ಪಂಜಾಬ್ನ ಫಿರೋಜ್ಪುರ ಜಿಲ್ಲೆಯ ಜಿರಾದಲ್ಲಿ 19 ವರ್ಷದ ಜಶನ್ದೀಪ್ ಎಂಬ ಯುವಕನ ಸಾವಿನ ಪ್ರಕರಣ ಉದ್ವಿಗ್ನತೆಗೆ ಕಾರಣವಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ಹಿಂಸೆ ನೀಡಿದ್ದರಿಂದಲೇ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿರುವ ಕುಟುಂಬಸ್ಥರು, ಶುಕ್ರವಾರ ಶೆರಾವಾಲಾ ಚೌಕ್ನಲ್ಲಿ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದರು. ಘಟನೆಗೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಫಿರೋಜ್ಪುರ ಜಿಲ್ಲೆಯ ಬಸ್ತಿ ಮಚ್ಚಿಯಾನ್ವಾಲಾ ಗ್ರಾಮದ ನಿವಾಸಿಯಾಗಿದ್ದ ಜಶನ್ದೀಪ್ 12ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಹಾಕಿ ಆಟಗಾರನಾಗುವ ಕನಸು ಕಂಡಿದ್ದ. ನವೆಂಬರ್ 16ರಂದು ಯಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕುಲ್ಗರ್ಹಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಕಸ್ಟಡಿಯಲ್ಲಿದ್ದಾಗ ಜಶನ್ದೀಪ್ಗೆ ಹಿಂಸೆ ನೀಡಲಾಗಿತ್ತು. ಆತನನ್ನು ಕುಟುಂಬಸ್ಥರಿಗೆ ಹಿಂತಿರುಗಿಸಿದ ಕೆಲವೇ ಸಮಯದಲ್ಲಿ ಆರೋಗ್ಯ ಹದಗೆಟ್ಟಿತ್ತು ಎಂದು ದಲಿತ ಯುವಕನ ಕುಟುಂಬ ಆರೋಪಿಸಿದೆ. ಬಳಿಕ ಆತನನ್ನು ಜಿರಾ ಹಾಗೂ ನಂತರ ಮೋಗಾದ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಸುಮಾರು ಐದು ದಿನಗಳ ಕಾಲ ಚಿಕಿತ್ಸೆ ಪಡೆದರೂ ಆತ ಮೃತಪಟ್ಟಿದ್ದಾನೆ.
ಜಶನ್ದೀಪ್ನ ತಾಯಿ ಸರಬ್ಜಿತ್ ಕೌರ್ ಮಾತನಾಡಿ, ತನ್ನ ಮಗನಿಗೆ ಈ ಹಿಂದೆ ಯಾವುದೇ ದೈಹಿಕ ಆರೋಗ್ಯ ಸಮಸ್ಯೆಗಳಿರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಹಾಕಿ ಆಟಗಾರನಾಗಬೇಕೆಂಬ ಕನಸು ಹೊಂದಿದ್ದ ಆತ, ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿ ಹಲವು ಪದಕಗಳನ್ನು ಗೆದ್ದಿದ್ದ ಎಂದು ತಿಳಿಸಿದ್ದಾರೆ.
ಆದರೆ, ಆರೋಪಗಳನ್ನು ನಿರಾಕರಿಸಿರುವ ಜಿರಾ ನಗರ ಪೊಲೀಸ್ ಠಾಣೆಯ ಎಸ್ಎಚ್ಒ ಜಸ್ವಿಂದರ್ ಸಿಂಗ್ ಬ್ರಾರ್, ಯುವಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಹೇಳಿದ್ದಾರೆ. ವಿಚಾರಣೆ ಬಳಿಕ ಆತನನ್ನು ಬಿಡುಗಡೆ ಮಾಡಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿ ಹಲ್ಲೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಂದಿನ ಕ್ರಮ ಕೈಗೊಳ್ಳುವ ಮೊದಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದೂ ತಿಳಿಸಿದ್ದಾರೆ.
ಕ್ರಾಂತಿಕಾರಿ ಗ್ರಾಮೀಣ ಕಾರ್ಮಿಕರ ಸಂಘದ ಸದಸ್ಯರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಂಘಟನೆಯ ಮುಖಂಡ ದಿಲ್ಬಾಗ್ ಸಿಂಗ್ ಪ್ರತಿಭಟನೆಗೆ ನೇತೃತ್ವ ವಹಿಸಿದ್ದರು.
ಇದೇ ವೇಳೆ, ಪಂಜಾಬ್ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷ ಶೀತಲ್ ಅಂಗುರಾಲ್ ಘಟನೆಯನ್ನು ಖಂಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣವೇ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


