ಚುನಾವಣಾ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಮರುಸ್ಥಾಪಿಸಲು ಮತ್ತು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು, ಆದಿವಾಸಿಗಳು, ದಲಿತರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಒಕ್ಕೂಟವಾದ ‘ಪೀಪಲ್ ಅಗೆನ್ಸ್ಟ್ ಎಸ್ಐಆರ್’ ಎಂಬ ಅಖಿಲ ಭಾರತ ಜಂಟಿ ವೇದಿಕೆಯನ್ನು ನವದೆಹಲಿಯ ಸುರ್ಜೀತ್ ಭವನದಲ್ಲಿ ಬುಧವಾರ (ಅಕ್ಟೋಬರ್ 14) ರಚಿಸಲಾಗಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆಗಳನ್ನು ಒಪ್ಪದೆ, ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿರುವ ಈ ವೇದಿಕೆಯು, ತನ್ನ ಮೊದಲ ಹಂತದ ಹೋರಾಟವಾಗಿ ಅ. 23ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ.

ವೇದಿಕೆಯ ಪ್ರಮುಖ ಬೇಡಿಕೆಗಳು ಮತ್ತು ನಿಲುವುಗಳು:
- ಗ್ಯಾನೇಶ್ ಉಚ್ಚಾಟನೆಗೆ ಆಗ್ರಹ: ದೇಶದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ತಕ್ಷಣವೇ ಹುದ್ದೆಯಿಂದ ತೆಗೆದುಹಾಕಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಭಾರತೀಯ ಚುನಾವಣಾ ಆಯೋಗದ (ಇಸಿಐ) ಕಾನೂನು ವಿನಾಯಿತಿಯನ್ನು ರದ್ದುಗೊಳಿಸಬೇಕು ಎಂಬುವುದು ವೇದಿಕೆಯ ಪ್ರಮುಖ ಬೇಡಿಕೆಯಾಗಿದೆ.
- ಮತದಾರರ ಪಟ್ಟಿ ಮರುಸ್ಥಾಪನೆ: 2024ಕ್ಕಿಂತ ಮುಂಚಿನ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಬೇಕು. ಸೋಶಿಯಲ್ ಆಡಿಟ್ ಮತ್ತು ಸಿಎಜಿ ಮಾರ್ಗಸೂಚಿಗಳ ಅನ್ವಯ ಮತದಾರರ ಪಟ್ಟಿಯನ್ನು ನವೀಕರಿಸಬೇಕು ಎಂದು ವೇದಿಕೆ ಆಗ್ರಹಿಸಿದೆ.
- ಚುನಾವಣೆಗಳ ರದ್ದತಿ: ಎಸ್ಐಆರ್ ಮತದಾರರ ಪಟ್ಟಿ ಆಧಾರದ ಮೇಲೆ ನಡೆದ ಎಲ್ಲಾ ರಾಜ್ಯಗಳ ಚುನಾವಣೆಗಳನ್ನು ರದ್ದುಗೊಳಿಸಬೇಕು. ಮುಂಬರುವ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ, ಮಣಿಪುರ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳನ್ನು ಎಸ್ಐಆರ್ ಪಟ್ಟಿ ಮೂಲಕ ನಡೆಸಬಾರದು ಎಂದು ಒತ್ತಾಯಿಸಿದೆ.
- ಮುಕ್ತ ಆಡಿಟ್: ‘ಇಸಿಐನೆಟ್’ (ECINET) ಆ್ಯಪ್ ಅನ್ನು ಸಾರ್ವಜನಿಕ ತಪಾಸಣೆಗೆ ಮುಕ್ತಗೊಳಿಸಲು ಅದನ್ನು ಓಪನ್ ಸೋರ್ಸ್ ಮಾಡಬೇಕು. ನಾಗರಿಕರ ಪೌರತ್ವದ ಬಗ್ಗೆ ಚುನಾವಣಾ ಆಯೋಗವು ಯಾವುದೇ ಪ್ರಶ್ನೆಗಳನ್ನು ಕೇಳಬಾರದು ಎಂದು ಆಗ್ರಹಿಸಿದೆ.
- ಕ್ಷೇತ್ರ ಮರುವಿಂಗಡಣೆ (Delimitation) ವಿರೋಧ: ಜನಸಂಖ್ಯೆಯ ಆಧಾರದ ಮೇಲೆ ಸಂಸತ್ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಬದಲಾಯಿಸುವ ಪ್ರಕ್ರಿಯೆಯನ್ನು ವೇದಿಕೆ ವಿರೋಧಿಸಿದೆ.
- ಜಾತಿ ಗಣತಿ ಮತ್ತು ಜನಸಂಖ್ಯಾ ಸಮೀಕ್ಷೆ ಬೇಡ: ದೇಶದಲ್ಲಿ ಜಾತಿ ಆಧಾರಿತ ಜನಗಣತಿ (Caste Census) ಮತ್ತು ಜನಸಂಖ್ಯಾ ಸಮೀಕ್ಷೆಗಳನ್ನು (Demographic Survey) ನಡೆಸಬಾರದು ಎಂದು ಒತ್ತಾಯಿಸಿದೆ.
- ಒಂದು ದೇಶ, ಒಂದು ಚುನಾವಣೆ’ಗೆ ಪ್ರತಿರೋಧ: ಇಡೀ ದೇಶಕ್ಕೆ ಏಕಕಾಲದಲ್ಲಿ ಚುನಾವಣೆ ನಡೆಸುವ (One-Nation-One-Election) ಪ್ರಸ್ತಾವನೆಯನ್ನು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ವೇದಿಕೆ ಬಲವಾಗಿ ವಿರೋಧಿಸಿದೆ.
ಜಂತರ್ ಮಂತರ್ನ ಪ್ರತಿಭಟನಾ ಸ್ಥಳ ಎಂಬುವುದರ ಡಿ-ನೋಟಿಫಿಕೇಶನ್ ಅನ್ನು ಖಂಡಿಸಿರುವ ವೇದಿಕೆಯು, ಪೊಲೀಸ್ ದೌರ್ಜನ್ಯವನ್ನು ನಿಲ್ಲಿಸುವಂತೆ ಮತ್ತು ಬಂಧಿತರಾಗಿರುವ ಸಿಜೆಪಿ ನಾಯಕರಾದ ಆಶುತೋಷ್ ರಂಕಾ ಹಾಗೂ ಸೌರವ್ ದಾಸ್ ಅವರನ್ನು ತಕ್ಷಣವೇ ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.

ಅಕ್ಟೋಬರ್ 23ರಂದು ದೇಶದಾದ್ಯಂತ ‘ಪ್ರತಿ ಗಲ್ಲಿಯೂ ಜಂತರ್ ಮಂತರ್, ಪ್ರತಿ ಹಳ್ಳಿಯೂ ಜಂತರ್ ಮಂತರ್, ನನ್ನ ಮನೆಯೂ ಜಂತರ್ ಮಂತರ್” (Har Galli Jantar Mantar, Har Gaon Jantar Mantar, Mera Ghar Jantar Mantar) ಎಂಬ ಘೋಷಣೆಯೊಂದಿಗೆ ಬೀದಿಗಿಳಿದು ಪ್ರತಿಭಟಿಸಲು ಸಾರ್ವಜನಿಕರಿಗೆ ಕರೆ ನೀಡಲಾಗಿದೆ.
ಎಸ್ಐಆರ್ ವ್ಯವಸ್ಥೆಯ ಕಾನೂನುಬಾಹಿರತೆಯನ್ನು ಪ್ರಶ್ನಿಸಿ ರಾಷ್ಟ್ರಪತಿಗಳಿಗೆ ಬಹಿರಂಗ ಪತ್ರ ಬರೆಯಲಾಗುವುದು. ಎಸ್ಐಆರ್ ವ್ಯವಸ್ಥೆಯು ಹೇಗೆ ಕಾನೂನುಬಾಹಿರ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂಬುದನ್ನು ಸಾಮಾನ್ಯ ಜನರಿಗೆ ವಿವರಿಸಲು ವ್ಯಾಪಕ ಜನಸಂಪರ್ಕ ಅಭಿಯಾನ ನಡೆಸಲಾಗುವುದು ಎಂದು ವೇದಿಕೆ ತಿಳಿಸಿದೆ.
‘ನೋ ಎಸ್ಐಆರ್’ ಮತ್ತು ಚುನಾವಣಾ ಸಮಗ್ರತೆಯ ಕುರಿತು ದೇಶದ ಎಲ್ಲಾ ರಾಜ್ಯಗಳಲ್ಲಿ ಸರಣಿ ಸಮಾವೇಶಗಳನ್ನು ಮುಂದುವರಿಸಲಾಗುವುದು. ಈಗಾಗಲೇ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ಸಾರ್ವಜನಿಕ ತಪಾಸಣೆಯನ್ನು ಮತ್ತಷ್ಟು ರಾಜ್ಯಗಳಿಗೆ ವಿಸ್ತರಿಸಲಾಗುವುದು. ಇದಕ್ಕಾಗಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಂಡ ಬೃಹತ್ ತಪಾಸಣಾ ವ್ಯವಸ್ಥೆಯನ್ನು ರೂಪಿಸಲಾಗುವುದು. ಸಾರ್ವಜನಿಕ ತಪಾಸಣೆಯಿಂದ ದೊರೆಯುವ ಲೋಪದೋಷಗಳ ಸಂಶೋಧನಾ ವರದಿಯನ್ನು ಎಸ್ಐಆರ್ ಕುರಿತಾದ ‘5-ಸದಸ್ಯರ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ಸ್ವತಂತ್ರ ಆಯೋಗ’ಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದೆ.
ಈ ಹೋರಾಟವನ್ನು ಮುನ್ನಡೆಸಲು ಅಖಿಲ ಭಾರತ ಸಮನ್ವಯ ಸಮಿತಿಯನ್ನು (All India Coordination Committee) ರಚಿಸಲಾಗಿದ್ದು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಎಲ್ಲಾ ರಾಜಕೀಯ ಪಕ್ಷಗಳು ಈ ಜನಪರ ಹೋರಾಟದಲ್ಲಿ ಕೈಜೋಡಿಸಬೇಕೆಂದು ವೇದಿಕೆ ಮನವಿ ಮಾಡಿದೆ.


