ಗಾಜಾ: ಇಸ್ರೇಲಿ ಸೇನೆಯ ಹೊಸ ನೆಲದಾಳಿಯ ಕಾರ್ಯಾಚರಣೆ ಮತ್ತು ಮಿಲಿಟರಿ ನಿರ್ಬಂಧಗಳಿಂದಾಗಿ ಮಧ್ಯ ಗಾಜಾ ಪಟ್ಟಿಯಲ್ಲಿ 6,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಬಲವಂತದ ಸ್ಥಳಾಂತರಕ್ಕೆ ಒಳಗಾಗಿದ್ದಾರೆ. 1,500ಕ್ಕೂ ಅಧಿಕ ಕುಟುಂಬಗಳು ತಮ್ಮ ನೆಲೆಗಳನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಗಾಗಲೇ ಯುದ್ಧದ ಪರಿಣಾಮವಾಗಿ ಮನೆಮಠ ಕಳೆದುಕೊಂಡಿರುವ ಸಾವಿರಾರು ಜನರು ಮತ್ತೊಮ್ಮೆ ನಿರಾಶ್ರಿತರಾಗಿದ್ದಾರೆ. ಗಾಜಾದ ಅಲ್-ನುಸೇರತ್ ಮತ್ತು ಅಲ್-ಬುರೈಜ್ ನಿರಾಶ್ರಿತರ ಶಿಬಿರಗಳ ನಿವಾಸಿಗಳ ಮೇಲೆ ಇಸ್ರೇಲಿ ಸೇನೆಯ ಈ ಕಾರ್ಯಾಚರಣೆ ತೀವ್ರ ಪರಿಣಾಮ ಬೀರಿದೆ ಎಂದು ಗಾಜಾದ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.
2025ರ ಅಕ್ಟೋಬರ್ನಲ್ಲಿ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಬಳಿಕ ಇಸ್ರೇಲಿ ಸೇನೆ ಸಾರ್ವಜನಿಕವಾಗಿ ಘೋಷಿಸಿರುವ ಮೊದಲ ಪ್ರಮುಖ ಮಿಲಿಟರಿ ದಾಳಿ ಇದಾಗಿದೆ. ಕದನ ವಿರಾಮ ಜಾರಿಯಲ್ಲಿದ್ದರೂ ಗಾಜಾದಲ್ಲಿ ಇಸ್ರೇಲಿ ದಾಳಿಗಳು ಮತ್ತು ನಾಗರಿಕರ ಮೇಲಿನ ಹಿಂಸಾಚಾರ ಮುಂದುವರಿದಿರುವುದಕ್ಕೆ ಈ ಬೆಳವಣಿಗೆ ಮತ್ತೊಂದು ಉದಾಹರಣೆಯಾಗಿದೆ. ಗಾಜಾದ ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಕದನ ವಿರಾಮ ಜಾರಿಗೆ ಬಂದ ನಂತರವೂ ಇಸ್ರೇಲಿ ದಾಳಿಗಳಲ್ಲಿ 1,600ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.
ಇಸ್ರೇಲಿ ಸೇನೆಯ ಬಾಂಬ್ ದಾಳಿ, ಬಲವಂತದ ಸ್ಥಳಾಂತರ ಆದೇಶಗಳು ಮತ್ತು ನಾಗರಿಕರ ಸಂಚಾರದ ಮೇಲಿನ ನಿರ್ಬಂಧಗಳ ನಡುವೆ ಮಧ್ಯ ಗಾಜಾದಲ್ಲಿ ಈ ಹೊಸ ಸ್ಥಳಾಂತರದ ಅಲೆ ಸೃಷ್ಟಿಯಾಗಿದೆ. ಅಲ್-ನುಸೇರತ್ ಮತ್ತು ಅಲ್-ಬುರೈಜ್ ನಿರಾಶ್ರಿತರ ಶಿಬಿರಗಳ ಜನರು ಈ ಕಾರ್ಯಾಚರಣೆಯಿಂದ ನೇರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರೊಂದಿಗೆ ಗಾಜಾ ಪಟ್ಟಿಯ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗಗಳಲ್ಲಿ ಒಂದಾದ ಸಲಾಹ್ ಅಲ್-ದಿನ್ ರಸ್ತೆಯನ್ನೂ ಇಸ್ರೇಲಿ ಸೇನೆ ಮುಚ್ಚಿದೆ. ಇದರಿಂದ ಸ್ಥಳೀಯ ನಿವಾಸಿಗಳ ಸಂಚಾರ ಮಾತ್ರವಲ್ಲದೆ, ತುರ್ತು ಪರಿಹಾರ ಕಾರ್ಯಾಚರಣೆಗಳಿಗೂ ತೀವ್ರ ಅಡ್ಡಿಯಾಗಿದೆ.
ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಗಾಜಾದ ಸರ್ಕಾರಿ ಮಾಧ್ಯಮ ಕಚೇರಿ, ಪ್ರಾಥಮಿಕ ಕ್ಷೇತ್ರಮಟ್ಟದ ಅಂದಾಜಿನ ಪ್ರಕಾರ 6,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಅಥವಾ ಇತರ ರೀತಿಯಲ್ಲಿ ಮಿಲಿಟರಿ ಕಾರ್ಯಾಚರಣೆಯ ಪರಿಣಾಮ ಎದುರಿಸಿದ್ದಾರೆ ಎಂದು ತಿಳಿಸಿದೆ. ಈ ದಾಳಿಯಿಂದ ಜನರ ಆಸ್ತಿಪಾಸ್ತಿ ಮತ್ತು ಅಗತ್ಯ ಆಶ್ರಯ ಸೌಲಭ್ಯಗಳು ನಾಶವಾಗಿದ್ದು, ಸಾವಿರಾರು ಡಾಲರ್ ಮೌಲ್ಯದ ಆರ್ಥಿಕ ನಷ್ಟ ಸಂಭವಿಸಿದೆ ಎಂದು ಕಚೇರಿ ಹೇಳಿದೆ.
ಪೀಡಿತ ಪ್ರದೇಶಗಳ ಒಳಗೆ ಮತ್ತು ಸುತ್ತಮುತ್ತಲಿನ ಆರು ನೋಂದಾಯಿತ ಆಶ್ರಯ ಕೇಂದ್ರಗಳಲ್ಲಿ 630 ಕುಟುಂಬಗಳಿಗೆ ಸೇರಿದ ಸುಮಾರು 2,855 ಜನರು ವಾಸಿಸುತ್ತಿದ್ದಾರೆ. ಅಲ್-ಹದ್ದಾದ್ ಆಶ್ರಯ ಕೇಂದ್ರದಲ್ಲಿ 603 ಜನರು, ಅಲ್-ವಾಟೀನ್ನಲ್ಲಿ 400, ಸನಾಬೆಲ್ ಅಲ್-ಅಮಲ್ನಲ್ಲಿ 639, ಅಲ್-ದವಾ ಶಿಬಿರದಲ್ಲಿ 649, ಹಮಿದಿಯಾ ಶಿಬಿರದಲ್ಲಿ 306 ಮತ್ತು ಅಲ್-ಇಜ್ಜ್ ಇಬ್ನ್ ಅಬ್ದ್ ಅಲ್-ಸಲಾಮ್ ಕೇಂದ್ರದಲ್ಲಿ 258 ಜನರು ಆಶ್ರಯ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಇವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತಷ್ಟು 235 ಕುಟುಂಬಗಳಿಗೆ ಸೇರಿದ 2,405 ಜನರು ವಾಸಿಸುತ್ತಿದ್ದರು. ಇದಲ್ಲದೆ, ಕಾರ್ಯಾಚರಣೆಯ ಗುರಿಯಾಗಿರುವ ಪ್ರದೇಶಗಳು ಮತ್ತು ಅಕ್ಕಪಕ್ಕದ ಸ್ಥಳಗಳಲ್ಲಿದ್ದ ಇತರ ಕುಟುಂಬಗಳೂ ಪರಿಣಾಮ ಎದುರಿಸಿವೆ.
ಈ ಮಿಲಿಟರಿ ಕಾರ್ಯಾಚರಣೆಯಿಂದ ಈಗಾಗಲೇ ನಿರಾಶ್ರಿತರಾಗಿರುವ ಸಾವಿರಾರು ಪ್ಯಾಲೆಸ್ಟೀನಿಯನ್ನರು ತಮ್ಮ ತಾತ್ಕಾಲಿಕ ಆಶ್ರಯಗಳನ್ನೂ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ. ಆಹಾರ, ಕುಡಿಯುವ ನೀರು, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಮಾನವೀಯ ಸೇವೆಗಳನ್ನು ತಲುಪಿಸುವುದಕ್ಕೂ ಸಂಚಾರ ನಿರ್ಬಂಧಗಳು ಅಡ್ಡಿಯಾಗಿವೆ. ಇದರಿಂದ ಗಾಯಾಳುಗಳು, ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ಅತ್ಯಂತ ದುರ್ಬಲ ಸ್ಥಿತಿಯಲ್ಲಿರುವ ನಾಗರಿಕರ ಜೀವಕ್ಕೆ ಮತ್ತಷ್ಟು ಅಪಾಯ ಎದುರಾಗಿದೆ ಎಂದು ಸರ್ಕಾರಿ ಮಾಧ್ಯಮ ಕಚೇರಿ ಎಚ್ಚರಿಸಿದೆ.
ಇಸ್ರೇಲಿ ಸೇನೆಯ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗಾಜಾದ ಸರ್ಕಾರಿ ಮಾಧ್ಯಮ ಕಚೇರಿ, ನಾಗರಿಕರನ್ನು ಬಲವಂತವಾಗಿ ಸ್ಥಳಾಂತರಿಸುವುದು ಮತ್ತು ಆಶ್ರಯ ಕೇಂದ್ರಗಳ ಮೇಲೆ ದಾಳಿ ನಡೆಸುವುದು ಯುದ್ಧಾಪರಾಧ ಹಾಗೂ ಮಾನವೀಯತೆಯ ವಿರುದ್ಧದ ಅಪರಾಧಗಳ ವ್ಯಾಪ್ತಿಗೆ ಬರುತ್ತದೆ ಎಂದು ಆರೋಪಿಸಿದೆ. ಈ ಆರೋಪಗಳಿಗೆ ಬೆಂಬಲವಾಗಿ ನಾಲ್ಕನೇ ಜಿನೀವಾ ಒಪ್ಪಂದ, ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ರೋಮ್ ಶಾಸನ ಮತ್ತು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ನಿಬಂಧನೆಗಳನ್ನು ಉಲ್ಲೇಖಿಸಿದೆ.
ಕದನ ವಿರಾಮದ ಮಧ್ಯವರ್ತಿಗಳು, ಅದಕ್ಕೆ ಖಾತರಿ ನೀಡಿರುವ ರಾಷ್ಟ್ರಗಳು, ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕಚೇರಿ ಆಗ್ರಹಿಸಿದೆ. ಸ್ಥಳಾಂತರಗೊಂಡ ನಾಗರಿಕರು, ಆಶ್ರಯ ಕೇಂದ್ರಗಳು ಮತ್ತು ಮಾನವೀಯ ನೆರವು ಒದಗಿಸುವ ಸಿಬ್ಬಂದಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.
ಅಲ್ಲದೆ, ಸಲಾಹ್ ಅಲ್-ದಿನ್ ರಸ್ತೆಯನ್ನು ಯಾವುದೇ ವಿಳಂಬವಿಲ್ಲದೆ ಸಂಪೂರ್ಣವಾಗಿ ಪುನಃ ತೆರೆಯಬೇಕು. ನಾಗರಿಕರ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ ಆಹಾರ, ಔಷಧ, ವೈದ್ಯಕೀಯ ಉಪಕರಣಗಳು ಮತ್ತು ಇತರ ತುರ್ತು ಪರಿಹಾರ ಸಾಮಗ್ರಿಗಳನ್ನು ಯಾವುದೇ ಅಡೆತಡೆಯಿಲ್ಲದೆ ತಲುಪಿಸಲು ಸುರಕ್ಷಿತ ಹಾಗೂ ನಿರಂತರ ಮಾನವೀಯ ಕಾರಿಡಾರ್ಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.
ಕದನ ವಿರಾಮದ ಬಳಿಕವೂ ಗಾಜಾದ ಜನರಿಗೆ ಸುರಕ್ಷತೆ ಮತ್ತು ನೆಮ್ಮದಿ ಮರೀಚಿಕೆಯಾಗಿರುವುದು, ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳು ಮುಂದುವರಿದಿರುವುದು ಹಾಗೂ ನಿರಾಶ್ರಿತರು ಮತ್ತೆ ಮತ್ತೆ ನೆಲೆ ಕಳೆದುಕೊಳ್ಳುತ್ತಿರುವುದು ಅಲ್ಲಿನ ಮಾನವೀಯ ಬಿಕ್ಕಟ್ಟಿನ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.


