ಮುಂಬರುವ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ವಿವಾದಾತ್ಮಕ ಹಾಗೂ ದೋಷಪೂರಿತವಾಗಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಅಂತಿಮ ಮತದಾರರ ಪಟ್ಟಿಯನ್ನು ಬಳಸದೆ, 2025ರ ಮತಪಟ್ಟಿಯನ್ನೇ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ ಬಳಸಬೇಕು ಎಂದು ‘SIR ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ’ ರಾಜ್ಯ ಚುನಾವಣಾ ಆಯುಕ್ತ ಡಾ. ಜಿ.ಎನ್. ಸಂಗ್ರೇಶಿ ಅವರಿಗೆ ಮಂಗಳವಾರ (ನ. 24) ಮನವಿ ಸಲ್ಲಿಸಿದೆ.
ಎಸ್ಐಆರ್ ಪ್ರಕ್ರಿಯೆಯು ಅಸಂವಿಧಾನಿಕವಾಗಿದ್ದು, ಸುಪ್ರೀಂ ಕೋರ್ಟ್ನಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ. ತಪ್ಪಾಗಿ ಹೆಸರು ಡಿಲೀಟ್ ಆದವರಿಂದ ಮತ್ತೆ ಫಾರಂ-6 ತುಂಬಿಸಿಕೊಂಡಿದ್ದು ಹಾಗೂ ಮನೆ ಬದಲಾಯಿಸಿದವರ ಹೆಸರು ಅಳಿಸಿದ್ದು ತಪ್ಪು ಎಂದು ಕೇಂದ್ರ ಚುನಾವಣಾ ಆಯೋಗವೇ ಪರೋಕ್ಷವಾಗಿ ಒಪ್ಪಿಕೊಂಡು, ನವೆಂಬರ್ 6ರಂದು ಹೊಸ ಕಾರ್ಯಸೂಚಿ ಹೊರಡಿಸಿದೆ ಎಂದು ಒಕ್ಕೂಟ ತಿಳಿಸಿದೆ.
ಸರ್ಕಾರಿ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 5.2 ಕೋಟಿ ವಯಸ್ಕರಿದ್ದಾರೆ. ಆದರೆ ಎಸ್ಐಆರ್ ಅಂತಿಮ ಪಟ್ಟಿಯಲ್ಲಿ ಕೇವಲ 4.5 ಕೋಟಿ ಮತದಾರರು ಮಾತ್ರ ಉಳಿದಿದ್ದು, ಬರೋಬ್ಬರಿ 70 ಲಕ್ಷ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿಯೇ ಅರ್ಧದಷ್ಟು ಮತದಾರರು ಕಣ್ಮರೆಯಾಗಿರುವುದು ತರ್ಕಹೀನವಾಗಿದೆ ಎಂದು ಒಕ್ಕೂಟ ಪ್ರಶ್ನಿಸಿದೆ.
‘ಮತ ಕಾವಲು ಸಮಿತಿ’ಯು ರಾಜ್ಯದ 73 ಬೂತ್ಗಳಲ್ಲಿ ನಡೆಸಿದ ಪರಿಶೀಲನೆಯಲ್ಲಿ ಅರ್ಹ ಮತದಾರರ ಹೆಸರುಗಳು ಅಕ್ರಮವಾಗಿ ಡಿಲೀಟ್ ಆಗಿರುವ ನೂರಾರು ಉದಾಹರಣೆಗಳು ಪತ್ತೆಯಾಗಿವೆ. ಇಡೀ ರಾಜ್ಯದ 54 ಸಾವಿರ ಬೂತ್ಗಳಲ್ಲಿ ಇಂತಹ ಎಷ್ಟು ಪ್ರಕರಣಗಳಿರಬಹುದು ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ಎಸ್ಐಆರ್ ಅಂತಿಮ ಪಟ್ಟಿಯಲ್ಲಿ ಸರಿಯಾದ ವಿಳಾಸವೇ ಇಲ್ಲದ 20 ಲಕ್ಷ ಎಂಟ್ರಿಗಳಿರುವುದನ್ನು ಒಕ್ಕೂಟದ ಡಾಟಾ ತಂಡ ಪತ್ತೆಹಚ್ಚಿದೆ. ಅಲ್ಲದೆ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ. 25ರಷ್ಟು ಯುವ ಮತದಾರರು ನೋಂದಣಿಯಾಗದೆ ಹೊರಗುಳಿದಿದ್ದಾರೆ ಎಂದು ಬಿಕ್ಕಂ ಗುಜ್ಜ ಅವರ ಅಧ್ಯಯನ ತಿಳಿಸಿದೆ. ಇಡೀ ದೇಶದಲ್ಲೇ ಅತಿ ಹೆಚ್ಚು ಮತದಾರರ ಹೆಸರು ಡಿಲೀಟ್ ಆಗಿರುವುದು ಕರ್ನಾಟಕದಲ್ಲಿಯೇ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಒಕ್ಕೂಟದ ಪ್ರಮುಖ ಹಕ್ಕೊತ್ತಾಯಗಳು :
ರಾಜಸ್ಥಾನ ಮತ್ತು ಉತ್ತರ ಪ್ರದೇಶದ ರಾಜ್ಯ ಚುನಾವಣಾ ಆಯೋಗಗಳು ಎಸ್ಐಆರ್ ಪಟ್ಟಿಯನ್ನು ಕೈಬಿಟ್ಟು 2025ರ ಮತಪಟ್ಟಿಯನ್ನೇ ಬಳಸಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ದೋಷಪೂರಿತ ಹಾಗೂ ನ್ಯಾಯಾಂಗ ವಿಚಾರಣೆಯಲ್ಲಿರುವ ಎಸ್ಐಆರ್ ಪಟ್ಟಿಯನ್ನು ಬಳಸಬಾರದು.
2025ರ ಮತದಾರರ ಪಟ್ಟಿಯನ್ನು ‘ಚುನಾವಣಾ ಆಯೋಗದ ಮ್ಯಾನ್ಯುಯಲ್ 2023’ರ ಪ್ರಕಾರ ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳ ಮೂಲಕ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ ಪರಿಷ್ಕರಿಸಿ, ಸ್ಥಳೀಯ ಚುನಾವಣೆಗಳಿಗೆ ಬಳಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಕೆ.ಎಂ. ವೀರಸಂಗಯ್ಯ, ನಾಗೇಶ್ ಅರಳಕುಪ್ಪೆ, ಆರ್. ಬೆಳ್ಳಂಕೊಂಡ, ನಯನಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.


