ಎಸ್ಐಆರ್ (SIR) ಫಾರಂ 7 ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವು ವ್ಯವಸ್ಥಿತವಾಗಿ ಗೊಂದಲಗಳನ್ನು ಸೃಷ್ಟಿಸಿದ್ದು, ಬಿಜೆಪಿ ಕಾರ್ಯಕರ್ತರ ವಿರುದ್ಧ ಅನ್ಯಾಯವಾಗಿ ಎಫ್‌ಐಆರ್ ದಾಖಲಿಸುವುದನ್ನು ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಪೊಲೀಸ್ ಠಾಣೆಗಳು ಹಾಗೂ ಎಸ್‌ಪಿ ಕಚೇರಿಗಳಿಗೂ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ಜರುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯದ ಸಹ ಉಸ್ತುವಾರಿಗಳಾಗಿ ಜವಾಬ್ದಾರಿ ವಹಿಸಿಕೊಂಡಿರುವ ಕಾಸಂ ವೆಂಕಟೇಶ್ವರಲು ಅವರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಫಾರಂ 7 ವಿವಾದದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮಕ್ಕೆ ರಾಜ್ಯ ಹೈಕೋರ್ಟ್ ಈಗಾಗಲೇ ತೀವ್ರ ಛೀಮಾರಿ ಹಾಕಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಖಾಯಂ ನಿವಾಸಿ ದೃಢಪತ್ರ (PRC) ನೀಡುವ ಅಧಿಕಾರವನ್ನು ಕೇವಲ ತಹಶೀಲ್ದಾರ್ ಹಾಗೂ ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಮಾತ್ರ ನೀಡಬೇಕೇ ಹೊರತು, ಪಿಡಿಒಗಳು ಮತ್ತು ಮುನ್ಸಿಪಲ್ ಕಮಿಷನರ್‌ಗಳಿಗೂ ಆ ಅಧಿಕಾರ ನೀಡಿರುವುದು ಸಂಪೂರ್ಣ ಅವೈಜ್ಞಾನಿಕ ಮತ್ತು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರ ತಕ್ಷಣವೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಈ ಕುರಿತು ಅಧಿಕೃತ ಪತ್ರ ಬರೆಯುವುದರೊಂದಿಗೆ ಚುನಾವಣಾ ಆಯೋಗದ ಗಮನಕ್ಕೂ ತರಲಾಗುವುದು ಎಂದು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿರುವುದಾಗಿ ಅವರು ವಿವರಿಸಿದರು.
ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ಯಾವುದೇ ನೆಪ ಒಡ್ಡಿ ಮುಂದೂಡದಂತೆ ಸರ್ಕಾರಕ್ಕೆ ತಾಕೀತು ಮಾಡಿರುವ ವಿಜಯೇಂದ್ರ, ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂಬರುವ ಉಪಚುನಾವಣೆಗಳಲ್ಲಿ ಒಟ್ಟಾಗಿ ಎದುರಿಸಲು ತೀರ್ಮಾನಿಸಲಾಗಿದೆ ಎಂದರು. ಅಲ್ಲದೆ, ಪ್ರತಿ ಜಿಲ್ಲೆಗೂ ಪ್ರಭಾರಿಗಳ ನೇಮಕ ಹಾಗೂ ತಕ್ಷಣವೇ ಚುನಾವಣಾ ನಿರ್ವಹಣಾ ಸಮಿತಿ ರಚಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ಆಡಳಿತರೂಢ ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ ಹಾಗೂ ಹಗ್ಗಜಗ್ಗಾಟ ತೀವ್ರಗೊಂಡಿದ್ದು, ಸ್ವತಃ ಅವರ ಶಾಸಕರು ಮತ್ತು ಸಚಿವರೇ ಸ್ಟಿಂಗ್ ಆಪರೇಷನ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ ವಿಜಯೇಂದ್ರ, “ಉಪ್ಪು ತಿಂದವನು ನೀರು ಕುಡಿಯಲೇಬೇಕು, ಈ ಸ್ಟಿಂಗ್ ಪ್ರಕರಣಗಳ ಸತ್ಯಾಸತ್ಯತೆ ಹೊರಬರಲಿ” ಎಂದರು. ಕೆಪಿಎಂಡಿ ಅಥವಾ ಕೆಪಿಎಸ್‌ಸಿ (KPSC) ಅಕ್ರಮಗಳ ಕುರಿತ ತನಿಖೆಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಅವರದೇ ಅಧಿಕಾರದಲ್ಲಿರುವ ಸರ್ಕಾರವಿದ್ದಾಗ ತನಿಖೆ ಮಾಡಿಸಲು ಅಡ್ಡಿಯೇನು? ಎಸ್ಐಟಿ ತನಿಖೆಗೆ ತಡೆಯಾಜ್ಞೆ ತರಲು ಸುಪ್ರೀಂ ಕೋರ್ಟ್‌ಗೆ ಮೊದಲು ಹೋದವರು ಯಾರು? ಈ ಸರ್ಕಾರಕ್ಕೆ ಮತ್ತು ಸಚಿವರಿಗೆ ಅಂತಹ ಆತಂಕ ಯಾಕೆ?” ಎಂದು ಮರುಪ್ರಶ್ನೆ ಹಾಕಿದರು. ಜಿಪಂ ಹಾಗೂ ತಾಪಂ ಮೀಸಲಾತಿ ಪಟ್ಟಿಯಲ್ಲಿ ಆಡಳಿತ ಪಕ್ಷಕ್ಕೆ ಅನುಕೂಲವಾಗುವಂತೆ ಗೊಂದಲಗಳನ್ನು ಸೃಷ್ಟಿಸಲಾಗಿದ್ದು, ಈ ಸರ್ಕಾರದ ಇಚ್ಛಾಶಕ್ತಿಯ ಬಗ್ಗೆಯೂ ಅನುಮಾನವಿರುವುದಾಗಿ ಅವರು ಆರೋಪಿಸಿದರು.


