಂಡಿಡೇಟ್ ಎಂದು ಬಿಂಬಿಸುತ್ತಿದ್ದಾರೆ. ಸಂಘ ಪರಿವಾರ ಹಾವೇರಿಯಲ್ಲಿ ಹೊಸಬರಿಗೆ ಅವಕಾಶ ಕೊಡುವ ಯೋಚನೆಯಲ್ಲಿರುವ ಸುಳಿವು ಈಶ್ವರಪ್ಪಗೆ ಸಿಕ್ಕಿತ್ತು. ಹಾಗಾಗಿ ಉದಾಸಿ ವೈರಾಗ್ಯ ವ್ಯಕ್ತಪಡಿಸುವ ಮೊದಲೇ ಈಶ್ವರಪ್ಪ ಕಣ್ಣು ಹಾವೇರಿ-ಗದಗ ಕ್ಷೇತ್ರದ ಮೇಲೆ ಬಿದ್ದಿತ್ತು. ಈಶ್ವರಪ್ಪ ತನ್ನ ವಿಭಜಕ ಹಿಂದುತ್ವದ ಕಡು ನಿಷ್ಠೆ, ಬಿಜೆಪಿಯಲ್ಲಿನ ಹಿರಿತನ ಮತ್ತು ಸಂಘೀ ಸರದಾರರಿಗೆ ತೋರಿಸುವ ವಿಧೇಯತೆಯ “ಮೆರಿಟ್”ಗಳನ್ನು ಸಂಘ ಪರಿವಾರದ ಅಂಗಳದಲ್ಲಿ ಪಣಕ್ಕಿಟ್ಟು ಮಗ ಕಾಂತೇಶ್‌ಗೆ ಹಾವೇರಿ ಬಿಜೆಪಿ ಟಿಕೆಟ್ ಕೊಡಿಸಲು ಶತಾಯಗತಾಯ ಸೆಣಸಾಡುತ್ತಿದ್ದಾರೆ!

ಇದನ್ನೂ ಓದಿ: ನನ್ನ ಮಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಕೆ.ಎಸ್ ಈಶ್ವರಪ್ಪ ಹೇಳಿಕೆ

ಮುಗಿದ ಅಸೆಂಬ್ಲಿ ಇಲೆಕ್ಷನ್ ವೇಳೆ ಬಿಜೆಪಿ ಹೈಕಮಾಂಡ್ ಈಶ್ವರಪ್ಪರಿಗೆ ಶಿವಮೊಗ್ಗ ಟಿಕೆಟ್ ನಿರಾಕರಿಸಿ ಕಡ್ಡಾಯ ನಿವೃತ್ತಿಯ ಮುನ್ಸೂಚನೆ ಕೊಟ್ಟಿತ್ತು. ಆಗ ಈಶ್ವರಪ್ಪ ಮಗನಿಗೆ ಅವಕಾಶ ಕೇಳಿದ್ದರು. ಬಿಜೆಪಿ ಟಿಕೆಟ್ ಹಂಚುವ ಯಜಮಾನರು- ಮಗನಿಗೆ ಕೊಡಲಾಗುವುದಿಲ್ಲ; ಸೊಸೆಗೆ ಬೇಕಿದ್ದರೆ ಕೊಡ್ತೇವೆ- ಎಂದಿದ್ದರು. ಸೊಸೆಯನ್ನು ರಾಜಕಾರಣಕ್ಕೆ ತಂದರೆ ತನ್ನ ವಂಶೋದ್ಧಾರಕನ ಭವಿಷ್ಯ ಬರಡಾಗುತ್ತದೆಂಬ ಕಾರಣಕ್ಕೆ ಈಶ್ವರಪ್ಪ ಹೈಕಮಾಂಡ್ ಆಫರ್ ಬೇಡವೆಂದಿದ್ದರು. ಆಗವರ ಮನಸ್ಸಿನಲ್ಲಿದ್ದದ್ದು ಮಗ ಕಾಂತೇಶ್‌ನನ್ನು ಹಾವೇರಿ ಎಂಪಿ ಮಾಡಿ ಯಡಿಯೂರಪ್ಪರ ಮಕ್ಕಳ ಸರಿಸಮಾನವಾಗಿ ನಿಲ್ಲಿಸುವ ಆಸೆ; ಮುಂದೊಂದು ದಿನ ಬಿಜೆಪಿಯಲ್ಲಿ ಮಗನಿಗೆ ಒಳ್ಳೆಯ ಅವಕಾಶ ಸಿಗಬಹುದೆಂದು, ಈಶ್ವರಪ್ಪ ಹೈಕಮಾಂಡಿನಿಂದಾದ ಅವಗಣನೆ-ಅವಮಾನ ನುಂಗಿಕೊಂಡಿದ್ದರು; ಮಾಜಿ ಸಿಎಂ ಜಗದೀಶ್ ಶೆಟ್ಟರ್‌ರಂತೆ ಸೆಟೆದುನಿಲ್ಲುವ ಗೋಜಿಗೆ ಹೋಗದೆ ಭಯ-ಭಕ್ತಿಯಿಂದ ಹೈಕಮಾಂಡ್‌ನ ಕಡ್ಡಾಯ ನಿವೃತ್ತಿ ಆಜ್ಞೆಯನ್ನು ಪಾಲಿಸಿದ್ದರು!

ಈಶ್ವರಪ್ಪರ “ಶರಣಾಗತಿ” ಮೆಚ್ಚಿ ಬಿಜೆಪಿಯ ಸುಪ್ರಿಮೋ ನಂಬರ್-2 ಸಾಕ್ಷಾತ್ ಅಮಿತ್ ಶಾರೇ ಫೋನಾಯಿಸಿ ಬೆನ್ನು ತಟ್ಟಿದ್ದರು! ರಾಜ್ಯ ಬಿಜೆಪಿಯ ಸರ್ವಶಕ್ತ ನಾಯಕಾಗ್ರೇಸ ಬಿ.ಎಲ್.ಸಂತೋಷ್ ಈಶ್ವರಪ್ಪರ ಮನೆಗೇ ಹೋಗಿ “ಭೇಷ್” ಎಂದಿದ್ದರು. ಆ ಸಂದರ್ಭದಲ್ಲಿ ಈಶ್ವರಪ್ಪ ಮೌನವಾಗಿ ಕುಳಿತಿದ್ದರಂತೆ; ಆದರೆ ಮಡದಿ-ಮಕ್ಕಳು ಸಂತೋಷ್ ಮೇಲೆ ಮುಗಿಬಿದ್ದು, ಈಶ್ವರಪ್ಪರ ತ್ಯಾಗ-ಬದ್ಧತೆಗೆ ಪ್ರತಿಫಲವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕುಲ ಕಂಠೀರವ ಕಾಂತೇಶ್‌ಗೆ ಹಾವೇರಿಯಲ್ಲಿ ಸ್ಪರ್ಧೆಗೆ ಅವಕಾಶ ಕೊಡುವಂತೆ “ಹಕ್ಕೊತ್ತಾಯ” ಮಂಡಿಸಿದ್ದರೆಂಬ ಸಂಗತಿ ಈಗ ರಾಜಕೀಯ ಕಟ್ಟೆಯಲ್ಲಿ ಚರ್ಚೆಯಾಗುತ್ತಿದೆ. ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆಯೆ ಈಶ್ವರಪ್ಪ ತಮ್ಮ ಮಗ ಕಾಂತೇಶ್ ಕಟ್ಟಿಕೊಂಡು ಹಾವೇರಿ ಮತ್ತು ಗದಗದ ಉದ್ದಗಲಕ್ಕೆ ಓಡಾಟ ಶುರುಹಚ್ಚಿಕೊಂಡಿದ್ದಾರೆ. ತಾಲ್ಲೂಕು ಮಟ್ಟದ ಪ್ರಭಾವಿಗಳ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ; ಸ್ವಜಾತಿ ಕುರುಬರ ಮಠ, ಮತ್ತಿತರ ಜಾತಿಯ ಸಣ್ಣಪುಟ್ಟ ಸ್ವಾಮಿಗಳ ಸನ್ನಿಧಿಯಲ್ಲಿ ಅಡ್ಡಬೀಳುತ್ತಿದ್ದಾರೆ. ಮತ್ತೊಂದೆಡೆ ಸಂಘೀ ಶ್ರೇಷ್ಠರ ಗಮನ ಸೆಳೆಯಲೋ ಎಂಬಂತೆ ತಮ್ಮ ಎಂದಿನ ಕೋಮು ಕ್ರೌರ್ಯದ ಮಾತುಗಾರಿಕೆಯನ್ನು ಮತ್ತಷ್ಟು ಹರಿತಗೊಳಿಸಿಕೊಂಡಿದ್ದಾರೆ.

ಬಿ.ಸಿ.ಪಾಟೀಲ್

ಈಚೆಗೆ ಅಪ್ಪ-ಮಗ ಹಾವೇರಿಯ ಸಿಂದಗಿ ಮಠದಲ್ಲಿ ಭರ್ಜರಿ ಹೋಮ-ಹವನ, ವಿಶೇಷ ಪೂಜೆ ಆಯೋಜಿಸಿದ್ದು ಬಿಜೆಪಿಯ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳ ಕಣ್ಣು ಕೆಂಪಗಾಗಿಸಿಬಿಟ್ಟಿದೆ. ಕ್ಷೇತ್ರದಲ್ಲಿರುವ ಸ್ವಜಾತಿ ಕುರುಬರ ಸುಮಾರು ಎರಡೂಕಾಲು ಲಕ್ಷ ಮತಗಳು ಸಿಎಂ ಸಿದ್ದುರಿಂದ ಕಾಂಗ್ರೆಸ್‌ಗೆ ಹೋಗೋದು ತಪ್ಪಿಸಬೇಕೆಂದರೆ ತನ್ನ ಮಗನಿಗೆ ಬಿಜೆಪಿ ಟಿಕೆಟ್ ಕೊಡಬೇಕಾಗುತ್ತದೆಂಬ ವಾದ ಈಶ್ವರಪ್ಪರದು. ಆದರೆ ಬಿಜೆಪಿ ಹುರಿಯಾಳಾಗುವ ಕನಸು ಕಾಣುತ್ತಿರುವ ಬಾಂಬೈ ಬಾಯ್ಸ್ ಟೀಮಿನ ಮಾಜಿ ಶಾಸಕ ಬಿ.ಸಿ.ಪಾಟೀಲ್‌ರಂಥವರು- ಕಾಂತೇಶ್ ಶಿವಮೊಗ್ಗದಿಂದ ಬರಬೇಕಾದ ಅನಿವಾರ್ಯತೆ ಸ್ಥಳೀಯ ಬೀಜೆಪಿಗಿಲ್ಲ; ಇಲ್ಲಿಯೇ ಬೇಕಷ್ಟು ಅರ್ಹ ಅಭ್ಯರ್ಥಿ ಆಗಬಲ್ಲವರಿದ್ದಾರೆ- ಎಂಬ ಪ್ರತಿತರ್ಕ ಹೂಡುತ್ತಿದ್ದಾರೆ. ತನಗಲ್ಲದಿದ್ದರೆ ತನ್ನ ಮಗಳು ಸೃಷ್ಟಿ ಪಾಟೀಲ್‌ಗಾದರೂ ಬಿಜೆಪಿ ಛಾನ್ಸ್ ಕೊಡಲಿ ಎಂಬ ಒಳಾಸೆ ಬಿ.ಸಿ.ಪಾಟೀಲರದೆನ್ನಲಾಗಿದೆ.

ಹಿಂದಿನೆರಡು ಚುನಾವಣೆ ಹೊತ್ತಲ್ಲಿದ್ದ ಗೆದ್ದೇಗೆಲ್ಲುತ್ತೇವೆಂಬ ಹುಮ್ಮಸ್ಸು, ಧೈರ್ಯ ಈ ಸಲ ಬಿಜೆಪಿಗರಿಗಿಲ್ಲವಾಗಿದೆ. ನಾವಿಕನಿಲ್ಲದ ನಾವೆಯಂತಾಗಿರುವ ರಾಜ್ಯ ಬಿಜೆಪಿಯ ದುರ್ಗತಿಯ ನೇರ-ಅಡ್ಡ ಪರಿಣಾಮಗಳೆಲ್ಲ ಹಾವೇರಿ-ಗದಗ ಬಿಜೆಪಿ ಮೇಲಾಗುತ್ತಿದೆ. ಮಾಜಿ ಸಿಎಂ ಬೊಮ್ಮಾಯಿ ಹಾವೇರಿ ಜಿಲ್ಲೆಯವರಾದರೂ ಅವರಿಂದ ಸ್ಥಳೀಯ ಬಿಜೆಪಿಗೆ ಲಾಭವಾಗುತ್ತಿಲ್ಲ. ಕಳೆದ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಈ ಲೋಕಸಭಾ ಕ್ಷೇತ್ರದ ಸರಹದ್ದಿನ ಒಳಗಿನ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದಿರುವುದು ಶಿರಹಟ್ಟಿ ಮೀಸಲು ಒಂದೇಒಂದು ಕ್ಷೇತ್ರದಲ್ಲಿ. ಕಾಂಗ್ರೆಸ್‌ನ ಬಂಡಾಯದಿಂದ ಇಲ್ಲಿ ಬಿಜೆಪಿ ಅಚಾನಕ್ ಬಚಾವಾಗಿದೆ. ಆದರೂ ಪಾರ್ಲಿಮೆಂಟ್ ಇಲೆಕ್ಷನ್‌ನಲ್ಲಿ ಕೇಸರಿ ಕ್ಯಾಂಡಿಡೇಟಾಗುವ ಉಮೇದಿನ ಒಂದು ಡಜನ್ ಹೆಸರುಗಳು ಬಿಜೆಪಿ ವಲಯದಲ್ಲಿ ತೇಲಾಡುತ್ತಿವೆ. ಕಾಂತೇಶ್ ಮತ್ತು ಬಿ.ಸಿ.ಪಾಟೀಲರ ಹೈವೋಲ್ಟೇಜ್ ಕಸರತ್ತು ಒಂದೆಡೆಯಾದರೆ, ಮತ್ತೊಂದೆಡೆ ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, 2018ರ ಅಸೆಂಬ್ಲಿ ಚುನಾವಣೆಯಲ್ಲ ಬಿಜೆಪಿ ಕ್ಯಾಂಡಿಡೇಟಾಗಿ ರಾಣೆಬೆನ್ನೂರಲ್ಲಿ ಸೋಲನುಭವಿಸಿದ್ದ ಡಾ.ಬಸವರಾಜ ಕೇಲಕಾರ್, ಹಿರೇಕೆರೂರಿನ ಪಾಲಾಕ್ಷಗೌಡ ಪಾಟೀಲ್, ಬ್ಯಾಡಗಿಯ ಮುರುಗೆಪ್ಪ ಶೆಟ್ಟರ್, ಕಳೆದ ಚುನಾವಣೆಯಲ್ಲಿ ಗದಗದಲ್ಲಿ ಪರಾಜಿತರಾದ ಅನಿಲ್ ಮೆಣಸಿನಕಾಯಿ, ಹಾವೇರಿಯ ಮಂಜುನಾಥ ಮಡಿವಾಳರ, ರಾಣೆಬೆನ್ನೂರಿನ ಕೆ.ಶಿವಲಿಂಗಪ್ಪ ಮತ್ತು ಪವನಕುಮಾರ್ ಮಲ್ಲಾಡದ- ಅವಕಾಶ ಸಿಕ್ಕರೆ ನಾವ್ಯಾಕೆ ಒಂದು ಕೈ ನೋಡಬಾರದೆಂಬ ಯೋಜನೆಯಲ್ಲಿ ತಂತಮ್ಮ ಗಾಡ್‌ಫಾದರ್‌ಗಳನ್ನು ಹಿಡಿದುಕೊಂಡು ಟಿಕೆಟ್ ತಂತ್ರಗಾರಿಕೆ ನಡೆಸಿದ್ದಾರೆ.

ಇದೆಲ್ಲಕ್ಕಿಂತ ಕುತೂಹಲಕರ ಸಂಗತಿಯೆಂದರೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಹಾವೇರಿ ಎಂಪಿ ಮಾಡುವ ಮೂಲಕ ಪುನರ್ವಸತಿ ಕಲ್ಪಿಸಿ ಲಿಂಗಾಯತ ಓಟ್‌ಬ್ಯಾಂಕ್ ಕೈಜಾರದಂತೆ ನೋಡಿಕೊಳ್ಳುವ ಪ್ಲಾನು ಸಂಘ ಪರಿವಾರ ಹಾಕಿದೆ ಎನ್ನಲಾಗುತ್ತಿದೆ. ಬೊಮ್ಮಾಯಿ ’ಲೋಕ’ ಸಮರ ನಾನೊಲ್ಲೆ ಎನ್ನುತ್ತಿದ್ದಾರಂತೆ. ಆದರೆ ರಾಜ್ಯ ಬಿಜೆಪಿ ಅಧ್ಯಕ್ಷತೆ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ಜಾತಿವಾರು ಲೆಕ್ಕಾಚಾರದಲ್ಲಿ ಹಂಚಿಕೆ ಮಾಡುವಾಗ ಬೊಮ್ಮಾಯಿಗೆ ಛಾನ್ಸ್ ಸಿಗುವ ಸಾಧ್ಯತೆ ಇಲ್ಲ. ಈ ಎರಡೂ ಹುದ್ದೆ ನಿಭಾಯಿಸುವ ಸಾಮರ್ಥ್ಯ ವಿಫಲ ಮುಖ್ಯಮಂತ್ರಿ ಎನಿಸಿದ್ದ ಬೊಮ್ಮಾಯಿಗಿಲ್ಲ ಎಂಬ ಭಾವನೆ ಕೇಸರಿ ಹೈಕಮಾಂಡಿನದು. ಹಾಗಂತ ನಿರ್ಣಾಯಕ ಸಮುದಾಯವಾದ ಲಿಂಗಾಯತರ ಮುಂದಿನ ಸಾಲಿನ ಮುಂದಾಳು ಬೊಮ್ಮಾಯಿಯನ್ನು ಏಕಾಏಕಿ ನೇಪಥ್ಯಕ್ಕೆ ಸರಿಸಿದರೆ ಪರಿಣಾಮ ದುಬಾರಿ ಆಗುತ್ತದೆಂಬ ಆತಂಕವೂ ಕೇಸರಿ ವಲಯದಲ್ಲಿದೆ. ಸಂತೋಷ್-ಪ್ರಹ್ಲಾದ್ ಜೋಶಿಯ ಬ್ರಾಹ್ಮಣ ಲಾಬಿಯ ಮಾತು ಕಟ್ಟಿಕೊಂಡು ಯಡಿಯೂರಪ್ಪರನ್ನು ಬದಿಗೆ ಸರಿಸಿದ “ದುಷ್ಪರಿಣಾಮ” ಬಿಜೆಪಿ ಎದುರಿಸುವಂತಾಗಿದೆ. ಹಾಗಾಗಿ ಬೊಮ್ಮಾಯಿಯನ್ನು ಎಂಪಿ ಮಾಡಿ, ಬಿಜೆಪಿ ಸರ್ಕಾರ ರಚಿಸಿದರೆ, ಅವರನ್ನು ಕೇಂದ್ರ ಮಂತ್ರಿಗಿರಿಗೆ ಏರಿಸಿ ಲಿಂಗಾಯತರ ಓಲೈಸುನ ದೂರಾಲೋಚನೆ ಬಿಜೆಪಿ “ಚಾಣಾಕ್ಯ”ರದೆಂಬ ಮಾತು ಹರಿದಾಡುತ್ತಿದೆ.

ಬಸವರಾಜ ಬೊಮ್ಮಾಯಿ

ಹಾವೇರಿ ಲೋಕಸಭಾ ಕ್ಷೇತ್ರ ರಚನೆಯಾದ ನಂತರದ ಸತತ ಮೂರು ಚುನಾವಣೆಯಲ್ಲಿ ಮುಗ್ಗರಿಸಿರುವ ಕಾಂಗ್ರೆಸ್‌ನ ವರಿಷ್ಠರು ಈ ಬಾರಿ ಗೆಲ್ಲಲೇಬೇಕೆಂಬ ರಣತಂತ್ರ ಹೆಣೆಯುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿಎಂ ಸಿದ್ದುರ ಗೆಲ್ಲಬಹುದಾದ ಕ್ಷೇತ್ರಗಳ ಪಟ್ಟಿಯಲ್ಲಿ ಹಾವೇರಿಯೂ ಸೇರಿದೆ ಎನ್ನಲಾಗುತ್ತಿದೆ. ಹಾವೇರಿ-ಗದಗದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಯಶಸ್ಸು ಸಾಧಿಸಿರುವುದೇ ಈ ಭರವಸೆಗೆ ಕಾರಣ. ಕುರುಬರು ಮತ್ತು ಮುಸಲ್ಮಾನರು ದೊಡ್ಡ ಸಂಖ್ಯೆಯಲ್ಲಿರುವುದರಿಂದ ಕ್ಷೇತ್ರದಲ್ಲಿ ಸಿಎಂ ಸಿದ್ದು ಚಾರಿಷ್ಮ ನಿರ್ಣಾಯಕವಾಗಿದೆ. ಖುದ್ದು ಸಿದ್ದು ಮತ್ತು ಡಿಕೆಶಿಯೇ ಹಾವೇರಿ-ಗದಗ ಗೆಲುವಿನ ಬಗ್ಗೆ ಆಸಕ್ತಿ ವಹಿಸಿರುವುದರಿಂದ ಹೋರಾಟ ಸುಲಭವೆಂದು ಹಲವರು ಕಾಂಗ್ರೆಸ್ ಟಿಕೆಟ್‌ಗೆ ಲಾಬಿ ಆರಂಭಿಸಿದ್ದಾರೆ. ಇವರಲ್ಲಿ ಪ್ರಮುಖರೆಂದರೆ, ಕಳೆದ ಲೋಕ ಚುನಾವಣೆಯಲ್ಲಿ ಸೋತ ಅಭ್ಯರ್ಥಿ-ವಿಧಾನ ಪರಿಷತ್‌ನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಮ್ ಅಹಮ್ಮದ್, ಮಾಜಿ ಸಂಸದ ಐ.ಜಿ.ಸನದಿ ಮಗ ಜಾಕೀರ್ ಸನದಿ, ಕೆಪಿಸಿಸಿ ಪದವೀಧರ ಘಟಕದ ಅಧ್ಯಕ್ಷ-ಮೂರ್ನಾಲ್ಕು ಬಾರಿ ಪಶ್ಚಿಮ ಶಿಕ್ಷಕರ ವಿಪ ಕ್ಷೇತ್ರದಲ್ಲಿ ಸೋತಿರುವ ರಾಣೆಬೆನ್ನೂರಿನ ಡಾ.ಎಂ.ಆರ್.ಕುಬೇರಪ್ಪ, ತನ್ನ ಚಿತ್ರವಿರುವ ಬ್ಯಾನರ್-ಪೋಸ್ಟರ್ ಹಾಕಿಸುತ್ತ ತಾನೇ ಕಾಂಗ್ರೆಸ್ ಕ್ಯಾಂಡಿಡೇಟೆಂದು ಬಿಂಬಿಸಿಕೊಳ್ಳುತ್ತಿರುವ ಶಿರಹಟ್ಟಿಯ ಮಾಜಿ ಎಮ್ಮೆಲ್ಲೆ ಜಿ.ಎಸ್.ಗಡ್ಡದೇವರಮಠ ಮಗ ಆನಂದಸ್ವಾಮಿ ಗಡ್ಡದೇವರಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಮತ್ತು ಕಳೆದ ಅಸೆಂಬ್ಲಿ ಇಲೆಕ್ಷನ್ ಹೊತ್ತಲ್ಲಿ ಎಂಪಿ ಕ್ಯಾಂಡಿಡೇಟಾಗುವ ಲೆಕ್ಕಾಚಾರ ಹಾಕಿಯೇ ಬಿಜೆಪಿಗೆ ಬೈಹೇಳಿ ಕಾಂಗ್ರೆಸ್ ಸೇರಿರುವ ಮಾಜಿ ಸಂಸದ ಮಂಜುನಾಥ ಕುನ್ನೂರ್.

’ಲೋಕ’ ಸಂಗ್ರಾಮದ ಸೆಮೀಸ್‌ನಂತಿರುವ ಈ ರೋಚಕ ಟಿಕೆಟ್ ಫೈಟ್ ಕಾಂಗ್ರೆಸ್ ಮತ್ತು ಬಿಜೆಪಿಯ ಹೊಸ ಮುಖಗಳು ಮುಖಾಮುಖಿಯಾಗುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಈ ಬಾರಿ ಕಾಂಗ್ರೆಸ್ ಮುಸ್ಲಿಮೇತರ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿ ಅಸೆಂಬ್ಲಿ ಚುನಾವಣೆಯಲ್ಲಿ ಗಳಿಸಿದ ಮುಸ್ಲಿಮ್, ಕುರುಬ ಮತ್ತು ದಲಿತ ಮತಗಳ ಗಂಟನ್ನು ಉಳಿಸಿಕೊಂಡರೆ ಬಿಜೆಪಿ ಮಕಾಡೆ ಮಲಗುವಂತಾಗುತ್ತದೆ ಎಂದು ಹಾವೇರಿ-ಗದಗದ ಇಲೆಕ್ಷನ್ ಟ್ಯಾಕ್ಟಿಕ್‌ಗಳ ನಾಡಿಮಿಡಿತ ಬಲ್ಲ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...