ರಾಜ್ಯಾದ್ಯಂತ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಮೊದಲ ಹಂತವಾದ ಗಣತಿ ನಮೂನೆಗಳನ್ನು ಭರ್ತಿ ಮಾಡಿ ವಾಪಸ್ ನೀಡಲು ನಾಳೆ (ಆಗಸ್ಟ್ 8) ಕೊನೆಯ ದಿನವಾಗಿದೆ. ಈ ನಡುವೆ ರಾಜ್ಯದಲ್ಲಿ ಈಗಾಗಲೇ ಶೇ. 99.99 ರಷ್ಟು ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು, ಆಯಾಗಳಿಂದ ಹೊಸ ಮತದಾರರ ಪಟ್ಟಿಯ ಚಿತ್ರಣ ಸಿದ್ಧವಾಗುತ್ತಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ರಾಜ್ಯದಲ್ಲಿರುವ ಒಟ್ಟು 5,54,32,314 ಗಣತಿ ನಮೂನೆಗಳ ಪೈಕಿ ಆಗಸ್ಟ್ 6ರ ಸಂಜೆ 4 ಗಂಟೆಯ ವೇಳೆಗೆ ಬರೋಬ್ಬರಿ 5,54,29,076 ನಮೂನೆಗಳ ಡಿಜಿಟಲೀಕರಣ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪ್ರಸ್ತುತ ಕೇವಲ 3,238 ನಮೂನೆಗಳ ಡಿಜಿಟಲೀಕರಣ ಮಾತ್ರ ಬಾಕಿ ಉಳಿದಿದೆ.
1.10 ಕೋಟಿ ‘ಎಎಸ್ಡಿಡಿಒ’ ಮತದಾರರ ಪತ್ತೆ!
ಈ ಬಾರಿಯ ಸಮಗ್ರ ಪರಿಷ್ಕರಣೆಯಲ್ಲಿ (SIR) ಅತ್ಯಂತ ಮಹತ್ವದ ಅಂಶವೆಂದರೆ, ಈವರೆಗೆ ಡಿಜಿಟಲೀಕರಣಗೊಂಡ 5.54 ಕೋಟಿ ನಮೂನೆಗಳ ಪೈಕಿ ಬರೋಬ್ಬರಿ 1.10 ಕೋಟಿ ಮತದಾರರನ್ನು ‘ಎಎಸ್ಡಿಡಿಒ’ (ASDDO – ಗೈರು, ನಿಧನ, ಶಾಶ್ವತ ಸ್ಥಳಾಂತರ, ನಕಲಿ ಹಾಗೂ ಇತರೆ) ವರ್ಗಕ್ಕೆ ಸೇರಿಸಲಾಗಿದೆ.
ಈ ಪೈಕಿ ವರ್ಗೀಕರಣ ವಿವರ ಹೀಗಿದೆ:
- ಶಾಶ್ವತ ಸ್ಥಳಾಂತರಗೊಂಡವರು: 66.43 ಲಕ್ಷ
- ಮೃತಪಟ್ಟ ಮತದಾರರು: 16.32 ಲಕ್ಷ
- ಗೈರುಹಾಜರಾದವರು: 16.12 ಲಕ್ಷ
- ಈಗಾಗಲೇ ನೋಂದಾಯಿತರಾದವರು (ನಕಲಿ): 6.93 ಲಕ್ಷ
- ಇತರರು: 4.67 ಲಕ್ಷ
ಮುಂದಿನ ಪ್ರಕ್ರಿಯೆ
ಆಗಸ್ಟ್ 8ರ ಗಡುವು ಮುಗಿದ ನಂತರ ಡಿಜಿಟಲೀಕರಣದ ಗುಣಮಟ್ಟ ಪರಿಶೀಲನೆ, ತಾಂತ್ರಿಕ ವಿವರಗಳ ಮೌಲ್ಯಮಾಪನ, ಮತಗಟ್ಟೆಗಳ ಮರು ಹೊಂದಾಣಿಕೆ ಹಾಗೂ ರ್ಯಾಂಡಮೈಸೇಷನ್ ಪ್ರಕ್ರಿಯೆಗಳು ನಡೆಯಲಿವೆ.
ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:
- ಆಗಸ್ಟ್ 17: ಕರಡು ಮತದಾರರ ಪಟ್ಟಿ ಪ್ರಕಟಣೆ.
- ಆಗಸ್ಟ್ 17 ರಿಂದ ಸೆಪ್ಟೆಂಬರ್ 16: ಸಾರ್ವಜನಿಕರು ಆಕ್ಷೇಪಣೆ ಹಾಗೂ ಹಕ್ಕುಗಳ ಅರ್ಜಿ ಸಲ್ಲಿಕೆಗೆ ಅವಕಾಶ.
- ಆಗಸ್ಟ್ 18 ರಿಂದ ಅಕ್ಟೋಬರ್ 15: ನೋಟಿಸ್ ಜಾರಿ, ಪರಿಶೀಲನೆ, ವಿಚಾರಣೆ ಹಾಗೂ ಆಕ್ಷೇಪಣೆಗಳ ಇತ್ಯರ್ಥ.
- ಅಕ್ಟೋಬರ್ 19: ಅಂತಿಮ ಮತದಾರರ ಪಟ್ಟಿ ಪ್ರಕಟಣೆ.
ಈ ಹಿಂದೆ ಜೂನ್ 30 ರಿಂದ ಜುಲೈ 29 ರವರೆಗೆ ನೀಡಲಾಗಿದ್ದ ಗಣತಿ ನಮೂನೆ ಸಲ್ಲಿಕೆಯ ಅವಧಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಆಗಸ್ಟ್ 8 ರವರೆಗೆ ವಿಸ್ತರಿಸಲಾಗಿತ್ತು. ಸಾರ್ವಜನಿಕರು ತಮ್ಮ ಹಕ್ಕುಗಳನ್ನು ಕಾಯ್ದುಕೊಳ್ಳಲು ನಾಳೆಯೊಳಗಾಗಿ ನಮೂನೆಗಳನ್ನು ಸಲ್ಲಿಸಲು ಕೋರಲಾಗಿದೆ.


