ಭಾನುವಾರ (ಅಕ್ಟೋಬರ್ 11, 2026) ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರನ್ನು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) ಸಿಬ್ಬಂದಿ ವಶಕ್ಕೆ ಪಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ವಾಹನದೊಳಗೆ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ ನಂತರ, ರಸ್ತೆ ಬದಿಯಲ್ಲಿ ಬಿಟ್ಟು ಹೋದರು ಎಂದು ಬ್ರಿಟ್ಟಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬ್ರಿಟ್ಟಾಸ್ ಅವರು, ತಾನು ಸಂಸತ್ ಸದಸ್ಯನೆಂದು ಪದೇ ಪದೇ ಹೇಳುತ್ತಿದ್ದರೂ, ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರನ್ನು ಸಿಆರ್ಪಿಎಫ್ ಸಿಬ್ಬಂದಿ ಎಳೆದುಕೊಂಡು ಹೋಗುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.
“ನಾನು ಸಂಸದ ಎಂದು ಅವರಿಗೆ ಹೇಳಿದರೂ ಸಹ, ಸಿಆರ್ಪಿಎಫ್ ಸಿಬ್ಬಂದಿ ನನ್ನ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದರು. ಅವರು ನನ್ನನ್ನು ಸೀಟಿಗೆ ಒತ್ತಿ ಹಿಡಿದು, ನನ್ನ ಕತ್ತು ಹಿಸುಕಲು (ಉಸಿರುಗಟ್ಟಿಸಲು) ಯತ್ನಿಸಿದರು. ಈ ದೇಶದಲ್ಲಿ ಒಬ್ಬ ಸಂಸದನ ಪರಿಸ್ಥಿತಿ ಹೀಗಿದೆ. ದೆಹಲಿ ಪೊಲೀಸ್ ಏನೇ ಮಾಡಿದರೂ, ನಮ್ಮ ಕೊನೆಯ ಉಸಿರಿರುವವರೆಗೂ ನಾವು ಈ ಹೋರಾಟದಲ್ಲಿ ಮುಂದುವರಿಯುತ್ತೇವೆ” ಬ್ರಿಟ್ಟಾಸ್ ಹೇಳಿದ್ದಾರೆ.
ಬ್ರಿಟ್ಟಾಸ್ ಅವರ ಮೇಲೆ ಹಲ್ಲೆಯಾಗಿ ಅವರು ಅಸ್ವಸ್ಥಗೊಂಡಿರುವ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ, ಬ್ರಿಟ್ಟಾಸ್ ದೆಹಲಿಯ ಆರ್ಎಂಎಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಮತ್ತು ರಾಜ್ಯಸಭಾ ಸದಸ್ಯ ಎ.ಎ ರಹೀಮ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಸಿಪಿಐ(ಎಂ) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಹಗರಣ ಖಂಡಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಿಪಿಐ(ಎಂ) ಮತ್ತು ಭಾರತೀಯ ವಿದ್ಯಾರ್ಥಿ ಫೆಡರೇಶನ್ (SFI) ಕಾರ್ಯಕರ್ತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಸತತ ಎರಡನೇ ದಿನ ಇದಾಗಿದೆ.
ರಾಷ್ಟ್ರೀಯ ಅಧ್ಯಕ್ಷ ಆದರ್ಶ್ ಎಂ. ಸಾಜಿ ಸೇರಿದಂತೆ ಹಲವಾರು ಎಸ್ಎಫ್ಐ ಮುಖಂಡರು ಮತ್ತು ಕಾರ್ಯಕರ್ತರು ಪೊಲೀಸ್ ದೌರ್ಜನ್ಯವನ್ನು ಆರೋಪಿಸಿದ್ದಾರೆ. ಗಾಯಗೊಂಡಿರುವ ಆದರ್ಶ್ ಸಾಜಿ ಮತ್ತು ಇತರ ಕಾರ್ಯಕರ್ತರನ್ನು ಪೊಲೀಸ್ ವ್ಯಾನ್ಗಳ ಒಳಗೆ ಕರೆದೊಯ್ಯುತ್ತಿರುವ ದೃಶ್ಯಗಳನ್ನು ಎಸ್ಎಫ್ಐನ ಅಧಿಕೃತ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಲಾಗಿದೆ.
“ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಕೊಲೆ — ಮೊಬೈಲ್ ಜೈಲುಗಳ (ಪೊಲೀಸ್ ವ್ಯಾನ್) ಒಳಗೆ ಎಸ್ಎಫ್ಐ ಕಾರ್ಯಕರ್ತರನ್ನು ಕಾಲಿನಿಂದ ಒದ್ದು, ಮನಬಂದಂತೆ ಥಳಿಸಲಾಗಿದೆ. ಮಹಿಳಾ ಹೋರಾಟಗಾರರ ಮೇಲೆ ಪುರುಷ ಪೊಲೀಸ್ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ ಮತ್ತು ಕಿರುಕುಳ ನೀಡಿದ್ದಾರೆ. ಅವರನ್ನು ಹೊಡೆದು, ಒದ್ದು, ತುಳಿಯಲಾಗಿದೆ. ಇದು ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಇದು ವ್ಯವಸ್ಥಿತ ಭಯೋತ್ಪಾದನೆಯ ಅತ್ಯುತ್ತಮ ರೂಪವಾಗಿದೆ” ಎಂದು ಎಸ್ಎಫ್ಐ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಮತ್ತೊಂದು ವಿಡಿಯೋದಲ್ಲಿ, ವಶಕ್ಕೆ ಪಡೆದ ಎಸ್ಎಫ್ಐ ಕಾರ್ಯಕರ್ತರೊಬ್ಬರು ಪೊಲೀಸ್ ವಾಹನದ ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ.


