ಭಾರತದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಮಾನವಹಕ್ಕು ಕಾರ್ಯಕರ್ತರು ಹಾಗೂ ಸಾಮಾಜಿಕ ಹೋರಾಟಗಾರರು, ಅದರಲ್ಲೂ ನಿರ್ದಿಷ್ಟವಾಗಿ, ವಿವಾದಾತ್ಮಕ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾದ ಹೋರಾಟಗಾರರನ್ನು ಭಯೋತ್ಪಾದನೆ ನಿಗ್ರಹದಂತಹ ಕಠಿಣ ಕಾನೂನುಗಳಡಿ ಬಂಧಿಸಲಾಗಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮಿಷೆಲ್ ಬ್ಯಾಚಲೆಟ್ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವು ಮಾನವ ಹಕ್ಕುಗಳ ಕಾರ್ಯಕರ್ತರನ್ನು ರಕ್ಷಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮೂರು “ಸಮಸ್ಯಾತ್ಮಕ” ಭಾರತೀಯ ಕಾನೂನುಗಳ ಬಗ್ಗೆ ಗಮನಸೆಳೆದಿರುವ ಅವರು, ಆ ಕಾನೂನುಗಳು ಸಾಮಾಜಿಕ ಕಾರ್ಯಕರ್ತರ ಬಂಧನಕ್ಕೆ ಕಾರಣವಾಗಿದೆ ಮತ್ತು ಸರ್ಕಾರೇತರ ಸಂಸ್ಥೆಗಳ ಕೆಲಸಕ್ಕೆ ನಿರ್ಬಂಧಗಳನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಎ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಮಿಷನರ್
ಸಾರ್ವಜನಿಕ ಹಿತಾಸಕ್ತಿಗೆ ಹಾನಿಯುಂಟು ಮಾಡುವ ಯಾವುದೇ ಚಟುವಟಿಕೆಗಳಿಗೆ ವಿದೇಶಿ ನಿಧಿಯನ್ನು ಪಡೆಯುವುದನ್ನು ನಿಷೇಧಿಸುವ ’ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ’ (FCRA) ಸೇರಿದಂತೆ ನಾಗರಿಕ ಸಮಾಜದಲ್ಲಿ ಧ್ವನಿಗಳನ್ನು ಅಡಗಿಸಲು ಹೆಚ್ಚಾಗಿ ಬಳಸಲಾಗುತ್ತಿರುವ ವಿದೇಶಿ ಧನಸಹಾಯವನ್ನು ನಿರ್ಬಂಧಿಸುವ ಅಸ್ಪಷ್ಟ ಪದಗಳಿಂದ ಕೂಡಿರುವ ಕಾನೂನುಗಳ ಬಗ್ಗೆ ಅವರು ವಿಷಾದಿಸಿದರು.

“ಇದರಿಂದಾಗಿ ಎನ್‌ಜಿಒ ಕಚೇರಿಗಳ ಮೇಲೆ ಅಧಿಕೃತ ದಾಳಿಗಳು ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ, FCRA ಕಾಯ್ದೆಯನ್ನು ಹೇರಿ ಸಮರ್ಥಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಅಷ್ಟೇ ಅಲ್ಲದೆ, ಅಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ‘ಸಾರ್ವಜನಿಕ ಹಿತಾಸಕ್ತಿ’ಯ ಆಧಾರದಲ್ಲಿ ಈ ಕಾನೂನನ್ನು ದುರ್ಬಳಕೆಗೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಎನ್‌ಜಿಒಗಳ ಟೀಕಾತ್ಮಕ ವರದಿ ಮತ್ತು ಪ್ರತಿಪಾದನೆಗಳ ಕುರಿತು ಬರದರಿಕೆ ಹಾಕಲು ಮತ್ತು ದಂಡಿಸಲು ಈ ಕಾನೂನುಗಳನ್ನು ಅಧಿಕಾರಿಗಳು ಬಳಸುತ್ತಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಇದನ್ನೂ ಓದಿ: ಭಾರತ ದೇಶದಲ್ಲಿ ಮಾನವ ಹಕ್ಕುಗಳಿಗೆ ಬೆಲೆಯೇ ಇಲ್ಲ
ಇತ್ತೀಚಿನ ತಿಂಗಳುಗಳಲ್ಲಿ ಸಾಮಾಜಿಕ ಕಾರ್ಯಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದಾರೆ. ವಿಶೇಷವಾಗಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿರುವವರು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಬ್ಯಾಚಲೆಟ್ ಹೇಳಿದ್ದಾರೆ.

ಸಿಎಎ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಅನೇಕ ಸಾಮಾಜಿಕ ಕಾರ್ಯಕರ್ತರನ್ನು ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು ಮತ್ತು ಅಂತಹುದೇ ಕಾನೂನುಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂಬುವುದನ್ನು ಅವರು ಉಲ್ಲೇಖಿಸಿದ್ದಾರೆ.
“ರಚನಾತ್ಮಕ ಟೀಕೆ ಪ್ರಜಾಪ್ರಭುತ್ವದ ಜೀವನಾಡಿ. ಅಧಿಕಾರಿಗಳಿಗೆ ಈ ಟೀಕೆ ಹಿತವಾಗಿಲ್ಲ ಎಂದೆನಿಸಿದರೂ ಅದನ್ನು ಎಂದಿಗೂ ಅಪರಾಧೀಕರಿಸಬಾರದು ಅಥವಾ ಕಾನೂನು ಬಾಹಿರಗೊಳಿಸಬಾರದು”
~ಮಿಷೆಲ್ ಬ್ಯಾಚಲೆಟ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್
“ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಸಭೆ ನಡೆಸಿ ತಮ್ಮ ಹಕ್ಕು ಚಲಾಯಿಸಿದ್ದಕ್ಕೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮತ್ತು ನಾಗರಿಕ ಸಮಾಜವನ್ನು ರಕ್ಷಿಸಲು ಭಾರತವು ಕಾನೂನು ಮತ್ತು ನೀತಿಯಲ್ಲಿ ಇನ್ನೂ ಹೆಚ್ಚಿನದನ್ನು ಮಾಡಲು ನಾನು ಸರ್ಕಾರವನ್ನು ಕೋರುತ್ತೇನೆ” ಎಂದು ಬ್ಯಾಚಲೆಟ್ ಹೇಳಿದರು.
ಇದನ್ನೂ ಓದಿ: ಅಜೀವಪಯಂತ ಮಾನವಹಕ್ಕುಗಳ ಹೋರಾಟಗಾರ ರೋಣ ವಿಲ್ಸನ್
ಭಯೋತ್ಪಾದನೆಯ ಆರೋಪ ಹೊರಿಸಲ್ಪಟ್ಟಿರುವ ಹಿರಿಯ ಭಾರತೀಯರಾಗಿರುವ ಕೆಥೋಲಿಕ್ ಧರ್ಮಗುರು ಸ್ಟಾನ್ ಸ್ವಾಮಿ ಸೇರಿದಂತೆ 1,500ಕ್ಕೂ ಅಧಿಕ ಜನರನ್ನು ಬಂಧಿಸಿರುವುದು ವರದಿಯಾಗಿದೆ ಎಂದು ಬ್ಯಾಚಲೆಟ್ ಉಲ್ಲೇಖಿಸಿದ್ದಾರೆ.

ಕಳೆದ ತಿಂಗಳು ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಸಂಸ್ಥೆಯಾದ ’ಅಮ್ನೆಸ್ಟಿ ಇಂಟರ್ ನ್ಯಾಷನಲ್’ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು. ಸರ್ಕಾರವು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದು ಮತ್ತು ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಅದು ಉಲ್ಲೇಖಿಸಿತ್ತು, ಈ ಹಿನ್ನಲೆಯಲ್ಲಿ ಬ್ಯಾಚಲೆಟ್ ಅವರ ಹೇಳಿಕೆ ಮಹತ್ವದ್ದಾಗಿದೆ.
ಟೀಕೆ ನಿರಾಕರಿಸಿದ ಭಾರತ
ಕೇಂದ್ರ ಸರ್ಕಾರ ಬ್ಯಾಚಲೆಟ್ ಟೀಕೆಗಳನ್ನು ತಿರಸ್ಕರಿಸಿದ್ದು, “ಕಾನೂನು ಉಲ್ಲಂಘನೆಯನ್ನು ಮಾನವ ಹಕ್ಕುಗಳ ನೆಪದಲ್ಲಿ ಕ್ಷಮಿಸಲಾಗುವುದಿಲ್ಲ” ಎಂದು ಹೇಳಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ವಿಶ್ವಸಂಸ್ಥೆಯೊಂದರಿಂದ ಈ ವಿಷಯದ ಬಗ್ಗೆ ಹೆಚ್ಚು ತಿಳುವಳಿಕೆಯುಳ್ಳ ಅಭಿಪ್ರಾಯವನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.


