ಮಂಗಳವಾರ ನಡೆದ 13 ನೇ ‘ನಂದಿಗ್ರಾಮ್ ದಿವಸ್’ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಶ್ವದಾದ್ಯಂತ ರಾಜಕೀಯ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಗೌರವ ನಮನ ಸಲ್ಲಿಸಿದ್ದಾರೆ.
ಹಿಂದಿನ ಎಡಪಂಥೀಯ ಆಡಳಿತದ ಅವಧಿಯಲ್ಲಿ ಪುರ್ಬಾ ಮದಿನಿಪುರ ಜಿಲ್ಲೆಯ ನಂದಿಗ್ರಾಮ್‌ನಲ್ಲಿ ನಡೆದ ಹತ್ಯೆಗಳನ್ನು “ಹೊಸ ಬೆಳಕಿನ ಹೆಸರಿನಲ್ಲಿ ನಡೆದ ಅನಾಗರಿಕ ಹತ್ಯಾಕಾಂಡ” ಎಂದು ಮುಖ್ಯಮಂತ್ರಿ ಬಣ್ಣಿಸಿದ್ದಾರೆ.
Today is Nandigram Dibas – the 13th anniversary of the barbaric massacre in the name of ‘new dawn’. My homage to all those who have lost their lives due to political violence across the world. Peace must always win
— Mamata Banerjee (@MamataOfficial) November 10, 2020
ಇದನ್ನೂ ಓದಿ: ಪಶ್ಚಿಮ ಬಂಗಾಳದ ವೈಭವ ಮರುಸ್ಥಾಪಿಸುವ ಅಗತ್ಯವಿದೆ: ಗೃಹ ಸಚಿವ ಅಮಿತ್ ಶಾ
“ಇಂದು ನಂದಿಗ್ರಾಮ್ ದಿವಸ್ – ಹೊಸ ಬೆಳಕು ಮೂಡಿಸುವ ಹೆಸರಿನಲ್ಲಿ ನಡೆದ ಅನಾಗರಿಕ ಹತ್ಯಾಕಾಂಡದ 13 ನೇ ವಾರ್ಷಿಕೋತ್ಸವ. ಪ್ರಪಂಚದಾದ್ಯಂತದ ರಾಜಕೀಯ ಹಿಂಸಾಚಾರದಿಂದ ಪ್ರಾಣ ಕಳೆದುಕೊಂಡ ಎಲ್ಲರಿಗೂ ನನ್ನ ಗೌರವ. ಶಾಂತಿ ಯಾವಾಗಲೂ ಗೆಲ್ಲಬೇಕು, ”ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
2007ರ ಜನವರಿಯಲ್ಲಿ, ಎಡಪಂಥೀಯ ಆಡಳಿತದ ಸರ್ಕಾರವು ಪ್ರಸ್ತಾಪಿಸಿದ ವಿಶೇಷ ಆರ್ಥಿಕ ವಲಯ (ಎಸ್‌ಇ ಝಡ್) ವಿರುದ್ಧ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೇತೃತ್ವದಲ್ಲಿ ನಂದಿಗ್ರಾಮ್‌ನ ರೈತರು ತೀವ್ರ ಪ್ರತಿಭಟನೆ ನಡೆಸಿದ್ದರು.

ಮಾರ್ಚ್ 14, 2007 ರಂದು ನಂದಿಗ್ರಾಮದಲ್ಲಿ ಭೂಸ್ವಾಧೀನ ವಿರುದ್ಧ ಬೀದಿಗಿಳಿದಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಹದಿನಾಲ್ಕು ಜನರು ಸಾವನ್ನಪ್ಪಿದ್ದರು. ಮತ್ತೆ 2007 ರಲ್ಲೇ ಈ ದಿನ ಪೊಲೀಸರು ಮತ್ತುರೈತರ ನಡುವಿನ ಘರ್ಷಣೆಯಲ್ಲಿ ಹಲವಾರು ಜನರು ಮೃತಪಟ್ಟಿದ್ದರು.
ಭೂಸ್ವಾಧೀನ ವಿರೋಧಿ ಆಂದೋಲನವು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಯಿತು. 2009 ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ 19 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು 2011 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಡರಂಗದಿಂದ ಅಧಿಕಾರವನ್ನು ಪಡೆದುಕೊಂಡಿತು.
2012 ರಿಂದಲೂ ತೃಣಮೂಲ ಕಾಂಗ್ರೆಸ್ ಪ್ರತಿವರ್ಷ ಈ ದಿನವನ್ನು “ನಂದಿಗ್ರಾಮ್ ದಿವಸ್” ಎಂದು ಆಚರಿಸುತ್ತದೆ. ಜೊತೆಗೆ ನಂದಿಗ್ರಾಮದಲ್ಲಿ ಮಾರ್ಚ್ 14 ರಂದು ಗೋಲಿಬಾರ್‌ನಲ್ಲಿ ಹತ್ಯೆಯಾದ 14 ರೈತರ ನೆನಪಲ್ಲಿ ಟಿಎಂಸಿ ಪ್ರತಿವರ್ಷ ‘ಕೃಷಿಕ್ ದಿವಸ್’ ಎಂದು ಆಚರಿಸುತ್ತದೆ.


