Homeಕರ್ನಾಟಕKarnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ...

Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ ಬಹಿರಂಗ ಸವಾಲು

- Advertisement -
- Advertisement -

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಹೋರಾಟಗಾರರು ತಿರಸ್ಕರಿಸಿದ್ದು, ಹೋರಾಟ ಮುಂದುವರಿಸುವ ಘೋಷಣೆ ಮಾಡಿದ್ದಾರೆ.

ಬುಧವಾರ (ಅ.28) ಬೆಂಗಳೂರಿನ ಶಾಸಕರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್‌ಐಆರ್ ವಿರೋಧಿ ಒಕ್ಕೂಟದ ಮುಖಂಡರು, ಎಸ್‌ಐಆರ್‌ನಲ್ಲಿ ಒಬ್ಬರೇ ಒಬ್ಬರು ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದಿಲ್ಲ ಎಂಬ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರ ಹೇಳಿಕೆಯನ್ನು ತಿರಸ್ಕರಿಸಿದ್ದು, “ಎಸ್‌ಐಆರ್‌ನಿಂದ ಮತದಾನದ ಹಕ್ಕು ಕಳೆದುಕೊಂಡಿರುವ ಕನಿಷ್ಠ ನೂರು ಅರ್ಹ ಮತದಾರರನ್ನು ನಾವು ಚುನಾವಣಾ ಆಯೋಗದ ಮುಂದೆ ಹಾಜರುಪಡಿಸುತ್ತೇವೆ. ಅನ್ಬುಕುಮಾರ್ ತಪ್ಪು ಒಪ್ಪಿಕೊಂಡು ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲಿ” ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಒಕ್ಕೂಟದ ಮುಂಚೂಣಿ ನಾಯಕ ನೂರ್ ಶ್ರೀಧರ್ ಮಾತನಾಡಿ, ಇಡೀ ರಾಜ್ಯದಲ್ಲಿ ಅಲ್ಲ, ಕೇವಲ ಒಂದೆರಡು ಮತಗಟ್ಟೆಗಳಲ್ಲೇ ಎಸ್‌ಐಆರ್‌ನಿಂದ ಮತದಾನದ ಹಕ್ಕು ಕಳೆದುಕೊಂಡಿರುವ ಕನಿಷ್ಠ ನೂರು ಅರ್ಹ ಮತದಾರರನ್ನು ನಾವು ತೋರಿಸುತ್ತೇವೆ. ನಮ್ಮ ಸವಾಲು ಸ್ವೀಕರಿಸಲು ಅನ್ಬುಕುಮಾರ್ ಸಿದ್ದರಿದ್ದಾರಾ? ಎಂಬ ಪ್ರಶ್ನಿಸಿದ್ದಾರೆ.

ಎಸ್‌ಐಆರ್‌ನಿಂದ ಕರ್ನಾಟಕದ ಒಟ್ಟು ಮತದಾರರ ಸಂಖ್ಯೆ 5.54 ಕೋಟಿಯಿಂದ 4.55 ಕೋಟಿಗೆ ಕುಸಿದಿದೆ. ವಿವಿಧ ಕಾರಣಗಳನ್ನು ನೀಡಿ 99.32 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ನಿಜವಾಗಿಯೂ ಮೃತಪಟ್ಟವರು, ಸ್ಥಳಾಂತರಗೊಂಡವರು, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾದವರನ್ನು ಹೊರಗಿಟ್ಟರೆ, ಅಂದಾಜು 75 ಲಕ್ಷ ಅರ್ಹ ಮತದಾರರ ಹೆಸರು ಡಿಲೀಟ್ ಆಗಿದೆ. ಅಧಿಕೃತ  ಸರ್ಕಾರಿ ಲೆಕ್ಕಾಚಾರದ ಪ್ರಕಾರ ಕರ್ನಾಟಕದಲ್ಲಿ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮತದಾರರ ಸಂಖ್ಯೆ 5.19 ಕೋಟಿ. ಇದಲ್ಲದೆ ಕರ್ನಾಟಕದಿಂದ ಹೊರ ವಲಸೆಗಿಂತ ಒಳ ವಲಸೆ ಹೆಚ್ಚಾಗಿದೆ. ಇಲ್ಲಿ ಬಂದು ನೆಲೆಸಿರುವ ಅನ್ಯ ರಾಜ್ಯದ ಜನರನ್ನೂ ಒಳಗೊಂಡರೆ ಈ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ. ಹೀಗಿರುವಾಗ ಕರ್ನಾಟಕದ ಒಟ್ಟು ಮತದಾರರು 4.5 ಕೋಟಿ ಮಾತ್ರ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿದ್ದ 1,03,88,363 ಮತದಾರರ ಪೈಕಿ ಈಗ 59,08, 151 ಮತದಾರರನ್ನು ಮಾತ್ರ ಉಳಿಸಲಾಗಿದೆ. ಅಂದರೆ ಶೇ. 43.2 ಮತದಾರರು ಡಿಲೀಟ್‌ ಆಗಿದ್ದಾರೆ. ನಗರೀಕರಣ ಹೆಚ್ಚಾಗುತ್ತಿರುವ, ಒಳ ವಲಸೆ ತೀವ್ರವಾಗಿರುವ ಬೆಂಗಳೂರಿನಲ್ಲಿ ಮತದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಾಣಲು ಕಾರಣವೇನು? ಎಂದು ಪ್ರಶ್ನಿಸಿರುವ ಶ್ರೀಧರ್, ಈ ಬಗ್ಗೆ ಯಾವ ವಿವರಣೆಯೂ ಚುನಾವಣಾ ಆಯೋಗದ ಬಳಿ ಇಲ್ಲ ಎಂದಿದ್ದಾರೆ.

ಎಎಸ್‌ಡಿಡಿಒ ಪಟ್ಟಿಯಲ್ಲಿ 1 ಕೋಟಿ 8 ಲಕ್ಷ ಜನರನ್ನು ಗುರುತಿಸಿ ಅವರನ್ನು ಮತದಾರರ ಪಟ್ಟಿಯಿಂದ ಹೊರತೆಗೆಯಲಾಗಿತ್ತು. ಈಗ ಅದು 1 ಕೋಟಿಗೆ [99.8 ಲಕ್ಷ) ಇಳಿದಿದೆ. ಅಂದರೆ ವಾಪಾಸ್‌ ಬಂದಿರುವವರು 8.19 ಲಕ್ಷ ಮಾತ್ರ. ಇದರಲ್ಲಿ 18-19 ಲಕ್ಷ ವಯಸ್ಸಿನ ಮತದಾರರು 6,8 ಲಕ್ಷ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸುತ್ತದೆ. ಇದರಲ್ಲಿ ಸುಮಾರು 3 ಲಕ್ಷ ಯುವಜನರು ಕರಡು ಪಟ್ಟಿಗಿಂತ ಮೊದಲು ನೊಂದಾಯಿಸಿಕೊಂಡಿದ್ದರು. ಅಂದರೆ ಕರಡು ಪಟ್ಟಿ ನಿಂತರು ಸುಮಾರು 3. 5 ಲಕ್ಷದಷ್ಟು ಯುವಜನರು ಹೊಸದಾಗಿ ಫಾರಂ 6 ನೀಡಿ ನೊಂದಾಯಿಸಿಕೊಂಡಿರುತ್ತಾರೆ. ಡಿಲೀಟ್‌ ಆದವರ ಪೈಕಿ ಫಾರಂ 6 ನೀಡಿ ಮರು ಸೇರ್ಪಡೆಗೊಂಡವರು ಹೆಚ್ಚೆಂದರೆ 5 ಲಕ್ಷ ಮಾತ್ರ. ಡಿಲೀಟ್‌ ಆದ 1.08 ಕೋಟಿ ಪೈಕಿ ವಾಪಾಸ್‌ ಬಂದಿರುವವರು ಕೇವಲು 5 ಲಕ್ಷ. ಎಲ್ಲದಕ್ಕಿಂತ ಹೆಚ್ಚಾಗಿ ‘ನಾಗರಿಕ ಮತ ಕಾವಲು ಸಮಿತಿ’ ಸಮೀಕ್ಷೆ ನಡೆಸಿರುವ 73 ಬೂತುಗಳಲ್ಲಿ ಅನೇಕ ಜನ ತಪ್ಪಾಗಿ ಡಿಲೀಟ್‌ ಆಗಿರುವುದು ನಿಚ್ಚಳವಾಗಿ ವರದಿಯಾಗಿದೆ. ಇದರಲ್ಲಿ ಹೆಚ್ಚಿನವರು ಇಂದಿಗೂ ಡಿಲೀಟ್‌ ಆಗೇ ಇದ್ದಾರೆ ಎಂದು ತಿಳಿಸಿದ್ದಾರೆ.

ಮನೆ ಬದಲಾಯಿಸಿದವರಿಗೆ ಫಾರಂ 8 ಕೊಟ್ಟು ಮತವನ್ನು ವರ್ಗಾಯಿಸುವ ಬದಲು ಡಿಲೀಟ್‌ ಮಾಡುವುದು ಹೇಗೆ ಸರಿ ಎಂಬುದಕ್ಕೆ ಚುನಾವಣಾ ಆಯೋಗದ ಬಳಿ ಉತ್ತರವಿಲ್ಲ. ಈ ಸಂಬಂಧ ಬಾಂಬೆ ಹೈಕೋರ್ಟ್‌ ತೀರ್ಪೊಂದನ್ನು ನೀಡಿ ಫಾರಂ 8ನ್ನು ನಿರಾಕರಿಸುವುದು ಕಾನೂನುಬಾಹಿರ ಎಂದು ಹೇಳಿದೆ. ಅಂದರೆ ಕರ್ನಾಟಕದಲ್ಲೂ ಬರೋಬ್ಬರಿ 66 ಲಕ್ಷ ಜನರನ್ನು ಕಾನೂನುಬಾಹಿರವಾಗಿ ಡಿಲೀಟ್‌ ಮಾಡಲಾಗಿದೆ ಎಂದು ಶ್ರೀಧರ್ ಹೇಳಿದ್ದಾರೆ.

ಕರಡು ಪಟ್ಟಿಯಲ್ಲಿ ತಪ್ಪಾಗಿ ಡಿಲೀಟ್‌ ಆದವರಿಗೂ ರೋಲ್‌ ಬ್ಯಾಕ್‌ ಅವಕಾಶ ನೀಡದೆ, ಫಾರಂ 6 ತುಂಬುವ ಮೂಲಕ ಹೊಸ ಮತದಾರರಾಗಿ ಸೇರ್ಪಡೆಗೊಳ್ಳಲು ಸೂಚಿಸಿರುವುದು ಸಹ ಅಕ್ರಮ. ಅಲ್ಲದೆ ಈ ರೀತಿ ಮರು ನೋಂದಣಿ ಮಾಡಿಕೊಳ್ಳುತ್ತಿರುವವರು “ನಾವು ಮೊದಲ ಬಾರಿಗೆ ನೊಂದಾಯಿಸಿಕೊಳ್ಳುತ್ತಿದ್ದೇವೆ” ಎಂಬ ಸುಳ್ಳು ಡಿಕ್ಲೆರೇಷನ್‌ ಕೊಡಲು ಸೂಚಿಸಿರುವುದು ಸಹ ಮಹಾಪರಾಧ. ಸಂಸತ್ತಿನ ಗಮನಕ್ಕೇ ತರದೇ ಫಾರಂ 6 ರಲ್ಲಿ ಈ ಬದಲಾವಣೆಗಳನ್ನು ಮಾಡಿರುವುದು ಸಹ ಅಕ್ರಮ ಎಂದಿದ್ದಾರೆ.

ಬಿಜೆಪಿ ಪಕ್ಷ ಬಲ್ಕ್‌ ಆಗಿ, ತಪ್ಪಾಗಿ, ದುರುದ್ದೇಷಪೂರಿತವಾಗಿ ಫಾರಂ 7 ಹಾಕುವ ಪ್ರಯತ್ನ ಮಾಡಿರುವುದು ಜಗಜ್ಜಾಹಿರಾಗಿದೆ. ಅವರದೇ ತಪ್ಪೊಪ್ಪಿಗೆ ಹೇಳಿಕೆಗಳಿವೆ. ಆದರೆ ಚುನಾವಣಾ ಆಯೋಗ ಅದರ ಬಗ್ಗೆ ತುಟಿಪಿಟಿಕ್‌ ಎನ್ನದೆ ಬಿಜೆಪಿ ಮಾಡಿದ ಮತಹಗರಣವನ್ನು ರಕ್ಷಿಸಿಕೊಳ್ಳುವ ಕೆಲಸ ಮಾಡಿದೆ ಎಂದು ಶ್ರೀಧರ್ ಆರೋಪಿಸಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆ ಮೂಲಕ ಎಷ್ಟು ಜನ ವಿದೇಶಿಯರನ್ನು ಪತ್ತೆಹಚ್ಚಿದ್ದೀರಿ ಎಂಬ ಪ್ರಶ್ನೆಗೆ ಚುನಾವಣಾ ಆಯೋಗದ ಬಳಿ ಉತ್ತರವೇ ಇರಲಿಲ್ಲ. ಈಗ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ 700 ಜನ ವಿದೇಶಿಯರನ್ನು ಪತ್ತೆ ಹಚ್ಚಿರುವುದಾಗಿ ಹೇಳಿದ್ದಾರೆ. ಆದರೆ ಇವರು ಯಾರೂ ನುಸುಳುಕೋರರಲ್ಲ, ವಿದೇಶಿ ಪ್ರಜೆಗಳು. ಅದರಲ್ಲಿ 624 ಜನ ನೇಪಾಳದವರು, 33 ಜನ ಅಮೆರಿಕದಿಂದ ಬಂದು ನೆಲೆಸಿರುವವರು, ಆಸ್ಟ್ರೇಲಿಯಾದ 14, ಯೂರೋಪಿನ ವಿವಿಧ ದೇಶಗಳಿಂದ ಒಟ್ಟು 10, ಕೆನಡಾದ 8, ಶ್ರೀಲಂಕಾದ 4, ಯುಎಇಯ 3, ಆಫ್ರಿಕಾದ 2, ತಥಾಕಥಿತ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ತಲಾ ಒಬ್ಬರು. ಅವರೂ ಸಹ ಮದುವೆಯಾಗಿ ಬಂದವರು. ಮೊದಲಿಗೆ ವಿದೇಶಿ ಪ್ರಜೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಗೃಹ ಇಲಾಖೆ ಕೆಲಸ. ಅಮಿತ್‌ ಶಾ ಅವರು ಅದನ್ನು ಚುನಾವಣಾ ಆಯೋಗಕ್ಕೆ ನೀಡಿರುವುದು ಸರಿಯಲ್ಲ. ಇದು ಅದರ ಕೆಲಸವೂ ಅಲ್ಲ. ಈ ರೀತಿ ಬೆರಳೆಣಿಕೆಯ ಜನರನ್ನು ಪತ್ತೆ ಹಚ್ಚಲು ಕೋಟ್ಯಾಂತರ ಭಾರತೀಯರ ಮತಗಳನ್ನು ಡಿಲೀಟ್‌ ಮಾಡುವುದು ಅನ್ಯಾಯ ಮಾತ್ರವಲ್ಲ ಮಹಾಪರಾಧ ಎಂದು ಹೇಳಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆಯನ್ನು ಜನರಿಗೆ ಸ್ಪಷ್ಟ ತಿಳವಳಿಕೆ ನೀಡದೆ, ಅರಿವು ಮೂಡಿಸುವ ಕನಿಷ್ಟ ಪ್ರಯತ್ನವನ್ನೂ ಮಾಡದೆ ಮಾಡಲಾಗಿದೆ. ಕರಡು ಪಟ್ಟಿಯನ್ನು ಗ್ರಾಮ ಸಭೆ ಹಾಗೂ ವಾರ್ಡ್‌ ಸಭೆ ಕರೆದು ಓದಿ ಸಾರ್ವಜನಿಕ ತಿದ್ದುಪಡಿಗೆ ಒಳಪಡಿಸಬೇಕು ಎಂಬ ನಿಯಮವನ್ನು ಪಾಲಿಸಿಲ್ಲ. ಇಂದಿಗೂ ಸಹ ಡಿಲೀಟ್‌ ಆಗಿರುವ ಜನರಿಗೆ ತಾವು ಡಿಲೀಟ್‌ ಆಗಿದ್ದೇವೆ ಎಂಬುದು ಗೊತ್ತಿಲ್ಲ. ಪ್ರತಿ ಬೂತಿನಲ್ಲಿ ಡಿಲೀಟ್‌ ಆದವರ ಹೆಸರನ್ನು ಪ್ರಕಟಿಸುವ ಕನಿಷ್ಟ ಕೆಲಸವನ್ನೂ ಮಾಡಿಲ್ಲ. ಇದು ಚುನಾವಣಾ ಆಯೋಗದ ಕೈಪಿಡಿಯಲ್ಲಿರುವ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದ್ದಾರೆ.

ಎಸ್‌ಐಆರ್ ಎಂಬ ಈ ಸಂಕೀರ್ಣ ಪ್ರಕ್ರಿಯೆ ನಡೆಸಲು ಬಿಎಲ್‌ಒಗಳ ಮೇಲೆ ಅಪಾರ ಹೊರೆ ಹಾಕಲಾಗಿದೆ. ಸೂಕ್ತವಾದ ವ್ಯವಧಾನದ ತರಬೇತಿಯನ್ನೂ ನೀಡದೆ ಫಾರಂ ಕೊಟ್ಟು ಬೀದಿಗೆ ದಬ್ಬಿ ಅವರು ಪಡಬಾರದ ಸಂಕಷ್ಟ ಅನುಭವಿಸುವಂತೆ, ಜನರ ಆಕ್ರೋಶಕ್ಕೆ ಗುರಿಯಾಗುವಂತೆ ಮಾಡಲಾಗಿದೆ. ಇದರ ಪರಿಣಾಮವಾಗಿ ಈ ಅವಧಿಯಲ್ಲಿ 14 ಜನ ಬಿಎಲ್‌ಒಗಳು ಪ್ರಾಣ ಕಳೆದುಕೊಂಡಿದ್ದಾರೆ. ಮೇಲಿನವರ ಒತ್ತಡದಿಂದಾಗಿ ಅವರೂ ಸಹ ಅನೇಕ ಕಡೆ ಅರೆಬರೆ ವಿಧಾನದಲ್ಲಿ ಪ್ರಕ್ರಿಯೆ ಮಾಡಿ ಮುಗಿಸಿದ್ದಾರೆ. ಅನೇಕ ಜನ ಅರ್ಹ ಮತದಾರರು ತಪ್ಪು ತಪ್ಪಾಗಿ ಡಿಲೀಟ್‌ ಆಗಲು ಈ ಅವ್ಯವಸ್ಥಿತ ಹಾಗೂ ಒತ್ತಡದ ಪ್ರಕ್ರಿಯೆಯೂ ಕಾರಣವಾಗಿದೆ ಎಂದು ದೂರಿದ್ದಾರೆ.

ಎಸ್‌ಐಆರ್‌ ಪ್ರಕ್ರಿಯೆಯಿಂದಾಗಿ ಕರ್ನಾಟಕದ ಮತದಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವುದು, ಕೋಟಿಯಷ್ಟು ಜನರು ಮತಹಕ್ಕಿನಿಂದ ವಂಚಿತರಾಗಿರುವುದು ಮಾತ್ರವಲ್ಲ, ಇಡೀ ದೇಶದಲ್ಲಿ 13 ಕೋಟಿಗೂ ಹೆಚ್ಚಿನ ಮತದಾರರನ್ನು ಡಿಲೀಟ್‌ ಮಾಡಲಾಗಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದ ಚುನಾವಣೆಗಳು ಹೊಸ್ತಿಲಲ್ಲಿರುವಾಗ ಮತದಾರರ ಪಟ್ಟಿಯನ್ನು ವಿಕೃತಗೊಳಿಸಿ ಎರಡೂ ರಾಜ್ಯಗಳನ್ನು ಅಪಹರಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಅಪೀಲ್‌ ಹೋಗಿದ್ದರೂ ಮತಹಾಕಲು ಅವಕಾಶ ನೀಡದೆ ಚುನಾವಣೆ ನಡೆಸಿ ಸರ್ಕಾರವನ್ನೇ ಬದಲಾಯಿಸಲಾಗಿದೆ ಎಂದು ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆ ಎಂಬುದೇ ಅಕ್ರಮ ಪ್ರಕ್ರಿಯೆ. ಎಂದೂ ಇಲ್ಲದ ಪದ್ದತಿಯನ್ನು ಯಾರೊಡನೆಯೂ ಚರ್ಚೆ ಮಾಡದೆ ದೇಶದ ಜನರ ಮೇಲೆ ಹೇರಲಾಯಿತು. ಯಾವ ಸಾಂಸ್ಥಿಕ ಪರಿಶೀಲನೆಗೂ ಒಳಪಡದ ಸಾಫ್ಟ್‌ವೇರ್‌ಗಳನ್ನು ಬಳಸಲಾಯಿತು. ಇದೆಲ್ಲಾ ಅಕ್ರಮ ವಿಧಾನಗಳು. ಈ ಚುನಾವಣಾ ಆಯೋಗವೇ ಕಾನೂನುಬಾಹಿರ ರೀತಿಯಲ್ಲಿ ನಡೆದಿದೆ. ಇಬ್ಬರು ಚುನಾವಣಾ ಅಧಿಕಾರಿಗಳಿಗೆ ಭಿನ್ನಾಭಿಪ್ರಾಯವಿದ್ದಾಗಲೂ ಅವರ ಮಾತಿಗೆ ಯಾವುದೇ ಬೆಲೆ ಕೊಡದೆ ಗ್ಯಾನೇಶ್‌ ಕುಮಾರ್‌ ಏಕಪಕ್ಷೀಯವಾಗಿ ಮತ್ತು ನಿಯಮಬಾಹಿರವಾಗಿ ಆಯೋಗದ ಅನೇಕ ತೀರ್ಮಾನಗಳನ್ನು ತೆಗೆದುಕೊಂಡಿರುವುದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಬಯಲಿಗೆಳೆದಿದೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ತಪ್ಪು ವರದಿ ಮಾಡಿದ್ದಲ್ಲಿ ಅದರ ಮೇಲೇಕೆ ಕ್ರಮ ಜರುಗಿಸಲು ಚುನಾವಣಾ ಆಯೋಗ ಏಕೆ ಮುಂದಾಗಿಲ್ಲ. ಬದಲಿಗೆ ಈಗ ಫಾರಂ 6 ರಲ್ಲಿ ಡಿಕ್ಲೆರೇಷನ್‌ ತೆಗೆಯುವ, ಯಾರು ಬೇಕಾದರೆ ಡಿಕ್ಲೆರೇಷನ್‌ ಇಲ್ಲದೆ, ಮ್ಯಾಪಿಂಗ್‌ ಇಲ್ಲದೆ ಸೇರ್ಪಡೆ ಆಗಬಹುದು ಎಂದು ಹೇಳುವ, ಎಸ್‌ಐಆರ್ ನಡೆದಿರುವ ರಾಜ್ಯಗಳಲ್ಲಿ ಬಿಟ್ಟು ಹೋಗಿರುವ ಮತದಾರರನ್ನು ಒಳತರಲು ಎಸ್‌ಎಸ್‌ಆರ್‌ ನಡೆಸುತ್ತೇವೆ ಎಂದೆಲ್ಲಾ ಹೇಳುವುದರ ಅರ್ಥವಾದರೂ ಏನು? ಇದು ತಪ್ಪೊಪ್ಪಿಗೆ ಅಲ್ಲದೆ ಮತ್ತೇನು? ತಪ್ಪು ವಿಧಾನದಲ್ಲಿ ನಡೆದ ಮತದಾರರ ಪಟ್ಟಿಯನ್ನು ಕರ್ನಾಟಕ ಏತಕ್ಕೆ ಒಪ್ಪಬೇಕು? ಎಂದು ನೂರ್ ಶ್ರೀಧರ್ ಪ್ರಶ್ನಿಸಿದ್ದಾರೆ.

ಈ ಚುನಾವಣಾ ಆಯೋಗವೇ ನಿಷ್ಪಕ್ಷಪಾತವಾಗಿ ಆಯ್ಕೆಯಾಗಿಲ್ಲ. ಪ್ರಧಾನ ಮಂತ್ರಿ ಮತ್ತು ಗೃಹಮಂತ್ರಿ ಸೇರಿ ನೇಮಿಸಿರುವ ಕೈಗೊಂಬೆ ಆಯೋಗ. ಈ ಆಯೋಗ ಏನೇ ಮಾಡಿದರೂ ಕೋರ್ಟಿನಲ್ಲೂ ವಿಚಾರಣೆ ನಡೆಸಲು ಅವಕಾಶವಿರುವುದಿಲ್ಲ ಎಂಬ ಸರ್ವಾಧಿಕಾರವನ್ನು 2023ರ ತಿದ್ದುಪಡಿಯನ್ನು ಅಕ್ರಮ ವಿಧಾನದಲ್ಲಿ [ವಿರೋಧ ಪಕ್ಷದ 146 ಸದಸ್ಯರನ್ನು ಕುಂಟುನೆಪದ ಮೇಲೆ ಅಮಾನತುಗೊಳಿಸಿ, ಅವರ ಗೈರು ಹಾಜರಿಯಲ್ಲಿ ಅನುಮೋದನೆ] ಮಾಡಿಕೊಂಡದ್ದೆ ಇದೊಂದು ಯೋಜಿತ ಷಡ್ಯಂತ್ರ ಎಂಬುದಕ್ಕೆ ಸಾಕ್ಷಿ ಎಂದು ಶ್ರೀಧರ್ ಹೇಳಿದ್ದಾರೆ.

ಇಂಧೂರದ ಹೊನ್ನಾಪುರ ಮಾತನಾಡಿ, ಬೆಟ್ಟ ಅಗೆದು ಇಲಿ ಹಿಡಿದಂಗೆ ಎಂಬ ಮಾತಿದೆ. ಆದರೆ, ಈ ಎಸ್‌ಐಆರ್ ಮೂಲಕ ಬೆಟ್ಟ ಅಗೆದು ಇಲಿಯನ್ನೂ ಹಿಡಿದಿಲ್ಲ. ಮತದಾರರ ಪಟ್ಟಿಗಳ ಪರಿಷ್ಕರಣೆ ಎನ್ನುತ್ತ ಅರ್ಹ ಮತದಾರರನ್ನು ಪಟ್ಟಿಯಿಂದ ಡಿಲೀಟ್ ಮಾಡಿದರು. ನುಸುಳಕೋರರನ್ನು ಪತ್ತೆ ಮಾಡುತ್ತೇವೆ ಎಂದು ಎಸ್‌ಐಆರ್ ಮಾಡಿ, ನುಸುಳುಕೋರರನ್ನು ಪತ್ತೆ ಮಾಡಲೂ ಚುನಾವಣಾ ಆಯೋಗದಿಂದ ಆಗಿಲ್ಲ. ಅವರೇ ಕೋಲು ಕೊಟ್ಟು ಹೊಡೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಹೊಸ ಪಟ್ಟಿಯಲ್ಲಿ ಹೊಸತೇನು ಇಲ್ಲ, ಅರ್ಹರನ್ನು ತೆಗೆದು ಹಾಕುವುದು ಹೊಸತಾ? ಎಂದು ಪ್ರಶ್ನಿಸಿದ ಹೊನ್ನಾಪುರ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅಕ್ರಮ ಶಿಶು, ಅವರನ್ನು ಆ ಸ್ಥಾನದಿಂದ ವಜಾಗೊಳಿಸುವುದು ಮಾತ್ರವಲ್ಲ, ಎಸ್‌ಐಅರ್ ಖರ್ಚು ಅವರ ಸ್ವಂತ ಖರ್ಚಿನಿಂದ ವಸೂಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಗ್ಯಾನೇಶ್ ಕುಮಾರ್, ಮೋದಿ, ಅಮಿತ್ ಶಾ, ಭಾಗವತ್ ತಂಡ ಸಂವಿಧಾನದ ಮೂಲವನ್ನೇ ಬುಡಮೇಲು ಮಾಡಲು ಹೊರಟಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿಯಾಗಬೇಕಿದೆ ಎಂದ ಅವರು, ದಲಿತ ಸಂಘಟನೆಗಳು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದ್ದಾರೆ.

ಹಿರಿಯ ದಲಿತ ಹೋರಾಟಗಾರ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ಚುನಾವಣಾ ಆಯುಕ್ತರ ನೇಮಕವೇ ಅಕ್ರಮ, ಅದು ನಡೆಸಿದ ಚುನಾವಣೆಯೂ ಅಕ್ರಮ, ಆ ಚುನಾವಣೆಗಳಲ್ಲಿ ಆಯ್ಕೆಯಾದ ಸರ್ಕಾರವೂ ಅಕ್ರಮ ಸರ್ಕಾರ ಎಂದು ಹೇಳಿದ್ದಾರೆ.

ಮೋದಿ, ಅಮಿತ್ ಶಾ, ಗ್ಯಾನೇಶ್ ಕುಮಾರ್ ತಂಡ ಸೇರಿಕೊಂಡು ನಡೆಸಿದ ಎಸ್‌ಐಆರ್ ಅಕ್ರಮಗಳು ಜನರಿಗೆ ಸರಿಯಾಗಿ ಗೊತ್ತಾಗಿಲ್ಲ. ನಿಜ ವಿಷಯ ಗೊತ್ತಾದರೆ ಜನರು ಇವರನ್ನು ಅಟ್ಟಾಡಿಸಿ ಹೊಡೆಯುತ್ತಾರೆ. ಅನ್ಯಾಯ ಅಕ್ರಮಗಳಿಗಾಗಿ ಗ್ಯಾನೇಶ್ ಕುಮಾರ್ ವಜಾ ಆಗಬೇಕು, ಅವರನ್ನು ಶಿಕ್ಷೆಗೆ ಒಳಪಡಿಸಬೇಕು. ಈ ಎಸ್‌ಐಆರ್ ವಿರೋಧಿ ಹೋರಾಟಕ್ಕೆ ಡಿಎಸ್‌ಎಸ್‌ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಅಂತಿಮ ಪಟ್ಟಿ ಒಪ್ಪಬಾರದು

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಚುನಾವಣಾ ಆಯೋಗದ ಅಂತಿಮ ಮತದಾರರ ಪಟ್ಟಿಯನ್ನು ಒಪ್ಪಬಾರದು. ಸರ್ಕಾರ ಅರ್ಹ ಮತದಾರರನ್ನು ಪತ್ತೆ ಹಚ್ಚಲು ಪಬ್ಲಿಕ್ ಹಿಯರಿಂಗ್ ಮೂಲಕ ಸೋಶಿಯಲ್ ಆಡಿಟ್ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಸ್‌ಐಆರ್‌ ಪಟ್ಟಿಯನ್ನು ಬಳಸಬಾರದು. ಗ್ಯಾನೇಶ್ ಕುಮಾರ್ ರಾಜೀನಾಮೆ ಕೊಟ್ಟು, ಹೊಸ ಚುನಾವಣಾ ಆಯುಕ್ತ ನೇಮಕ ಆಗುವವರೆಗೆ ಅಸಹಕಾರ ಮುಂದುವರಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಇಂಡಿಯಾ ಮೈತ್ರಿಕೂಟದ ಹೋರಾಟಕ್ಕೆ ಬೆಂಬಲ

ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟ ಹಮ್ಮಿಕೊಂಡಿರುವ ‘ದೆಹಲಿ ಚಲೋ’ ಹೋರಾಟಕ್ಕೆ ನಾವು ಬೆಂಬಲ ಕೊಡುತ್ತೇವೆ. ಅದೇ ರೀತಿ ನವೆಂಬರ್ 5ರಂದು ಬೆಂಗಳೂರಿನಲ್ಲಿ ನಡೆಯುವ ಇಂಡಿಯಾ ಮೈತ್ರಿಕೂಟದ ಹೋರಾಟದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ತಿಳಿಸಿದೆ.

ಇಂಡಿಯಾ ಮೈತ್ರಿಕೂಟ ತನ್ನ ಹೋರಾಟವನ್ನು ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಇದನ್ನು ಒಂದು ಆಂದೋಲನವಾಗಿ ತೆಗೆದುಕೊಂಡು ಹೋಗಬೇಕು ಎಂದು ಒಕ್ಕೂಟ ಮನವಿ ಮಾಡಿದೆ.

ಎಲ್ಲಾ ಜನಪರ, ರೈತ, ದಲಿತ, ಅಲ್ಪಸಂಖ್ಯಾತ, ಯುವಜನ, ಮಹಿಳಾ, ಆದಿವಾಸಿ, ಅಲೆಮಾರಿ ಸಂಘಟನೆಗಳ ಮಹಾ ಒಕ್ಕೂಟವನ್ನು ‘ಪೀಪಲ್ ಅಗೆನೆಸ್ಟ್ ಎಸ್‌ಐಆರ್’ ಎಂಬ ಹೆಸರಿನಲ್ಲಿ ನಾವು ರಚಿಸಿಕೊಂಡಿದ್ದೇವೆ. ಅದರ ಅದೀನದಲ್ಲಿ ಮೊದಲ ಹೋರಾಟವಾಗಿ ಅ.23ರಂದು ಬೆಂಗಳೂರು, ದೆಹಲಿ ಸೇರಿದಂತೆ ದೇಶದಾದ್ಯಂತ ಕನಿಷ್ಠ 100 ಕಡೆಗಳಲ್ಲಿ ತಿರಂಗ ರ‍್ಯಾಲಿ ನಡೆದಿದೆ. ಮುಂದೆ ನ.26ರಿಂದ ಪ್ರಾರಂಭಿಸಿ ಅನಿರ್ದಿಷ್ಟವಾಗಿ ಡಿ.10ರವರೆಗೆ ಒಂದು ಬೃಹತ್ ಆಂದೋಲವನ್ನು ದೇಶವ್ಯಾಪಿ ರೂಪಿಸಲು ಯೋಜಿಸಿದ್ದೇವೆ ಎಂದು ಒಕ್ಕೂಟ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ವಿ. ನಾಗರಾಜ್, ಇಂದಿರಮ್ಮ ಮಾತನಾಡಿದರು. ವೀರಸಂಗಯ್ಯ, ಕೆ.ಎಲ್‌ ಅಶೋಕ್, ಇಸಾಬೆಲ್ಲ ಝೇವಿಯರ್ ಸೇರಿದಂತೆ ಒಕ್ಕೂಟದ ಹಲವು ಮುಖಂಡರು ಹಾಜರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ; ಪ್ರತಿಭಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ಸಾಧ್ಯತೆ

ಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುವ ನಿರೀಕ್ಷೆಯಿರುವ ಬೆನ್ನಲ್ಲೇ, ವಿದ್ಯಾರ್ಥಿಗಳ ಹೋರಾಟಕ್ಕೆ ಪಕ್ಷವು ಬೆಂಬಲ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಸಂಘವನ್ನು (ಜೆಎಂಐಎಸ್‌ಯು)...

ಎಂಎಲ್‌ಸಿ ಚುನಾವಣೆ ಸೋಲಿನ ಹಿಂದಿರುವ ರಾಜಕೀಯ – ಸಂಘಟನಾತ್ಮಕ ಕಾರಣಗಳ ಕುರಿತು ಪರಾಮರ್ಶಿಸುತ್ತೇವೆ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್

ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಸೋಲಿನ ಹಿಂದಿರುವ ರಾಜಕೀಯ ಹಾಗೂ ಸಂಘಟನಾತ್ಮಕ ಕಾರಣಗಳ ಕುರಿತು ಸಮಗ್ರ ಪರಾಮರ್ಶೆ ನಡೆಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್...

ಸ್ಪೇನ್‌ನಲ್ಲಿ ಅತಿ ವೇಗದ ರೈಲುಗಳ ನಡುವೆ ಡಿಕ್ಕಿ; ಕನಿಷ್ಠ 46 ಮಂದಿ ಸಾವು

ಸ್ಪೇನ್‌ನ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಎರಡು ಅತಿ ವೇಗದ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪೇನ್‌ನ ಎಬಿಸಿ (ಎಬಿಸಿ) ಸುದ್ದಿ ಸಂಸ್ಥೆ ವರದಿ ಮಾಡಿದೆ....

ಇಸ್ರೇಲ್ ಚುನಾವಣೆಯಲ್ಲಿ ಸಿಗದ ಬಹುಮತ; ಆದರೂ ಗೆಲುವಿನ ಹಕ್ಕು ಮಂಡಿಸಿದ ನೆತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಜೆರುಸಲೇಮ್‌ನಲ್ಲಿರುವ ಲಿಕುಡ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಹೂದಿ ಮತ್ತು ಝಿಯೋನಿಸ್ಟ್...

ದೆಹಲಿ: 2020ರ ಮುಸ್ಲಿಂ ವಿರೋಧಿ ಹಿಂಸಾಚಾರದಲ್ಲಿ 22 ವರ್ಷದ ಯುವಕನ ಹತ್ಯೆ: ಐವರು ಹಿಂದುತ್ವವಾದಿಗಳಿಗೆ ಏಳು ವರ್ಷ ಜೈಲು ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರದ ಸಂದರ್ಭದಲ್ಲಿ 22 ವರ್ಷದ ಮುಸ್ಲಿಂ ಯುವಕ ಮೋನಿಷ್  ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಐವರು ಹಿಂದುತ್ವವಾದಿ ಪುರುಷರಿಗೆ ವಿಧಿಸಲಾಗಿದ್ದ ಏಳು ವರ್ಷಗಳ...

ಅರ್ನಬ್ ಚಂಡಮಾರುತ: ಆಂಧ್ರಪ್ರದೇಶದಲ್ಲಿ ಮೂವರ ಸಾವು; ಹಲವು ಮನೆಗಳಿಗೆ ಹಾನಿ

ಅರ್ನಬ್ ಚಂಡಮಾರುತವು ಆಂಧ್ರಪ್ರದೇಶದಲ್ಲಿ ಭಾರೀ ಹಾನಿಯನ್ನುಂಟುಮಾಡಿದೆ. ಚಂಡಮಾರುತದಿಂದಾಗಿ ಮೂವರು ಮೃತಪಟ್ಟಿದ್ದು, 31 ಮನೆಗಳು ಹಾನಿಗೀಡಾಗಿವೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್‌)ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಚಂಡಮಾರುತವು ಪುದುಚೇರಿಯ ಯಾನಂ ಸಮೀಪದ...

ಉತ್ತರ ಪ್ರದೇಶದ ವಿಧಾನ ಪರಿಷತ್ತಿನ ಫಲಿತಾಂಶ: ವಾರಣಾಸಿಯ ಎರಡೂ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷಕ್ಕೆ ಭರ್ಜರಿ ಗೆಲುವು

ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್‌ಪಿ) ಗಮನಾರ್ಹ ಸಾಧನೆ ಮಾಡಿದೆ. ವಾರಣಾಸಿ ಶಿಕ್ಷಕರ...

ಎಂಎಲ್‌ಸಿ ಚುನಾವಣೆ ಫಲಿತಾಂಶ: ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೆ ಜಯ; ಕಾಂಗ್ರೆಸ್‌ಗೆ ಭಾರೀ ಹಿನ್ನಡೆ

ಕರ್ನಾಟಕ ವಿಧಾನ ಪರಿಷತ್ತಿನ ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ವಿಫಲವಾಗಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದರೆ, ಅದರ...

ಥೇಣಿ ಉಪಜೈಲಿನಿಂದ 17 ವಿಚಾರಣಾಧೀನ ಕೈದಿಗಳ ಪರಾರಿ ಪ್ರಕರಣ; ಡ್ರೋನ್ ತಂತ್ರಜ್ಞಾನದ ನೆರವಿನಿಂದ 13 ಮಂದಿ ಸೆರೆ

ತಮಿಳುನಾಡಿನ ಥೇಣಿ ಜಿಲ್ಲಾ ಜೈಲಿನಿಂದ 17 ಕೈದಿಗಳು ಪರಾರಿಯಾದ ಒಂದು ದಿನದೊಳಗೆ, ಮಂಗಳವಾರ ಸಂಜೆಯ ವೇಳೆಗೆ ತಮಿಳುನಾಡು ಪೊಲೀಸರು ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಅವರ ಪೈಕಿ 13 ಮಂದಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ವಲಯದ...

ಬೆಂಗಳೂರಿನಲ್ಲಿ 46.88 ಲಕ್ಷ ಮತದಾರರ ಹೆಸರು ಕಟ್‌: ಎಸ್‌ಐಆರ್‌ ಬಳಿಕ ಅರ್ಧದಷ್ಟು ಮತದಾರರು ಪಟ್ಟಿಯಿಂದ ಹೊರಕ್ಕೆ 

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ಬರೋಬ್ಬರಿ 46.88 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಂದರೆ, ಎಸ್‌ಐಆರ್‌ ಆರಂಭಕ್ಕೂ ಮುನ್ನ ನಗರದಲ್ಲಿದ್ದ ಒಟ್ಟು...