Homeಮುಖಪುಟತಿರುವಪ್ಪರಂಕುಂದ್ರಂ 'ಕಾರ್ತಿಕ ದೀಪ' ವಿವಾದ: ಸುಪ್ರೀಂ ಕೋರ್ಟ್‌ಗೆ ಮಧುರೈ ಜಿಲ್ಲಾಧಿಕಾರಿ ನೀಡಿದ ವಿವರಣೆ ಏನು?

ತಿರುವಪ್ಪರಂಕುಂದ್ರಂ ‘ಕಾರ್ತಿಕ ದೀಪ’ ವಿವಾದ: ಸುಪ್ರೀಂ ಕೋರ್ಟ್‌ಗೆ ಮಧುರೈ ಜಿಲ್ಲಾಧಿಕಾರಿ ನೀಡಿದ ವಿವರಣೆ ಏನು?

- Advertisement -
- Advertisement -

ತಮಿಳುನಾಡಿನ ತಿರುವಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗಿಸುವ ವಿಚಾರವಾಗಿ ವಿವಾದ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮಧುರೈ ಜಿಲ್ಲಾಧಿಕಾರಿ ಸುಪ್ರೀಂ ಕೋರ್ಟ್‌ಗೆ ಹಾಜರಾಗಿ ನ್ಯಾಯಾಲಯದ ಆದೇಶದಂತೆ ಬೆಟ್ಟದ ಮೇಲಿರುವ ದೀಪಸ್ತಂಭದಲ್ಲಿ ದೀಪ ಬೆಳಗಿಸದೆ, ಸಾಂಪ್ರದಾಯಿಕ ಸ್ಥಳದಲ್ಲೇ ದೀಪ ಬೆಳಗಿಸಿದ್ದೇಕೆ ಎಂಬುದಕ್ಕೆ ವಿವರಣೆ ನೀಡಿದ್ದಾರೆ. ದೀಪಸ್ತಂಭದಲ್ಲಿ ದೀಪ ಬೆಳಗಿಸಲು ವಿಧಿವಿಧಾನ ನೆರವೇರಿಸುವ ತಂಡಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಅನುಮತಿ ನೀಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರು ಬುಧವಾರ (ನ.25) ಸುಪ್ರೀಂ ಕೋರ್ಟ್‌ಗೆ ಪ್ರಾಥಮಿಕ ಸ್ಥಿತಿಗತಿ ವರದಿಯನ್ನು ಸಲ್ಲಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಅಗತ್ಯ ಪ್ರಕ್ರಿಯೆಗಳನ್ನು ಆಡಳಿತ ಪೂರ್ಣಗೊಳಿಸಿತ್ತು. ಆದರೂ, ಅರುಳ್ಮಿಗು ಸುಬ್ರಮಣ್ಯಸ್ವಾಮಿ ದೇವಸ್ಥಾನದ ಟ್ರಸ್ಟಿಗಳ ಮಂಡಳಿಯು ಸಾಂಪ್ರದಾಯಿಕ ಸ್ಥಳದಲ್ಲೇ ದೀಪ ಬೆಳಗಿಸುವುದಾಗಿ ಪಟ್ಟುಹಿಡಿದಿತ್ತು ಎಂದು ವರದಿಯಲ್ಲಿ ತಿಳಿಸಿದ್ದಾರೆ.

ವಿವಾದ ಆರಂಭವಾಗಿದ್ದೇಕೆ?

ತಿರುವಪ್ಪರಂಕುಂದ್ರಂ ಬೆಟ್ಟದ ತಪ್ಪಲಿನಲ್ಲಿ ಶಿವನ ದೇವಸ್ಥಾನ ಮತ್ತು ಉಚ್ಚಿ ಪಿಳ್ಳೈಯಾರ್ ದೇವಸ್ಥಾನಗಳಿವೆ. ಹಲವು ವರ್ಷಗಳಿಂದ ದೇವಸ್ಥಾನದ ಆಡಳಿತ ಮಂಡಳಿಯು ಉಚ್ಚಿ ಪಿಳ್ಳೈಯಾರ್ ದೇವಸ್ಥಾನದಲ್ಲೇ ‘ಕಾರ್ತಿಗೈ ದೀಪಂ’ ಬೆಳಗಿಸುತ್ತಾ ಬಂದಿದೆ.

ಆದರೆ, 2025ರಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಂಬಲ ಹೊಂದಿರುವ ಹಿಂದುತ್ವ ಸಂಘಟನೆಗಳ ಕೆಲವು ಗುಂಪುಗಳು ಬೆಟ್ಟದ ಮೇಲಿರುವ ಕಲ್ಲಿನ ಸ್ತಂಭವಾದ ‘ದೀಪಸ್ತಂಭ’ದಲ್ಲಿ ದೀಪ ಬೆಳಗಿಸಬೇಕೆಂದು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದವು. ಈ ದೀಪಸ್ತಂಭವು ಸಿಕಂದರ್ ದರ್ಗಾದ ಸಮೀಪದಲ್ಲಿದೆ.

ಇದನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಒಂದು ಬಾರಿಗೆ ಅನ್ವಯಿಸುವಂತೆ ಕಲ್ಲಿನ ಸ್ತಂಭದ ಮೇಲೆ ದೀಪ ಬೆಳಗಿಸಲು ಆದೇಶಿಸಿತ್ತು.

ಆದರೆ, ನವೆಂಬರ್ 24ರಂದು ಸಂಜೆ 6 ಗಂಟೆಗೆ ಉಚ್ಚಿ ಪಿಳ್ಳೈಯಾರ್ ದೀಪ ಮಂಟಪದಲ್ಲೇ ಸಾಂಪ್ರದಾಯಿಕ ದೀಪ ಬೆಳಗಿಸಲಾಯಿತು. ಇದರಿಂದ ಹಿಂದುತ್ವ ಸಂಘಟನೆಗಳ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ದೇವಸ್ಥಾನದ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ವಿ. ಷಣ್ಮುಗಸುಂದರಂ ಅವರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ದೇವಸ್ಥಾನದ ಧಾರ್ಮಿಕ ಆಚರಣೆಗಳ ಮೂಲಾಧಾರವಾಗಿರುವ ‘ಆಗಮ’ ನಿಯಮಗಳ ಪ್ರಕಾರ ವಿಧಿವಿಧಾನಗಳು ನಡೆಯುತ್ತವೆ. ಈ ನಿಯಮಗಳನ್ನು ಸಂರಕ್ಷಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಸಾಂಪ್ರದಾಯಿಕವಾಗಿ ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ ಸಮೀಪವಿರುವ ‘ದೀಪ ಮಂಟಪ’ದಲ್ಲೇ ದೀಪ ಬೆಳಗಿಸಲಾಗುತ್ತದೆ. ಈ ಸ್ಥಳವು ದೇವಸ್ಥಾನದ ಪ್ರಧಾನ ದೇವತೆಯಾದ ಮೂಲವರ್ ಸುಬ್ರಮಣ್ಯ ಸ್ವಾಮಿಯ ನೇರ ಮೇಲ್ಭಾಗದಲ್ಲಿರುವುದರಿಂದ ಧಾರ್ಮಿಕವಾಗಿ ಮಹತ್ವ ಹೊಂದಿದೆ ಎಂದು ಟ್ರಸ್ಟಿಗಳ ಮಂಡಳಿ ತಿಳಿಸಿದೆ.

ಘಟನೆಗಳ ಸರಣಿಯನ್ನು ವಿವರಿಸಿದ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ದೀಪ ಬೆಳಗಿಸುವ ವ್ಯವಸ್ಥೆಗಾಗಿ ಕೈಗೊಂಡ ಕ್ರಮಗಳ ಸರಣಿಯನ್ನು ವಿವರಿಸಿದ್ದಾರೆ.

ನವೆಂಬರ್ 21ರಂದು ಪೊಲೀಸ್ ಇಲಾಖೆ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ, ಕಂದಾಯ ಇಲಾಖೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಲಾಗಿತ್ತು.

ಮರುದಿನ, ನವೆಂಬರ್ 22ರಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಅಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸಲಾಯಿತು. ಈ ಸಭೆಯಲ್ಲಿ ದೀಪ ಬೆಳಗಿಸುವ ವಿಧಾನ, ಸ್ಥಳದಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳು, 10 ಸದಸ್ಯರ ತಂಡ ಹಾಗೂ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಕಂದಾಯ ಇಲಾಖೆ, ಪೊಲೀಸ್, ಅಗ್ನಿಶಾಮಕ ದಳ ಮತ್ತು ಎಎಸ್‌ಐ ಅಧಿಕಾರಿಗಳನ್ನು ನಿಯೋಜಿಸುವ ಕುರಿತು ಚರ್ಚಿಸಲಾಗಿತ್ತು.

ನವೆಂಬರ್ 24ರಂದು ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ವೇಳೆ ದೀಪ ಬೆಳಗಿಸಲು ಅನುಮೋದನೆ ಪಡೆದಿದ್ದ 10 ಸದಸ್ಯರ ತಂಡ ಸ್ಥಳಕ್ಕೆ ಆಗಮಿಸಿರಲಿಲ್ಲ. ಈ ವಿಳಂಬಕ್ಕೆ ಕಾರಣವೇನು ಎಂಬುದನ್ನು ವಿವರಿಸುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಇ-ಮೇಲ್ ಮೂಲಕ ಸೂಚನೆ ನೀಡಿದರು.

ಸಂಜೆಯಾಗುತ್ತಿದ್ದಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸುವಂತೆ ನಿರ್ದೇಶನ ನೀಡಿತು.

“ಸಂಜೆ 5.03ಕ್ಕೆ ಅನುಮೋದಿತ ತಂಡವನ್ನು ಕಳುಹಿಸುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಇ-ಮೇಲ್ ಮಾಡಿದ್ದೆ” ಎಂದು ಜಿಲ್ಲಾಧಿಕಾರಿ ವರದಿಯಲ್ಲಿ ತಿಳಿಸಿದ್ದಾರೆ.

“ದೇವಸ್ಥಾನದ ಆಡಳಿತ ಮಂಡಳಿಯಿಂದ ತಂಡಕ್ಕೆ ಅಧಿಕೃತ ಅನುಮತಿ ನೀಡುವುದೊಂದೇ ಬಾಕಿ ಉಳಿದಿದ್ದ ಕ್ರಮವಾಗಿತ್ತು” ಎಂದು ಅವರು ಹೇಳಿದ್ದಾರೆ.

ಆದರೆ, ಅನುಮೋದಿತ ತಂಡ ಸ್ಥಳಕ್ಕೆ ಆಗಮಿಸಲಿಲ್ಲ. ಹೀಗಾಗಿ ಉಚ್ಚಿ ಪಿಳ್ಳೈಯಾರ್ ದೇವಸ್ಥಾನದಲ್ಲೇ ದೀಪ ಬೆಳಗಿಸಲಾಯಿತು.

ದೀಪ ಬೆಳಗಿಸುವ ಸ್ಥಳದ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡ ನಿರ್ಧಾರವನ್ನು ತಿಳಿಸುವ ಪತ್ರಿಕಾ ಪ್ರಕಟಣೆಯನ್ನೂ ಮಧುರೈ ಜಿಲ್ಲಾಡಳಿತ ಸ್ವೀಕರಿಸಿತ್ತು.

ಆದೇಶ ಪಾಲನೆಗೆ ಎಲ್ಲ ಕ್ರಮ ಕೈಗೊಂಡಿದ್ದೇನೆ: ಜಿಲ್ಲಾಧಿಕಾರಿ

ಸುಪ್ರೀಂ ಕೋರ್ಟ್ ತನಗೆ ವಹಿಸಿದ್ದ ಜವಾಬ್ದಾರಿಗಳನ್ನು ತಾನು ಸಮರ್ಪಕವಾಗಿ ನಿರ್ವಹಿಸಿದ್ದೇನೆ ಎಂದು ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಸಮರ್ಥಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ನ್ಯಾಯಾಲಯದ ಆದೇಶವನ್ನು ಸದುದ್ದೇಶದಿಂದ ಪಾಲಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಪೂರಕ ಮಾಹಿತಿಯೊಂದಿಗೆ ಮತ್ತೊಂದು ವಿಸ್ತೃತ ಸ್ಥಿತಿಗತಿ ವರದಿಯನ್ನು ಸಲ್ಲಿಸುವುದಾಗಿಯೂ ಜಿಲ್ಲಾಧಿಕಾರಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯುಪಿಎ ಅವಧಿಗೆ ಹೋಲಿಸಿದರೆ ಮೋದಿ ಆಡಳಿತದಲ್ಲಿ ಶೇ.16–28ರಷ್ಟು ಮಸೂದೆಗಳಷ್ಟೇ ಸಂಸದೀಯ ಸಮಿತಿಗಳಿಗೆ ರವಾನೆ: ತರಾತುರಿ ಕಾನೂನುಗಳಿಗೆ ಹ್ಯೂಮನ್‌ ರೈಟ್ಸ್‌ ವಾಚ್ ಕಳವಳ!

ನವದೆಹಲಿ: ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ (HRW), ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ...

ಎಸ್‌ಐಆರ್ ವಿರುದ್ಧ ಜಾರ್ಖಂಡ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ; ತಕ್ಷಣ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹ

ದೇಶಾದ್ಯಂತ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಜಾರ್ಖಂಡ್ ವಿಧಾನಸಭೆ ಬುಧವಾರ (ನ.25) ನಿರ್ಣಯವೊಂದನ್ನು ಅಂಗೀಕರಿಸಿದೆ. ಧ್ವನಿಮತದ ಮೂಲಕ ಅಂಗೀಕರಿಸಲಾದ ಈ ನಿರ್ಣಯದಲ್ಲಿ ಎಸ್‌ಐಆರ್...

ಪಶ್ಚಿಮ ಬಂಗಾಳ| ಎಸ್‌ಐಆರ್‌ನಲ್ಲಿ ತಂದೆಯ ಹೆಸರು ಡಿಲೀಟ್; ಮಗುವಿಗೆ ಜನನ ಪ್ರಮಾಣಪತ್ರ ನಿರಾಕರಣೆ!

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವೇಳೆ ತಂದೆಯ ಹೆಸರು ಮತದಾರರ ಪಟ್ಟಿಯಿಂದ ಅಳಿಸಲ್ಪಟ್ಟಿರುವ ಕಾರಣಕ್ಕೆ ಸುಮಾರು ಮೂರು ತಿಂಗಳ ಹಸುಗೂಸಿಗೆ ಜನನ ಪ್ರಮಾಣಪತ್ರ ನೀಡಲು ಪಂಚಾಯತ್ ಅಧಿಕಾರಿಗಳು...

ಸಿಇಸಿ ಗ್ಯಾನೇಶ್‌ ಕುಮಾರ್‌ ವಿರುದ್ಧದ ಪ್ರತಿಭಟನೆಯಲ್ಲಿ ಅಕ್ರಮ ಬಂಧನ ಆರೋಪ: ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ 10 ದಿನಗಳ ಗಡುವು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಪದಚ್ಯುತಿಗೆ ಆಗ್ರಹಿಸಿ ಕಳೆದ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ವೇಳೆ ಪ್ರತಿಭಟನಾಕಾರರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಮಗ್ರ...

ಮೋದಿ ಆಡಳಿತದಲ್ಲಿ ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳು ದುರ್ಬಲಗೊಂಡಿವೆ: ಹ್ಯೂಮನ್ ರೈಟ್ಸ್ ವಾಚ್

ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಕುರಿತು ದಶಕಗಳಿಂದ ಸ್ವತಂತ್ರವಾಗಿ ತನಿಖೆ ನಡೆಸಿ ವರದಿಗಳನ್ನು ಪ್ರಕಟಿಸುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಭಾರತದ ಪ್ರಸ್ತುತ ರಾಜಕೀಯ ಮತ್ತು...

6 ವರ್ಷಗಳ ಜೈಲುವಾಸದ ಬಳಿಕವೂ ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆರು ವರ್ಷಗಳಿಂದ ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಅವರಿಗೆ ತಕ್ಷಣ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಬುಧವಾರ (ನ.25) ನಿರಾಕರಿಸಿದೆ. ಉಮರ್...

ಕೋಳಿ ಸಾಕಾಣಿಕೆಗೆ ಕನಿಷ್ಠ ದರ ನಿಗದಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ರೈತರ ಪ್ರತಿಭಟನೆ

ಕೋಳಿ ಸಾಕಾಣಿಕೆ ಕೃಷಿಯಲ್ಲಿ ಲಾಭಾಂಶವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು, ಕನಿಷ್ಠ ಸಾಕಾಣಿಕೆ ದರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಹಾಗೂ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೃಹತ್ "ವಿಧಾನ ಸೌಧ ಚಲೋ" ಪ್ರತಿಭಟನೆ...

ರಾಹುಲ್ ಗಾಂಧಿ ವಿರುದ್ಧ ಸಿಬಿಐ, ಇ.ಡಿ ತನಿಖೆಗೆ ಸೂಚಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ (CBI) ಮತ್ತು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್...

ಯೋಗೇಶ್ ಗೌಡ ಕೊಲೆ ಪ್ರಕರಣ | ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್: ಎರಡು ವಾರಗಳಲ್ಲಿ ಶರಣಾಗಲು ಆದೇಶ

ನವದೆಹಲಿ: 2016ರ ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತು ಇತರ ಎಂಟು ಮಂದಿ ಅಪರಾಧಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಹಾಗೂ ಜೀವಾವಧಿ...

ಸರ್ಕಾರಿ ಶಾಲೆಗಳ ದತ್ತು ಪ್ರಕ್ರಿಯೆಗೆ ವಿರೋಧ, ನ.26ರಂದು ಅನಿರ್ದಿಷ್ಟಾವಧಿ ಸತ್ಯಾಗ್ರಹ

ರಾಜ್ಯ ಸರ್ಕಾರವು ಸರ್ಕಾರಿ ಕನ್ನಡ ಶಾಲೆಗಳನ್ನು ಖಾಸಗಿಯವರಿಗೆ ದತ್ತು (ಮೆಂಟರಿಂಗ್) ನೀಡಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಮತ್ತು 2009ರ ಶಿಕ್ಷಣ ಹಕ್ಕು ಕಾಯ್ದೆಯನ್ನು (ಆರ್‌ಟಿಇ) ರಾಜ್ಯವ್ಯಾಪಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ನಾಳೆ (ನ.26)...