ನವೆಂಬರ್ 19, 2026ರಂದು, ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯವಾದ ಇಂಟರ್‌ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ) ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಮ್ಯಾನ್ಮಾರ್ ನರಮೇಧ ನಡೆಸಿದೆ ಎಂದು ಐತಿಹಾಸಿಕ ತೀರ್ಪು ನೀಡಿದೆ. ಅಂತಾರಾಷ್ಟ್ರೀಯ ನ್ಯಾಯಾಲಯದ 80 ವರ್ಷಗಳ ಇತಿಹಾಸದಲ್ಲಿ ಒಂದು ದೇಶವನ್ನು ನರಮೇಧಕ್ಕೆ ನೇರವಾಗಿ ಹೊಣೆಗಾರನನ್ನಾಗಿ ಮಾಡಿರುವ ಮೊದಲ ಪ್ರಕರಣ ಇದಾಗಿದೆ.
ಪಶ್ಚಿಮ ಆಫ್ರಿಕಾದ ದೇಶವಾದ ಗ್ಯಾಂಬಿಯಾ 2019ರಲ್ಲಿ 57 ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಸದಸ್ಯ ರಾಷ್ಟ್ರಗಳ ಪರವಾಗಿ ಮ್ಯಾನ್ಮಾರ್ ವಿರುದ್ಧ ಈ ಪ್ರಕರಣವನ್ನು ದಾಖಲಿಸಿತ್ತು.
2017ರಲ್ಲಿ ಮ್ಯಾನ್ಮಾರ್ ಸೇನೆಯು ರಾಖೈನ್ ರಾಜ್ಯದಲ್ಲಿ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ 1948ರ ವಿಶ್ವಸಂಸ್ಥೆಯ ನರಮೇಧ ತಡೆ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು. ಈ ಕಾರ್ಯಾಚರಣೆಯಿಂದ ಸುಮಾರು 10,000 ರೋಹಿಂಗ್ಯಾಗಳು ಹತ್ಯೆಯಾಗಿದ್ದು, 7 ಲಕ್ಷಕ್ಕೂ ಹೆಚ್ಚು ಜನರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು.
15 ನ್ಯಾಯಾಧೀಶರ ಐಸಿಜೆ ಪೀಠವು, ಅಧ್ಯಕ್ಷ ಯುಜಿ ಇವಾಸಾವಾ ನೇತೃತ್ವದಲ್ಲಿ 9-6 ಬಹುಮತದೊಂದಿಗೆ ತೀರ್ಪು ಪ್ರಕಟಿಸಿದೆ.
ಉತ್ತರ ರಾಖೈನ್ ರಾಜ್ಯದಲ್ಲಿದ್ದ ರೋಹಿಂಗ್ಯಾ ಸಮುದಾಯದ ಗಣನೀಯ ಭಾಗವನ್ನು ನಾಶಪಡಿಸುವ ಸ್ಪಷ್ಟ ಉದ್ದೇಶದಿಂದಲೇ ಮ್ಯಾನ್ಮಾರ್ ಭದ್ರತಾ ಪಡೆಗಳು ಸಾಮೂಹಿಕ ಹತ್ಯೆ, ಅತ್ಯಾಚಾರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಎಸಗಿವೆ ಎಂದು ನ್ಯಾಯಾಲಯ ಹೇಳಿದೆ.
ನರಮೇಧವನ್ನು ತಡೆಯುವಲ್ಲಿ ಮತ್ತು ತಪ್ಪಿತಸ್ಥ ಸೇನಾಧಿಕಾರಿಗಳನ್ನು ಶಿಕ್ಷಿಸುವಲ್ಲಿ ಮ್ಯಾನ್ಮಾರ್ ಸರ್ಕಾರ ವಿಫಲವಾಗಿದೆ ಎಂದು 11-4 ಮತಗಳಿಂದ ತೀರ್ಪು ನೀಡಲಾಗಿದೆ.
ಅಂತಾರಾಷ್ಟ್ರೀಯ ನ್ಯಾಯಾಲಯದ ಈ ತೀರ್ಪು ಅಂತಿಮವಾಗಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ.
ಹ್ಯೂಮನ್ ರೈಟ್ ವಾಚ್ ಮತ್ತು ನ್ಯಾಯಾಲಯದ ದಾಖಲೆಗಳ ಪ್ರಕಾರ, ಮ್ಯಾನ್ಮಾರ್ ಸರ್ಕಾರಕ್ಕೆ ಈ ಕೆಳಗಿನ ನಿರ್ದೇಶನಗಳನ್ನು ನೀಡಲಾಗಿದೆ:
1. ನರಮೇಧದಲ್ಲಿ ಭಾಗಿಯಾದ ಎಲ್ಲಾ ಶಂಕಿತ ವ್ಯಕ್ತಿಗಳನ್ನು ತಕ್ಷಣವೇ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಿ ಶಿಕ್ಷಿಸಬೇಕು.
2. ಬಾಂಗ್ಲಾದೇಶ ಮತ್ತು ಇತರೆಡೆ ನಿರಾಶ್ರಿತರಾಗಿರುವ ರೋಹಿಂಗ್ಯಾಗಳು ತಮ್ಮ ಮೂಲ ಸ್ಥಳಗಳಿಗೆ ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಮರಳಲು ವ್ಯವಸ್ಥೆ ಮಾಡಬೇಕು.
3. ಸಂತ್ರಸ್ತ ಸಮುದಾಯಕ್ಕೆ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕೈಗೊಂಡ ಕ್ರಮಗಳ ಕುರಿತು ಎರಡು ವರ್ಷಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು.
ಐಸಿಜೆಯ ತೀರ್ಪಿಗೆ ರೋಹಿಂಗ್ಯಾ ನಿರಾಶ್ರಿತರಿಂದ ಸ್ವಾಗತ, ತಾಯ್ನಾಡು ಮ್ಯಾನ್ಮಾರ್‌ಗೆ ಮರಳುವ ಇಂಗಿತ:
ಮ್ಯಾನ್ಮಾರ್ ಸೇನೆ ನರಮೇಧ ನಡೆಸಿದೆ ಎಂಬ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ರೋಹಿಂಗ್ಯಾ ನಿರಾಶ್ರಿತರು ಸ್ವಾಗತಿಸಿದ್ದು, ತಾಯ್ನಾಡಿಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಈ ಮಹತ್ವದ ತೀರ್ಪನ್ನು ಬಾಂಗ್ಲಾದೇಶದ ಕಾಕ್ಸ್ ಬಜಾರ್ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ರೋಹಿಂಗ್ಯಾ ನಿರಾಶ್ರಿತರು ಸಂಭ್ರಮದಿಂದ ಸ್ವಾಗತಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದೆ.
ನೆದರ್ಲ್ಯಾಂಡ್ಸ್‌ನ ಹೇಗ್‌ನಲ್ಲಿರುವ ನ್ಯಾಯಾಲಯದ ತೀರ್ಪನ್ನು ಶಿಬಿರಗಳಲ್ಲಿ ಬೃಹತ್ ಪರದೆಗಳ ಮೂಲಕ ವೀಕ್ಷಿಸಿದ ನೂರಾರು ನಿರಾಶ್ರಿತರು, ತಮ್ಮ ನೋವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯಾಯ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ತಮ್ಮ ತಾಯ್ನಾಡಾದ ಮ್ಯಾನ್ಮಾರ್‌ಗೆ ಸುರಕ್ಷಿತವಾಗಿ ಮರಳಲು ಅನುವು ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ ಎಂದು ಹೇಳಿದೆ.
“ಈ ತೀರ್ಪು ನಮಗೆ ಸಿಕ್ಕ ಸಣ್ಣ ಗೆಲುವು ಮತ್ತು ನ್ಯಾಯದ ಆರಂಭವಷ್ಟೇ. ನಾವು ಸುರಕ್ಷಿತವಾಗಿ ಮ್ಯಾನ್ಮಾರ್‌ಗೆ ಮರಳಿದಾಗ ಮಾತ್ರ ನಮಗೆ ಸಂಪೂರ್ಣ ತೃಪ್ತಿ ಸಿಗಲಿದೆ” ಎಂದು ನಿರಾಶ್ರಿತ ಸಮುದಾಯದ ನಾಯಕ ಮೊಹಮ್ಮದ್ ರಫೀಕ್ ಹೇಳಿದ್ದಾರೆ.
“ಮ್ಯಾನ್ಮಾರ್ ಸರ್ಕಾರವು ರೋಹಿಂಗ್ಯಾಗಳ ಅಸ್ತಿತ್ವವನ್ನೇ ನಿರಾಕರಿಸುತ್ತಿತ್ತು. ಆದರೆ ಈಗ ವಿಶ್ವಸಂಸ್ಥೆಯ ನ್ಯಾಯಾಲಯವು ನಮ್ಮನ್ನು ಒಂದು ಪ್ರತ್ಯೇಕ ಜನಾಂಗೀಯ ಗುಂಪು ಎಂದು ಸ್ಪಷ್ಟಪಡಿಸಿದೆ” ಎಂದು ಮತ್ತೊಬ್ಬ ನಾಯಕ ಸಯೀದ್ ಉಲ್ಲಾ ಅಭಿಪ್ರಾಯಪಟ್ಟಿದ್ದಾರೆ.
“ನರಮೇಧಕ್ಕೆ ಕಾರಣರಾದ ಮ್ಯಾನ್ಮಾರ್ ಅಧಿಕಾರಿಗಳಿಗೆ ಅಂತಾರಾಷ್ಟ್ರೀಯ ಸಮುದಾಯವು ಕಠಿಣ ಶಿಕ್ಷೆ ವಿಧಿಸಬೇಕು” ಎಂದು ನಿರಾಶ್ರಿತ ಮೊಹಮ್ಮದ್ ಉಸ್ಮಾನ್ ಒತ್ತಾಯಿಸಿದ್ದಾರೆ.
ಬಾಂಗ್ಲಾದೇಶದ ಬೆಂಬಲ ಮತ್ತು ಮ್ಯಾನ್ಮಾರ್ ವಿರೋಧ:
ಬಾಂಗ್ಲಾದೇಶದ ವಿದೇಶಾಂಗ ಸಚಿವ ಹಾಗೂ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಖಲೀಲುರ್ ರಹಮಾನ್ ಅವರು ಶುಕ್ರವಾರ ಕಾಕ್ಸ್ ಬಜಾರ್ ಶಿಬಿರಕ್ಕೆ ಭೇಟಿ ನೀಡಿ ನಿರಾಶ್ರಿತರಿಗೆ ಧೈರ್ಯ ತುಂಬಿದ್ದಾರೆ. “ನೀವು ಒಂಟಿಯಲ್ಲ, ಈ ಐತಿಹಾಸಿಕ ತೀರ್ಪಿನ ಅನುಷ್ಠಾನಕ್ಕಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೊಂದಿಗೆ ನಾನು ಮಾತನಾಡುತ್ತೇನೆ” ಎಂದು ಭರವಸೆ ನೀಡಿದ್ದಾರೆ. ಮತ್ತೊಂದೆಡೆ, ಮ್ಯಾನ್ಮಾರ್ ಸರ್ಕಾರವು ಈ ತೀರ್ಪನ್ನು ‘ಅನ್ಯಾಯ’ ಎಂದು ತಳ್ಳಿಹಾಕಿದೆ.
ಪ್ರಸ್ತುತ ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನ ಕಿಕ್ಕಿರಿದ ಶಿಬಿರಗಳಲ್ಲಿ ಸುಮಾರು 12 ಲಕ್ಷ (1.2 ಮಿಲಿಯನ್) ರೋಹಿಂಗ್ಯಾ ನಿರಾಶ್ರಿತರು ವಾಸಿಸುತ್ತಿದ್ದಾರೆ. ಬೆಂಕಿ ಅವಘಡ, ಸಾಂಕ್ರಾಮಿಕ ರೋಗಗಳು, ಭೂಕುಸಿತ ಮತ್ತು ಉದ್ಯೋಗದ ನಿರ್ಬಂಧಗಳಂತಹ ಕಠಿಣ ಪರಿಸ್ಥಿತಿಗಳ ನಡುವೆ ಬದುಕುತ್ತಿರುವ ಇವರನ್ನು ತಾಯ್ನಾಡಿಗೆ ಕಳುಹಿಸಲು ಸಹಾಯ ಮಾಡುವಂತೆ ಬಾಂಗ್ಲಾದೇಶವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡುತ್ತಿದೆ.


