ಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುವ ನಿರೀಕ್ಷೆಯಿರುವ ಬೆನ್ನಲ್ಲೇ, ವಿದ್ಯಾರ್ಥಿಗಳ ಹೋರಾಟಕ್ಕೆ ಪಕ್ಷವು ಬೆಂಬಲ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಸಂಘವನ್ನು (ಜೆಎಂಐಎಸ್ಯು) ಪುನಃಸ್ಥಾಪಿಸುವಂತೆ ಆಗ್ರಹಿಸಿ ಕಳೆದ 17 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಕಾಂಗ್ರೆಸ್ ಪಕ್ಷವು ಒಗ್ಗಟ್ಟಿನಿಂದ ನಿಲ್ಲಲಿದೆ ಎಂದು ಬುಧವಾರ (ಅ. 28) ತಿಳಿಸಿದೆ.
ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಾತನಾಡಿ, 21ನೇ ಶತಮಾನದ ಭಾರತದಲ್ಲಿ ಚುನಾಯಿತ ವಿದ್ಯಾರ್ಥಿ ಸಂಘವನ್ನು ರಚಿಸುವ ತಮ್ಮ ಮೂಲಭೂತ ಹಕ್ಕನ್ನು ಮರಳಿ ಪಡೆಯಲು ಜಾಮಿಯಾ ವಿದ್ಯಾರ್ಥಿಗಳು ಎರಡು ವಾರಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಸಂವಿಧಾನದ 19(1)(ಸಿ) ವಿಧಿಯು ಸಂಘಗಳನ್ನು ಅಥವಾ ಒಕ್ಕೂಟಗಳನ್ನು ರಚಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಇಂತಹ ಮೂಲಭೂತ ಹಕ್ಕಿಗಾಗಿ ವಿದ್ಯಾರ್ಥಿಗಳು ಬೀದಿಗಿಳಿಯಬೇಕಾಗಿರುವುದು ದೇಶದ ಪ್ರಜಾಪ್ರಭುತ್ವದ ಸ್ಥಿತಿಗತಿಯ ಕುರಿತು, ವಿಶೇಷವಾಗಿ ಯುವಜನರ ದೃಷ್ಟಿಕೋನದಿಂದ, ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಇಸ್ಲಾಮಿಸ್ಟ್ ಘೋಷಣೆಗಳನ್ನು ಕೂಗಲಾಗಿದೆ ಎಂಬ ನಿರೂಪಣೆಯನ್ನು ಮುನ್ನೆಲೆಗೆ ತರುವ ಮೂಲಕ ಪ್ರತಿಭಟನೆಯನ್ನು ಅಪಖ್ಯಾತಿಗೀಡು ಮಾಡಲು ಮತ್ತು ವಿದ್ಯಾರ್ಥಿಗಳ ಹೆಸರಿಗೆ ಮಸಿ ಬಳಿಯಲು ವಿಶ್ವವಿದ್ಯಾಲಯದ ಆಡಳಿತ ಪ್ರಯತ್ನಿಸಿತು. ಆದರೆ, ತಪ್ಪಿತಸ್ಥರನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಒಪ್ಪಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದಾಗ ಆಡಳಿತ ಮಂಡಳಿ ಹಿಂದೆ ಸರಿಯಿತು” ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
“ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ‘ಶಿಕ್ಷಣ ಪಡೆಯಿರಿ, ಹೋರಾಡಿ, ಸಂಘಟಿತರಾಗಿ’ ಎಂಬ ಘೋಷಣೆಯನ್ನು ಸಾಕಾರಗೊಳಿಸುವಲ್ಲಿ ವಿದ್ಯಾರ್ಥಿ ಸಂಘವನ್ನು ರಚಿಸುವ ಹಕ್ಕು ಅತ್ಯಗತ್ಯವಾಗಿದೆ. ದೇಶದ ಇತರ ಭಾಗಗಳ ವಿದ್ಯಾರ್ಥಿಗಳಂತೆಯೇ ಜಾಮಿಯಾ ವಿದ್ಯಾರ್ಥಿಗಳಿಗೂ ಈ ಹಕ್ಕಿದೆ. ಅವರ ಹೋರಾಟಕ್ಕೆ ನಾವು ಬೆಂಬಲವಾಗಿ ನಿಲ್ಲುತ್ತೇವೆ” ಎಂದು ಹೇಳಿದ್ದಾರೆ.
ಬಲವಂತವಾಗಿ ಕ್ಯಾಂಪಸ್ ಪ್ರವೇಶಿಸಿದ್ದಾರೆ: ವಿಶ್ವವಿದ್ಯಾಲಯದ ಆರೋಪ
ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಡುವಿನ ಸಂಘರ್ಷ ಮುಂದುವರಿದಿರುವಂತೆಯೇ, ಕ್ಯಾಂಪಸ್ನ ಕೆಲವು ಭಾಗಗಳಲ್ಲಿ ಕಿಟಕಿ ಗಾಜುಗಳು ಒಡೆದಿರುವ ದೃಶ್ಯಗಳನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಬುಧವಾರ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಬಲವಂತವಾಗಿ ಕ್ಯಾಂಪಸ್ನ ಕೆಲವು ಭಾಗಗಳಿಗೆ ಪ್ರವೇಶಿಸಿ, ಕಣ್ಗಾವಲು ಕ್ಯಾಮೆರಾಗಳು ಸೇರಿದಂತೆ ವಿಶ್ವವಿದ್ಯಾಲಯದ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಆದರೆ, ಈ ಹಾನಿಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ವಿದ್ಯಾರ್ಥಿ ಸಂಘದ ಸಂವಿಧಾನಕ್ಕೆ ಅನುಮೋದನೆ ದೊರೆತ 15 ದಿನಗಳೊಳಗೆ ಸಂಘದ ಚುನಾವಣೆ ನಡೆಸಲಾಗುವುದು ಎಂದು ವಿಶ್ವವಿದ್ಯಾಲಯವು ಸೋಮವಾರ ಆದೇಶ ಹೊರಡಿಸಿತ್ತು. ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಅಮಾನತು ಆದೇಶಗಳು ಮತ್ತು ಕಾರಣ ಕೇಳಿ ಜಾರಿಗೊಳಿಸಿದ್ದ ನೋಟಿಸ್ಗಳನ್ನು ಕೂಡ ಈ ಆದೇಶದ ಮೂಲಕ ಹಿಂಪಡೆಯಲಾಗಿತ್ತು.
ಇದಲ್ಲದೆ, ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ವರ್ತನೆಯ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನೂ ರಚಿಸಲಾಗಿತ್ತು. ಆದರೆ, ವಿಶ್ವವಿದ್ಯಾಲಯದ ಈ ಕ್ರಮದ ಹೊರತಾಗಿಯೂ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ಮುಂದುವರಿದಿದೆ.
ಚುನಾವಣೆಗೆ ನಿರ್ದಿಷ್ಟ ದಿನಾಂಕ ಘೋಷಿಸುವಂತೆ ವಿದ್ಯಾರ್ಥಿಗಳ ಪಟ್ಟು
ವಿಶ್ವವಿದ್ಯಾಲಯದ ನಿರ್ಧಾರವು ತಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಹೇಳಿದ್ದಾರೆ. ವಿದ್ಯಾರ್ಥಿ ಸಂಘದ ಸಂವಿಧಾನಕ್ಕೆ ಯಾವಾಗ ಅನುಮೋದನೆ ನೀಡಲಾಗುತ್ತದೆ ಎಂಬುದಕ್ಕೆ ಗಡುವು ನಿಗದಿಪಡಿಸದಿರುವುದನ್ನು ಅವರು ಪ್ರಶ್ನಿಸಿದ್ದಾರೆ.
2006ರಿಂದ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿಲ್ಲ. ಹೀಗಾಗಿ, ಆಡಳಿತ ಮಂಡಳಿಯು ಚುನಾವಣೆಗೆ ನಿಗದಿತ ದಿನಾಂಕವನ್ನು ಘೋಷಿಸಬೇಕು ಮತ್ತು ವಿದ್ಯಾರ್ಥಿ ಸಂಘದ ಸಂವಿಧಾನಕ್ಕೆ ಅನುಮೋದನೆ ನೀಡುವ ಪ್ರಕ್ರಿಯೆಗೆ ಕಾಲಮಿತಿಯನ್ನು ನಿಗದಿಪಡಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
“ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಪುನರಾರಂಭಿಸಬೇಕು ಮತ್ತು ಚುನಾವಣೆಯ ದಿನಾಂಕಗಳನ್ನು ಘೋಷಿಸಬೇಕು ಎಂಬುದು ನಮ್ಮ ಮೊದಲ ಬೇಡಿಕೆಯಾಗಿತ್ತು” ಎಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿ ಒಬ್ಬರಾದ ರೆಹಾನ್ ಖಾನ್ ಸೋಮವಾರ ಹೇಳಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ವರು ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆ ತಿಳಿಸಿದೆ.
ಪ್ರತಿಭಟನಾ ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಅಕ್ಟೋಬರ್ 24ರಿಂದ ಎಲ್ಲಾ ತರಗತಿಗಳನ್ನು ಆನ್ಲೈನ್ ಮೂಲಕ ನಡೆಸಲು ಜಾಮಿಯಾ ವಿಶ್ವವಿದ್ಯಾಲಯ ನಿರ್ಧರಿಸಿತ್ತು.
ಕಾಂಗ್ರೆಸ್ ಸಂಸದರ ವಿರುದ್ಧ ಎಫ್ಐಆರ್ ದಾಖಲು
ಜಾಮಿಯಾ ವಿಶ್ವವಿದ್ಯಾಲಯದ ಕುಲಸಚಿವ ಮೊಹಮ್ಮದ್ ಮಹತಾಬ್ ಆಲಂ ರಿಜ್ವಿ ಅವರು ನೀಡಿದ ದೂರಿನ ಆಧಾರದ ಮೇಲೆ, ದೆಹಲಿ ಪೊಲೀಸರು ಅಕ್ಟೋಬರ್ 25ರಂದು ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಸಂಸದರಾದ ಇಮ್ರಾನ್ ಮಸೂದ್ ಮತ್ತು ಇಮ್ರಾನ್ ಪ್ರತಾಪ್ಗಢಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ವಿಶ್ವವಿದ್ಯಾಲಯದ ಆವರಣಕ್ಕೆ ಅನುಮತಿಯಿಲ್ಲದೆ ಪ್ರವೇಶಿಸಿದ ಆರೋಪ ಅವರ ಮೇಲಿದೆ.
ದೂರಿನ ಪ್ರಕಾರ, ಅಕ್ಟೋಬರ್ 21ರಂದು ಇಮ್ರಾನ್ ಪ್ರತಾಪ್ಗಢಿ ಅವರು 4ಎ ಗೇಟ್ನ ಬೀಗ ಮುರಿದು ವಿಶ್ವವಿದ್ಯಾಲಯದ ಆವರಣ ಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇಮ್ರಾನ್ ಮಸೂದ್ ಅವರು ಅಕ್ಟೋಬರ್ 23ರಂದು ಗಫೂರ್ ನಗರದ ಸಮೀಪ ಏಣಿಯ ಸಹಾಯದಿಂದ ಆವರಣದ ಗೋಡೆ ಹತ್ತಿ ಒಳಗೆ ಪ್ರವೇಶಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಮಾಜವಾದಿ ಪಕ್ಷದ ಸಂಸದ ಮೊಹಿಬ್ಬುಲ್ಲಾ ನದ್ವಿ ಅವರ ಭೇಟಿಯ ಬಗ್ಗೆಯೂ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ಅವರು ವಿಶ್ವವಿದ್ಯಾಲಯದ ಆವರಣಕ್ಕೆ ತೆರಳುತ್ತಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.


