ಎಂ3ಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026 ರ ಪ್ರಕಾರ, ಭಾರತದ ಬಿಲಿಯನೇರ್‌ಗಳ ಸಂಖ್ಯೆಯು ದಾಖಲೆಯ 391 ಕ್ಕೆ ತಲುಪಿದ್ದು, ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿರುವ ಗೌತಮ್ ಅದಾನಿ ಮತ್ತು ಅವರ ಕುಟುಂಬವು ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಅದಾನಿಯವರ ಸಂಪತ್ತು ಶೇ. 13 ರಷ್ಟು ಏರಿಕೆಯಾಗಿ ರೂ. 9.23 ಲಕ್ಷ ಕೋಟಿಗೆ (96 ಬಿಲಿಯನ್ ಯುಎಸ್ ಡಾಲರ್) ತಲುಪಿದ್ದರೆ, ಅಂಬಾನಿಯವರ ಸಂಪತ್ತು ಶೇ 10 ರಷ್ಟು ಕುಸಿದು ರೂ. 8.63 ಲಕ್ಷ ಕೋಟಿಗೆ ಇಳಿದಿದೆ. ಇದರಿಂದಾಗಿ ಇಬ್ಬರ ನಡುವೆ ರೂ 59,400 ಕೋಟಿಯ ವ್ಯತ್ಯಾಸ ಉಂಟಾಗಿದೆ.
ಯುರೋಪಿಯನ್ ಉಕ್ಕಿನ ಬೆಲೆ ಏರಿಕೆ ಮತ್ತು ವ್ಯಾಪಾರ ರಕ್ಷಣೆಯ ಬಲದಿಂದಾಗಿ ಲಕ್ಷ್ಮೀ ನಿವಾಸ್ ಮಿತ್ತಲ್ ಮತ್ತು ಅವರ ಕುಟುಂಬವು ಸುಮಾರು ಎರಡು ಪಟ್ಟು ಸಂಪತ್ತು ಹೆಚ್ಚಿಸಿಕೊಂಡು ಮೂರನೇ ಸ್ಥಾನಕ್ಕೆ ಜಿಗಿದಿದೆ.
ಲಸಿಕೆ ತಯಾರಿಕಾ ಸಂಸ್ಥೆಯಾದ ಸೀರಮ್ ಇನ್‌ಸ್ಟಿಟ್ಯೂಟ್‌ನ ಸೈರಸ್ ಪೂನಾವಾಲಾ ಮತ್ತು ಕುಟುಂಬವು ನಾಲ್ಕನೇ ಸ್ಥಾನದಲ್ಲಿದ್ದರೆ, ಎಚ್‌ಸಿಎಲ್‌ನ ರೋಷನಿ ನಾಡರ್ ಮಲ್ಹೋತ್ರಾ, ಕುಮಾರ ಮಂಗಳಂ ಬಿರ್ಲಾ, ಸನ್ ಫಾರ್ಮಾಸ್ಯುಟಿಕಲ್ಸ್‌ನ ದಿಲೀಪ್ ಶಂಘ್ವಿ ಮತ್ತು ವಿಪ್ರೊದ ಅಜೀಮ್ ಪ್ರೇಮ್‌ಜಿ ನಂತರದ ಸ್ಥಾನಗಳಲ್ಲಿದ್ದಾರೆ.
ಅನಿಲ್ ಅಗರ್ವಾಲ್ ಮತ್ತು ಕುಟುಂಬವು ರೂ 2.08 ಲಕ್ಷ ಕೋಟಿಯೊಂದಿಗೆ ಒಂಬತ್ತನೇ ಸ್ಥಾನಕ್ಕೇರಿದ್ದರೆ, ಜೆಬಿ ಕೆಮಿಕಲ್ಸ್ ವಿಲೀನದ ನಂತರ ಸಂಪತ್ತಿನಲ್ಲಿ ಶೇ. 52 ರಷ್ಟು ಹೆಚ್ಚಳ ಕಂಡು ಸಮೀರ್ ಮೆಹ್ತಾ ಮತ್ತು ಕುಟುಂಬವು 10 ನೇ ಸ್ಥಾನದೊಂದಿಗೆ ಟಾಪ್ 10 ರೊಳಗೆ ಪ್ರವೇಶಿಸಿದೆ.
“ಕಳೆದ ಒಂದು ದಶಕದ ಅವಧಿಯನ್ನು ಒಟ್ಟಾಗಿ ನೋಡಿದರೆ, ಭಾರತದ ಹತ್ತು ಶ್ರೀಮಂತರು ಪದೇ ಪದೇ ಸ್ಥಾನ ಬದಲಾಯಿಸುತ್ತಿರುವುದನ್ನು ಕಾಣಬಹುದು. ಅಗ್ರಸ್ಥಾನದಲ್ಲಿ ತೀವ್ರ ಪೈಪೋಟಿ ಇದೆ: ಗೌತಮ್ ಅದಾನಿ ಮತ್ತು ಕುಟುಂಬವು 2022 ರಲ್ಲಿ ಮುಖೇಶ್ ಅಂಬಾನಿ ಕುಟುಂಬವನ್ನು ಹಿಂದಿಕ್ಕಿತ್ತು, 2023 ರಲ್ಲಿ ಮತ್ತೆ ಹಿಂದುಳಿಯಿತು, 2024 ರಲ್ಲಿ ಮುನ್ನಡೆ ಸಾಧಿಸಿತು, 2025 ರಲ್ಲಿ ಮೊದಲ ಸ್ಥಾನ ಕಳೆದುಕೊಂಡಿತು. ಈಗ ಮತ್ತೆ ಅಗ್ರಸ್ಥಾನ ಪಡೆದುಕೊಂಡಿದೆ. ಐದು ವರ್ಷಗಳಲ್ಲಿ ಐದು ಬಾರಿ ಸ್ಥಾನ ಬದಲಾವಣೆಗಳು ನಡೆದಿವೆ” ಎಂದು ಹುರುನ್ ತಿಳಿಸಿದೆ.
ಅದಾನಿಯವರ ಸಂಪತ್ತಿನ ಗ್ರಾಫ್ ಚಾರ್ಟ್‌ನಲ್ಲಿ ಹೆಚ್ಚು ಏರಿಳಿತಗಳಿಂದ ಕೂಡಿದೆ. 2024 ರಲ್ಲಿ ರೂ 11.62 ಲಕ್ಷ ಕೋಟಿ ಗರಿಷ್ಠ ತಲುಪಿದ್ದ ಅವರ ಸಂಪತ್ತು, ನಂತರ ರೂ 8.15 ಲಕ್ಷ ಕೋಟಿಗೆ ಕುಸಿದು, ಈಗ ರೂ 9.23 ಲಕ್ಷ ಕೋಟಿಗೆ ಚೇತರಿಸಿಕೊಂಡಿದೆ. ಮುಖೇಶ್ ಅಂಬಾನಿ ಅವರ ಸಂಪತ್ತು 2017 ರ ರೂ 2.58 ಲಕ್ಷ ಕೋಟಿಯಿಂದ 2024 ರಲ್ಲಿ ರೂ 10.15 ಲಕ್ಷ ಕೋಟಿಗೆ ಏರಿತ್ತು. ಆದರೆ ನಂತರದ ಎರಡು ಸತತ ವರ್ಷಗಳಲ್ಲಿ ಕುಸಿದು ರೂ. 8.63 ಲಕ್ಷ ಕೋಟಿಗೆ ತಲುಪಿದೆ.
ಭಾರತದ ಶ್ರೀಮಂತರ ಪಟ್ಟಿಯು ಕನಿಷ್ಠ ರೂ. 1,000 ಕೋಟಿ ಸಂಪತ್ತು ಹೊಂದಿರುವ 1,810 ವ್ಯಕ್ತಿಗಳಿಗೆ ವಿಸ್ತರಿಸಿದ್ದು, ಇದು ಹಿಂದಿನ ವರ್ಷಕ್ಕಿಂತ 128 ಹೆಚ್ಚು. ಇವರ ಒಟ್ಟು ಸಂಪತ್ತು ಶೇ. 12.8 ರಷ್ಟು ಹೆಚ್ಚಾಗಿ ರೂ 187.5 ಲಕ್ಷ ಕೋಟಿಗೆ ತಲುಪಿದೆ. ಇದು ಸುಮಾರು 1.96 ಟ್ರಿಲಿಯನ್ ಯುಎಸ್ ಡಾಲರ್‌ಗೆ ಸಮನಾಗಿದ್ದು, ಭಾರತದ ಆರ್ಥಿಕ ಉತ್ಪಾದನೆಯ ಅರ್ಧದಷ್ಟು ಭಾಗವಾಗಿದೆ ಎಂದು ಹುರುನ್ ಹೇಳಿದೆ.
ಈ ವರ್ಷ ದೇಶಕ್ಕೆ ಹೊಸದಾಗಿ 27 ಡಾಲರ್ ಬಿಲಿಯನೇರ್‌ಗಳು ಸೇರ್ಪಡೆಯಾಗಿದ್ದು, ಒಟ್ಟು ಸಂಖ್ಯೆ ದಾಖಲೆಯ 391 ಕ್ಕೆ ಏರಿದೆ. ಕಳೆದ ಐದು ವರ್ಷಗಳಲ್ಲಿ ಈ ಸಂಖ್ಯೆ 237 ರಿಂದ ಏರಿಕೆಯಾಗಿದೆ.
ತಂತ್ರಜ್ಞಾನ ಕ್ಷೇತ್ರವು ಭಾರತದ ಶ್ರೀಮಂತರ ಪಟ್ಟಿಯನ್ನು ಬದಲಾಯಿಸುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ಮೊದಲ ಬಾರಿಗೆ ಪ್ರತ್ಯೇಕ ಕ್ಷೇತ್ರವಾಗಿ ಕಾಣಿಸಿಕೊಂಡಿದ್ದು, 19 ನಮೂದುಗಳು ಒಟ್ಟು ರೂ 3.07 ಲಕ್ಷ ಕೋಟಿ ಸಂಪತ್ತನ್ನು ಹೊಂದಿವೆ. ಬೆಂಗಳೂರು ಮೂಲದ ಕ್ಯೂಪಿಎಐ (QpiAi) ಸಂಸ್ಥಾಪಕ ನಾಗೇಂದ್ರ ನಾಗರಾಜ ಅವರು ರೂ 1,700 ಕೋಟಿ ಸಂಪತ್ತಿನೊಂದಿಗೆ ಕ್ವಾಂಟಮ್-ಕಮ್ಯೂಟಿಂಗ್ ಕ್ಷೇತ್ರದಿಂದ ಮೊದಲ ಬಾರಿಗೆ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಪಟ್ಟಿಯಲ್ಲಿ ಶೇ. 70 ರಷ್ಟು ಮಂದಿ ಉದ್ಯಮಿಗಳೇ ಇದ್ದು, 1,266 ಸ್ವಯಂ-ನಿರ್ಮಿತ ವ್ಯಕ್ತಿಗಳಿದ್ದಾರೆ. ಮುಂಬೈ 465 ಜನರೊಂದಿಗೆ ಭಾರತದ ಅತಿ ದೊಡ್ಡ ಸಂಪತ್ತಿನ ಕೇಂದ್ರವಾಗಿ ಮುಂದುವರಿದಿದೆ, ಇದರ ನಂತರ ಹೊಸದೆಹಲಿ (236) ಮತ್ತು ಬೆಂಗಳೂರು (129) ಸ್ಥಾನ ಪಡೆದಿವೆ. ಮಹಿಳೆಯರು 131 ಸ್ಥಾನಗಳನ್ನು ಪಡೆದಿದ್ದು, ಇದರಲ್ಲಿ 33 ಡಾಲರ್ ಬಿಲಿಯನೇರ್‌ಗಳು ಸೇರಿದ್ದಾರೆ. ರೋಷನಿ ನಾಡರ್ ಮಲ್ಹೋತ್ರಾ ಮತ್ತು ಕುಟುಂಬವು ರೂ 2.79 ಲಕ್ಷ ಕೋಟಿ ಸಂಪತ್ತಿನೊಂದಿಗೆ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಮುಂದುವರಿದಿದ್ದಾರೆ.
ಕುಪಿಡ್ ಸಂಸ್ಥೆಯ ಆದಿತ್ಯ ಕುಮಾರ್ ಹಲ್ವಾಸಿಯಾ ಅವರು ಅತಿ ವೇಗವಾಗಿ ಸಂಪತ್ತು ಗಳಿಸಿದವರಾಗಿದ್ದು, ಇವರ ಆಸ್ತಿ ಶೇ 859 ರಷ್ಟು ಜಿಗಿದು ರೂ 18,800 ಕೋಟಿಗೆ ತಲುಪಿದೆ. ಜೆಪ್ಟೋ ಸಹ-ಸಂಸ್ಥಾಪಕ 23 ವರ್ಷ ವಯಸ್ಸಿನ ಕೈವಲ್ಯ ವೋಹ್ರಾ ಅತ್ಯಂತ ಕಿರಿಯ ಪ್ರವೇಶಿಯಾಗಿದ್ದು, ಮತ್ತೊಬ್ಬ ಸಹ-ಸಂಸ್ಥಾಪಕ ಆದಿತ್ ಪಾಲಿಚಾ (24) ನಂತರದ ಸ್ಥಾನದಲ್ಲಿದ್ದಾರೆ.


