ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ, ನಿನ್ನೆ ಭಾರತ್ ಬಂದ್‌ಗೆ ಕರೆ ಕೊಟ್ಟಿದ್ದ ಅನ್ನದಾತರಿಗೆ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿತ್ತು. ಇಂದು ಕೂಡ ರಾಜ್ಯದ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬಾರುಕೋಲು ಚಳುವಳಿ ನಡೆಯುತ್ತಿದೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಬಾರುಕೋಲು ಮೆರವಣಿಗೆ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಬೆಳಗ್ಗೆ 11 ಗಂಟೆಯಿಂದ ನಗರ ರೈಲ್ವೇ ನಿಲ್ದಾಣದಿಂದ ರೈತರ ಬಾರುಕೋಲು ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ. ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲು ಆಗ್ರಹಿಸಿ, ಅನ್ನದಾತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದಾರೆ.

ಇದನ್ನೂ ಓದಿ: ಭಾರತ್ ಬಂದ್: ಇದು ರೈತರು-ಕಾರ್ಪೋರೇಟ್ ಕಂಪನಿಗಳ ನಡುವಿನ ಹೋರಾಟ – AIKSCC
ರ್‍ಯಾಲಿ ಆರಂಭಗೊಂಡು, ಶೇಷಾದ್ರಿ ರಸ್ತೆಯ ಫ್ಲೈಓವರ್ ನಿಂದ ಕೆಳಗೆ ಇಳಿಯುತ್ತಿದ್ದಂತೆ ಫ್ರೀಡಂ ಪಾರ್ಕ್ ಬಳಿ ರಸ್ತೆ ಫುಲ್ ಬ್ಲಾಕ್ ಮಾಡಿದ ಪೊಲೀಸರು, ಬ್ಯಾರಿಕೇಡ್ ಹಾಕಿ ರಸ್ತೆಗೆ ಅಡ್ಡವಾಗಿ ಹಗ್ಗ ಹಿಡಿದು ನಿಂತಿದ್ದಾರೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮುನ್ನವೇ ರೈತರ ಪ್ರತಿಭಟನಾ ಮೆರವಣಿಗೆಯನ್ನ ತಡೆದು ನಿಲ್ಲಿಸಲು ಸಜ್ಜಾಗಿದ್ದಾರೆ.

ಪೊಲೀಸರು ರಸ್ತೆ ಬಂದ್ ಮಾಡಿದ ಹಿನ್ನೆಲೆ ಫ್ರೀಡಂ ಪಾರ್ಕ್ ಬಳಿ ರಸ್ತೆಯಲ್ಲೇ ಕುಳಿತು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೌರ್ಯ ಸರ್ಕಲ್ನಿಂದ ಕೆ.ಆರ್ ಸರ್ಕಲ್ ಕಡೆ ತೆರಳವ ಮಾರ್ಗ ಹಾಗೂ ಫ್ರೀಡಂ ಪಾರ್ಕ್ನಿಂದ ಕೆ.ಜಿ ರಸ್ತೆಗೆ ತೆರಳುವ ಮಾರ್ಗಗಳು ಬಂದ್ ಮಾಡಲಾಗಿದೆ. ಸ್ಥಳದಲ್ಲಿ ಐನೂರಕ್ಕೂ ಹೆಚ್ಚು ಪೊಲೀಸರು ಉಪಸ್ಥಿತರಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ರಾಜ್ಯದ ಕೂಗಿನ ವಿರುದ್ಧ ಗಟ್ಟಿ ದನಿ: ‘ಕರ್ನಾಟಕವೊಂದೇ’ ಅಭಿಯಾನಕ್ಕೆ ವ್ಯಾಪಕ ಬೆಂಬಲ

ಬ್ಯಾರಿಕೇಡ್ ದಾಟಲು ಮುಂದಾದ ಕೆಲ ರೈತರು ಮತ್ತು ಪೊಲೀಸರ ನಡುವೆ ನೂಕಾಟ, ತಳ್ಳಾಟ ನಡೆದಿದ್ದು, ನಮ್ಮನ್ನು ಯಾಕೆ ತಡೆದಿದ್ದೀರಿ? ಹೇಳಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ.


