ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಸೋಮವಾರ (ಜು.13) ಜೆಡಿಎಸ್ ಶಾಸಕ ಹೆಚ್. ಡಿ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ಹೈಕೋರ್ಟ್ ಎಚ್.ಡಿ. ರೇವಣ್ಣ ಅವರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಮಹಿಳೆಯ ಘಟನತೆಗೆ ಧಕ್ಕೆ) ಅಡಿಯಲ್ಲಿದ್ದ ಆರೋಪದಿಂದ ಮುಕ್ತಗೊಳಿಸಿತ್ತು. ಆದರೆ, ಸೆಕ್ಷನ್ 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿದ್ದ ಆರೋಪಗಳನ್ನು ಹಾಗೇ ಉಳಿಸಿಕೊಂಡಿತ್ತು. ಈ ಪ್ರಕರಣದ ಕಾನೂನು ಕ್ರಮ ಕೈಗೊಳ್ಳಲು ಇರುವ ಕಾಲಮಿತಿಯನ್ನು (ಲಿಮಿಟೇಶನ್ ಪೀರಿಯಡ್) ವಿಸ್ತರಿಸಬಹುದೇ ಎಂಬುದನ್ನು ಪರಿಶೀಲಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ (ಟ್ರಯಲ್ ಕೋರ್ಟ್) ಸೂಚಿಸಿತ್ತು.
ಐಪಿಸಿ ಸೆಕ್ಷನ್ 354, 354ಎ, 506 ಮತ್ತು 509 ರ ಅಡಿಯಲ್ಲಿ ದಾಖಲಾಗಿದ್ದ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ರದ್ದುಗೊಳಿಸುವಂತೆ ಕೋರಿ ಎಚ್.ಡಿ. ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತ್ತು. ಈ ಅರ್ಜಿಯ ವಿಚಾರಣೆ ಬಾಕಿ ಇರುವಾಗಲೇ, ಪೊಲೀಸರು ದೋಷಾರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ಸಲ್ಲಿಸಿದ್ದರು ಮತ್ತು ವಿಚಾರಣಾ ನ್ಯಾಯಾಲಯವು ಐಪಿಸಿ ಸೆಕ್ಷನ್ 354 ಮತ್ತು 354ಎ ಅಡಿಯಲ್ಲಿ ಪ್ರಕರಣವನ್ನು ಪರಿಗಣನೆಗೆ (ಕಾಗ್ನಿಸೆನ್ಸ್) ತೆಗೆದುಕೊಂಡಿತ್ತು.
ರೇವಣ್ಣ ಅವರು ಹೈಕೋರ್ಟ್ ಮೆಟ್ಟಿಲೇರಿ, ಈ ಪ್ರಕರಣದಲ್ಲಿ ದೂರು ದಾಖಲಿಸಲು ಮೂರು ವರ್ಷಗಳಿಗಿಂತ ಹೆಚ್ಚು ವಿಳಂಬವಾಗಿದೆ ಎಂದು ವಾದಿಸಿದ್ದರು. ಮೂರು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಜೈಲು ಶಿಕ್ಷೆ ಇರುವ ಅಪರಾಧಗಳಿಗೆ ಸಿಆರ್‌ಪಿಸಿ ಸೆಕ್ಷನ್ 468 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು 3 ವರ್ಷಗಳ ಕಾಲಮಿತಿ ಇರುತ್ತದೆ, ಆದ್ದರಿಂದ ನ್ಯಾಯಾಲಯವು ಈ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದರು. ಅಂತಿಮವಾಗಿ, ಇದೇ ವಿಳಂಬದ ಕಾರಣವನ್ನು ಎತ್ತಿಹಿಡಿದ ವಿಚಾರಣಾ ನ್ಯಾಯಾಲಯವು ರೇವಣ್ಣ ಅವರನ್ನು ಸೆಕ್ಷನ್ 354ಎ ಅಡಿಯಲ್ಲಿದ್ದ ಆರೋಪದಿಂದಲೂ ಮುಕ್ತಗೊಳಿಸಿತ್ತು.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಕರ್ನಾಟಕ ಸರ್ಕಾರದ ಮೇಲ್ಮನವಿಯನ್ನು ವಿಚಾರಣೆ ನಡೆಸಿದೆ. ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್. ನಾಗಮುತ್ತು ಅವರು, ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿದ್ದು, ಅವರಲ್ಲಿ ಮಾಜಿ ಮನೆಗೆಲಸದ ಮಹಿಳೆಯ ಮೇಲೆ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಕೂಡ ಸೇರಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನೋಟಿಸ್ ಜಾರಿ ಮಾಡಿದ ನ್ಯಾಯಪೀಠವು, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ರ (ಮಹಿಳೆಯ ಘನತೆಗೆ ಧಕ್ಕೆ) ಅಡಿಯಲ್ಲಿದ್ದ ಆರೋಪಗಳನ್ನು ಸೆಕ್ಷನ್ 354ಎ ಗೆ ಬದಲಾಯಿಸುವಂತೆ (ಮಾರ್ಪಡಿಸುವಂತೆ) ಸೂಚಿಸಲು ಹೈಕೋರ್ಟ್‌ಗೆ ಹೇಗೆ ಸಾಧ್ಯ ಎಂದು ಮೌಖಿಕವಾಗಿ ಪ್ರಶ್ನಿಸಿದೆ.
ಕಾಲಮಿತಿಯ (ಲಿಮಿಟೇಶನ್) ವಿಷಯಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ನಾಗಮುತ್ತು ಅವರು, ಹೊರಿಸಲಾದ ಒಟ್ಟು ಆರೋಪಗಳಲ್ಲಿ ಯಾವುದು ಅತ್ಯಂತ ಗಂಭೀರವಾದ ಅಪರಾಧವೋ (ಇಲ್ಲಿ ಸೆಕ್ಷನ್ 376 – ಅತ್ಯಾಚಾರ) ಅದಕ್ಕೆ ಅನುಗುಣವಾಗಿ ಕಾಲಮಿತಿಯನ್ನು ಲೆಕ್ಕ ಹಾಕಲಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಪರ್ದಿವಾಲಾ ಅವರು, ಜೆಡಿಎಸ್ ನಾಯಕ ರೇವಣ್ಣ ಅವರೂ ಅತ್ಯಾಚಾರದ ಆರೋಪದ ಮೇಲೆ ವಿಚಾರಣೆ ಎದುರಿಸಬೇಕೆಂದು ರಾಜ್ಯ ಸರ್ಕಾರ ಬಯಸುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಆಗ ನಾಗಮುತ್ತು ಅವರು, ನ್ಯಾಯಾಲಯವು ಅಪರಾಧಿಯನ್ನಲ್ಲ, ಬದಲಿಗೆ ನಡೆದಿರುವ ಅಪರಾಧವನ್ನು (ಪ್ರಕರಣವನ್ನು) ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದಾಗ್ಯೂ, ಈ ವಾದಕ್ಕೆ ಒಪ್ಪದ ನ್ಯಾಯಪೀಠ, ಎಚ್.ಡಿ. ರೇವಣ್ಣ ಅವರ ವಿರುದ್ಧ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಯಾವುದೇ ಕಾನೂನು ಕ್ರಮವನ್ನು (ಕಾಗ್ನಿಸೆನ್ಸ್) ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಸಂದರ್ಭದಲ್ಲಿ ಉದಾಹರಣೆಯೊಂದನ್ನು ನೀಡಿದ ನ್ಯಾಯಮೂರ್ತಿ ಪರ್ದಿವಾಲಾ ಅವರು, “ಒಂದು ಪ್ರಕರಣದಲ್ಲಿ ಎ ಮತ್ತು ಬಿ ಎಂಬುವವರ ಮೇಲೆ ಸೆಕ್ಷನ್ 302 (ಕೊಲೆ) ಆರೋಪ ಹಾಗೂ ಸಿ ಎಂಬಾತನ ಮೇಲೆ ಸೆಕ್ಷನ್ 201 (ಸಾಕ್ಷ್ಯ ನಾಶಪಡಿಸುವುದು) ಅಡಿಯಲ್ಲಿ ಆರೋಪ ಇರುತ್ತದೆ ಎಂದು ಭಾವಿಸೋಣ. ಆಗ ಸಿ ಎಂಬಾತನ ಮೇಲೆ ಕೇವಲ ಆ ನಿರ್ದಿಷ್ಟ ಅಪರಾಧಕ್ಕೆ ಮಾತ್ರ ದೋಷಾರೋಪ ಹೊರಿಸಿ ವಿಚಾರಣೆ ನಡೆಸಬೇಕಾಗುತ್ತದೆ. ಅದನ್ನು ಬಿಟ್ಟು ಎ ಮತ್ತು ಬಿ ಕೊಲೆ ಆರೋಪ ಎದುರಿಸುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ, ಸಿ ಕೂಡ ಕೊಲೆ ಆರೋಪವನ್ನೇ ಎದುರಿಸಬೇಕು ಎಂದು ನೀವು ಹೇಳುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.
ನಾಗಮುತ್ತು ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಲು ಪ್ರಯತ್ನಿಸುತ್ತಾ, ಈ ಇಡೀ ಅಪರಾಧವು ಒಂದೇ ಸಾಮಾನ್ಯ ವ್ಯವಹಾರ ಅಥವಾ ಘಟನೆಯಲ್ಲಿ (ಕಾಮನ್ ಟ್ರಾನ್ಸಾಕ್ಷನ್) ನಡೆದಿರುವುದರಿಂದ, ಜಂಟಿ ದೋಷಾರೋಪ ಪಟ್ಟಿಯನ್ನು (ಕಾಮನ್ ಚಾರ್ಜ್‌ಶೀಟ್) ಸಲ್ಲಿಸಲಾಗಿದೆ ಮತ್ತು ಅಪರಾಧಗಳ ಜಂಟಿ ಕಾನೂನು ಕ್ರಮವನ್ನು (ಕಾಮನ್ ಕಾಗ್ನಿಸೆನ್ಸ್) ಕೈಗೊಳ್ಳಲಾಗಿದೆ ಎಂದು ವಾದಿಸಿದ್ದಾರೆ. ಆದ್ದರಿಂದ, ದೋಷಾರೋಪ ಪಟ್ಟಿಯಲ್ಲಿರುವ ಅತ್ಯಂತ ಗಂಭೀರವಾದ ಅಪರಾಧವನ್ನು ಆಧರಿಸಿಯೇ ಕಾಲಮಿತಿಯನ್ನು (ಲಿಮಿಟೇಶನ್ ಪೀರಿಯಡ್) ನಿರ್ಧರಿಸಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.


