ಮುಂಬೈಯಿಂದ ಉತ್ತರ ಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮುಸ್ಲಿಂ ಯುವಕನೊಬ್ಬ ಆರೋಪಿಸಿದ್ದಾನೆ. ದಾಳಿಕೋರರು ತನ್ನ ಶರ್ಟ್ ಹರಿದು, ಥಳಿಸಿ, ಬಲವಂತವಾಗಿ “ಜೈ ಶ್ರೀ ರಾಮ್” ಎಂದು ಜಪಿಸುವಂತೆ ಒತ್ತಾಯಿಸಿದರು ಎಂದು ಆತ ತಿಳಿಸಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವೀಡಿಯೊದ ಪ್ರಕಾರ, ಸೆಪ್ಟೆಂಬರ್ 18 ರಂದು ನಡೆದಿದೆ ಎನ್ನಲಾದ ಈ ಘಟನೆಯಲ್ಲಿ, ರೈಲು ಕಲ್ಯಾಣ್ ನಿಲ್ದಾಣವನ್ನು ದಾಟಿದ ತಕ್ಷಣ ತಾನು ವಾಶ್‌ರೂಮ್‌ನಿಂದ ಹೊರಬಂದಾಗ ಕೆಲವು ವ್ಯಕ್ತಿಗಳು ತನ್ನನ್ನು ತಡೆದರು ಎಂದು ಯುವಕ ಹೇಳಿರುವುದು ಕೇಳಿಸುತ್ತದೆ.
ಅವರು ತನ್ನ ಕೊರಳಿನ ಸರವನ್ನು ಗಮನಿಸಿ, ಅದು ಚಿನ್ನದ್ದು ಎಂದು ಭಾವಿಸಿ ಅದರ ಬಗ್ಗೆ ವಿಚಾರಿಸಿ, ಅದನ್ನು ಹಸ್ತಾಂತರಿಸುವಂತೆ ಕೇಳಿದರು ಎಂದು ಆತ ತಿಳಿಸಿದ್ದಾನೆ. ಅದು ಅಸಲಿ ಚಿನ್ನವಲ್ಲ, ಕೃತಕ ಆಭರಣ ಎಂದು ತಾನು ಹೇಳಿದರೂ ಅವರು ಅದನ್ನು ಕಿತ್ತುಕೊಂಡರು ಎಂದು ಆರೋಪಿಸಿದ್ದಾನೆ.
ಸರವನ್ನು ಹಿಂತಿರುಗಿಸಲು ನಿರಾಕರಿಸಿದ ದಾಳಿಕೋರರು, ಬಲವಂತವಾಗಿ “ಜೈ ಶ್ರೀ ರಾಮ್” ಎನ್ನುವಂತೆ ಒತ್ತಾಯಿಸಿದರು ಎಂದು ಆಪಾದಿಸಿದ್ದಾನೆ.
ತನ್ನ ಶರ್ಟ್ ಅನ್ನು ಹರಿದು ಅದರಿಂದ ತನಗೆ ಕಟ್ಟಿಹಾಕಲಾಯಿತು ಎಂದು ಆತ ದೂರಿದ್ದಾನೆ. ದಾಳಿಕೋರರು ಕತ್ತಿಗಳನ್ನು ಹೊಂದಿದ್ದರು ಎಂದು ಯುವಕ ಆರೋಪಿಸಿದ್ದರೂ, ವೀಡಿಯೊದಲ್ಲಿ ಯಾವುದೇ ಹರಿತವಾದ ಆಯುಧಗಳು ಕಂಡುಬಂದಿಲ್ಲ. ಅಲ್ಲದೆ, ದಾಳಿಕೋರರು ಮರಾಠಿಯಲ್ಲಿ ನಿಂದಿಸುತ್ತಾ, ಮಧ್ಯಪ್ರವೇಶಿಸದಂತೆ ಸಾರ್ವಜನಿಕರಿಗೆ ಬೆದರಿಕೆ ಹಾಕಿದರು ಎಂದೂ ಆತ ಹೇಳಿಕೊಂಡಿದ್ದಾನೆ.
ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ತಾನು ದಾಳಿಕೋರರನ್ನು ಗುರುತಿಸಬಲ್ಲೆ ಎಂದು ಆತ ತಿಳಿಸಿದ್ದಾನೆ. ನನ್ನ ದೂರು ದಾಖಲಿಸಿಕೊಳ್ಳಲು ರೈಲ್ವೆ ಪೊಲೀಸರು ನಿರಾಕರಿಸಿದ್ದಾರೆ ಎಂದೂ ಆತ ಆರೋಪಿಸಿದ್ದಾನೆ.


