ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು “ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ” ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ, ವಿಪಕ್ಷ ನಾಯಕ ರಾಹುಲ್ ಗಾಂಧಿ ಇದನ್ನು “ಜನಸಾಮಾನ್ಯರ ಜೇಬಿಗೆ ಬೀಳುವ ‘UPI ಟ್ಯಾಕ್ಸ್'” ಎಂದು ಕಟುವಾಗಿ ಟೀಕಿಸಿದ್ದಾರೆ.
ಇಂದು ಬುಧವಾರ ತಮ್ಮ ‘X’ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಒತ್ತಡಕ್ಕೆ ಮಣಿದು ಯುಪಿಐ ಮೇಲೆ ತೆರಿಗೆ ಮಾದರಿಯ ಶುಲ್ಕ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.
“ನಾನು ಎಡಕ್ಕೂ ವಾಲಲ್ಲ, ಬಲಕ್ಕೂ ವಾಲಲ್ಲ..” ಇಂದಿರಾ ಉದಾಹರಣೆ ನೀಡಿದ ರಾಹುಲ್
ತಮ್ಮ ವಿಡಿಯೋ ಸಂದೇಶದ ಆರಂಭದಲ್ಲೇ ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಿಟ್ಟತನವನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, “ಒಮ್ಮೆ ಇಂದಿರಾ ಗಾಂಧಿಯವರನ್ನು ನೀವು ಎಡಪಂಥೀಯರೋ ಅಥವಾ ಬಲಪಂಥೀಯರೋ ಎಂದು ಕೇಳಲಾಗಿತ್ತು. ಅದಕ್ಕೆ ಅವರು ‘ನಾನು ಎಡಕ್ಕೂ ವಾಲಲ್ಲ, ಬಲಕ್ಕೂ ವಾಲಲ್ಲ, ನಾನು ನೇರವಾಗಿ ನಿಲ್ಲುತ್ತೇನೆ’ ಎಂದಿದ್ದರು. ಆದರೆ ಮೋದಿ ಜಿ ಅವರ ಕಾನ್ಸೆಪ್ಟ್ ಬೇರೆ, ಅವರು ಎಡವೂ ಅಲ್ಲ, ಬಲವೂ ಅಲ್ಲ, ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ನೇರವಾಗಿ ಮಂಡಿಯೂರಿ ಶರಣಾಗಿದ್ದಾರೆ” ಎಂದು ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದಾರೆ.
ಸಾಮಾನ್ಯರ ಜೇಬಿಗೆ ಹೇಗೆ ಕತ್ತರಿ? ರಾಹುಲ್ ಬಿಚ್ಚಿಟ್ಟ ಲೆಕ್ಕಾಚಾರ
₹2,000 ಮೇಲ್ಪಟ್ಟ ವ್ಯಾಪಾರಿ ವಹಿವಾಟುಗಳಿಗೆ (Merchant Transactions) 0.4% MDR ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರವು “ಇದು ನೇರವಾಗಿ ಗ್ರಾಹಕರು ಪಾವತಿಸುವ ಶುಲ್ಕವಲ್ಲ” ಎಂದು ಸಮರ್ಥಿಸಿಕೊಳ್ಳುತ್ತಿದೆ. ಆದರೆ ಈ ವಾದವನ್ನು ರಾಹುಲ್ ಗಾಂಧಿ ತಳ್ಳಿಹಾಕಿದ್ದಾರೆ.
“ಅಂಗಡಿಯವನಿಗೆ ಶುಲ್ಕ ವಿಧಿಸಿದರೆ ಆತ ಅದನ್ನು ತನ್ನ ಜೇಬಿನಿಂದ ಕಟ್ಟುತ್ತಾನೆಯೇ? ಇಲ್ಲ, ಆತ ತಾನು ಮಾರುವ ವಸ್ತುಗಳ ಬೆಲೆ ಏರಿಸಿ ಆ 0.4% ಹೊರೆಯನ್ನು ನೇರವಾಗಿ ಗ್ರಾಹಕರ ತಲೆಗೇ ಕಟ್ಟುತ್ತಾನೆ. ಅಂದರೆ ಈ ಪರೋಕ್ಷ ತೆರಿಗೆಯನ್ನು ಭರಿಸುವುದು ಜನಸಾಮಾನ್ಯರೇ” ಎಂದು ವಾದಿಸಿದ್ದಾರೆ. ₹2,000 ಮೇಲ್ಪಟ್ಟ ವಹಿವಾಟುಗಳು ಒಟ್ಟು ಯುಪಿಐ ಬಳಕೆಯ ಶೇ. 5ರಷ್ಟು ಮಾತ್ರ ಇದ್ದರೂ, ವಹಿವಾಟಿನ ಒಟ್ಟು ಮೌಲ್ಯದಲ್ಲಿ ಇವುಗಳ ಪಾಲು ಬರೋಬ್ಬರಿ ಶೇ. 65ರಷ್ಟಿದೆ ಎಂದು ಅವರು ಅಂಕಿ-ಅಂಶ ನೀಡಿದ್ದಾರೆ.
ಅಮೆರಿಕದ ಕಂಪನಿಗಳಿಗಾಗಿ ಭಾರತೀಯರಿಗೆ ತೆರಿಗೆ?
ಭಾರತದ ‘ಉಚಿತ UPI’ ವ್ಯವಸ್ಥೆಯಿಂದಾಗಿ ಅಮೆರಿಕದ ಬಹುದೊಡ್ಡ ಪೇಮೆಂಟ್ ಕಂಪನಿಗಳಿಗೆ ಭಾರತದಲ್ಲಿ ಲಾಭ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆ ಕಂಪನಿಗಳು ಶೂನ್ಯ-ಶುಲ್ಕ (Zero MDR) ವ್ಯವಸ್ಥೆಯನ್ನು ವಿರೋಧಿಸುತ್ತಲೇ ಬಂದಿದ್ದವು. ಈಗ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡಕ್ಕೆ ಶರಣಾಗಿ, ಅಮೆರಿಕನ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭಾರತೀಯರ ಮೇಲೆ ಈ ‘UPI ಟ್ಯಾಕ್ಸ್’ ಹೇರಿದ್ದಾರೆ ಎಂಬುದು ಕಾಂಗ್ರೆಸ್‌ನ ನೇರ ಆರೋಪವಾಗಿದೆ.
“ಮೋದಿ ಜೀ, ದಯವಿಟ್ಟು ಅಮೆರಿಕದ ಮುಂದೆ ಮಂಡಿಯೂರುವುದನ್ನು ನಿಲ್ಲಿಸಿ, ಬೆನ್ನೆಲುಬು ಪ್ರದರ್ಶಿಸಿ, ನೇರವಾಗಿ ನಿಲ್ಲಿ ಮತ್ತು ಈ ‘UPI ತೆರಿಗೆ’ಯನ್ನು ತಕ್ಷಣವೇ ಹಿಂಪಡೆಯಿರಿ” ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ದಿನಸಿ, ಬಟ್ಟೆ, ಆಸ್ಪತ್ರೆ ಬಿಲ್ ಸೇರಿದಂತೆ ₹2,000 ಕ್ಕಿಂತ ಹೆಚ್ಚಿನ ಯಾವುದೇ ಪೇಮೆಂಟ್ ಮಾಡಿದರೂ, ಗ್ರಾಹಕರ ಮೇಲೂ ಪರೋಕ್ಷವಾಗಿ ಇದರ ಹೊರೆ ಬೀಳಬಹುದು ಎಂಬ ಆತಂಕವನ್ನು ರಾಹುಲ್ ಗಾಂಧಿ ವ್ಯಕ್ತಪಡಿಸಿದ್ದಾರೆ


