ಸಮಾಜದಲ್ಲಿ ಜಾತಿಪದ್ದತಿ ಇಂದಿಗೂ ಜೀವಂತವಾಗಿದೆಯೇ ಎಂದು ಪ್ರಶ್ನಿಸುವವರಿಗೇನು ಕಡಿಮೆ ಇಲ್ಲ.ಆದರೆ ಜಾತಿ ಕಾರಣಕ್ಕೆ ಪುಟಾಣಿ ಮಕ್ಕಳಿಗೆ ಊಟವನ್ನು ನಿರಾಕರಿಸಿ ಅಸ್ಪೃಶ್ಯತೆ ಆಚರಣೆ ಮಾಡಿರುವುದು ನಾಗರಿಕ ಸಮಾಜ ನಿಜಕ್ಕೂ ತಲೆತಗ್ಗಿಸುವಂತೆ ಮಾಡಿದೆ.
ಹೌದು ಚಾಮರಾಜನಗರ ಜಿಲ್ಲೆಯ ಕೆಬ್ಬೇಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ ನಡೆದ ಬಂಡಿ ಪೂಜೆ ಹಬ್ಬದ ಸಂದರ್ಭದಲ್ಲಿ ದಲಿತ ಶಾಲಾ ಮಕ್ಕಳಿಗೆ ಊಟ ಬಡಿಸದೆ ಅಸ್ಪೃಶ್ಯತೆ ಆಚರಿಸಿ, ಅವರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ವಿವರ:
ಗ್ರಾಮದ ಸವರ್ಣೀಯರ ಬೀದಿಯಲ್ಲಿ ನಡೆದ ಬಂಡಿ ಪೂಜೆ ಹಬ್ಬದ ನಿಮಿತ್ತ ಶಾಲಾ ಮಕ್ಕಳನ್ನು ಊಟಕ್ಕಾಗಿ ಕರೆದೊಯ್ಯಲಾಗಿತ್ತು. ಆದರೆ, ಆ ಮಕ್ಕಳು ದಲಿತರು ಎಂಬ ಕಾರಣಕ್ಕೆ ಸವರ್ಣೀಯರು ಅವರಿಗೆ ಊಟ ಬಡಿಸಲು ನಿರಾಕರಿಸಿ, ಹಿಂತಿರುಗಿ ಕಳುಹಿಸಿದ್ದಾರೆ.
ಹಬ್ಬದ ಊಟ ಸಿಗದೆ, ಹಸಿದ ಹೊಟ್ಟೆಯಲ್ಲೇ ಶಾಲೆಗೆ ಹಿಂತಿರುಗಿದ ಮಕ್ಕಳು ಅಪಮಾನದಿಂದ ಬೇಸರ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನ ಸುಮಾರು 3:30ರ ವೇಳೆಗೆ ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಮಕ್ಕಳಿಗೆ ಉಪ್ಪಿಟ್ಟು ತಯಾರಿಸಿ, ಅವರ ಹಸಿವು ನೀಗಿಸುವ ಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.
ಸವರ್ಣೀಯರಿಗೆ ಪ್ರತ್ಯೇಕ, ದಲಿತರಿಗೆ ನಿರಾಕರಣೆ:
ಅನ್ನ-ಸಾಂಬಾರ್ ಸೇರಿದಂತೆ ಎಲ್ಲಾ ರೀತಿಯ ಭೋಜನ ವ್ಯವಸ್ಥೆಯನ್ನು ಸವರ್ಣೀಯರ ಮಕ್ಕಳಿಗೆ ನೀಡಲಾಗಿತ್ತು. ಆದರೆ ಸುಮಾರು 10 ರಿಂದ 12 ದಲಿತ ಮಕ್ಕಳಿಗೆ ಮಾತ್ರ ಊಟ ನೀಡದೆ ವಾಪಸ್ ಕಳುಹಿಸುವ ಮೂಲಕ ತಾರತಮ್ಯ ಎಸಗಲಾಗಿದೆ ಎಂದು ಸ್ಥಳೀಯರು ಹಾಗೂ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
“ನಮ್ಮ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಈ ಹಿಂದೆಯೂ ಮೂರ್ನಾಲ್ಕು ಬಾರಿ ಇಂತಹ ಘಟನೆಗಳು ಜರುಗಿವೆ. ಗ್ರಾಮದಲ್ಲಿ ಇದನ್ನು ಪ್ರಶ್ನಿಸಲು ಯಾರೂ ಮುಂದಾಗುತ್ತಿಲ್ಲ” ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಪೊಲೀಸರ ಭೇಟಿ – ಕ್ರಮಕ್ಕೆ ಆಗ್ರಹ:
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿ ಕುರಿತು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದು, ವಿಚಾರಣೆಗೆ ಠಾಣೆಗೆ ಬರುವಂತೆ ಸೂಚಿಸಿದ್ದಾರೆ.
ಜಾತಿ ಪದ್ದತಿ, ಅಸ್ಪೃಶ್ಯತೆ ಆಚರಣೆ ಈಗ ಎಲ್ಲೂ ನಡೆಯುತ್ತಿಲ್ಲ ಎಂದು ವಾದಿಸುವವರು ಕೂಡಲೇ ಕೆಬ್ಬೇಪುರ ಗ್ರಾಮಕ್ಕೆ ಭೇಟಿ ನೀಡಿ, ಇಂತಹ ಅಸ್ಪೃಶ್ಯತೆ ಎಸಗಿದ ಸವರ್ಣೀಯರನ್ನು ಪ್ರಶ್ನಿಸುವ ಧೈರ್ಯ ತೋರುತ್ತಾರೆಯೇ ಎಂದು ಗ್ರಾಮದ ದಲಿತರು ಪ್ರಶ್ನಿಸುತ್ತಿದ್ದಾರೆ. ಈ ಘಟನೆಯಿಂದ ದಲಿತ ಮಕ್ಕಳ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬ ಅಂದಾಜು ಅವರಿಗೆ ಇದೆಯೇ ಎಂದು ಪ್ರಶ್ನಿಸುತ್ತಾರೆ? ಈ ಅನ್ಯಾಯ ಮತ್ತು ಅವಮಾನವನ್ನು ಖಂಡಿಸಿರುವ ಗ್ರಾಮಸ್ಥರು, ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಮಾಜದಲ್ಲಿ ಜಾತಿಪದ್ದತಿ ಇಂದಿಗೂ ಜೀವಂತವಾಗಿದೆಯೇ ಎಂದು ಪ್ರಶ್ನಿಸುವವರಿಗೇನು ಕಡಿಮೆ ಇಲ್ಲ.ಆದರೆ ಜಾತಿ ಕಾರಣಕ್ಕೆ ಪುಟಾಣಿ ಮಕ್ಕಳಿಗೆ ಊಟವನ್ನು ನಿರಾಕರಣೆ ಮಾಡಿ ಅಸ್ಪೃಶ್ಯತೆ ಆಚರಣೆ ಮಾಡಿರುವುದು ನಾಗರಿಕ ಸಮಾಜ ನಿಜಕ್ಕೂ ತಲೆತಗ್ಗಿಸುವಂತೆ ಮಾಡಿದೆ.


