ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕಾಂಗ್ರೆಸ್ ಹಿರಿಯ ನಾಯಕ ನಸೀರ್ ಅಹ್ಮದ್ ಅವರನ್ನು ವಜಾಗೊಳಿಸಲಾಗಿದೆ.
ಈ ಕುರಿತು ಸೋಮವಾರ (ಏ.13) ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ರಾಜ್ಯ ಶಿಷ್ಟಾಚಾರ) ಸರ್ಕಾರದ ಉಪ ಕಾರ್ಯದರ್ಶಿ ಅಭಿಜಿನ್ ಬಿ ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ, “2023ರ ಜೂನ್ 1ರಂದು ನೀಡಿದ್ದ ನೇಮಕಾತಿ ಆದೇಶವನ್ನು ತಕ್ಷಣದಿಂದಲೇ ಹಿಂಪಡೆಯಲಾಗಿದೆ” ಎಂದು ತಿಳಿಸಲಾಗಿದೆ. ಕಾರಣಗಳನ್ನು ಉಲ್ಲೇಖಿಸಿಲ್ಲ.
ದಾವಣಗೆರೆ ದಕ್ಷಿಣ ಉಪಚುಣಾವಣೆಯ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆ, ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗ್ತಿದೆ.
ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಕೇಳಿ ಬಂದ ಬೆನ್ನಲ್ಲೇ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ವೀಕರಿಸಿದ್ದು, ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಸಮಿತಿಯನ್ನು ವಿಸರ್ಜಿಸಿದ್ದಾರೆ.


