ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ವೇಳೆ ತಂದೆಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಎಂಬ ಕಾರಣಕ್ಕೆ ಜನನ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದ ಪಶ್ಚಿಮ ಬಂಗಾಳ ಸರ್ಕಾರವು, ಅಂತಿಮವಾಗಿ ಎರಡು ತಿಂಗಳ ಹೆಣ್ಣು ಶಿಶುವಿಗೆ ಜನನ ಪ್ರಮಾಣಪತ್ರವನ್ನು ವಿತರಿಸಿದೆ.
ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಪ್ರಕಾರ, ಕೂಚ್ ಬೆಹಾರ್ನಲ್ಲಿರುವ ತನ್ನ ಸ್ಥಳೀಯ ತಂಡದ ನಿರಂತರ ಪ್ರಯತ್ನಗಳು ಮತ್ತು ಮಾಧ್ಯಮಗಳ ಬೆಂಬಲದ ನಂತರ ಈ ಬೆಳವಣಿಗೆ ಕಂಡುಬಂದಿದೆ.
‘ದಿ ಹಿಂದೂ’ ವರದಿಯ ಪ್ರಕಾರ, ಅಮೀನಾ ಖಾತೂನ್ ಅವರು ಸೆಪ್ಟೆಂಬರ್ 9 ರಂದು ಕೂಚ್ ಬೆಹಾರ್ನ ದಿನ್ಹಾಟಾ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳ ಜನನದ ನಂತರ, ಅವರ ಪತಿ ಅಬ್ದುಲ್ ಹಬೀಬ್ ಜನನ ಪ್ರಮಾಣಪತ್ರ ಪಡೆಯಲು ಆಸ್ಪತ್ರೆ ಮತ್ತು ಪಂಚಾಯತ್ ಕಚೇರಿಯನ್ನು ಸಂಪರ್ಕಿಸಿದ್ದರು. ಆದರೆ, ವಾಸಸ್ಥಳದ ಪುರಾವೆ ಸಲ್ಲಿಸುವಂತೆ ಅವರನ್ನು ವಾಪಸ್ ಕಳುಹಿಸಲಾಗಿತ್ತು.
ಶಾಸಕರು ಅಥವಾ ಪಂಚಾಯತ್ ಪ್ರಧಾನ್ ಅವರಿಂದ ವಾಸಸ್ಥಳ ದೃಢೀಕರಣ ಪತ್ರ ಪಡೆಯುವಂತೆ ಅವರಿಗೆ ತಿಳಿಸಲಾಗಿತ್ತು. ಆದರೆ, ಶಾಸಕರ ಕಚೇರಿಯಲ್ಲಿ ಅಧಿಕಾರಿಯೊಬ್ಬರು ಅವರನ್ನು ‘ಬಾಂಗ್ಲಾದೇಶಿ’ ಎಂದು ಕರೆದಿದ್ದು, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಸಿಆರ್) ಮೂಲಕ ನೋಂದಾಯಿಸಿಕೊಳ್ಳುವಂತೆ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಎಸ್ಐಆರ್ ಸಮಯದಲ್ಲಿ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಿರುವುದರಿಂದ ತಮ್ಮ ಮಗಳ ಜನನ ಪ್ರಮಾಣಪತ್ರವನ್ನು ನೋಂದಾಯಿಸಲು ಸಾಧ್ಯವಿಲ್ಲ ಎಂದು ಶಾಸಕರ ಕಚೇರಿಯವರು ತಿಳಿಸಿದ್ದಾರೆ ಎಂಬುದಾಗಿ ಹಬೀಬ್ ಹೇಳಿದ್ದಾರೆ.
ತಾವು ಹುಟ್ಟಿನಿಂದಲೂ ಭಾರತದಲ್ಲೇ ವಾಸಿಸುತ್ತಿದ್ದು, ಖಾತಮಾರಿಯಲ್ಲಿರುವ ತಮ್ಮ ಮನೆಯನ್ನು ತಮ್ಮ ಅಜ್ಜ ನಿರ್ಮಿಸಿದ್ದಾರೆ ಎಂದು ಹಬೀಬ್ ಪ್ರತಿಪಾದಿಸಿದ್ದಾರೆ. “ನಾನು ಅವರಿಗೆ ಎಲ್ಲಾ ದಾಖಲೆಗಳನ್ನು ತೋರಿಸಿದ್ದೇನೆ, ಆದರೂ ಅವರು ನಿರಾಕರಿಸಿದರು” ಎಂದು ಅವರು ಹೇಳಿದ್ದಾರೆ.
ಎಸ್ಐಆರ್ನಲ್ಲಿ ಹೆಸರು ಕೈಬಿಟ್ಟ ಕಾರಣಕ್ಕೆ ಹಬೀಬ್ ಅವರ ಎರಡು ತಿಂಗಳ ಮಗಳಿಗೆ ಜನನ ಪ್ರಮಾಣಪತ್ರ ನಿರಾಕರಿಸಲಾಗಿದೆ ಎಂಬ ವರದಿಗಳು ಪ್ರಕಟವಾದ ಒಂದು ದಿನದ ನಂತರ, ಕ್ಷೇತ್ರ ಅಭಿವೃದ್ಧಿ ಅಧಿಕಾರಿ (ಬಿಡಿಒ) ಖಾತೂನ್ ಅವರಿಗೆ ವಾಸಸ್ಥಳ ಪ್ರಮಾಣಪತ್ರವನ್ನು ನೀಡಿದ್ದಾರೆ.
ಹಬೀಬ್ ಅವರ ಹೆಸರನ್ನು ಪಟ್ಟಿಗೆ ಸೇರಿಸುವ ಕುರಿತು ನ್ಯಾಯಮಂಡಳಿಯ ತೀರ್ಪಿಗಾಗಿ ಕಾಯುತ್ತಿದ್ದರೆ, ಖಾತೂನ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿದೆ.


