ದೇಶದಲ್ಲಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೂಲಕ ಸದ್ದಿಲ್ಲದೆ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲ್ಲಾಡಿಸಲಾಗುತ್ತಿದೆ ಎಂಬ ಆರೋಪಗಳ ನಡುವೆ, ರಾಜಧಾನಿ ನವದೆಹಲಿ ಬೃಹತ್ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಯಿತು. ‘ಇಂಡಿಯಾ’ (INDIA) ಒಕ್ಕೂಟ ನವದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ವೋಟ್ ಬಚಾವೋ, ದೇಶ್ ಬಚಾವೋ’ ರ್ಯಾಲಿಯಲ್ಲಿ ಭಾಗವಹಿಸುವ ಮುನ್ನ ತೆಲಂಗಾಣ ಭವನದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಆಡಳಿತಾರೂಢ ಬಿಜೆಪಿಯ ಚುನಾವಣಾ ತಂತ್ರಗಾರಿಕೆಗಳ ವಿರುದ್ಧ ಕಟು ಭಾಷೆಯಲ್ಲಿ ವಾಗ್ದಾಳಿ ನಡೆಸಿದರು.
ತಮ್ಮ ಭಾಷಣದಲ್ಲಿ ಪೌರಾಣಿಕ ಉಲ್ಲೇಖಗಳನ್ನು ಬಳಸಿದ ರೇವಂತ್ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಶೈಲಿ ಹಾಗೂ ಚುನಾವಣಾ ತಂತ್ರಗಳನ್ನು ತೀವ್ರವಾಗಿ ವಿಮರ್ಶಿಸಿ “ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕತೆಯ ಹೆಸರಿನಲ್ಲಿ ದೇಶದ ಜನರನ್ನು ವಿಭಜಿಸಿ ಪ್ರಧಾನಿ ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದಾರೆ. ಶ್ರೀರಾಮನಿಗೆ ಸಾಥ್ ನೀಡಿ ರಾವಣನನ್ನು ಸಂಹಾರ ಮಾಡಲು ವಾನರ ಸೇನೆ ಲಂಕೆಗೆ ತೆರಳಿದ್ದಂತೆ, ಪ್ರಜಾಪ್ರಭುತ್ವ ವಿರೋಧಿಯಾದ ಮೋದಿ ಎಂಬ ರಾವಣನನ್ನು ಮಟ್ಟಹಾಕಲು ತೆಲಂಗಾಣದಿಂದ ಕಾಂಗ್ರೆಸ್ನ ವಾನರ ಸೇನೆ ನವದೆಹಲಿಗೆ ಧಾವಿಸಿದೆ” ಎಂದು ಪ್ರತಿಪಾದಿಸಿದರು.
ತಮ್ಮ ಸುದೀರ್ಘ ಭಾಷಣದಲ್ಲಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ಗಂಭೀರ ಆರೋಪಗಳನ್ನು ಮಾಡಿದ ರೇವಂತ್ ರೆಡ್ಡಿ, ಚುನಾವಣಾ ಆಯೋಗವು ಪ್ರಸ್ತುತ ಜಾರಿಗೊಳಿಸುತ್ತಿರುವ ಕಾಯ್ದೆಯು ಬಡವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮತದಾನದ ಹಕ್ಕನ್ನು ಕಸಿಯುವ ಯೋಜಿತ ಸಂಚು ಎಂದು ಬಣ್ಣಿಸಿದರು. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಈಗಾಗಲೇ ಸುಮಾರು 13.50 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ವಿಲೇವಾರಿ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಈ ಸಂಖ್ಯೆ 20 ಕೋಟಿಗೆ ತಲುಪುವ ಭೀತಿಯಿದೆ ಎಂದು ತಿಳಿಸಿದರು. ಈ ಹಿಂದೆ ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ಇದೇ ರೀತಿಯಲ್ಲಿ ಮತಗಳನ್ನು ಕಡಿತಗೊಳಿಸುವ ಮೂಲಕ ಬಿಜೆಪಿ ಚುನಾವಣಾ ಲಾಭ ಪಡೆದುಕೊಂಡಿತ್ತು ಎಂದು ಅವರು ಆರೋಪಿಸಿದರು.
2024ರ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸಂವಿಧಾನ ಪರಿಷ್ಕರಣೆ ಮಾಡಲು ಯೋಜಿಸಿದ್ದ ಬಿಜೆಪಿಯ ಯತ್ನವನ್ನು ದೇಶದ ಜನತೆ ಬಹುಮತ ನೀಡದೆ ವಿಫಲಗೊಳಿಸಿದ್ದಾರೆ ಎಂದ ಸಿಎಂ, ಆ ಸೋಲಿನ ಆಕ್ರೋಶದಿಂದ ಈಗ ಬಡ ಮತದಾರರ ಹೆಸರುಗಳನ್ನು ವಜಾಗೊಳಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ದೆಹಲಿಯಲ್ಲಿ ನಡೆಯುವ ಈ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ತೆಲಂಗಾಣದಿಂದ ಸುಮಾರು 15000 ಕಾರ್ಯಕರ್ತರು ಬರಬೇಕಿತ್ತಾದರೂ, ಕೊನೆಯ ಕ್ಷಣದಲ್ಲಿ ರೈಲ್ವೆ ಇಲಾಖೆಯು ವಿಶೇಷ ರೈಲು ಬುಕಿಂಗ್ ಸೌಲಭ್ಯವನ್ನು ರದ್ದುಗೊಳಿಸಿ ತಡೆಯೊಡ್ಡಲು ಯತ್ನಿಸಿತು ಎಂದು ರೇವಂತ್ ರೆಡ್ಡಿ ಕಿಡಿಕಾರಿದರು. ಆದರೆ ಇಂತಹ ಆಡಳಿತಾತ್ಮಕ ತಡೆಗೋಡೆಗಳಿಂದ ಕಾರ್ಯಕರ್ತರ ಹಠ ಹಾಗೂ ಪ್ರಜಾಪ್ರಭುತ್ವ ರಕ್ಷಣೆಯ ಸಂಕಲ್ಪವನ್ನು ತಡೆಯಲು ಸಾಧ್ಯವಿಲ್ಲ ಎಂದ ಅವರು, ರಾಮ್ಲೀಲಾ ಮೈದಾನದಿಂದ ಆರಂಭಗೊಂಡಿರುವ ಈ ಚಳವಳಿಯು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮರುಸ್ಥಾಪನೆಯಾಗುವವರೆಗೆ ಮುಂದುವರಿಯಲಿದೆ ಎಂದು ತಿಳಿಸಿದರು.


