Homeಮುಖಪುಟಹೈಕೋರ್ಟ್‌ ನ್ಯಾಯಾಧೀಶರು ಬಿಜೆಪಿ ಸೇರ್ಪಡೆ: ನ್ಯಾಯಾಂಗದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿರುವುದೇಕೆ?

ಹೈಕೋರ್ಟ್‌ ನ್ಯಾಯಾಧೀಶರು ಬಿಜೆಪಿ ಸೇರ್ಪಡೆ: ನ್ಯಾಯಾಂಗದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿರುವುದೇಕೆ?

- Advertisement -
- Advertisement -

ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ತಮ್ಮ ಹುದ್ದೆಗೆ ನಿನ್ನೆ ರಾಜೀನಾಮೆ ನೀಡಿದ್ದರು. ಆ ಬಳಿಕ ಅವರು ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಿಸಿದ್ದರು. ತಮ್ಮ ಕೆಲವು ತೀರ್ಪುಗಳು ಮತ್ತು ಅವಲೋಕನಗಳಿಗಾಗಿ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನಿಂದ ತೀವ್ರ ಟೀಕೆಗಳನ್ನು ಎದುರಿಸಿದ್ದ ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ರಾಜಕೀಯ ಎಂಟ್ರಿ ಭಾರೀ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಗಂಗೋಪಾಧ್ಯಾಯ ಅವರು ಸಾಂವಿಧಾನಿಕ ಹುದ್ದೆಯಿಂದ ಪಕ್ಷ ರಾಜಕೀಯಕ್ಕೆ  ಪ್ರವೇಶಿಸಿದ್ದ ಮೊದಲ ನ್ಯಾಯಾಧೀಶರಲ್ಲ. ಆದರೆ ನ್ಯಾಯಾಂಗದಿಂದ ರಾಜಕೀಯಕ್ಕೆ ಪರಿವರ್ತನೆಗೊಳ್ಳುವ ರೀತಿ, ಪೀಠಕ್ಕೆ ರಾಜೀನಾಮೆ ನೀಡುವ ಮೊದಲು ತಮ್ಮ ನಿರ್ಧಾರವನ್ನು ಸಾರ್ವಜನಿಕವಾಗಿ ಘೋಷಿಸುವುದು, ನ್ಯಾಯಾಧೀಶರಾಗಿದ್ದಾಗ ಬಂಗಾಳದ ಆಡಳಿತ ಪಕ್ಷದ ವಿರುದ್ಧ ಮಾಡಿರುವ ಟೀಕೆ ನ್ಯಾಯಾಂಗ ನಿಷ್ಪಕ್ಷಪಾತದ ಪ್ರಶ್ನೆ ಉದ್ಭವಿಸಲು ಕಾರಣವಾಗಿದೆ.

ಗಂಗೋಪಾಧ್ಯಾಯ ಅವರು ನ್ಯಾಯಾಧೀಶರಾಗಿದ್ದಾಗ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಿಕೊಂಡಿದ್ದಾರೆ. ನಾನು ಬಿಜೆಪಿಯನ್ನು ಸಂಪರ್ಕಿಸಿದ್ದೇನೆ, ಬಿಜೆಪಿಗೆ ನನ್ನೊಂದಿಗೆ ಸಂಪರ್ಕ ಇದೆ ಎಂದು ಹೇಳಿದ್ದರು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕಾರಿಯಾಗುವ ರೀತಿ ಆದೇಶಗಳನ್ನು ನೀಡಿದ ರಾಜಕೀಯ ಪಕ್ಷಕ್ಕೆ ಈಗ ಸೇರಿರುವ ನ್ಯಾಯಾಧೀಶರು ಈ ಪೀಠದಲ್ಲಿದ್ದಾಗ ನಿಷ್ಪಕ್ಷಪಾತಿ ಎಂದು ನಂಬುವುದು ಮೂರ್ಖತನ ಎಂದು ಕಾನೂನು ವಿದ್ವಾಂಸ ಮತ್ತು ಲೇಖಕ ಸೈಫ್ ಮಹಮೂದ್ ಅವರು ಹೇಳಿದ್ದಾರೆ.

ಇದು ಗಂಗೋಪಾಧ್ಯಾಯ ಅವರ ಅತ್ಯಂತ ಅನುಚಿತ ವರ್ತನೆ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಹೇಳಿದ್ದು, ರಾಜೀನಾಮೆಗೆ ಮೊದಲು ನ್ಯಾಯಾಧೀಶರು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಬಾರದಿತ್ತು, ಅವರ ಹೇಳಿಕೆಗಳು ತೃಣಮೂಲ ಕಾಂಗ್ರೆಸ್ ವಿರುದ್ಧ ಪೂರ್ವಾಗ್ರಹದ ಅನಿಸಿಕೆಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದ್ದಾರೆ.

ನ್ಯಾಯಾಂಗದ ವಿಶ್ವಾಸಾರ್ಹತೆಯು, ನ್ಯಾಯೋಚಿತತೆ ಮತ್ತು ನಿಷ್ಪಕ್ಷಪಾತದ ಸಾರ್ವಜನಿಕ ಗ್ರಹಿಕೆಯನ್ನು ಅವಲಂಬಿಸಿದೆ. ನ್ಯಾಯಾಧೀಶರ ನಿವೃತ್ತಿಯ ನಂತರದ ರಾಜಕೀಯ ಪಕ್ಷದೊಂದಿಗಿನ ಸಂಬಂಧವು ನ್ಯಾಯಾಧೀಶರ ನಿಜವಾದ ಉದ್ದೇಶಗಳನ್ನು ಲೆಕ್ಕಿಸದೆ ಪಕ್ಷಪಾತದ ಬಲವಾದ ಗ್ರಹಿಕೆಯನ್ನು ಸೃಷ್ಟಿಸುತ್ತದೆ. ನ್ಯಾಯಾಧೀಶರು ತಟಸ್ಥ ಮತ್ತು ನಿಷ್ಪಕ್ಷಪಾತವಾಗಿದ್ದಾರೆಂದು ಹೇಳುವುದು ಮಾತ್ರವಲ್ಲ ಅದರಂತೆ ನಡೆದುಕೊಳ್ಳಬೇಕು ಎಂದು ಕಾಟ್ಜು ಒತ್ತಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ರಾಜಕೀಯ ಒಲವನ್ನು ಹೊಂದಿದ್ದ ಮತ್ತು ನಿವೃತ್ತಿಯ ನಂತರ ಸರ್ಕಾರಿ ನೇಮಕಾತಿಗಳನ್ನು ಪಡೆದ ಅನೇಕ ನ್ಯಾಯಾಧೀಶರನ್ನು ನೆನಪಿಸಬಹುದು. ಈ ಬೆಳವಣಿಗೆಗಳು ನ್ಯಾಯಾಂಗವು ಸ್ವತಂತ್ರವಾಗಿಲ್ಲ ಎಂಬ ಭಾವನೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ನ್ಯಾಯಾಧೀಶರು ತಮ್ಮ ನ್ಯಾಯಾಂಗ ಕಚೇರಿಯನ್ನು ತ್ಯಜಿಸುವ ಮತ್ತು ರಾಜಕೀಯಕ್ಕೆ ಪ್ರವೇಶಿಸುವ ಅಥವಾ ಯಾವುದೇ ಇತರ ಸರ್ಕಾರಿ ನೇಮಕಾತಿಯನ್ನು ಸ್ವೀಕರಿಸುವ ಬಗ್ಗೆ ಮಾತನಾಡಿದ ಮಾರ್ಕಂಡೇಯ ಕಾಟ್ಜು, ನ್ಯಾಯಾಧೀಶರು ಆಟದಲ್ಲಿ ರೆಫರಿ ಇದ್ದಂತೆ. ಅವರು ಸೇರಲು ಸಾಧ್ಯವಿಲ್ಲ, ಅವರು ಅದನ್ನು ನ್ಯಾಯಯುತವಾಗಿ ನಡೆಸುತ್ತಾರೆ ಎಂದು ಮಾತ್ರ ನೋಡಬೇಕು ಎಂದು ಹೇಳಿದ್ದಾರೆ.

ಮಹಮೂದ್ ಪ್ರಕಾರ, ನ್ಯಾಯಾಧೀಶರು ಸಂವಿಧಾನವನ್ನು ಎತ್ತಿ ಹಿಡಿಯುವ ಬಾಧ್ಯತೆ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳ ನ್ಯಾಯಾಧೀಶರು ಚುನಾವಣೆಯಲ್ಲಿ ಸ್ಪರ್ಧಿಸಲು ಸಂಪೂರ್ಣ ನಿರ್ಬಂಧವನ್ನು ಬೆಂಬಲಿಸಿದರು. ಜಡ್ಜ್‌ಗಳ ನಿವೃತ್ತಿಯ ನಂತರದ ರಾಜಕೀಯ ಸಂಬಂಧ, ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ನಿರ್ದಾಕ್ಷಿಣ್ಯವಾಗಿ ಅಡ್ಡಿಪಡಿಸುತ್ತದೆ ಎಂದು ಹೇಳಿದ್ದಾರೆ.

2018ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಹೈಕೋರ್ಟ್‌ಗೆ ನೇಮಕಗೊಂಡಿದ್ದ 62 ವರ್ಷದ ಗಂಗೋಪಾಧ್ಯಾಯ ಜುಲೈ 2020ರಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು, ಅವರು ಜುಲೈನಲ್ಲಿ ನಿವೃತ್ತಿ ಪಡೆಯಲಿದ್ದರು. ಅವರು ಪಶ್ಚಿಮ ಬಂಗಾಳ ಸಿವಿಲ್ ಸರ್ವಿಸ್ ಅಧಿಕಾರಿಯಾಗಿದ್ದರು ಆದರೆ ವಕೀಲರಾಗಲು 10 ವರ್ಷಗಳ ಹಿಂದೆ ತಮ್ಮ ಸಿವಿಲ್‌ ಸರ್ವಿಸ್‌ ಹುದ್ದೆಯನ್ನು ತೊರೆದಿದ್ದರು.

ಏಪ್ರಿಲ್ 2023ರಲ್ಲಿ, ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ನ್ಯಾ. ಗಂಗೋಪಾಧ್ಯಾಯ ಅವರು, ಈ ಹಗರಣದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಪಾತ್ರದ ಬಗ್ಗೆ ಸ್ಥಳೀಯ ಬಂಗಾಳಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಟಿವಿ ಚಾನೆಲ್‌ಗಳಿಗೆ ಸಂದರ್ಶನ ನೀಡುವುದು ಹಾಲಿ ನ್ಯಾಯಮೂರ್ತಿಗಳ ಕೆಲಸವಲ್ಲ ಎಂದಿತ್ತು.ನ್ಯಾ. ಗಂಗೋಪಾಧ್ಯಾಯ ಅವರು ಸಂದರ್ಶನ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕಲ್ಕತ್ತಾ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರಿಂದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ವರದಿ ಕೇಳಿತ್ತು.

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಸಂದರ್ಶನ ನೀಡಿದ್ದು ನಿಜವಾಗಿದ್ದರೆ, ಅರ್ಜಿಗಳ ವಿಚಾರಣೆ ಮುಂದುವರಿಸಲು ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಅಲ್ಲದೆ, ಪ್ರಕರಣವನ್ನು ಮತ್ತೊಂದು ಪೀಠಕ್ಕೆ ನಿಯೋಜಿಸುವಂತೆ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರಿಗೆ ಸಿಜೆಐ ಆದೇಶಿಸಿದ್ದರು. ಸುಪ್ರೀಂ ಕೋರ್ಟ್ ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಬಂಗಾಳಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದ ವರದಿ ಮತ್ತು ಅಧಿಕೃತ ಅನುವಾದವನ್ನು ತಮ್ಮೆದುರು ಹಾಜರುಪಡಿಸುವಂತೆ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿತ್ತು.

ಇದನ್ನು ಓದಿ: ರೈತರ ನೂರಾರು ಸಾಮಾಜಿಕ ಮಾದ್ಯಮ ಖಾತೆಗಳಿಗೆ ನಿರ್ಬಂಧ: ದೆಹಲಿ ಚಲೋ ಪ್ರತಿಭಟನೆಗೆ ಬೆದರಿದ ಕೇಂದ್ರ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read