ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿ ದಳ (ಎಸ್ಎಡಿ) ಮೈತ್ರಿ ಘೋಷಣೆ ಮಾಡಿವೆ. ಇದರೊಂದಿಗೆ ಅಕಾಲಿ ದಳ ಮತ್ತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್ಡಿಎ) ಮರಳಿದ್ದು, ಪಂಜಾಬ್ನಲ್ಲಿ ಅಕಾಲಿ ದಳ ‘ಬಡೆ ಭಾಯಿ’ (ಹಿರಿಯ ಸಹೋದರ) ಪಾತ್ರವನ್ನು ನಿರ್ವಹಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ (ನ.24) ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, “ಅಕಾಲಿ ದಳದೊಂದಿಗಿನ ನಮ್ಮ ಸಂಬಂಧ ಯಾವಾಗಲೂ ಗಟ್ಟಿಯಾಗಿದೆ. ವಾಜಪೇಯಿ–ಅಡ್ವಾಣಿ ಕಾಲದಿಂದಲೂ ನಮ್ಮ ಬಾಂಧವ್ಯವಿದೆ” ಎಂದಿದ್ದಾರೆ. ಎನ್ಡಿಎ ಮೈತ್ರಿಕೂಟ ಪಂಜಾಬ್ನ ಎಲ್ಲಾ 117 ವಿಧಾಸಭಾ ಕ್ಷೇತ್ರಗಳಲ್ಲೂ ಒಟ್ಟಾಗಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.
ಪಂಜಾಬ್ನಲ್ಲಿ ವ್ಯಾಪಕವಾಗಿರುವ ಮಾದಕವಸ್ತು ಹಾವಳಿಯನ್ನು ಡಿಸೆಂಬರ್ 30, 2029ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ. ಪಂಜಾಬ್ನಲ್ಲಿ ‘ಡಬಲ್ ಇಂಜಿನ್’ ಸರ್ಕಾರ ರಚನೆಯಾದ ಮೂರು ತಿಂಗಳೊಳಗೆ ರೈತರ ಸಮಸ್ಯೆಗಳು ಹಾಗೂ ಇತರ ಬಾಕಿ ಬೇಡಿಕೆಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಅಕಾಲಿ ದಳದ ನಾಯಕರ ಸುದೀರ್ಘ ಮಾತುಕತೆಯ ಬಳಿಕ ಪಂಜಾಬ್ಗಾಗಿ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದ್ದು, ಎನ್ಡಿಎ ಸರ್ಕಾರ ಅದನ್ನು ಜಾರಿಗೆ ತರಲಿದೆ ಎಂದು ಶಾ ವಿವರಿಸಿದರು.
ಎಎಪಿ ವಿರುದ್ಧ ವಾಗ್ದಾಳಿ
ಮೈತ್ರಿ ಘೋಷಣೆಯ ಬೆನ್ನಲ್ಲೇ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ಎನ್ಡಿಎ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್ನಿಂದ ಎಎಪಿ ಸರ್ಕಾರವನ್ನು ಜನರು ಮತದಾನದ ಮೂಲಕ ಕೆಳಗಿಳಿಸಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಎಸ್ಎಡಿ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಮಾತನಾಡಿ, ಈ ಮೈತ್ರಿ ಕೇವಲ ರಾಜಕೀಯ ಹೊಂದಾಣಿಕೆಯಲ್ಲ, ಪಂಜಾಬ್ನ ಹಿತದೃಷ್ಟಿಯಿಂದ ರೂಪುಗೊಂಡ ಸಹಜ ಬಾಂಧವ್ಯವಾಗಿದೆ ಎಂದಿದ್ದಾರೆ. 106 ವರ್ಷಗಳಿಗೂ ಹಳೆಯದಾದ ತಮ್ಮ ಪಕ್ಷವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೂ ಬಿಜೆಪಿಯೊಂದಿಗೆ ಮೈತ್ರಿ ಹೊಂದಿತ್ತು ಎಂದು ಸ್ಮರಿಸಿದ ಅವರು, ಎಎಪಿ ಆಡಳಿತದಲ್ಲಿ ಪಂಜಾಬ್ನ ಆಡಳಿತ ವ್ಯವಸ್ಥೆ ಕುಸಿದಿದ್ದು, ದರೋಡೆಕೋರರ ಅಟ್ಟಹಾಸ ಹೆಚ್ಚಿದೆ ಎಂದು ದೂರಿದ್ದಾರೆ.


