ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಸರ್ಕಾರ ಮಂಜೂರು ಮಾಡಿದ್ದ ಬಂಗಲೆ ಖಾಲಿ ಮಾಡುವಂತೆ ತಿಳಿಸಿದ ನಂತರ, ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದಲ್ಲಿ ಮನೆ ಹುಡುಕುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಇದು ಉತ್ತರಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಭರವಸೆ ಮೂಡಿಸಿದೆ.
ಕಳೆದ ಜೂನ್‌ನಲ್ಲಿ ನವದೆಹಲಿಯ ಲೋಧಿ ಎಸ್ಟೇಟ್‌ನಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಸರ್ಕಾರ ಮಂಜೂರು ಮಾಡಿದ ಬಂಗಲೆ ಖಾಲಿ ಮಾಡುವಂತೆ ತಿಳಿಸಿತ್ತು. ಆ ನಂತರ ಪ್ರಿಯಾಂಕಾ ಗಾಂಧಿ ಲಖನೌದಲ್ಲಿ ಮನೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ಪಕ್ಷ ಮತ್ತೆ ಪುಟಿದೇಳುವ ದಿನಗಳು ಬರಬಹುದು ಎಂಬ ನಿರೀಕ್ಷೆಯನ್ನು ಕಾರ್ಯಕರ್ತರು ಹೊಂದಿದ್ದಾರೆ.
ದಿವಂಗತ ಕಾಂಗ್ರೆಸ್ ಮುಖಂಡ ಶೀಲಾ ಕೌಲ್‌ಗೆ ಸೇರಿದ ಮನೆಯೊಂದನ್ನು ಪ್ರಿಯಾಂಕಾ ಗಾಂಧಿಗಾಗಿ ನೋಡಲಾಗಿತ್ತು. ಆದರೆ, ಈಗ ಭದ್ರತಾ ಕಾರಣಗಳಿಂದಾಗಿ ಯೋಜನೆಗಳನ್ನು ಬದಲಾಯಿಸಲಾಗಿದೆ. ಅವರಿಗಾಗಿ ಲಕ್ನೋದಲ್ಲಿ ಒಂದು ಮತ್ತು ಪ್ರಯಾಗರಾಜ್‌ನಲ್ಲಿ ಮತ್ತೊಂದು ಒಟ್ಟು ಎರಡು ಬಾಡಿಗೆ ಮನೆಗಳನ್ನು ಹುಡುಕಲಾಗುತ್ತಿದೆ.
ಇದನ್ನೂ ಓದಿ: ದೆಹಲಿಯ ಐತಿಹಾಸಿಕ ರೈತ ಹೋರಾಟದಲ್ಲಿ ಭಾಗಿಯಾಗಿರುವ ಕರ್ನಾಟಕದ ರೈತ ಮುಖಂಡರು ಹೇಳಿದ್ದೇನು?
ಪ್ರಿಯಾಂಕಾ ಗಾಂಧಿಯವರ ವೈಯಕ್ತಿಕ ಕಾರ್ಯದರ್ಶಿ ಸಂದೀಪ್ ಸಿಂಗ್ ಅವರು ಎರಡು ಮನೆಗಳ ಹುಡುಕಾಟವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಕೆಲವು ಸ್ಥಳೀಯ ನಾಯಕರನ್ನು ಭೇಟಿ ಮಾಡಲು ಮತ್ತು ಮನೆಯನ್ನು ನೋಡಲು ಪ್ರಯಾಗರಾಜ್‌ಗೆ ಭೇಟಿ ನೀಡಿದ್ದರು. 2021 ರ ಜನವರಿಯಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿ ತಿಂಗಳು ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ಲಖನೌದಲ್ಲಿನ ಕಾಂಗ್ರೆಸ್ ಮುಖಂಡರಿಗೆ ಹೇಳಲಾಗಿತ್ತು. ಆದರೆ, 2019ರ ಡಿಸೆಂಬರ್ ನಿಂದ ಯಾವ ಮುಖಂಡರು ಪಕ್ಷದ ರಾಜ್ಯ ಕೇಂದ್ರ ಕಚೇರಿಗೆ ಭೇಟಿ ನೀಡಿಲ್ಲ.
ಉತ್ತರಪ್ರದೇಶ ರಾಜಕೀಯದಲ್ಲಿ ಸಕ್ರಿಯವಾಗಿ ನೆಲೆಗೊಳ್ಳಲು ಕಾಂಗ್ರೆಸ್ ತುಂಬಾ ಹೆಣಗಾಡುತ್ತಿದೆ. ಇತ್ತೀಚಿನ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್, ಒಟ್ಟು ಮತಗಳಲ್ಲಿ ಶೇಕಡಾ 7.53 ರಷ್ಟು ಮಾತ್ರ ಮತ ಪಡೆದಿತ್ತು. ಅದರಲ್ಲೂ, ಕಾಂಗ್ರೆಸ್ ಅಭ್ಯರ್ಥಿಗಳು ನಾಲ್ಕು ಸ್ಥಾನಗಳಲ್ಲಿ ತಮ್ಮ ಠೇವಣಿ ಕಳೆದುಕೊಂಡಿದ್ದರು.
ಸದ್ಯ ಪ್ರಿಯಾಂಕಾ ಗಾಂಧಿ ಲಖನೌ ಮತ್ತು ಪ್ರಯಾಗರಾಜ್‌ಗಳಲ್ಲಿ ಮನೆ ಹುಡುಕುತ್ತಿರುವುದು ಪಕ್ಷ ಕಾರ್ಯಕರ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಉತ್ತರ ಪ್ರದೇಶದಲ್ಲಿ ಮತ್ತೆ ಪಕ್ಷ ಸಂಘಟನೆ ನಡೆಸಲು ಸಹಾಯಕವಾಗುತ್ತದೆ ಎಂದು ಹೇಳಲಾಗುತ್ತಿದೆ.


