ಕೋಳಿ ಸಾಕಾಣಿಕೆ ಕೃಷಿಯಲ್ಲಿ ಲಾಭಾಂಶವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು, ಕನಿಷ್ಠ ಸಾಕಾಣಿಕೆ ದರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಹಾಗೂ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೃಹತ್ “ವಿಧಾನ ಸೌಧ ಚಲೋ” ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಈ ಸಂಬಂಧ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
“ರಾಜ್ಯದ ಕುಕ್ಕುಟೋದ್ಯಮದಲ್ಲಿ ಸುಮಾರು 25,000 ಕೋಳಿ ಸಾಕಾಣಿಕೆದಾರ ರೈತರು, ಲಕ್ಷಕ್ಕೂ ಹೆಚ್ಚಿನ ಕೃಷಿ ಕೂಲಿಕಾರರು, ಹತ್ತಾರು ಸಾವಿರ ಮಾಂಸದ ಅಂಗಡಿ ಮಾಲೀಕರು ಹಾಗೂ ಆ ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹತ್ತಾರು ಕಂಪನಿಗಳು ಮತ್ತು ಆರೋಗ್ಯ ಪೂರ್ಣ ಕೋಳಿ ಮಾಂಸವನ್ನು ಸೇವಿಸುವ ಕೋಟ್ಯಂತರ ಗ್ರಾಹಕರನ್ನು ಒಳಗೊಂಡ ಈ ಉದ್ಯಮ ರಾಜ್ಯದಲ್ಲಿ ಗಮನಾರ್ಹ ಮುನ್ನಡೆ ಸಾಧಿಸುತ್ತಿದೆ” ಎಂದು ರೈತರು ಹೇಳಿದ್ದಾರೆ.
“ಆದರೆ, ಕಳೆದ ಹಲವು ವರ್ಷಗಳಿಂದ ಕೋಳಿ ಸಾಕಾಣಿಕೆದಾರ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಂಡಿವೆ. ಹಲವು ರೈತರು ತಮ್ಮ ಬಂಡವಾಳ ಕಳೆದುಕೊಂಡು ಬ್ಯಾಂಕ್ ಸಾಲಗಳನ್ನು ತೀರಿಸಲಾಗದೆ ದಿವಾಳಿಯ ಅಂಚಿಗೆ ತಲುಪಿದ್ದಾರೆ. ಕಂಪನಿಗಳ ಶೋಷಣೆಯ ಜೊತೆಗೆ, ಇಷ್ಟು ದೊಡ್ಡ ಕ್ಷೇತ್ರದ ವಹಿವಾಟಿನ ಬಗ್ಗೆ ಕನಿಷ್ಠ ನಿಖರ ಮಾಹಿತಿಯೂ (ರೈತರು, ಕಂಪನಿಗಳು, ವ್ಯಾಪಾರಸ್ಥರ ಅಂಕಿ-ಸಂಖ್ಯೆಗಳು) ಸರ್ಕಾರಗಳ ಬಳಿ ಇಲ್ಲದಿರುವುದು ಮತ್ತು ಸರ್ಕಾರಗಳ ನಿರ್ಲಕ್ಷ್ಯವೇ ರೈತರ ಈ ಸ್ಥಿತಿಗೆ ಕಾರಣ” ಎಂದು ಸಂಘದ ಮುಖಂಡರು ಆರೋಪಿಸಿವೆ.
ದರ ನಿಗದಿ ಇತಿಹಾಸ ಮತ್ತು ಜಾರಿ ವಿಳಂಬದ ಆರೋಪ
“2021ರಲ್ಲಿ ರೈತರ ಸತತ ಹೋರಾಟದ ಒತ್ತಡದ ಹಿನ್ನೆಲೆಯಲ್ಲಿ 2021ರಲ್ಲಿ ಅಂದಿನ ಪಶುಸಂಗೋಪನಾ ಇಲಾಖೆಯ ಜವಾಬ್ದಾರಿ ಹೊಂದಿದ್ದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕನಿಷ್ಠ ಸಾಕಾಣಿಕೆ ದರವನ್ನು ಪ್ರತಿ ಕೆ.ಜಿ. ತೂಕಕ್ಕೆ ರೂ.6.20 ನಿಗದಿಪಡಿಸಲಾಗಿತ್ತು. ಉತ್ಪಾದನಾ ವೆಚ್ಚ ಏರಿಕೆ ಹಾಗೂ ರೈತರ ನಷ್ಟವನ್ನು ಗಮನಿಸಿ ದರವನ್ನು ರೂ.20ಕ್ಕೆ ಏರಿಸುವಂತೆ ಒತ್ತಾಯಗಳು ಕೇಳಿಬಂದಿದ್ದವು. ಇದಕ್ಕೆ ಸ್ಪಂದಿಸಿದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ, ಪಶುಸಂಗೋಪನಾ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಕಂಪನಿ ಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಮ್ಮುಖದಲ್ಲಿ ಸಭೆಗಳನ್ನು ನಡೆಸಿ, ಕನಿಷ್ಠ ಸಾಕಾಣಿಕೆ ದರವಾಗಿ ಪ್ರತಿ ಕೆ.ಜಿ. ತೂಕಕ್ಕೆ ರೂ.10 ನಿಗದಿಪಡಿಸಲಾಗಿತ್ತು. ಪಶುಸಂಗೋಪನಾ ಕಾರ್ಯದರ್ಶಿಗಳು ಟಿಪ್ಪಣಿ ಸಂಖ್ಯೆ ಪ.ಸಂ.ಮೀ.01 ಕಕೋಮು 2026/25-05-26 ರಂದು ಆಯುಕ್ತರಿಗೆ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದ್ದರು” ಎಂದು ರೈತರು ಮಾಹಿತಿ ನೀಡಿದ್ದಾರೆ.
“ಈ ಆದೇಶ ಜಾರಿಯಾಗುವ ಪ್ರಕ್ರಿಯೆ ನಡೆಯುತ್ತಿದ್ದ ವೇಳೆಯಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆದೇಶ ಹೊರಬಿದ್ದು ಏಳು ತಿಂಗಳಾದರೂ, ಮುಖ್ಯಮಂತ್ರಿಗಳ ನಿರ್ದೇಶನದ ಅಗತ್ಯವಿದೆ ಎಂದು ಪಶುಸಂಗೋಪನಾ ಇಲಾಖೆ ಆಯುಕ್ತರು ಹಾಗೂ ಇಂಟಿಗ್ರೇಷನ್ ಕಂಪನಿಗಳ ಮುಖ್ಯಸ್ಥರು ಹೇಳುತ್ತಿರುವುದರಿಂದ ರೈತರಿಗೆ ನ್ಯಾಯಯುತ ದರ ಸಿಗುತ್ತಿಲ್ಲ. ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡದೆ ರೈತರಿಗೆ ಅನ್ಯಾಯವಾಗುತ್ತಿದೆ” ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈ ಹಿನ್ನೆಲೆಯಲ್ಲಿ, ಪಶುಸಂಗೋಪನಾ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಚಿವರ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಭೆ ಕರೆದು, ದರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು” ಎಂದು ಮುಖ್ಯಮಂತ್ರಿಗಳನ್ನು ಕೋರಲಾಗಿದೆ.
ಪ್ರಮುಖ ಹಕ್ಕೊತ್ತಾಯಗಳು
ಕನಿಷ್ಠ ಸಾಕಾಣಿಕೆ ವೆಚ್ಚವಾಗಿ ಪ್ರತಿ ಕೆ.ಜಿ.ಗೆ ರೂ.10 ನಿಗದಿಯ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸುವಂತೆ ಇಂಟಿಗ್ರೇಷನ್ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು; ಪ್ರತಿ ವರ್ಷ ಕನಿಷ್ಠ ಶೇ. 10ರಷ್ಟು ಸಾಕಾಣಿಕೆ ವೆಚ್ಚ ಹೆಚ್ಚಿಸಬೇಕು.
ಕರ್ನಾಟಕ ಕುಕ್ಕುಟ ನಿಯಂತ್ರಣ ಹಾಗೂ ಅಭಿವೃದ್ಧಿ ಮಸೂದೆ 2022 ಅನ್ನು ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಬೇಕು.
ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95(1) ಆ ಗೆ ಸೂಕ್ತ ತಿದ್ದುಪಡಿ ತರಬೇಕು.
ಕೆಎಂಎಫ್ ಮಾದರಿಯಲ್ಲಿ ಸಹಕಾರ ರಂಗದಲ್ಲಿ ಕುಕ್ಕುಟ ಉದ್ಯಮವನ್ನು ಅಭಿವೃದ್ಧಿಪಡಿಸಿ ಕಾರ್ಪೊರೇಟ್ ಶೋಷಣೆ ನಿಯಂತ್ರಿಸಬೇಕು.
ಕೋಳಿ ಸಾಕಾಣಿಕೆ ರೈತರಿಗೆ ಅಗತ್ಯವಿರುವ ಎಲ್ಲಾ ಸವಲತ್ತು-ಸೌಲಭ್ಯ, ಸಹಾಯ ಹಾಗೂ ಸುಲಭ ಸಾಲ ಒದಗಿಸಬೇಕು.
ಗುಣಮಟ್ಟದ ಕೋಳಿ ಮರಿ, ಕ್ವಾಲಿಟಿ ಕೋಳಿ ಆಹಾರ ಹಾಗೂ ಉತ್ತಮ ಔಷಧವನ್ನು ರೈತರಿಗೆ ಒದಗಿಸುವುದನ್ನು ಖಾತ್ರಿಪಡಿಸಬೇಕು; ರೈತರ ಮೇಲೆ ಔಷಧ ಮತ್ತಿತರ ವೆಚ್ಚಗಳ ಹೊರೆ ಹಾಕದಂತೆ ಕಂಪನಿಗಳ ಮೇಲೆ ಸೂಕ್ತ ನಿಯಂತ್ರಣ ವಿಧಿಸಬೇಕು.


