ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ನವೆಂಬರ್ 1 ರಂದು ಬರ್ಬರ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 16 ವರ್ಷದ ದಲಿತ ಬಾಲಕಿ, ಆಗ್ರಾದ ಆಸ್ಪತ್ರೆಯೊಂದರಲ್ಲಿ ಸುಮಾರು ಒಂದು ವಾರಗಳ ಕಾಲ ಸಾವಿನೊಂದಿಗೆ ಹೋರಾಡಿದ ನಂತರ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ.
ಆಕೆಯನ್ನು ಹೊಲವೊಂದರಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆ ಮಾಡಲಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯು “ಲೈಂಗಿಕ ದೌರ್ಜನ್ಯ” ನಡೆದಿರುವುದನ್ನು ಹಾಗೂ “ಕುತ್ತಿಗೆ ಮುರಿತ, ದವಡೆ ಜಜ್ಜಲ್ಪಟ್ಟಿರುವುದು ಮತ್ತು ಬಹು ಅಂಗಾಂಗಗಳಿಗೆ ಗಂಭೀರ ಗಾಯಗಳಾಗಿರುವುದನ್ನು” ದೃಢಪಡಿಸಿದೆ.
ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆಕೆಯ ಸಂಬಂಧಿಯೊಬ್ಬರು, “ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹಿಂಸಿಸಿ, ಸಾಯಲು ಬಿಟ್ಟು ಹೋಗಲಾಗಿತ್ತು. ವೆಂಟಿಲೇಟರ್ ಬೆಂಬಲದಲ್ಲಿ ಆಕೆಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಸಾವಿಗೂ ಮುನ್ನ ಆಕೆಗೆ ತನ್ನ ಹೇಳಿಕೆಯನ್ನು ದಾಖಲಿಸಲು ಸಾಧ್ಯವಾಗಲಿಲ್ಲ” ಎಂದು ತಿಳಿಸಿದರು.
ಫಿರೋಜಾಬಾದ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಆದಿತ್ಯ ಲಂಗೇಶ್ ಮಾತನಾಡಿ, “ಆರೋಪಿಗಳಿಬ್ಬರೂ ಸೇರಿದಂತೆ ಒಟ್ಟು ಮೂವರನ್ನೂ ಬಂಧಿಸಲಾಗಿದೆ. ‘ಆಪರೇಷನ್ ಕನ್ವಿಕ್ಷನ್’ ಅಡಿಯಲ್ಲಿ ಈ ಪ್ರಕರಣವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ‘ಗ್ಯಾಂಗ್ಸ್ಟರ್ಸ್ ಆಕ್ಟ್’ ಅಡಿಯಲ್ಲೂ ಕ್ರಮ ಕೈಗೊಳ್ಳಲಾಗುವುದು; ಇದರಲ್ಲಿ ಅವರ ಆಸ್ತಿಪಾಸ್ತಿಗಳ ತನಿಖೆ ಹಾಗೂ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ಜಪ್ತಿ ಮಾಡುವ ಪ್ರಕ್ರಿಯೆಗಳೂ ಸೇರಿವೆ” ಎಂದು ಹೇಳಿದರು.
ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ, ಪೊಲೀಸರು 20, 21 ಮತ್ತು 28 ವರ್ಷ ವಯಸ್ಸಿನ ಮೂವರು ಆರೋಪಿಗಳನ್ನು ಗುರುತಿಸಿದ್ದಾರೆ. ಇವರೆಲ್ಲರೂ ಅದೇ ಜಿಲ್ಲೆಯ ಒಂದೇ ಬಡಾವಣೆಗೆ ಸೇರಿದವರಾಗಿದ್ದಾರೆ.
ಆರಂಭದಲ್ಲಿ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ಗಳಾದ 109(1) (ಕೊಲೆ ಯತ್ನ), 70(2) (18 ವರ್ಷದೊಳಗಿನ ಬಾಲಕಿ ಅಥವಾ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ) ಮತ್ತು 137 (ಅಪಹರಣ) ಅಡಿಯಲ್ಲಿ, ಹಾಗೂ ಪೋಕ್ಸೊ ಕಾಯಿದೆ ಮತ್ತು ಎಸ್ಸಿ/ಎಸ್ಟಿ ಕಾಯಿದೆಯಡಿ ಎಫ್ಐಆರ್ ದಾಖಲಿಸಲಾಗಿತ್ತು. ಬಾಲಕಿಯ ಮರಣದ ನಂತರ, ಬಿಎನ್ಎಸ್ ಸೆಕ್ಷನ್ 109(1) ಅನ್ನು 103(1) (ಕೊಲೆ) ಎಂದು ಬದಲಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, “ವಿಚಾರಣೆಯ ವೇಳೆ ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳ ಪೈಕಿ ಒಬ್ಬನಿಗೆ ಆಕೆ ಕಳೆದ ಕೆಲವು ತಿಂಗಳುಗಳಿಂದ ಪರಿಚಯವಿದ್ದಿರಬಹುದು ಎಂದು ಶಂಕಿಸಲಾಗಿದೆ. ಆತ ಆಕೆಯನ್ನು ನಂಬಿಸಿ ಹತ್ತಿರದ ಹೊಲವೊಂದಕ್ಕೆ ಕರೆದೊಯ್ದಿದ್ದನು.
“ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ, ಅವರು ಆಕೆಯ ಕುತ್ತಿಗೆಯನ್ನು ಹಿಸುಕಿ, ಅಂಗಾಂಗಗಳನ್ನು ಮತ್ತು ದವಡೆಯನ್ನು ಜಜ್ಜಿದರು. ಆಕೆ ಸತ್ತಿದ್ದಾಳೆ ಎಂದು ಭಾವಿಸಿ ಅವರು ಅಲ್ಲಿಂದ ಪರಾರಿಯಾದರು. ನವೆಂಬರ್ 1 ರ ರಾತ್ರಿ ನಡೆದ ಸಂಕ್ಷಿಪ್ತ ಮುಖಾಮುಖಿಯ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು; ಮೂರನೇ ಆರೋಪಿಯನ್ನು ಮರುದಿನ ಬಂಧಿಸಲಾಯಿತು” ಎಂದು ಪ್ರಕರಣದ ತನಿಖೆಯ ಬಗ್ಗೆ ಮಾಹಿತಿ ಇರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪರಿಹಾರ ಸೇರಿದಂತೆ ನೆರವು ನೀಡುವುದಾಗಿ ಹಿರಿಯ ಅಧಿಕಾರಿಗಳು ಆಕೆಯ ಕುಟುಂಬಕ್ಕೆ ಭರವಸೆ ನೀಡಿದರು; ಇದರ ಬೆನ್ನಲ್ಲೇ, ಆಕೆಯ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಒಪ್ಪಿಕೊಂಡರು.


